ಸಾವಿರ ಕನಸುಗಳಿದ್ದ ತರುಣಿ ಮನಿಶಾಳ ದೇಹದ ಮೇಲೆ ನಡೆದ ಅತಿ ಘೋರ ಹಿಂಸೆ, ಆ ಅನ್ಯಾಯದ ಸಾವು, ಬಡಹೆಣ್ಣುಗಳ ಬಗೆಗೆ ರಕ್ಷಕ ವ್ಯವಸ್ಥೆಗಿರುವ ಕಣ್ಣಿಗೆ ರಾಚುವಂತಹ ನಿರ್ಲಕ್ಷ್ಯ ಮನುಷ್ಯ ಮಾತ್ರರ ಕಣ್ಣಲ್ಲಿ ನೆತ್ತರು ಉಕ್ಕಿಸುವಂತಹುದು. ಯಾವ ಹೆಣ್ಣುಜೀವಕ್ಕೂ ಇಂತಹ ಬರ್ಬರ ಅಂತ್ಯ ಬಾರದಿರಲಿ.
ಸಮಾಜ ಹೆಣ್ಣನ್ನು ಸದಾ ಶರಣಾಗತ ಸ್ಥಿತಿಯಲ್ಲಿಡಲು ಅತ್ಯಾಚಾರ ಎಂಬ ಅಸ್ತ್ರ ಬಳಸಿಕೊಂಡು ಬಂದಿದೆ. ಅನಾದಿಯಿಂದಲೂ ಯುದ್ಧವಿರಲಿ, ದಂಗೆಯಿರಲಿ ಅಥವಾ ಕ್ರಾಂತಿಯಿರಲಿ; ಯಾವ ಪಕ್ಷವಾದರೂ ಸೋಲಲಿ ಅಥವಾ ಗೆಲ್ಲಲಿ – ಈ ಕ್ರೌರ್ಯ, ಉನ್ಮಾದಗಳ ಅಂತಿಮ ಬಾಧಿತಳು ಮಹಿಳೆಯೇ ಆಗಿದ್ದಾಳೆ. ಇಂತಹ ಉಸಿರುಗಟ್ಟುವ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಅತ್ಯಾಚಾರವು ಕೇವಲ ಬಲವಂತದ ಲೈಂಗಿಕ ಕ್ರಿಯೆ ಅಲ್ಲ. ಒಬ್ಬ ವ್ಯಕ್ತಿಯಾಗಿ/ಮನುಷ್ಯಳಾಗಿ ಹೆಣ್ಣನ್ನು ನಾಶ ಮಾಡುವ; ಹೆಣ್ಣನ್ನು ನೀನು ಹೆಂಗಸು ಎಂದು ಬೆದರಿಸುವ; ಅಧಿಕಾರವಿರುವ ವರ್ಗ ಅಧಿಕಾರವಂಚಿತರನ್ನು ಹಿಡಿತದಲ್ಲಿಟ್ಟುಕೊಳ್ಳುವ ರಾಜಕೀಯ ಸಾಧನವಾಗಿದೆ. ಈ ಮಾತು ದಲಿತ ಸೋದರಿಯರಿಗೆ ಹೆಚ್ಚು ಅನ್ವಯಿಸುತ್ತದೆ.
