ಮೂರು ಕೃಷಿ ಕಾಯ್ದೆಗಳು: ಜನತೆಯ ವಿರುದ್ಧ, ಬಂಡವಾಳಿಗರ ಪರ

ರೈತರ ಚಾರಿತ್ರಿಕ ಪ್ರತಿಭಟನಾ ಕಾರ್ಯಾಚರಣೆಯ ಬೇಡಿಕೆಗಳನ್ನು ಯಾವುದೇ ವಿವೇಕಯುತ ಸರಕಾರ ಒಪ್ಪಿಕೊಳ್ಳುತ್ತಿತ್ತು. ಆದರೆ ಪ್ರಧಾನ ಮೋದಿ ನಿರಾಕರಿಸುತ್ತಿದ್ದಾರೆ. ಏಕೆಂದರೆ, ನವ-ಉದಾರವಾದಿ ಸುಧಾರಣೆಯ ದಿಕ್ಕಿನಲ್ಲಿ ಉಗ್ರ ರೀತಿಯಲ್ಲಿ ಸಾಗುತ್ತಿರುವ ಮೋದಿ ಸರಕಾರ ಕಾರ್ಪೊರೇಟ್‌ಗಳಿಗೆ ಗರಿಷ್ಟ ಲಾಭಗಳಿಕೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಿಕ್ಕಾಗಿಯೇ ಕಾಯ್ದೆಗಳ ಮೂಲಕ ಕೃಷಿಯ ಮೇಲೆ ವಿದೇಶಿ ಮತ್ತು ದೇಶೀ ಕಾರ್ಪೊರೇಟ್‌ಗಳಿಗೆ ರೀತಿಯ ಸಂಪೂರ್ಣ ಹತೋಟಿಯನ್ನು ಕಲ್ಪಿಸ ಬಯಸುತ್ತಿದೆ. ಬಿಜೆಪಿ ಕೇಂದ್ರ ಸರಕಾರ ಭಾರತದಲ್ಲಿ ಆಳುವ ವರ್ಗಗಳ ಕ್ರೋಡೀಕರಣದ ಪ್ರಧಾನ ದಲ್ಲಾಳಿಯಾಗಿ ಬಿಟ್ಟಿದೆ. ಅವರ ವರ್ಗ ಹಿತಗಳನ್ನು ಈಡೇರಿಸುವ ಸುಧಾರಣೆಗಳ ಮೂಲಕ ಭಾರತೀಯ ಜನತೆಯ ಮೇಲೆ ವರ್ಗದಾಳಿಯನ್ನು ತೀವ್ರಗೊಳಿಸುವ ಬಿಜೆಪಿಯ ಪ್ರಯತ್ನಗಳಿಗೆ ಶೋಷಿತ ವರ್ಗಗಳ ಮತ್ತು ಇತರ ಜನವಿಭಾಗಗಳ ಪ್ರತಿ-ದಾಳಿಯ ಮೂಲಕ ಸವಾಲು ಹಾಕಬೇಕು, ಅವನ್ನು ಎದುರಿಸಬೇಕು.

 ಸೀತಾರಾಮ್ ಯೆಚುರಿ

ಮತ್ತೊಮ್ಮೆ  ಕೇಂದ್ರ ಸರಕಾರ ಮತ್ತು ರೈತ ಸಂಘಟನೆಗಳ ನಡುವಿನ ಮಾತುಕತೆ ಈ ಅಭೂತಪೂರ್ವ ರೈತ ಪ್ರತಿಭಟನೆಗಳು ಎತ್ತಿರುವ ಪ್ರಧಾನ ಪ್ರಶ್ನೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಡಿಸೆಂಬರ್ 30 ರಂದು ನಡೆದ ಈ ಆರನೇ ಸುತ್ತಿನಲ್ಲೂ ಕೇಂದ್ರ ಸರಕಾರ ಈ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದನ್ನು ಪರಿಶೀಲಿಸಲು ನಿರಾಕರಿಸಿತು, ಆದರೆ ವಿದ್ಯುತ್(ತಿದ್ದುಪಡಿ) ಮಸೂದೆಯನ್ನು ಮರುಪರಿಶೀಲಿಸಲು ಹಾಗೂ ಪರಿಸರ ಮಾಲಿನ್ಯ ಕಾಯ್ದೆಯಿಂದ ರೈತರನ್ನು ತೆಗೆಯಲು ಒಪ್ಪಿಕೊಂಡಿರುವಂತೆ ಕಾಣುತ್ತದೆ. ಇನ್ನೊಂದು ಸುತ್ತಿನ ಮಾತುಕತೆ ಜನವರಿ 4, 2021ರಂದು ನಡೆಯಲಿದೆ.

ಬಿಜೆಪಿ ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳ ರದ್ಧತಿ ಕುರಿತಂತೆ ತನ್ನ ಹಠಮಾರಿತನವನ್ನು ಮುಂದುವರೆಸುತ್ತಿರುವುದು ಈಗ ನಡೆಯುತ್ತಿರುವ ಅತ್ಯಂತ ಶಾಂತಿಯುತವಾದ ರೈತ ಪ್ರತಿಭಟನೆಗಳಲ್ಲಿ ಉಂಟಾಗಿರುವ ಮಹಾ ಅಡಚಣೆಯನ್ನು ಇನ್ನೂ ದೀರ್ಘಗೊಳಿಸುತ್ತಿದೆ.

