- ಬೆಂಗಳೂರಲ್ಲಿ ವಿಧಾನಸೌಧ ಚಲೋ – ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಚಲೋ
ಬೆಂಗಳೂರು: ಕೋವಿಡ್-19 ಲಾಕ್‌ಡೌನ್ ಸಂತ್ರಸ್ತರಿಗೆ ಪರಿಹಾರ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಪರ್ಯಾಯ ನೀತಿಗಳ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಬೆಂಗಳೂರಲ್ಲಿ ವಿಧಾನಸೌಧ ಚಲೋ ನಡೆಸಿದರು. ಇದೇ ವೇಳೆ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಚಲೋ ನಡೆಸಿದರು.
ಮಾರ್ಚ್ 23 ರಿಂದ ಆರಂಭವಾದ ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆಯು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ರೈತಾಪಿ ಜನತೆ ಹಾಗೂ ಇತರೆ ಎಲ್ಲಾ ವಿಭಾಗದ ಜನತೆಯು ಇದರಿಂದಾಗಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಲಾಕ್ಡೌನ್ ಕಾಲಾವಧಿಯ ಪೂರ್ಣ ವೇತನ ಸಿಗದ ಕಾರಣ ಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅಸಂಘಟಿತ ಕಾರ್ಮಿಕರು ಲಾಕ್ಡೌನ್ ಕಾಲಾವಧಿಯ ಗಳಿಕೆ ಇಲ್ಲದೆ ರಾಜ್ಯ ಸರ್ಕಾರವು ಎಲ್ಲಾ ಅಸಂಘಟಿತರಿಗೆ ಪರಿಹಾರ ಘೋಷಿಸದಿರುವ ಕಾರಣ ಹಾಗೂ ಘೋಷಿತ ಪರಿಹಾರವು ಪೂರ್ಣ ಪ್ರಮಾಣದಲ್ಲಿ ಲಭಿಸದಿರುವ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದನ್ನು ಸರ್ಕಾರ ಗಮನಿಸುತ್ತಿಲ್ಲ ಎಂದು ದೂರಿದರು.
ಸಿಐಟಿಯು ನೇತೃತ್ವದಲ್ಲಿ ರಾಜ್ಯದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಹಾಗೂ ಸ್ಕೀಂ ನೌಕರರು ಏಪ್ರಿಲ್ 21ರಿಂದ ಆರಂಭಿಸಿ ವಿವಿಧ ರೀತಿಯಲ್ಲಿ ವಿವಿಧ ಹಂತದ ಹೋರಾಟಗಳನ್ನು ಮಾಡುತ್ತಾ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ರಾಜ್ಯ ಸರ್ಕಾರವು ಮಾತ್ರ ರಾಜ್ಯದ ಕಾರ್ಮಿಕರ ಒತ್ತಾಸೆಗಳನ್ನು ಪರಿಗಣಿಸಲು ಮುಂದಾಗಿಲ್ಲ ಮಾತ್ರವಲ್ಲದೆ. ಅವರ ಪ್ರತಿನಿಧಿಗಳೊಂದಿಗೆ ಕನಿಷ್ಟ ಚರ್ಚಿಸುವ ಪ್ರಜಾಸತ್ತಾತ್ಮಕ ಕ್ರಮಕ್ಕೂ ಮುಂದಾಗದಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸಿಐಟಿಯು ನೇತೃತ್ವದಲ್ಲಿ ಸೆ.24ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಹಾಗೂ ಬೆಂಗಳೂರಿನ ವಿಧಾನಸೌಧ ಚಲೋ ನಡೆಸಲಾಯಿತು.
ಹಕ್ಕೊತ್ತಾಯಗಳು
- ಕೆಲಸದ ಅವಧಿ ಹೆಚ್ಚಳ, ವಾರದ ಕೆಲಸದ ಮಿತಿಯ ಹೆಚ್ಚಳ, ಕಾರ್ಖಾನೆ ಕಾಯ್ದೆಯ ಪರಿಭಾಷೆಗೆ ತಿದ್ದುಪಡಿ, ಕೈಗಾರಿಕಾ ವಿವಾದಗಳ ಕಾಯ್ದೆ ಅಧ್ಯಾಯ 5 ‘ಬಿ’ ಗೆ ತಿದ್ದುಪಡಿ ಹಾಗೂ ಗುತ್ತಿಗೆ ಕಾರ್ಮಿಕರ ನೇಮಕಾತಿಗೆ ಪರವಾನಗಿ ಮಿತಿ 20 ರಿಂದ 50 ಕ್ಕೆ ಹೆಚ್ಚಳ ತಿದ್ದುಪಡಿಗಳ ಸುಗ್ರೀವಾಜ್ಞೆ ಕೈಬಿಡಬೇಕು. 2020-21ರ ಸಾಲಿನ ವ್ಯತ್ಯಸ್ಥ ತುಟ್ಟಿಭತ್ಯೆ ಮುಂದೂಡಿಕೆ ಆದೇಶ ರದ್ದು ಮಾಡಿ, ಬಾಕಿ ಸಹಿತ ವಿಡಿಎ ಯನ್ನು ಕೂಡಲೇ ನೀಡಬೇಕು. ನಿಗದಿತ ಕಾಲಾವಧಿಯ ಕಾರ್ಮಿಕರ ನೇಮಕಕ್ಕೆ ಅನುಮತಿ ನೀಡುವ ಮಾದರಿ ಸ್ಥಾಯಿ ಆದೇಶಗಳಿಗೆ ತಂದಿರುವ ತಿದ್ದುಪಡಿ ಹಿಂಪಡೆಯಬೇಕು.
- ಲಾಕ್‌ಡೌನ್ ಅವಧಿಯ ವೇತನವನ್ನು ಕಾರ್ಮಿಕರಿಗೆ ಪೂರ್ಣವಾಗಿ ಪಾವತಿಸಬೇಕು. ಕೋವಿಡ್ ಬಂದಾಗ, ಹೋಮ್ ಕ್ವಾರೆಂಟೈನ್ ಆದಾಗ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಮಾಡಬೇಕು. ಕಾರ್ಮಿಕ ಇಲಾಖೆಯಲ್ಲಿ ಇರುವ ಅರ್ಜಿಗಳನ್ನು ತ್ವರಿತವಾಗಿ ಸಂಧಾನ ಸಭೆ ನಡೆಸಿ ಇತ್ಯರ್ಥ ಮಾಡಿ ಕಾರ್ಮಿಕರಿಗೆ ಪರಿಹಾರ ದೊರಕಿಸಿಕೊಡಬೇಕು. ಕೋವಿಡ್ ಲಾಕ್‌ಡೌನ್ ಆರ್ಥಿಕ ಹಿಂಜರಿತ ನೆಪದಲ್ಲಿ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಒಪ್ಪಂದದಲ್ಲಿನ ವೇತನ ಹೆಚ್ಚಳ ಮುಂದೂಡಿಕೆ ಕ್ರಮಗಳನ್ನು ನಿರ್ಬಂಧಿಸಬೇಕು.
- ರಾಜ್ಯ ಸರ್ಕಾರ ಘೋಷಿಸಿರುವ 2202 ಕೋಟಿ ರೂಪಾಯಿಗಳ ಪರಿಹಾರ ಅಸಂಘಟಿತ ವಲಯದ 5 ವಿಭಾಗಗಳಿಗೆ ಮಾತ್ರ ಸಂಬAಧಪಟ್ಟಿದ್ದು, ಇನ್ನು 125 ಕ್ಕೂ ಹೆಚ್ಚು ವಲಯಗಳ ಕೋಟ್ಯಾಂತರ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯ ಸಂಕಷ್ಟ ಪರಿಹಾರ ಪ್ಯಾಕೇಜನ್ನು ಘೋಷಿಸಬೇಕು. ಅಂತರರಾಜ್ಯ ವಲಸೆ ಕಾರ್ಮಿಕ (ಉದ್ಯೋಗ ಮತ್ತು ಸೇವಾ ಶರತ್ತುಗಳ) ಕಾಯ್ದೆ-1970 ಅನ್ನು ಜಾರಿಗೊಳಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸೆಸನ್ನು ಸೋರಿಕೆಯಿಲ್ಲದೆ ಪೂರ್ಣವಾಗಿ ಸಂಗ್ರಹಿಸಬೇಕು. ಕಲ್ಯಾಣ ಯೋಜನೆಗಳನ್ನು ಬಲಪಡಿಸಬೇಕು. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್‌ಟಿ ಪಾಲು ಮತ್ತು ಪರಿಹಾರವನ್ನು ಕೂಡಲೇ ರಾಜ್ಯಕ್ಕೆ ಪಡೆಯಲು ಕ್ರಮವಹಿಸಬೇಕು.
- ಕೋವಿಡ್-19 ಪಿಡುಗಿನ ವಿರುದ್ಧ ವೈದ್ಯರು, ಶುಶ್ರೂಷಕಿಯರು, ವೈದ್ಯಕೀಯ, ಅರೆವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿ, ಗ್ರಾಮ ಪಂಚಾಯಿತಿ ನೌಕರರು, ಪೊಲೀಸ್ ಮತ್ತು ಸಾರಿಗೆ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಮುಂತಾದ ಅನೇಕ ಫ್ರಂಟ್-ಲೈನ್ ಕೆಲಸಗಾರರಿಗೆ ಸಮರ್ಪಕ ಪಿಪಿಇ ಕಿಟ್‌ಗಳು, ಆರೋಗ್ಯ ವಿಮೆ, ಕನಿಷ್ಟ 25 ಸಾವಿರ ಪ್ರೋತ್ಸಾಹ ಧನ, ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮತ್ತಿತರ ಸೌಲಭ್ಯಗಳನ್ನು ವಿಸ್ತರಿಸಬೇಕು. ಯೋಜನಾ ಕಾರ್ಮಿಕರಿಗೆ ಗೌರವ ಧನ ಪಾವತಿಸಬೇಕು.
- ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ರಾಜ್ಯ ಸರ್ಕಾರವು ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ತಂದಿದೆ. ರೈತರನ್ನು, ಕೃಷಿ ಕೂಲಿಕಾರರನ್ನು, ಹಮಾಲಿಗಳನ್ನು, ಬಳಕೆದಾರರನ್ನು ಕಾರ್ಪೊರೇಟ್ ಹಿಡಿತಕ್ಕೆ ಒಪ್ಪಿಸುವ ಈ ಸುಗ್ರೀವಾಜ್ಞೆಗಳನ್ನು ಕೈಬಿಡಬೇಕು.
- ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ 7,500 ರೂಗಳ ನೆರವನ್ನು ಆರು ತಿಂಗಳ ಕಾಲ ನೀಡಬೇಕು. ಎಲ್ಲಾ ಕುಟುಂಬಗಳ ಪ್ರತಿ ಸದಸ್ಯರಿಗೆ ಮಾಸಿಕ ತಲಾ 10 ಕೆ.ಜಿ. ಆಹಾರ ಪದಾರ್ಥಗಳನ್ನು ನೀಡಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದ ಉದ್ಯೋಗ ಕೇಳುವ ಎಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳ ಉದ್ಯೋಗ ನೀಡಬೇಕು. ಕೂಲಿಯನ್ನು ಕನಿಷ್ಟ 600 ರೂಗಳಿಗೆ ಹೆಚ್ಚಿಸಬೇಕು. ವಿದ್ಯಾವಂತ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ನಿರುದ್ಯೋಗ ಭತ್ಯೆ ಮಾಸಿಕ 10,000 ರೂಗಳನ್ನು ನೀಡಬೇಕು.
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು. ಜಿಡಿಪಿಯ 5 ಶೇಕಡ ಹಣವನ್ನು ಆರೋಗ್ಯಕ್ಕೆ ಒದಗಿಸಬೇಕು. ಕೋವಿಡ್ ನಿಯಂತ್ರಣಕ್ಕೆ ಸಮರ್ಥ ಸಮರ್ಪಕ ಕ್ರಮವಹಿಸಬೇಕು. ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಮುಂತಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು.
- ಕೇಂದ್ರೀಕರಣ, ವಾಣಿಜ್ಯೀಕರಣ ಮತ್ತು ಕೋಮುವಾದೀಕರಣಕ್ಕೆ ಎಡೆ ಮಾಡುವ ನೂತನ ಶಿಕ್ಷಣ ನೀತಿ-2020 (ಓಇP) ರದ್ದುಪಡಿಸಬೇಕು. ಸಾರ್ವತ್ರಿಕ ಶಿಕ್ಷಣ ಬಲಪಡಿಸಬೇಕು. ಐಸಿಡಿಎಸ್ ಯೋಜನೆ ಬಲಪಡಿಸಬೇಕು. ಅಂಗನವಾಡಿ ಮತ್ತು ಬಿಸಿಯೂಟ ನೌಕರರನ್ನು ಖಾಯಂಗೊಳಿಸಬೇಕು ಹಾಗೂ ಅವರ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಆನ್‌ಲೈನ್ ಶಿಕ್ಷಣ ನೆಪದ ಲೂಟಿ ತಡೆಯಬೇಕು. ಎಲ್ಲಾ ಬೋಧಕ ಮತ್ತು ಬೋಧಕೇತ್ತರ ಸಿಬ್ಬಂದಿಯ ಉದ್ಯೋಗ ಮತ್ತು ವೇತನ ಸಂರಕ್ಷಿಸಬೇಕು.
- ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಗ್ರಾ.ಪಂ. ನೌಕರರ ವೇತನದ ಅನುದಾನದ ಬಾಕಿ 382 ಕೋಟಿ ರೂಪಾಯಿ ಹಣವನ್ನು ಕೂಡಲೇ ಬಿಡುಗಡೆ ಮಾಡಿ ಎಲ್ಲರಿಗೂ ತುಟ್ಟಿಭತ್ಯೆ ಸಹಿತ ಕನಿಷ್ಟ ವೇತನ, ಅನುಮೋದನೆ, ಸೇವಾ ಮುಂಬಡ್ತಿ ನೀಡಿ ಮತ್ತು ಸೇವಾ ನಿಯಮಾವಳಿ ಜಾರಿಗೊಳಿಸಿ ಖಾಯಂ ಮಾಡಬೇಕು. ಹಾಗೂ ಹಾಸನ ಜಿಲ್ಲೆಯ ಗ್ರಾ.ಪಂ.ಗಳಲ್ಲಿ ನೌಕರರರಿಗೆ ಕನಿಷ್ಟ ವೇತನ ಮತ್ತು ಅನುಮೋದನೆ ನೀಡದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
- ಪ್ಲಾಂಟೇಷನ್ ಕಾರ್ಮಿಕರಿಗೆ ಬಾಕಿ ಸಹಿತ ತುಟ್ಟಿಭತ್ಯೆ, ಬೋನಸ್, ವೈದ್ಯಕೀಯ ಸೌಲಭ್ಯ ಖಾತ್ರಿಪಡಿಸಬೇಕು. ವಸತಿ ನಿವೇಶ ನೀಡಿ ‘ಪ್ಲಾಂಟೇಷನ್ ಕಾರ್ಮಿಕರ ಕಲ್ಯಾಣ ಮಂಡಳಿ’ ರಚಿಸಬೇಕು.
- ಕೆಎಸ್‌ಆರ್‌ಟಿಸಿ ನೌಕರರಿಗೆ ಕೂಡಲೇ ಬಾಕಿ ಇರುವ ವೇತನ ಹಾಗೂ ಇತರೆ ಭತ್ಯೆಗಳ ಪಾವತಿಗೆ ಕ್ರಮವಹಿಸಬೇಕು. ಹಾಗೂ ಅವರಿಗೆ ಕರ್ತವ್ಯ ರಹಿತ ದಿನಗಳ ವೇತನ ಪಾವತಿಸಿ, ನೌಕರರ ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು.
- ಹಾಸ್ಟೆಲ್ ಮತ್ತು ವಸತಿ ಶಾಲೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಬಾಕಿ ಉಳಿದಿರುವ ವೇತನ ಮತ್ತು ಲಾಕ್‌ಡೌನ್ ಅವಧಿಯ ವೇತನವನ್ನು ಪಾವತಿಸಬೇಕು.
- ರೂ. 21,000/- ಸಮಾನ ಕನಿಷ್ಟ ವೇತನ ನಿಗದಿ ಮಾಡಬೇಕು, ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆಯ ಶಾಸನ ರೂಪಿಸಬೇಕು, ಗುತ್ತಿಗೆ ಕಾರ್ಮಿಕರ ಖಾಯಂಗೆ ಅಸ್ಸಾಂ ಮತ್ತು ತಮಿಳುನಾಡು ಮಾದರಿಯಲ್ಲಿ ಶಾಸನ ರೂಪಿಸಬೇಕು ಹಾಗೂ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿಗೆ ಶಾಸನ ರೂಪಿ ಜಾರಿಮಾಡಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸೌಲಭ್ಯಗಳನ್ನು ವಿಸ್ತರಿಸಿ ಜಾರಿಮಾಡಬೇಕು.