- ಕೃಷಿ ಕಾನೂನನ್ನು ಹಿಂಪಡೆಯಲಾಗುವುದಿಲ್ಲ: ಸ್ಪಷ್ಟಪಡಿಸಿದ ಸರ್ಕಾರ
ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನುಗಳ ಪೂರ್ವಾಪರ ಚರ್ಚಿಸಲು ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ನಡೆದ ಸಭೆ, ಯಾವುದೇ ನಿರ್ದಿಷ್ಟ ತೀರ್ಮಾನಗಳಿಲ್ಲದೇ ಅಂತ್ಯಗೊಂಡಿದೆ.
ಕೇಂದ್ರದ ನೂತನ ಕೃಷಿ ಮಸೂದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ದೇಶದ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ಗಂಭೀರ ಸ್ವರೂಪ ಅರಿತ ಕೇಂದ್ರ ಸರ್ಕಾರದ ಮೂವರು ಸಚಿವರ ತಂಡ ಇಂದು ಮಧ್ಯಾಹ್ನ ರೈತ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.
ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೂಡ ಭಾಗಿಯಾಗಿದ್ದರು. ಸಭೆಯಲ್ಲಿ ಕೃಷಿ ಕಾನೂನು ಹಿಂಪಡೆಯುವಂತೆ ರೈತರ ಒತ್ತಾಯ ಹಾಕಿದರು. ಈ ವೇಳೆ ಈ ಕಾನೂನನ್ನು ಹಿಂಪಡೆಯಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ಕನಿಷ್ಠ ಬೆಂಬಲ ಬೆಲೆ ಮತ್ತು ಮಂಡಿಗಳ ಬಗೆ ರೈತರಲ್ಲಿ ಇರುವ ಆತಂಕಗಳನ್ನು ಹೋಗಲಾಡಿಸುವ ಪ್ರಯತ್ನ ನಡೆಸಲಾಗುವುದು ಎಂದಿದ್ದಾರೆ.
ಈ ವೇಳೆ ತಮ್ಮ ಬೇಡಿಕೆಗಳನ್ನು ಸ್ವೀಕರಿಸದಿದ್ದರೆ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ರೈತರು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಆದರೆ, ಹಂತ ಹಂತವಾಗಿ ಈ ಮಾತುಕತೆ ಮುಂದುವರೆಯಲಿದೆ. ಗುರುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಕೇಂದ್ರ ನಿರ್ಧರಿಸಿದೆ.
ಯಾವುದೇ ಮುನ್ಸೂಚನೆಯಿಲ್ಲದೇ ಸರ್ಕಾರ ರೈತರ ಸಭೆ ನಡೆಸಲು ಮುಂದಾಗಿದೆ. ಆದರೂ ನಾವು ಇದಕ್ಕೆ ಒಪ್ಪಿ ಹಾಜರಾಗಿದ್ದೇವೆ. ಸರ್ಕಾರ ಈ ಹೊಸ ಕಾನೂನು ರದ್ದು ಪಡಿಸಬೇಕು ಮತ್ತು ಎಂಎಸ್ಪಿ ಮೇಲೆ ಕಾನೂನು ತರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ಸರ್ಕಾರ ಜಾರಿಗೆ ತಂದಿರುವ ಈ ಕೃಷಿ ಕಾನೂನುಗಳ ಬಗ್ಗೆ ರೈತರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತದೆ. ರೈತ ಸಂಘಗಳು ಮತ್ತು ಕೇಂದ್ರದ ಪ್ರತಿನಿಧಿಗಳ ಒಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂಬ ಪ್ರಸ್ತಾಪವನ್ನು ಅವರು ಮುಂದಿಟ್ಟಿದ್ದು, ಇದಕ್ಕೆ ರೈತ ಸಂಘಗಳು ಅಸಮಾಧಾನ ವ್ಯಕ್ತಪಡಿಸಿವೆ.
ಸಭೆ ಬಳಿಕ ಮಾತನಾಡಿದ ಕೇಂದ್ರ ಕೃಷಿ ಸಚಿವ ಥೋಮರ್, ಡಿಸೆಂಬರ್ ಮೂರರಂದು ರೈತರೊಂದಿಗೆ ಮತ್ತೊಂದು ಸಭೆ ನಡೆಸಲಾಗುವುದು. ಇಂದಿನ ಸಭೆ ಉತ್ತಮವಾಗಿ ನಡೆದಿದೆ, ನಾವು ಒಂದು ಸಣ್ಣ ಗುಂಪಿನೊಂದಿಗೆ ಮಾತುಕತೆ ನಡೆಸಲು ಬಯಸಿದ್ದೇವು, ಆದರೆ ಅವರು ಎಲ್ಲಾ ಮುಖಂಡರೊಂದಿಗೆ ಮಾತುಕತೆ ನಡೆಸಬೇಕು ಎಂದಿದ್ದಾರೆ. ಇದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ರೈತ ಮುಖಂಡ ಚಂದಾ ಸಿಂಗ್ ಇಂದಿನ ಸಭೆ ಉತ್ತಮವಾಗಿ ನಡೆದಿದ್ದು, ಹಲವು ವಿಷಯಗಳನ್ನು ಚರ್ಚಿಸಿದ್ದೇವೆ. ಸಭೆಯಲ್ಲಿ ಒಮ್ಮತ ಮೂಡದ ಹಿನ್ನಲೆ ಪ್ರತಿಭಟನೆ ಮುಂದುವರೆಸಲು ನಿರ್ಧಾರಿಸಲಾಗಿದೆ. ಗುರುವಾರ ಮತ್ತೆ ಸಭೆಯಲ್ಲಿ ಭಾಗಿಯಾಗುತ್ತೇವೆ ಎಂದರು.