ಕಾಫಿ ಮಂಡಳಿಯನ್ನು ಮುಚ್ಚಲು ಕೇಂದ್ರ ಸರಕಾರ ಮುಂದಾಗಿದೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿರುವ 38 ಶಾಖಾ ಕಚೇರಿಗಳನ್ನು ಮುಚ್ಚಲು ಆದೇಶ ನೀಡುರುವುದು ಈ ಅನುಮಾನಕ್ಕೆ ಕಾರಣವಾಗಿದೆ.
ದೇಶದ ಪ್ರಮುಖ ವಾಣಿಜ್ಯ ಬೆಳೆ ಆದ ಕಾಫಿ ಕೃಷಿಯು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 20 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದೆ. ದೇಶದ ವಾರ್ಷಿಕ ಕಾಫಿ ಉತ್ಪಾದನೆಯು 3.6 ಲಕ್ಷ ಟನ್ ಗಳಷ್ಟಿದ್ದು ಇದರಲ್ಲಿ ರಾಜ್ಯದ ಪಾಲು ಶೇಕಡಾ 70 ರಷ್ಟಿದೆ. ಪುಟ್ಟ ಜಿಲ್ಲೆ ಕೊಡಗು ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡಾ 30 ರಷ್ಟು ಪಾಲು ಹೊಂದಿದೆ. ಮೊದಲಿನಿಂದಲೂ ತಾವು ಬೆಳೆದ ಕಾಫಿಯನ್ನು ಬೆಳೆಗಾರರು ಕಾಫಿ ಮಂಡಳಿಗೇ ನೀಡಬೇಕಿತ್ತು. ನಂತರ ಬೆಳೆಗೆ ಅದರ ಹೋರಾಟದ ಫಲವಾಗಿ 1992 ರಲ್ಲಿ ಕಾಫಿಯನ್ನು ಮುಕ್ತ ಮಾರುಕಟ್ಟೆಗೆ ಪರಿಚಯಿಸಲಾಯಿತು, ಅಂದಿನಿಂದ ವಿದೇಶಕ್ಕೆ ರಫ್ತು ಮಾಡಿ ಬೆಳೆಗಾರರೂ ಒಂದಷ್ಟು ಹಣವನ್ನು ನೋಡಿದರು. ನಂತರ ಕಾಫಿ ಮಂಡಳಿಯ ಚಟುವಟಿಕೆಯು ಬೆಳೆಗಾರರಿಗೆ ನೆರವು, ಸಂಶೋಧನೆ, ಕಾಫಿ ತೋಟಗಳ ಅಭಿವೃದ್ದಿ, ಬೀಜಗಳ ವಿತರಣೆ ಇಷ್ಟಕ್ಕೆ ಸೀಮಿತವಾಯಿತು.
ಕೊಡಗು ಚಿಕ್ಕಮಗಳೂರು , ಹಾಸನ ಜಿಲ್ಲೆಗಳಲ್ಲಿ ಮತ್ತು ಕಾಫಿ ಬೆಳೆಯುವ ಇತರ ರಾಜ್ಯಗಳಲ್ಲಿಯೂ ಕಾಫಿ ಮಂಡಳಿಯ ಸಂಪರ್ಕಾಧಿಕಾರಿಗಳ ಕಚೇರಿಗಳು ಇವೆ. ಇವುಗಳು ಬೆಳೆಗಾರರ ನೆರವಿಗೆ ಸ್ಪಂದಿಸುತ್ತಿದ್ದು ಮಂಡಳಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಆದರೆ ಕಾಫಿ ಮಂಡಳಿಯು ತೆಗದುಕೊಂಡಿರುವ ಇತ್ತೀಚಿನ ನಿರ್ಧಾರವೊಂದು ಬೆಳೆಗಾರರಿಗೆ ಆಘಾತವನ್ನು ನೀಡಿದೆ. ರಾಜ್ಯದ ವಿವಿಧೆಡೆ ಇರುವ ಕಾಫಿ ಮಂಡಳಿ ಶಾಖಾ ಕಚೇರಿಗಳನ್ನು ಮುಚ್ಚುವ ಸಂಬಂಧ ಕಾಫಿ ಮಂಡಳಿ ಅಧಿಕೃತ ಆದೇಶವನ್ನು ಹೊರಡಿಸಿದೆ. ಕೊಡಗು ಜಿಲ್ಲೆಯಲ್ಲಿ 14 ಸ್ಥಳಗಳಲ್ಲಿ ಇದ್ದ 10 ಕಾಫಿ ಮಂಡಳಿಯ ಕಚೇರಿಗಳನ್ನು ಇದೀಗ ಮುಚ್ಚುವ ತೀರ್ಮಾನ ತೆಗೆದುಕೊಂಡಿದ್ದು ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಮಾತ್ರ ಸೇವೆ ಮುಂದುವರೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೂಲಗಳ ಪ್ರಕಾರ 7.09.2017ರಲ್ಲಿ ನಡೆದ ಮಂಡಳಿಯ ಖರ್ಚು ಹಣಕಾಸು ಸಮಿತಿ (ಇಎಫ್ಸಿ) ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಈ ಬಗ್ಗೆ ಇಎಫ್ಸಿ ಕೆಲವೊಂದು ಶಿಫಾರಸ್ಸು ಮಾಡಿರುವುದು ಕಾಫಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
2017ರಲ್ಲಿ ನಡೆದ ಇಎಫ್ಸಿ ಸಭೆಯಲ್ಲಿ ಕೆಲವೊಂದು ಮಹತ್ವದ ಚರ್ಚೆಗಳಾಗಿವೆ. ಕಾಫಿ ಮಂಡಳಿ ಪುನಶ್ಚೇತನ, ವೆಚ್ಚ ಕಡಿತ (ಕಾಸ್ಟ್ ಕಟ್ಟಿಂಗ್), ಸಿಬ್ಬಂದಿಗಳ ಸಂಖ್ಯೆ ಇಳಿಕೆ ಸೇರಿದಂತೆ ಆನೇಕ ವಿಚಾರಗಳ ಬಗ್ಗೆ ಚರ್ಚೆಗಳಾಗಿ ನಡಾವಳಿಯಲ್ಲಿ ದಾಖಲಾಗಿದೆ. ಕಾಫಿ ಮಂಡಳಿ ಪುನರ್ ರಚನೆ ಸಂಬಂಧಿಸಿದಂತೆ ಹಾಗೂ ಕಚೇರಿಯಲ್ಲಿ ಇರಬೇಕಾದ ಸಿಬ್ಬಂದಿಗಳ ಸಂಖ್ಯೆ ಬಗ್ಗೆ ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಪ್ರಸ್ತಾವನೆ ಕೂಡ ಸಲ್ಲಿಕೆಯಾಗಿದೆ. ಸಚಿವಾಲಯದ ಉಲ್ಲೇಖದಂತೆ ಕಾಫಿ ಮಂಡಳಿ ಮರು ಸಂಘಟನೆ ಹಾಗೂ ರಾಜ್ಯದ ಹಲವೆಡೆಗಳಲ್ಲಿರುವ ಕಚೇರಿಗಳನ್ನು ಮುಚ್ಚಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಕಾಫಿ ಮಂಡಳಿ ಪತ್ರದ ಮೂಲಕ ತಿಳಿಸಿದೆ. ರಾಜ್ಯದಲ್ಲಿ ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಕೇರಳ, ತಮಿಳುನಾಡುವಿನಲ್ಲಿ ಹೆಚ್ಚುವರಿ ಕಚೇರಿಗಳು ನೂತನ ಆದೇಶದಂತೆ ಮುಚ್ಚಲ್ಪಡುತ್ತವೆ.
