ಬೆಂಗಳೂರು : ಬಳ್ಳಾರಿ ಗಣಿನಾಡು ಜಿಲ್ಲೆಯಲ್ಲಿದ್ದ ಹೊಸಪೇಟೆಯನ್ನು (ವಿಜಯನಗರ) ಜಿಲ್ಲೆಯಾಗಿ ಘೋಷಿಸಲು ರಾಜ್ಯ ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ.
ಗಣಿನಾಡು ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ಪ್ರತ್ಯೇಕ ವಿಚಾರವಾಗಿ ಬಳ್ಳಾರಿ ಜಿಲ್ಲೆಯಲ್ಲೇ ಪರ- ವಿರೋಧದ ಕೂಗು ಕೇಳಿಬರುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ರಚನೆ ವಿಚಾರಕ್ಕೆ ತಾತ್ವಿಕ ಒಪ್ಪಿಗೆ ನೀಡುತ್ತಲೇ ಜಿಲ್ಲೆಯ ರೈತ, ಕನ್ನಡ ಪರ ಹೋರಾಟಗಾರರು ಇದೀಗ ಮತ್ತೆ ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೂಡ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯ ವಿಭಜನೆಗೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅಸಮಾಧಾನ ಹೊರಹಾಕಿದ್ದು, ಹಂಪಿ ಮತ್ತು ತುಂಗಭದ್ರಾ ಜಲಾಶಯವಿಲ್ಲದೇ ಬಳ್ಳಾರಿ ಜಿಲ್ಲೆಯನ್ನೂ ಊಹಿಸಲು ಸಾಧ್ಯವಿಲ್ಲಾ, ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಯಾದ್ರೂ ಮಾತನಾಡದ ಜಿಲ್ಲೆಯ ಹಿರಿಯ ಶಾಸಕರು, ಆಡಳಿತ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆ ಹೋಳಾದ್ರೆ, ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಮರಿಚೀಕೆಯಾದಿತು ಎಂದು ಶಾಸಕ ನಾಗೇಂದ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇನ್ನು ಜಿಲ್ಲೆಯ ವಿಭಜನೆಗೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಶಾಸಕ ಸೋಮಶೇಖರ್ ರೆಡ್ಡಿಯವರು ಕೂಡ ವಿರೋಧವನ್ನು ವ್ಯಕ್ತಪಡಿಸಿದ್ದು ಸರ್ಕಾರ ಇಂತಹ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಈ ಜಿಲ್ಲೆಯ ಜನರು ವಿಭನೆ ವಿರೋಧಿಸಿ ಹೋರಾಟ ಕೈಗೊಂಡರೇ ನಾನು ಅವರೊಂದಿಗೆ ನಿಲ್ಲುವೆ ಎಂದು ತಿಳಿಸಿದ್ದಾರೆ. ಕನ್ನಡ ಪರ ಹೋರಾಟಗಾರ ಯರಿಸ್ವಾಮಿ ಕೂಡ ವೀಡಿಯೋ ತುಣಿಕಿನ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸಪೇಟೆಯ ನಿವಾಸಿಗಳು ಕೂಡಾ ಜಿಲ್ಲೆಯಾಗಿದ್ದಕ್ಕೆ ಸಹಮತವನ್ನು ವ್ಯಕ್ತಪಡಿಸುತ್ತಿಲ್ಲ. ಜಿಲ್ಲೆಯ ವಿಭಜನೆ ಮುಂದೆ ಬರುವ ಚುನಾವಣೆಯ ಲಾಭಕ್ಕಾಗಿ ಮಾಡಿರುವ ಗಿಮಿಕ್. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಹೊಸಪೇಟೆ ಜಿಲ್ಲೆಯಾಗಿ ಮಾಡಿದ್ದಾರೆ. ಇದರಿಂದ ಯಾವ ಬದಲಾವಣೆ ನಿರೀಕ್ಷೆಯನ್ನು ಮಾಡಲು ಸಾಧ್ಯವಿಲ್ಲ. ಜನಸಾಮನ್ಯರಿಗೆ ಯಾವುದೇ ರೀತಿಯ ಲಾಭವಿಲ್ಲ. ಹೊರ ರಾಜ್ಯಗಳಿಂದ ಈಗಾಗಲೇ ಕೆಲಸಕ್ಕಾಗಿ ಬಂದಿದ್ದು ಇವರಿಗೆ ಕೆಲಸವನ್ನು ಗೀಟಿಸಿಕೊಂಡರೆ, ಇಲ್ಲಿಯ ನಿವಾಸಿಗಳು ಮತ್ತಷ್ಟು ಅವಕಾಶ ವಂಚಿತರಾಗುತ್ತಾರೆ. ಜಿಲ್ಲೆಯ ಅಭಿವೃದ್ಧಿ ಹೆಸರಿನಲ್ಲಿ ಮತ್ತಷ್ಟು ವಾಯುಮಾಲಿನ್ಯ, ಶಬ್ದಮಾಲಿನ್ಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶೃತಿ ದಮ್ಮೂರು ಬೇಸರವನ್ನು ಹೊರಹಾಕಿದ್ದಾರೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯ ನಗರ ಜಿಲ್ಲೆ ರಚನೆಯ ಸಂಬಂಧ ಅಧಿಕೃತ ಘೋಷಣೆಯಾಗಲಿದೆ. ಆ ಮೂಲಕ ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯ ನಗರ ಎದ್ದು ನಿಂತಿದೆ. ಈ ಸಂಬಂಧ ಕಳೆದ ವರ್ಷ ಸಿಎಂ ಯಡಿಯೂರಪ್ಪ ಅವರು ವಿಜಯ ನಗರವನ್ನು ಜಿಲ್ಲೆಯನ್ನಾಗಿ ಮಾಡಲಾಗುವುದು ಎಂಬ ಹೇಳಿಕೆಯನ್ನೂ ನೀಡಿದ್ದರು.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯ ನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರ ಬೇಡಿಕೆಯಂತೆ ವಿಜಯ ನಗರ ಜಿಲ್ಲೆ ರಚನೆಯ ಸಂಬಂಧ ಚರ್ಚೆ ನಡೆಯಿತು. ಈ ಬೇಡಿಕೆ ಹತ್ತಾರು ವರ್ಷಗಳ ಹಿಂದಿನಿಂದಲೇ ಕೇಳಿ ಬರುತ್ತಿದ್ದು, ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ಹೊಸಪೇಟೆಯನ್ನು ಕೇಂದ್ರವಾಗಿರಿಸಿಕೊಂಡು ಹೊಸ ಜಿಲ್ಲೆ ರಚಿಸುವಂತೆ ಒತ್ತಾಯಿಸಲಾಗಿತ್ತು.
ಇದರನ್ವಯ ಇದೀಗ ಸಂಪುಟ ಸಭೆಯಲ್ಲಿ ವಿಜಯ ನಗರ ಜಿಲ್ಲೆ ರಚನೆಗೆ ಅನೌಪಚಾರಿಕ ಸಮ್ಮತಿ ದೊರಕಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಾಸಕ ಆನಂದ ಸಿಂಗ್ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ ಹೊಸ ಜಿಲ್ಲೆಯಾಗಲಿರುವ ವಿಜಯ ನಗರ ಜಿಲ್ಲೆಯನ್ನು ಅಭಿವೃದ್ಧಿ ವಿಚಾರವಾಗಿ ಮಾದರಿ ಜಿಲ್ಲೆಯನ್ನಾಗಿ ಮಾಡುವ ಭರವಸೆಯನ್ನು ಸಹ ಅವರು ನೀಡಿದ್ದಾರೆ. ಅಲ್ಲದೆ ಈ ನಿರ್ಧಾರ ಐತಿಹಾಸಿಕ ತೀರ್ಮಾನವಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನ ವಕ್ತಾರ ಪತ್ರೇಶ್ ಹಿರೇಮಠ್ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಸ್ವಾಗತ ಹೇಳಿ, ಆನಂದ್ ಸಿಂಗ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಈ ನಿರ್ಣಯಕ್ಕೆ ಸಚಿವ ಶ್ರೀರಾಮುಲು ಸಹ ಸಂತಸ ವ್ಯಕ್ತಪಡಿಸಿದ್ದು, ಎಲ್ಲರೂ ಒಗ್ಗಟ್ಟಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಇತ್ತ ಹಿರಿಯ ಕಾಂಗ್ರೆಸ್ ಮುಖಂಡರು, ಪರಿಷತ್ ಸದಸ್ಯರಾದ ಕೆಸಿ.ಕೊಂಡಯ್ಯ ಸ್ವಾಗತ ಮಾಡಿದ್ರೆ, ಅಲ್ಲಂ ವೀರಭದ್ರಪ್ಪ ಸೌಹಾರ್ದತೆ ಮಂತ್ರ ಜಪೀಸಿದ್ದಾರೆ. ಈ ವಿಭನೆಯನ್ನು ವಿರೋಧಿಸಿ ಅಖಂಡ ಬಳ್ಳಾರಿ ಹೋರಾಟ ಸಮಿತಿಯು ಖಂಡಿಸಿ ನಂ. 26ರಂದು ಬಂದ್ ಗೆ ಕರೆಕೊಟ್ಟಿದ್ದಾರೆ.