ಕಂಡಿದ್ದು ಹೇಳಿದರೆ ಕೆಂಡದಂಥಾ ಕೋಪ . . . .ಹೌದು, ಸತ್ಯ ಸದಾ ಕಹಿ!

ಅನು : ಟಿ.ಸುರೇಂದ್ರ ರಾವ್ 

ಕೃಪೆ : ಇಂಡಿಯನ್ ಎಕ್ಸ್ ಪ್ರೆಸ್ 

“ಹಿಂದೂಗಳು, ಜೈನರು ಮತ್ತು ಬೌದ್ಧರು ಗೋಮಾಂಸ ತಿಂದಿದ್ದಾರೆ. ಮಹಾವೀರ ಮತ್ತು ಬುದ್ಧ ಗೋಮಾಂಸ ತಿಂದಿದ್ದರು . ” ಎಂದು ಸತ್ಯ ಹೇಳಿ ಪವಿತ್ರ ಗೋವನ್ನು ಎದುರು ಹಾಕಿಕೊಂಡರು ದೆಹಲಿ ವಿಶ್ವವಿದ್ಯಾಲಯದ ಇತಿಹಾಸಕಾರ ಡಿ.ಎನ್.ಝಾ.

ಸೌಮ್ಯ ಸ್ವಭಾವದ, ಬಕ್ಕತಲೆಯ ಇತಿಹಾಸ ಪ್ರಾಧ್ಯಾಪಕ ದ್ವಿಜೇಂದ್ರ ನಾರಾಯಣ್ ಝಾ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ದೆಹಲಿ ವಿಶ್ವವಿದ್ಯಾಲಯದ ತನ್ನ ಬೋಧನಾ ಕೊಠಡಿಗೆ ಪೋಲಿಸ್ ಪೇದೆಯ ಬೆಂಗಾವಲಿನಲ್ಲಿ ಪ್ರಯಾಸದಿಂದ ಹೋಗಿಬರುತ್ತಿದ್ದಾರೆ. ಪ್ರಾಚೀನ ಚರಿತ್ರೆಯ ಬೋಧನೆಯಿಂದ ಸಾಮಾನ್ಯವಾಗಿ ಯಾರ ಆರೋಗ್ಯವೂ ಅಪಾಯಕ್ಕೆ ಸಿಲುಕುವುದಿಲ್ಲ; ಆದರೆ ಯಾವಾಗ ಜತನದಿಂದ ಕಾಪಾಡಿಕೊಂಡು ಬಂದಿದ್ದ ಭಾರತೀಯ ಇತಿಹಾಸದ ರಹಸ್ಯವೊಂದನ್ನು ಡಿ.ಎನ್.ಝಾ ಬಯಲು ಮಾಡಿದರೋ ಆವಾಗಿನಿಂದ ಅವರ ಫೋನ್ ಹೊಡೆದುಕೊಳ್ಳುವುದು ನಿಂತೇ ಇಲ್ಲ. ‘ಪವಿತ್ರ ಗೋವು – ಭಾರತೀಯ ಆಹಾರಕ್ರಮದ ಸಂದರ್ಭದಲ್ಲಿ ಗೋಮಾಂಸ’ ಎಂಬ ತಮ್ಮ ಪುಸ್ತಕದಲ್ಲಿ ಪ್ರಾಚೀನ ಹಿಂದೂಗಳು, ಬೌದ್ಧರು ಮತ್ತು ಆರಂಭಿಕ ಜೈನರಲ್ಲಿ ಕೂಡ ಗೋಮಾಂಸ ತಿನ್ನುವ ಅಭ್ಯಾಸ ಇತ್ತು ಎಂಬ ಗುಟ್ಟನ್ನು ಅವರು ರಟ್ಟು ಮಾಡಿದ್ದರು.

