ಹಿರಿಯ ಪತ್ರಕರ್ತ ಅರ್ನಾಬ್ ಗೋ ಸ್ವಾಮಿಯವರು ಕಾನೂನು ಪಾಲನೆ ವಿಷಯದಲ್ಲಿ ಪೊಲೀಸರೊಂದಿಗೆ ನಡೆದುಕೊಂಡ ರೀತಿ ಸರಿಯಾದುದಲ್ಲ. “ನಿಮ್ಮನ್ನು ಅರೆಸ್ಟ್ ಮಾಡುತ್ತಿದ್ದೇವೆ, ಬನ್ನಿ” ಎಂದು ಯೂನಿಫಾರಂ ಹಾಕಿರೋ ಪೊಲೀಸರು ಹೇಳಿದ ತಕ್ಷಣ, ಕೇಸಿನ ಬಗ್ಗೆ ಮಾಹಿತಿಯನ್ನು ಕೇಳಿಕೊಂಡು ವಿಚಾರಣೆಗೆ ಹಾಜರಾಗಬೇಕು. ಅದರ ಬದಲು ಕಿರುಚಾಡುವುದು, ಪೊಲೀಸ್ ಅಧಿಕಾರಿಯನ್ನು ಬೈಯ್ಯುವುದು ಸರಿಯಾದ ಕ್ರಮವಲ್ಲ. ಇವತ್ತು ಅರ್ನಾಬ್ ಗೋಸ್ವಾಮಿಯವರು ಮಾಡಿದ್ದನ್ನೇ ಸಾಮಾನ್ಯ ಆರೋಪಿಗಳು ಮಾಡಿದ್ದರೆ ಅದನ್ನು ಪೊಲೀಸರು, ಮಾಧ್ಯಮಗಳು ಮತ್ತು ಜನರು ಹೇಗೆ ಸ್ವೀಕರಿಸುತ್ತಿದ್ದರು. ಇಷ್ಟಕ್ಕೂ ಅರ್ನಾಬ್ ಗೋಸ್ವಾಮಿಯವರು ಅರೆಸ್ಟ್ ಆಗಿದ್ದು ಪತ್ರಿಕಾ ವೃತ್ತಿಯ ಕಾರಣಕ್ಕಲ್ಲ. ಹಣಕಾಸಿನ ವಂಚನೆ ಮತ್ತು ಆತ್ಮಹತ್ಯೆ ಪ್ರಚೋದನೆಯ ಕಾರಣಕ್ಕಾಗಿ ಅರ್ನಾಬ್ ಬಂಧನವಾಗಿದೆ. ಈ ಹಿಂದೆ ಎಡಪಂಥೀಯರಿಗೆ ಸ್ವಲ್ಪ ಹತ್ತಿರವಾಗಿದ್ದ, ಬಿಜೆಪಿ ಕಟ್ಟಾ ವಿರೋಧಿ ತೆಹಲ್ಕಾ ಪತ್ರಿಕೆಯ ಸಂಪಾದಕ ಅರೆಸ್ಟ್ ಆದಾಗ ಎಡಪಂಥೀಯರು ಅವರನ್ನು ಬೆಂಬಲಿಸಲಿಲ್ಲ. ಯಾಕೆಂದರೆ ಅವರ ಕೇಸ್ ಪತ್ರಿಕೋಧ್ಯಮಕ್ಕೆ ಸಂಬಂಧಿಸಿದ್ದಾಗಿರಲಿಲ್ಲ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಬಂಧನವಾದಾಗ ಅರ್ನಾಬ್ ಗಿಂತಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಹಾಗೆ ನೋಡಿದ್ರೆ ನನ್ನ ಕೇಸ್ ಕೇವಲ ಪತ್ರಿಕಾ ವೃತ್ತಿಗೆ ಸಂಬಂಧಿಸಿದ್ದು. ನನ್ನ ಮೇಲಿನ ಪೊಲೀಸ್ ಚಾರ್ಜ್ ಶೀಟ್ ನಲ್ಲೂ ನನ್ನ ವೃತ್ತಿಯ ಬಗ್ಗೆ ಮಾತ್ರ ಉಲ್ಲೇಖವಾಗಿತ್ತು. ನವೆಂಬರ್ 07 ರಂದು ವಿಟ್ಲದಲ್ಲಿ ಕಾರ್ಯಕ್ರಮದ ವರದಿಗಾರಿಕೆ ಮುಗಿಸಿಕೊಂಡು ಮಂಗಳೂರಿನತ್ತಾ ನಾವು ಬರುತ್ತಿದ್ದೆವು. ಹೆದ್ದಾರಿ ದಾರಿ ಮಧ್ಯೆ ಅಲ್ಲಲಿ ಮೀನು ತಿನ್ನುತ್ತಾ, ನೀರು ದೋಸೆ ತಿನ್ನುತ್ತಾ ಮಂಗಳೂರು ತಲುಪುವಾಗ ರಾತ್ರಿ 10 ಆಗಿರಬಹುದು. ಪಡೀಲ್ ಜಂಕ್ಷನ್ ಬಳಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಟಿವಿ9 ಹಿರಿಯ ವರದಿಗಾರ ರಾಜೇಶ್ ಕಾರಿನಲ್ಲಿ ನಾವು ನಾಲ್ಕು ಜನರಿದ್ದೆವು. ರಿಪೋರ್ಟರ್ ರಾಜೇಶ್ ಡ್ರೈವಿಂಗ್ ಮಾಡುತ್ತಿದ್ದರೆ, ನಾನು ಎದುರಿನ ಸೀಟಿನಲ್ಲಿ ಕುಳಿತಿದ್ದೆ. ಹಿಂಬದಿಯಲ್ಲಿ ಟಿವಿ 9 ಕ್ಯಾಮರಾಮೆನ್ ರಾಜೇಶ್ ಪೂಜಾರಿ, ಕಸ್ತೂರಿ ಕ್ಯಾಮರಾಮೆನ್ ಶಿವಪ್ರಸಾದ್ ದೇವಾಡಿಗ ಇದ್ದರು. ಪೊಲೀಸರು ಎಲ್ಲಾ ಕಾರುಗಳನ್ನು ಚೆಕ್ ಮಾಡುತ್ತಿರುವುದು ದೂರದಲ್ಲೇ ಕಾಣಿಸಿತು. ಮಂಗಳೂರಿನ ಎಲ್ಲಾ ಪೊಲೀಸರು ಸಾಮಾನ್ಯ ಪರಿಚಯವೇ ಆಗಿದ್ದರಿಂದ ನಮ್ಮ ಕಾರನ್ನು ನಿಲ್ಲಿಸಿ ಚೆಕ್ ಮಾಡಲ್ಲ ಎಂದು ಅಂದುಕೊಂಡಿದ್ದೆವು. ಅವರು ಹುಡುಕುತ್ತಿದ್ದುದೇ ನಮ್ಮ ಕಾರನ್ನು ಎಂದು ತಿಳಿದಿರಲಿಲ್ಲ. ನಮ್ಮ ಕಾರು ಕಂಡಾಕ್ಷಣ ಪೊಲೀಸರು ಸುತ್ತುವರಿದರು.
ಇನ್ಸ್ ಸ್ಪೆಕ್ಟರ್ ರವೀಶ್ ನಾಯಕ್ ನಾನಿದ್ದ ಸೀಟಿನ ಡೋರ್ ಬಳಿ ಬಂದು “ನವೀನ್ ನೀವು ಅರೆಸ್ಟ್ ಆಗ್ತಿದ್ದೀರಿ” ಅಂದ್ರು. “ರಾತ್ರಿಯಾಗಿದೆ, ಬೆಳಿಗ್ಗೆ ನಾನೇ ಠಾಣೆಗೆ ಬರುತ್ತೇನೆ. ನಾನೇನು ಓಡಿ ಹೋಗಿಲ್ವಲ್ಲಾ. ಕೇಸ್ ಆದ ಮೇಲೂ ಡ್ಯೂಟಿಯಲ್ಲೇ ಇದ್ದೀನಿ. ನಾಳೆ ನಾನೇ ಬರ್ತೀನಿ” ಅಂದೆ. ” “ನೀವು ಅಬ್ ಸ್ಕ್ಯಾಂಡ್ ಆಗಿದ್ದರೆ ನಾವು ಹುಡುಕುತ್ತಿರಲಿಲ್ಲ. ರಾಜಾರೋಷವಾಗಿ ಓಡಾಡಿದ್ದೇ ನಮಗೆ ಪ್ರಾಬ್ಲೆಂ, ಇಳೀರಿ. ಅರೆಸ್ಟ್ ಮಾಡ್ತೀವಿ” ಅಂದ್ರು. ನಾನು ಕಾರಿನಿಂದ ಇಳಿಯಲು ರೆಡಿಯಾದೆ. ಟಿವಿ 9 ರಾಜೇಶ್ ಮಾತ್ರ ನನ್ನನ್ನು ಇಳಿಯಲು ಬಿಡುತ್ತಿಲ್ಲ. ಕೊನೆಗೆ ರಾಜೇಶ್ ಗೆ ಸಮಾದಾನ ಮಾಡಿ, ಮಾತನಾಡದೆ ಪೊಲೀಸ್ ಬೊಲೆರೋ ವಾಹನ ಹತ್ತಿದೆ. ಪೊಲೀಸರು ನನ್ನ ಮೊಬೈಲ್ ಪಡೆದುಕೊಂಡರು. ರಾತ್ರಿ ಊಟ ಮಾಡದೇ ಅಮ್ಮ ಕಾಯುತ್ತಿರುತ್ತಾರೆ. ಒಂದು ಫೋನ್ ಮಾಡ್ತೀನಿ ಅಂದೆ. ಫೋನ್ ಕೊಟ್ಟರು. “ಅಮ್ಮ, ನಾನು ಕೆಲಸ ಮುಗಿಸುವಾಗ ಲೇಟಾಗುತ್ತೆ. ಹಾಗಾಗಿ ರಾಜೇಶ್ ಮನೆಯಲ್ಲಿ ಉಳಿದುಕೊಳ್ಳುತ್ತೇನೆ. ನೀವು ಊಟ ಮಾಡಿ ಮಲಗಿ” ಎಂದು ಸುಳ್ಳು ಹೇಳಿ ಫೋನ್ ವಾಪಸ್ ಪೊಲೀಸರ ಕೈಗೆ ಕೊಟ್ಟೆ. ನೇರ ಜಡ್ಜ್ ಮನೆಗೆ ಹಾಜರುಪಡಿಸಿದಾಗ ಜೈಲಿಗೆ ಹಾಕಿದರು. ನಾನೆಲ್ಲೂ ರಂಪಾಟ ಮಾಡಲಿಲ್ಲ. ಒಂದು ಸಿದ್ದಾಂತವನ್ನು ಇಟ್ಟುಕೊಂಡು ಪತ್ರಿಕಾವೃತ್ತಿ ನಿರ್ವಹಿಸುವಾಗ ಇಂತಹ ಪರಿಸ್ಥಿತಿಗಳು ಎದುರಾಗುತ್ತದೆ. ಅದಕ್ಕೆ ಅರ್ನಾಬ್ ಸೇರಿದಂತೆ ಎಲ್ಲರೂ ಸಿದ್ದರಿರಬೇಕು. ನಾನು ಬಿಡುಗಡೆ ಆದ ಬಳಿಕ ನನ್ನ ವೃತ್ತಿ ಜೀವನದಲ್ಲಿ ನನ್ನನ್ನು ಅರೆಸ್ಟ್ ಮಾಡಿದ ಐಪಿಎಸ್, ಎಸ್ಐ, ಇನ್ಸ್ ಸ್ಪೆಕ್ಟರ್ ಎಲ್ಲರೂ ಒಂದಿಲ್ಲೊಂದು ಪ್ರಕರಣದಲ್ಲಿ ದೂರು ಎದುರಿಸಿದರು. ಆ ದೂರುಗಳು ನನ್ನ ಬಳಿ ಬಂದರೂ ನಾನು ಸುದ್ದಿ ಮಾಡಲಿಲ್ಲ. ಯಾಕೆಂದರೆ ನನ್ನ ವರದಿ ಪೂರ್ವಾಗ್ರಹಪೀಡಿತ ಎಂದು ಅವರಿಗೆ ಅನ್ನಿಸಬಹುದು. ಆ ಕಾರಣಕ್ಕಾಗಿ ಆ ಸುದ್ದಿಯ ಸತ್ಯಾಸತ್ಯತೆ ಅರಿತು ಸುದ್ದಿ ಮಾಡುವಂತೆ ಬೇರೆ ವರದಿಗಾರರಿಗೆ ಸುದ್ದಿಯನ್ನು ಹಸ್ತಾಂತರಿಸಿದ್ದೆ. ಆದರೆ ಅರ್ನಾಬ್ ಮಾಡಿದ್ದೇನು ? ಪೊಲೀಸರ ವಿರುದ್ದ ದ್ವೇಷದ ಪತ್ರಿಕೋಧ್ಯಮ..! ಸವಾಲು ಹಾಕುವ ಪತ್ರಿಕೋಧ್ಯಮ !
ಪತ್ರಕರ್ತ ಜನಪರವಾಗಿ ಕೆಲಸ ಮಾಡಿದ್ದರೆ ಜನರು ಖಂಡಿತ ಆತನ ಪರ ನಿಲ್ಲುತ್ತಾರೆ. ಆ ನಾಲ್ಕುವರೆ ತಿಂಗಳ ಜೈಲುವಾಸದ ಅವಧಿಯಲ್ಲಿ ಪ್ರಗತಿಪರರು, ಪತ್ರಕರ್ತರು ಮಾಡಿದ ಪ್ರತಿಭಟನೆ ಐತಿಹಾಸಿಕವಾದದ್ದು. ರವಿಕೃಷ್ಣ ರೆಡ್ಡಿವರಂತೂ ಉಪವಾಸ ಸತ್ಯಾಗ್ರಹವನ್ನೇ ಮಾಡಿದ್ದರು. ಅವರೇನೋ ನನ್ನ ನಿಲುವುಗಳನ್ನು ಒಪ್ಪಿ ಪ್ರತಿಭಟಿಸಿದರು. ನಾನು ನನ್ನ ಬಹುತೇಕ ಬರಹಗಳಲ್ಲಿ ವಿರೋಧಿಸುವ ಬ್ರಾಹ್ಮಣರೂ ಕೂಡಾ ನನ್ನ ಬಿಡುಗಡೆಗಾಗಿ ಒಂಬತ್ತು ದಿನಗಳ ಹೋಮ ಮಾಡಿದರು. ಅದೂ ನಾನು ದೇವರನ್ನು ನಂಬುವುದಿಲ್ಲ ಎಂದು ತಿಳಿದೂ..! ಯಾಕೆಂದರೆ ಪೆರ್ಮುದೆಯ ಆ ಬ್ರಾಹ್ಮಣರ ಕೃಷಿ ಭೂಮಿ ಉಳಿಸುವ ಹೋರಾಟದಲ್ಲಿ ನನ್ನ ಅಳಿಲ ಸೇವೆಯಿತ್ತು ! ಹೈ ಕೋರ್ಟ್ ಜಾಮೀನು ನೀಡಿದಾಗ ಮುಗ್ದ ಆದಿವಾಸಿಗಳು, ದಲಿತರು, ಕುಡುಬಿಗಳು ತಮ್ಮ ಜಮೀನು ಪತ್ರಗಳನ್ನು ಜೈಲಿಗೆ ತಂದಿದ್ದರು. ಬೇಗ ಜಮೀನು ಪತ್ರವನ್ನು ಜೈಲಿಗೆ ಕೊಟ್ಟು ನನ್ನನ್ನು ಬಿಡಿಸಿಕೊಳ್ಳೋಣಾವೆಂದು..! “ಜಾಮೀನಿಗೆ ಜಮೀನು ಪತ್ರ ಕೊಡುವುದು ಜೈಲಿನಲ್ಲಿ ಅಲ್ಲ, ಕೋರ್ಟಿನಲ್ಲಿ. ಅಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ. ನಿಶ್ಚಿಂತೆಯಿಂದಿರಿ” ಎಂದು ನಾನೇ ಅವರುಗಳನ್ನು ಸಮಾದಾನ ಮಾಡಿ ಕಳುಹಿಸಬೇಕಿತ್ತು. ಈ ರೀತಿ ನೀವು ಪತ್ರಕರ್ತರಾಗಿ ವೃತ್ತಿಯಲ್ಲಿ ಜನಪರ ಮತ್ತು ಪ್ರಾಮಾಣಿಕರಾಗಿದ್ದರೆ ಜನ ನಿಮ್ಮೊಂದಿಗೆ ಇದ್ದೇ ಇರ್ತಾರೆ. ಆಗ ಪೊಲೀಸ್ ಬಂಧನದ ವೇಳೆ ಯಾವ ಕಿರುಚಾಟಗಳೂ, ನನಗಾಗಿ ಅವಾಜ್ ಉಟಾಯಿಯೇ ಅನ್ನೊ ಮನವಿಗಳೂ ಬೇಕಾಗಿಲ್ಲ. ಪೊಲೀಸ್ ಬಂಧನಕ್ಕೆ ಭಯಪಡಬೇಕಾಗಿಯೂ ಇಲ್ಲ. ನನ್ನ ಪತ್ರಿಕಾ ವೃತ್ತಿಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತವೇ ತುಂಬಿಹೋಗಿ ಜನರ ನೋವುಗಳಿಗೆ ಜೊತೆಯಾಗದೇ ಇದ್ದರೆ ಮಾತ್ರ ಇಂತಹ ಗಿಮಿಕ್ ಗಳನ್ನು ಮಾಡಬೇಕಾಗುತ್ತದೆ.
– ನವೀನ್ ಸೂರಿಂಜೆ, ಹಿರಿಯ ಪತ್ರಕರ್ತ