ಠೇವಣಿದಾರರ ಹಣ ಸುರಕ್ಷಿತ: ಲಕ್ಷ್ಮೀ ವಿಲಾಸ್ ಬ್ಯಾಂಕ್

  • ಎಲ್‌ವಿಬಿಯನ್ನು ಡಿಬಿಎಸ್‌ ಬ್ಯಾಂಕ್‌ನೊಂದಿಗೆ ವಿಲೀನಕ್ಕೆ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ ವಿರೋಧ

ಬೆಂಗಳೂರು: ‘ಗಾಬರಿಯಾಗುವ ಅಗತ್ಯ ಇಲ್ಲ. ಠೇವಣಿದಾರರ ಹಣ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿದೆ. ಠೇವಣಿದಾರರಿಗೆ ಹಿಂದಿರುಗಿಸಲು ಅಗತ್ಯ ಇರುವಷ್ಟು ಹಣ ಬ್ಯಾಂಕ್‌ ಬಳಿ ಇದೆ’ ಎಂದು ಲಕ್ಷ್ಮೀ ವಿಲಾಸ್ ಬ್ಯಾಂಕಿನ (ಎಲ್‌ವಿಬಿ) ಆಡಳಿತ ಅಧಿಕಾರಿ ಟಿ.ಎನ್. ಮನೋಹರನ್ ತಿಳಿಸಿದರು.

ಕಾನ್ಫರೆನ್ಸ್‌ ಕಾಲ್‌ ಮೂಲಕ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘ಬ್ಯಾಂಕ್‌ ವಹಿವಾಟಿನ ಮೇಲೆ ನಿರ್ಬಂಧ ವಿಧಿಸಿದ ಕ್ರಮವು ಮಂಗಳವಾರ ತಡರಾತ್ರಿ ನಡೆದಿರುವುದರಿಂದಾಗಿ ಬ್ಯಾಂಕ್‌ ಶಾಖೆಗಳು, ಎಟಿಎಂಗಳಲ್ಲಿ ಕೆಲವು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗುರುವಾರದ ಹೊತ್ತಿಗೆ ಎಲ್ಲವೂ ಸರಿಹೋಗಲಿದೆ. ಠೇವಣಿದಾರರು ಹಣ ಪಡೆಯಲು ಸಮಸ್ಯೆ ಆಗದಂತೆ ನೋಡಿಕೊಳ್ಳಲು ಎಲ್ಲಾ ಶಾಖೆಗಳಿಗೂ ಸೂಚನೆ ನೀಡಲಾಗಿದೆ. ಬ್ಯಾಂಕ್‌ ಬಳಿ,  20 ಸಾವಿರ ಕೋಟಿ ಠೇವಣಿ ಮತ್ತು  17,000 ಕೋಟಿ ಮುಂಗಡ ಇದೆ’ ಎಂದರು.

ಲಕ್ಷ್ಮಿ ವಿಲಾಸ್ ಬ್ಯಾಂಕ್ ಮೇಲೆ 30 ದಿನ ನಿರ್ಬಂಧ ಹೇರಿದ ಆರ್ ಬಿ ಐ

‘ಬ್ಯಾಂಕಿನಲ್ಲಿ ಠೇವಣಿ ಇರಿಸಿರುವವರು ಒಂದು ತಿಂಗಳ ನಿರ್ಬಂಧದ ಅವಧಿಯಲ್ಲಿ ಗರಿಷ್ಠ  25 ಸಾವಿರ ಹಿಂಪಡೆಯಬಹುದು. ಉನ್ನತ ಶಿಕ್ಷಣ, ಮದುವೆ, ವೈದ್ಯಕೀಯ ವೆಚ್ಚದಂತಹ ತುರ್ತು ಅಗತ್ಯಗಳಿಗಾಗಿ  5 ಲಕ್ಷದವರೆಗೂ ಹಣ ಹಿಂಪಡೆಯಬಹುದು. ಆದರೆ ಇದಕ್ಕೆ ಅಗತ್ಯವಾದ ಸಾಮಾನ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ’ ಎಂದರು.

‘ನಿರ್ಬಂಧ ಘೋಷಣೆಯಾದಾಗಿನಿಂದ ಇಲ್ಲಿಯವರೆಗೆ ದೇಶದಾದ್ಯಂತ ಸುಮಾರು  10 ಕೋಟಿ ಹಣವನ್ನು ಗ್ರಾಹಕರು ಹಿಂಪಡೆದಿದ್ದಾರೆ’ ಎಂದು ಅವರು ತಿಳಿಸಿದರು.

‘ಕಳೆದ ಕೆಲವು ವರ್ಷಗಳಿಂದ ರಿಟೇಲ್‌ ಸಾಲ ನೀಡುವುದರಿಂದ ಕಾರ್ಪೊರೇಟ್‌ ಸಾಲ ನೀಡುವುದರತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಆದರೆ, ಕೆಲವು ಕಾರ್ಪೊರೇಟ್‌ ಸಾಲಗಳು ಮರುಪಾವತಿ ಆಗಲಿಲ್ಲ. ಇದರಿಂದಾಗಿ ಬ್ಯಾಂಕ್‌ನ ಆಸ್ತಿ ಮೌಲ್ಯದಲ್ಲಿ ಇಳಿಕೆ ಆಯಿತು. ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣ ಶೇ 10ರ ಮಟ್ಟದಲ್ಲಿ ಇದ್ದಿದ್ದು, ಶೇ 15ಕ್ಕೆ ಏರಿಕೆಯಾಗಿ ಸದ್ಯ ಶೇ 25ಕ್ಕೆ ಏರಿದೆ. ಪುನಶ್ಚೇತನಕ್ಕಾಗಿ ಬಂಡವಾಳ ಹೂಡಿಕೆಯ ಪ್ರಸ್ತಾಪವೂ ಸೂಕ್ತವಾಗಿರಲಿಲ್ಲ. ಹೀಗಾಗಿ, ವಿಲೀನ ಪ್ರಕ್ರಿಯೆ ಸುಲಭವಾಗಿ ನಡೆಯುವಂತೆ ಮಾಡಲು ನಿಯಂತ್ರಕರು ಅಲ್ಪಾವಧಿಯ ನಿರ್ಬಂಧ ಹೇರಿದ್ದಾರೆ.

ಟಿ.ಎನ್. ಮನೋಹರನ್, ಲಕ್ಷ್ಮೀ ವಿಲಾಸ್ ಬ್ಯಾಂಕ್‌, ಆಡಳಿತ ಅಧಿಕಾರಿ 

 ಗಡುವಿನೊಳಗೆ ವಿಲೀನ:  ‘ಆರ್‌ಬಿಐ ನಿಗದಿಪಡಿಸಿರುವ ಡಿಸೆಂಬರ್‌ 16ರ ಗಡುವಿನ ಒಳಗಾಗಿ ಎಲ್‌ವಿಬಿ, ಡಿಬಿಎಸ್‌ ಬ್ಯಾಂಕ್‌ ಇಂಡಿಯಾದೊಂದಿಗೆ ವಿಲೀನವಾಗುವ ವಿಶ್ವಾಸವಿದೆ. ವಿಲೀನದಿಂದ ಯಾರೂ ಕೆಲಸ ಕಳೆದುಕೊಳ್ಳುವುದಿಲ್ಲ. ಬ್ಯಾಂಕ್‌ ಸಿಬ್ಬಂದಿಯ ಉದ್ಯೋಗ ಭದ್ರತೆಗೆ ಆದ್ಯತೆ ನೀಡಲಾಗಿದೆ’ ಎಂದು ಅವರು ಹೇಳಿದರು.

ವಿಲೀನಕ್ಕೆ ಸಂಬಂಧಿಸಿದಂತೆ ಸಲಹೆ, ಅಭಿಪ್ರಾಯ, ಆಕ್ಷೇಪಗಳನ್ನು ಸಲ್ಲಿಸಲು ನವೆಂಬರ್‌ 20ರ ಸಂಜೆ 5 ಗಂಟೆಯವರೆಗೆ ಅವಕಾಶ ಇದೆ. ಆ ಬಳಿಕ ಆರ್‌ಬಿಐ ಅಂತಿಮ ಕರಡು ಪ್ರಕಟಿಸಲಿದೆ.

ಸರ್ಕಾರಿ ಬ್ಯಾಂಕ್‌ನೊಂದಿಗೆ ವಿಲೀನ ಮಾಡಿ : ಎಲ್‌ವಿಬಿಯನ್ನು ಸಿಂಗಪುರ ಮೂಲದ ಡಿಬಿಎಸ್‌ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವುದಕ್ಕೆ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ವಿರೋಧ ವ್ಯಕ್ತಪಡಿಸಿದೆ. ಎಲ್‌ವಿಬಿಯನ್ನು ಸರ್ಕಾರಿ ಸ್ವಾಮ್ಯದ ಯಾವುದಾದರೂ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಬೇಕು ಎಂದು ಅದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *