– ನಂ, 26 ರಿಂದ ಜ, 26 ರ ವರೆಗೆ ದೇಶಾದ್ಯಂತ ಸಿಪಿಐ(ಎಂ) ಕೇಂದ್ರ ಸಮಿತಿ ಆದೋಂದಲನಕ್ಕೆ ಕರೆ
– ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ನಿಲುವಿನ ಪ್ರಕಟಣೆ
ಪ್ರಜಾಪ್ರಭುತ್ವದ ರಕ್ಷಣೆಗೆ ಬಾಧಕವಾಗಿರುವ ವಿವಿಧ ಪ್ರಶ್ನೆಗಳ ಮೇಲೆ ನವಂಬರ್ 26 ರಿಂದ ಜನವರಿ 26 ರ ನಡುವೆ ಎಲ್ಲ ಜಾತ್ಯತೀತ ಪ್ರಜಾಪ್ರಭುತ್ವವಾದಿ ಪಕ್ಷಗಳು, ಜನತಾ ಆಂದೋಲನಗಳು, ಚಿಂತಕರು ಮತ್ತು ಇತರ ಪ್ರತಿಷ್ಠಿತ ವ್ಯಕ್ತಿಗಳ ಒಂದು ವಿಶಾಲ ರಂಗವನ್ನು ರಚಿಸಬೇಕು, ಈ ಮೂಲಕ 2021ರ ಗಣತಂತ್ರ ದಿನವನ್ನು ‘ಸಂವಿಧಾನ ರಕ್ಷಣಾ ದಿನ’ವಾಗಿ ಆಚರಿಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಕರೆ ನೀಡಿದೆ.
ಮಾನವ ಹಕ್ಕುಗಳು, ನಾಗರಿಕ ಸ್ವಾತಂತ್ರ್ಯಗಳು, ಕಾರ್ಮಿಕರು ಮತ್ತು ರೈತಾಪಿ ಜನಗಳ ಪ್ರಜಾಪ್ರಭುತ್ವ ಹಕ್ಕುಗಳು, ಕರಾಳ ಶಾಸನಗಳಾದ ಯು.ಎ.ಪಿ.ಎ., ಎನ್.ಎಸ್.ಎ, ರಾಜದ್ರೋಹದ ಕಾಯ್ದೆ ಮುಂತಾದವುಗಳ ಅಡಿಯಲ್ಲಿ ಬಂಧಿಸಿದ ಎಲ್ಲ ರಾಜಕೀಯ ಬಂಧಿಗಳ ಬಿಡುಗಡೆ, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳು, ಸಂಸತ್ತು, ನ್ಯಾಯಾಂಗ, ಚುನಾವಣಾ ಆಯೋಗ ಮುಂತಾದ ಸ್ವತಂತ್ರ ಸಂವಿಧಾನಿಕ ಸಂಸ್ಥೆಗಳನ್ನು ಶಿಥಿಲಗೊಳಿಸುತ್ತಿರುವುದು ಮತ್ತು ಜನತೆಯ ಚುನಾವಣಾ ತೀರ್ಪುಗಳ ನಿರಾಕರಣೆಗೆ ಬಿಜೆಪಿಯ ಹಣಶಕ್ತಿಯ ಬೃಹತ್ ಪ್ರಮಾಣದ ಬಳಕೆ ಈ ವಿಷಯಗಳ ಮೇಲೆ ರಾಜ್ಯಮಟ್ಟಗಳಲ್ಲಿ ವಿಶಾಲ ರಂಗಗಳನ್ನು ಬೆಸೆಯಲಾಗುವುದು ಎಂದು ಅದು ಹೇಳಿದೆ.
ಡಿಸೆಂಬರ್ 10 ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳ ದಿನ ಮತ್ತು ಡಿಸೆಂಬರ್ 18 ಅಂತರ್ರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕುಗಳ ದಿನ. ಡಿಸೆಂಬರ್ 10ರಿಂದ 18 ನಡುವಿನ ಅವಧಿಯಲ್ಲಿ ದೇಶಾದ್ಯಂತ ಮಾನವ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ವಾರಾಚರಣೆ ನಡೆಸಬೇಕು ಎಂದು ಕೇಂದ್ರ ಸಮಿತಿ ನಿರ್ಧರಿಸಿದೆ. ಅದು ನವಂಬರ್ 26 ರ ಕಾರ್ಮಿಕರ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಮತ್ತು ನವಂಬರ್26-27ರಂದು ರೈತರ ಪ್ರತಿಭಟನಾ ಕಾರ್ಯಾಚರಣೆಗೆ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತಪಡಿಸಿದೆ.
ಅಕ್ಟೋಬರ್ 30 ಮತ್ತು 31ರಂದು ನಡೆದ ಸಿಪಿಐ(ಎಂ) ಕೇಂದ್ರ ಸಮಿತಿಯ ಆನ್ಲೈನ್ ಸಭೆಯ ನಂತರ ನೀಡಿರುವ ಹೇಳಿಕೆಯಲ್ಲಿ ಈ ಕರೆಗಳನ್ನು ನೀಡಲಾಗಿದೆ ಮತ್ತು ನಿರ್ಧಾರಗಳನ್ನು ಪ್ರಕಟಿಸಲಾಗಿದೆ. ಈ ಸಭೆ ದೇಶದಲ್ಲಿ ಕೊವಿಡ್-19 ಮಹಾಸೋಂಕಿನ ಸ್ಥಿತಿ-ಗತಿ, ಆರ್ಥಿಕ ಹಿಂಜರಿತ, ದುಡಿಯುವ ವರ್ಗ ಮತ್ತು ದುಡಿಯುವ ಜನಗಳ ಮೇಲೆ ಏಟುಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ನ ಪರಿಸ್ಥಿತಿ, ಹಿಂದುತ್ವ’ ಅಜೆಂಡಾದ ನಿರಂತರ ಅನುಸರಣೆಯ ಅಪಾಯಗಳನ್ನು ಚರ್ಚಿಸಿತು. ಅಲ್ಲದೆ ಮುಂಬರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಪಟ್ಟಂತೆ ಪಕ್ಷದ ನಿಲುವನ್ನು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಕುರಿತಂತೆ ಆಯಾಯ ರಾಜ್ಯಸಮಿತಿಗಳು ಮುಂದಿಟ್ಟ ಪ್ರಸ್ತಾವನೆಗಳನ್ನು ಕೇಂದ್ರ ಸಮಿತಿ ಅನುಮೋದಿಸಿತು.
ಕೇರಳದಲ್ಲಿ, ಪಕ್ಷವು ಎಲ್.ಡಿ.ಎಫ್ ಭಾಗವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ಮುಂದುವರೆಸುತ್ತದೆ. ತಮಿಳುನಾಡಿನಲ್ಲಿ ಸಿಪಿಐ(ಎಂ) ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿ ಚುನಾವಣೆಗಳಲ್ಲಿ ಭಾಗವಹಿಸುತ್ತದೆ. ಅಸ್ಸಾಂನಲ್ಲಿ, ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತಿರುವ, ಸಾಮಾಜಿಕ ಸಾಮರಸ್ಯವನ್ನು ಅಸ್ಥಿರಗೊಳಿಸುತ್ತಿರುವ ಮತ್ತು ಜನಗಳ ಮೇಲೆ ಸಂಕಟಗಳನ್ನು ರಾಶಿ ಹಾಕುತ್ತಿರುವ ಬಿಜೆಪಿ ಸರಕಾರವನ್ನು ಸೋಲಿಸಲು ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ಪ್ರತಿಪಕ್ಷಗಳ ಸಹಕಾರದೊಂದಿಗೆ ಸಿಪಿಐ(ಎಂ) ಚುನಾವಣೆಗಳಲ್ಲಿ ಸ್ಪರ್ಧಿಸುತ್ತದೆ. ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಮತ್ತು ಟಿಎಂಸಿಯನ್ನು ಸೋಲಿಸಲು ಪ್ರಯತ್ನಿಸುವ ಎಲ್ಲ ಜಾತ್ಯತೀತ ಪಕ್ಷಗಳೊಂದಿಗೆ, ಕಾಂಗ್ರೆಸ್ನೊಂದಿಗೆ ಕೂಡ, ಸಿಪಿಐ(ಎಂ) ಮತ್ತು ಎಡರಂಗ ಚುನಾವಣಾ ತಿಳುವಳಿಕೆ ಹೊಂದುತ್ತವೆ ಎಂದು ಕೇಂದ್ರ ಸಮಿತಿಯ ಈ ಪ್ರಕಟಣೆ ಹೇಳಿದೆ.
ಅಮೆರಿಕ ಸಂಯುಕ್ತ ಸಂಸ್ಥಾನಗಳು, ಭಾರತ ಮತ್ತು ಬ್ರೆಝಿಲ್ ನಲ್ಲಿ ಅತಿ ಹೆಚ್ಚು ಕೊವಿಡ್ ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿವೆ. ಆದರೆ ಭಾರತದ ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿಗಳು ಈ ಸಾಂಕ್ರಾಮಿಕವನ್ನು ತಡೆದಿಡುವ ತಮ್ಮ ಜವಾಬ್ದಾರಿಯನ್ನು ತೊರೆದೇ ಬಿಟ್ಟಿದ್ದಾರೆ. ಇನ್ನೂ ಕೆಡುಕಿನ ಸಂಗತಿಯೆಂದರೆ ಕೋಟ್ಯಂತರ ಜನತೆ ಸಾಂಕ್ರಾಮಿಕದ ಹೊಡೆತ ಮತ್ತು ಆಳಗೊಳ್ಳುತ್ತಿರುವ ಆರ್ಥಿಕ ಹಿಂಜರಿತದ ಇಕ್ಕುಳದಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಮೋದಿ, ಮಾರ್ಚ್ 25ರಂದು ರಾಷ್ಟ್ರೀಯ ಲಾಕ್ಡೌನ್ ಹೇರಿದಂದಿನಿಂದ ಸಿಪಿಐ(ಎಂ) ಆಗ್ರಹಿಸುತ್ತಿರುವಂತೆ ನಗದು ವರ್ಗಾವಣೆ ಮತ್ತು ಆಹಾರಧಾನ್ಯಗಳ ಉಚಿತ ವಿತರಣೆಯ ಬಗ್ಗೆ ಪ್ರಕಟಿಸಲು ನಿರಾಕರಿಸುತ್ತಿದ್ದಾರೆ. ಜನಗಳ ಹೆಚ್ಚುತ್ತಿರುವ ಸಂಕಟಗಳಿಗೆ, ನಾಗಾಲೋಟ ಹೂಡಿರುವ ನಿರುದ್ಯೋಗಕ್ಕೆ ಮತ್ತು ಹೆಚ್ಚುತ್ತಿರುವ ಹಸಿವಿಗೆ ಯಾವುದೇ ಪರಿಹಾರವನ್ನು ಒದಗಿಸುತ್ತಿಲ್ಲ.
ಕೊವಿಡ್ ವಿರುದ್ಧ ಚುಚ್ಚು ಮದ್ದಿನ ಬಗ್ಗೆ ಬಿಹಾರ ಚುನಾವಣೆಯ ಸಂಧರ್ಭದಲ್ಲಿ ಎದ್ದಿರುವ ಸಂದೇಹವನ್ನು ಪರಿಶೀಲಿಸಿದ ಕೇಂದ್ರ ಸಮಿತಿ, ಇಂತಹ ಚುಚ್ಚುಮದ್ದುಗಳು ಸಾರ್ವತ್ರಿಕವಾಗಿ ಎಲ್ಲ ಜನರಿಗೆ ಉಚಿತವಾಗಿ ಲಭ್ಯವಾಗಬೇಕು ಎಂಬುದು ಸದಾ ಪಕ್ಷದ ನಿಲುವು ಎಂದು ಸ್ಪಷ್ಟಪಡಿಸಿತು. ಸ್ವತಂತ್ರ ಭಾರತದಲ್ಲಿ ಆರಂಭದಿಂದಲೂ ಇದೇ ಪದ್ಧತಿಯಾಗಿದೆ- ಸಿಡುಬಿನ ನಿರ್ಮೂಲನೆಯ ಪ್ರಚಾರದಿಂದ ಹಿಡಿದು ಇತ್ತೀಚಿನ ಪೋಲಿಯೋ ನಿರ್ಮೂಲನದ ವರೆಗೆ ಹೀಗೇ ನಡೆದುಕೊಂಡು ಬರಲಾಗಿದೆ. ಇದು ಕೇಂದ್ರ ಸರಕಾರದ ಪ್ರಾಥಮಿಕ ಹೊಣೆಯಾಗಿದ್ದು , ಅದು ಸದಾ ಜನಗಳು ಚುಚ್ಚುಮದ್ದು ಹಾಕಿಸಿಕೊಳ್ಳುವಂತೆ ಜಾಗೃತಿ ಪ್ರಚಾರಗಳನ್ನು ನಡೆಸಿಕೊಂಡು ಬಂದಿದೆ.
