ನವಂಬರ್ 26ರ ರೈತ-ಕಾರ್ಮಿಕರ ಸಾರ್ವತ್ರಿಕ ಮುಷ್ಕರ ಎರಡು ನೆಲೆಗಳಲ್ಲಿ ಮಹತ್ವ ಪಡೆಯುತ್ತದೆ. ಮೊದಲನೆಯದು ಮುಷ್ಕರಕ್ಕೆ ದೊರೆತ ಅಭೂತಪೂರ್ವ ಸ್ಪಂದನೆ ಮತ್ತು ರೈತ ಕಾರ್ಮಿಕರ, ಶ್ರಮಜೀವಿಗಳ ಹುರುಪು ಹಾಗೂ ಉತ್ಸಾಹ. ಎರಡನೆಯದು ನೊಂದ ಶ್ರಮಿಕರ ಮನದಾಳವನ್ನು ಗ್ರಹಿಸಲಾಗದ ಆಳುವವರ ಕ್ರೌರ್ಯ ಮತ್ತು ದಬ್ಬಾಳಿಕೆ. ಆರು ವರ್ಷಗಳ ದಮನಕಾರಿ ಆಡಳಿತ ನೀತಿಗಳ ಹೊರತಾಗಿಯೂ ಭಾರತದಲ್ಲಿ ಇನ್ನೂ ಪ್ರತಿರೋಧದ ದನಿ ಜೀವಂತವಾಗಿದೆ ಎನ್ನುವುದು ಈ ಮುಷ್ಕರದಿಂದ ಸ್ಪಷ್ಟವಾಗಿದೆ. ಈ ದನಿಗೆ ದನಿಯಾಗಲು ಈ ದೇಶದ ಹಿತವಲಯದ ಮಧ್ಯಮ ವರ್ಗ ಮತ್ತೊಮ್ಮೆ ನಿರಾಕರಿಸಿದೆ. ಸ್ವಂತಿಕೆಯೇ ಇಲ್ಲದೆ ಮಾರಿಕೊಂಡಿರುವ ಮಾಧ್ಯಮಗಳು, ವಿಶೇಷವಾಗಿ ವಿದ್ಯುನ್ಮಾನ ಸುದ್ದಿಮನೆಗಳು ಮತ್ತೊಮ್ಮೆ ತಮ್ಮ ನಿಷ್ಕ್ರಿಯತೆ ಮತ್ತು ಅಸೂಕ್ಷ್ಮತೆಯನ್ನು ಪ್ರದರ್ಶಿಸಿವೆ. ಕನ್ನಡದ ಸುದ್ದಿಮನೆಗಳು ತಮ್ಮ ಸಾವನ್ನು ತಾವೇ ಘೋಷಿಸಿಕೊಂಡಿವೆ.
– ನಾ ದಿವಾಕರ
ತಮ್ಮ ಆಗ್ರಹಗಳೊಂದಿಗೆ, ಬೇಡಿಕೆಗಳೊಂದಿಗೆ, ಭವಿಷ್ಯದ ಆತಂಕಗಳನ್ನು ಹೊತ್ತು, ನಾಳಿನ ಚಿಂತೆಯ ಮೂಟೆಗಳನ್ನು ಹೊತ್ತು ದೇಶದ ರಾಜಧಾನಿಯತ್ತ ಕಾಲ್ನಡಿಗೆಯಲ್ಲಿ ಹೊರಟಿದ್ದ ಲಕ್ಷಾಂತರ ರೈತ ಬಾಂಧವರ ನಡಿಗೆಯನ್ನೇ ನಿರ್ಬಂಧಿಸಲು ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಕೈಗೊಂಡ ಪ್ರತಿಬಂಧಕ ಕ್ರಮಗಳನ್ನು ನೋಡಿದರೆ, ಭಾರತದ ಆಳುವ ವರ್ಗ ಪ್ರಜಾತಂತ್ರದ ಪೊರೆಯನ್ನು ಕಳಚಿ, ತನ್ನೊಳಗಿನ ಕ್ರೌರ್ಯವನ್ನು ಒಮ್ಮೆಲೆ ಹೊರಹಾಕಿರುವುದು ಸ್ಪಷ್ಟವಾಗುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ನೀತಿಗಳಿಂದ ನೊಂದ ಜನಸಾಮಾನ್ಯರ ನಾಡಿಮಿಡಿತವನ್ನು ಗ್ರಹಿಸಲಾಗದ ಒಂದು ದುರ್ಬಲ ವ್ಯವಸ್ಥೆಯಲ್ಲಿ ನಾವಿದ್ದೇವೆ. ಪರಿಸ್ಥಿತಿಯನ್ನು ಎದುರಿಸಲಾಗದ ದೌರ್ಬಲ್ಯವೇ ಹಿಂಸೆ ಮತ್ತು ಕ್ರೌರ್ಯದ ಪ್ರಥಮ ಸೋಪಾನವಾಗುತ್ತದೆ.
