ಬಿಜೆಪಿ ಮತ್ತು ಆರೆಸ್ಸೆಸ್ನ ವಿದೇಶಿ ಸೆಲ್ಗಳು ಮತ್ತು ಮಿತ್ರ ಸಂಘಟನೆಗಳಿಗೆ “ಹೌಡಿ ಮೋದಿ” ಯಂತಹ ಕಾರ್ಯಕ್ರಮಗಳಿಗೆ ಟೂಲ್ಕಿಟ್ಗಳನ್ನು ಹಂಚಿಕೊಳ್ಳುವ ಹಕ್ಕಿದ್ದರೆ, ಅದೇ ರೀತಿ ವಿದೇಶಗಳಲ್ಲಿರುವ ಇತರ ಭಾರತೀಯ ಮೂಲದವರು ರೈತರ ಬೆಂಬಲಕ್ಕಾಗಿ “ಜೈಕಿಸಾನ್” ಸಂಘಟಿಸುವುದು ಹೇಗೆ ರಾಷ್ಟ್ರ ವಿರೋಧಿಯಾಗುತ್ತದೆ? “ಸಾಗರದಾಚೆಗಿನ ಪಿತೂರಿ”ಯೊಂದಿದೆ ಎಂದು ಎಫ್.ಐ.ಆರ್. ದಾಖಲಿಸುವುದರಿಂದ, ಬೆದರಿಕೆಗಳನ್ನು ಹಾಕಿ ವಿಶ್ವದ ದೃಷ್ಟಿಯಲ್ಲಿ ಭಾರತದ ಹೆಸರುಗೆಡಿಸುವುದರಿಂದ, ಇದು ರೈತರ ಹೋರಾಟ, ರೈತರೇ ಮಾಡುತ್ತಿರುವ ಹೋರಾಟ, ಆದರೆ ರೈತರಿಗಾಗಿಯಷ್ಟೇ ಅಲ್ಲ, ಇಡೀ ದೇಶಕ್ಕಾಗಿ ಎಂಬ ಬುಡಮಟ್ಟದ ವಾಸ್ತವತೆಯನ್ನೇನೂ ಬದಲಿಸಲು ಸಾಧ್ಯವಿಲ್ಲ.
ಬೃಂದಾ ಕಾರಟ್
ಭಾರತದ ರೈತರ ಹೋರಾಟದ ಬಗ್ಗೆ ಅಂತರರಾಷ್ಟ್ರೀಯ ಪ್ರಖ್ಯಾತರ ಟ್ವೀಟ್ಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರದ ಬಿಜೆಪಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು, ಒಬ್ಬ ತಗಡು ಸರ್ವಾಧಿಕಾರಿಯ, “ವೈಭವದ ಭ್ರಮೆಯಲ್ಲಿರುವ ನಿರಂಕುಶ ಪ್ರಭು”ವಿನ ದೇಶವೊಂದರಿಂದ ನಿರೀಕ್ಷಿಸಬಹುದಷ್ಟೇ ಹೊರತು, ಭಾರತದಂತಹ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಒಂದು ಚುನಾಯಿತ ಸರಕಾರದಿಂದ ಖಂಡಿತಾ ಅಲ್ಲ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಭಾರತದ ಪ್ರಧಾನಿಯವರ ಜನಪ್ರಿಯತೆ ಜಗತ್ತಿನ ಎಲ್ಲಾ ದೇಶಗಳ ಮುಖ್ಯಸ್ಥರುಗಳಲ್ಲೇ ಅತಿ ಹೆಚ್ಚು. ಇಷ್ಟೆಲ್ಲಾ ಜನಪ್ರಿಯತೆ ಇದ್ದರೂ ಅದೇಕೆ ಬೆರಳೆಣಿಕೆಯ ಟ್ವೀಟುಗಳಿಗೆ ಇಂತಹ ಪ್ರತಿಕ್ರಿಯೆ? ಇಂತಹ ಪ್ರಬಲ ಪ್ರಧಾನಮಂತ್ರಿಯವರ ಅಡಿಯಲ್ಲಿ ನಾವು ಇಷ್ಟೊಂದು ದುರ್ಬಲ ದೇಶವಾಗಿ ಬಿಟ್ಟಿದ್ದೇವೆಯೇ?
ಈ ಟ್ವಿಟರ್ ಬಿರುಗಾಳಿಗೆ ವಿದೇಶ ವ್ಯವಹಾರಗಳ ಮಂತ್ರಾಲಯದ ಕೋಪೋದ್ರಿಕ್ತ ವಾಗ್ದಂಡನೆ ಸಾಲದು ಎಂಬಂತೆ ದಿಲ್ಲಿ ಪೋಲಿಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಟೂಲ್ಕಿಟ್ ವಿವಾದ”ದ ಮೇಲೆ ಯಾರನ್ನೂ ಹೆಸರಿಸದ ಒಂದು ಎಫ್.ಐ.ಆರ್.ನ್ನೇ ಹಾಕಿ ಭಾರತಕ್ಕೆ ಇನ್ನಷ್ಟು ಅವಮಾನ ತಂದಿದೆ. ಟ್ವೀಟ್ನಲ್ಲಿನ ‘ಟೂಲ್ಕಿಟ್’ನ್ನು ಗಮನಕ್ಕೆ ತಗೊಂಡ ಪೋಲೀಸರು ಭಾರತ ಸರಕಾರದ ವಿರುದ್ಧ ಅಸಮಾಧಾನವನ್ನು ಮತ್ತು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಆಧಾರಗಳಲ್ಲಿ ಅಸಾಮರಸ್ಯವನ್ನು ಹರಡಿಸುವ(ರಾಜದ್ರೋಹದ), ಮತ್ತು ಇದಕ್ಕೆ ರೂಪ ಕೊಡಲು ಒಂದು ಕ್ರಿಮಿನಲ್ ಪಿತೂರಿಯ ಕೇಸನ್ನು ದಾಖಲಿಸಿರುವುದಾಗಿ ವಿಶೇಷ ಪೋಲೀಸ್ ಆಯುಕ್ತ ಪ್ರವೀಣ್ ರಂಜನ್ ಹೇಳಿದರು. “ಈ ಟೂಲ್ಕಿಟ್ ಒಂದು ಸಾಗರದಾಚೆಯ ಸಂಘಟಿತ ಜಾಲದಿಂದ ಪಿತೂರಿಯನ್ನು ಬಯಲು ಮಾಡುತ್ತದೆ” ಎಂದು ಮುಂದುವರೆದು ಅವರು ಹೇಳಿದರು.
ಇದನ್ನು ಓದಿ : ಗ್ರೇಟಾ ಹಂಚಿಕೊಂಡಿದ್ದ ಟೂಲ್ ಕಿಟ್ ನಲ್ಲಿ ಏನಿದೆ?
ರೈತರು ಏಕೆ ಪ್ರತಿಭಟಿಸುತ್ತಿದ್ದಾರೆ ಎಂದು ವಿವರಿಸುವ ಈ ಟೂಲ್ಕಿಟ್ನಲ್ಲಿ ವಿವಾದಾತ್ಮಕ ಎನ್ನಬಹುದಾದ ಏನೂ ಇಲ್ಲ್ಲ. ಟೂಲ್ಕಿಟ್ನಲ್ಲಿ ಉಲ್ಲೇಖಿಸಿರುವ ಹೆಚ್ಚಿನ ಪ್ರಶ್ನೆಗಳನ್ನು, ಈ ಕಾಯ್ದೆಗಳು ಕಾರ್ಪೊರೇಟ್ಗಳಿಗೆ ನೆರವಾಗುತ್ತವೆ ಎಂಬಿತ್ಯಾದಿಗಳನ್ನು ವಿರೋಧ ಪಕ್ಷಗಳು ಈ ಮೊದಲೇ ಎತ್ತಿವೆ, ಮುಂದೆಯೂ ಸಂಸತ್ತಿನಲ್ಲಿ ಎತ್ತುತ್ತವೆ. ಟೂಲ್ಕಿಟ್ನಲ್ಲಿ ಸೂಚಿಸಲಾದ ಅನೇಕ ಕ್ರಮಗಳು ಕೂಡ ದಿನನಿತ್ಯದ ಕ್ರಿಯೆಗಳೇ. “ಭಾರತೀಯ ರೈತರಿಗೆ ನಿಮ್ಮ ಬೆಂಬಲವನ್ನು ಟ್ವೀಟ್ ಮಾಡಿ”, #FarmersProtest, #StandWithFarmer ಎನ್ನುವ ಹ್ಯಾಷ್ ಟ್ಯಾಗ್ಗಳನ್ನು ಬಳಸಿ, ನಿಮ್ಮ ಯಾವುದೇ ಜನಪ್ರತಿನಿಧಿಗಳಿಗೆ ಕರೆ ಮಾಡುವ ಮೂಲಕ ಅಥವಾ ಇಮೇಲ್ ಮಾಡುವ ಮೂಲಕ ಕೃಷಿ ವಿರೋಧಿ ಕಾನೂನುಗಳನ್ನು ವಾಪಸ್ಸು ತೆಗೆದುಕೊಳ್ಳುವಂತೆ ಹೇಳಿ, ಆನ್ ಲೈನ್ ಮನವಿಗಳಿಗೆ ಸಹಿ ಹಾಕಿ ಎಂದು ಕೇಳುವುದು; ಫೆಬ್ರುವರಿ 13/14 2021ರಂದು ಹತ್ತಿರದ ಭಾರತೀಯ ರಾಯಭಾರಿ ಕಚೇರಿ, ಮಾಧ್ಯಮ ಕಚೇರಿ ಅಥವಾ ಸ್ಥಳೀಯ ಸರಕಾರಿ ಕಚೇರಿಯ ಮುಂದೆ ಕಾರ್ಯಾಚರಣೆಗಳನ್ನು ಆಯೋಜಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್ ಟ್ಯಾಗ್ಗಳನ್ನು ಬಳಸಿ. ಚಿತ್ರಗಳನ್ನು ಹಂಚಿಕೊಳ್ಳಿ ಎನ್ನುವುದು- ಇವೆಲ್ಲವೂ ಟ್ವಿಟರಿನಲ್ಲಿ ಸಾಮಾನ್ಯವಾಗಿರುವ ಸಂಗತಿಗಳೇ.
ಇದರಲ್ಲೇನು ರಾಜದ್ರೋಹವಿದೆ?
ಟೂಲ್ಕಿಟ್ ಅನ್ನು ಟ್ವೀಟ್ ಮಾಡಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಹದಿ ಹರೆಯದ ಕಾರ್ಯಕರ್ತೆ ಪರಿಸರವಾದಿ, ಗ್ರೇಟಾ ಥನ್ಬರ್ಗ್. ಎಲ್ಲ ಜನಾಂಗಗಳು ಮತ್ತು ರಾಷ್ಟ್ರೀಯ ಗಡಿಗಳನ್ನು ಮೀರಿದ ಇಂತಹ ಪ್ರಶ್ನೆಗಳ ಮೇಲೆ ಅಂತರರಾಷ್ಟ್ರೀಯ ಸೌಹಾರ್ದದ ಕಾರ್ಯಾಚರಣೆಗಳಲ್ಲಿ ಇಂತಹ ಟೂಲ್ ಕಿಟ್ಗಳು ಸಾಮಾನ್ಯ ಸಾಧನಗಳು. ಉದಾಹರಣೆಗೆ, ತಮ್ಮ ತಾಯ್ನಾಡಿನ ಹಕ್ಕಿಗಾಗಿ ಪ್ಯಾಲೇಸ್ಟಿನಿಯ ಜನತೆಯ ಹೋರಾಟಕ್ಕೆ ವಿಶ್ವಸಂಸ್ಥೆಯೂ ‘ಅಂತರರಾಷ್ಟ್ರೀಯ ಸೌಹಾರ್ದ’ ಆಚರಣೆಗೆ ಕರೆಯ ಮೂಲಕ ಬೆಂಬಲ ನೀಡಿದೆ. ಅದಲ್ಲದೆ ಡಿಸೆಂಬರ್ 20, 2020 ಇಂತಹ ಕಾರ್ಯಾಚರಣೆಗಳ ದಿನ ಎಂದೂ ಸಹ ನಿರ್ಧರಿಸಲಾಗಿತ್ತು. ಘೋಷಣೆಗಳು, ಹ್ಯಾಶ್ಟ್ಯಾಗ್ಗಳು ಹೀಗೆ ಅನೇಕ ರೀತಿಯ ಟೂಲ್ಕಿಟ್ಗಳನ್ನು ಅಮೆರಿಕದಲ್ಲಿರುವ ರಾಷೆಲ್ ಕೊರ್ರಿ ಸೇರಿದಂತೆ ವಿಶ್ವದಾದ್ಯಂತ ಹಲವಾರು ಸಂಘಟನೆಗಳು ಹಂಚಿಕೊಂಡವು. ಅಮೆರಿಕದಲ್ಲಿ Black Lives Matter (ಕರಿಯ ಜೀವಗಳಿಗೂ ಬೆಲೆಯಿದೆ) ಹ್ಯಾಶ್ಟ್ಯಾಗ್ ವಿವಿಧ ಕಾರ್ಯಾಚರಣೆಗಳನ್ನು ಸೂಚಿಸಿದ ಟೂಲ್ಕಿಟ್ ಮೂಲಕ ಜಗತ್ತಿನಾದ್ಯಂತ ಹರಡಿದಾಗ, ಪ್ರತಿಯೊಂದು ಪ್ರತಿಭಟನಾ ಕಾರ್ಯಾಚರಣೆಯಲ್ಲೂ ತನ್ನ ಮತ್ತು ಅಮೆರಿಕಾದ ವಿರುದ್ದ ಪಿತೂರಿಯನ್ನು ಕಾಣುತ್ತಿದ್ದ ಡೊನಾಲ್ಡ್ ಟ್ರಂಪ್ ನೇತೃತ್ವದ ಆಗಿನ ಅಮೆರಿಕನ್ ಆಡಳಿತ ಕೂಡ ಪೊಲಿಸ್ ಮೂಲಕ “ತನಿಖೆ’ಗಳನ್ನು ಏರ್ಪಡಿಸಲಿಲ್ಲ.
ಇದನ್ನು ಓದಿ :ಗ್ರೇಟಾ ‘ಟೂಲ್ ಕಿಟ್’ವಿವಾದ: ದೆಹಲಿ ಪೋಲೀಸರಿಂದ ಬೆಂಗಳೂರಿನ ಯುವತಿಯ ಬಂಧನ
ಮೊದಲು ಗೃಹ ಸಚಿವರಾದ ಅಮಿತ್ ಶಾ ಹಾಕಿದ ಸರಕಾರದ ಅಧಿಕೃತ ಪ್ರತಿ-ಹ್ಯಾಷ್ ಟ್ಯಾಗ್ “India together” (ಭಾರತದ ಒಗ್ಗಟ್ಟು)ನ್ನು ಅನುಸರಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ಜಾಲತಾಣದಲ್ಲಿಯೂ ಅದನ್ನು ಹಾಕಲಾಯಿತು. ಯಾರ ವಿರುದ್ಧ ಒಗ್ಗಟ್ಟು? ಮೈಕೊರೆಯುವ ಚಳಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವವರು ಭಾರತೀಯರಲ್ಲವೇ? ಬಿಜೆಪಿ ಮತ್ತು ಆರೆಸ್ಸೆಸ್ನ ವಿದೇಶಿ ಸೆಲ್ಗಳು ಮತ್ತು ಮಿತ್ರ ಸಂಘಟನೆಗಳಿಗೆ “Howdy Modi” (ಹೌಡಿ ಮೋದಿ)ಯಂತಹ ಕಾರ್ಯಕ್ರಮಗಳಿಗೆ ಟೂಲ್ಕಿಟ್ಗಳನ್ನು ಹಂಚಿಕೊಳ್ಳುವ ಹಕ್ಕಿದ್ದರೆ, ಅದೇ ರೀತಿ ವಿದೇಶಗಳಲ್ಲಿರುವ ಇತರ ಭಾರತೀಯ ಮೂಲದವರು ರೈತರ ಬೆಂಬಲಕ್ಕಾಗಿ “ಜೈಕಿಸಾನ್” ಸಂಘಟಿಸುವುದು ಹೇಗೆ ರಾಷ್ಟ್ರವಿರೋಧಿಯಾಗುತ್ತದೆ?
ಸಂಪೂರ್ಣ ಹರಿಯಾಣದಲ್ಲಿ ಎಲ್ಲಾ ರೀತಿಯ ಸಂವಹನಗಳನ್ನು ನಿಲ್ಲಿಸಲು ಅಂತರ್ಜಾಲವನ್ನು ಕತ್ತರಿಸಿದ್ದು ನಿಜವಲ್ಲವೇ? ದೆಹಲಿಯ ಗಡಿಗಳನ್ನು ದೊಡ್ಡ ದೊಡ್ಡ ಮೊಳೆಗಳಿಂದ, ಕಬ್ಬಿಣದ ಬ್ಯಾರಿಕೇಡ್ಗಳಿಂದ ಸಾವಿನ ಜಾಲಗಳಾಗಿ ಮತ್ತು ಚಿತ್ರಹಿಂಸಾ ಕೊಠಡಿಗಳಾಗಿ ಪರಿವರ್ತಿಸಿ ಸಾವಿರಾರು ರೈತರನ್ನು ತಮ್ಮ ಪ್ರತಿಭಟನಾ ಸ್ಥಳಗಳಲ್ಲಿ ಬಂಧಿಯಾಗುವಂತೆ ಮಾಡಿರುವುದು ಸತ್ಯವಲ್ಲವೇ? ಇಂತಹ ನಿಜಚಿತ್ರಗಳನ್ನು ಗೃಹ ಸಚಿವಾಲಯದ ಆದೇಶಗಳಿಗೆ ಬದ್ಧವಾಗಿರದ ವಾಹಿನಿಗಳು ಪ್ರಪಂಚದಾದ್ಯಂತ ತೋರಿಸುತ್ತಿವೆ. ಗೃಹ ಸಚಿವಾಲಯ ಇಂತಹ ಈ ಕಥೆಗಳನ್ನು ಭಾರತದಲ್ಲಾದರೆ ನ್ಯೂಸ್ರೂಂಗಳಲ್ಲೇ ಕೊಂದು ಬಿಡುತ್ತಿತ್ತು. ಈ ಚಿತ್ರಗಳನ್ನು ನೋಡುವ ವೀಕ್ಷಕರು ಖಂಡಿತವಾಗಿಯೂ ರೈತರ ಹೋರಾಟಗಳ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮತ್ತೊಂದು ಹ್ಯಾಶ್ಟ್ಯಾಗ್ ಅಂದರೆ “India Against Propaganda” (ಅಪಪ್ರಚಾರದ ವಿರುದ್ಧ ಭಾರತ). ಇಲ್ಲಿ ಮತ್ತದೇ ಪ್ರಶ್ನೆ ಮೂಡುತ್ತದೆ. ಯಾರ ವಿರುದ್ಧ ಪ್ರಚಾರ? ಮೊದಲಿನಿಂದಲೂ ಹೋರಾಟದಲ್ಲಿರುವ ರೈತರನ್ನು ಖಲಿಸ್ತಾನಿ, ಪಾಕಿಸ್ತಾನಿ ಮತ್ತು ಚೀನಿಗಳ ಏಜೆಂಟರು, ಇವರೆಲ್ಲ ದೇಶದ್ರೋಹಿಗಳು, ಪ್ರತಿಪಕ್ಷಗಳ ಏಜೆಂಟರು ಅಥವ ಅವರಿಂದಾಗಿ ದಾರಿ ತಪ್ಪಿದವರು ಎಂದೆಲ್ಲ ಸರ್ಕಾರವೇ ಪ್ರಚಾರ ಮಾಡುತ್ತ ಬಂದಿದೆ. ನಿಜ ಹೇಳುವುದಾದರೆ, ಭಾರತವು “ಸುಳ್ಳನ್ನು ಸಾಕಷ್ಟು ದೊಡ್ಡದಾಗಿ ಹೇಳಿದರೆ ಮತ್ತು ಅದನ್ನು ಮತ್ತೆ-ಮತ್ತೆ ಹೇಳುತ್ತಲೇ ಇದ್ದರೆ ಅಂತಿಮವಾಗಿ ಜನರು ಅದನ್ನು ನಂಬುತ್ತಾರೆ” ಎನ್ನುವ ಗೊಬೆಲ್ಸ್ ತಂತ್ರವನ್ನು ನೆನಪಿಸುವ ಸರಕಾರದ ಅಪಪ್ರಚಾರಕ್ಕೆ ವಿರುದ್ಧವಾಗಿದೆ. ಯಾವ ಅಪಪ್ರಚಾರದ ವಿರುದ್ಧ ಭಾರತವು ಎದ್ದು ನಿಲ್ಲಬೇಕಾಗಿದೆಯೋ ಆ ಅಪಪ್ರಚಾರವನ್ನು ಮಾಡುತ್ತಿರುವವರು ರೈತರಲ್ಲ, ಅಥವ ಪ್ರಪಂಚದಾದ್ಯಂತ ಅವರಿಗೆ ಹೆಚ್ಚೆಚ್ಚು ಬೆಂಬಲ ನೀಡುತ್ತಿರುವವರೂ ಅಲ್ಲ.
ಕೆಲವರು ವಿವರಿಸುವಂತೆ ಸರಕಾರದ ಈ ಕ್ರಮಗಳು ಕೇವಲ “ಮಿತಿಮೀರಿದ ಪ್ರತಿಕ್ರಿಯೆಗಳು” ಅಲ್ಲ. ಯಾವುದೇ ರೀತಿಯ ಭಿನ್ನಾಭಿಪ್ರಾಯವನ್ನು ಅಥವ ಸರಕಾರ ಹಾಗೂ ಆಡಳಿತ ಪಕ್ಷಗಳ ಧೋರಣೆಗಳನ್ನು, ಪ್ರಕಟಣೆಗಳನ್ನು ಪ್ರಶ್ನಿಸುವುದನ್ನು ಕೂಡ ಸಹಿಸಲಾರದ ಈ ಸರಕಾರದ ಡಿಎನ್ಎ ಯಲ್ಲೇ ಆಳವಾಗಿ ಹುದುಗಿರುವ ಅಸಹಿಷ್ಣುತೆಯಿಂದಲೇ ಇಂತಹ ಅಮಾನವೀಯ ಕೃತ್ಯಗಳು ಹೊಮ್ಮುತ್ತವೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ, ನಂತರ ಸೌಹಾರ್ದವನ್ನೇ ದುಷ್ಟತನವೆಂಬಂತೆ ಚಿತ್ರಿಸುವ ಅಷ್ಟೇ ಸರ್ವಾಧಿಕಾರಶಾಹಿಯಾದ ಪ್ರವೃತ್ತಿಯನ್ನು ತೋರುತ್ತದೆ. ಈಗ ಸರಕಾರವು ತನ್ನ ಈ ಪ್ರವೃತ್ತಿಯನ್ನು ದೇಶಿಯ ವಲಯದಿಂದ ಅಂತರಾಷ್ಟ್ರೀಯ ಅಖಾಡಕ್ಕೆ ವಿಸ್ತರಿಸುತ್ತಿದೆ.
ದೌರ್ಜನ್ಯ ಅಥವ ಅನ್ಯಾಯದಿಂದ ತತ್ತರಿಸಿದ ಸಾಮಾನ್ಯ ನಾಗರಿಕರು ಅನ್ಯಾಯಕ್ಕೊಳಗಾದವರೊಂದಿಗೆ ಸೌಹಾರ್ದವನ್ನು ತೋರಿಸಬೇಕೆಂಬ ಅಥವ ಅನ್ಯಾಯಕ್ಕೆ ಹೊಣೆಗಾರರಾದವರ ತಪ್ಪು ಕ್ರಿಯೆಗಳ ವಿರುದ್ಧ ಹೋರಾಟವನ್ನು ಬೆಂಬಲಿಸಬೇಕು ಎಂಬ ತಮ್ಮ ಪ್ರಜ್ಞೆಯ ಕರೆಯನ್ನು ವ್ಯಕ್ತಪಡಿಸಿದಾಗ ಒಂದು ಸಮಾಜದ ನೈತಿಕ ಬೆನ್ನುಮೂಳೆ ಖಂಡಿತವಾಗಿಯೂ ಬಲಗೊಳ್ಳುತ್ತದೆ. ನಾಝಿ ಆಳ್ವಿಕೆಯ ಒಂದು ಯಶೋಗಾಥೆಯೆಂದರೆ ಸಮುದಾಯಗಳ ನಡುವೆ, ವರ್ಷಾನುಗಟ್ಟಲೆ ಜೊತೆಯಲ್ಲೇ ಕೆಲಸ ಮಾಡಿದ ಸಹಯೋಗಿಗಳ ಮಧ್ಯೆ, ಸ್ನೇಹಿತರು ಮತ್ತು ಕುಟುಂಬಗಳ ನಡುವೆ ಕೂಡ ಇರುವ ಸಹಜ ಸೌಹಾರ್ದವನ್ನು ಮುರಿಯಲು ಭಯವನ್ನು ಮತ್ತು ನಂತರ ಭಯೋತ್ಪಾದನೆಯನ್ನು ಹರಡಿಸಿದ್ದು. ಲಕ್ಷಾಂತರ ಜನಗಳು ನಾಝಿ ಆಡಳಿತದಲ್ಲಿ ತಮ್ಮ ಯಹೂದಿ ನೆರೆಹೊರೆಯವರನ್ನು ಯಾತನಾ ಶಿಬಿರಗಳಿಗೆ ಎಳೆದೊಯ್ಯುವಾಗ ಮೌನವಾಗಿದ್ದರು. ಬಹಶಃ ಸೌಹಾರ್ದತೆಗಳನ್ನು ಈ ರೀತಿಯಾಗಿ ಬುಡಮೇಲು ಮಾಡಿದ್ದನ್ನು ಮತ್ತು ಧ್ವಂಸಗೊಳಿಸಿದ್ದನ್ನು ಕಂಡಾಗ ಹುಟ್ಟಿದ ದಿಗಿಲಿನಿಂದಲೇ ಹಿಟ್ಲರನ ಯಾತನಾ ಶಿಬಿರಗಳಿಂದ ಬದುಕುಳಿದ ಲೂಥೆರನ್ ಪಾದ್ರಿ ಮಾರ್ಟಿನ್ ನಿಮೊಲ್ಲರ್ನ ಈ ಪ್ರಖ್ಯಾತ ಕವಿತೆ ಹೊಮ್ಮಿ ಬಂತು:
” ಮೊದಲು ಅವರು ಕಮ್ಯುನಿಷ್ಟರನ್ನು ಹುಡುಕಿ ಬಂದರು, ನಾನು ಮಾತಾಡಲಿಲ್ಲ.
ಏಕೆಂದರೆ ನಾನು ಕಮ್ಯುನಿಸ್ಟನಾಗಿರಲಿಲ್ಲ
ಮತ್ತೆ ಅವರು ಸೋಶಲಿಸ್ಟರನ್ನು ಹುಡುಕಿ ಬಂದರು, ನಾನು ಮಾತನಾಡಲಿಲ್ಲ
ಏಕೆಂದರೆ ನಾನು ಸೋಶಲಿಸ್ಟನಾಗಿರಲಿಲ್ಲ
ಮತ್ತೆ ಅವರು ಟ್ರೇಡ್ ಯೂನಿಯನ್ ನವರನ್ನು ಹುಡುಕಿ ಬಂದರು, ನಾನು ಮಾತಾಡಲಿಲ್ಲ
ಏಕೆಂದರೆ ನಾನೊಬ್ಬ ಟ್ರೇಡ್ ಯೂನಿಯನ್ ನವನು ಆಗಿರಲಿಲ್ಲ.
ಮತ್ತೆ ಅವರು ಯೆಹೂದ್ಯರನ್ನು ಹುಡುಕಿ ಬಂದರು, ನಾನು ಮಾತಾಡಲಿಲ್ಲ
ಏಕೆಂದರೆ ನಾನು ಯೆಹೂದ್ಯನಾಗಿರಲಿಲ್ಲ
ಮತ್ತೆ ಅವರು ನನ್ನನ್ನು ಹುಡುಕಿ ಬಂದರು
ಆಗ ಯಾರೂ ಉಳಿದಿರಲಿಲ್ಲ, ನನಗಾಗಿ ಮಾತನಾಡಲು”
ಇಂದು ಭಾರತದಲ್ಲಿ ಈ ಪಾಟಗಳು ಪ್ರಸ್ತುತವಾಗಿವೆ.
ಸೌಹಾರ್ದವೆಂದರೆ ಪೀಡಕರು, ಸರ್ವಾಧಿಕಾರಿಗಳು, ನಿರಂಕುಶಾಧಿಕಾರಿಗಳಿಗೆ ವಿಪರೀತ ಭಯ. ಭಾರತೀಯರೆಲ್ಲರ ಐಕ್ಯತೆಯನ್ನು ಖಾತ್ರಿಪಡಿಸುವ ಜನಾದೇಶ ಪಡೆದ ಸರಕಾರಗಳು ಆ ಐಕ್ಯತೆಯನ್ನೇ ಒಡೆಯಲು ಧರ್ಮ, ಜಾತಿ, ಭಾಷೆಗಳನ್ನು ಬಳಸಿ ದ್ವೇಷವನ್ನು ಹರಡುವುದನ್ನು ನಾವು ನೋಡಿದ್ದೇವೆ. ರೈತರ ಹೋರಾಟವು ಜಾತಿ, ಧರ್ಮಗಳನ್ನು ಮೀರಿದ ಒಂದು ಜಾತ್ಯತೀತ ಹೋರಾಟವಾಗಿದೆ. ಸಿಂಘು ಗಡಿಯಲ್ಲಿ ಬಹುಪಾಲು ಸಿಖ್ ಸಮುದಾಯಕ್ಕೆ ಸೇರಿದ ರೈತರ ಮೇಲೆ ಹಲ್ಲೆ ಮಾಡಿದ ಗೂಂಡಾಗಳಲ್ಲಿ ಕೆಲವರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾ ಒಂದು ಧಾರ್ಮಿಕ ಬಣ್ಣ ಕೊಡಲು ಪ್ರಯತ್ನಿಸಿದರು. ಅವರಲ್ಲಿ ಯಾರ ಮೇಲಾದರೂ ದಿಲ್ಲಿ ಪೋಲೀಸರು ‘ಟೂಲ್ಕಿಟ್’ ಪ್ರಕರಣದಲ್ಲಿ ದುರುಪಯೋಗಪಡಿಸಿಕೊಂಡ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಬಿ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆಯೇ?
ಇಂದು ಎಲ್ಲಾ ವಿಭಾಗಗಳ ದುಡಿಯುವ ಜನರು ಸರ್ಕಾರದ ನೀತಿಗಳ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಈ ನೀತಿಗಳು ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಇಂತಹವರ ಅಭಿಪ್ರಾಯಗಳನ್ನು ಕೇಳಿಯೂ ಇಲ್ಲ, ಹೇಳಿದಾಗ ಕೇಳಿಸಿಕೊಂಡಿದ್ದೂ ಇಲ್ಲ. ಹೊಸ ಕಾರ್ಮಿಕ ಸಂಹಿತೆಗಳನ್ನು ಮುಂದೊತ್ತಿದಾಗ ಕಾರ್ಮಿಕರೊಂದಿಗೆ ಹೀಗೇ ವರ್ತಿಸಲಾಯಿತು. ಅವರನ್ನು ನಿರ್ಲಕ್ಷಿಸಲಾಯಿತು. ಆದಿವಾಸಿಗಳೊಂದಿಗೆ ಕೂಡ ಹೊಸ ಗಣಿಗಾರಿಕೆ ಕಾಯ್ದೆಗಳನ್ನು ತರುವಾಗ ಹೀಗೇ ಆಯಿತು. ಅವರೊಡನೆ ಯಾವ ಸಮಾಲೋಚನೆಯನ್ನೂ ನಡೆಸದೇ ಅವರ ಅರಣ್ಯಗಳು ಮತ್ತು ಜಮೀನುಗಳನ್ನು ಕಸಿದುಕೊಳ್ಳಲಾಯಿತು, ಅವರ ಗ್ರಾಮಸಭೆಗಳ ಅಧಿಕಾರಗಳನ್ನು ವಂಚಿಸಲಾಯಿತು. ಇಂತಹ ಉದಾಹರಣೆಗಳು ಅನೇಕ. ಇತ್ತೀಚಿನ ಉದಾಹರಣೆ ಎಂದರೆ ರೈತರೊಡನೆ ಸಮಾಲೋಚನೆಗಳನ್ನು ನಡೆಸದೆ ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳನ್ನು ಬಲವಂತದಿಂದ ಪಾಸು ಮಾಡಿಕೊಂಡದ್ದು. ಅಂಗವಿಕಲರ ಚಳುವಳಿಯ ಒಂದು ಘೋಷಣೆ ಹೀಗಿದೆ-“ನಾವಿಲ್ಲದೆ ನಮ್ಮ ಬಗ್ಗೆ ಏನೂ ಸಲ್ಲ”. ಭಾರತದ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಘೋಷಣೆ ಎಲ್ಲರಿಗೂ ಸೂಕ್ತವಾಗಿದೆ. ಆದ್ದರಿಂದಲೇ ರೈತರ ಧೀರೋದಾತ್ತ ಹೋರಾಟ ಒಂದು ಬಹು ವಿಸ್ತಾರವಾದ ಜನವಿಭಾಗದಲ್ಲಿ ಬಲವಾಗಿ ಅಣುರಣನಗೊಳ್ಳುತ್ತಿದೆ. ಏಕೆಂದರೆ ಸರಕಾರ ಯಾರ ಹೆಸರಲ್ಲಿ ಧೋರಣೆಗಳನ್ನು ರೂಪಿಸುತ್ತಿದೆಯೋ, ಅವುಗಳಿಂದ ಆ ವಿಭಾಗಗಳಿಗೇನೂ ಪ್ರಯೋಜನವಾಗುತ್ತಿಲ್ಲ, ಆರಿಸಿದ ಕೆಲವರಿಗಷ್ಟೇ ಅವುಗಳಿಂದ ಪ್ರಯೋಜನವಾಗುತ್ತಿದೆ ಎಂಬುದು ಸರ್ವಸಾಮಾನ್ಯ ಅನುಭವ. ಜನಸಾಮಾನ್ಯರಲ್ಲಿ ಬೆಳೆಯುತ್ತಿರುವ ಈ ಸೌಹಾರ್ದವನ್ನೇ ಸರಕಾರ ಮುರಿಯಲು ಪ್ರಯತ್ನಿಸುತ್ತಿರುವುದು. ಈಗ ಇದು ಅಂತರ್ರಾಷ್ಟ್ರೀಯ ವಲಯಕ್ಕೆ ವಿಸ್ತರಿಸಿರುವುದರಿಂದ, ಭಾರತದಲ್ಲಿ ಸಾಕಷ್ಟು ಯಶಸ್ವಿಯಾಗಿರುವ ತನ್ನ ಅದೇ ಹಳೆಯ ಬೆದರಿಕೆಯ ತಂತ್ರಗಳಿಂದ, ಹುಸಿ ರಾಷ್ಟ್ರವಾದದಿಂದ ಜನಗಳನ್ನು ಸುಮ್ಮನಾಗಿಸಬಹುದು, ಅವರು ರಕ್ಷಣಾತ್ಮಕವಾಗಿರುವಂತೆ ಮಾಡಬಹುದು ಮತ್ತು ಅವರ ಸೌಹಾರ್ದವನ್ನು ದುರ್ಬಲಗೊಳಿಸಬಹುದು ಎಂದು ಈ ಸರಕಾರ ಭಾವಿಸುತ್ತಿದೆ.