ಹೇಗೆ ಲೆಕ್ಕ ಹಾಕಿದರೂ, ದಿಲ್ಲಿ ಪ್ರವೇಶಿಸುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲೂ, ದಿಲ್ಲಿ ಗಡಿಗಳಲ್ಲಿ ರೈತರ ಸಂಖ್ಯೆ ಏರುತ್ತಲೇ ಹೋಗುತ್ತಿದೆ, ರೈತರು ತಮ್ಮ ಬೇಡಿಕೆಗಳನ್ನು ಸಾಧಿಸಲು ಅಸಾಧಾರಣ ಸಂಕಲ್ಪವನ್ನು, ದೃಢನಿರ್ಧಾರವನ್ನು ಪ್ರದರ್ಶಿಸುತ್ತಿದ್ದಾರೆ. ದಿಲ್ಲಿಯ ಎಲ್ಲ ನೆರೆ ರಾಜ್ಯಗಳಿಂದಲೂ, ಮತ್ತು ದೂರದ ಮಹಾರಾಷ್ಟ್ರ, ಗುಜರಾತ, ಉತ್ತರಾಖಂಡ ಮುಂತಾದ ರಾಜ್ಯಗಳಿಂದಲೂ ಬಂದಿದ್ದಾರೆ. ಇತರ ಹಲವು ಸ್ಥಳಗಳಲ್ಲಿ, ಸುಮಾರಾಗಿ ಪ್ರತಿಯೊಂದು ರಾಜ್ಯದಿಂದಲೂ, ಪಾಟ್ನಾ ಮತ್ತು ರಾಯ್ಪುರದಿಂದ ಹಿಡಿದು ಗುಲ್ಬರ್ಗ ಮತ್ತು ತಂಜಾವೂರಿನ ವರೆಗೂ ರೈತಾಪಿಗಳು ನಿರಂತರ ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.

ಈ ರೈತ ಹೋರಾಟಕ್ಕೆ ಕಾರ್ಮಿಕ ವರ್ಗದಿಂದ ಮತ್ತು ಅದರ ಟ್ರೇಡ್ ಯೂನಿಯನ್ ಆಂದೋಲನದಿಂದ ಸಕ್ರಿಯ ಸೌಹಾರ್ದದ ಪ್ರಶಂಸನೀಯ ಬೆಂಬಲ ಸಿಗುತ್ತಿದೆ. ಸಮಾಜದ ಇತರೆಲ್ಲ ವಿಭಾಗಗಳು-ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು- ಕೂಡ ದೇಶದ ಅನ್ನದಾತರಾದ ರೈತರ ಬೆಂಬಲಕ್ಕೆ ಒಂದಾಗಿದ್ದಾರೆ.

ಈ ಪ್ರತಿಭಟನಾ ಕಾರ್ಯಾಚರಣೆಯ ಬೇಡಿಕೆಗಳು ಸಂಪೂರ್ಣವಾಗಿ ಉಚಿತವಾಗಿವೆ, ಯಾವುದೇ ವಿವೇಕಯುತ ಸರಕಾರ ಅವನ್ನು ಒಪ್ಪಿಕೊಳ್ಳುತ್ತಿತ್ತು. ಕೇಂದ್ರ ಸರಕಾರದಿಂದ ಕೇಳುತ್ತಿರುವುದು ಈಗ ಅವನ್ನು ರದ್ದು ಮಾಡಿ, ಮತ್ತು ರೈತರೊಂದಿಗೆ, ಕೃಷಿ ಸಮುದಾಯದೊಂದಿಗೆ, ಕಾರ್ಪೊರೇಟ್‌ಗಳೊಂದಿಗೆ, ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚೆ ನಡೆಸಿ, ಅದರ ಆಧಾರದಲ್ಲಿ ಹೊಸ ಕಾಯ್ದೆಗಳನ್ನು ರೂಪಿಸಿ ಸಂಸತ್ತಿನಲ್ಲಿ ಒಂದು ಸಂರಚನಾತ್ಮಕ ಚರ್ಚೆಗಳ ನಂತರ ಅದನ್ನು ತರಬೇಕು ಎಂದು. ಪ್ರಧಾನ ಮಂತ್ರಿ ಮೋದಿ ಇದನ್ನು ಮಾಡಲು ನಿರಾಕರಿಸುತ್ತಿದ್ದಾರೆ. ರೈತರ ಬೇಡಿಕೆಗಳನ್ನು ಒಪ್ಪಬೇಕಾಗುವ ಒತ್ತಡದಿಂದ ತಪ್ಪಿಸಿಕೊಳ್ಳಲು, ಕೇಂದ್ರ ಸರಕಾರ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದು ಮಾಡಿ, ಉತ್ತರದಾಯಿಯಾಗುವ ತನ್ನ ಹೊಣೆಗಾರಿಕೆಯಿಂದ ಕೈತೊಳೆದುಕೊಂಡು ಬಿಟ್ಟಿದೆ.

ತಪ್ಪುಮಾಹಿತಿ ಹರಡುವ ಪ್ರಚಾರ

ಈ ಮೈನಡುಗಿಸುವ ಚಳಿಗಾಳಿಯಲ್ಲಿ, ಅತ್ಯಂತ ಶಾಂತಿಯುತವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಯುತ್ತಿರುವ ಈ ಬೃಹತ್ ಐಕ್ಯ ಪ್ರತಿಭಟನೆಯ ಹೆಸರುಗೆಡಿಸಲು, ಬಿಜೆಪಿ ಮತ್ತು ಪ್ರಧಾನ ಮಂತ್ರಿಗಳ ನೇತೃತ್ವದ ಕೇಂದ್ರ ಸರಕಾರ ಒಂದು ದುಷ್ಪ್ರಚಾರದಲ್ಲಿ, ತಪ್ಪು ಮಾಹಿತಿಗಳನ್ನು ಹರಡುವಲ್ಲಿ ತೊಡಗಿದೆ. ಮೊದಲಿಗೆ, ಪ್ರತಿಭಟನಾಕಾರರು ಖಲಿಸ್ತಾನಿಗಳು, ಪಾಕಿಸ್ತಾನಿಗಳು, ಚೀನೀ ಏಜೆಂಟರು, ನಗರ ನಕ್ಸಲರು, ಟುಕ್ಡೆ ಟುಕ್ಡೆ ಗ್ಯಾಂಗ್ ಎಂದೆಲ್ಲಾ ಆರೋಪಿಸಲಾಯಿತು. ನಂತರ ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ ಎಂಬ ಮಿಥ್ಯಾಪವಾದ ಹೊರಿಸಲಾಯಿತು. ಆದರೂ ಈ ಪ್ರತಿಭಟನೆಯನ್ನು ದೇಶದ ಎಲ್ಲೆಡೆಗಳ 500ಕ್ಕೂ ಹೆಚ್ಚು ರೈತ ಸಂಘಟನೆಗಳ ವೇದಿಕೆಯಾದ ‘ಸಂಯುಕ್ತ ಕಿಸಾನ್ ಮೋರ್ಚಾ’ಸಂಘಟಿಸುತ್ತಿದೆ, ನಡೆಸುತ್ತಿದೆ, ಯಾವುದೇ ರಾಜಕೀಯ ಪಕ್ಷ ಇದರಲ್ಲಿ ಕೈಹಾಕಿಲ್ಲ ಎಂಬುದು ನಿಜಸಂಗತಿ.

ವ್ಯಂಗ್ಯಚಿತ್ರ ಕೃಪೆ: ಪಿ.ಮಹಮ್ಮದ್, ವಾರ್ತಾಭಾರತಿ

ಪ್ರಧಾನ ಮಂತ್ರಿಗಳೇ ಇಂತಹ ಪ್ರಚಾರಕ್ಕೆ ವೈಯಕ್ತಿಕವಾಗಿ ನೇತೃತ್ವ ಕೊಡುತ್ತಿದ್ದಾರೆ, ವಿಪಕ್ಷಗಳು ಎಲ್ಲವೂ ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಕರ್ಷಕ ಸುಧಾರಣೆಗಳ ಬಗ್ಗೆ ಹೇಳಿದ್ದವು, ಆದರೆ ಈಗ ವಿರೋಧಿಸುವುದಕ್ಕಾಗಿಯೆ ವಿರೋಧಿಸುತ್ತಿವೆ ಎಂಬ ಅಪಾದನೆಯನ್ನೂ ಮಾಡುತ್ತಿದ್ದಾರೆ. ಹೌದು, ಸಿಪಿಐ(ಎಂ) ಸದಾ ಕರ್ಷಕ ಸುಧಾರಣೆಗಳ ಬಗ್ಗೆ ಹೇಳುತ್ತ ಬಂದಿದೆ, ಇತರ ಹಲವು ಪಕ್ಷಗಳೂ ಹೇಳಿವೆ. ಆದರೆ ಯಾವ ತೆರನ ಸುಧಾರಣೆಗಳು? ಸಿಪಿಐ(ಎಂ) ಬಯಸುತ್ತಿರುವುದು ಭಾರತದ ಆಹಾರ ಭದ್ರತೆಯನ್ನು ಬಲಪಡಿಸಲಿಕ್ಕಾಗಿ, ನಮ್ಮ ಜನಗಳಿಗೆ ಉಣಬಡಿಸಲು, ಅವರ ಸರಿಯಾದ ಪೌಷ್ಟಿಕತೆ ಮತ್ತು ಆರೋಗ್ಯವನ್ನು ಖಾತ್ರಿಪಡಿಸಲು ಸಾಕಾಗುವಷ್ಟು ಧಾನ್ಯಗಳನ್ನು ಉತ್ಪಾದಿಸಲಿಕ್ಕಾಗಿ, ನಮ್ಮ ರೈತರಿಗೆ ಸಾಲುವಂತಹ ಪ್ರತಿಫಲವನ್ನು ಒದಗಿಸುವುದಕ್ಕಾಗಿ, ಅದರೊಂದಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಿ ಬಳಕೆದಾರರಿಗೆ ವಿವೇಕಯುತ ಬೆಲೆಗಳಲ್ಲಿ ಸಿಗುವಂತೆ ಖಾತ್ರಿಪಡಿಸಲಿಕ್ಕಾಗಿ ಹಾಗೂ ನಮ್ಮ ಕೃಷಿ ವಲಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಿಕ್ಕಾಗಿ.