ಕೊವಿಡ್-19 ಚುಚ್ಚುಮದ್ದಿನ ವಿಷಯದಲ್ಲೂ ಹಾಗೆಯೇ ಆಗಬೇಕು. ಈ ಚುಚ್ಚುಮದ್ದು ಬೇಗನೇ ಲಭ್ಯವಾಗುತ್ತದೆ ಎಂದು ಆಶಿಸೋಣ. ಆದರೆ, ಕೇಂದ್ರ ಸರಕಾರ ಈ ವಿಷಯದಲ್ಲೂ ತನ್ನ ಜವಾಬ್ದಾರಿಯನ್ನು ತೊರೆಯುತ್ತಿರುವಂತೆ ಕಾಣುತ್ತದೆ, ಈ ಬಗ್ಗೆ ನಿರ್ಧರಿಸಲಾಗುವುದು ಎನ್ನುತ್ತ ಅದನ್ನು ರಾಜ್ಯ ಸರಕಾರಗಳಿಗೆ ದಾಟಿಸುವಂತೆ ಕಾಣುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಇದನ್ನೊಂದು ರಾಷ್ಟ್ರೀಯ ಪ್ರಚಾರಾಂದೋಲನವಾಗಿ ಮಾಡಬೇಕು ಮತ್ತು ಸಾರ್ವತ್ರಿಕವಾಗಿ ಇದು ಪ್ರತಿಯೊಬ್ಬರಿಗೂ ಉಚಿತವಾಗಿ ಲಭ್ಯವಾಗುವಂತೆ ಖಾತ್ರಿಪಡಿಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ.
ಕೇಂದ್ರ ಸರಕಾರ ಅಮೆರಿಕನ್ ಸಾಮ್ರಾಜ್ಯಶಾಹಿ ನೇತೃತ್ವದ ಮಿಲಿಟರಿ ಸಖ್ಯತೆಯನ್ನು ಗಟ್ಟಿಗೊಳಿಸಿದೆ. ಇದು ಸಮಯದ ಒರೆಗಲ್ಲಿನಲ್ಲಿ ಸಾಬೀತಾಗಿರುವ ಭಾರತದ ವಿದೇಶಾಂಗ ಧೋರಣೆಯ ಸಂಪೂರ್ಣ ನಿರಾಕರಣೆಯಾಗಿದೆ. ಈ ಧೋರಣೆ ಯಾವುದೇ ಮಿಲಿಟರಿ ಸಖ್ಯತೆಯ ಭಾಗವಾಗದೇ, ಅಮರಿಕನ್ ಸಾಮ್ರಾಜ್ಯಶಾಹಿಯೊಂದಿಗೆ ವ್ಯೂಹಾತ್ಮಕ ಸಖ್ಯತೆ ಇಲ್ಲದೆ ನಮ್ಮ ದೇಶದ ಹಿತದೃಷ್ಟಿಯಿಂದ ಸ್ವತಂತ್ರವಾಗಿ ನಿಲುವು ತೆಗೆದುಕೊಳ್ಳುವುದನ್ನು ಆಧರಿಸಿತ್ತು. ಮೊತ್ತಮೊದಲ ಬಾರಿಗೆ, ‘ಕ್ವಾಡ್’(ಚತುರ್ರಾಷ್ಟ್ರ) ಜಂಟಿ ಮಿಲಿಟರಿ ಸಮರಾಭ್ಯಾಸ, ಮಲಬಾರ್ ನಾವಿಕ ಸಮರಾಭ್ಯಾಸ 2020 ನ್ನು ನಡೆಸಲಿದೆ ಎಂಬ ಸಂಗತಿಯತ್ತ ಕೇಂದ್ರ ಸಮಿತಿ ಗಮನ ಸೆಳೆದಿದೆ.
ರಿಝರ್ವ್ ಬ್ಯಾಂಖ್ 2020-21 ರ ಹಣಕಾಸು ವರ್ಷದಲ್ಲಿ (-)9.5 ಶೇ. ಕುಗ್ಗುವಿಕೆ ಸಂಭವಿಸಬಹುದು ಎಂದು ಅಂದಾಜು ಮಾಡಿದೆ. ನಂತರ ಐಎಂಎಫ್ ಇದು (-)10.3 ಎಂದು ಲೆಕ್ಕ ಹಾಕಿದೆ. ಈ ಕುಗ್ಗುವಿಕೆ 2016-17ರಿಂದ ಜಿಡಿಪಿ ಬೆಳವಣಿಗೆ ದರದಲ್ಲಿ ಆಗುತ್ತಿರುವ ಸತತ ಇಳಿಕೆಯ ಮೇಲೆ ಉಂಟಾಗುತ್ತಿದೆ. ಜಿಡಿಪಿ ಬೆಳವಣಿಗೆ ದರ 2016-17ರಲ್ಲಿ 8.3ಶೇ. ಇತ್ತು, 2017-18ರಲ್ಲಿ 7 ಶೇ.ಕ್ಕೆ, 2018-19ರಲ್ಲಿ 6.1ಶೇ.ಕ್ಕೆ, 2019-20ರಲ್ಲಿ 4.ಶೇ.ಕ್ಕೆ ಇಳಿದಿದೆ; 2020-21ರಲ್ಲಿ (-)9.5ಶೇ. ಕ್ಕೆ ಇಳಿಯಲಿದೆ. ಅಂದರೆ, ಕಳೆದ ಐದು ವರ್ಷಗಳಲ್ಲಿ ಅರ್ಥವ್ಯವಸ್ಥೆ ಸತತ ಅವನತಿ ಕಾಣುತ್ತಿದೆ ಎಂಬುದು ಸ್ಪಷ್ಟ.
ಈ ಆರ್ಥಿಕ ಅವನತಿ ನಿರುದ್ಯೋಗದ ಮೇಲೆ ಬಹಳ ತೀವ್ರವಾದ ಪರಿಣಾಮವನ್ನು ಬೀರಿದೆ. ಶ್ರಮ ಭಾಗವಹಿಸುವಿಕೆಯ ದರ ತೀವ್ರವಾಗಿ ಇಳಿದಿದೆ ಮತ್ತು ಸುಮಾರು 15 ಕೋಟಿ ಮಂದಿ ಜೀವನಾಧಾರಗಳನ್ನು ಕಳಕೊಂಡಿದ್ದಾರೆ. ಜಾಗತಿಕ ಹಸಿವು ಸೂಚ್ಯಂಕ ಭಾರತವನ್ನು 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿಟ್ಟಿದೆ. ಇದೀಗ ಬಿಜೆಪಿ ಸರಕಾರದ ಧೋರಣೆಗಳ ಶೋಚನೀಯ ನಿರ್ವಹಣೆ. ನಮ್ಮ ಎಲ್ಲ ನೆರೆ ದೇಶಗಳು- ಶ್ರೀಲಂಕ, ನೇಪಾಳ, ಬಾಂಗ್ಲಾದೇಶ, ಮ್ಯಾನ್ಮರ್ ಮತ್ತು ಪಾಕಿಸ್ತಾನ ಈ ಸೂಚ್ಯಂಕದಲ್ಲಿ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿವೆ.
ನಮ್ಮ ಜನಗಳಲ್ಲಿ ಒಂದು ದೊಡ್ಡ ಸಂಖ್ಯೆಯನ್ನು ಹಸಿವು ಕಾಡುತ್ತಿದೆ ಎಂಬುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರೀಯ ಗೋದಾಮುಗಳಲ್ಲಿ ಹಲವು ಕೋಟಿ ಟನ್ ಆಹಾರಧಾನ್ಯಗಳು ಕೊಳೆಯುತ್ತ ಬಿದ್ದಿವೆ. ಉಚಿತ ಆಹಾರವನ್ನು ಒದಗಿಸಲು ಇದನ್ನು ಬಳಸಿಕೊಳ್ಳಬೇಕು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಭಾರತದ 50 ಅತಿ ಶ್ರೀಮಂತ ಮಂದಿಯ ಸಂಪತ್ತು 2020ರಲ್ಲಿ ಇದುವರೆಗೆ 14ಶೇ.ದಷ್ಟು ಹೆಚ್ಚಿರುವ ಹೊಲಸು ಸಂಗತಿಯನ್ನು ಕಾಣುತ್ತಿದ್ದೇವೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಖೇದ ವ್ಯಕ್ತಪಡಿಸಿದೆ.
ಈಗಿರುವ 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ, ಅವುಗಳ ಜಾಗದಲ್ಲಿ ಸಂಸತ್ತಿನ ಮೊಟಕುಗೊಂಡ ಮಳೆಗಾಲದ ಅಧಿವೇಶನದಲ್ಲಿ ಬಲವಂತದಿಂದ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ಕಾರ್ಮಿಕರ ಹಕ್ಕುಗಳು ಮತ್ತು ರಕ್ಷಣೆಗೆ ಸಂಬಂಧಪಟ್ಟ ಮತ್ತು ಮಾಲಕರ ಮೇಲೆ ಹತೋಟಿಯಿಡುವ ನಿಬಂಧನೆಗಳಿಗೆ ಸಂಬಂಧಪಟ್ಟ ಸುಮಾರಾಗಿ ಎಲ್ಲ ಪ್ರಯೋಜನಕಾರೀ ಅಂಶಗಳನ್ನು, ಒಂದೋ ದುರ್ಬಲಗೊಳಿಸಲಾಗಿದೆ, ಇಲ್ಲವೇ ತೆಗೆದೇ ಹಾಕಲಾಗಿದೆ. ಈ ಸಂಹಿತೆಗಳು ಕಾರ್ಮಿಕರನ್ನು ಗುಲಾಮರಾಗಿ ಪರಿವರ್ತಿಸಿವೆ.
ಪ್ರಧಾನ ಮಂತ್ರಿ ಮೋದಿ ಸ್ವಾವಲಂಬನೆಯ ಹೆಸರಲ್ಲಿ ಅನುಸರಿಸುತ್ತಿರುವ ಆರ್ಥಿಕ ಸುಧಾರಣೆಗಳ ಇಡೀ ಕಂತೆ ನಮ್ಮ ಅರ್ಥವ್ಯವಸ್ಥೆಯನ್ನು ಖಾಸಗೀ ಲಾಭಕ್ಕೆ ಅಡಿಯಾಳಾಗಿ ಮಾಡುವಂತದ್ದು. ಕೇಂದ್ರ ಸರಕಾರ, ಅತ್ಯಂತ ಮೋಸದಿಂದ, ಭಾರತೀಯ ಸಂಸತ್ತಿನ ಹಕ್ಕುಗಳನ್ನು ನಾಚಿಕೆಯಿಲ್ಲದೆ ಮೊಟಕುಗೊಳಿಸಿ, ಕೃಷಿ ಮಸೂದೆಗಳನ್ನು ಶಾಸನಗಳಾಗಿ ಮಾಡಿದೆ. ಈ ಹೊಸ ಕಾಯ್ದೆಗಳು ಭಾರತೀಯ ಕೃಷಿಯನ್ನು, ನಮ್ಮ ಉತ್ಪನ್ನಗಳು ಮತ್ತು ಮಾರುಕಟ್ಟೆಗಳನ್ನು ವಿದೇಶಿ ಮತ್ತು ದೇಶಿ ಕೃಷಿ ವ್ಯಾಪಾರೀ ಕಾರ್ಪೊರೇಟ್ಗಳಿಗೆ ವಹಿಸಿ ಕೊಡುತ್ತವೆ. ಇದು ವಿದೇಶಿ ಮತ್ತು ದೇಶೀ ಕಾರ್ಪೊರೇಟ್ಗಳಿಗ ಅತಿ ಲಾಭಗಳನ್ನು ಗಳಿಸಲು ಅಪಾರ ಅನುಕೂಲಗಳನ್ನು ಒದಗಿಸುತ್ತದೆ, ಇತ್ತ ರೈತರು ಮತ್ತು ಜನತೆಯ ಮೇಲೂ ಸಂಕಟಗಳನ್ನು ಹೇರುತ್ತದೆ, ಭಾರತದ ಆಹಾರ ಭದ್ರತೆಗೆ ಸಂಚಕಾರ ತರುತ್ತದೆ.
ಈ ನಡುವೆ ಬಿಜೆಪಿ ಕೇಂದ್ರ ಸರಕಾರ ಸಾಂಕ್ರಾಮಿಕದ ಅವಧಿಯನ್ನು ಮತ್ತು ಅದರಿಂದಾಗಿ, ಲಾಕ್ಡೌನ್ ನಿರ್ಬಂಧಗಳು ಇತ್ಯಾದಿಗಳಿಂದ ಸಾಮಾನ್ಯ ಜನಜೀವನ ಮತ್ತು ಚಟುವಟಿಕೆಗಳ ಅಸ್ತವ್ಯಸ್ತಗೊಂಡಿರುವುದನ್ನು ಬಳಸಿಕೊಂಡು ಭಾರತವನ್ನು ಒಂದು ಉನ್ನತ್ತ ಫ್ಯಾಸಿಸ್ಟ್ ತೆರನ ‘ಹಿಂದುತ್ವ ರಾಷ್ಟ್ರ’ವಾಗಿ ಪರಿವರ್ತಿಸುವ ಆರೆಸ್ಸೆಸ್ನ ಮೂಲ ಅಜೆಂಡಾವನ್ನು ಮುಂದೊತ್ತುತ್ತಿದೆ. ಇದರೊಂದಿಗೆ ದಲಿತರು, ಮಹಿಳೆಯರು, ಮುಸ್ಲಿಂ ಅಲ್ಪಸಂಖ್ಯಾತರು, ಚಿಂತಕರು ಮತ್ತು ಪ್ರತಿಪಕ್ಷಗಳ ಮುಖಂಡರ ಮೇಲೆ ಪ್ರಹಾರಗಳು ಹೆಚ್ಚುತ್ತಿವೆ ಎಂಬ ಸಂಗತಿಯತ್ತ ಕೇಂದ್ರ ಸಮಿತಿ ಗಮನ ಸೆಳೆದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರಗಿನವರಿಗೆ ಭೂಮಿ ಮತ್ತು ಆಸ್ತಿಗಳನ್ನು ಖರೀದಿಸಲು ಅನುಮತಿ ಕೊಡುವ ಹೊಸ ಭೂಮಿ ಕಾನೂನಿನ ಹಿಂದೆ, ಜಮ್ಮು ಮತ್ತು ಕಾಶ್ಮೀರದ ಸಂಪನ್ಮೂಲಗಳು ಮತ್ತು ಅಲ್ಲಿನ ಜನತೆಯನ್ನು ಲೂಟಿ ಮಾಡುವುದಲ್ಲದೆ, ರಾಜ್ಯದ ಜನಸಂಖ್ಯಾ ಸಂಯೋಜನೆಯನ್ನು ಬದಲಿಸುವ ಹುನ್ನಾರವೂ ಇರುವಂತೆ ಕಾಣುತ್ತದೆ. ಕೇರಳದಲ್ಲಿ ಎಲ್ಡಿಎಫ್ ಸರಕಾರದ ಮೇಲೆ ಗುರಿಯಿಡಲು ಸಿಬಿಐ ನಂತಹ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಕೇಂದ್ರ ಸಮಿತಿ ಖಂಡಿಸಿತು. ಈ ಕುತಂತ್ರಗಳಿಗೆ ಕೇರಳದ ಜನತೆ ಸರಿಯಾದ ಪ್ರತ್ಯುತ್ತರವನ್ನು ಕೊಡುತ್ತಾರೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಎಚ್ಚರಿಸಿದೆ.