ಸುಮಾರು ನಾಲ್ಕು ದಶಕಗಳಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ದಕ್ಷಿಣ ಕಾಕಸಸ್ ನ ಪರ್ವತ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ತುಂಡು ಭೂಮಿ “ನಾಗೋರ್ನೋ ಕರಾಬಖ್ ” ವಿವಾದ ಕುರಿತಾಗಿ ಎರಡು ದೇಶಗಳು ಘರ್ಷಣೆಯಲ್ಲಿ ತೊಡಗಿವೆ. ವಿವಾದಿತ ನಾಗೋರ್ನೊ ಕರಾಬಖ್ ‘ ಪ್ರದೇಶದ ಬಗ್ಗೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವೆ ಹೊಸ ಸುತ್ತಿನ ಘರ್ಷಣೆಗಳು ಇದೇ ಸೆಪ್ಟೆಂಬರ್ 27, ರಂದು ಮತ್ತೆ ಭುಗಿಲೆದ್ದವು. ಎರಡೂ ದೇಶಗಳ ನಡುವೆ ಪೂರ್ಣ ಪ್ರಮಾಣದ ಯುದ್ದದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಗಡಿಯೊಳಗೆ ಸೆಪ್ಟೆಂಬರ್ 27,( ಭಾನುವಾರ) ಮತ್ತು ಸೆಪ್ಟೆಂಬರ್ 28, ( ಸೋಮವಾರ), ತೀವ್ರ ಘರ್ಷಣೆಗಳು ನಡೆದಿರುವುದು ಗಾಬರಿ ಹುಟ್ಟಿಸಿವೆ. ಎಷ್ಟರ ಮಟ್ಟಿಗೆ ಎಂದರೆ, 2016 ರಲ್ಲಿ ನಡೆದ ಘರ್ಷಣೆಗಿಂತ ತೀವ್ರವಾಗಿದೆ ಎಂದು ವರದಿಯಾಗಿದೆ. ಇದರಲ್ಲಿ ಹಲವಾರು ಹೋರಟಗಾರರು ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ. ಸಾಂದರ್ಭಿಕವಾಗಿ ಉಭಯ ದೇಶಗಳ ಘರ್ಷಣೆ ಹೊಸತೇನಲ್ಲಾ ಆದರೆ, ಇದಕ್ಕೆ ಅಂತರಾಷ್ಟ್ರೀಯ ಸಮುದಾಯ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡ ಬೇಕಾಗಿದೆ.
ನಾಗೋರ್ನೊ ಕರಾಬಖ್ ‘ ನಲ್ಲಿನ ನಾಗರಿಕ ವಸಾಹತುಗಳ ಮೇಲೆ ಅಜೆರ್ಬೈಜಾನ್ ದಾಳಿ ನಡೆಸಿದೆ ಎಂದು ಅರ್ಮೇನಿಯನ್ ಅಧಿಕಾರಿಗಳು ಆರೋಪಿಸಿದ್ದಾರೆ. ಈ ದಾಳಿಯಲ್ಲಿ 31 ಅರ್ಮೇನಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. 19,000 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಗಡಿ ಪಟ್ಟಣವಾದ ಟೆರ್ಟರ್ ಗೆ, ಶೆಲ್ ದಾಳಿ ನಡೆಸಲು ಅರ್ಮೇನಿಯನ್ ಸಶಸ್ತ್ರ ಪಡೆಗಳಿಗೆ ಆದೇಶಿಸಲಾಗಿದೆ. ಹೋರಾಟಗಾರರಲ್ಲದ, ಸಾಮನ್ಯ ನಾಗರಿಕರು ಅರ್ಮೇನಿಯನ್ ರ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಜೆರ್ಬೈಜಾನ್ ವರದಿ ಮಾಡಿದೆ. ಹೀಗೆ ಎರಡೂ ಕಡೆಗಳಿಂದ ದಾಳಿ ಪ್ರತಿ ದಾಳಿ ನಡೆಸುತ್ತಿರುವುದು ಈ ವಾರ ಹೆಚ್ಚಾಗಿದೆ.
ಅರ್ಮೇನಿಯಾ, ನಾಗೋರ್ನೊ-ಕರಾಬಖ್ ಮತ್ತು ಅಜೆರ್ಬೈಜಾನ್ – ಘರ್ಷಣೆ ಯಲ್ಲಿ ತೊಡಗಿರುವ ಮೂರು ಕಡೆಯ ಪಕ್ಷಗಳು, ಒಂದು ಸಣ್ಣ ಒಪ್ಪಂದಕ್ಕೆ ಬಂದು ಭಾನುವಾರ ಆಯಾ ಪ್ರದೇಶಗಳಲ್ಲಿ ಕಾನೂನು ಮತ್ತು ಪೂರ್ಣ ಸಮರ ನಿರ್ಬಂಧ ವನ್ನು ಘೋಷಿಸಿವೆ. ಆ ನಂತರವು, ಅರ್ಮೇನಿಯನ್ ವಿದೇಶಾಂಗ ಸಚಿವಾಲಯವು, ಅಜೆರ್ಬೈಜಾನ್ ಆಕ್ರಮಣಕಾರಿ ಎಂದು ಆರೋಪಿಸಿದ್ದಾರೆ. ಹಾಗೆಯೇ, ನಾವು ” ನಾಗೋರ್ನೊ-ಕರಾಬಖ್” ಜನರ ಸ್ವಾತಂತ್ರ್ಯ” ವನ್ನು ಹೇಗಾದರೂ ರಕ್ಷಿಸುವುದಾಗಿ ಅರ್ಮೇನಿಯನ್ ರು ಪ್ರತಿಜ್ಞೆ ಮಾಡಿದ್ದಾರೆ.
ನಾಗೋರ್ನೊ-ಕರಾಬಖ್, ಅಜೆರ್ಬೈಜಾನ್ ನಿಂದ ಒಡೆದು ಹೋದ ಪ್ರದೇಶವಾಗಿದ್ದು, ಹೆಚ್ಚು ಅರ್ಮೇನಿಯನ್ ಜನಾಂಗದವರು ಬಹುಮತವನ್ನು ಹೊಂದಿರುವ ಪ್ರದೇಶವಾಗಿದೆ. 1991 ರಲ್ಲಿ ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ ಈ ಪ್ರದೇಶವು ಅಜೆರ್ಬೈಜಾನ್ ನಿಂದ ತನ್ನ ಸ್ವಾತಂತ್ರ್ಯವನ್ನು ಪ್ರತ್ಯೇಕವಾಗಿ ಘೋಷಿಸಿ ಕೊಂಡಿತು. ಇದು ವಿವಾದಿತವಾಗಿ, ಎರಡು ಟ್ರಾನ್ಸ್ ಕಾಕೇಶಿಯನ್ ದೇಶಗಳ ನಡುವಿನ ಯುದ್ಧಕ್ಕೆ ಕಾರಣವಾಯಿತು. ಇದಕ್ಕೆ ಕಾರಣ, ಹಲವಾರು ವರ್ಷಗಳಿಂದ ಟ್ರಾನ್ಸ್ ಕಾಕಸಸ್ ಇತಿಹಾಸದ ಮೇಲೆ ಪರಿಣಾಮ ಬೀರಿದ ಪ್ರಮುಖ ಪ್ರಾದೇಶಿಕ ಶಕ್ತಿಗಳಾದ ರಷ್ಯಾ, ಇರಾನ್ ಮತ್ತು ಟರ್ಕಿ ದೇಶಗಳ ನಡುವಿನ ಪೈಪೋಟಿ ಪುನರುಜ್ಜೀವನಗೊಂಡು ಘರ್ಷಣೆ ಗೆ ಹೊಸ ಸಂಕೀರ್ಣಗಳನ್ನು ತಂದೊಡ್ಡಿದವು. 70 ವರ್ಷಗಳ ಹಿಂದೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಣ ವೈರತ್ವವು ಯುಎಸ್ ಎಸ್ ಆರ್ ನ ಆಂತರಿಕ ವಿಷಯವಾಗಿರಲಿಲ್ಲ. ಏಕೆಂದರೆ, ಡಿಸೆಂಬರ್ 1991 ರಲ್ಲಿ ಸೋವಿಯತ್ ಒಕ್ಕೂಟ ಅಸ್ತಿತ್ವದಲ್ಲಿ ಇರಲಿಲ್ಲ. ಅದು ವಿಸರ್ಜನೆಯಾಗಿತ್ತು. ಅದಾದನಂತರ ಘರ್ಷಣೆ ಹೊಸ ಸ್ವರೂಪ ಪಡೆಯಿತು ಎನ್ನಲಾಗಿದೆ.
ಹೀಗಾಗಿ, ಮೇ 1994 ರಲ್ಲಿ ರಷ್ಯಾ ಉಭಯ ದೇಶಗಳ ನಡುವೆ ಕದನ ವಿರಾಮಕ್ಕೆ ಮಧ್ಯಸ್ತಿಕೆ ವಹಿಸಿತ್ತು. ಆದರೆ, ಸಂಘರ್ಷವನ್ನು ನಿಲ್ಲಿಸಲು ಅದು ಅನುವು ಮಾಡಿ ಕೊಡಲಿಲ್ಲ. ಆದರೆ, ಮುಂದಿನ ಮೂರು ದಶಕದವರೆಗೆ ಕದನ ವಿರಾಮ ಉಲಂಘನೆ ಮತ್ತು ಹಿಂಸಾಚಾರ ನಡೆಯದಂತೆ ಒಪ್ಪಿಸಲಾಯಿತು. ಅಜೆರ್ಬೈಜಾನ್ ಪ್ರದೇಶದ ಬಹುಪಾಲು ಭಾಗವು ಅರ್ಮೇನಿಯನ್ನ ನಿಯಂತ್ರಣದಲ್ಲಿದೆ. ಇದು ವಿವಾದಕ್ಕೆ ಮೂಲ ಕಾರಣ. ಇದಕ್ಕಾಗಿ, ಕಾಲಕಾಲಕ್ಕೆ ಘರ್ಷಣೆಗಳು ಭುಗಿಲೇಳುತ್ತವೆ. ಈ ವಿವಾದಕ್ಕೆ ಇನ್ಮು ಅಂತಿಮ ಪರಿಹಾರ ಸಿಕ್ಕಿಲ್ಲ.
ಆದರೆ, ಈ ವರ್ಷ ಜುಲೈ ನಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದಿತು. ಕಾರಣ ಎರಡು ದೇಶಗಳು 1994 ರ ಕದನ ವಿರಾಮವನ್ನು ಉಲಂಘನೆ ಮಾಡಿದ್ದು. ಇದರ ಪರಿಣಾಮ ಒಬ್ಬ ನಾಗರಿಕ ಸೇರಿದಂತೆ, 18 ಜನರು ಸಾವನ್ನಪ್ಪಿದರು. ಅರ್ಮೇನಿಯನ್ ಸೈನ್ನ ಪಡೆ ಅದರ ನಿಯಂತ್ರಣ ರೇಖೆಯನ್ನು ಮೀರಿ ಹೊಸ ಪೋಸ್ಟ್ ಅನ್ನು ಸ್ಥಾಪಿಸುವ ಕ್ರಮವು ಜುಲೈ ನ ಘರ್ಷಣೆಗಳಿಗೆ ಏಕಾಏಕಿ ಕಾರಣವಾಯಿತು.
ಎರಡೂ ದೇಶಗಳ ನಾಯಕರು ಪ್ರಸ್ತುತ ಕೋರೋನಾ ಸಾಂಕ್ರಾಮಿಕ ಪರಿಸ್ಥಿತಿ ಯನ್ನು ನಿಭಾಯಿಸುವ ಕಾರ್ಯದಲ್ಲಿ ತೊಡಗಿರುವುದರಿಂದ, ಘರ್ಷಣೆ ಯನ್ನು ನಿಭಾಯಿಸಲು ಸಾಧ್ಯವಾಗಿಲ್ಲ. ಆದರೆ, ಇದೀಗ ಮತ್ತೊಮ್ಮೆ ಈ ವಾರ ಘರ್ಷಣೆ ಭುಗಿಲೆದ್ದಿದೆ. ಬೆಳೆಯತ್ತಿರುವ ಅಜೆರ್ಬೈಜಾನ್ ಮತ್ತು ಅರ್ಮೇನಿಯನ್ ರಾಷ್ಟ್ರೀಯತೆಯೊಂದಿಗೆ, ಸ್ಥಳಾಂತರ , ರಕ್ತಪಾತ ಮತ್ತು ಜನಾಂಗೀಯ ಶುದ್ಧೀಕರಣದ ವರದಿಗಳು ಘರ್ಷಣೆಯ ಭಾಗವಾಗಿವೆ.
ಏತನ್ಮಧ್ಯೆ, ಅಂತರಾಷ್ಟ್ರೀಯ ಶಕ್ತಿಗಳ ಒಳಗೊಳ್ಳುವಿಕೆಯ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ, ವ್ಯಾಪಕ ಪ್ರಾದೇಶಿಕ ಯುದ್ದದ ಕಾರ್ಮೋಡದ ಸೂಚನೆಗಳು ಪ್ರಸಕ್ತ ಘರ್ಷಣೆಗಳಲ್ಲಿ ಎದ್ದು ಕಾಣುತ್ತಿವೆ. ಇದು ಈ ಎರಡು ದೇಶಗಳ ನಡುವಿನ ಯುದ್ದಕ್ಕೆ ನಾಂದಿಯಾಗುವ ಅಪಾಯಕಾರಿ ಸಂಗತಿಗಳಾಗಿವೆ.
ನಾಗರಾಜ ನಂಜುಂಡಯ್ಯ