“ಆ ಫೋನ್ ಕರೆಗಳು ಸಾಮಾನ್ಯವಾಗಿ ನಿಂದನೆಯಾಗಿರುತ್ತಿದ್ದವು; ಆದರೆ ಕೆಲವು ಬಾರಿ ನನ್ನ ಬಳಿ ಏನು ಪುರಾವೆ ಇದೆ ಎಂದು ಒತ್ತಾಯಪೂರ್ವಕರಾಗಿ ಕೇಳುತ್ತಿದ್ದರು; ಮತ್ತು ಒಂದು ದಿನ ಜುಲೈ ಕೊನೆಯ ಭಾಗದಲ್ಲಿ ಅನಾಮಧೇಯ ಕರೆಯೊಂದು ನನ್ನ ಪುಸ್ತಕವನ್ನೇನಾದರೂ ಬಿಡುಗಡೆ ಮಾಡಿದ್ದೇ ಆದರೆ ಪರಿಸ್ಥಿತಿ ನೆಟ್ಟಗಿರಲಿಕ್ಕಿಲ್ಲ ಎಂದು ಬೆದರಿಸಿತು.” ಝಾ ಬಿಚ್ಚಿಟ್ಟರು.

61 ವರ್ಷದ ಆ ಚರಿತ್ರಕಾರರ ಮೇಲೆ ಆ ಕರೆಗಳು ಎರಡು ಪರಿಣಾಮಗಳನ್ನು ಬೀರಿದವು: ಅವರು ಪೋಲಿಸರನ್ನು ಕರೆದರು ಮತ್ತು ಕದನಕ್ಕೆ ಟೊಂಕ ಕಟ್ಟಿ ನಿಂತರು. “ಸಾಂಸ್ಕøತಿಕ ಕದನ ಶುರುವಾಗಿದೆ ಮತ್ತು ಅಧ್ಯಾಪಕರು ತಮ್ಮ ಪಾತ್ರ ವಹಿಸಬೇಕಿದೆ.” ಎಂದು ಝಾ ಶಾಂತವಾಗಿ ಹೇಳಿದರು. ಆದರೆ ಅವರು ನಿರೀಕ್ಷಿಸಿದ ಕದನ ಆ ರೀತಿಯದಾಗಿರಲಿಲ್ಲ. ಅವರ ಪುಸ್ತಕಗಳು ಅಂಗಡಿಗಳಿಗೆ ಬರುವ ಮೊದಲೇ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು, ಪ್ರತಿಗಳನ್ನು ಸುಟ್ಟುಹಾಕಿ ಎಂದು ವಿಶ್ವ ಹಿಂದೂ ಪರಿಷತ್ ತನ್ನ ಕಾರ್ಯಕರ್ತರಿಗೆ ಪ್ರಚೋದನೆ ನೀಡಿತು. ಬಿಜೆಪಿ ಆ ವ್ಯಾಜ್ಯ ಮುಂದರಿಸಿತು: ಅದರ ಸಂಸದರಲ್ಲೊಬ್ಬರಾದ ಆರ್.ಎಸ್.ರಾವತ್, ಕೇಂದ್ರ ಗೃಹ ಸಚಿವರಿಗೆ ಬರೆದು, ಪುಸ್ತಕವನ್ನು ನಿಷೇಧಿಸಬೇಕು ಮಾತ್ರವಲ್ಲ ಅದರ ಲೇಖಕರು ಮತ್ತು ಪ್ರಕಾಶಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು ಕೂಡ. ಆದರೆ ಪುಸ್ತಕವನ್ನು ಸುಡುವ ಅಥವಾ ನಿಷೇಧಿಸುವ ಮೊದಲೇ, ಜೈನ್ ಸೇವಾ ಸಂಘ ಮಧ್ಯಪ್ರವೇಶ ಮಾಡಿತು. ತಮ್ಮ ಮೂಲ ಪ್ರವರ್ತಕ ಮಹಾವೀರ ಮಾಂಸ ತಿಂದಿದ್ದ ಎಂಬ ಝಾ ಅವರ ಸಮರ್ಥನೆಯ ವರದಿಯಿಂದ ಕೆಂಡಾಮಂಡಲವಾಗಿದ್ದ ಹೈದರಾಬಾದ್ ನೆಲೆಯ ಸಂಘವು ಆ ಪುಸ್ತಕದ ವಿರುದ್ಧ ನ್ಯಾಯಾಲಯದ ತಡೆಯಾಜ್ಞೆ ಕೋರಿತ್ತು. ಇದರಿಂದ ದಿಕ್ಕುತೋಚದ ಇತಿಹಾಸಕಾರರಿಗೆ ತಮ್ಮ ಹೋರಾಟವನ್ನು ಮುಂದುವರಿಸಲು ಪದಗಳೇ ಸಿಗಲಿಲ್ಲ. ವಿವಾದ ಮತ್ತು ಚರ್ಚೆಯನ್ನು ನಿರೀಕ್ಷಿಸಿದ ಝಾ ಅವರು ಪ್ರಾಚೀನ ಪಠ್ಯಗಳಲ್ಲಿ ನಿಖರ ಮಾಹಿತಿಗಳಿಗೆ ಹುಡುಕಾಡಿದರು, ಎರಡು ವರ್ಷಗಳ ಕಾಲ ಅತ್ಯಂತ ಹಿಂದಿನ ಆಕರಗಳಿಂದ ಮಾಹಿತಿಗಳನ್ನು ಕಲೆಹಾಕಿದರು. “ಅವರು ನನ್ನ ಪುಸ್ತಕವನ್ನು ನಿಷೇಧ ಮಾಡಲು ಬಯಸಿದರೆ, ಆಗ ಅವರು ವೇದಗಳನ್ನು, ಉಪನಿಷತ್ತುಗಳನ್ನು, ಸೂತ್ರಗಳನ್ನು ಮತ್ತು ಮಹಾಕಾವ್ಯಗಳನ್ನು ನಿಷೇಧಿಸಬೇಕಾಗುತ್ತದೆ. ಅವರು ಎಲ್ಲಿಗೆ ನಿಲ್ಲಿಸುತ್ತಾರೆ? ನಾನು ಪುರಾವೆಗಳನ್ನು ಕೊಟ್ಟಿದ್ದೇನೆ, ಅವರ ಬಳಿ ಪ್ರತಿ-ಪುರಾವೆಗಳಿವೆಯೇ, ಅವರೇಕೆ ಅವುಗಳೊಂದಿಗೆ ಮುಂದೆ ಬರುವುದಿಲ್ಲ? ಆದರೆ ಅವರು ಎಷ್ಟು ಅಜ್ಞಾನಿಗಳಿದ್ದಾರೆ ಎಂದರೆ ಅವುಗಳನ್ನು ಓದುವುದು ಬಿಡಿ, ಅವರು ಆ ಪಠ್ಯಗಳ ಹೆಸರುಗಳನ್ನೇ ಕೇಳಿಲ್ಲ. ನನ್ನ ಬಳಿ ಪಠ್ಯಗಳಿವೆ ಮತ್ತು ಅವರು ಕುರುಡು ನಂಬಿಕೆಗಳಲ್ಲಿದ್ದಾರೆ.” ಎಂದ ಝಾ ಅವರು ಮುಂದುವರಿದು “ಒಬ್ಬ ಇತಿಹಾಸಕಾರ ಅಷ್ಟನ್ನು ಮಾಡಬಹುದು, ಮತ್ತು ಮಾಡಬೇಕು: ನಂಬಿಕೆಯ ಎದುರು ಸತ್ಯವನ್ನು ಇಡಬೇಕು.” ಎಂದರು.

ಫ್ರೆಂಚ್ ಇತಿಹಾಸಕಾರ ಫರ್ನಾಂಡ್ ಬ್ರಾಡೆಲ್ ಅವರ ಆರಂಭದ ಆಧುನಿಕ ಯೂರೋಪಿನ ಆಹಾರಕ್ರಮದ ಇತಿಹಾಸವನ್ನು ಓದಿದ ನಂತರ ಝಾ ಅವರಿಗೆ ಆಹಾರ ಕ್ರಮದ ಇತಿಹಾಸದ ಬಗ್ಗೆ ಆಸಕ್ತಿ ಹುಟ್ಟಿತು. ಆದರೆ ಋಗ್ವೇದಗಳ ಕಾಲದಲ್ಲಿ ಮತ್ತು 19ನೇ ಶತಮಾನ ಮತ್ತು ನಂತರ ಕೂಡ, ಗೋಹತ್ಯೆಯ ವಿರುದ್ಧ ಬ್ರಾಹ್ಮಣರ ಸತತವಾದ ನಿಷೇಧಗಳ ಹೊರತಾಗಿಯೂ ಮುಂದುವರಿದಿದ್ದ ಭಾರತೀಯರ ಗೋಮಾಂಸ ಭಕ್ಷಣೆಯ ಅಭ್ಯಾಸಗಳ ಬಗ್ಗೆ ಅವರಿಗೆ ಹೆಚ್ಚು ಆಸಕ್ತಿ ಬೆಳೆಯಿತು. ಬ್ರಾಹ್ಮಣರನ್ನೂ ಒಳಗೊಂಡಂತೆ ಪ್ರಾಚೀನ ಹಿಂದೂಗಳು ಗೋಮಾಂಸ ಭಕ್ಷಕರಾಗಿದ್ದರು, ಗೋಹತ್ಯೆ ಮಾಡುವವರ ವಿರುದ್ಧ ಕಾರ್ಷಿಕ ಸಮಾಜವು ಸಣ್ಣಪುಟ್ಟ ದಂಡವನ್ನು ವಿಧಿಸಲು ಪ್ರಾರಂಭ ಮಾಡಿದಾಗ ಅದಕ್ಕೆ ಈಡಾಗಲೂ ಸಿದ್ಧರಾಗಿದ್ದರು, ಮತ್ತು ಈ ಜಾನುವಾರು ಮಾಂಸಗಳ ಬಗೆಗಿನ ಹುಚ್ಚುಪ್ರೀತಿಗೂ ಇಸ್ಲಾಂ ಅಥವಾ ಕ್ರಿಶ್ಚಿಯಾನಿಟಿಗೂ ಸಂಬಂಧವಿರಲಿಲ್ಲ. ಅವು ಯಾವುದೂ ಈ ಸಂಪ್ರದಾಯವಾದಿ ಬ್ರಾಹಣರಲ್ಲದ ಝಾ ಅವರಿಗೆ ಆಘಾತವನ್ನಾಗಲೀ ಅಥವಾ ಅಚ್ಚರಿಯನ್ನಾಗಲೀ ಉಂಟುಮಾಡಲಿಲ್ಲ; ಅವರ ಹೆಸರಿನಲ್ಲಿರುವ ದ್ವಿಜೇಂದ್ರ ಪದದ ಅರ್ಥ “ಬ್ರಾಹ್ಮಣರಲ್ಲಿನ ಅತ್ಯಂತ ಪವಿತ್ರರು”. “ಯಾವ ಶ್ರದ್ಧಾವಂತ ಇತಿಹಾಸಕಾರನೂ, ‘ಹಿಂದೂ’ಗಳಾಗಿರುವ ಆರ್.ಸಿ.ಮಜುಂದಾರ್ ಅಥವಾ ಕೆ.ಎಂ.ಮುನ್ಶಿ ಅವರು ಕೂಡ, ಪ್ರಾಚೀನ ಹಿಂದೂಗಳು ಗೋಮಾಂಸ ತಿನ್ನುತ್ತಿದ್ದರು ಎಂಬುದರ ಕುರಿತು ಯಾವತ್ತೂ ತಕರಾರು ಎತ್ತಿರಲಿಲ್ಲ,” ಝಾ ಹೇಳಿದರು. ಆದರೆ, ಗೋಹತ್ಯೆ ಮಾಡಬಾರದೆಂಬ ಬ್ರಾಹ್ಮಣರ ನಿರಂತರವಾದ ನಿಷೇಧವು ಗೋಮಾಂಸಕ್ಕಾಗಿನ ಜನಪ್ರಿಯ ನಿಲುವನ್ನು ಪ್ರತಿಫಲಿಸುತ್ತದೆ ಎಂದು ಮನವರಿಕೆ ಮಾಡಿಕೊಂಡ ಝಾ ಮುಂದುವರಿದರು ಮತ್ತು ಬ್ರಾಹ್ಮಣರನ್ನೂ ಒಳಗೊಂಡಂತೆ ಹಿಂದೂಗಳ ಎಲ್ಲಾ ವರ್ಗಗಳೂ ಗೋಹತ್ಯೆ ಹಾಗೂ ಭಕ್ಷಣೆಯನ್ನು ತೀರಾ ಇತ್ತೀಚಿನವರೆಗೂ ಅಂದರೆ 19ನೇ ಶತಮಾನದ ತನಕವೂ ಮಾಡುತ್ತಿದ್ದರು ಎನ್ನುವ ಅಲ್ಲಗಳೆಯಲಾಗದ ಪುರಾವೆಗಳನ್ನು ಹೊರತೆಗೆದರು. “ನಾನು ಇದನ್ನು ನಿರೀಕ್ಷಿಸಿದ್ದೆ,” ಎಂದ ಝಾ, 30 ವರ್ಷಗಳ ಹಿಂದೆಯೇ ಕೇಂಬ್ರಿಡ್ಜಿನಲ್ಲಿ ಗೋಮಾಂಸದ ರುಚಿ ನೋಡಿದ್ದರು. “ಕಾರಣಗಳಿಲ್ಲದೇ ಬ್ರಾಹ್ಮಣರು ನಿಷೇಧಗಳನ್ನು ಹೇರುತ್ತಿದ್ದರು ಎನ್ನುವುದನ್ನು ನಂಬುವುದು ಕಷ್ಟ. ನನಗೆ ಸಿಕ್ಕಿದ್ದಕ್ಕಿಂತಲೂ ಇನ್ನೂ ಹೆಚ್ಚಿನ ಪುರಾವೆಗಳು ಇರಬೇಕು ಅನಿಸುತ್ತಿದೆ.”

