ಕೃಷಿ ಕಾನೂನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ ಕಾಂಗ್ರೆಸ್ ಸಂಸದ

ಈಗಾಗಲೇ ಸುಪ್ರೀಂ ಕದ ತಟ್ಟಿರುವ ಕೇರಳ ಎಲ್ಡಿಎಫ್ ಸರ್ಕಾರ
– ಮೆಟ್ಟಿಲೇರುವುದಾಗಿ ಪ್ರಕಟಿಸಿರುವ ಪಂಜಾಬ್ ಕಾಂಗ್ರೆಸ್ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರ ಅಂಗೀಕರಿಸಿದ ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವವರ ಪಟ್ಟಿಗೆ ಕೇರಳದ ಕಾಂಗ್ರೆಸ್ ಸಂಸದ ಟಿ.ಎನ್.ಪ್ರತಾಪನ್ ಸೇರಿಕೊಂಡಿದ್ದಾರೆ. 

ಕೃಷಿ ಸಂಬಂಧಿತ ಕಾಯ್ದೆಗಳನ್ನು ಪ್ರಶ್ನಿಸಿ ಈಗಾಗಲೇ ಕೇರಳದ ಎಲ್ಡಿಎಫ್ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಪಂಜಾಬ್ ಕಾಂಗ್ರೆಸ್ ಸರ್ಕಾರ ಕೂಡ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಬಗ್ಗೆ ಬಹಿರಂಗ ಹೇಳಿಕೆ ನೀಡಿತ್ತು. ಈಗ ಕಾಂಗ್ರೆಸ್ ಸಂಸದರೊಬ್ಬರು ಅದೇ ಕಾರಣಕ್ಕೆ ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ.

ಕೃಷಿಗೆ ಸಂಬಂಧಿಸಿದ ಹೊಸ ಕಾಯ್ದೆಯ ವಿವಿಧ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕೇರಳದ ಕಾಂಗ್ರೆಸ್ ಸಂಸದ ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಸಂಸದ ಟಿ.ಎನ್. ಪ್ರತಾಪನ್, 2020ರ ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆಯು, ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು), 15 (ತಾರತಮ್ಯ ನಿಷೇಧ) ಮತ್ತು 21 (ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು) ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.

ಭಾನುವಾರ ರಾಷ್ಟ್ರಪತಿಗಳು ಸಹಿ ಹಾಕಿರುವ ಕಾಯ್ದೆಯು ‘ಅಸಂವಿಧಾನಿಕ, ಕಾನೂನುಬಾಹಿರ ಮತ್ತು ಅನೂರ್ಜಿತ ವೆಂದು ಪರಿಗಣಿಸಲ್ಪಡುತ್ತದೆ’ ಎಂದು ಹೇಳಿದ್ದಾರೆ.

ಸರ್ಕಾರದ ಪ್ರಕಾರ, ಹೊಸ ಕಾನೂನು ಕೃಷಿ-ವ್ಯವಹಾರ ಮತ್ತು ಆಹಾರ ಸಂಸ್ಕರಣಾ ಸಂಸ್ಥೆಗಳು, ಸಗಟು ವ್ಯಾಪಾರಿಗಳು, ರಫ್ತುದಾರರು ಮತ್ತು ದೊಡ್ಡ ಚಿಲ್ಲರೆ ಮಾರಾಟ ವ್ಯಾಪಾರಿಗಳೊಂದಿಗೆ ಕೃಷಿ ಸೇವೆಗಳಿಗೆ ಮತ್ತು ಉತ್ಪನ್ನಗಳ ಮಾರಾಟಕ್ಕಾಗಿ ತೊಡಗಿಸಿಕೊಳ್ಳುವುದರಿಂದ ರೈತರನ್ನು ರಕ್ಷಿಸಲು ಮತ್ತು ಸಬಲೀಕರಣಗೊಳಿಸಲು ಕೃಷಿ ಒಪ್ಪಂದಗಳಿಗೆ ರಾಷ್ಟ್ರೀಯ ಚೌಕಟ್ಟನ್ನು ಒದಗಿಸುತ್ತದೆ. ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ಬೆಲೆ ಚೌಕಟ್ಟನ್ನು ಒದಗಿಸುತ್ತದೆ ಎಂದು ಹೇಳಿದೆ.

ವಕೀಲ ಜೇಮ್ಸ್ ಪಿ ಥಾಮಸ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ‘ಭಾರತೀಯ ಕೃಷಿಯು ಸಣ್ಣ ಹಿಡುವಳಿಗಳಿಂದಾಗಿ ವಿಘಟನೆಯಿಂದ ಕೂಡಿದೆ ಮತ್ತು ವಾತಾವರಣದ ಮೇಲಿನ ಅವಲಂಬನೆ, ಉತ್ಪಾದನೆಯಲ್ಲಿನ ಅನಿಶ್ಚಿತತೆಗಳು ಮತ್ತು ಅನಿರೀಕ್ಷಿತ ಮಾರುಕಟ್ಟೆಯಂತಹ ನಿಯಂತ್ರಣಕ್ಕೆ ಮೀರಿದ ಕೆಲವು ಅಂತರ್ಗತ ದೌರ್ಬಲ್ಯಗಳನ್ನು ಹೊಂದಿದೆ. ಇದು ಒಳಬರುವ ಮತ್ತು ಹೊರಹೋಗುವ ನಿರ್ವಹಣೆಯಲ್ಲಿ ಕೃಷಿಯನ್ನು ಅಪಾಯಕಾರಿ ಮತ್ತು ಅಸಮರ್ಥವಾಗಿಸುತ್ತದೆ’ ಎಂದು ಆರೋಪಿಸಿದ್ದಾರೆ.

ರೈತರು ವಾತಾವರಣವನ್ನು ಅವಲಂಬಿಸುವಂತಹ ಸವಾಲುಗಳಿಂದಾಗಿ ತಮ್ಮ ಉತ್ಪಾದನೆಯೊಂದಿಗೆ ಹೆಚ್ಚಿನ ಆದಾಯವನ್ನು ಗಳಿಸುವ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದಿಲ್ಲ, ಬದಲಿಗೆ ಹೆಚ್ಚಿನ ಬಂಡವಾಳವನ್ನು ತುಂಬುವ ಮೂಲಕ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ನೀಡುವುದು ಪರಿಣಾಮಕಾರಿ ನಿರ್ವಹಣೆಯಾಗಲಿದೆ ಎಂದಿದ್ದಾರೆ.

ಈ ವಿಚಾರವು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದ್ದು, ಅವರಿಗೆ ಮತ್ತು ಅಂತಹ ವ್ಯಕ್ತಿಗಳ ಕುಟುಂಬಗಳಿಗೆ ಗಂಭೀರ ಆರ್ಥಿಕ ಹಾನಿ ಉಂಟಾಗುವ ಮೊದಲು ಕೃಷಿಯಲ್ಲಿ ತೊಡಗಿರುವ 14.5 ಕೋಟಿ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸುವ ಕಾನೂನುಗಳನ್ನು ನಿರ್ಬಂಧಿಸುವ ಅವಶ್ಯಕತೆಯಿದೆ ಎಂದು ಅದು ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *