ದೆಹಲಿ ರೈತ ಚಳುವಳಿ ನೇರ ಅನುಭವ – 5 “ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು”

ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ

ದೆಹಲಿಯಿಂದ ಸುಮಾರು 96 ಕಿಲೋಮೀಟರ್ ದೂರವಿರುವ  ನೇರವಾಗಿ ಬಸ್ ವ್ಯವಸ್ಥೆ ಇಲ್ಲದ, ಸ್ವಲ್ಪ ದೂರ ಮೆಟ್ರೋ ದಲ್ಲಿ ಸ್ವಲ್ಪ ದೂರ ಆಟೋದಲ್ಲಿ ಹೀಗೆ ನೇರವಾಗಿ ಯಾವ ಖಾಸಗೀ ವಾಹನಗಳೂ ಅತ್ತ ಬರದಂತಹ ಸ್ಥಿತಿ. (ರೈತರನ್ನು ಪೋಲೀಸರು ಹೆದ್ದಾರಿಯಲ್ಲಿ ಬ್ಲಾಕ್ ಮಾಡಿರುವುದರಿಂದ)  ಮೆಟ್ರೋ ದಲ್ಲಿ ಹೋಗೋಣವೆಂದು ನಿಲ್ದಾಣಕ್ಕೆ ಹೋದೆವು. ಕರೋನಾದ ಕಾರಣಕ್ಕೆ ಮೆಟೋದಲ್ಲಿ ಟಿಕೆಟ್ ಕೊಡುವುದನ್ನು ನಿಲ್ಲಿಸಿದ್ದಾರೆ. ಬದಲಿಗೆ ಯಾರೇ ಮೆಟ್ರೋದಲ್ಲಿ ಪ್ರಯಾಣಿಸಬೇಕಾದರೂ ಅದಕ್ಕೆ ಕಾರ್ಡ್ ತೆಗೆದುಕೊಳ್ಳಬೇಕು. ಈ ಕಾರ್ಡ್ ಗೆ 200 ರೂ ಅದರಲ್ಲಿ ನೂರು ರೂ‌ ಮಾತ್ರ ಸಿಗುತ್ತದೆ. ಇನ್ನುಳಿದ 100 ರೂ ಕಾರ್ಡ್ ಗೆ. ಅಂದರೆ ಹೊರಗಿನಿಂದ ದೆಹಲಿಗೆ ಬಂದವರು ಒಂದೆರಡು ಬಾರಿ ಮೆಟ್ರೋದಲ್ಲಿ ಪ್ರಯಾಣಿಸಲು 100 ರೂ ಕಾರ್ಡ್ ತೆಗೆದುಕೊಂಡರೆ ಮತ್ತೆ ಆ ಕಾರ್ಡ್ ಅವರಿಗೆ ಉಪಯೋಗಕ್ಕೆ ಬರುವುದಿಲ್ಲ ಇದು ಕೂಡ ಒಂದು ರೀತಿ ಹಗಲು ದರೋಡೆಯಿದ್ದಂತೆಯೇ… ನಾವು ತಲುಪಬೇಕಾಗಿದ್ದ ಗುರಿಯ ಅರ್ದಕ್ಕೆ ಮಾತ್ರ ಮೆಟ್ರೋ ಸೌಲಭ್ಯವಿರುವುದು ಇನ್ನುಳಿದ ಅರ್ದಕ್ಕೆ ಬಸ್ಸು ಅಥವಾ ಆಟೋ, ಟ್ಯಾಕ್ಸಿ ಮಾಡಿಕೊಂಡು ಹೋಗಬೇಕು. ಮೆಟ್ರೋ ಇಳಿದು ಒಂದು ಆಟೋ ಇಡಿದೆವು ನಾವುಗಳು ಹೊರಟ ಆಟೋದಲ್ಲಿ ಎರಡು ವರ್ಷದ ಮಗುವನ್ನೆತ್ತಿಕೊಂಡು ಒಬ್ಬರು ಬಂದು ಕುಳಿತರು. ನಾವು ಅಷ್ಟರೊಳಗಾಗಲೇ ಚಳಿಯನ್ನು ತಡೆಯಲಾರದೆ ಶ್ವಟರ್, ಕೋಟ್, ಅದರ ಮೇಲೊಂದು ಜರ್ಕಿನ್ ಮೇಲೋಂದು ಶಾಲು ಹಾಕಿಕೊಂಡು ಕುಳಿತಿದ್ದೆವು  ಗಾಳಿ ತಣ್ಣಗೆ ಸೂಜಿ ಚುಚ್ಚಿದ ಹಾಗೆ ಚುಚ್ಚುತ್ತಿತ್ತು. ಆದರೆ ನಮ್ಮ ಎದುರಿಗೆ ಕುಳಿತಿದ್ದ ಆ ಎರಡು ವರ್ಷದ ಮಗುವಿಗೆ ಕೇವಲ ಒಂದು ಸಾಧಾರಣ ಜರ್ಕಿನ್ ಹಾಕಲಾಗಿತ್ತು ಅದರ ಕೈಗಳಿಗೆ ಗ್ಲೌಸ್ ಹಾಕಿರಲಿಲ್ಲ, ತಲೆಗೊಂದು ಟೋಪಿಯಿರಲಿಲ್ಲ ಆದರೂ ಅದು ಆರಾಮಾಗಿಯೇ ಇತ್ತು ಚಳಿಯ ಯಾವ ಅನುಭವವೂ ನನಗಾಗುತ್ತಿಲ್ಲ ಎನ್ನುವಂತಿತ್ತು ಆದರೆ ನಾವುಗಳು ಇಷ್ಟೆಲ್ಲದರ ಜೊತೆಗೆ ಟೋಪಿಯನ್ನ ಹಾಕಿಕೊಂಡಿದ್ದರೂ ಚಳಿಯನ್ನು ತಡೆಲಾಗುತ್ತಿರಲಿಲ್ಲ. ಆಗ ನನಗನಿಸಿದ್ದು ಯಾರು ಯಾವ ಪರಿಸರದಲ್ಲಿ ಬೆಳೆಯುತ್ತಾರೋ ಆ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾರೆ. ಆ ಪರಿಸರ ಬದಲಾದಾಗ ಮಾತ್ರ ವ್ಯತ್ಯಾಸಗಳಾಗಿ ಸಮಸ್ಯೆಗಳು ಉದ್ಭವಿಸುತ್ತವೆ.

ಪ್ರಯಾಣ ಮಾಡುವ ದಾರಿಯಲ್ಲಿ ಆಚೆ ಈಚೆ ನೋಡುತ್ತಾ ಸುಮಾರು 40 ಕಿಲೋಮೀಟರ್ ಗೂ ಹೆಚ್ಚು ದೆಹಲಿಯಿಂದ ಹರಿಯಾಣದವರೆಗೆ ಸಾಗುವಾಗ ನನ್ನ ಗಮನ ಸೆಳೆದದ್ದು, ದೆಹಲಿ ವಿಶಾಲವಾಗಿ ಬೆಳೆಯುತ್ತ ಅದು ಹರಿಯಾಣವನ್ನು ಆವರಿಸಿಕೊಳುವಂತಿದೆ. ಹರಿಯಾಣ ರಾಜ್ಯದಲ್ಲಿಯೂ ರಸ್ತೆಯ ಆಬದಿ ಈಬದಿ ಕೃಷಿ ಭೂಮಿ ಇದೆ ಅದರಲ್ಲಿ ಬೆಳೆ ಬೆಳೆಯಲಾಗಿದೆ ಪಕ್ಕದಲ್ಲೇ ಕಾಂಪೌಂಡ್ ಗಳು ನಿರ್ಮಾಣವಾಗಿ ವಸತಿ ಸಮುಚ್ಚಯಗಳು, ಕಾರ್ಖಾನೆಗಳು ನಿರ್ಮಾಣವಾಗುತ್ತ ಕೃಷಿ ಭೂಮಿ ಕ್ರಮೇಣ ಕಾಣೆಯಾಗಿ ನಗರವಾಗಿ ಮಾರ್ಪಾಡಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕೆಲವು ಕಡೆಗಳಲ್ಲಂತೂ ಖಾಲಿಯಿರುವ ಸೈಟುಗಳಲ್ಲಿ ಕೃಷಿ ಮಾಡಿ ಬೆಳೆ ಬೆಳೆಯುತ್ತಿದ್ದಾರೇನೋ ಎನ್ನುವಂತೆ ಭಾಸವಾಗುತ್ತದೆ. ಈ ಬೆಳವಣಿಗೆಗಳನ್ನ ಅತ್ಯಂತ ಗಂಭೀರವಾಗಿ ನೋಡಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಕೃಷಿ ಭೂಮಿ ಸಂಪೂರ್ಣ ನಾಶವಾದರೆ, ಆಹಾರವನ್ನ ಕಾರ್ಖಾನೆಗಳಿಂದ ಮಾತ್ರ ಉತ್ಪಾದನೆ ಮಾಡಲಾಗುವುದಿಲ್ಲ. ಇವೆರಡರ ಸಮತೋಲನದ ಅಗತ್ಯ ತುಂಬಾ ಇದೆ. ಭಾರತದಲ್ಲಿ ಶೇ 65 ರಷ್ಟು ಜನಕ್ಕೆ ಉದ್ಯೋಗವನ್ನು ಒದಗಿಸಿರುವ ಅತ್ಯಂತ ದೊಡ್ಡ ಕ್ಷೇತ್ರ ಕೃಷಿ ಮತ್ತು ದೇಶದ ಆಹಾರ ಭದ್ರತೆಯಲ್ಲಿ ಪ್ರಧಾನ ಪಾತ್ರವನ್ನ ವಹಿಸಿರುವುದು ಕೃಷಿ ಎನ್ನುವುದನ್ನ ಯಾವುದೇ ಕಾರಣಕ್ಕೂ ಮರೆಯಬಾರದು.

ಎರಡು ವಾಹನಗಳನ್ನು ಬದಲಾಯಿಸಿ ಕೊನೆಗೂ ಪಲ್ವಲ್ ಗಡಿಯನ್ನ ತಲುಪಿದೆವು. ಈ ಗಡಿಯಲ್ಲಿ ಉಳಿದ ಗಡಿಗಳಿಗೆ ಹೋಲಿಸಿದರೆ ಟೆಂಟ್ ಗಳ ಸಂಖ್ಯೆ ಸ್ವಲ್ಪ ಕಡಿಮೆ ಇದ್ದರೂ ಹೋರಾಟದ ಕಿಚ್ಚಿಗೇನು ಇಲ್ಲಿ ಕಡಿಮೆಯಿಲ್ಲ. ಇಂದು ಎಲ್ಲಾ 5 ಗಡಿಗಳಲ್ಲಿ ಮತ್ತು ದೇಶದೆಲ್ಲೆಡೆ ರೈತ ಮಹಿಳಾ ದಿನವನ್ನಾಗಿ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚ ನಿರ್ದರಿಸಿತ್ತು. ಅದರಂತೆ ಎಲ್ಲೆಡೆಗಳಿಂದ ರೈತ ಮಹಿಳೆಯರು ದೊಡ್ಡ  ಪ್ರಮಾಣದಲ್ಲಿ ಬಂದು ಚಳುವಳಿಯನ್ನು ಸೇರಿಕೊಳ್ಳುತ್ತಿದ್ದರು ಪಲ್ವಲ್ ಕಡಿಯಲ್ಲಿ ಪ್ರಧಾನ ವೇದಿಕೆಯ ಸುತ್ತಲಿನ ನಾಲ್ಕೈದು ರಸ್ತೆಗಳ ಮೂಲಕ ಮಹಿಳೆಯರು ಕೈಯಲ್ಲಿ ತ್ರಿವರ್ಣ ದ್ವಜವಿಡಿದು ಘೋಷಣೆಗಳನ್ನು ಕೂಗುತ್ತಾ ದಂಡು ದಂಡಾಗಿ ಬರುತ್ತಿರುವುದನ್ನು ನೋಡಿದರೆ “ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಎಂಬ ಕವಿವಾಣಿ ನೆನಪಿಗೆ ಬರುತ್ತಿತ್ತು.

ಇದನ್ನೂ ಓದಿ : ಜೈಜವಾನ್ ಜೈಕಿಸಾನ್ ಘೋಷಣೆ ಗೆ ಅರ್ಥ ಬರಬೇಕಾದರೆ ನಾವು ಈ ರೈತ ಹೋರಾಟದಲ್ಲಿ ಭಾಗಿಯಾಗಬೇಕು

ಪಲ್ವಲ್ ಎಂಬ ಈ ಪ್ರದೇಶ ಸ್ವತಂತ್ರ್ಯ ಚಳುವಳಿಯಲ್ಲಿ ಬ್ರಿಟೀಷರ ವಿರುದ್ಧ ಸಮರ ಸಾರಿದ್ದ ಐತಿಹಾಸಿಕ ಪ್ರದೇಶವಾಗಿರುವುದರಿಂದ ಇದನ್ನ ಕ್ರಾಂತಿ ಮೈದಾನ್ ಎಂದು ನಾಮಕರಣ ಮಾಡಲಾಗಿದೆ. ಈಗ ಅದೇರೀತಿಯ ಮತ್ತೊಂದು ಐತಿಹಾಸಿಕ ಚಳುವಳಿಯನ್ನು ನಡೆಸಿ ಅಂದು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಸ್ವಾತಂತ್ರ್ಯ ಪಡೆದಂತೆ ಇಂದು ಮೋದಿ ಸರ್ಕಾರ ಮತ್ತು ಕಾರ್ಪೊರೇಟ್ ಕಂಪನಿಗಳಿಂದ ಸ್ವಾತಂತ್ರ್ಯ ವನ್ನ ಪಡೆದೇ ಪಡೆಯುತ್ತೇವೆ ಅಲ್ಲಿಯವರೆಗೆ ನಾವುಗಳು ಈ ಹೋರಾಟದ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಮ್ಮ ಹೆಣಗಳು ವಾಪಸ್ ಊರುಗಳಿಗೆ ಹೋಗುತ್ತವೆಯೇ ಹೊರತು ನಾವುಗಳು ಬರಿಗೈಯಲ್ಲಿ ಹಿಂದಿರುಗುವುದಿಲ್ಲ ಎಂದು ಇಲ್ಲಿನ ರೈತರು ಹೇಳುತ್ತಾರೆ. ಇದು ಕೇಳುವುದಕ್ಕೆ ಸಿನಿಮಾದ ಡೈಲಾಗ್ ಅಂತ ಕೆಲವರಿಗೆ ಅನ್ನಿಸಬಹುದು ಆದರೆ ಅವರು ಅನುಭವವಿಸುತ್ತಿರುವ ಸಂಕಷ್ಟ ಮತ್ತು  ಏನನ್ನಾದರೂ ಸಾಧಿಸಬೇಕು ಎನ್ನವ ಅವರ ಛಲವನ್ನ ಕಣ್ಣಾರೆ ಕಂಡವರಿಗೆ ಇದು ಬೂಟಾಟಿಕೆಯ ಮಾತು ಖಂಡಿತ ಅಲ್ಲ. ಈ ಮಾತಿನಲ್ಲಿ ಒಂದು ಅಂತಸತ್ವ ಇದೆ ಎಂಬುದು ಗೊತ್ತಾಗುತ್ತದೆ.

ಇದನ್ನೂ ಓದಿ : ದೆಹಲಿ ರೈತ ಚಳುವಳಿ ನೇರ ಅನುಭವ – 3 : ಮೋದಿ ಅಂದರೆನೇ “ಏನೂ ಆಗಲ್ಲ”

ಪಲ್ವಲ್ ನ ಈ ಹೋರಾಟದ ಮತ್ತೊಂದು ವಿಶೇಷವೆಂದರೆ ಇಲ್ಲಿ ಪ್ರತೀ ದಿನ ಸರದಿಯಂತೆ ಸಾವಿರಾರು ಸಂಖ್ಯೆಯಲ್ಲಿ ಸ್ಥಳಿಯವಾಗಿರುವ ಸುತ್ತಮುತ್ತಲ ಹಳ್ಳಿಗಳಿಂದ ರೈತರು ಬಂದು ಇಲ್ಲಿ ಭಾಗವಹಿಸುತ್ತಿದ್ದಾರೆ. ಇದಕ್ಕಾಗಿ ರೈತ ಸಂಘಟನೆಗಳು ಮಾಡುತ್ತಿರುವ ಕೆಲಸ ಅತ್ಯಂತ ಶ್ರಮದಾಯಕವಾದದ್ದು.

ಈ ಮದ್ಯೆ ಹೋರಾಟದ ಕಣದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು ವೇದಿಕೆಯ ಮುಂಬಾಗ ಕುಳಿತುಕೊಳ್ಳಲು ನಿರ್ಮಾಣ ಮಾಡಿದ್ದ ಪೆಂಡಾಲ್ ನಲ್ಲಿ ಜಾಗ ಸಾಲದೆ ಅಲ್ಲಿದ್ದ ಗಂಡಸರೆಲ್ಲ ಪೆಂಡಾಲ್ ನ ಹೊರಗಡೆ ಕುಳಿತುಕೊಂಡು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟರು. ಹೋರಾಟದ ಕಣದಲ್ಲಿ ಮಹಿಳೆಯರಿಗೆ ಸಿಕ್ಕ ಸಮಾನ ಅವಕಾಶ ಇದೇ ರೀತಿ ಬದುಕಿನಲ್ಲೂ ಸಮಾಜದಲ್ಲೂ ಮಹಿಳೆಗೆ ಸಮಾನ ಅವಕಾಶ ಸಿಕ್ಕರೆ ಎಂತಹ ಅದ್ಬುತ ಸಮಸಮಾಜ ನಿರ್ಮಾಣವಾಗಬಹುದು ಎಂದೆನಿಸಿತು. ಇಲ್ಲಿ ಹಾಡುಗಳು ಅದರಲ್ಲೂ ಮುಖ್ಯವಾಗಿ ಆಳುವವರನ್ನ ಶೋಷಣೆ ಕುರಿತ ಜಾನಪದ ಹಾಡುಗಳು, ಈ ಸಮರದಲ್ಲಿ ಹುಟ್ಟಿಕೊಂಡ ಮೋದಿ ವಿರುದ್ಧದ ಹಾಡುಗಳು, ಶಹರಿಗಳು ಇನ್ನೂ ವಿಷೇಷವೆಂದರೆ ಇಲ್ಲಿ ಭಾಗವಹಿಸಿ ಮಾತನಾಡಿದ ಹಲವರು ಈ ಸರ್ಕಾರದ ಕರಾಳ ಕಾನೂನುಗಳ ವಿರುದ್ಧ ಕವನಗಳನ್ನು ರಚಿಸಿ ವಾಚನ ಮಾಡಿದರು. ನನಗೆ ಆಶ್ಚರ್ಯವಾಗಿದ್ದೇನೆಂದರೆ ನಮ್ಮಂತೆ ಇವರುಗಳು ತಾವು ರಚಿಸಿದ ಕವನಗಳನ್ನು ಪೇಪರ್ ನಲ್ಲೋ, ಮೋಬೈಲ್ ನಲ್ಲೋ ನೋಡಿ ವಾಚನ ಮಾಡುತ್ತಿರಲಿಲ್ಲ ಉದ್ದ ಉದ್ದದ ಕವನಗಳನ್ನು ಹಾಗೆ ನಿರರ್ಗಳವಾಗಿ ವಾಚಿಸುತ್ತಿದ್ದುದ್ದನ ನೋಡಿದರೆ ಇದು ಮನದಾಳದಿಂದ ಪ್ರತಿರೋದದ ಕಿಚ್ಚಾಗಿ ಹೊರಹೊಮ್ಮತ್ತಿದೆ ಎಂದೆನಿಸುತ್ತಿತ್ತು.

ಈ ಚಳುವಳಿಯಲ್ಲಿ ಭಾಗವಹಿಸಲು ದೂರದ ತೆಲಂಗಾಣದಿಂದ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ನೂರಾರು ಶಿಕ್ಷಕರು ಬಂದಿದ್ದರು ಅವರಲ್ಲಿ ಕೆಲವರನ್ನ ಮಾತನಾಡಿಸಿದಾಗ “ನಾವು ಶಾಲೆಗಳಲ್ಲಿ ಪಾಠ ಮಾಡುವ ಮೇಷ್ಟ್ರುಗಳು ದೇಶಕ್ಕೆ ಅನ್ನಕೊಡುವ ರೈತ ಬೀದಿಯಲ್ಲಿರುವಾಗ ಅವರ ಮಕ್ಕಳಿಗೆ ಹೇಗೆ ನೆಮ್ಮದಿಯಿಂದ ಪಾಠ ಮಾಡಲು ಸಾಧ್ಯ, ಅದಕ್ಕಾಗಿ ಇಲ್ಲಿಯವರೆಗು ಬಂದಿದ್ದೇವೆ” ಎಂದರು.

ಇಲ್ಲಿಂದ ಇನ್ನೊಂದು ಗಡಿಗೆ ಹೋಗಲು ವಾಪಸ್ ಹೊರಟೆವು ಕಳೆದ ಒಂದು ವಾರದಿಂದ ಉತ್ತರ ಭಾರತದ ಊಟವನ್ನೇ ತಿಂದ ನಮ್ಮ ನಾಲಗೆ ಸ್ವಲ್ಪ ರುಚಿ ಕಳೆದುಕೊಂಡಿತ್ತು. ಏನಾದರೂ ಮಾಡಿ‌ ದಕ್ಷಿಣ ಭಾರತದ ಊಟ ಮಾಡೋಣ ಎಂದು ರಾತ್ರಿ ಆಂದ್ರ ಭವನಕ್ಕೆ ಹೋದೆವು ಅಲ್ಲಿ ಕ್ಯಾಂಟಿನ್ ಬಂದ್ ಆಗಿತ್ತು. ಪಕ್ಕದ ತೆಲಂಗಾಣ ಭವನದ ಕ್ಯಾಂಟಿನ್ ಕೂಡಾ ಮುಚ್ಚಿತ್ತು. ಕರ್ನಾಟಕ ಭವನ ಸಾಕಷ್ಟು ದೂರದಲ್ಲಿತ್ತು. ಸರಿ ಬೇರೇನು ದಾರಿ ಕಾಣದೆ ದೆಹಲಿಯಲ್ಲಿ ಹುಡುಕಾಟ ಆರಂಬಿಸಿದೆವು ಸಾಕಷ್ಟು ಸುತ್ತಾಡಿದ ಮೇಲೆ ಏಲೋ ಒಂದು ಕಡೆ ಸೌತ್ ಇಂಡಿಯನ್ ಮೀಲ್ಸ್ ಎಂದು ಒಂದು ಬೋರ್ಡ್ ಕಾಣಿಸಿತು. ಅದರ ಕೆಳಗಡೆ ಮಲೆಯಾಳಂ, ತೆಲುಗು ಮತ್ತು ತಮಿಳಿನಲ್ಲೂ ಬರೆಯಲಾಗಿತ್ತು ಕನ್ನಡದ ಬೋರ್ಡ್ ಮಾತ್ರ ಇರಲಿಲ್ಲ. ಹೋಟೆಲ್ ಒಳಗೆ ಹೋದೆವು ಮೂರು ಟೇಬಲ್ ಗಳಿರುವ ಒಂದು ಸಣ್ಣ ಹೋಟೆಲ್ ಅದು. ಕುಳಿತುಕೊಂಡ ಕೂಡಲೆ ದೊಡ್ಡದಾದ ಒಂದು ಪಟ್ಟಿಯನ್ನು ತಂದು ನಮ್ಮ ಮುಂದಿಟ್ಟರು. ಇಡೀ ಮೆನುವನ್ನು ಪೂರ್ಣ ಓದುವ ತಾಳ್ಮೆ ನಮಗಿರಲಿಲ್ಲ. ಮೊದಲಿಗೆ ಸೌತ್ ಇಂಡಿಯನ್ ತಾಲಿ ಕಾಣಿಸಿತು ಅದನ್ನು ಆರ್ಡರ್ ಮಾಡಿದೆವು. ಟೇಬಲ್ ಮೇಲೆ ಊಟ ಬಂತು. ನೋಡಲು ಕರ್ನಾಟಕದ ಹೋಟೆಲ್ ಗಳಲ್ಲಿ ಊಟ ಕೊಡುವ ರೀತಿಯಲ್ಲೇ ತಟ್ಟೆಯ ಸುತ್ತಲೂ ಐದು ಚಿಕ್ಕ ಬಟ್ಟಲುಗಳು ಅವುಗಳಲ್ಲಿ ಒಂದರಲ್ಲಿ ಸಾಂಬರ್, ಮತ್ತೊಂದು ರಸಂ, ಮತ್ತೊಂದು ದಾಲ್, ಮತ್ತೊಂದು ಬೀಟರೆಟ್ ಪಲ್ಯ ಮತ್ತೊಂದರಲ್ಲಿ ಮಜ್ಜಿಗೆ ಮದ್ಯದಲ್ಲಿ ಬಿಳಿ ಅನ್ನ ಅದರ ಮೇಲೆ ಎರಡು ರೋಟಿ, ಒಂದು ಅಪ್ಪಳ, ಪಕ್ಕದಲ್ಲಿ ಒಂದು ಸೌಟಿನಷ್ಟು ಉಪ್ಪಿನಕಾಯಿ. ನೋಡುವ ಕಣ್ಣುಗಳಿಗೆ ಒಂದು ರೀತಿಯ ಮುದ ನೀಡುವಂತಿತ್ತು. ಈ ರೀತಿಯ ಊಟವನ್ನು ನೋಡಿ ಒಂದು ವಾರವೇ ಆಗಿತ್ತು. ಸರಿ ತಡಮಾಡಬಾರದೆಂದು ತಿನ್ನಲು ಪ್ರಾರಂಬಿಸಿದೆವು ನಮ್ಮ ಕಣ್ಣುಗಳಿಂದ ನೋಟಕ್ಕೆ ಸಿಕ್ಕ ಆನಂದ ನಾಲಿಗೆಯ ಮೂಲಕ ರುಚಿಯಾಗಿ ಸಿಗಲಿಲ್ಲ. ಹೆಸರಿಗೆ ಮಾತ್ರ ಅದು ಸೌತ್ ಇಂಡಿಯನ್ ತಾಲಿ ಉಳಿದರಂತೆ ಎಲ್ಲದರ ರುಚಿಯೂ ನಾವು ಕಳೆದ ಒಂದು ವಾರದಿಂದ ತಿಂದ ರುಚಿಗೂ ಇದಕ್ಕೂ ಯಾವ ವ್ಯತ್ಯಾಸವೂ ಇರಲಿಲ್ಲ. ಕೆಲವೊಮ್ಮೆ ನಮ್ಮ ಊರುಗಳಲ್ಲಿ ಹೊಸದಾಗಿ ಹೋಟೆಲ್ ಮಾಡಿ ನಮ್ಮೂರಿನ ಬಟ್ಟರನ್ನೇ ಇಟ್ಟುಕೊಂಡು ನಾರ್ತ್ ಇಂಡಿಯನ್ ಮತ್ತು ಚೈನೀ ಸ್ಟೈಲ್ ಫುಡ್ ಎಂದು ಬೋರ್ಡ್ ಹಾಕಿಕೊಂಡು ಹೋಟೆಲ್ ನಡೆಸಿದರೆ ಹೇಗಿರುತ್ತೇ. ನೋಡಲು ಮಾತ್ರ ಅದು ನಾರ್ತ್ ಮತ್ತು ಚೈನಿ ರುಚಿಯಲ್ಲಾ ನಮ್ಮೂರಿನದೇ ಹಾಗೆ ಈ ದೆಹಲಿಯಲ್ಲಿ ನಾವು ತಿಂದ ಸೌತ್ ಇಂಡಿಯನ್ ತಾಲಿ ವಿತ್ ನಾರ್ತ್ ಇಂಡಿಯನ್ ಟೇಸ್ಟ್…

