– ಇಂದು ಮಧ್ಯಾಹ್ನ ಕೇಂದ್ರ ಸರ್ಕಾರದ ಜೊತೆ ರೈತ ಸಂಘಟನೆಗಳ ಮಾತುಕತೆ
ನವದೆಹಲಿ: ಮಾತುಕತೆಗೆ ಕರೆದಿರುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಂಡೇ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ‘ದೆಹಲಿ ಚಲೋ‘ ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.
ಈಗಾಗಲೇ ಕೇಂದ್ರ ಸರ್ಕಾರ ನವೆಂಬರ್ 13ರಂದು ರೈತರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದೆ. ಆದರೆ ಆ ಸಭೆಯಲ್ಲಿ ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಕಿಂಚಿತ್ತೂ ಸ್ಪಂದಿಸಿರಲಿಲ್ಲ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ‘ಮಾತುಕತೆ ಪ್ರಸ್ತಾಪವನ್ನು’ ನಿರಾಕರಿಸಿದ್ದರು. ಕಡೆಗೆ ಒಪ್ಪಿ ಇವತ್ತು ಮಧ್ಯಾಹ್ನ 3 ಗಂಟೆಗೆ ರೈತ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆ ಬಹಳ ಮಹತ್ವ ಪಡೆದುಕೊಂಡಿದೆ.
ದೇಶದ ವಿವಿಧ ಮೂಲೆಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದರು. ಇದಲ್ಲದೆ ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಳಗಳಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ದೇಶದ ಬೇರೆ ಬೇರೆ ಭಾಗಗಳಿಂದ ರೈತರು ಸಾಂಕೇತಿಕವಾಗಿ ಭಾಗವಹಿಸಿದ್ದರೆ, ದೆಹಲಿಗೆ ಸಮೀಪ ಇರುವ ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಿಂದ ಬರುವ ರಸ್ತೆಗಳಲ್ಲಿ ರೈತರನ್ನು ತಡೆದಿದ್ದಾರೆ.
ಸೋಮವಾರ ಗುರುನಾನಕ್ ಅವರ ಜಯಂತಿ. ಸಿಖ್ ಸಮುದಾಯದ ಪುಣ್ಯದಿನ. ಸಿಖ್ ರಿಗೆ ಪ್ರಮುಖ ಹಬ್ಬ. ಆದರೂ ಪ್ರತಿಭಟನೆಯನ್ನು ಕೈಬಿಡದ ಪಂಜಾಬ್ ಮತ್ತು ಹರಿಯಾಣದ ರೈತರು ಹರಿಯಾಣದಿಂದ ದೆಹಲಿ ಪ್ರವೇಶಿಸುವ ಸಿಂಘು ಗಡಿ ಪ್ರದೇಶದಿಂದಲೇ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಿಂಘು ಗಡಿಯನ್ನು ಬಂದ್ ಮಾಡಿರುವ ಪೊಲೀಸರು ಅಲ್ಲಿನ ಸಂಚಾರ ವ್ಯವಸ್ಥೆಯನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಇದಲ್ಲದೆ ತಿಕ್ರಿ ಗಡಿ ಪ್ರದೇಶದಲ್ಲೂ ಸಂಚಾರ ವ್ಯವಸ್ಥೆಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.
ಬುರಾರಿಯ ನಿರಂಕರಿ ಸಂಗಮ್ ಮೈದಾನದಲ್ಲಿ ಜಮಾವಣೆ ಆಗಿರುವ ಸಾವಿರಾರು ರೈತರು ಅಲ್ಲೇ ಅಡುಗೆ ಮಾಡಿಕೊಂಡು ತಮ್ಮ ಬೇಡಿಕೆ ಈಡೇರುವವರೆಗೆ ವಾಪಸ್ ಹೋಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ದೆಹಲಿಯಲ್ಲಿ ಎಲ್ಲಾ ಪ್ರವೇಶ ದ್ವಾರಗಳನ್ನು ನಿರ್ಬಂಧಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಆದುದರಿಂದ ಇಂದು ಕೇಂದ್ರ ಸರ್ಕಾರದ ಜೊತೆ ಮಾತಕತೆ ನಡೆಯುತ್ತಿದ್ದರೂ ಬುಧವಾರ ಪ್ರತಿಭಟನೆ ತೀವ್ರಗೊಳ್ಳುವ ಲಕ್ಷಣಗಳಿವೆ.
ಒಂದೆಡೆ ಕೇಂದ್ರ ಸರ್ಕಾರ ರೈತರನ್ನು ಮಾತುಕತೆಗೆ ಕರೆದಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಕೃಷಿ ಸುಧಾರಣೆಗಳು ರೈತರಿಗೆ ಭರಪೂರ ಅವಕಾಶವನ್ನು ನೀಡುತ್ತವೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಇಂದಿನ ಮಾತುಕತೆ ಏನಾಗುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.