ನವೆಂಬರ್ 26ರ ಮುಷ್ಕರವು ಒಂದು ಗಮನಾರ್ಹ ವಿದ್ಯಮಾನವೇ. ಏಕೆಂದರೆ, ಈ ಮುಷ್ಕರವು ದೇಶದ ಕಾರ್ಮಿಕರು ಮತ್ತು ರೈತರ ಮೇಲೆ ಮೋದಿ ಸರ್ಕಾರವು ನಡೆಸುತ್ತಿರುವ ನಿರ್ಲಜ್ಜ ಮತ್ತು ಅಭೂತಪೂರ್ವ ದಾಳಿಗಳ ವಿರುದ್ಧದ ಪ್ರತಿಭಟನೆ ಮಾತ್ರವಲ್ಲ, ಮೋದಿ ಸರ್ಕಾರದ ಈ ದಾಳಿಗಳು ಸಾಮ್ರಾಜ್ಯಶಾಹಿ ಕಾರ್ಯಸೂಚಿಯನ್ನು ಮುಂದೊಯ್ಯುತ್ತವೆ ಎನ್ನುವ ಕಾರಣದ ಜೊತೆಗೆ ಒಂದು ಆಳವಾದ ಮತ್ತು ಕಡಿಮೆ ಚರ್ಚಿತವಾದ ಮತ್ತು ಮಹತ್ವದ ಒಂದು ಕಾರಣವನ್ನು ಈ ಕೆಳಗಿನ ವಿವರಗಳಲ್ಲಿ ಕಾಣಬಹುದು.
ದೇಶದಲ್ಲಿ ಸಾರ್ವಜನಿಕ ಚರ್ಚೆಗಳ (public discourse) ದಿಕ್ಕನ್ನು ಬದಲಾಯಿಸುವ ಮೂಲಕ ಅಧಿಕಾರ ಹಿಡಿಯುವಲ್ಲಿ ಹಿಂದುತ್ವ ಶಕ್ತಿಗಳು ಯಶಸ್ವಿಯಾಗಿವೆ. ಚಂಪಾರಣ್ ಪ್ರದೇಶದ ರೈತರ ಸ್ಥಿತಿ-ಗತಿಗಳ ಬಗ್ಗೆ ವಿಚಾರಿಸಲು 1917ರಲ್ಲಿ ಗಾಂಧೀಜಿ ಅಲ್ಲಿಗೆ ಭೇಟಿ ನೀಡಿದಾಗಿನಿಂದ ಹಿಡಿದು ಒಂದು ಶತಮಾನಕ್ಕೂ ಹೆಚ್ಚು ಕಾಲ ಕೇಂದ್ರ ಸ್ಥಾನವನ್ನು ಆಕ್ರಮಿಸಿಕೊಂಡಿದ್ದ ಕಥನವನ್ನು ಅವರು ಪಲ್ಲಟಿಸಿದ್ದಾರೆ. ಜನರ ಐಹಿಕ ಜೀವನದ ಅಥವಾ ಅವರ ವ್ಯಾವಹಾರಿಕ ಬದುಕಿನ ಸುತ್ತ ಮುತ್ತವೇ ತಿರುಗುತ್ತಿದ್ದ ಈ ಕಥನವು, ಇಡೀ ವಸಾಹತುಶಾಹಿ-ವಿರೋಧಿ ಹೋರಾಟವನ್ನು ಮತ್ತು ನಂತರದ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯವನ್ನು, ಹಿಂದುತ್ವ ಶಕ್ತಿಗಳು ಅಧಿಕಾರಕ್ಕೆ ಬರುವವರೆಗೂ, ಆವರಿಸಿಕೊಂಡಿತ್ತು. ಜನರ ಪ್ರಾಪಂಚಿಕ ಬದುಕನ್ನು ಉತ್ತಮಗೊಳಿಸುವ ಪಾತ್ರವನ್ನು ಪ್ರಭುತ್ವವೇ ನಿರ್ವಹಿಸಬೇಕು ಎಂದು ಭಾವಿಸಲಾಗಿತ್ತು. ಬದುಕನ್ನು ಉತ್ತಮಗೊಳಿಸುವ ಬಗ್ಗೆ ರಾಜಕೀಯ ಅಧಿಕಾರವನ್ನು ಹಿಡಿಯಲು ಸೆಣಸುತ್ತಿದ್ದ ಬೇರೆ ಬೇರೆ ರಾಜಕೀಯ ಪಕ್ಷಗಳು ಬೇರೆ ಬೇರೆ ಮಾರ್ಗೋಪಾಯಗಳನ್ನು ಸೂಚಿಸುತ್ತಿದ್ದವು. ಈ ವಿಷಯವನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ, ಬಡತನ, ನಿರುದ್ಯೋಗ, ಬೆಳವಣಿಗೆ, ಅಭಿವೃದ್ಧಿ, ಆರೋಗ್ಯ-ಆರೈಕೆ, ಶಿಕ್ಷಣ ಮತ್ತು ಇತರ ಅನೇಕ ವಿಷಯಗಳಿಗೆ ಸಂಬಂಧಿಸಿದ ಈ ಕಥನವನ್ನು ಒಪ್ಪಿಕೊಂಡಿದ್ದ ಬೇರೆ ಬೇರೆ ರಾಜಕೀಯ ಪಕ್ಷಗಳು ಬೇರೆ ಬೇರೆ ನಿಲುವುಗಳನ್ನು ಹೊಂದಿದ್ದರೂ ಸಹ, ಅವರ ಚರ್ಚೆ-ನಿಲುವುಗಳು ಈ ಕಥನದ ಒಟ್ಟಾರೆ ವ್ಯಾಪ್ತಿಗೆ ಸೀಮಿತವಾಗಿದ್ದವು.