“19ನೇ ಶತಮಾನದಲ್ಲಿ ದಯಾನಂದ ಸರಸ್ವತಿಯವರ ಗೋರಕ್ಷಣಾ ಚಳುವಳಿಯ ತನಕವೂ ಗೋವು ಪವಿತ್ರ ಪ್ರಾಣಿ ಎಂಬುದು ನಿಜಕ್ಕೂ ಚಾಲ್ತಿಯಲ್ಲಿರಲಿಲ್ಲ.” ಎಂದು ಝಾ ನಂಬಿದ್ದರು. “ಸಂಘಟಿತ ಗೋ-ಸಂರಕ್ಷಣಾ ಚಳುವಳಿಯೊಂದಿಗೆ ಸಾಮೂಹಿಕ ರಾಜಕೀಯ ಸಂಘಟನೆಯ ಒಂದು ಸಾಧನವಾಗಿ ಗೋವು ಮುನ್ನೆಲೆಗೆ ಬಂತು.” ಎಂದು ಇತಿಹಾಸಕಾರರು ತೋರಿಸಿದರು. “ಕೃಷಿ ಸಮಾಜ ಮತ್ತು ಜಾತಿಯ ಕಟ್ಟುನಿಟ್ಟಿನ ನಿಯಮಗಳಿಂದ ಗೋಹತ್ಯೆ ಕ್ರಮೇಣವಾಗಿ ನಿಂತಿತು. ಗೋಮಾಂಸ ತಿನ್ನುವವರು ಅಸ್ಪøಶ್ಯರು ಎಂದು ಹೇಳಲು ಬ್ರಾಹ್ಮಣರಿಗೆ ಅನುಕೂಲವಾಯಿತು. ಆದರೆ ಅವರೇ ಅದನ್ನು ಶ್ರಾದ್ಧ ಮುಂತಾದ ಸಂಧರ್ಭಗಳಲ್ಲಿ ಬಳಸಬಹುದೆಂದು ಶಿಫಾರಸು ಮಾಡಿದರು ಮತ್ತು ಬಳಸಿದರು. ಅದೇ ಸಮಯದಲ್ಲಿ, ಗೋಮಾಂಸ ತಿನ್ನುವುದು ನಿಮ್ಮ ಕೈಬೆರಳುಗಳಿಂದ ನಿಮ್ಮ ಹಲ್ಲುಗಳನ್ನು ಶುಭ್ರಗೊಳಿಸಿದಂತೆ ಎಂದ ಅವರು ಗೋಮಾಂಸವನ್ನು ನಿಷಿದ್ಧ ಎಂದು ಕ್ಷುಲ್ಲಕವಾಗಿಸಿದರು. ಅದನ್ನು ತಿನ್ನುವುದು ಎಂದೂ ಪಾಪವಾಗಿರಲಿಲ್ಲ, ಅಸಭ್ಯವಾಗಿತ್ತಷ್ಟೆ. ಭಕ್ಷಣೆ ಎಂದೂ ನಿಷಿದ್ಧವಾಗಿರಲಿಲ್ಲ, ಅಡ್ಡಿಪಡಿಸುತ್ತಿದ್ದರಷ್ಟೆ.”

ಪ್ರಾಚೀನ ಗ್ರಂಥಗಳಿಂದ, ವೈದ್ಯಕೀಯ ಪಠ್ಯಗಳಿಂದ, ಮನುಸ್ಮøತಿಯಿಂದ ಮತ್ತು ಧಾರ್ಮಿಕ ವ್ಯಾಖ್ಯಾನಗಳಿಂದ ಆಯ್ದುತೆಗೆದ ಈ ಅವಿಷ್ಕಾರದೊಂದಿಗೆ, ಝಾ ಕುಚೋದ್ಯದಿಂದ “ಹೋರಿಯನ್ನು ಅದರ ಕೋಡುಗಳಿಂದಲೇ ಮಣಿಸಲು ತೀರ್ಮಾನಿಸಿದರು” ಮತ್ತು ತಮ್ಮ ಶೋಧನೆಗಳ ಕುರಿತು ಪುಸ್ತಕ ಪ್ರಕಟಿಸಲು ನಿರ್ಧರಿಸಿದರು. “ಹಿಂದಿಯಲ್ಲಿ ಒಂದು ಗಾದೆ ಇದೆ, ‘ಲಾತೋಂಕೆ ಭೂತ್, ಬಾತೋಂ ಸೆ ನಹೀಂ ಮಾನ್‍ತೆ’(ಬಲ ಪ್ರಯೋಗ ಮಾಡುವವರ ಹತ್ತಿರ ಮಾತು ನಡೆಯುವುದಿಲ್ಲ). ಆದಕಾರಣ ನಾನು ಅವರಿಗೆ ಆಘಾತ ಚಿಕಿತ್ಸೆ ಕೊಡಬೇಕಾಯಿತು.” ಎಂದು ಅವರು ವಿವರಿಸಿದರು.

