ಬೆಂಗಳೂರು: ಮುದ್ರಣ ಮಾಧ್ಯಮದಲ್ಲಿದ್ದ ಜನಶಕ್ತಿ ಈಗ ಜನಶಕ್ತಿ ಮೀಡಿಯಾವಾಗಿ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಲೋಕಾರ್ಪಣೆಗೊಂಡಿದೆ.
ಮಂಗಳವಾರ ಸಾರ್ವಜನಿಕ ಆರೋಗ್ಯ ಕ್ಷೇತ್ರ; ಕೊರೊನಾ ಕಾಲದಲ್ಲಿ ಮತ್ತು ನಂತರ ವಿಷಯ ಕುರಿತು ವೆಬಿನಾರ್ ಉದ್ಘಾಟಿಸಿದ ಕೇರಳ ಸರ್ಕಾರದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಸಚಿವೆ ಶೈಲಜಾ ಟೀಚರ್, ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಆಂಗ ಎಂದು ಕರೆಯಲಾಗುತ್ತದೆ. ವೃತ್ತಿಬದ್ಧತೆ ಮತ್ತು ಸಂವಿಧಾನದ ಆಶಯಗಳನ್ನು, ಜನರ ಧ್ವನಿಯಾಗಿ ಜನಶಕ್ತಿ ಮೂಡಿಬರಲಿ ಎಂದು ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ಕೋವಿಡ್-19 ಸಾಂಕ್ರಾಮಿಕವನ್ನು ಕೇರಳದಲ್ಲಿ ಎದುರಿಸಿದ ರೀತಿ, ಕೇರಳದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಪುನರ್ ಕಟ್ಟಿದ ರೀತಿಯನ್ನು ವಿವರಿಸಿದರು.
ಇದಕ್ಕೂ ಮುನ್ನ ವೆಬಿನಾರ್ ದಿಕ್ಸೂಚಿ ಭಾಷಣ ಮಾಡಿದ ಕೇರಳ ಕೋವಿಡ್ ತಜ್ಞ ಸಮಿತಿ ಅಧ್ಯಕ್ಷ ಪ್ರೊ. ಬಿ.ಇಕ್ಬಾಲ್, ಕೇರಳದಲ್ಲಿ ನಿಫಾ ವೈರಸ್ ಹಾವಳಿಯನ್ನು ಎದುರಿಸುವಾಗ ಉಂಟಾದ ಅನುಭವಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸದೃಢಗೊಳಿಸುವ ಅನಿವಾರ್ಯತೆಯನ್ನು ತೋರಿಸಿದವು. ಹಾಗಾಗಿ ಯುಡಿಎಫ್ ಸರ್ಕಾರ ನಿರ್ಲಕ್ಷ್ಯ ಮಾಡಿದ್ದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಪುನರ್ ಕಟ್ಟುವುದನ್ನು ಎಲ್ಡಿಎಫ್ ಸರ್ಕಾರ ಚಾಲೆಂಜ್ ಆಗಿ ತೆಗೆದುಕೊಂಡಿತು. ಇದು ಎಲ್ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದಾಗ ಶೇ.24 ಇದ್ದ ಸಾರ್ವಜನಿಕ ಆಸ್ಪತ್ರೆಗಳ ಬಳಕೆಯನ್ನು ಸದ್ಯ ಶೇ48ಕ್ಕೆ ತೆಗೆದುಕೊಂಡು ಹೋಗಿದ್ದೇವೆ. ನಮ್ಮ ಅವಧಿಯ ಕೊನೆ ವೇಳೆಗೆ ಅದನ್ನು ಶೇ.60ಕ್ಕೇರಿಸುವ ಬದ್ಧತೆಯನ್ನು ಹೊಂದಿದ್ದೇವೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮಾತ್ರವೇ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಅನ್ನುವುದಕ್ಕೆ ಭಾರತದಲ್ಲಿ ಕೇರಳ, ಚೀನಾ, ಶ್ರೀಲಂಕಾ. ಹೊಂಡುರಾಸ್, ಕ್ಯೂಬಾ ಮತ್ತಿತರ ಸರ್ಕಾರಗಳು ಮಾದರಿ ಎಂದರು.
ವೆಬಿನಾರ್ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಕೋವಿಡ್ ನಂತಹ ಸಾಂಕ್ರಾಮಿಕ ಹರಡುವಿಕೆಯನ್ನು ನಿಭಾಯಿಸಲು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸೂಕ್ತವಾಗಿಲ್ಲ. ಮುನ್ನೆಚ್ಚರಿಕೆ ವಹಿಸುವ ಯಾವ ವ್ಯವಸ್ಥೆಯೂ ಇಲ್ಲ. ಖಾಸಗಿಯವರಿಗೆ ಅಂತಹ ಬದ್ಧತೆ ಇಲ್ಲ ಎನ್ನುವುದನ್ನು ಕೊರೊನಾ ಸಾಂಕ್ರಾಮಿಕ ಕಾಲ ತೋರಿಸಿಕೊಟ್ಟಿದೆ ಎಂದರು.