ಯುದ್ಧದಿಂದ ವಿಮುಖರಾಗುವವರೆಲ್ಲರೂ ಹೇಡಿಗಳಾಗುವುದಿಲ್ಲ. ಸಾವು ನೋವುಗಳನ್ನು ತಪ್ಪಿಸುವ ಉದ್ದೇಶದಿಂದಲೂ ಯುದ್ಧ ನಿರಾಕರಿಸಬಹುದು, ಮಹಾಭಾರತದ ಅರ್ಜುನನಂತೆ. ಆದರೆ ಎದುರಾಗಿರುವ ಸಮಸ್ಯೆಯನ್ನು ಚರ್ಚಿಸಲು ಹಿಂಜರಿಯುವವರು ಹೇಡಿಗಳೆನಿಸಿಕೊಳ್ಳುತ್ತಾರೆ. ತಡವಾಗಿ ಮಾತುಕತೆಗೆ ಆಹ್ವಾನಿಸಿದರೂ, ಕೇಂದ್ರ ಬಿಜೆಪಿ ಸರ್ಕಾರ ಈ ಹೇಡಿತನವನ್ನು ಪ್ರದರ್ಶಿಸಿದೆ. ರೈತರ ನಡಿಗೆಯನ್ನು ತಡೆಗಟ್ಟಲು ಮುಳ್ಳು ತಂತಿ, ಹೆಬ್ಬಂಡೆ, ಜೆಸಿಬಿ, ಮರಳು ತುಂಬಿದ ಲಾರಿಗಳು, ಸಾವಿರಾರು ಪೊಲೀಸರು, ಜಲಫಿರಂಗಿಗಳು, ಅಶ್ರುವಾಯು ಬಳಸಿರುವುದೇ ಅಲ್ಲದೆ ಹರ್ಯಾಣ ಸರ್ಕಾರ ಸುಸ್ಥಿತಿಯಲ್ಲಿದ್ದ ಹೆದ್ದಾರಿಯಲ್ಲೇ ಕಂದಕವನ್ನು ತೋಡಿದೆ. ರೈತ ಸಮುದಾಯ ಇದಾವುದಕ್ಕೂ ಜಗ್ಗದೆ ಮುನ್ನಡೆದಾಗ ಅವರಲ್ಲಿ ಉಗ್ರವಾದಿಗಳಿದ್ದಾರೆ ಎಂಬ ಆರೋಪ ಹರ್ಯಾಣ ಸರ್ಕಾರದಿಂದ ಕೇಳಿಬರುತ್ತಿದೆ. ಜಲಫಿರಂಗಿಯನ್ನು ನಿಲ್ಲಿಸಲು ಯತ್ನಿಸಿದ ಯುವಕನೊಬ್ಬನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.
ಇದೇನೂ ಅಚ್ಚರಿಯ ಬೆಳವಣಿಗೆಯಲ್ಲ. ದೆಹಲಿ ಗಲಭೆಗಳ ಸಂದರ್ಭದಲ್ಲೇ ಈ ರೀತಿಯ ಹುನ್ನಾರಗಳನ್ನು ಕಂಡಿದ್ದಾಗಿದೆ. ರಾಜಕೀಯ ವಿರೋಧಿ-ಕಿಡಿಗೇಡಿಗಳು-ಸಮಾಜ ಘಾತುಕರು-ಉಗ್ರರು- ನಗರ ನಕ್ಸಲರು- ಭಯೋತ್ಪಾದಕರು ಈ ಶ್ರೇಣೀಕೃತ ಶಂಕಿತರನ್ನು ಎಲ್ಲ ಪ್ರಭುತ್ವ ವಿರೋಧಿ ಹೋರಾಟಗಳಲ್ಲೂ ಗುರುತಿಸುವ ವ್ಯವಸ್ಥಿತ ಜಾಲವನ್ನು ಗಮನಿಸುತ್ತಲೇ ಇದ್ದೇವೆ. ಬಂಡವಾಳಶಾಹಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಭುತ್ವ ನೊಂದ ಜನಸಮುದಾಯದ ಆಕ್ರೋಶವನ್ನು ಎದುರಿಸಲು ಅಶಕ್ತವಾದಾಗ ಈ ರೀತಿಯ ಭೂತಗಳನ್ನು ಸೃಷ್ಟಿಸಲಾಗುತ್ತದೆ. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲೇ ಇದನ್ನು ಕಂಡಿದ್ದೇವೆ. ಮೋದಿ ಸರ್ಕಾರ ಹೊಸ ಮಾದರಿಗಳನ್ನು ಅನುಸರಿಸುತ್ತಿದೆ.