ವಿಚಾರಹೀನತೆಯನ್ನು ವ್ಯವಸ್ಥಿತವಾಗಿ ಬೋಧಿಸುವ ಮೂಲಕ ದೇಶದಲ್ಲಿ ಸಾರ್ವಜನಿಕ ಚರ್ಚೆಗಳ ದಿಕ್ಕನ್ನು ಬದಲಾಯಿಸಿ ಅಧಿಕಾರ ಹಿಡಿಯುವಲ್ಲಿ ಹಿಂದುತ್ವ ಶಕ್ತಿಗಳು ಯಶಸ್ವಿಯಾಗಿವೆ. ಇಂತಹ ವಿಚಾರಹೀನತೆಯ ಕಥನ ಮುಂದಿನ ದಾರಿಗಾಣದ ಸ್ಥಿತಿಯಲ್ಲಿರುವ ನವ ಉದಾರ ಬಂಡವಾಳಶಾಹಿಗೂ ಪ್ರಯೋಜನಕರವಾಗಿರುವುದರಿಂದ ಅವರ ಹಣದ ಕೊಪ್ಪರಿಗೆಯ ಬೆಂಬಲವೂ ಹಿಂದುತ್ವ ಶಕ್ತಿಗಳಿಗೆ ದೊರೆತಿದೆ. ಆದರೆ ಜನರ ದೈನಂದಿನ ಜೀವನದ ನಿಜ ಸಮಸ್ಯೆಗಳನ್ನು ಪಕ್ಕಕ್ಕೆ ಸರಿಸಲು ಅವು ಎಷ್ಟೇ ಹೆಣಗಾಡಿದರೂ, ಆ ಸಮಸ್ಯೆಗಳ ಚರ್ಚೆಯು ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇದು ಹಿಂದುತ್ವ ಶಕ್ತಿಗಳು ಗದ್ದಿಯಲ್ಲಿ ಕೂತಿರುವುದು ಒಂದು ತಾತ್ಕಾಲಿಕ ವಿದ್ಯಮಾನ ಎಂಬುದನ್ನು ತೋರಿಸುತ್ತದೆ. ಇತ್ತೀಚೆಗೆ ಬಿಹಾರದ ಚುನಾವಣಾ ಫಲಿತಾಂಶ ಈ ವಿಚಾರಹೀನತೆಯ ಪ್ರವಚನವನ್ನು ಪಲ್ಲಟಗೊಳಿಸಿದೆ. ನವಂಬರ್ 26ರ ಮುಷ್ಕರವು ಈ ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ದಿದೆ.
ಈ ಸಂಕಥನವನ್ನು, ಜನರ ಹಕ್ಕುಗಳನ್ನು ಕಸಿದ ಮತ್ತು ತನ್ನ ನಿರಂಕುಶ ಆಡಳಿತವನ್ನು ದೇಶದ ಮೇಲೆ ಹೇರಿದ ಇಂದಿರಾ ಗಾಂಧಿಯವರ ಕುಖ್ಯಾತ ತುರ್ತುಪರಿಸ್ಥಿತಿ ಕೂಡ, ಬದಲಿಸಲು ಮುಂದಾಗಲಿಲ್ಲ. ಬದಲಿಗೆ, ಈ ಕಥನದ ವ್ಯಾಪ್ತಿಯೊಳಗೇ, ತನ್ನ 20 ಅಂಶಗಳ ಕಾರ್ಯಕ್ರಮವು ಜನರ ಲೌಕಿಕ ಜೀವನವನ್ನು ಸುಧಾರಿಸುವ ಸಂಜೀವಿನಿಯಾಗಬಲ್ಲದು ಎಂಬುದಾಗಿ ಹೇಳುವ ಮೂಲಕ ತುರ್ತುಪರಿಸ್ಥಿತಿಯನ್ನು ಜನರಿಗೆ ಹಿಡಿಸುವಂತೆ ಮಾಡಲು ಇಂದಿರಾ ಗಾಂಧಿ ಪ್ರಯತ್ನಿಸಿದರು. ಆದರೆ, ಈ ಕಥನವನ್ನು ಯಾವುದೇ ರೀತಿಯಲ್ಲಿ ಶ್ರೀಮಂತಗೊಳಿಸುವುದು ಬಿಜೆಪಿಗೆ ಸಾಧ್ಯವಾಗಿಲ್ಲ. ಆರ್ಥಿಕ ವಿಷಯಗಳ ಬಗ್ಗೆ ಬಿಜೆಪಿಗೆ ತನ್ನದೇ ಆದ ವಿಚಾರಗಳಿಲ್ಲ. ಹಾಗಾಗಿ, ಅದು ಕಣ್ಣುಮುಚ್ಚಿಕೊಂಡು ತನ್ನ ಕಾರ್ಪೊರೇಟ್ ಪ್ರಾಯೋಜಕರಿಗೆ ಮತ್ತು ಬ್ರೆಟನ್ ವುಡ್ಸ್ ಸಂಸ್ಥೆಗಳು (ಐಎಂಎಫ್, ವಿಶ್ವ ಬ್ಯಾಂಕ್) ಹೊರಡಿಸುವ ಕರಪತ್ರಗಳಿಗೆ ಬದ್ಧವಾಗಿ ನಡೆಯುತ್ತದೆ.
ವಾಸ್ತವವಾಗಿ, ಈ ಸಂಕಥನವನ್ನು ಬದಲಾಯಿಸಿ ಅದರ ಜಾಗದಲ್ಲಿ ಒಂದು ಪರ್ಯಾಯ ಕಥನವನ್ನು ಕಟ್ಟುವ ಮತ್ತು ದೇವಸ್ಥಾನಗಳ ನಿರ್ಮಾಣ, ಮಸೀದಿಗಳ ಧ್ವಂಸ, ಭಯೋತ್ಪಾದಕ ಪಿತೂರಿಗಳಲ್ಲಿ ಅಲ್ಪ-ಸಂಖ್ಯಾತರು ಇದ್ದಾರೆಂದು ಕಾಣುವ, ದ್ವೇಷವನ್ನು ಎಲ್ಲೆಡೆ ಹರಡುವ ಮತ್ತು ವಿಚಾರಹೀನತೆಯನ್ನು ವ್ಯವಸ್ಥಿತವಾಗಿ ಬೋಧಿಸುವ ಮೂಲಕ ಜನರನ್ನು ವಿಭಜಿಸುವ ಅಜೆಂಡಾವನ್ನು ಬಿಜೆಪಿಯು ಹೊಂದಿದೆ. ಹಾಗಾಗಿ, ಬಿಜೆಪಿಯ ಪ್ರವಚನಗಳಲ್ಲಿ ವಿಚಾರಹೀನತೆ ತುಂಬಿರಬೇಕಾಗುತ್ತದೆ. ಅದು ಹುಟ್ಟಿಹಾಕುವ ದ್ವೇಷವನ್ನು ನಿರಂತರವಾಗಿ ಸಮರ್ಥಿಸಿಕೊಳ್ಳಲು, ಸಾಕ್ಷಿ ಪುರಾವೆಗಳನ್ನು ಎಳ್ಳಷ್ಟೂ ಲೆಕ್ಕಿಸದೆ ಇತಿಹಾಸ ಮತ್ತು ಪುರಾಣಗಳ ನಡುವಿನ ವ್ಯತ್ಯಾಸವನ್ನು ಅಳಿಸಿಹಾಕಬೇಕಾಗುತ್ತದೆ.
ನವ ಉದಾರ ಬಂಡವಾಳಶಾಹಿಯು ದಾರಿ ಕಾಣದ ಹಂತವನ್ನು ತಲುಪಿರುವ ಪ್ರಸಕ್ತ ಸನ್ನಿವೇಶದಲ್ಲಿ, ವಿಚಾರಹೀನತೆಯನ್ನು ವ್ಯವಸ್ಥಿತವಾಗಿ ಬೋಧಿಸುವ ಮತ್ತು ಜನರನ್ನು ವಿಭಜಿಸುವ ಪರ್ಯಾಯ ಕಥನವನ್ನು ಬೆಂಬಲಿಸುವುದು ಕಾರ್ಪೊರೇಟ್ಗಳಿಗೆ ಲಾಭದಾಯಕವಾಗಿದೆ. ಏಕೆಂದರೆ, ನವ ಉದಾರ ಬಂಡವಾಳಶಾಹಿ ಆರ್ಥಿಕ ನೀತಿಗಳಿಗೆ ಕಳೆದ ನಲವತ್ತು ವರ್ಷಗಳಿಂದ ಸಮರ್ಥನೆ ಸಿಕ್ಕಿತ್ತು. ಈ ವಿಶ್ವಾಸಾರ್ಹತೆ ಈಗ ಇಲ್ಲವಾಗಿದೆ. ಏಕೆಂದರೆ, ಆರ್ಥಿಕ ಬೆಳವಣಿಗೆಯು ಉನ್ನತವಾಗಿದ್ದರೆ ಅದರ ಪ್ರಯೋಜನ ತಳದಲ್ಲಿದ್ದವರಿಗೂ ಹನಿ ಹನಿಯಾಗಿ ಜಿನುಗುತ್ತದೆ ಎಂದು ಆರಂಭದಿಂದಲೂ ಹೇಳಲಾಗಿತ್ತು. ಆದರೆ, ಬೆಳವಣಿಗೆಯು ಮೇಲ್ನೋಟದಲ್ಲಿ ಆಕರ್ಷಕವಾಗಿದೆ ಎಂದು ಹೇಳುತ್ತಿದ್ದ ಅವಧಿಯಲ್ಲೂ ಅದರ ಪ್ರಯೋಜನ ತಳಭಾಗದಲ್ಲಿದ್ದವರಿಗೆ ಜಿನುಗಲೇ ಇಲ್ಲ ಎಂಬ ಕಾರಣದಿಂದ ಮಾತ್ರ ಅದು ವಿಶ್ವಾಸಾರ್ಹತೆ ಕಳೆದುಕೊಂಡಿಲ್ಲ; ಹೇಳಲಿಕ್ಕಾದರೂ ಅಷ್ಟೊ ಇಷ್ಟೊ ಇದ್ದ ಬೆಳವಣಿಗೆಯೂ ಈಗ ಹೇಳ ಹೆಸರಿಲ್ಲದಂತಾಗಿ ನಿರುದ್ಯೋಗವು ತೀವ್ರವಾಗಿ ಏರುತ್ತಿದೆ. ಹಾಗಾಗಿ, ಈ ಹೊಸ ಸನ್ನಿವೇಶದಲ್ಲಿ ಸಂಕಥನದ ಈ ಬದಲಾವಣೆಯು ಕಾರ್ಪೊರೇಟ್ಗಳಿಗೆ ಹೇಳಿ ಮಾಡಿಸಿದಂತೆ ಹೊಂದುತ್ತದೆ. ಈ ಕಾರಣದಿಂದಲೇ ಕಾರ್ಪೊರೇಟ್ಗಳು ಕೊಪ್ಪರಿಗೆ ಹಣ ಸುರಿದು ಬಿಜೆಪಿಯನ್ನು ಅಧಿಕಾರಕ್ಕೆ ತಂದಿವೆ.
ಬಿಜೆಪಿಯು ಅಧಿಕಾರದಲ್ಲಿ ಉಳಿಯಲು ಈ ವಿಚಾರಹೀನತೆಯ ಕಥನವು ಹಳಸದಂತೆ ನೋಡಿಕೊಳ್ಳುವುದು ಮತ್ತು ಅದೇ ಸಮಯದಲ್ಲಿ ಬಹಳ ಕಾಲ ಪ್ರಾಮುಖ್ಯತೆ ಪಡೆದಿದ್ದ ಪರ್ಯಾಯ ಕಥನವು, ಅಂದರೆ, ಜನರ ಲೌಕಿಕ ಬದುಕಿಗೆ ಸಂಬಂಧಿಸಿದ ಬಡತನ, ನಿರುದ್ಯೋಗ, ಆರ್ಥಿಕ ಅಭಿವೃದ್ಧಿ, ಆರೋಗ್ಯ-ಆರೈಕೆ, ಶಿಕ್ಷಣ ಮುಂತಾದ ವಿಷಯಗಳ ಸುತ್ತ ತಿರುಗುತ್ತಿದ್ದ ಚರ್ಚೆಗಳು ಮತ್ತು ವರ್ಗ ಹೋರಾಟಗಳು ಮತ್ತೆ ರಂಗಸ್ಥಳದ ಮಧ್ಯಕ್ಕೆ ಬಾರದಂತೆ ತಡೆಗಟ್ಟುವುದು ನಿರ್ಣಾಯಕವಾಗುತ್ತದೆ. ಹಾಗಾದರೆ ಅಧಿಕಾರದ ತನ್ನ ಕತೆ ಮುಗಿದಂತೆಯೇ ಎಂಬುದು ಬಿಜೆಪಿಗೆ ಗೊತ್ತಿದೆ. ಆದರೆ, ನವ ಉದಾರ ಬಂಡವಾಳಶಾಹಿಯ ಬಿಕ್ಕಟ್ಟಿನಿಂದಾಗಿ ಜನರ ಸಂಕಷ್ಟಗಳು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಎರಗಿದ ಕೊರೊನಾ ಸಾಂಕ್ರಾಮಿಕವು ದೇಶವನ್ನು ತತ್ತರಿಸುವಂತೆ ಮಾಡಿರುವ ಸಂದರ್ಭದಲ್ಲಿ, ಆ ಪರ್ಯಾಯ ಕಥನವನ್ನು ಇನ್ನು ಮುಂದೆ ಪಕ್ಕಕ್ಕೆ ಸರಿಸುವಂತಿಲ್ಲ.
ಈ ಪರ್ಯಾಯ ಕಥನವು 2019ರ ಲೋಕಸಭಾ ಚುನಾವಣೆಯ ಮುನ್ನಾ ದಿನಗಳಲ್ಲಿ ಪುನಃ ಮೈ ಕೊಡವಿ ಮೇಲೆದ್ದಿತ್ತು. ಮಹಾರಾಷ್ಟ್ರದ ರೈತರು 2018ರಲ್ಲಿ ನಡೆಸಿದ ಪಾದಯಾತ್ರೆ ಮತ್ತು 2019ರಲ್ಲಿ ದೆಹಲಿಯಲ್ಲಿ ನಡೆದ ರೈತರ ಅಭೂತಪೂರ್ವ ರ್ಯಾಲಿ ಈ ವಿದ್ಯಮಾನವನ್ನು ಸಾರಿದ್ದವು. ಆದರೆ, ಉಗ್ರರು ಪುಲ್ವಾಮಾದಲ್ಲಿ ನಮ್ಮ ಸೈನಿಕರ ಮೇಲೆ ನಡೆಸಿದ ಬಾಂಬ್ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ನಮ್ಮ ವಾಯು ಪಡೆಯು ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆಸಿದ ದಾಳಿಗಳ ನಂತರ ಪ್ರತಿಪಾದಿಸಿದ ಹಿಂದುತ್ವದ ಕಥನ ಮತ್ತು ಅದರ ಪ್ರಚಾರವು ಬೀರಿದ ಪರಿಣಾಮವಾಗಿ ಮೋದಿ ಸರ್ಕಾರವು ಎರಡನೇ ಅವಧಿಗೆ ಅಧಿಕಾರ ಪಡೆಯವಲ್ಲಿ ಯಶಸ್ವಿಯಾಯಿತು.
ಜನರಿಗೆ ಒಂದಿಷ್ಟೂ ಉಪಯೋಗವಿಲ್ಲದ, ಆದರೆ ಅವರ ಗಮನವನ್ನು ಬೇರೆಡೆಗೆ ಸೆಳೆಯುವಂತಹ ನಯನ ಮನೋಹರ ಕೆಲಸಗಳನ್ನು ಮೋದಿ ಸರ್ಕಾರವು ಮಾಡುತ್ತಲೇ ಇರಬೇಕಾಗುತ್ತದೆ ಎಂಬುದಾಗಿ ಅಮರ್ತ್ಯ ಸೇನ್ ಅವರು ಹೇಳಿದ್ದರು. ಅದು ಕರ್ಣಾನಂದಕರ ಕಥೆಗಳನ್ನು ಕಟ್ಟುತ್ತಾ ಹೋಗುತ್ತದೆ. ಜನರ ಲೌಕಿಕ ಜೀವನ ಅಧೋಗತಿಗಿಳಿದಷ್ಟೂ ಹೆಚ್ಚು ಹೆಚ್ಚು ಭ್ರಾಂತಿಕಾರಕ ಕಥೆಗಳನ್ನು ಕಟ್ಟುತ್ತಾ ಹೋಗಬೇಕಾತ್ತದೆ, ಹಿಂದುತ್ವದ ಕಥನವನ್ನು ಮುಂದುವರಿಸಲು, ವಿಚಾರಹೀನತೆಯ ಮೇಲಿನ ಅದರ ಅವಲಂಬನೆ ಹೆಚ್ಚುತ್ತಾ ಹೋಗುತ್ತದೆ.
ಮೋದಿ ಸರ್ಕಾರದ ಈ ಎರಡನೆಯ ಅವಧಿಯು, ಪ್ರಜಾಪ್ರಭುತ್ವದ ಹಕ್ಕುಗಳ ದಮನ, ವ್ಯಕ್ತಿ ಸ್ವಾತಂತ್ರ್ಯದ ಹರಣ, ಸಂವಿಧಾನದ 370ನೇ ವಿಧಿಯ ರದ್ದತಿ, ರಾಜ್ಯಗಳಿಗೆ ನೀಡಬೇಕಿದ್ದ ಜಿಎಸ್ಟಿ ಪರಿಹಾರದ ನಿರಾಕರಣೆ, ತಾರತಮ್ಯದಿಂದ ಕೂಡಿದ ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿ, ಮೂರು ರೈತ-ವಿರೋಧಿ ಕೃಷಿ ಕಾಯ್ದೆಗಳು ಮತ್ತು ಸುಮಾರು ಒಂದು ಶತಕದ ಹಿಂದೆಯೇ ಗಳಿಸಿದ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಕಾರ್ಮಿಕ ಕಾಯ್ದೆಗಳ ಬದಲಾವಣೆಗಳ ಮೂಲಕ, ಜನರ ಬದುಕಿನ ಮೇಲೆ ಕ್ರೂರ ದಾಳಿಗಳು ಈ ಸರ್ಕಾರದ ಮೊದಲನೆಯ ಅವಧಿಗಿಂತಲೂ ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು ಕಾಣುತ್ತಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ, ಕೇವಲ ನಾಲ್ಕು ತಾಸುಗಳ ನೋಟಿಸ್ ನೀಡಿ ಏಕಾಏಕಿಯಾಗಿ ಘೋಷಿಸಿದ ಲಾಕ್ಡೌನ್ನ ಹೊಡೆತದಿಂದ ಇದ್ದಕ್ಕಿಂದಂತೆ ಅನ್ನ- ನೀರು- ಸೂರು-ಬಟ್ಟೆ ಬರೆ ಎಲ್ಲವನ್ನೂ ಕಳೆದುಕೊಂಡು ಹತಾಶರಾಗಿ ಬೀದಿಗೆ ಬಿದ್ದ ವಲಸಿಗ ಕಾರ್ಮಿಕರಿಗೆ ಮೋದಿ ಸರ್ಕಾರವು ಒದಗಿಸಿದ ನೆರವನ್ನು ವಿಶ್ವದ ಇತರ ಪ್ರಮುಖ ದೇಶಗಳು ತಮ್ಮ ಜನರಿಗೆ ಒದಗಿಸಿದ ನೆರವಿಗೆ ಹೋಲಿಸಿದರೆ, ತೀರಾ ಕ್ಷುಲ್ಲಕ ಎನ್ನುವಷ್ಟು ಕಡಿಮೆ ಇತ್ತು. ಮೋದಿ ಸರ್ಕಾರವು ಅದೆಷ್ಟು ನಿರ್ದಯ ಮತ್ತು ಅಮಾನವೀಯ ಎಂಬುದಕ್ಕೆ ಇದು ಸಾಕ್ಷಿಯಾಗುತ್ತದೆ. ವಾಸ್ತವವಾಗಿ, ಈ ಸರ್ಕಾರವು ಈ ಕೊರೊನಾ ಸಾಂಕ್ರಾಮಿಕದ ಸಂದರ್ಭವನ್ನು, ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಿದ ಎಲ್ಲರನ್ನು ಬಂಧಿಸಲು ಮತ್ತು ಬೆದರಿಕೆಯ ಮೂಲಕ ಅವರನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳಲು ಬಳಸಿಕೊಂಡಿದೆ. ಕೊರೊನಾದ ಕಾರಣದಿಂದಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯು ಸ್ಥಗಿತಗೊಂಡಿದೆ.
ಹಿಂದುತ್ವವನ್ನು ಇನ್ನೂ ಹೆಚ್ಚು ಬಲಯುತವಾಗಿ ಮುನ್ನೆಲೆಗೆ ತರುವ ಮೂಲಕ ಸರ್ಕಾರವು ಈ ಎಲ್ಲ ಕ್ರಮಗಳನ್ನೂ ಸಮರ್ಥಿಸಿಕೊಳ್ಳುತ್ತದೆ. ವಿಚಾರಹೀನತೆಯ ಪ್ರವಚನ, ತರ್ಕರಹಿತ ವಾದ, ಪಿತೂರಿಗಳಿಂದ ಕೂಡಿದ ಕಥನಗಳ ನಿರೂಪಣೆ, ದೇಶದ್ರೋಹದ ಕಥನಗಳಿಂದ ತುಂಬಿದ ಮಾತುಗಳು, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬೇರೆಯವರನ್ನು ಹದ್ದುಬಸ್ತಿನಲ್ಲಿಡಲು ಸ್ವಯಂಪ್ರೇರಿತರಾಗಿ ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಜನರನ್ನು ಉತ್ತೇಜಿಸುವ ಕಾವಲುಕೋರತನದ ಕೆಲಸ ಇವುಗಳ ಮೂಲಕ ಹಿಂದುತ್ವವು ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತಿದೆ. ಇಲ್ಲೊಂದು ವಿಷವರ್ತುಲವಿದೆ. ಉಲ್ಬಣಗೊಂಡ ಬಿಕ್ಕಟ್ಟು ತಂದೊಡ್ಡಿದ ಸಂಕಷ್ಟಗಳನ್ನು ಹಿಮ್ಮೆಟ್ಟಿಸಲು ಸರ್ಕಾರವು ಎಷ್ಟು ಮಟ್ಟಿಗೆ ಅಸಮರ್ಥವಾಗುತ್ತದೆಯೊ, ಜನರು ತಮ್ಮ ಲೌಕಿಕ ಸಮಸ್ಯೆಗಳ ಗೊಡವೆಗೆ ಹೋಗದಂತೆ ಅವರ ಗಮನವನ್ನು ಅಷ್ಟು ಮಟ್ಟಿನ ಅವಸರದಲ್ಲಿ ಬೇರೆಡೆಗೆ ತಿರುಗಿಸಬೇಕಾಗುತ್ತದೆ. ಅದಕ್ಕಾಗಿ, ಹಿಂದುತ್ವವನ್ನು ಒತ್ತಿ ಒತ್ತಿ ಪ್ರತಿಪಾದಿಸಬೇಕಾಗುತ್ತದೆ. ಅಂದರೆ, ಹಿಂದುತ್ವದ ಕಥನವನ್ನು ಇನ್ನೂ ಹೆಚ್ಚು ಹೆಚ್ಚು ವಿಲಕ್ಷಣವಾದ ಮತ್ತು ಅದ್ಭುತವಾದ ಕಥೆಗಳ ಮೂಲಕ ಹೆಣೆದು ಅದಕ್ಕೆ ಒಗ್ಗರಣೆಯನ್ನೂ ಕೊಡಬೇಕಾಗುತ್ತದೆ. ಜನರನ್ನು ದಿಕ್ಕು ತಪ್ಪಿಸಲು ಇನ್ನೂ ಹೆಚ್ಚು ನಿಗೂಢ ಕಂತೆ ಪುರಾಣಗಳನ್ನು ಹುಟ್ಟುಹಾಕಬೇಕಾಗುತ್ತದೆ.
ಜನರಿಗೆ ಒಂದಿಷ್ಟೂ ಉಪಯೋಗವಿಲ್ಲದ, ಆದರೆ ಅವರ ಗಮನವನ್ನು ಬೇರೆಡೆಗೆ ಸೆಳೆಯುವಂತಹ ನಯನ ಮನೋಹರ ಯಾ ಅದ್ಭುತ ಕೆಲಸಗಳನ್ನು ಮೋದಿ ಸರ್ಕಾರವು ಮಾಡುತ್ತಲೇ ಇರಬೇಕಾಗುತ್ತದೆ ಎಂಬುದಾಗಿ ಅಮರ್ತ್ಯ ಸೇನ್ ಅವರು ಹೇಳಿದ್ದರು. ಆದರೆ, ಅದು ಏನನ್ನು ಮಾಡುತ್ತದೆಯೊ ಅದಕ್ಕಿಂತ ಹೆಚ್ಚಾಗಿ, ಕರ್ಣಾನಂದಕರ ಕಥೆಗಳನ್ನು ಕಟ್ಟುತ್ತಾ ಹೋಗುತ್ತದೆ. ಅದರ ಆಳ್ವಿಕೆಯಲ್ಲಿ ಜನರ ಲೌಕಿಕ ಜೀವನ ಅಧೋಗತಿಗಿಳಿದಷ್ಟೂ ಅದು ಹೆಚ್ಚು ಹೆಚ್ಚು ಭ್ರಾಂತಿಕಾರಕ ಕಥೆಗಳನ್ನು ಕಟ್ಟುತ್ತಾ ಹೋಗಬೇಕಾತ್ತದೆ, ಹಿಂದುತ್ವದ ಕಥನವನ್ನು ಮುಂದುವರಿಸಲು, ವಿಚಾರಹೀನತೆಯ ಮೇಲಿನ ಅದರ ಅವಲಂಬನೆ ಹೆಚ್ಚುತ್ತಾ ಹೋಗುತ್ತದೆ.
ಹಿಂದುತ್ವ ಶಕ್ತಿಗಳ ಪ್ರಜಾಪ್ರಭುತ್ವ ವಿರೋಧಿ ಮತ್ತು ಜಾತ್ಯತೀತ ವಿರೋಧಿ ಸ್ವಭಾವವನ್ನು ಜನರು ವ್ಯಾಪಕವಾಗಿ ಗುರುತಿಸಿದ್ದಾರೆ. ವಾಸ್ತವವಾಗಿ, ಪ್ರಜಾಪ್ರಭುತ್ವ, ಮತ-ಧರ್ಮ ನಿರಪೇಕ್ಷತೆ ಮತ್ತು ಇತರ ಸಾಂವಿಧಾನಿಕ ಮೌಲ್ಯಗಳ ಆಧಾರದ ಮೇಲೆ ಕಟ್ಟಲಾದ ಸ್ವತಂತ್ರ ಭಾರತವು ವೈಚಾರಿಕ ಚರ್ಚೆಯನ್ನು ಪ್ರತಿಪಾದಿಸುತ್ತದೆ, ವಿಚಾರಹೀನತೆಯನ್ನಲ್ಲ. ಲೌಕಿಕ ಜೀವನವೇ ಅದರ ಮುಖ್ಯ ಕಾಳಜಿ. ಸಮಾಜವು ತನ್ನ ನಿಜ ಜೀವನದ ಪ್ರಶ್ನೆಗಳ ಮೇಲೆ ಬಹಿರಂಗ ಚರ್ಚೆಗಳಲ್ಲಿ ತೊಡಗಬೇಕು ಎಂದು ಅದು ಪರಿಭಾವಿಸುತ್ತದೆ. ಆದ್ದರಿಂದ, ಹಿಂದುತ್ವದ ನಾಯಕರು ತಮ್ಮ ಸಂವಿಧಾನ ನಿಷ್ಠೆಯನ್ನು ಎಷ್ಟೇ ಗಟ್ಟಿಯಾಗಿ ಪ್ರತಿಪಾದಿಸಿದರೂ, ಅವರು ಹರಡುವ ಪ್ರವಚನದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅಥವಾ ಮತ-ಧರ್ಮ ನಿರಪೇಕ್ಷತೆಯ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ.