ಝಾ ಅವರ “ಆಘಾತ ಚಿಕಿತ್ಸೆ” ಹಿಂದೂಗಳೊಂದಿಗೇ ನಿಲ್ಲಲಿಲ್ಲ. ಬೌದ್ಧರು ಕೂಡ ಗೋಮಾಂಸ ಮತ್ತಿತರ ಮಾಂಸಗಳನ್ನು ತಿನ್ನುತ್ತಿದ್ದರು ಎಂದು ಅವರ ಅಂಗೀಕೃತ ಗ್ರಂಥಗಳಾದ ಮಹಾಪರಿನಿಬ್ಬನ ಸುತ್ತ ಮತ್ತು ಅಂಗುತ್ತರ ನಿಕಾಯಗಳಿಂದ ಆಧಾರ ಸಹಿತ ಉದ್ಧರಿಸಿದರು. “ವಾಸ್ತವದಲ್ಲಿ, ಬುದ್ಧ ಹಂದಿ ಮಾಂಸ ತಿಂದ ನಂತರ ಅಸುನೀಗಿದ,” ಎಂದ ಅವರು “ಬೌದ್ಧ ಭಿಕ್ಕುಗಳಿಗೆ ಸಸ್ಯಾಹಾರ ಕಾರ್ಯಸಾಧುವಾಗಿರಲಿಲ್ಲ, ಅವರ ಸಮಾಜದಲ್ಲಿ ಅವರು ಎಲ್ಲಾ ರೀತಿಯ ಮಾಂಸಗಳನ್ನು – ಕೋಳಿ ಹಾಗೂ ನವಿಲುಗಳನ್ನು ಒಳಗೊಂಡಂತೆ ಎಲ್ಲಾ ಪಕ್ಷಿಗಳನ್ನು, ಹಂದಿ, ಘೇಂಡಾಮೃಗ, ಗೋವು, ಕೋಣ, ಮೀನು, ಹಾವು, ಇತ್ಯಾದಿಗಳ ಮಾಂಸಗಳನ್ನು – ತಿನ್ನಲು ಇಷ್ಟಪಡುತ್ತಿದ್ದರು. ಒಂಟೆ ಮತ್ತು ನಾಯಿ ಮಾತ್ರ ಭಾರತದಲ್ಲಿ ನಿಷಿದ್ಧವಾಗಿತ್ತು.”