ಅದರೆ ಸರ್ಕಾರದ ಈ ಹೇಡಿತನದ ಪ್ರತಿಕ್ರಿಯೆಯೇ ಪ್ರಸ್ತುತ ಹೋರಾಟದ ಯಶಸ್ಸಿನ ಒಂದು ಭಾಗ ಎಂದು ಹೇಳಬಹುದು. ರೈತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ದೇಶದ ರಾಜಧಾನಿಯತ್ತ ಕಾಲ್ನಡಿಗೆಯಲ್ಲಿ ಹೊರಟಿರುವುದು ಇದೇ ಮೊದಲೇನಲ್ಲ. 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈವರೆಗೂ ದೇಶಾದ್ಯಂತ 13 ಸಾವಿರ ರೈತ ಪ್ರತಿಭಟನೆಗಳು ನಡೆದಿವೆ. 2018ರಲ್ಲೂ ಒಂದು ಲಕ್ಷಕ್ಕೂ ಹೆಚ್ಚು ರೈತರು ದೆಹಲಿಗೆ ಕಾಲ್ನಡಿಗೆಯಲ್ಲಿ ಹೋಗಿದ್ದರು. ದಕ್ಷಿಣ ಭಾರತದ ರೈತರು ದೆಹಲಿಯಲ್ಲಿ ಅರೆನಗ್ನ ಪ್ರದರ್ಶನ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ವಿಭಿನ್ನ ನೆಲೆಗಳ, ವಿಭಿನ್ನ ತತ್ವ ಸಿದ್ಧಾಂತಗಳ 23 ರೈತ ಸಂಘಟನೆಗಳು ಪಾಲ್ಗೊಂಡಿವೆ. ಎಲ್ಲವೂ ಎಡಪಂಥೀಯವಲ್ಲ. ಎಲ್ಲವೂ ಕಾಂಗ್ರೆಸ್ ಬೆಂಬಲಿತವೂ ಅಲ್ಲ. ಯಾರೂ ಖಲಿಸ್ತಾನಿಗಳೂ ಅಲ್ಲ.
ನವಂಬರ್ 26ರ ಸಾರ್ವತ್ರಿಕ ಮುಷ್ಕರ ಸಮಸ್ತ ಭಾರತೀಯ ಕಾರ್ಮಿಕರ ದೃಷ್ಟಿಯಿಂದ ಚಾರಿತ್ರಿಕವಾದುದು. ಕೃಷಿ, ಕೈಗಾರಿಕೆ, ಹಣಕಾಸು, ಸಾರಿಗೆ, ದೂರ ಸಂಪರ್ಕ ಹೀಗೆ ಅರ್ಥವ್ಯವಸ್ಥೆಯನ್ನು ಪೋಷಿಸುವ ,ಉಳಿಸಿ ಬೆಳೆಸುವ ಎಲ್ಲ ವಲಯಗಳನ್ನೂ ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸುವ ನವ ಉದಾರವಾದಿ ನೀತಿಗಳ ವಿರುದ್ಧ ಈ ದೇಶದ ಕಾರ್ಮಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುವುದು ಸಹಜ. ಏಕೆಂದರೆ 44 ವಿವಿಧ ಕಾರ್ಮಿಕ ಕಾನೂನುಗಳನ್ನು ಕ್ರೋಢೀಕರಿಸಿ ನಾಲ್ಕು ಸಂಹಿತೆಗಳನ್ನು ರೂಪಿಸಲಾಗಿದ್ದು ಕಾರ್ಮಿಕರ ಎಲ್ಲ ಹಕ್ಕುಗಳನ್ನೂ ಕಸಿದುಕೊಳ್ಳಲಾಗುತ್ತಿದೆ. ಈಗಾಗಲೇ ದಿನಕ್ಕೆ 12 ಗಂಟೆಯ ದುಡಿಮೆಗೆ ಅವಕಾಶವನ್ನು ನೀಡಲಾಗಿದ್ದು ಶತಮಾನಗಳ ಹೋರಾಟದಿಂದ ಪಡೆದ ಹಕ್ಕುಗಳನ್ನು ನೆಲಸಮ ಮಾಡಲಾಗುತ್ತಿದೆ.
ಈ ರೈತರ ಆಕ್ರೋಶ ಇರುವುದು ಕೇಂದ್ರ ಸರ್ಕಾರದ ಕೃಷಿ ನೀತಿಯ ವಿರುದ್ಧ, ಕೃಷಿ ಮಾರುಕಟ್ಟೆ ವಿರುದ್ಧ ಮತ್ತು ಕಾರ್ಪೋರೇಟ್ ಉದ್ಯಮಿಗಳಿಗೆ ಕೃಷಿ ಕ್ಷೇತ್ರದಲ್ಲಿ ಅನಿಯಂತ್ರಿತ ಅವಕಾಶ ನೀಡುವ ರೈತ ವಿರೋಧಿ ನೀತಿಗಳ ವಿರುದ್ಧ. ಹಾಗೆ ನೋಡಿದರೆ ಭಾರತದಲ್ಲಿ ಕೃಷಿ ಬಿಕ್ಕಟ್ಟು ಆರಂಭವಾಗಿ ಮೂರು ದಶಕಗಳೇ ಕಳೆದಿವೆ. ಲಕ್ಷಾಂತರ ರೈತರು ಹೊಸ ಆರ್ಥಿಕ ನೀತಿಗಳ ಪ್ರಹಾರಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗಿದೆ ಎನ್ನುವುದಕ್ಕಿಂತಲೂ ಇದು ಸಹಜ ಪ್ರಕ್ರಿಯೆಯಂತೆ ಕಾಣುತ್ತಿದೆ ಎನ್ನಬಹುದು. ಏಕೆಂದರೆ ಭಾರತದ ಮಾಧ್ಯಮಗಳು ಇಂತಹ ವಿದ್ಯಮಾನಗಳನ್ನು ವರದಿ ಮಾಡುವ ಸ್ವಂತಿಕೆಯನ್ನೂ ಕಳೆದುಕೊಂಡಿವೆ. ಆಳುವ ವರ್ಗಗಳ ದೃಷ್ಟಿಯಲ್ಲಿ ರೈತರ ಆತ್ಮಹತ್ಯೆ ಒಂದು ಸಮಸ್ಯೆಯಾಗಿ ಉಳಿದಿಲ್ಲ.
ರೈತರ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಏಕೆಂದರೆ ಇದು ಅವರ ಅಳಿವು ಉಳಿವಿನ ಪ್ರಶ್ನೆ. ಭೂಮಿಯಿಂದ ಪ್ರತ್ಯೇಕಿಸಲ್ಪಟ್ಟ ಕೃಷಿಕನಿಗೆ ಅಸ್ಮಿತೆಯೂ ಇರುವುದಿಲ್ಲ, ಅಸ್ತಿತ್ವವೂ ಇರುವುದಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕೃಷಿ ನೀತಿಗಳು ಭೂಮಿಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ಪರಭಾರೆ ಮಾಡಲು ನೆರವಾಗುತ್ತವೆ. ರೈತರನ್ನು ಈ ಉದ್ಯಮಿಗಳ ಅಡಿಯಾಳುಗಳನ್ನಾಗಿ ಮಾಡುತ್ತವೆ. ತಾನು ಬೆಳೆದ ಫಸಲನ್ನು ತನ್ನಿಚ್ಚೆಯಂತೆ ಮಾರಾಟ ಮಾಡುವ ಹಕ್ಕನ್ನು ರೈತ ಕ್ರಮೇಣ ಕಳೆದುಕೊಳ್ಳುತ್ತಾನೆ. ತಮ್ಮದೇ ಭೂಮಿಯಲ್ಲಿ ಏನು ಬೆಳೆಯಬೇಕು ಎನ್ನುವುದನ್ನು ಒಬ್ಬ ಶ್ರೀಮಂತ ಉದ್ಯಮಿ ನಿರ್ಧರಿಸುವ ದಿನಗಳನ್ನು ರೈತರು ನೋಡಲಿದ್ದಾರೆ.
ಭಾರತದ ಸಂದರ್ಭದಲ್ಲಿ ಕೃಷಿ ಸಮಸ್ಯೆ ಎಂದರೆ ಕೇವಲ ತಮ್ಮ ಸ್ವಂತ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ ಸಂಬಂಧಿಸುವುದಿಲ್ಲ. ನೂರಾರು ಎಕರೆ ಎಸ್ಟೇಟ್ ಹೊಂದಿರುವ ಶ್ರೀಮಂತ ಭೂಮಾಲೀಕರಿಂದ ಭೂಹೀನರು, ಗೇಣಿದಾರರು, ಕೃಷಿ ಕಾರ್ಮಿಕರವರೆಗೂ ರೈತಾಪಿಯ ವ್ಯಾಪ್ತಿ ವಿಸ್ತರಿಸುತ್ತದೆ. ಹೊಸ ಕೃಷಿ ಮಸೂದೆ ಎಲ್ಲ ವರ್ಗದ ರೈತರನ್ನೂ ಬಾಧಿಸುತ್ತದೆ. ಆದರೆ ಶ್ರೀಮಂತ ಭೂಮಾಲೀಕರು ಉದ್ಯಮಿಗಳೊಡನೆ ರಾಜಿ ಮಾಡಿಕೊಳ್ಳುತ್ತಾರೆ. ಅಲ್ಲಿ ಬಂಡವಾಳ ನೇರವಾಗಿ ತನ್ನ ಕಾರ್ಯ ಸಾಧಿಸುತ್ತದೆ. ಆದರೆ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಕೃಷಿಯನ್ನೇ ಅವಲಂಬಿಸುವ ಲಕ್ಷಾಂತರ ರೈತರು ಈ ಮಸೂದೆಗಳಿಂದ ಬೀದಿಪಾಲಾಗುತ್ತಾರೆ, ತಮ್ಮ ನೆಲೆಯನ್ನು ಕಳೆದುಕೊಳ್ಳಲಿದ್ದಾರೆ. ಇಂಥವರ ಸಂಖ್ಯೆ ಮತ್ತು ಪ್ರಮಾಣ ಭಾರತದಲ್ಲಿ ಹೆಚ್ಚಾಗಿದೆ.
ರೈತರು ತಾವು ಬೆಳೆದ ಫಸಲನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಸರ್ವಸ್ವತಂತ್ರರಾಗುತ್ತಾರೆ, ದಲ್ಲಾಳಿಗಳಿಂದ ಮುಕ್ತಿ ಪಡೆಯುತ್ತಾರೆ ಎನ್ನುವ ಸರ್ಕಾರದ ವಾದ ಅರ್ಧಸತ್ಯವನ್ನು ಹೇಳುತ್ತದೆ. ಇದು ಕಾರ್ಪೋರೇಟ್ ದಲ್ಲಾಳಿಗಳಿಗೆ ಕೃಷಿ ಮಾರುಕಟ್ಟೆಯನ್ನು ಒಪ್ಪಿಸುವ ಒಂದು ಹುನ್ನಾರ ಎನ್ನುವುದನ್ನು ನಾವು ಗ್ರಹಿಸಬೇಕಿದೆ. ದೆಹಲಿಯಲ್ಲಿ ನೆರೆದಿರುವ 23 ರೈತ ಸಂಘಟನೆಗಳ ಲಕ್ಷಾಂತರ ರೈತರ ಆತಂಕ ಇರುವುದು ಇಲ್ಲಿಯೇ. ಈ ಅಪಾಯವನ್ನು ಅರಿತೇ ರೈತ ಸಂಘಟನೆಗಳು ಮಸೂದೆಯನ್ನು ಹಿಂಪಡೆಯಲು ಆಗ್ರಹಿಸುತ್ತಿವೆ. ಪೊಲೀಸ್ ಮತ್ತು ಅರೆಸೇನಾ ಪಡೆಗಳ ಮೂಲಕ ರೈತರ ನಡಿಗೆಯನ್ನು ತಡೆಗಟ್ಟಲಾಗದು ಎಂಬ ವಾಸ್ತವವನ್ನು ಅರಿತು ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ.
ಇಂದಿನ ಸನ್ನಿವೇಶದಲ್ಲಿ ನಾವು ಗಮನಿಸಬೇಕಿರುವುದು ಪ್ರಭುತ್ವದ ಕ್ರೌರ್ಯ ಮತ್ತು ಹಿಂಸಾತ್ಮಕ ಧೋರಣೆಯನ್ನು. ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಚುನಾಯಿತ ಸರ್ಕಾರ ಏಕೆ ತನ್ನದೇ ಪ್ರಜೆಗಳ ಆಗ್ರಹಗಳನ್ನು ಶಾಂತಚಿತ್ತತೆಯಿಂದ ಆಲಿಸಲು ಆಗುತ್ತಿಲ್ಲ. ಇದು ಹೊಸ ವಿದ್ಯಮಾನವೇನಲ್ಲ. ನಮ್ಮ ದೇಶದಲ್ಲಿ ಯಾವುದೇ ಕೊಲೆ, ದರೋಡೆ, ಸಂಚು, ಕಳ್ಳಸಾಗಾಣಿಕೆ ಮಾಡದ ಅನೇಕ ಹೋರಾಟಗಾರರು ಆಡಳಿತ ವ್ಯವಸ್ಥೆಯೊಳಗಿನ ವ್ಯವಸ್ಥಿತ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. 1960ರ ದಶಕದಿಂದ ಇಂದಿನವರೆಗಿನ ಸ್ವತಂತ್ರ ಭಾರತದ ಇತಿಹಾಸವನ್ನು ಒಮ್ಮೆ ಗಮನಿಸಿದರೆ ಇಂತಹ ಹಲವು ನಿದರ್ಶನಗಳು ಕಂಡುಬರುತ್ತವೆ. ಛತ್ತಿಸ್‍ಘಡದ ಕಾರ್ಮಿಕ ನಾಯಕ ಶಂಕರ್ ಗುಹಾ ನಿಯೋಗಿ, ದೆಹಲಿಯ ರಂಗಕರ್ಮಿ ಮತ್ತು ಹೋರಾಟಗಾರ ಸಫ್ದರ್ ಹಾಶ್ಮಿ, ಸಾಕೇತ್ ರಾಜನ್, ಇತ್ತೀಚಿನ ದಿನಗಳಲ್ಲಿ ಕಲಬುರ್ಗಿ, ಧಬೋಲ್ಕರ್, ಪನ್ಸಾರೆ, ಗೌರಿ ಲಂಕೇಶ್ ಹೀಗೆ ಜನಸಾಮಾನ್ಯರಲ್ಲಿ, ದುಡಿಯುವ ವರ್ಗಗಳಲ್ಲಿ ಜಾಗೃತಿ ಮೂಡಿಸಲು ಯತ್ನಿಸುವ ಅನೇಕರು ಹಿಂಸೆಗೆ ಬಲಿಯಾಗಿದ್ದಾರೆ.
