ಶಾಂತಿಯುತ ಪ್ರತಿಭಟನೆ ರೈತರ ಹಕ್ಕು; ಅದನ್ನು ಗೌರವಿಸಬೇಕು: ಕೆನಡಾ ಪ್ರಧಾನಿ ಟ್ರೂಡೊ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ವಿರುದ್ದ ರೈತರು ಭಾರತದಾದ್ಯಂತ ವ್ಯಾಪಕ ಹೋರಾಟದಲ್ಲಿ ನಿರತರಾಗಿದ್ದಾರೆ. ಇನ್ನೂ ಪಂಜಾಬ್ಹರಿಯಾಣ ರೈತರ ಹೋರಾಟವಂತೂ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿವೆ. ರೈತ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಏನೇ ಕಸರತ್ತು ನಡೆಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಜಲ ಫಿರಂಗಿ, ಅಶ್ರುವಾಯು ದಾಳಿಗೂ ಕುಗ್ಗದ ರೈತರು ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದು ಹೋರಾಟದ ಕಣದಲ್ಲಿ ಕುಳಿತಿದಿದ್ದಾರೆ. ರೈತ ಹೋರಾಟಕ್ಕೆ ಕೇಂದ್ರ ಸರ್ಕಾರ ಕ್ಯಾರೆ ಎನ್ನದಿದ್ದರೂ ಇಡೀ ವಿಶ್ವದ ನಾಯಕರ ಗಮನವನ್ನು ಸೆಳೆಯುವಲ್ಲಿ ಹೋರಾಟ ಸಫಲವಾಗಿದೆ.

ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಟ್ರುಡೊ ಇದೀಗ ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅಲ್ಲದೆ, ಭಾರತದ ರೈತ ಹೋರಾಟದ ಬಗ್ಗೆ ಮಾತನಾಡಿರುವ ಮೊದಲ ವಿದೇಶಿ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಗುರುನಾನಕ್ ಅವರ 551 ನೇ ಜನ್ಮ ದಿನಾಚರಣೆಯನ್ನು ಗುರುತಿಸುವ ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಭಾರತದ ರೈತರ ಹೋರಾಟದ ಕುರಿತು ಗಮನ ಸೆಳೆದಿರುವ ಕೆನಡಾದ ಪ್ರಧಾನಿ ಜಸ್ಟಿನ್​ ಟ್ರುಡೊ, “ಶಾಂತಿಯುತ ಪ್ರತಿಭಟನೆಯ ಹಕ್ಕುಗಳನ್ನು ರಕ್ಷಿಸಲು ಕೆನಡಾ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತದೆ. ಆದರೆ, ಭಾರತದಲ್ಲಿನ ಈ ಹೋರಾಟ ನಮಗೆ ತೀವ್ರ ಕಳವಳವನ್ನುಂಟು ಮಾಡುತ್ತಿದೆ.
ಭಾರತದಿಂದ ಹೊರಬರುತ್ತಿರುವ ಸುದ್ದಿ ಮತ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ನಾವೆಲ್ಲರೂ ರೈತರ ಸ್ಥಿತಿಯ ಕುರಿತು ಚಿಂತಿತರಾಗಿದ್ದೇವೆ. ಈ ರೈತರ ಹೋರಾಟ ನ್ಯಾಯಯುತವಾಗಿದೆ. ಅಲ್ಲದೆ, ಇಂತಹ ಶಾಂತಿಯುತ ಪ್ರತಿಭಟನೆಯ ಹಕ್ಕುಗಳನ್ನು ರಕ್ಷಿಸಲು ಕೆನಡಾ ಯಾವಾಗಲೂ ಮುಂದಿರುತ್ತದೆ” ಎಂದು ಹೇಳುವ ಮೂಲಕ ಪ್ರತ್ಯಕ್ಷವಾಗಿಯೇ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಆದರೆ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಅಭಿಪ್ರಾಯವನ್ನು ಅಲ್ಲಗೆಳೆದಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್, “ಭಾರತದ ರೈತರಿಗೆ ಸಂಬಂಧಿಸಿದ ಕೆನಡಾದ ನಾಯಕರ ಕೆಲವು ಅನಪೇಕ್ಷಿತ ಕಾಮೆಂಟ್‌ಗಳನ್ನು ನಾವು ನೋಡಿದ್ದೇವೆ. ಇಂತಹ ಕಾಮೆಂಟ್‌ಗಳು ಅನಗತ್ಯ, ಅದರಲ್ಲೂ ವಿಶೇಷವಾಗಿ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವ ರಾಷ್ಟ್ರ, ರಾಜಕೀಯ ಉದ್ದೇಶಗಳಿಗಾಗಿ ರಾಜತಾಂತ್ರಿಕ ಸಂಭಾಷಣೆಗಳನ್ನು ತಪ್ಪಾಗಿ ನಿರೂಪಿಸದಿರುವುದು ಉತ್ತಮ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ವಿವಿಧ ಮೂಲೆಗಳಿಂದ ರೈತರು ಇದೀಗ ದೆಹಲಿಗೆ ಆಗಮಿಸಿದ್ದಾರೆ. ರೈತರ ದೆಹಲಿ ಚಲೋ ಅಭಿಯಾನ ಆರನೇ ದಿನಕ್ಕೆ ಕಾಲಿಟ್ಟು ದೆಹಲಿಯ ಹೊರವಲಯದಲ್ಲಿ ಬೀಡುಬಿಟ್ಟಿರುವ ರೈತರು ಯಾವುದೇ ಕ್ಷಣದಲ್ಲಿ ಇಡೀ ದೆಹಲಿಯನ್ನು ಸ್ತಬ್ಧಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ರೈತರ ತೀವ್ರ ಹೋರಾಟದ ನಂತರ ಸೋಮವಾರ ರಾತ್ರಿ ಕೇಂದ್ರ ಸರ್ಕಾರ ಪ್ರತಿಭಟನಾನಿರತ ರೈತ ಸಂಘಗಳನ್ನು ಡಿಸೆಂಬರ್ 1 ರಂದು ಮಾತುಕತೆಗೆ ಆಹ್ವಾನಿಸಿದೆ. ಏತನ್ಮಧ್ಯೆ, ಪ್ರತಿಪಕ್ಷಗಳು ತಪ್ಪು ಮಾಹಿತಿಯ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದೆ. ಆದರೆ. ಇಡೀ ದೇಶದ ರೈತರನ್ನು ಮಾತುಕತೆಗೆ ಕರೆಯುವ ವರೆಗೆ ತಾವು ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ರೈತರು ಕೇಂದ್ರದ ಪ್ರಸ್ತಾವವನ್ನು ನಿರಾಕರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *