ಕೇರಳದಲ್ಲಿ ಎ.ಪಿ.ಎಂ.ಸಿ.ಗಳಿಲ್ಲ, ಮಂಡಿಗಳಿಲ್ಲ, ಆದರೂ ಅಲ್ಲಿ ಪ್ರತಿಭಟನೆಗಳು ಏಕಿಲ್ಲ? ಈ ಪ್ರಶ್ನೆಯನ್ನು ಸ್ವತಃ ದೇಶದ ಪ್ರಧಾನ ಮಂತ್ರಿಗಳೇ ಕೇಳುತ್ತಿದ್ದಾರೆ!
ಇದಕ್ಕೆ ಪ್ರತಿಕ್ರಿಯಿಸುತ್ತ ಅಖಿಲ ಭಾರತ ಕಿಸಾನ್ ಸಭಾ, ಇದು ಪ್ರಧಾನ ಮಂತ್ರಿಗಳಿಗೆ ದೇಶದ ಒಂದು ಪ್ರಮುಖ ರಾಜ್ಯವಾದ ಕೇರಳದ ಕೃಷಿಯ ಬಗ್ಗೆ ಇರುವ ಅಜ್ಞಾನವನ್ನು ಬಯಲುಗೊಳಿಸಿದೆ ಎಂದು ಹೇಳಿದೆ. ಒಂದೋ ಅವರ ಸಲಹಾಗಾರರು ಅವರ ದಾರಿತಪ್ಪಿಸುತ್ತಿದ್ದಾರೆ, ಅಥವ ಅವರೇ ಉದ್ದೇಶಪೂರ್ವಕವಾಗಿಯೇ ಜನಗಳನ್ನು ದಾರಿ ತಪ್ಪಿಸಲು ಅಸತ್ಯದ ಮೊರೆ ಹೊಕ್ಕಿದ್ದಾರೆ ಎಂದು ಅದು ಹೇಳಿದೆ.
ಕೇರಳದ ಕೃಷಿ ಸನ್ನಿವೇಶದ ವೀಶೆಷತೆಯೇನು, ಅದರಿಂದಾಗಿ ರೈತರಿಗೆ ಫಲದಾಯಕ ಬೆಲೆ ಸಿಗುವಂತೆ ಮಾಡಲು ಎಲ್.ಡಿ.ಎಫ್. ಸರಕಾರಗಳು ಕೈಗೊಂಡಿರುವ ಕ್ರಮಗಳೇನು ಎನ್ನುವ ಬಗ್ಗೆ ಈ ವೆಬ್ ತಾಣದಲ್ಲಿ ಡಿಸೆಂಬರ್ 22 ರಂದು ಪ್ರಕಟವಾಗಿರುವ ‘ಕೃಷಿ ವಲಯದಲ್ಲಿ ಕೇರಳದ ಪರ್ಯಾಯ’ ಲೇಖನವನ್ನು ನೋಡಿ:
https://janashakthimedia.com/krishi-valayadalli-kerala-paryaya/
ಕೇರಳ , ಮತ್ತು ಮಣಿಪುರ, ಜಮ್ಮು-ಕಾಶ್ಮೀರ ಮುಂತಾದ ಇತರ ಕೆಲವು ರಾಜ್ಯಗಳೂ ಸಹ ಎ.ಪಿ.ಎಂ.ಸಿ. ಕಾಯ್ದೆಗಳನ್ನು ಹೊಂದಿಲ್ಲ. ಇದಕ್ಕೆ ಕಾರಣ ಅಲ್ಲಿನ ವಿಶಿಷ್ಟ ಕೃಷಿ ಸನ್ನಿವೇಶಗಳು.
ಕೇರಳದಲ್ಲಿ ಕೃಷಿ ಬಹುಪಾಲು ವಾಣಿಜ್ಯ ಬೆಳೆಗಳ ಸುತ್ತವೇ ಇದೆ. ರಾಜ್ಯದ 82%ದಷ್ಟು ವ್ಯವಸಾಯ ತೆಂಗು, ಗೇರು, ಏಲಕ್ಕಿ, ಚಹಾ, ಕಾಫಿ, ರಬ್ಬರ್ ಮುಂತಾದ ಪ್ಲಾಂಟೇಶನ್‍ಗಳು ಅಥವ ತೋಟಗಳಲ್ಲಿ ನಡೆಯುತ್ತಿದೆ. ಈ ಎಲ್ಲ ಬೆಳೆಗಳಿಗೆ ಅವುಗಳದ್ದೇ ಆದ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಗಳಿವೆ. ಉದಾ: ಕಾಫಿ ಬೋರ್ಡ್ ಅಥವ ಮಂಡಳಿ, ಚಹಾಮಂಡಳಿ, ಮಸಾಲೆ ಸಾಮಗ್ರಿಗಳ ಮಂಡಳಿ, ರಬ್ಬರ್ ಮಂಡಳಿ , ತೆಂಗು ಅಭಿವೃದ್ಧಿ ಮಂಡಳಿ ಇತ್ಯಾದಿ ಅಸ್ತಿತ್ವದಲ್ಲಿದ್ದು, ಇವುಗಳ ಖರೀದಿಗೆ ಹರಾಜು ವ್ಯವಸ್ಥೆ ಜಾರಿಯಲ್ಲಿದೆ. ಈ ಮಂಡಳಿಗಳು ಕೇಂದ್ರ ಸರಕಾರದ ವಾಣಿಜ್ಯ ಮಂತ್ರಾಲಯದ ಅಡಿಯಲ್ಲಿ ಕೆಲಸ ಮಾಡುತ್ತವೆ ಎಂಬುದನ್ನೂ ಗಮನಿಸಬೇಕು. ಇವುಗಳ ಮಾರುಕಟ್ಟೆ ಬೆಲೆಗಳು ವಿಶ್ವ ಮಾರುಕಟ್ಟೆಯಲ್ಲಿನ ಬೆಲೆಗಳನ್ನು ಅವಲಂಬಿಸಿವೆ. ಕೇಂದ್ರ ಸರಕಾರ ಇವುಗಳಿಗೆ ಕನಿಷ್ಟ ಬೆಂಬಲ ಬೆಲೆಗಳನ್ನು ಪ್ರಕಟಿಸುವುದಿಲ್ಲ.
ದೇಶಕ್ಕಾಗಿ ಅಪಾರ ವಿದೇಶ ವಿನಿಮಯ ಗಳಿಸುವ ಈ ಬೆಳೆಗಳಿಗೆ ಆರ್ಥಿಕ ಉದಾರೀಕರಣದ ನಂತರ ಕೇಂದ್ರದಲ್ಲಿ ಬಂದ ಸರಕಾರಗಳಿಂದ ಬಹಳ ತೊಂದರೆಗಳಾಗಿವೆ, ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2006ರಲ್ಲಿ ಎಲ್.ಡಿ.ಎಫ್. ಅಧಿಕಾರಕ್ಕೆ ಬಂದಾಗ ರಚಿಸಿದ ವಿಶಿಷ್ಟ ಸ್ವರೂಪದ ‘ಸಾಲ ಪರಿಹಾರ ಆಯೋಗ ‘ ವ್ಯವಸ್ಥೆ ಯಿಂದಾಗಿ ಇದಕ್ಕೆ ತಡೆ ಬಿದ್ದಿದೆ.
ಈ ನವ-ಉದಾರವಾದಿ ದಾಳಿ ಬೇರೆಲ್ಲ ಕ್ಷೇತ್ರಗಳಂತೆ ಮೋದಿ ಸರಕಾರ ಬಂದಮೇಲೆ ಮತ್ತಷ್ಟು ಉಲ್ಲಬಗೊಂಡಿದೆ. ಇದಕ್ಕೆ ಆಗಾಗ ಎಲ್.ಡಿ.ಎಫ್. ಸರಕಾರವೇ ಅಲ್ಲಿನ ರೈತರ ಪರವಾಗಿ ಪ್ರತಿಭಟನೆಗಳನ್ನು ವ್ಯಕ್ತ ಮಾಡಿರುವುದು ಪ್ರಧಾನಿಗಳಿಗೆ ನೆನಪಿಲ್ಲವೇನೋ!
ಇನ್ನು ಉಳಿದ ಬೆಳೆಗಳಿಗೆ ಭತ್ತ, ಹಣ್ಣು, ತರಕಾರಿ ಬೆಳಗಾರರಿಗೆ ನಿರ್ದಿಷ್ಟ ಸಗಟು ಮತ್ತು ಚಿಲ್ಲರೆ ಮಾರಾಟ ವ್ಯವಸ್ಥೆಗಳು ಇವೆ, ಎಲ್.ಡಿ.ಎಫ್. ಸರಕಾರ ಸಹಕಾರಿ ಸಂಘಗಳು, ಪಂಚಾಯ್ತುಗಳು ಇತ್ಯಾದಿಗಳ ಮೂಲಕ ರೈತರ ನೆರವಿಗೆ ಧಾವಿಸುತ್ತದೆ. ಎಲ್.ಡಿ.ಎಪ್. ಸರಕಾರದ ಕ್ರಮಗಳನ್ನು ಗಮನಿಸಿ:
ಕೇರಳದಲ್ಲಿ ಭತ್ತವನ್ನು ಕ್ವಿಂಟಾಲಿಗೆ ರೂ.2748 ದರದಲ್ಲಿ ಸರಕಾರ ಖರೀದಿಸುತ್ತದೆ, ಕೇಂದ್ರ ಸರಕಾರ ಭತ್ತಕ್ಕೆ ಪ್ರಕಟಿಸಿರುವ ಕನಿಷ್ಟ ಬೆಂಬಲ ಬೆಲೆ ರೂ. 1848, ಅಂದರೆ ಕೇರಳಕ್ಕಿಂತ 900ರೂ. ಕಡಿಮೆ.
‘ಸುಭಿಕ್ಷ ಕೇರಳ ‘ ಕಾರ್ಯಕ್ರಮದ ಅಡಿಯಲ್ಲಿ ವಿಭಿನ್ನ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ನಿರ್ದಿ಼ಷ್ಟ ಪ್ರಮಾಣದಲ್ಲಿ ಸಬ್ಸಿಡಿಗಳನ್ನು ಕೊಡಲಾಗುತ್ತಿದೆ. ಉದಾ: ಭತ್ತಕ್ಕೆ ಹೆಕ್ಟೇರಿಗೆ ರೂ.22,000, ತರಕಾರಿಗಳಿಗೆ ರೂ. 20,000, ಚಳಿಗಾಲದಲ್ಲಿ ರೂ.30,000, ಬೇಳೆಕಾಳುಗಳಿಗೆ ರೂ.20,000, ಬಾಳೆಗೆ ರೂ.30,000 ಇತ್ಯಾದಿ.
ಇತ್ತೀಚೆಗಷ್ಟೇ 16 ತರಕಾರಿಗಳಿಗೂ ಕನಿಷ್ಟ ಬೆಲೆಗಳನ್ನು ಎಲ್ ಡಿ ಎಫ್ ಸರಕಾರ ಪ್ರಕಟಿಸಿದೆ
ಪ್ರಧಾನ ಮಂತ್ರಿ ಮೋದಿ ಅಸತ್ಯಗಳು, ಮುಚ್ಚುಮರೆಗಳಲ್ಲಿ ತೊಡಗುವ ಬದಲು ಇಂತಹ ಕ್ರಮಗಳನ್ನು ತರಲು ಪ್ರಯತ್ನಿಸಬೇಕು ಮತ್ತು ಕಾಫಿ ಬೋರ್ಡ್ ಇತ್ಯಾದಿಗಳನ್ನು ಏಕೆ ಅದು ದುರ್ಬಲಗೊಳಿಸುತ್ತಿದೆ, ರಾಜ್ಯ ಸರಕಾರಗಳೊಡನೆ ಸಮಾಲೋಚಿಸದೆಯೇ ಹೊರದೇಶಗಳೊಡನೆ ‘ಮುಕ್ತ ವ್ಯಾಪಾರ ಒಪ್ಪಂದ’(ಎಫ್.ಟ.ಎ)ಗಳನ್ನು ಮಾಡಿಕೊಂಡು ಭಾರತೀಯ ರೈತರಿಗೆ ಅನಾಹುತಗಳನ್ನು ತರುತ್ತಿದೆ ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ ಎಂದು ಎಐಕೆಎಸ್ ಹೇಳಿದೆ.
ಅಲ್ಲದೆ 14 ವರ್ಷಗಳ ಹಿಂದೆಯೆ ಎಪಿಎಂಸಿಗಳನ್ನು ರದ್ದುಗೊಳಿಸಿರುವ ಬಿಹಾರದಲ್ಲಿ , ಭತ್ತ ಬೆಳೆಗಾರರು ಕೇವಲ ಕ್ವಿಂಟಾಲ್‍ಗೆ ರೂ.1000-1200, ಅಂದರೆ ಕನಿಷ್ಟ ಬೆಂಬಲ ಬೆಲೆಗಿಂತ 600-800 ರೂ. ಕಡಿಮೆ ಏಕೆ ಪಡೆಯುತ್ತಿದ್ದಾರೆ ಎಂಬುದಕ್ಕೂ ಉತ್ತರಿಸಬೇಕಾಗುತ್ತದೆ, ಏಕೆಂದರೆ ಅಲ್ಲಿ ಬಿಜೆಪಿ ಈಗ ಆಳುವ ರಂಗದಲ್ಲಿ ಅತಿ ದೊಡ್ಡ ಪಕ್ಷ. ಸುಳ್ಳುಗಳು ಮತ್ತು ಮೋಸದ ಮಾತುಗಳಿಂದ ಈಗ ರೈತರನ್ನು ದಾರಿ ತಪ್ಪಿಸಲಾಗದು ಎಂದು ಎಐಕೆಎಸ್ ಎಚ್ಚರಿಸಿದೆ.