ದೆಹಲಿಯಲ್ಲಿ ನೆರೆದಿರುವ ರೈತರು ತಮ್ಮ ಸಮಸ್ಯೆಗಳನ್ನು ಹೊತ್ತು ತಂದವರು, ತಮ್ಮ ಭವಿಷ್ಯದ ಆತಂಕಗಳನ್ನು ನಿವಾರಿಸಲು ಕೋರಿ ಬಂದವರು. ಇವರು ಶಸ್ತ್ರಧಾರಿಗಳಲ್ಲ. ಕೋವಿ, ಕತ್ತಿ ಗುರಾಣಿ ಹಿಡಿದು ಬಂದವರಲ್ಲ. ಅಥವಾ ಲಕ್ಷಾಂತರ ರೈತರು ದೆಹಲಿಯಲ್ಲಿ ನೆರೆದಿರುವಾಗ ಅತ್ತ ಕೃಷಿ ಭೂಮಿಯಲ್ಲಿ ಚಟುವಟಿಕೆ ನಿಲ್ಲುವುದೂ ಇಲ್ಲ. ಅವರ ಕುಟುಂಬದವರು ದೇಶದ ಸಮಸ್ತ ಜನತೆಗೆ ಬೇಕಾದ ಆಹಾರವನ್ನು ಬೆಳೆಯುತ್ತಲೇ ಇರುತ್ತಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಶಾಂತಿಯುತವಾಗಿ ಹೋರಾಡಲು ಮುಂದಾಗಿರುವ ರೈತಾಪಿಯ ಮೇಲೆ ಲಾಠಿ ಪ್ರಹಾರ, ಅಶ್ರುವಾಯು, ಜಲಫಿರಂಗಿ ಪ್ರಯೋಗ ಮಾಡುವುದು ಅಮಾನುಷ ಪ್ರವೃತ್ತಿಯಲ್ಲವೇ ? ಹರ್ಯಾಣ ದೆಹಲಿ ಗಡಿ ಪ್ರದೇಶದಲ್ಲಿ ಒಬ್ಬ ವೃದ್ಧ ರೈತನ ಕಣ್ಣಿನ ಮೇಲೆ ಲಾಠಿ ಏಟು ಬಿದ್ದಿರುವ ಚಿತ್ರಗಳು ಹರಿದಾಡುತ್ತಿರುವುದನ್ನು ನೋಡಿದಾಗ ಮನುಷ್ಯತ್ವ ಇದ್ದವರಿಗೆ ಮನಸು ವಿಚಲಿತವಾಗಲೇಬೇಕು.
ಈ ರೈತಾಪಿಯಲ್ಲಿ ಉಗ್ರಗಾಮಿಗಳನ್ನು ಗುರುತಿಸುವ ಮಟ್ಟಿಗೆ ನಮ್ಮ ಸರ್ಕಾರಗಳು ನೈತಿಕತೆಯನ್ನು ಕಳೆದುಕೊಂಡಿವೆ. ಕರ್ನಾಟಕದ ಬಿಜೆಪಿ ನಾಯಕ ಸಿ ಟಿ ರವಿಯವರಿಗೆ ಇವರು ಕಾಂಗ್ರೆಸ್ ರೈತರಂತೆ ಕಾಣುತ್ತಾರೆ. ಹರ್ಯಾಣ ಮುಖ್ಯಮಂತ್ರಿಗೆ ಇವರಲ್ಲಿ ಖಲಿಸ್ತಾನಿಗಳು ಕಾಣುತ್ತಾರೆ. ಈ ದೇಶದ ಪ್ರಧಾನಮಂತ್ರಿಯವರಿಗೆ ಇವರು ಕಾಣುವುದೇ ಇಲ್ಲ. ಏಕೆಂದರೆ ತಿಂಗಳಿಗೊಮ್ಮೆ ದೇಶದ ಸಮಸ್ತ ಜನರನ್ನು ಉದ್ದೇಶಿಸಿ ಮನದ ಮಾತುಗಳನ್ನಾಡುವ ಪ್ರಧಾನಿಯವರಲ್ಲಿ ಈ ರೈತ ಸಮುದಾಯಕ್ಕೆ ಸಾಂತ್ವನ ಹೇಳುವ ವ್ಯವಧಾನವೂ ಉಳಿದಿಲ್ಲ. ಈ ಬೌದ್ಧಿಕ ಹಿಂಸಾ ಪ್ರವೃತ್ತಿಗೂ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಲಾಠಿ ಪ್ರಹಾರದ ಹಿಂಸೆಗೂ ವ್ಯತ್ಯಾಸವೇನಿದೆ ?
ಯಾವುದೇ ಸಮಾಜದಲ್ಲಿ, ಎಂತಹುದೇ ಕ್ರಾಂತಿಕಾರಿ ಹೋರಾಟಗಳ ಸಂದರ್ಭದಲ್ಲೂ ಗಮನಿಸಬೇಕಾದ ಒಂದು ಅಂಶ ಏನೆಂದರೆ, ರೈತಾಪಿ ಮತ್ತು ಶ್ರಮಿಕ ವರ್ಗಗಳು ತಮ್ಮ ಹಕ್ಕುಗಳಿಗಾಗಿ ಎಷ್ಟೇ ಸುದೀರ್ಘ ಹೋರಾಟ ನಡೆಸಿದರೂ ಉತ್ಪಾದನೆಯ ಪ್ರಕ್ರಿಯೆ ಸ್ಥಗಿತಗೊಳ್ಳುವುದಿಲ್ಲ. ಅಥವಾ ನಮ್ಮ ಬೇಡಿಕೆ ಈಡೇರಿಸದಿದ್ದರೆ ನಾವು ಕೃಷಿ ಚಟುವಟಿಕೆಯನ್ನೇ ಸ್ಥಗಿತಗೊಳಿಸುತ್ತೇವೆ ಎಂದು ಯಾವ ರೈತನೂ ಹೇಳುವುದಿಲ್ಲ. ತನ್ನ ಬದುಕು ಅಸ್ಥಿರವಾಗುತ್ತಿದ್ದರೂ ಮತ್ತೊಬ್ಬರಿಗಾಗಿ ಅನ್ನ ಬೆಳೆಯುತ್ತಲೇ ಇರುತ್ತಾನೆ. ಒಂದು ವೇಳೆ ಭಾರತದ ಸಮಸ್ತ ರೈತರು ಆರು ತಿಂಗಳು ತಮ್ಮ ಕೃಷಿ ಚಟುವಟಿಕೆ ಸ್ಥಗಿತಗೊಳಿಸಿದರೆ ಏನಾಗಬಹುದು ?
ಆದರೆ ಶ್ರಮಿಕರಲ್ಲಿ ಈ ರೀತಿಯ ಕ್ರೌರ್ಯ ಇರುವುದಿಲ್ಲ ಏಕೆಂದರೆ ಅವರಲ್ಲಿ ದುಡಿದು ತಿನ್ನುವ ಕ್ಷಮತೆ ಇರುತ್ತದೆ. ತಮ್ಮ ಬೇಡಿಕೆಗಳನ್ನು ಮಂಡಿಸಿ ನ್ಯಾಯ ಪಡೆಯಲು ಯತ್ನಿಸುತ್ತಾರೆ. ಕಾರ್ಮಿಕರಲ್ಲೂ ಇದೇ ಪ್ರವೃತ್ತಿಯನ್ನು ಕಾಣಬಹುದು. ಕಾರ್ಖಾನೆಗಳಲ್ಲಿ ಮುಷ್ಕರ ನಡೆದಾಗ ಉತ್ಪಾದನೆ ಸ್ಥಗಿತಗೊಂಡರೂ, ಪುನಾರಂಭವಾದ ನಂತರ ಉದ್ದೇಶಿದ ಉತ್ಪಾದನೆಯ ಗುರಿಯನ್ನು ತಲುಪಲು ಹಗಲು ರಾತ್ರಿ ದುಡಿಯುತ್ತಾರೆ. ಇದು ಶ್ರಮಿಕ ವರ್ಗದ ಔದಾರ್ಯ ಮತ್ತು ಮೂಲಭೂತ ಲಕ್ಷಣ. ಏಕೆಂದರೆ ಬಂಡವಾಳ ವ್ಯವಸ್ಥೆಯಲ್ಲಿ ಅವರ ಶ್ರಮವನ್ನು ಮಾರಾಟ ಮಾಡಿದರೆ ಮಾತ್ರ ಶ್ರಮಿಕರಿಗೆ ಬದುಕಲು ಸಾಧ್ಯ. ಆದರೆ ರೈತಾಪಿ ಮತ್ತು ಶ್ರಮಜೀವಿ ವರ್ಗದ ಬದುಕು ಅನಿಶ್ಚಿತತೆಗೆ ಒಳಗಾದಾಗ, ಭವಿಷ್ಯದ ಚಿಂತೆ ಕಾಡತೊಡಗಿದಾಗ, ತಮ್ಮ ಅಸ್ತಿತ್ವವೇ ಅಲುಗಾಡಿದಂತಾದಾಗ ಈ ವರ್ಗದ ಜನತೆಯ ಆಕ್ರೋಶ ಹೊರಹೊಮ್ಮುತ್ತದೆ. ಇದನ್ನು ನಿರ್ವಹಿಸುವ, ನಿವಾರಿಸುವ, ಪರಿಹಾರದ ಮಾರ್ಗಗಳನ್ನು ಗುರುತಿಸುವ ಹೊಣೆ ಒಂದು ಪ್ರಜಾತಂತ್ರ ವ್ಯವಸ್ಥೆಯ ಮೇಲಿರುತ್ತದೆ.