ಆದರೆ, ಇದು ಅಷ್ಟು ಸುಲಭವಲ್ಲ. ಏಕೆಂದರೆ ಈ ಸರಕಾರ ಊಹಿಸಲಾರದ ರೀತಿಗಳಲ್ಲಿ ರೈತರ ಹೋರಾಟದ ಸಾವಯವ ಬೆಳವಣಿಗೆ ಕಾಣಬರುತ್ತಿದೆ. ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಲೇ ಇರುವುದು, ಮನಮುಟ್ಟುವಂತಿರುವುದು ಈ ಹೋರಾಟದ ಶಕ್ತಿಯ ಒಂದು ಸೂಚಕ. ಹರಿಯಾಣದಾದ್ಯಂತ, ಮುಖ್ಯವಾಗಿ ಜನವರಿ 26ರ ನಂತರ, ಅಪಾರ ಸಂಖ್ಯೆಗಳಲ್ಲಿ ಜನರು ಸೇರುತ್ತಿರುವುದು ಹರಿಯಾಣದ ಮುಖ್ಯಮಂತ್ರಿಗಳಿಗೆ ಆಶ್ಚರ್ಯಕರವಾಗಿ ಕಾಣುತ್ತಿರಬಹುದಷ್ಟೇ ಅಲ್ಲ, ಒಂದು ದುಃಸ್ವಪ್ನವಾಗಿಯೂ ಕಾಡುತ್ತಿರಬಹುದು. ಏಕೆಂದರೆ “ಈ ಹೋರಾಟದಲ್ಲಿ ನಮ್ಮ ರಾಜ್ಯದ ರೈತರೇನೂ ಇಲ್ಲ” ಎಂದು ಅವರು ಸಾರಿ ಬಹಳ ದಿನಗಳೇನೂ ಅಗಿಲ್ಲ. ‘ಪಂಚಾಯತು’ಗಳ ನಂತರ ‘ಪಂಚಾಯತುಗಳು ದಿಲ್ಲಿ ಗಡಿಗಳಲ್ಲಿ ಪ್ರತಿಭಟನೆಗಳಲ್ಲಿ ಸೇರಿಕೊಳ್ಳಿ, ಮತ್ತು ರೈತರ ಬೇಡಿಕೆಗಳನ್ನು ವಿರೋಧಿಸುವ ಎಲ್ಲ ಚುನಾಯಿತ ಪ್ರತಿನಿಧಿಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಿ ಎಂದು ಕರೆ ನೀಡುತ್ತಿರುವುದು ಅವರಿಗೇನೂ ಒಳ್ಳೆಯ ಸುದ್ದಿ ಅಲ್ಲ.
“ಸಾಗರದಾಚೆಗಿನ ಪಿತೂರಿ”ಯೊಂದಿದೆ ಎಂದು ಎಫ್.ಐ.ಆರ್. ದಾಖಲಿಸುವುದರಿಂದ, ಬೆದರಿಕೆಗಳನ್ನು ಹಾಕಿ ವಿಶ್ವದ ದೃಷ್ಟಿಯಲ್ಲಿ ಭಾರತದ ಹೆಸರುಗೆಡಿಸುವುದರಿಂದ, ಇದು ರೈತರ ಹೋರಾಟ, ರೈತರೇ ಮಾಡುತ್ತಿರುವ ಹೋರಾಟ, ಆದರೆ ರೈತರಿಗಾಗಿಯಷ್ಟೇ ಅಲ್ಲ ಎಂಬ ನೆಲದ ವಾಸ್ತವತೆಯನ್ನೇನೂ ಬದಲಿಸಲು ಸಾಧ್ಯವಿಲ್ಲ. ಈ ಹೋರಾಟ ಭಾರತದ ಎಲ್ಲರಿಗಾಗಿ ಮತ್ತು ಅದರ ಪ್ರಜಾಪ್ರಭುತ್ವಕ್ಕಾಗಿ.
ಅನುವಾದ : ಲವಿತ್ರ
ಸಹಾಯ ಮಾಡಿ! ಸಹಾಯ ಮಾಡಿ!ಸಚಿನ್ ಅಕ್ಷಯ್ ಅಜಯ್ ಅನಿಲ್!
ವ್ಯಂಗ್ಯಚಿತ್ರಕೃಪೆ: ಸತೀಶ ಆಚಾರ್ಯ, ನ್ಯೂಸ್ ಸ್ಟ್ರಿಂಗ್