ಮಾಧ್ಯಮಗಳ ಬಗ್ಗೆ ಮಾತನಾಡಿದ ರಮೇಶ್ಕುಮಾರ್, ಜನಶಕ್ತಿ ಮೀಡಿಯಾ ಉಳಿದ ಮಾಧ್ಯಮಗಳಂತೆ ಆಗುವುದಿಲ್ಲ ವಿಶ್ವಾವಿದೆ. ಏಕೆಂದರೆ ಲೋಕಾರ್ಪಣೆ ದಿನ ಜನಶಕ್ತಿ ಮೀಡಿಯಾ ಆಯೋಜಿಸಿರುವ ವೆಬಿನಾರ್ ವಿಷಯವೇ ಆದರ ಜನಪರ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ಇಂದಿನ ಮಾಧ್ಯಮಗಳಿಗೆ ಇಂತಹ ಜರೂರಿನ, ಗಂಭೀರವಾದ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ಬೇಕಿಲ್ಲ. ಅವುಗಳ ಆದ್ಯತೆ ಬೇರೆ ಇದೆ, ಗಮನ ಬೇರೆ ಇದೆ, ಅವುಗಳ ವಿಷಯವೇ ಬೇರೆ ಇದೆ. ಏಕೆಂದರೆ ಅವುಗಳಿಗೆ ಹೃದಯವೇ ಇಲ್ಲ. ಹಾಗಾಗಿ ಅವುಗಳು ಜನರ ಧ್ವನಿಯಾಗುವ ಸಾಧ್ಯತೆ ಇಲ್ಲ. ಜನಶಕ್ತಿ ಮೀಡಿಯಾಕ್ಕೆ ಜನರ ಧ್ವನಿಯಾಗುವ ಬದ್ಧತೆ ಇದೆ. ಜನರ ಧ್ವನಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಾರ್ವಜನಿಕ ಆರೋಗ್ಯ ಕ್ಷೇತ್ರ; ಕೊರೊನಾ ಕಾಲದಲ್ಲಿ ಮತ್ತು ನಂತರ ಕುರಿತು ಪತ್ರಕರ್ತ ಅಖಿಲ್ ಕಡಿದಾಳ್ ಸಂವಾದ ನಡೆಸಿಕೊಟ್ಟರು. ಸಂವಾದದಲ್ಲಿ ವೈದ್ಯರಾದ ಡಾ. ಅನಿಲ್ಕುಮಾರ್, ಡಾ. ಅಖಿಲಾ ವಾಸನ್, ಡಾ. ವಾಣಿ ಕೋರಿ, ಕೋವಿಡ್ ವಾರಿಯರ್ ಕೆ.ಎಸ್.ಲಕ್ಷ್ಮೀ ಭಾಗವಹಿಸಿದ್ದರು.
ಜನಶಕ್ತಿ ಮೀಡಿಯಾ ಲೋಕಾರ್ಪಣೆ ಸಂಬಂಧ ಆಯೋಜಿಸಿದ್ದ ಕವನ ಸ್ಪರ್ಧೆಯಲ್ಲಿ ವಿಜೇತರನ್ನು ಪ್ರಕಟಿಸಲಾಯಿತು. ಸ್ಪರ್ಧೆಯಲ್ಲಿ ಪ್ರವೀಣ್ ಕುಮಾರ್ ಜಿ.ಬಳ್ಳಾರಿ ಅವರ ಸಾಲಿನಲ್ಲಿ ಕಾಯುತ್ತಾ ಪ್ರಥಮ, ರಾಯಚೂರಿನ ಸುನಿಲ್ ಮೇತ್ರಿ ಅವರ ತಲೆಕೆಟ್ಟ ಕವಿಯ ಲಾಕ್ಡೌನ್ ಕವಿತೆ ಎರಡನೇ, ಬೆಂಗಳೂರಿನ ದಾದಾಪೀರ್ ಜೈಮನ್ ಅವರ ಇತಿ ಭಾರತದ ದಲಿತ ಕವಿತೆ ಮೂರನೇ ಬಹುಮಾನ ಪಡೆದಿದೆ.
ಆರಂಭದಲ್ಲಿ ಜನಶಕ್ತಿ ಮೀಡಿಯಾದ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್.ವಿಮಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಮತ್ತೊರ್ವ ಕಾರ್ಯಕಾರಿ ಸಮಿತಿ ಸದಸ್ಯರಾದ ಲಿಂಗರಾಜು ಬಾನುಗೊಂದಿ ಅವರು ಜನಶಕ್ತಿ ಮೀಡಿಯಾದ ಉದ್ದೇಶ ಕುರಿತು ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಗುರುರಾಜ ದೇಸಾಯಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಲಕ್ಷ್ಮಿ ಇಟಗಿ ವಂದಿಸಿದರು.