ಇಂದು ದೆಹಲಿಯಲ್ಲಿ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ನೋಡಿದರೆ ಭಾರತದ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ ತನ್ನ ಹೊಣೆಯನ್ನು ಮರೆತಿದೆ ಎನಿಸುತ್ತದೆ. ಪ್ರಭುತ್ವದ, ಆಳುವ ವರ್ಗಗಳ ಈ ಕ್ರೌರ್ಯದ ವಿರುದ್ಧ ದೇಶದ ಸಮಸ್ತ ನಾಗರಿಕರೂ ದನಿ ಎತ್ತಬೇಕಿದೆ. ನೊಂದ ದನಿಗಳಿಗೆ ದನಿಗೂಡಿಸಬೇಕಿದೆ. ಇಂದು ರೈತ ಕಾರ್ಮಿಕರು, ನಾಳೆ ವಿದ್ಯಾರ್ಥಿ ಯುವಜನರು ಮತ್ತೊಂದು ದಿನ ಸಣ್ಣ ವ್ಯಾಪಾರಿಗಳು. ಇದು ಇತಿಹಾಸ ಕಲಿಸಿರುವ ಪಾಠ ಎನ್ನುವುದನ್ನು ನಾವು ಮರೆಯುವಂತಿಲ್ಲ. ಈ ದೇಶ ನಮ್ಮೆಲ್ಲರಿಗೆ ಸೇರಿದ್ದು ಎನ್ನುವುದಾದರೆ ಈ ಹೋರಾಟಗಾರರ ಸಮಸ್ಯೆಯೂ ನಮ್ಮೆಲ್ಲರದೂ ಆಗಿರಬೇಕಲ್ಲವೇ ? ಪ್ರತಿಯೊಂದು ಕಾಳನ್ನು ಅರಗಿಸಿಕೊಳ್ಳುವಾಗಲೂ ಕಣ್ಣಿಗೆ ಏಟು ತಿಂದಿರುವ ವೃದ್ಧ ರೈತ ನಮಗೆ ನೆನಪಾಗಬೇಕಲ್ಲವೇ ?
ತನ್ನ ಸಂಗಾತಿಗಳ ಮೇಲೆ ಲಾಠಿ ಪ್ರಹಾರ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕುಡಿಯಲು ನೀರು ಕೊಡುತ್ತಿರುವ ರೈತನ ಚಿತ್ರವೂ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಇದು ಶ್ರಮಿಕರ ನೈಜ ಗುಣ. ಆದರೆ ಇದು ದೌರ್ಬಲ್ಯವಲ್ಲ. ಈ ಶ್ರಮಿಕರ ದನಿಯನ್ನು ಆಲಿಸಲೂ ಒಪ್ಪದೆ ಅವರ ಮೇಲೆ ಕ್ರೂರ ದಬ್ಬಾಳಿಕೆ ನಡೆಸುವ ಪ್ರಭುತ್ವದ ನಡೆ ದೌರ್ಬಲ್ಯದ ಲಕ್ಷಣ. ಹೇಡಿತನದ ಲಕ್ಷಣ. ಇದು ಖಂಡನಾರ್ಹ. ಹಿತವಲಯದಲ್ಲಿರುವ ಈ ದೇಶದ ಪ್ರಜ್ಞಾವಂತ ನಾಗರಿಕರು ಇಷ್ಟಾದರೂ ಸೂಕ್ಷ್ಮವನ್ನು ಗ್ರಹಿಸುವಂತಾದರೆ ನಮ್ಮ ದೇಶದಲ್ಲಿ ಪ್ರಜಾತಂತ್ರ ಉಳಿಯಲು ಸಾಧ್ಯ. ಅಸ್ಮಿತೆಗಳಿಂದಾಚೆಗೆ, ಅಸ್ತಿತ್ವದ ನೆಲೆಗಳಿಂದಾಚೆಗೆ ಒಂದು ಜಗತ್ತು ಇದೆ ಎನ್ನುವುದಾದರೆ ಅದು ಈ ಹೋರಾಟಗಳ ನಡುವೆ ಕಾಣಬೇಕಲ್ಲವೇ