ಬೆಂಗಳೂರು : ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದ ಮೊದಲ ವರ್ಷ 2012 ರಲ್ಲಿ RTE ಅಡಿ ಖಾಸಗಿ ಶಾಲೆಗಳಲ್ಲಿ ದಾಖಲಾಗಿದ್ದ 43,626 ವಿದ್ಯಾರ್ಥಿಗಳಲ್ಲಿ 8 ವರ್ಷಗಳ ಬಳಿಕ 13.910 ವಿದ್ಯಾರ್ಥಿಗಳು ಮಾತ್ರ ಸದರಿ ಶಾಲೆಗಳಲ್ಲಿ ಮುಂದುವರೆದಿದ್ದಾರೆ.
ಉಳಿದಂತೆ 29,716 ವಿದ್ಯಾರ್ಥಿಗಳು ಡ್ರಾಪ್ಔಟ್ ಆಗಿ ಇತರೆ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್೯ವಾದಿ), ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿವೆ.
68.22 ಶೇಕಡ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಕಿರುಕುಳ ಮತ್ತು ದುಬಾರಿ ಶುಲ್ಕಗಳಿಗೆ ಬಲಿಯಾಗಿ ತಮ್ಮ ಮಕ್ಕಳನ್ನು ಇತರೆ ಶಾಲೆಗಳಿಗೆ ಸೇರಿಸುವಂತಾಗಿದೆ ಎಂಬ ವರದಿಯು ಇಡೀ ಶಿಕ್ಷಣ ಹಕ್ಕು ಕಾಯ್ದೆಯ ಆಶಯವು ಬುಡಮೇಲಾಗಿರುವ ಅಂಶದ ಪ್ರತೀಕವಾಗಿದೆ. ಇಂತಹ ದುಸ್ಥಿತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಕೋರತನವೇ ಪ್ರಧಾನ ಕಾರಣವಾಗಿದೆ. ಅದೇ ವೇಳೆ ಈ ಕಾಲಾವಧಿಯಲ್ಲಿ ರಾಜ್ಯ ಸರ್ಕಾರಗಳು ಕಾಯ್ದೆ ಜಾರಿಯಲ್ಲಿ ತೋರಿರುವ ನಿರ್ಲಕ್ಷೆ ಮತ್ತು ಅಸಡ್ಡೆಯ ಪ್ರತೀಕವಾಗಿ ಇಂತಹ ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಹಕ್ಕನ್ನು ತ್ಯಜಿಸುವಂತಹ ಪರಿಸ್ಥಿತಿಗೆ ಕೊಡುಗೆ ನೀಡಿದೆ ಎಂದು ಸಿಪಿಐ(ಎಂ) ಖಂಡಿಸಿದೆ.
9 ಮತ್ತು 1೦ನೇ ತರಗತಿಗೆ RTE ವಿಸ್ತರಿಸಲು ಒತ್ತಾಯ
8 ವರ್ಷದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸದರಿ ಶೈಕ್ಷಣಿಕ ವರ್ಷದಲ್ಲಿ ಅಂತ್ಯವಾಗಲಿದ್ದು 8 ವರ್ಷಗಳ ಹಿಂದೆ RTE ಅಡಿ ಶಾಲೆಗೆ ಸೇರಿದ ವಿದ್ಯಾರ್ಥಿಗಳು ಕಾಯ್ದೆಯ ಜಾರಿ ವಿಸ್ತರಣೆಯಾಗದಿರುವ ಕಾರಣ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಇತರೆ ಶಾಲೆಗಳಿಗೆ ಸೇರಬೇಕಾದ ಅನಿವಾರ್ಯತೆಗೆ ದೂಡಲ್ಪಡುತ್ತಿದ್ದಾರೆ. ಆದ ಕಾರಣ ರಾಜ್ಯ ಸರ್ಕಾರವು ಕೂಡಲೇ ಸದರಿ ಕಾಯ್ದೆ ಅಡಿಯಲ್ಲಿ ಸೇರ್ಪಡೆಯಾಗಿರುವ ವಿದ್ಯಾರ್ಥಿಗಳು ಸದರಿ ಶಾಲೆಯಲ್ಲೇ 9 ಮತ್ತು 1೦ನೇ ತರಗತಿಯಲ್ಲಿ ಮುಂದುವರಿಯಲು ಅನುವಾಗುವಂತೆ ಕಾಯ್ದೆಯನ್ನು ವಿಸ್ತರಿಸಬೇಕೆಂದು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್.ಉಮೇಶ್ ರಾಜ್ಯ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ .
ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಹಾಗೂ ವಿಳಂಬವು ಪ್ರಸ್ತುತ ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಆರಂಭವಾಗಿರುವ ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂಬುದನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಮನಗಾಣಬೇಕೆಂದು ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.