ಆದಿ ಜೈನರೂ ಹೀಗೆಯೇ ಇದ್ದರು. ಭಗವತಿ ಸೂತ್ರವನ್ನು ಆಧಾರ ಸಹಿತ ಉದ್ಧರಿಸಿದ ಝಾ, ಮಹಾವೀರ ಒಮ್ಮೆ ಎದುರಾಳಿಯೊಂದಿಗೆ ಯೋಗ ಕದನದಲ್ಲಿ ತೊಡಗುವ ಸಲುವಾಗಿ ಶಕ್ತಿ ಪಡೆಯಲು ಕೋಳಿ ಊಟ ಮಾಡಿದ್ದರು ಎಂದು ಎತ್ತಿತೋರಿಸಿದರು. “ಆಗತಾನೇ ವಧೆ ಮಾಡಿದ ಕೋಳಿಯ ಬದಲು ಅದಾಗಲೇ ಬೆಕ್ಕಿನಿಂದ ಕೊಲ್ಲಲ್ಪಟ್ಟ ಕೋಳಿ ಬಳಸಿ ಎಂಬ ಷರತ್ತನ್ನು ಊಟ ಸಿದ್ಧಪಡಿಸಿದ ಮಹಿಳೆಯ ಬಳಿ ಮಹಾವೀರ ಹಾಕುತ್ತಾನೆ,” ಎಂದು ಪುರಾವೆ ಒದಗಿಸುತ್ತಾರೆ ಝಾ. “ಇದು ಜೈನರ ಶಾಂತಿಗೆಡಿಸಿತು, ಇಂತಹ ಕತೆಗಳನ್ನು ಹೊಂದಿರುವ ಆ ಪಠ್ಯಗಳ ಬಗ್ಗೆ ಅವರಿಗೆ ಏಕೆ ಕೋಪವಿಲ್ಲ? ನಾನು ಈ ಪುಸ್ತಕಗಳನ್ನು ಜೈನ ಧರ್ಮನಿಷ್ಠ ಪುಸ್ತಕ ಮಾರಾಟಗಾರರಾದ ಮೋತಿಲಾಲ್ ಬನಾರಸಿದಾಸ್ ಮತ್ತು ಸೋಹನ್ ಲಾಲ್ ಜೈನ್ ಧರಂ ಪ್ರಚಾರಕ್ ಸಮಿತಿಯವರು ನಡೆಸುವ ಪುಸ್ತಕ ಅಂಗಡಿಗಳಿಂದಲೇ ಕೊಂಡು ತಂದಿದ್ದೇನೆ.

“ಎದ್ದು ಕಾಣಬೇಕೆಂದು” ಇಷ್ಟಪಡುವುದಿಲ್ಲ ಎಂದು ಝಾ ಘೋಷಿಸಿಕೊಂಡಿದ್ದರೂ ಸಹ, “ಪತ್ನಿ ಮತ್ತು ಮೂರು ಕೆಲಸದವರನ್ನು” ಹೊಂದಿರುವ ಕುಟುಂಬದ ಈ ಮನುಷ್ಯ ಎಂದಿಗೂ ವಾದವಿವಾದಗಳಿಂದ ಓಡಿ ಹೋಗಿಲ್ಲ. ಅವರ ಕುಟುಂಬದವರು ಈ ‘ಹುಚ್ಚುಗಾರಿಕೆ”ಗೆ ಒಗ್ಗಿಹೋಗಿದ್ದಾರೆ ಮತ್ತು ಅವರು ಬೆಳೆದು ಬಂದ ಅಸಾಂಪ್ರದಾಯಿಕ ಪರಿಸರ ಅವರಿಗೆ ಗೋಮಾಂಸದೊಂದಿಗೆ ಪ್ರಯೋಗ ಮಾಡಲು ಅನುವುಮಾಡಿಕೊಟ್ಟಿದೆ. ಆದರೆ ಬಿಹಾರದಲ್ಲಿನ ಅವರ ಸಾಂಪ್ರದಾಯಿಕ ಮೈಥಿಲಿ ಬ್ರಾಹ್ಮಣ ಸಮುದಾಯವು ಕೂಡ ಅವರ ಪುಸ್ತಕವನ್ನು ಸ್ನೇಹಪೂರ್ಣವಾಗಿ ಪರಿಗಣಿಸಿಲ್ಲ. “ನನ್ನ ಅಭಿಪ್ರಾಯವನ್ನು ಸಾಬೀತುಪಡಿಸಲು ಮಿಥಿಲಾ ಮೂಲದಿಂದ ನಾನು ಆಧಾರ ಸಹಿತವಾಗಿ ಉದ್ಧರಿಸಿದ್ದನ್ನು ಅವರು ಇಷ್ಟಪಡಲಿಲ್ಲ.” ಎಂದು ಉದ್ವೇಗವಿಲ್ಲದೇ ಹೇಳುತ್ತಾರೆ ಝಾ.

“ಇಂತಹ ಮೂಢನಂಬಿಕೆಗಳು ಮತ್ತು ಅವಿವೇಕಗಳನ್ನು ಎದುರಿಸುವಲ್ಲಿ ಇತಿಹಾಸಕಾರರು ಕ್ರಿಯಾಶೀಲ ಪಾತ್ರ ವಹಿಸಬೇಕಾದ ಸಂಧಿಕಾಲದಲ್ಲಿ ಭಾರತೀಯ ಸಮಾಜ ಬಂದುನಿಂತಿದೆ.” ಎಂದು ಝಾ ವಿಷಾದದಿಂದ ಹೇಳಿದರು. ಅಯೋಧ್ಯಾ ವಿವಾದದ ಸಮಯದಲ್ಲಿ ಅವರು ಹೋರಾಡಿದರು ಮತ್ತು ರಾಮಾಯಣ ಹಾಗೂ ಮಹಾಭಾರತಗಳಂತಹ ಮಹಾಕಾವ್ಯಗಳ ಟಿ.ವಿ.ಧಾರಾವಾಹಿ ಮಾಡುವುದನ್ನು ಕೂಡ ಆಕ್ಷೇಪಿಸಿದರು. “ಒಂದು ಸರ್ಕಾರಿ ಪ್ರಸಾರ ಮಾಧ್ಯಮದ ನಿಯಮಗಳಿಗೆ ವಿರುದ್ಧವಾಗಿ ಅದು ಮಿಥ್ಯೆಗಳನ್ನು ರಾಜಕೀಕರಣಗೊಳಿಸಿತು ಮತ್ತು ಒಂದು ಮೌಲ್ಯ ವ್ಯವಸ್ಥೆಯನ್ನು ಹಾಗೂ ಧರ್ಮದ ಸೋಗನ್ನು ಪ್ರಚಾರ ಮಾಡಿತು.” ಎಂದರು. “ರಮಾನಂದ ಸಾಗರ್ ಅವರ ಮಹಾಕಾವ್ಯದ ನಿರೂಪಣೆ ನಿಜವಾದ ಚರಿತ್ರೆಯಾಗಿರಲಿಲ್ಲ.” ಎಂದು ಸ್ಪಷ್ಟಪಡಿಸಿದರು.

“ವಯಸ್ಸಾಗಿದೆ ಮತ್ತು ಸುಸ್ತಾಗಿದ್ದೇನೆ” ಎಂದು ತಮ್ಮ ಕುರಿತು ಝಾ ಹೇಳಬಹುದು, ಆದರೆ ಅವರಲ್ಲಿ ಅದಮ್ಯವಾದದ್ದೊಂದು ಇದೆ. ಅವರ ಮುಂದಿನ ಪುಸ್ತಕದ ಮೇಲಿನ ಕೆಲಸಗಳನ್ನು ಮಾಡಲು ನಿಷೇಧಗಳು ಮತ್ತು ಫತ್ವಾಗಳು ತಡೆಯಲಾರವು. “ವ್ಯಭಿಚಾರದ ದೇವರುಗಳು ಮತ್ತು ಅವರುಗಳ ಪಾನಮತ್ತ ಮಹಿಳೆಯರು’ ಎಂದು ಅದನ್ನು ಕರೆಯಲಾಗುವುದು.” ಎಂದು ನಿರ್ಭಾವದಿಂದ ಹೇಳಿದರು ಝಾ.

Donate Janashakthi Media

Leave a Reply

Your email address will not be published. Required fields are marked *