ಅತ್ಯಾಚಾರವೊಂದು ವಿಲಕ್ಷಣ ಅಪರಾಧ. ಅದು ಇದ್ದಕ್ಕಿದ್ದಂತೆ ಸಂಭವಿಸಿಬಿಡುವುದಿಲ್ಲ. ಅಪರಾಧಿ ಮತ್ತು ಆ ಮನಸ್ಸು ಇದಕ್ಕಾಗಿ ಸಾಕಷ್ಟು ಮಾಹಿತಿ ಸಂಗ್ರಹಿಸಿರುತ್ತದೆ. ಪೂರ್ವ ತಯಾರಿ ನಡೆಸಿರುತ್ತದೆ. ಅದಕ್ಕೆಂದೇ ನಮ್ಮ ದಲಿತ ಸೋದರಿಯರು ಅತ್ಯಂತ ಬರ್ಬರವಾಗಿ ದೌರ್ಜನ್ಯಕ್ಕೊಳಗಾಗಿ, ಕೊಲೆಯಾಗಿ ಹೋಗುತ್ತಾರೆ. ದೇಶವೇ ಎದ್ದು ಕುಣಿದರೂ ನಾಲಿಗೆ ಕತ್ತರಿಸಲ್ಪಟ್ಟ ಮನಿಶಾಗಳು ‘ಸೂಕ್ತ ಸಾಕ್ಷ್ಯಾಧಾರ’ ಒದಗಿಸಲಾರದೆ ಕೇಸು ಬಿದ್ದು ಹೋಗುತ್ತವೆ.
ಈ ಹೊತ್ತು ಅಧ್ಯಯನ ಶಿಬಿರವೊಂದರಲ್ಲಿ ದಲಿತ ಸೋದರಿಯರು ಕೇಳಿದ, ವಿಸ್ತೃತ ಚರ್ಚೆಗೊಳಗಾದ ಪ್ರಶ್ನೆಗಳು ನೆನಪಾಗುತ್ತಿವೆ. ದಿನನಿತ್ಯ ನಡೆಯುವ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳ ಬಗೆಗೆ ಮಾಧ್ಯಮದವರಾಗಲೀ, ಆಡಳಿತ ಮತ್ತು ನ್ಯಾಯವ್ಯವಸ್ಥೆಯಾಗಲೀ, ಮಹಿಳಾ ಸಂಘಟನೆಗಳಾಗಲೀ ಒಮ್ಮೆಲೇ ಏಕೆ ಪ್ರತಿಕ್ರಿಯಿಸುವುದಿಲ್ಲ? ಖೈರ್ಲಾಂಜಿ, ನಾಗಲಾಪಲ್ಲಿಗಳಂತಹ ಎಷ್ಟೋ ಬರ್ಬರ ಅತ್ಯಾಚಾರ-ಸಾವುಗಳು ಸಂಭವಿಸಿದರೂ ಅವು ದೆಹಲಿ ಪ್ರಕರಣದಷ್ಟು ಪ್ರಾಮುಖ್ಯತೆ ಏಕೆ ಪಡೆಯಲಿಲ್ಲ? ತಳಹಂತದ ನ್ಯಾಯಾಲಯಗಳಲ್ಲಿ ಸಿಕ್ಕ ನ್ಯಾಯವು ಮತ್ತೆ ಮೇಲ್ಮನವಿಯಾಗಿ ಮೇಲಿನ ನ್ಯಾಯಾಲಯಗಳಿಗೆ ಹೋದದ್ದೇ ತಿರುಗುಮುರುಗು ಆಗುವುದೇಕೆ?
