- ಹೊಸದಿಲ್ಲಿಯ ಬುರಾರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ
ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಹಲವು ಅಡೆತಡೆಗಳ ಮಧ್ಯೆಯೂ ಪಂಜಾಬ್, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ರೈತರು ದಿಲ್ಲಿ ಚಲೋ ಅಂಗವಾಗಿ ದೆಹಲಿ ತಲುಪಿದ್ದಾರೆ.
ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಸರಕಾರ, ಈಗ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಪ್ರವೇಶಿಸಲು ಅನುಮತಿ ನೀಡಿದೆ. ರೈತರು ಹೊಸದಿಲ್ಲಿ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಹೊಸದಿಲ್ಲಿಯ ಬುರಾರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ.
ರೈತರು ಪ್ರವೇಶ ಪಡೆದ ನಂತರ ಪೊಲೀಸರ ಜತೆಯಲ್ಲಿಯೇ ಮೆರವಣಿಗೆ ಸಾಗಬೇಕು ಎಂದು ತಿಳಿಸಲಾಗಿದೆ. ರೈತರು ಗುರುವಾರವೇ ದೆಹಲಿ ಪ್ರವೇಶಿಸಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಇರುವ ಹರಿಯಾಣದಲ್ಲಿ ಗಡಿಭಾಗದಲ್ಲೇ ಪೊಲೀಸರು ತಡೆಯೊಡ್ಡಿದ್ದರು. ಗಡಿ ರಸ್ತೆಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನ ಉರುಳಿಸಿ ಸಾಗಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಜಲಫಿರಂಗಿ (ವಾಟರ್ ಕ್ಯಾನಾನ್), ಟಿಯರ್ ಗ್ಯಾಸ್ ಶೆಲ್ಗಳನ್ನ ಸಿಡಿಸಿ ಚದುರಿಸಲು ಯತ್ನಿಸಲಾಗಿತ್ತು. ಆದರೂ ಪಂಜಾಬ್ ರೈತರು ಹರಿಯಾಣ ಪ್ರವೇಶಿಸಿದ್ದರು. ದೆಹಲಿಗೆ ಸಮೀಪವಿರುವ ಹರಿಯಾಣದ ಪಾನಿಪತ್ ಪಟ್ಟಣದಲ್ಲಿ ನಿನ್ನೆ ರಾತ್ರಿ ತಂಗಿದ್ದ ಪಂಜಾಬ್ ರೈತರು ಇವತ್ತು ತಮ್ಮ ಮೆರವಣಿಗೆ ಮುಂದುವರಿಸಿದರು. ಅವರ ಜೊತೆಗೆ ಹರಿಯಾಣದ ರೈತರೂ ಸೇರಿಕೊಂಡ ಹಿನ್ನೆಲೆಯಲ್ಲಿ ರೈತರ ಹೋರಾಟದ ಶಕ್ತಿ ಇಮ್ಮಡಿಗೊಂಡಿದೆ.
ಇದನ್ನೂ ಓದಿ: ರೈತರ ತಡೆಯಲಾಗದ ಜಲಫಿರಂಗಿ, ಅಶ್ರುವಾಯು ಶೆಲ್, ಬ್ಯಾರಿಕೇಡ್ಗಳು
ಇನ್ನೂ ಅನೇಕ ರೈತರು ಪಂಜಾಬ್-ಹರಿಯಾಣದ ಗಡಿಭಾಗದುದ್ದಕ್ಕೂ ಜಮಾಯಿಸಿ ಧರಣಿ ಕೂಡ ನಡೆಸಿದ್ದಾರೆ. ಭಾರತಿ ಕಿಸಾನ್ ಯೂನಿಯನ್ನ ವಿವಿಧ ಬಣಗಳಿಗೆ ಸೇರಿದ ರೈತರು ಹರಿಯಾಣದ ದಾರಿ ಬಿಟ್ಟು ಬೇರೆ ಮಾರ್ಗಗಳ ಮೂಲಕ ದೆಹಲಿ ಪ್ರವೇಶ ಮಾಡುತ್ತಿದ್ಧಾರೆ. ಒಂದು ಅಂದಾಜಿನ ಪ್ರಕಾರ ಪಂಜಾಬ್ ಮತ್ತು ಹರಿಯಾಣ ಎರಡೂ ರಾಜ್ಯಗಳಿಂದ ಸುಮಾರು 3 ಲಕ್ಷ ರೈತರು ದೆಹಲಿಗೆ ದಾಂಗುಡಿ ಇಡುತ್ತಿದ್ದಾರೆ. ಯುನೈಟೆಡ್ ಫಾರ್ಮರ್ಸ್ ಫ್ರಂಟ್ ಎಂಬ ಅಖಿಲ ಭಾರತ ವೇದಿಕೆ ನಿರ್ಮಿಸಿದ್ದು, ಅದರಲ್ಲಿ 470ಕ್ಕೂ ಹೆಚ್ಚು ರೈತ ಸಂಘಟನೆಗಳಿವೆ. ಕೇಂದ್ರದ ಕೃಷಿ ಮಸೂದೆ ಕೈಬಿಡುವವರೆಗೂ ರೈತರು ದೆಹಲಿಯಲ್ಲಿ ಅನಿರ್ದಿಷ್ಟಾವಧಿಯವರೆಗೆ ಧರಣಿ ನಡೆಸಲು ಯೋಜಿಸಿದ್ದಾರೆ. ಹೀಗಾಗಿ, ಇವರು ದೆಹಲಿ ಪ್ರವೇಶಿಸದಂತೆ ತಡೆಯಲು ಸಕಲ ಪ್ರಯತ್ನಗಳು ನಡೆಯುತ್ತಿವೆ.
ಯಾಕೆ ರೈತರ ಆಕ್ರೋಶ? ಪಂಜಾಬ್ ಮತ್ತು ಹರಿಯಾಣ ಭಾಗದಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆ ಅತಿ ಹೆಚ್ಚು ಚಾಲ್ತಿಯಲ್ಲಿದೆ. ಈ ಎಂಎಸ್ಪಿಯೇ ಇಲ್ಲಿನ ರೈತರ ಜೀವನಾಧಾರ ಎಂಬಂತಾಗಿದೆ. ಕೇಂದ್ರ ರೂಪಿಸಿರುವ ನೂತನ ಕೃಷಿ ಕಾಯ್ದೆಯಲ್ಲಿ ಎಂಎಸ್ಪಿಯನ್ನು ಉಳಿಸಿಕೊಳ್ಳುವ ಪ್ರಸ್ತಾಪ ಇಲ್ಲ. ಇದು ಎಂಎಸ್ಪಿಯನ್ನು ರದ್ದುಗೊಳಿಸಿ ರೈತರನ್ನು ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿಸುವ ಸಂಚು ಎಂಬುದು ರೈತರ ಆತಂಕ ಮತ್ತು ಆಕ್ರೋಶ.