ಆದರೆ, ಈ ಕಾಯ್ದೆಗಳಲ್ಲಿ ಅಡಕವಾಗಿರುವ ಪ್ರಧಾನಿ ಮೋದಿಯವರ ಸುಧಾರಣೆಗಳು, ಭಾರತೀಯ ಕೃಷಿಯನ್ನು, ಅದರ ಮಾರುಕಟ್ಟೆಗಳನ್ನು ಮತ್ತು ಅದರ ಉತ್ಪನ್ನಗಳನ್ನು ಬಹುರಾಷ್ಟ್ರೀಯ ಕೃಷಿ-ವ್ಯವಹಾರ ದೈತ್ಯರಿಗೆ, ವಿದೇಶಿ ಮತ್ತು ದೇಶೀ ಕಾರ್ಪೊರೇಟ್‌ಗಳಿಗೆ ವಹಿಸಿ ಕೊಡಲಿಕ್ಕಾಗಿ- ಈ ಮೂಲಕ ಇವು ಭಾರತದ ಆಹಾರ ಭದ್ರತೆಯನ್ನು ತೀವ್ರ ಗಂಡಾಂತರಕ್ಕೆ ಒಳಪಡಿಸುವಂತವು; ಆವಶ್ಯಕ ಸರಕುಗಳ ದೊಡ್ಡ ಪ್ರಮಾಣದ ಕಳ್ಳ ದಾಸ್ತಾನುಗಾಗಿ ಅವಕಾಶ ಕೊಡಲಿಕ್ಕಾಗಿ, ಆ ಮೂಲಕ ಕೃತಕ ಆಹಾರ ಕೊರತೆಗಳನ್ನು ಸೃಷ್ಟಿಸಿ ಬೃಹತ್ ಪ್ರಮಾಣದ ಬೆಲೆಯೇರಿಕೆಗಳಿಗೆ ದಾರಿ ಮಾಡಿಕೊಡುವಂತವು; ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮತ್ತು ಕೈಗೆಟಕುವ ಬೆಲೆಗಳಲ್ಲಿ ಆಹಾರಧಾನ್ಯಗಳನ್ನು ಒದಗಿಸುವುದನ್ನು ಕಳಚಿ ಹಾಕುವಂತವು. ಈ ಕಾಯ್ದೆಗಳು ಭಾರತೀಯ ಕೃಷಿಯನ್ನು ನಾಶಪಡಿಸುತ್ತವೆ ಮತ್ತು ನಮ್ಮ ಜನಗಳ ಮೇಲೆ ಹೆಚ್ಚಿನ ಸಂಕಟಗಳನ್ನು ಹೇರುತ್ತವೆ. ಆದ್ದರಿಂದಲೇ ಹೆಚ್ಚಿನ ಜಾತ್ಯತೀತ ಪಕ್ಷಗಳು ಈ ಮಸೂದೆಗಳನ್ನು ವಿರೋಧಿಸಿವೆ, ರೈತರ ಪ್ರತಿಭಟನೆಗಳಿಗೆ ಬೆಂಬಲ ಮತ್ತು ಸೌಹಾರ್ದ ವ್ಯಕ್ತಪಡಿಸಿವೆ ಹಾಗೂ ಸರಕಾರ ಈ ಬೇಡಿಕೆಗಳನ್ನು ಸ್ವೀಕರಿಸಿ, ಭಾರತೀಯ ಜನತೆಗೆ ಸಮೃದ್ಧಿ ಮತ್ತು ಕಲ್ಯಾಣವನ್ನು ಒದಗಿಸುವ ಸುಧಾರಣೆಗಳನ್ನು ತರಬೇಕೇ ಹೊರತು, ವಿದೇಶಿ ಮತ್ತು ದೇಶೀ ಕಾರ್ಪೊರೇಟ್‌ಗಳಿಗೆ ಸೂಪರ್ ಲಾಭಗಳನ್ನು ಕೊಡಿಸುವ ಸುಧಾರಣೆಗಳನ್ನಲ್ಲ ಎಂದು ಹೇಳುತ್ತಿವೆ.

ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲಾಗುತ್ತಿದೆಯೇ?

ಪ್ರಧಾನಿ ಮೋದಿ ತಮ್ಮ ಸರಕಾರ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ)ಗಳನ್ನು ಕುರಿತ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುತ್ತ ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ಸತ್ಯ ಸಂಗತಿಯೆಂದರೆ, ಸ್ವಾಮಿನಾಥನ್ ಆಯೋಗ ಸಿ2+50% ಸೂತ್ರವನ್ನು ಶಿಫಾರಸು ಮಾಡಿದ್ದರೆ, ಸರಕಾರ ಹೆಚ್ಚೆಂದರೆ ಎ2+50% ಸೂತ್ರದ ಪ್ರಕಾರ ಕೊಡುತ್ತಿದೆಯಷ್ಟೇ. ಇವೆರಡರ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಎ2 ವಾಸ್ತವವಾಗಿ ಆಗಿರುವ ಖರ್ಚು, ಸಿ2 ನಲ್ಲಿ ಸ್ವಂತ ಜಮೀನಿನ ಬಾಡಿಗೆ ಮೌಲ್ಯ ಮತ್ತು ಸ್ವಂತ ನಿಗದಿತ ಬಂಡವಾಳ ಆಸ್ತಿಗಳ ಮೌಲ್ಯದ ಮೇಲೆ ಬಡ್ಡಿಯೂ ಸೇರಿದೆ. ಹೀಗೆ ಕೇಂದ್ರ ಸರಕಾರ ಸ್ವಾಮಿನಾಥನ್ ಆಯೋಗದ ಬೇರೆಲ್ಲ ಸಲಹೆಗಳನ್ನು ಉಪೇಕ್ಷಿಸಿದೆಯಷ್ಟೇ ಅಲ್ಲ, ಎಂಎಸ್‌ಪಿ ಕುರಿತ ಶಿಫಾರಸಿಗೂ ನಕಾರ ತೋರಿದೆ.

ಸಿಪಿಐ(ಎಂ)ನ 2019ರ ಚುನಾವಣಾ ಪ್ರಣಾಳಿಕೆಯ ‘ಕೃಷಿ ಸುಧಾರಣೆಗಳು’ವಿಭಾಗದ ಮೊದಲನೆಯ ಅಂಶವೆಂದರೆ ಎಲ್ಲ ರೈತರಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಕಾನೂನಾತ್ಮಕ ಹಕ್ಕು ಇರಬೇಕೆಂಬ ಬೇಡಿಕೆ. ಕನಿಷ್ಟ 2017ರಿಂದ, ಇದನ್ನು ಸಿಪಿಐ(ಎಂ) ಸದಸ್ಯರು ಸಂಸತ್ತಿನಲ್ಲಿ ಎತ್ತುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಕೇಂದ್ರ ಸರಕಾರ ಇಂತಹ ಒಂದು ಕಾಯ್ದೆಯನ್ನು ತಂದಿಲ್ಲ. ಅಲ್ಲದೆ, ಎಂಎಸ್‌ಪಿ ಎಲ್ಲ ಬೆಳೆಗಳನ್ನು ಒಳಗೊಂಡಿರಬೇಕು. ಈಗ, ಅದು 6ಶೇ. ರೈತರಿಗೆ ಮಾತ್ರ ಸಿಗುವಂತಿದೆ. ಇದಲ್ಲದೆ, ಒಂದು ದಕ್ಷ ಖರೀದಿ ವ್ಯವಸ್ಥೆ ಇಲ್ಲದಿದ್ದರೆ ಎಂಎಸ್‌ಪಿ ಅರ್ಥಹೀನವಾಗುತ್ತದೆ. ಆದ್ದರಿಂದ ಸಾರ್ವಜನಿಕ ಮತ್ತು ಖಾಸಗಿ, ಈ ಎರಡೂ ರೀತಿಗಳ ಖರೀದಿ ವ್ಯವಸ್ಥೆಯನ್ನು ದೇಶಾದ್ಯಂತ ಸಾರ್ವತ್ರಿಕಗೊಳಿಸಬೇಕು.

ವಿಪಕ್ಷಗಳ ರಾಜ್ಯ ಸರಕಾರಗಳ ಮೇಲೆ ಗುರಿ: ಪ್ರಧಾನಿ ಮೋದಿ ವಿಪಕ್ಷಗಳ ರಾಜ್ಯ ಸರಕಾರಗಳ ಮೇಲೆ, ನಿರ್ದಿಷ್ಟವಾಗಿ ಕೇರಳದ ಎಲ್‌ಡಿಎಫ್ ಸರಕಾರದ ಮೇಲೆ, ಸಂಪೂರ್ಣವಾಗಿ ತಪ್ಪು ಮಾಹಿತಿಯ ದಾಳಿಗಳನ್ನು ಮಾಡುತ್ತಿದ್ದಾರೆ, ಅವು ರೈತರ ಹಿತಗಳನ್ನು ನೋಡಿಕೊಳ್ಳುತ್ತಿಲ್ಲ, ಆದರೂ ಕೇಂದ್ರೀಯ ಕಾಯ್ದೆಗಳನ್ನು ವಿರೋಧಿಸುತ್ತಿವೆ ಎಂದು ಹೇಳುತ್ತಿದ್ದಾರೆ. ಕೇರಳ ಕುರಿತಂತೆ ಪ್ರಧಾನಿಗಳ ಸುಳ್ಳುಗಳನ್ನು, ಅಖಿಲ ಭಾರತ ಕಿಸಾನ್ ಸಭಾ ಬರೇ ಅಪಪ್ರಚಾರ ಎಂಬುದನ್ನು ಬಯಲಿಗೆ ತಂದಿದೆ. ಕೇರಳ ಭತ್ತ, ತರಕಾರಿಗಳು, ಬೇಳೆಕಾಳುಗಳು, ಬಾಳೆ ಮುಂತಾದ ಬೆಳೆಗಳಿಗೆ ಉತ್ತಮ ಸಬ್ಸಿಡಿಗಳನ್ನು ಒದಗಿಸುತ್ತಿದೆ. ಕೇರಳದ 82ಶೇ. ಸಾಗುವಳಿ ಪ್ರದೇಶ ವಾಣಿಜ್ಯ ಬೆಳೆಗಳನ್ನು ಬೆಳೆಯುವಂತದ್ದು. ಈ ಬೆಳೆಗಳ ಬೆಲೆಗಳನ್ನು ಅದಕ್ಕೆ ಸಂಬಂಧಪಟ್ಟ ಸರಕು ಮಂಡಳಿಗಳು ರಾಜ್ಯ ಸರಕಾರದ ಅಡಿಯಲ್ಲಿ ಹರಾಜು ವ್ಯವಸ್ಥೆಯೊಂದಿಗೆ ಖಾತ್ರಿಪಡಿಸುತ್ತವೆ.

ಗಮನ ತಿರುಗಿಸಲು ಕೋಮುವಾದಿ ಧ್ರುವೀಕರಣ: ಈ ಬೃಹತ್ ಶಾಂತಿಯುತ ಪ್ರತಿಭಟನೆಗಳಿಂದ ದೇಶದ ಗಮನವನ್ನು ಬೇರೆಡೆಗೆ ತಿರುಗಿಸಲು, ಬಿಜೆಪಿ, ತನ್ನ ರಾಜ್ಯ ಸರಕಾರಗಳ ಮೂಲಕ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಸರಕಾರಗಳು ತಂದಿರುವ ‘ಲವ್ ಜಿಹಾದ್’ ಕಾಯ್ದೆಗಳು ಮತ್ತು ‘ಗೋರಕ್ಷಣೆ’ ಕಾಯ್ದೆಗಳನ್ನು ಕಿರುಕುಳ ಕೊಡಲು, ಬೆದರಿಸಲು ಮತ್ತು ಕೋಮುವಾದಿ ಭಾವೋದ್ರೇಕಗಳನ್ನು ಬಡಿದೆಬ್ಬಿಸಲು ಬಳಸಲಾಗುತ್ತಿದೆ. ಮಧ್ಯಪ್ರದೇಶದಲ್ಲಿ , ಉಜ್ಜೈನ್, ಇಂದೋರ್ ಮತ್ತಿತರ ಹಲವು ಸ್ಥಳಗಳಲ್ಲಿ ಕೋಮುವಾದಿ ಸೆಳೆತಗಳನ್ನು ಉದ್ರೇಕಿಸಲಾಗುತ್ತಿದೆ. ಇವು ದೇಶದಲ್ಲಿ ವಿನಾಶಕಾರಿಯಾದ ಅಸ್ಥಿರಕಾರೀ ಪರಿಣಾಮಗಳನ್ನು ಉಂಟು ಮಾಡುತ್ತವೆ.

ನವ-ಉದಾರವಾದದ ಉಗ್ರ ಅನುಸರಣೆ: ಜಾಗತಿಕ ಅರ್ಥವ್ಯವಸ್ಥೆ ಹಿಂಜರಿತದ ಸ್ಥಿತಿಯಲ್ಲಿ ಮುಂದುವರೆಯುತ್ತಿದ್ದು ನವ-ಉದಾರವಾದಿ ಸುಧಾರಣೆಯ ದಿಕ್ಕು ಈ ಬಿಕ್ಕಟ್ಟನ್ನು ಮೀರಿ ನಿಲ್ಲಲು ಯಾವುದೇ ಪರಿಹಾರವನ್ನು ಕೊಡಲಾಗದಂತಹ ಸಂಪೂರ್ಣ ದಿವಾಳಿ ಸ್ಥಿತಿಯಲ್ಲಿದೆ ಎಂಬುದು ಬಯಲಾಗಿದೆ. ಇದರಿಂದಾಗಿ, ಬಂಡವಾಳಶಾಹಿಯ ಅಡಿಯಲ್ಲಿ ಗರಿಷ್ಟ ಲಾಭಕ್ಕಾಗಿ ಕೊಳ್ಳೆಹೊಡೆಯುವ ಪ್ರವೃತ್ತಿ ತೀವ್ರಗೊಳ್ಳುತ್ತದೆ. ಇಂತಹ ಕಾರ್ಪೊರೇಟ್‌ಗಳಿಗೆ ಗರಿಷ್ಟ ಲಾಭಗಳಿಕೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಮೋದಿ ಸರಕಾರ ನವ-ಉದಾರವಾದಿ ಸುಧಾರಣೆಯ ದಿಕ್ಕಿನಲ್ಲಿ ಉಗ್ರ ರೀತಿಯಲ್ಲಿ ಸಾಗುತ್ತಿದೆ. ಇದಕ್ಕೆ ಆರ್ಥಿಕ ಚಟುವಟಿಕೆಯ ಹೊಸ-ಹೊಸ ಕ್ಷೇತ್ರಗಳನ್ನು ಮತ್ತು ಹೊಸ-ಹೊಸ ಮಾರುಕಟ್ಟೆಗಳನ್ನು ವಹಿಸಿಕೊಡಬೇಕಾಗುತ್ತದೆ. ಈ ಗುರಿಯನ್ನು ಸಾಧಿಸಲಿಕ್ಕಾಗಿಯೇ ಈ ಕೃಷಿ ಕಾಯ್ದೆಗಳ ಮೂಲಕ ಕೃಷಿಯ ಮೇಲೆ ವಿದೇಶಿ ಮತ್ತು ದೇಶೀ ಕಾರ್ಪೊರೇಟ್‌ಗಳಿಗೆ ಈ ರೀತಿಯ ಸಂಪೂರ್ಣ ಹತೋಟಿಯನ್ನು ಕಲ್ಪಿಸಲಾಗುತ್ತಿದೆ.

ಹೀಗೆ ಬಿಜೆಪಿ ಕೇಂದ್ರ ಸರಕಾರ ಭಾರತದಲ್ಲಿ ಆಳುವ ವರ್ಗಗಳ ಕ್ರೋಡೀಕರಣದ ಪ್ರಧಾನ ದಲ್ಲಾಳಿಯಾಗಿ ಬಿಟ್ಟಿದೆ, ಅವರ ವರ್ಗ ಹಿತಗಳನ್ನು ಈಡೇರಿಸುವ ಸುಧಾರಣೆಗಳನ್ನು ಜಾರಿಗೊಳಿಸುತ್ತಿದೆ.

ವರ್ಗ ಇಂಗಿತಗಳು

ಜಾಗತಿಕ ಬಿಕ್ಕಟ್ಟಲ್ಲದೆ, ಭಾರತದ ಅರ್ಥವ್ಯವಸ್ಥೆ ನೋಟುರದ್ಧತಿಯಿಂದಾಗಿಯೂ ಮತ್ತು ಜಿಎಸ್‌ಟಿ ಜಾರಿಯಿಂದಾಗಿಯೂ ಅಧೋಗತಿಗೆ ಇಳಿಯಲಾರಂಭಿಸಿತ್ತು. ಇದರಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಜಿಡಿಪಿ ಬೆಳವಣಿಗೆ ದರ ಸತತವಾಗಿ ಇಳಿಯುತ್ತಿದೆ. ಭಾರತದ ಅರ್ಥವ್ಯವಸ್ಥೆಯ ಹಿಂಜರಿತ, ಕೊವಿಡ್ ಮಹಾಸೋಂಕಿನ ಪರಿಣಾಮ ಮತ್ತು ಅಯೋಜಿತ ಹಠಾತ್ ಲಾಕ್‌ಡೌನಿನ ಹಿನ್ನೆಲೆಯಲಿ, ಭಾರತದ ಆಳುವ ವರ್ಗಗಳು ತಮ್ಮ ಲಾಭಗಳ ಮಟ್ಟವನ್ನು ಉಳಿಸಿಕೊಳ್ಳುವ ಮತ್ತು ಗರಿಷ್ಟಗೊಳಿಸಿಕೊಳ್ಳುವ ದಾರಿಗಳ ಹುಡುಕಾಟದಲ್ಲಿದ್ದವು.