ಹೌದು. ಎಲೈಟ್ ಜಾತಿ/ವರ್ಗ ಅನುಭವಿಸುವ ಕಷ್ಟಗಳಿಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ದೊರೆಯುತ್ತದೆ. ವ್ಯವಸ್ಥೆಯ ಗಮನ ಸೆಳೆದು ಪರಿಹಾರವೂ ಬೇಗ ದೊರೆಯುತ್ತದೆ. ನ್ಯಾಯದಾನ ವ್ಯವಸ್ಥೆ ಕೂಡ ವರ್ಗ/ಜಾತಿ ತಾರತಮ್ಯ ತೋರಿಸುತ್ತದೆ. ಬ್ರಿಟಿಷರು ಅತ್ಯಾಚಾರ ಕಾಯ್ದೆ ತಂದಾಗ ಕೆಲ ಮ್ಯಾಜಿಸ್ಟ್ರೇಟುಗಳು ತಮ್ಮ ತೀರ್ಪಿನಲ್ಲಿ ಮೇಲ್ಜಾತಿ ಹೆಣ್ಣು ಕೆಳಜಾತಿ ಗಂಡಿನಿಂದ ಅತ್ಯಾಚಾರಕ್ಕೊಳಗಾದರೆ ಹೆಚ್ಚು ‘ಮಾನ’ ನಷ್ಟವಾಗುವುದಾಗಿಯೂ; ಕೆಳಜಾತಿ ಹೆಣ್ಣು ಮೊದಲೇ ‘ಸಡಿಲ’ ನಡತೆಯವಳಾಗಿರುವ ಕಾರಣ ಮೇಲ್ಜಾತಿ ಗಂಡಿನಿಂದ ಅತ್ಯಾಚಾರಕ್ಕೊಳಗಾದರೆ ಮಾನ ನಷ್ಟ ಕಡಿಮೆ ಎಂದೂ ತೀರ್ಪು ಬರೆಯುತ್ತಿದ್ದರು! 1995ರಲ್ಲಿ ಭಂವರಿದೇವಿ ಅತ್ಯಾಚಾರ ಪ್ರಕರಣದಲ್ಲಿಯೂ ರಾಜಸ್ಥಾನ ಹೈಕೋರ್ಟು ಮೇಲ್ಜಾತಿ ಪುರುಷರು ದಲಿತ ಭಂವರಿಯ ಅತ್ಯಾಚಾರ ಮಾಡಿರಲಿಕ್ಕಿಲ್ಲ ಎಂದು ಇಂಥದೇ ತೀರ್ಪು ಬರೆಯಿತು!
ಹೀಗೆ ಅಸಮಾನ ಭಾರತದ ಪೊಲೀಸ್ ಮತ್ತು ನ್ಯಾಯವ್ಯವಸ್ಥೆಗಳು ಜಾತಿಪೂರ್ವಗ್ರಹದಿಂದ ಮುಕ್ತವಲ್ಲದೆ ಇರುವಾಗ ಪ್ರಕರಣಗಳ ದಾಖಲು, ವರದಿ, ನ್ಯಾಯದಾನ, ಶಿಕ್ಷೆ ಎಲ್ಲದರಲ್ಲೂ ಜಾತಿ/ವರ್ಗಗಳು ಪ್ರಮುಖ ಪಾತ್ರ ವಹಿಸುತ್ತವೆ. ಲಿಂಗಸಂಬಂಧ ಮತ್ತು ಲಿಂಗ ತಾರತಮ್ಯದೊಂದಿಗೆ ಭಾರತೀಯ ಜಾತಿವ್ಯವಸ್ಥೆ ಅವಿನಾ ಸಂಬಂಧ ಹೊಂದಿದ್ದು ಶೋಷಣೆಗೆ ಜಾತಿಯೂ ಒಂದು ಪ್ರಬಲ ಅಸ್ತ್ರವಾಗಿದೆ. ಎಂದೇ ಮಹಿಳಾ ಚಳುವಳಿ ತಮ್ಮನ್ನು ಒಳಗೊಳ್ಳುವ ಕುರಿತು ತಳಸಮುದಾಯಗಳಿಗೆ ಆಳದ ಅವಿಶ್ವಾಸ ಬೆಳೆದುಬಂದಿದೆ.
ಹೀಗಿರುತ್ತ ನಮ್ಮೊಳಗಿನ್ನೂ ಜೀವಂತವಿರಬಹುದಾದ ಜಾತಿವಾದ, ಜಾತಿ ಪೂರ್ವಗ್ರಹಗಳೆಂಬ ಕಿಲುಬನ್ನು ಸೋದರಿತ್ವ ದ ಪ್ರೀತಿಯಿಂದ ಉಜ್ಜಿ, ತಿಕ್ಕಿ ಸ್ವಚ್ಛಗೊಳಿಸಲೇಬೇಕಿದೆ.
ಎಚ್.ಎಸ್.ಅನುಪಮಾ