ಬೆಂಗಳೂರು : ಭೂ ಸಾರಿಗೆ ನಿರ್ದೇಶನಾಲಯವು ಬಿಬಿಎಂಪಿ ವ್ಯಾಪ್ತಿಗೆ ರೂಪಿಸಿರುವ ವಾಹನ ನಿಲುಗಡೆ ನೀತಿ – ಪಾರ್ಕಿಂಗ್ ನೀತಿ 2.೦ ಅಡಿಯಲ್ಲಿ ಮಹಾನಗರ ವ್ಯಾಪ್ತಿಯ ಪಾರ್ಕಿಂಗ್ ವ್ಯವಸ್ಥೆಯನ್ನು ಖಾಸಗೀ ಸಹಭಾಗಿತ್ವದೊಂದಿಗೆ ನಿವ೯ಹಿಸಲು ರೂಪಿಸಿರುವ ನಿಲುಗಡೆ ಶುಲ್ಕವು ಖಾಸಗಿ ಲೂಟಿಗೆ ಎಡೆಮಾಡದಿರಲಿ ಅದಕ್ಕೆ ಕಡಿವಾಣ ಹಾಕುವ ಅಂಶಗಳನ್ನು ಒಳಗೊಳಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಕೋರಿವೆ.
ಪಾರ್ಕಿಂಗ್ ನೀತಿಯ ಆಶಯವೇನೋ ಸರಿಯಿದ್ದರೂ ಪಾರ್ಕಿಂಗ್ ತಾಣಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಖಾಸಗಿ ಸಾರ್ವಜನಿಕ ಪಾಲುದಾರಿಕೆ (PPP) / ಖಾಸಗೀ ಸಹಭಾಗಿತ್ವ ಉತ್ತೇಜಿಸುವುದು ಅದರ ಉದ್ದೇಶ ಎಂದಿರುವ ಅಂಶವು ನಿಯಂತ್ರಣವಿಲ್ಲದ ಖಾಸಗಿ ಲೂಟಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿದೆ. ಅದನ್ನು ನಿಯಂತ್ರಿಸುವ ಕಾನೂನಾತ್ಮಕ ಅಂಶಗಳನ್ನು ನೀತಿಯಲ್ಲಿ ಅಳವಡಿಸಬೇಕೆಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್. ಉಮೇಶ್ ಒತ್ತಾಯಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ಪಾರ್ಕಿಂಗ್ ನೀತಿ 2.೦ ಪುನರ್ ಪರಿಶೀಲಿಸಲು ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಿಸಿದ್ದಾರೆ. ಈ ಹಿಂದೆ ರೂಪಿಸಲಾಗಿದ್ದ ಪಾರ್ಕಿಂಗ್ ನೀತಿ 1.೦ ಅಡಿಯಲ್ಲಿ ಸಂಗ್ರಹಿಸಲುದ್ದೇಶಿಸಲಾಗಿದ್ದ ಪಾರ್ಕಿಂಗ್ ಶುಲ್ಕಗಳಿಗೆ ಬಿಜೆಪಿಯ ಹಾಲೀ ಶಾಸಕರು ಮತ್ತು ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪ್ರಸ್ತುತ ಪಾರ್ಕಿಂಗ್ ನೀತಿ 2.೦ ನಲ್ಲಿ ಪ್ರಸ್ತಾಪಿಸಿರುವ ಗಂಟೆಗಳಿಗೆ ಅನುಗುಣವಾಗಿ ಶುಲ್ಕ ಹೆಚ್ಚಳ ಬಗ್ಗೆ ಮೌನವಹಿಸಿರುವುದನ್ನು ಉಮೇಶ್ ರವರು ತೀವ್ರವಾಗಿ ಖಂಡಿಸಿದ್ದಾರೆ.