ಇದನ್ನೂ ಓದಿ : ದೆಹಲಿ ರೈತ ಚಳುವಳಿ ನೇರ ಅನುಭವ – 4 ದೆಹಲಿ ರೈತರ ಪ್ರತಿಭಟನೆ ಇಡೀ ದೇಶದ ಪ್ರತಿಭಟನೆ

ರಾತ್ರಿ ಮಲಗುವುದರೊಳಗೆ ಬಂದ ಕಬರ್ ಏನೆಂದರೆ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಭಾಗವಹಿಸಲು ಪಂಜಾಬ್ ನಿಂದ ಒಂದು ಲಕ್ಷ ಮತ್ತು ಹರಿಯಾಣದಿಂದ ಒಂದು ಲಕ್ಷ ಟ್ರ್ಯಾಕ್ಟರ್ ಗಳು ದೆಹಲಿಕಡೆಗೆ ಬರಲು ಸಿದ್ದವಾಗಿವೆಯಂತೆ ಜೊತೆಗೆ ಉತ್ತರ ಭಾರತದ ರಾಜ್ಯಗಳಿಂದಲೂ ದೊಡ್ಡ ಪ್ರಮಾಣದ ರೈತರು ಟ್ರ್ಯಾಕ್ಟರ್ ಗಳನ್ನು ದೆಹಲಿಗೆ ತರಲು ತಯಾರಿ ನಡೆಸಿದ್ದಾರೆ. ಜೊತೆಗೆ ರೈತರು ನಡೆಸುವ ಪರ್ಯಾಯ ಪೆರೆಡ್ ಗೆ ಹಲವು ಪ್ರದೇಶಗಳಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ರೈತರ ತಾಲೀಮು ಆರಂಭವಾಗಿದೆ. ಈಗ ಎಲ್ಲರ ಚಿತ್ತ ಇಪ್ಪತ್ತಾರರತ್ತ.

ದೆಹಲಿ ರೈತ ಹೋರಾಟದ ವಿಡಿಯೋಗಳು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Donate Janashakthi Media

Leave a Reply

Your email address will not be published. Required fields are marked *