- ಹೊಸ ರಾಷ್ಟ್ರೀಯ ಶಿಕ್ಷಣ ನೀತಿ -2020 ವಿರೋಧ
ಬೆಂಗಳೂರು : ಅಸಂವಿಧಾನಿಕವಾಗಿ ಜಾರಿಗೊಳಿಸುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ- 2020 ವಿರೋಧಿಸಿ ನವೆಂಬರ್-26 ಅಖಿಲ ಭಾರತ ಮುಷ್ಕರ ಯಶಸ್ವಿಗೊಳಿಸಲು ಎಡ ವಿದ್ಯಾರ್ಥಿ ಸಂಘಟನೆಗಳು ಇಂದು ಬೆಂಗಳೂರಿನ ಸಂಪಂಗಿ ರಾಮನಗರದ ಸೂರಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಬೆಂಬಲ ವ್ಯಕ್ತಪಡಿಸಿವೆ.
ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಹಿಂದಿ ಮತ್ತುಇಂಗ್ಲಿಷ್ ಎರಡೂ ಭಾಷೆಗಳಲ್ಲಿಇದ್ದು, ಭಾರತದ ಇನ್ನುಳಿದ ರಾಷ್ಟ್ರೀಯ ಪ್ರಾದೇಶಿಕ ಭಾಷೆಗಳಲ್ಲಿಇಲ್ಲ ಮತ್ತು ಸಾರ್ವಜನಿಕವಾಗಿ ಹಾಗೂ ಕೇಂದ್ರ ಹಾಗೂ ರಾಜ್ಯಗಳ ಶಾಸನ ಸಭೆಯಲ್ಲಿ ಚರ್ಚೆಯಾಗದೆ, ಅದರ ಸಾಧಕ-ಬಾಧಕಗಳನ್ನು ಅರಿಯದೆ ಜಾರಿ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತದೆ. ಮೇಲ್ನೋಟಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎಲ್ಲರೂ ಒಪ್ಪಿಕೊಳ್ಳುವಂತಿದ್ದರೂ, ಅದರ ಅಂತರ್ಯದಲ್ಲಿ ಶಿಕ್ಷಣದ ಖಾಸಗೀಕರಣ, ಕೇಸರಿಕರಣ, ಇತಿಹಾಸ ತಿರುಚುವಿಕೆ ಈ ರೀತಿ ಹತ್ತು ಹಲವು ಅಂಶಗಳು ಅಡಕವಾಗಿರುವುದು ಕಾಣುತ್ತದೆ ಎಂದು ಎಡ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.
ನಮ್ಮ ರಾಜ್ಯದಲ್ಲಿ ಸಹ ಕೇಂದ್ರದ ಒತ್ತಡದ ಮೇರೆಗೆ ಯಾವುದೇ ರೀತಿಯ ಜನಾಭಿಪ್ರಾಯ ಸಂಗ್ರಹಿಸದೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ಮಾಡುವುದನ್ನು ಕರ್ನಾಟಕ ರಾಜ್ಯದ ಎಡ ವಿದ್ಯಾರ್ಥಿ ಸಂಘಟನೆಗಳಾದ AISF, SFI, AIDSO, AISA, KVS ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ಖಂಡಿಸಿವೆ. ರಾಜ್ಯ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು ಅದರಲ್ಲಿನ ಶಿಕ್ಷಣದ ಕೇಸರೀಕರಣ ಕೇಂದ್ರೀಕರಣ ಕೋಮುವಾದೀಕರಣ ಹೇರುವ ಅಂಶಗಳನ್ನು ಕೈಬಿಡಬೇಕು ಹಾಗೂ ಈ ಶಿಕ್ಷಣ ನೀತಿಯ ಸಾಧಕ-ಬಾಧಕಗಳನ್ನು ಅರಿತು ನಂತರ ಲೋಪ ದೋಷಗಳನ್ನು ಸರಿಪಡಿಸಬೇಕು ಆಗ್ರಹಿಸಿ ನವೆಂಬರ್-26 ರಂದು ನಡೆಯುವ ಅಖಿಲ ಭಾರತ ಮುಷ್ಕರದಲ್ಲಿ ರಾಜ್ಯದ ವಿದ್ಯಾರ್ಥಿ ಸಮುದಾಯ ಭಾಗವಹಿಸಿ ಯಶಸ್ವಿಗೊಳಿಸಲು AISF, SFI, AIDSO, AISA, KVS ವಿದ್ಯಾರ್ಥಿ ಸಂಘಟನೆಗಳು ಈ ಜಂಟಿ ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿವೆ.
ಎಡ ವಿದ್ಯಾರ್ಥಿ ಸಂಘಟನೆಗಳ ಬೇಡಿಕೆಗಳು:
- ಶಿಕ್ಷಣ ಕ್ಷೇತ್ರ ಸಂವಿಧಾನದ ಶೆಡ್ಯೂಲ್ -07 ರಂತೆ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಆದರೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ರಾಜ್ಯ ಸರ್ಕಾರಗಳಿಗೆ ಇರುವ ಶಿಕ್ಷಣ ಕ್ಷೇತ್ರ ಅಧಿಕಾರ, ಹಕ್ಕುಗಳನ್ನು ಮೊಟಕುಗೊಳಿಸಿ ಶಿಕ್ಷಣವನ್ನು ನೀತಿ ನಿರೂಪಣೆಯ ಅಧಿಕಾರಿಗಳನ್ನು ಕೇಂದ್ರೀಕರಣಗೊಳಿಸುವ ಅಂಶಗಳನ್ನು ನಮ್ಮ ರಾಜ್ಯ ಸರ್ಕಾರ ವಿರೋಧಿಸಬೇಕು. ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದ ಸರ್ಕಾರಕ್ಕಿರುವ ಅಧಿಕಾರ, ಹಕ್ಕುಗಳನ್ನು ಕಾಯ್ದಿರಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಒಕ್ಕೂಟ ವ್ಯವಸ್ಥೆಯ ಆಶಯಗಳ ಉಳಿಸಲು ಮುಂದಾಗಬೇಕು.
- ಸರ್ಕಾರವೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಸಂವಿಧಾನದ ಮಾನ್ಯತೆ ಪಡೆದ ಎಲ್ಲ ಭಾಷೆಗಳಿಗೆ ಅನುವಾದಿಸಿ ಅಧ್ಯಯನಕ್ಕೆ ಅವಕಾಶ ನೀಡಿ. ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಅಂಗನವಾಡಿ, ಬಿಸಿಯೂಟ, ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರೂ ಚರ್ಚಿಸಿ ತಿದ್ದುಪಡಿ ಸಲಹೆಗಳನ್ನು ನೀಡಲು ಅಗತ್ಯವಾದ ಕಾಲಾವಕಾಶ ಬೇಕೇ ಬೇಕು.
- ಕೇಂದ್ರ ಸರ್ಕಾರದ ಸಚಿವ ಸಂಪುಟ ಅನುಮೋದಿತ ಹೊಸ ರಾಷ್ಟೀಯ ಶಿಕ್ಷಣ ನೀತಿಯಕುರಿತು ರಾಜ್ಯ ವಿಧಾನಸಭೆ, ವಿಧಾನ ಪರಿಷತ್ತಿನ ಉಭಯ ಸದನಗಳಲ್ಲಿ ಸಮಗ್ರ ಚರ್ಚೆ ನಡೆಸಬೇಕು. ಈ ಸದನದಲ್ಲಿ ಈ ಕುರಿತು ಜನಪ್ರತಿನಿಧಿಗಳು ಮಾತನಾಡಬೇಕು.
- ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರಸ್ತಾಪಿಸಿರುವ ತ್ರಿಭಾಷಾ ಸೂತ್ರವನ್ನು ತಮಿಳು ನಾಡು ರಾಜ್ಯಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರ ವಿರೋಧಿಸಬೇಕು.
- ಕೊವೀಡ್-19 ಕಾಲಾವಧಿಯಲ್ಲಿ ದೇಶದ ಭವಿಷ್ಯವನ್ನುರೂಪಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಯ ಕುರಿತು ರಾಜ್ಯ ಸರ್ಕಾರದ ಮಂತ್ರಿಗಳು ನಡೆಸುತ್ತಿರುವ ಏಕ ಮುಖವಾದ, ಅಪ್ರಜಾಸತ್ತಾತ್ಮಕವಾಗಿ ಅನುಷ್ಠಾನದ ತಯಾರಿಗಳನ್ನು ಕೈಬಿಡಲು ತಾವುಗಳು ಒತ್ತಾಯಿಸಬೇಕೆಂದು ಜಂಟಿ ವಿದ್ಯಾರ್ಥಿ ಸಂಘಟನೆಗಳು ಮನವಿ ಮಾಡಿಕೊಂಡಿವೆ.
ಪತ್ರಿಕಾ ಗೋಷ್ಠಿಯಲ್ಲಿ AISF ರಾಜ್ಯಾಧ್ಯಕ್ಷರಾದ ಜ್ಯೋತಿ .ಕೆ, AISF ರಾಜ್ಯ ಕಾರ್ಯದರ್ಶಿಯಾದ ರಮೇಶ್ ನಾಯ್ಕ್, SFI ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, SFI ಕಾರ್ಯದರ್ಶಿಯಾದ ಕೆ. ವಾಸುದೇವರೆಡ್ಡಿ ರಾಜ್ಯ ಉಪಾಧ್ಯಕ್ಷ ಭೀಮನಗೌಡ, AIDSO ರಾಜ್ಯಾಧ್ಯಕ್ಷರಾದ ಅಶ್ವಿನಿ, AIDSO ರಾಜ್ಯ ಕಾರ್ಯದರ್ಶಿಯಾದ ಅಜಯ್ಕಾಮತ್, AISA ರಾಜ್ಯ ಸಂಚಾಲಕರಾದ ಕಿಶನ್, KVS ರಾಜ್ಯ ಸಂಚಾಲಕರಾದ ಸರೋವರ ಬೆಂಕಿಕೆರೆ ಭಾಗವಹಿಸಿದ್ದರು.