ಪಾರ್ಕಿಂಗ್ ನೀತಿ 2.೦ ಅಡಿಯಲ್ಲಿ ರಚಿಸಲಾಗುವ ವಲಯಕ್ಕೊಂದು ಕಾರ್ಯಪಡೆಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರ ವಂತೆ ನೀತಿಯನ್ನು ಪರಿಷ್ಕರಿಸಬೇಕು, ಹಾಗೂ ಪ್ರಸ್ತುತ 4 ಚದರ ಕಿ.ಮೀ ಪ್ರದೇಶಕ್ಕೊಂದು ಪಾರ್ಕಿಂಗ್ ವಲಯದ ಪ್ರಸ್ತಾಪದಂತೆ ಬಹುತೇಕ ಕನಿಷ್ಟ 2೦೦ ಕಾರ್ಯಪಡೆಗಳು ರಚಿಸಬೇಕಾದ ಅನಿವಾರ್ಯತೆ ಉಂಟಾಗಲಿದೆ. ಅಷ್ಟೊಂದು ಸಂಖ್ಯೆಯ ಕಾರ್ಯಪಡೆಗಳ ಕಾರ್ಯನಿರ್ವಹಣೆಯನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ ನಿಯಮಗಳನ್ನು ರೂಪಿಸಿ ಹಾಗೂ ಅಧಿಕಾರಿಗಳನ್ನು ನಿಯೋಜಿಸುವ ಪ್ರಾಯೋಗಿಕ ಅಂಶಗಳನ್ನೊಳಗೊಂಡು ನೀತಿಯನ್ನು ಪುನರ್ ರೂಪಿಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದಾರೆ.
ಪಾರ್ಕಿಂಗ್ ನೀತಿ 2.೦ನಲ್ಲಿ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (BMLTA) ಅಥವಾ ಏಕೀಕೃತ ಮಹಾನಗರ ಸಾರಿಗೆ ಪ್ರಾಧಿಕಾರ (UMTA) ರಚನೆಯಾಗುವವರೆಗೂ ಯೋಜನೆ ರೂಪಿಸಲೆಂದು ರಚನೆಯಾಗುವ ಉನ್ನತ ಸಮಿತಿಯಲ್ಲಿ ನಾಗರೀಕರ ಪ್ರಾತಿನಿಧ್ಯಕ್ಕೆ ಅವಕಾಶವಿಲ್ಲದಿರುವುದು ಅಧಿಕಾರಶಾಹಿ ಧೋರಣೆಗೆ ಎಡೆಮಾಡುವ ಸಾಧ್ಯತೆಗಳಿವೆ. ಆದ ಕಾರಣ ಉನ್ನತ ಸಮಿತಿ ಮತ್ತು ಆನಂತರ ರೂಪಿಸಲಾಗುವ ಮೇಲಿನ BMLTA / UMTA ಗಳಲ್ಲೂ ನಾಗರೀಕರು ಮತ್ತು ವಿವಿಧ ರೀತಿಯ ವಾಹನ ಸವಾರರ ಪ್ರಾತಿನಿಧ್ಯವನ್ನು ಪ್ರಜಾಸತ್ತಾತ್ಮಕವಾಗಿ ಒಳಗೊಳ್ಳಲು ಅಗತ್ಯ ಅಂಶಗಳನ್ನು ನೀತಿಯಲ್ಲಿ ಒಳಗೊಳಿಸಬೇಕು , ಈ ನೀತಿಯಲ್ಲಿ ಕಡಿಮೆ ಆದಾಯ ಗುಂಪಿನ ಮನೆಗಳು, ಮದ್ಯಮ ಆದಾಯ ಗುಂಪಿನ ಮನೆಗಳು ಮತ್ತು ಅವುಗಳಲ್ಲಿನ ನಿವಾಸಿಗಳ ವಾಹನ ನಿಲುಗಡೆಗೆ ಅಗತ್ಯ ರಿಯಾಯಿತಿಗಳನ್ನು ನೀಡಿ ಯಾವುದೇ ರೀತಿಯ ನಿಲುಗಡೆ ಶುಲ್ಕವನ್ನು ಅಂತಹ ಪ್ರದೇಶಗಳಿಗೆ ವಿಧಿಸಬಾರದೆಂದು ಅದು ಒತ್ತಾಯಿಸಿದೆ. ಈ ಅಂಶವನ್ನು ಅಂತಹ ವಸತಿ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಪರವಾನಗಿ ಮತ್ತು ದರ ನಿಗದಿ ಪಡಿಸುವಾಗ ಪರಿಗಣಿಸಬೇಕೆಂಬುದು ಸಿಪಿಐ(ಎಂ) ಒತ್ತಾಯವಾಗಿದೆ.