ಒಂದು ವಿಡಂಬನೆಯೊ ಎಂಬಂತೆ, ಜನರ ದೈನಂದಿನ ಜೀವನದ ಸಮಸ್ಯೆಗಳನ್ನು ಪಕ್ಕಕ್ಕೆ ಸರಿಸಲು ಹಿಂದುತ್ವ ಶಕ್ತಿಗಳು ಎಷ್ಟೇ ಹೆಣಗಾಡಿದರೂ, ಜನ ಜೀವನದ ಸಮಸ್ಯೆಗಳ ಚರ್ಚೆಯು ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇದು ಹಿಂದುತ್ವ ಶಕ್ತಿಗಳು ಗದ್ದಿಯಲ್ಲಿ ಕೂತಿರುವುದು ಒಂದು ತಾತ್ಕಾಲಿಕ ವಿದ್ಯಮಾನ ಎಂಬುದನ್ನು ತೋರಿಸುತ್ತದೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಚುನಾವಣೆಗಳು ನಿರುದ್ಯೋಗದ ಸಮಸ್ಯೆ ಮತ್ತೊಮ್ಮೆ ತಲೆ ಎತ್ತಿದ್ದನ್ನು ಕಂಡೆವು. ಅಪಾರ ಸಂಪನ್ಮೂಲಗಳನ್ನು ಎನ್ಡಿಎ ವಿನಿಯೋಗಿಸಿದ್ದರೂ ಸಹ ವಿರೋಧ ಪಕ್ಷಗಳ ಮೈತ್ರಿಕೂಟವು ಗಳಿಸಿದ ಜನಮತವು ಉತ್ತಮವಾಗಿತ್ತು ಮಾತ್ರವಲ್ಲ ಎನ್ಡಿಎಗಿಂತಲೂ ತುಸು ಹೆಚ್ಚಿಗೆ ಇತ್ತು. ಬಿಹಾರ ಚುನಾವಣೆಯ ಒಂದು ಸಕಾರಾತ್ಮಕ ಸಾಧನೆಯೆಂದರೆ, ವಿಚಾರಹೀನತೆಯ ಕಥನವನ್ನು ಅದು ಪಲ್ಲಟಗೊಳಿಸಿತು.
ನವಂಬರ್ 26ರ ಮುಷ್ಕರವು ಈ ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ದಿದೆ. ವಿಚಾರ ಆಧಾರಿತ ಚರ್ಚೆಯನ್ನು ಮುನ್ನೆಲೆಗೆ ಮರಳಿ ತರುವಲ್ಲಿ ಅದೊಂದು ದಿಟ್ಟ ಪ್ರಯತ್ನವೇ ಸರಿ. ಪ್ರಜಾಪ್ರಭುತ್ವ, ಮತ-ಧರ್ಮ ನಿರಪೇಕ್ಷತೆ ಮತ್ತು ಇತರ ಸಾಂವಿಧಾನಿಕ ಮೌಲ್ಯಗಳನ್ನು ಮೊದಲಿನ ಆರೋಗ್ಯಕರ ಸ್ಥಿತಿಗೆ ತರಬೇಕು ಎಂದಾದರೆ, ಜನರ ದಿನ ನಿತ್ಯದ ಸಮಸ್ಯೆಗಳ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತರಬೇಕಾಗುತ್ತದೆ. ಹಾಗಾಗಿ, ನವೆಂಬರ್ 26ರ ಮುಷ್ಕರವು ಪ್ರಜಾಪ್ರಭುತ್ವದ ಮತ್ತು ಮತ-ಧರ್ಮ ನಿರಪೇಕ್ಷತೆಯ ರಕ್ಷಣೆಯ ಕಾರ್ಯವೂ ಹೌದು.
ಅನು: ಕೆ.ಎಂ.ನಾಗರಾಜ್