ಭಾರತದಲ್ಲಿನ ದೊಡ್ಡ ಬಂಡವಳಿಗರ ನೇತೃತ್ವದ ಬಂಡವಾಳಶಾಹಿ-ಭೂಮಾಲಕ ವರ್ಗಗಳು, ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ದಿಕ್ಕನ್ನು ಬಳಸಿಕೊಂಡು ತಮ್ಮ ಲಾಭಗಳನ್ನು ಗರಿಷ್ಟ ಪ್ರಮಾಣಕ್ಕೆ ಏರಿಸುವ ತಮ್ಮ ಪ್ರಯತ್ನಗಳನ್ನು ಮತ್ತಷ್ಟು ಕ್ರೋಡೀಕರಿಸಿಕೊಂಡು ಬರುತ್ತಿವೆ. ರಾಷ್ಟೀಯ ಆಸ್ತಿಗಳ ಲೂಟಿ, ಸಾರ್ವಜನಿಕ ವಲಯದ ವ್ಯಾಪಕ ಖಾಸಗೀಕರಣ, ಗಣಿಗಳು ಮುಂತಾದ ಎಲ್ಲ ಸಾರ್ವಜನಿಕ ಸಂಪತ್ತುಗಳನ್ನು ಮತ್ತು ಸಾರ್ವಜನಿಕ ಸೇವೆಗಳನ್ನು ಖಾಸಗೀಕರಿಸುವುದು, ಜತೆಗೆ ಕಾರ್ಮಿಕ ಹಕ್ಕುಗಳ ನಿರ್ಮೂಲನೆ ಈ ಪ್ರಕ್ರಿಯೆಯ ಭಾಗಗಳಾಗಿವೆ.

ರೈತಾಪಿಗಳ ಈಗ ನಡೆಯುತ್ತಿರುವ ಚಾರಿತ್ರಿಕ ಹೋರಾಟ ಭಾರತೀಯ ಆಳುವ ವರ್ಗಗಳ ಗರಿಷ್ಟ ಲಾಭಗಳಿಗಾಗಿ ಕೃಷಿಯ ಮೇಲೆ ಕಾರ್ಪೊರೇಟ್ ಹತೋಟಿಯನ್ನು ಪಡೆಯುವ ಈ ವರ್ಗಗಳ ನೇತೃತ್ವದ ಪ್ರಯತ್ನಗಳನ್ನು ತೀಕ್ಷ್ಣ ರೀತಿಯಲ್ಲಿ ಬೆಳಕಿಗೆ ತಂದಿದೆ.

ವ್ಯಂಗ್ಯಚಿತ್ರ ಕೃಪೆ: ಸುಭಾನಿ, ಡೆಕ್ಕನ್‍ ಕ್ರಾನಿಕಲ್

ಹೀಗೆ ಒಂದೆಡೆಯಲ್ಲಿ ಅಂತರಾಷ್ಟ್ರೀಯ ಹಣಕಾಸು ಬಂಡವಾಳದೊಂದಿಗೆ ಕೈಜೋಡಿಸಿರುವ ದೊಡ್ಡ ಬಂಡವಳಿಗರು ಮತ್ತು ಇನ್ನೊಂದೆಡೆಯಲ್ಲಿ ಶ್ರೀಮಂತ ರೈತರು ಮತ್ತು ಭೂಮಾಲಕರೂ ಸೇರಿದಂತೆ ಸಮಸ್ತ ರೈತಾಪಿಗಳ ನಡುವೆ ಒಂದು ಹೊಸ ವರ್ಗ ಸಂಘರ್ಷ ಎದ್ದು ಬರುತ್ತಿದೆ.

ಎರಡನೆಯದಾಗಿ, ಆಳುವ ವರ್ಗಭಾಗೀದಾರರ ನಡುವೆಯೂ, ಒಂದೆಡೆಯಲ್ಲಿ ದೊಡ್ಡ ಬಂಡವಳಿಗರು, ಇನ್ನೊಂದೆಡೆಯಲ್ಲಿ ಇತರ ಬಂಡವಳಿಗರು, ವಿಶೇಷವಾಗಿ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳ ವಲಯಕ್ಕೆ ಸೇರಿದವರ ನಡುವೆಯೂ ಸಂಘರ್ಷಗಳು ಮೂಡಿ ಬರುತ್ತಿವೆ.

ಮೂರನೆಯದಾಗಿ, ಬಿಜೆಪಿಯ ಸಂಪೂರ್ಣ ರಾಜಕೀಯ ಆಧಿಪತ್ಯವನ್ನು ಸ್ಥಾಪಿಸುವುದಕ್ಕಾಗಿ, ನಮ್ಮ ಸಂವಿಧಾನದ ಒಕ್ಕೂಟ ರಚನೆಯನ್ನು ನಾಶಪಡಿಸಿ ಅದರ ಜಾಗದಲ್ಲಿ ಒಂದು ಏಕಘಟಕ ಪ್ರಭುತ್ವ ವ್ಯವಸ್ಥೆಯನ್ನು ತರುವ ಬಿಜೆಪಿಯ ಧಾವಂತ ಕೇಂದ್ರ ಸರಕಾರ ಮತ್ತು ಚುನಾಯಿತ ರಾಜ್ಯ ಸರಕಾರಗಳ ನಡುವೆ ಸಂಘರ್ಷಗಳನ್ನು ಉಂಟು ಮಾಡುತ್ತಿದೆ. ರಾಜ್ಯ ಸರಕಾರಗಳನ್ನು ನಡೆಸುತ್ತಿರುವ ಕೆಲವು ಪ್ರಾದೇಶಿಕ ಪಕ್ಷಗಳು, ಸಂಸತ್ತಿನಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದವುಗಳು ಮತ್ತು ಹಿಂದೆ-ಮುಂದೆ ನೋಡುತ್ತ ಸಾಮಾನ್ಯವಾಗಿ ಸಂಸತ್ತಿನಲ್ಲಿ ಬಿಜೆಪಿಗೆ ಬೆಂಬಲ ಕೊಡುವಲ್ಲಿ ತಟಸ್ಥವಾಗಿದ್ದವುಗಳು, ಈಗ ಬಿಜೆಪಿಯ ಈ ಆಧಿಪತ್ಯದ ಧಾವಂತದಿಂದಾಗಿ ಅದನ್ನು ವಿರೋಧಿಸಲೇ ಬೇಕಾಗಿ ಬಂದಿದೆ, ವಿಶೇಷವಾಗಿ ಈಗ ನಡೆಯುತ್ತಿರುವ ರೈತ ಹೋರಾಟದ ವೇಳೆಯಲ್ಲಿ.

ಆಳುವ ವರ್ಗ-ಭಾಗೀದಾರರ ನಡುವೆ ಇಂತಹ ಸಂಘರ್ಷಗಳು ಮೂಡಿ ಬರುತ್ತಿರುವುದು, ಅವನ್ನು ಶೋಷಣೆಗೊಳಗಾಗಿರುವ ವರ್ಗಗಳು, ನಿರ್ದಿಷ್ಟವಾಗಿ ಕಾರ್ಮಿಕ ವರ್ಗ, ಬಡ ರೈತಾಪಿಗಳು ಮತ್ತು ಕೃಷಿ ಕೂಲಿಕಾರರು, ಸಂಪೂರ್ಣವಾಗಿ ಬಳಸಿಕೊಳ್ಳಬಹುದಾದ ಸಾಧ್ಯತೆಗಳನ್ನು ಸೃಷ್ಟಿಸಿದೆ. ಇದನ್ನು ಬಂಡವಾಳಶಾಹಿ-ಭೂಮಾಲಕ ವರ್ಗ ವ್ಯವಸ್ಥೆಯ ವಿರುದ್ಧ ವರ್ಗ ಸಮರಗಳನ್ನು ತೀವ್ರಗೊಳಿಸಲು ಬಳಸಿಕೊಳ್ಳಬೇಕು.

ವರ್ಗ ಹೋರಾಟವನ್ನು ಮುಂದೊಯ್ಯುವ ಇಂತಹ ಸಾಧ್ಯತೆಗಳು ಕಾರ್ಮಿಕ ಆಂದೋಲನ, ರೈತಾಪಿಗಳು ಮತ್ತು ಕೃಷಿ ಕೂಲಿಕಾರರ ನಡುವೆ ಹೆಚ್ಚುತ್ತಿರುವ ಸಂಯೋಜನೆಯಿಂದಾಗಿ ಮೂಡಿ ಬಂದಿವೆ. ಇಂತಹ ಬೆಳವಣಿಗೆಗಳು ಬಹಳ ಹಿಂದೆಯೇ ಆರಂಭವಾಗಿದ್ದವು, 2018ರಿಂದೀಚೆಗೆ ವಿಭಾಗಗಳ ಜಂಟಿ ಚಳುವಳಿಗಳ ಮೂಲಕ ಗಮನಾರ್ಹ ಮುನ್ನಡೆ ಪಡೆದಿದ್ದವು. ಕೇಂದ್ರೀಯ ಕಾರ್ಮಿಕ ಸಂಘಟನೆಗಳ ನವಂಬರ್ 26ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಕರೆ ರೈತ ಸಂಘಟನೆಗಳ ನವಂಬರ್ 26-27ರ ‘ದಿಲ್ಲಿ ಚಲೋ’ ಕರೆಯೊಂದಿಗೆ ಮೇಳವಿಸಿತು. ಹೋರಾಟದಲ್ಲಿ ಬೆಳೆಯುತ್ತಿರುವ ಐಕ್ಯತೆ, ಖಂಡಿತವಾಗಿಯೂ ಮುಂಬರುವ ಅವಧಿಯಲ್ಲಿ ಇನ್ನಷ್ಟು ಗಟ್ಟಿಗೊಳ್ಳುತ್ತದೆ.

ಇದೇ ವೇಳೆಯಲ್ಲಿ, ಆಳುವ ವರ್ಗಗಳು ಕೋಮುಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದರೊಂದಿಗೆ ಮತ್ತು ಭಾರತೀಯ ಸಂವಿಧಾನವನ್ನು ಶಿಥಿಲಗೊಳಿಸುವುದರೊಂದಿಗೆ ನಡೆಸುತ್ತಿರುವ ತೀವ್ರ ವರ್ಗದಾಳಿಯ ಈ ಅವಧಿ ಪ್ರಸ್ತುತ ಬಿಜೆಪಿ ಕೇಂದ್ರ ಸರಕಾರದ ಧೋರಣೆಗಳ ವಿರುದ್ಧ ಜನಗಳ ಹೋರಾಟಗಳು ಬೆಳೆಯಲು ಆಧಾರ ಕಲ್ಪಿಸಿಕೊಡುತ್ತಿದೆ. ಇಂತಹ ಜಂಟಿ ಐಕ್ಯ ಹೋರಾಟಗಳು ಮತ್ತು ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ದಲಿತರು, ಬುಡಕಟ್ಟು ಜನಗಳು ಮುಂತಾದ ವಿವಿಧ ಜನವಿಭಾಗಗಳ ಸ್ವತಂತ್ರ ಬೇಡಿಕೆಗಳ ಮೇಲಿನ ಹೋರಾಟಗಳು ಮುಂಬರುವ ಅವಧಿಯಲ್ಲಿ ಖಂಡಿತವಾಗಿಯೂ ತೀವ್ರಗೊಳ್ಳುತ್ತವೆ. ಇವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಭಾರತೀಯ ಜನತೆಯ ಮೇಲೆ ವರ್ಗದಾಳಿಯನ್ನು ತೀವ್ರಗೊಳಿಸುವ ಬಿಜೆಪಿಯ ಪ್ರಯತ್ನಗಳಿಗೆ ಶೋಷಿತ ವರ್ಗಗಳ ಮತ್ತು ನಮ್ಮ ಜನವಿಭಾಗಗಳ ಪ್ರತಿ-ದಾಳಿಯ ಮೂಲಕ ಸವಾಲು ಹಾಕಬೇಕು, ಅವನ್ನು ಎದುರಿಸಬೇಕು.

Donate Janashakthi Media

Leave a Reply

Your email address will not be published. Required fields are marked *