ಇದನ್ನೂ ಓದಿ : ಆತ್ಮನಿರ್ಭರ ಎಂದರೆ ಭಾರತದ ಸ್ವಾವಲಂಬನೆ ಮಾರುವುದೇ; ವಿಚಾರಗೋಷ್ಠಿ
ಕೊಡಗಿನಲ್ಲಿ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ 2 ಕಚೇರಿ, ನಾಪೋಕ್ಲು, ಮೂರ್ನಾಡು, ಸೋಮವಾರಪೇಟೆ, ಶನಿವಾರಸಂತೆ, ಸುಂಟಿಕೊಪ್ಪ, ಮಾದಾಪುರ, ವೀರಾಜಪೇಟೆ, ಗೋಣಿಕೊಪ್ಪ, ಸಿದ್ದಾಪುರ, ಬಾಳೆಲೆ, ಶ್ರೀಮಂಗಲದಲ್ಲಿ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ 14 ಕಡೆಗಳಲ್ಲಿ ಕಾಫಿ ಮಂಡಳಿ ಉಪ ಕಚೇರಿಗಳಿವೆ. ಈ ಪೈಕಿ ಇದೀಗ ಮಡಿಕೇರಿ, ವೀರಾಜಪೇಟೆಯಲ್ಲಿ ಕಾಫಿ ಮಂಡಳಿ ಉಪನಿರ್ದೇಶಕರ ಕಚೇರಿ ಇದ್ದು ಇದರಲ್ಲಿ ಮಡಿಕೇರಿ ಉಪನಿರ್ದೇಶಕರ ಕಚೇರಿ ಮಾತ್ರ ಮುಂದೆ ಕಾರ್ಯನಿರ್ವಹಿಸಲಿದೆ. ಇದೀಗ ಮಡಿಕೇರಿ, ಸೋಮವಾರಪೇಟೆ, ಗೋಣಿಕೊಪ್ಪ, ಶ್ರೀಮಂಗಲದಲ್ಲಿ ಮಾತ್ರ ಕಚೇರಿಗಳು ಸೇವೆ ಮುಂದುವರೆಸಲಿದ್ದು, ಉಳಿದ 10 ಕಡೆಗಳಿದ್ದ ಕಚೇರಿಗಳು ಬಂದ್ ಆಗಲಿದೆ ಎಂದು ತಿಳಿದು ಬಂದಿದೆ.
ಉಳಿದಂತೆ ಹಾಸನ ಜಿಲ್ಲೆಯಲ್ಲಿದ್ದ 8 ಕಚೇರಿಗಳ ಪೈಕಿ 2, ಚಿಕ್ಕಮಗಳೂರಿನಲ್ಲಿದ್ದ 14 ಕಚೇರಿ ಪೈಕಿ 5, ಕೇರಳ ರಾಜ್ಯದಲ್ಲಿದ್ದ 13 ಕಚೇರಿ ಪೈಕಿ 6, ತಮಿಳುನಾಡಿನಲ್ಲಿದ್ದ 11 ಕಚೇರಿ ಪೈಕಿ 5 ಕಚೇರಿಗಳು ಮಾತ್ರ ಸೇವೆ ಮುಂದುವರೆಸಲಿವೆ. ಉಳಿದ ಕಚೇರಿಗಳು ಮುಚ್ಚಲ್ಪಡುತ್ತಿದೆ. ಆರ್ಥಿಕ ಹೊಡೆತದ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಹಾಗೂ ಮಂಡಳಿ ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗಿದೆ. ಕಾಫಿ ಮಂಡಳಿಯ ಕೆಲ ಕಚೇರಿ ಮುಚ್ಚಲ್ಪಡುತ್ತಿರುವ ಹಿನ್ನೆಲೆ ಪ್ರಕ್ರಿಯೆಗಳು ಆರಂಭಗೊಂಡಿವೆ. ಕಟ್ಟಡ ಸ್ಥಳಾಂತರ ಹಾಗೂ ಮಂಡಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲು, ಮಹತ್ವದ ದಾಖಲೆಗಳ ಸ್ಥಳಾಂತರ, ಹಣಕಾಸು ವರ್ಗಾವಣೆ ಸೇರಿದಂತೆ ಇನ್ನಿತರು ಪ್ರಕ್ರಿಯೆಗಳು ತಾ.15ರೊಳಗೆ ಮುಗಿಸುವಂತೆ ಕಾಫಿ ಮಂಡಳಿ ಕಾರ್ಯದರ್ಶಿ ಸಂಬಂಧಪಟ್ಟವರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಕ್ರಿಯೆ ಪೂರ್ಣಗೊಳಿಸಿ ಏಪ್ರಿಲ್ 15 ರಿಂದ ಆಯ್ದ ಭಾಗಗಳಲ್ಲಿ ಮಾತ್ರ ಕಾಫಿ ಮಂಡಳಿ ಸೇವೆ ನೀಡಲಿದೆ. ಮಂಡಳಿಯ ಕೆಲವು ಯೋಜನೆಗಳ ಸೌಲಭ್ಯವನ್ನು ಬೆಳೆಗಾರರು ಸ್ಥಳೀಯ ಕಚೇರಿಗಳಿಂದ ಪಡೆದುಕೊಳ್ಳಲು ಅವಕಾಶ ಈ ತನಕ ಸುಲಲಿತವಾಗಿತ್ತು. ಇದೀಗ ಹೊಸ ಆದೇಶದಿಂದ ದೂರದ ಕಚೇರಿಗೆ ತೆರಳಬೇಕಾಗುತ್ತದೆ. ಇದು ಬೆಳೆಗಾರರರಿಗೆ ಸಮಸ್ಯೆ ತಂದೊಡ್ಡಲಿವೆ.
ಈಗಾಗಲೇ ಕಾಫಿ ಮಂಡಳಿಯಿಂದ ದೊರೆಯುತ್ತಿದ್ದ ಸಬ್ಸಿಡಿ ಸೇರಿದಂತೆ ಆನೇಕ ಯೋಜನೆಗಳು ಕಡಿತಗೊಂಡಿವೆ. ಇದರಿಂದ ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗಿದೆ. ಈ ನಡುವೆ ಸ್ಥಳೀಯ ಕಚೇರಿಗಳನ್ನು ಮುಚ್ಚಲ್ಪಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಯಂತ್ರೋಪಕರಣಗಳಿಗೆ ದೊರಕುತಿದ್ದ ಸಬ್ಸಿಡಿ, ಡ್ರೈಯಿಂಗ್ ಯಾರ್ಡ್, ರಿಪ್ಲಾಟೇಷನ್, ನೀರಾವರಿಗೆ ನೀಡುತ್ತಿದ್ದ ಸಹಾಯ ಧನ ಕಡಿತ ಮಾಡಲಾಗಿದೆ. ಸ್ಥಳೀಯ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಮಂಡಳಿ ಸೇತುವೆಯಾಗಿತ್ತು. ಅದನ್ನು ಪರಿಣಾಮಕಾರಿಯಾಗಿ ವಿಸ್ತರಣೆ ಮಾಡದೆ, ಸ್ಥಳೀಯ ಕಚೇರಿಗಳನ್ನೇ ಮುಚ್ಚುತ್ತಿರುವುದು ಸರಿಯಲ್ಲ ಎಂದು ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ಹೇಳುತ್ತಾರೆ.
ಕಾಫಿ ತೋಟಕ್ಕೆ ಮಾರಕವಾಗಿರುವ ಬೋರರ್ ಕಾಟಕ್ಕೆ ತೋಟಗಳೇ ನಾಶವಾಗಿವೆ. ಕಾಫಿಗೆ ಬರುವ ರೋಗಗಳ ನಿವಾರಣೆಯಲ್ಲಿ ಕಾಫಿ ಮಂಡಳಿ ಪಾಥ್ರ ದೊಡ್ಡದಿದ್ದು ಮಂಡಳಿ ಅಧಿಕಾರಿಗಳು ತೋಟಗಳಿಗೆ ತೆರಳಿ ಬೆಳೆಗಾರರಿಗೆ ಸಲಹೆ ಸಹಕಾರಗಳನ್ನು ನೀಡುತಿದ್ದರು. ಇದೀಗ ಕಚೇರಿಗಳನ್ನೆ ಮುಚ್ಚುತ್ತಿರುವುದರಿಂದ ಬೆಳೆಗಾರರು ಇನ್ನಷ್ಟು ಕಷ್ಟ ಪಡಬೇಕಾಗಿದೆ ಎಂದು ಸೋಮವಾರಪೇಟೆಯ ಕಾಫಿ ಬೆಳೆಗಾರ ರಾಜೀವ್ ಕುಶಾಲಪ್ಪ ಹೇಳುತ್ತಾರೆ. ಕಾಫಿ ಮಂಡಳಿಯು ಕಚೇರಿ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿದು ಬೆಳೆಗಾರರಿಗೆ ಇನ್ನೂ ಉತ್ತಮ ಸೇವೆ ಒದಗಿಸುವಂತಾಗಲಿ ಎಂದು ಕಾಫಿ ಬೆಳೆಗಾರ ಸಂಘಟನೆಗಳು ಒತ್ತಾಯಿಸಿವೆ. ಈಗ ಕೆಲವು ಕಚೇರಿಗಳನ್ನೇ ಮುಚ್ಚಿ ನಂತರ ಇಡೀ ಮಂಡಳಿಯನ್ನೆ ಮುಚ್ಚಬಹುದು ಎಂದು ಬೆಳೆಗಾರರು ಸಂಶಯ ವ್ಯಕ್ತಪಡಿಸುತಿದ್ದಾರೆ.