ಕಾರ್ಮಿಕರನ್ನು ಗುಲಾಮರಾಗಿಸುವ ಆಟ ಸಾಗದು

ಮೋದಿ ಸರಕಾರಕ್ಕೆ ಕಾರ್ಮಿಕ ವರ್ಗದ ಎಚ್ಚರಿಕೆ

ಬಿಜೆಪಿ ಸರಕಾರ ಕಾರ್ಮಿಕ-ವಿರೋಧಿ ಮತ್ತು ರೈತ-ವಿರೋಧಿ ಮಸೂದೆಗಳನ್ನು ಸಂಸತ್ತಿನಲ್ಲಿ ಅತ್ಯಂತ ಪ್ರಜಾಪ್ರಭುತ್ವ-ವಿರೋಧಿ  ಮತ್ತು ಸರ್ವಾಧಿಕಾರಶಾಹಿ  ರೀತಿಯಲ್ಲಿ ಪಾಸು ಮಾಡಿಸಿಕೊಂಡಿರುವುದರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಎಲ್ಲ ರಾಜ್ಯಗಳಲ್ಲಿ ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಲಕ್ಷಾಂತರ ಕಾರ್ಮಿಕರು ಇದರಲ್ಲಿ ಭಾಗವಹಿಸಿದ್ದಾರೆ.

ಸಂಸದೀಯ ಪ್ರಜಾಪ್ರಭುತ್ವಕ್ಕೆ ತನ್ನ ಸಂಪೂರ್ಣ ತಿರಸ್ಕಾರವನ್ನು ಪ್ರದರ್ಶಿಸುತ್ತ ಬಿಜೆಪಿ ಸರಕಾರ ಮೂರು ಕಾರ್ಮಿಕ ಮಸೂದೆಗಳನ್ನು-ಕೈಗಾರಿಕಾ ಸಂಬಂಧಗಳನ್ನು ಕುರಿತ ಸಂಹಿತೆ, ಸಾಮಾಜಿಕ ಭದ್ರತೆಯನ್ನು ಕುರಿತ ಸಂಹಿತೆ ಮತ್ತು ವೃತ್ತಿ ಸುರಕ್ಷಿತತೆ, ಆರೋಗ್ಯ ಮತ್ತು ದುಡಿಮೆಯ ಪರಿಸ್ಥಿತಿಗಳನ್ನು ಕುರಿತ ಸಂಹಿತೆ-ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಪಕ್ಷಗಳ ಸದಸ್ಯರ ಗೈರುಹಾಜರಿಯಲ್ಲಿ ಪಾಸು ಮಾಡಿಕೊಂಡಿದೆ. ಇದರ ಮೊದಲು ಕೃಷಿ ಮಸೂದೆಗಳನ್ನು ಮತಕ್ಕೆ ಹಾಕಬೇಕು ಎಂದು ಕೇಳುವ ತಮ್ಮ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಎಂಟು ಸಂಸದ್ ಸದಸ್ಯರನ್ನು ಕಾನೂನುಬಾಹಿರವಾಗಿ ಅಮಾನತುಗೊಳಿಸಿರುವುದನ್ನು ಪ್ರತಿಭಟಿಸಿ  ಪ್ರತಿಪಕ್ಷಗಳು ಸಂಸದ್‍ ಕಲಾಪಗಳನ್ನು ಬಹಿಷ್ಕರಿಸಿದ್ದವು.

ಒಂದು ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಂದು ಚುನಾಯಿತ ಸರಕಾರ ಜನಸಾಮಾನ್ಯರು ಮಾತ್ರವಲ್ಲ, ಸಂಸತ್ತಿನ ಚುನಾಯಿತ ಸದಸ್ಯರ ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳಿಗೆ ಕೂಡ ಇಂತಹ ತುಚ್ಛೀಕಾರವನ್ನು ತೋರಿಸುತ್ತದೆ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಸಿಐಟಿಯು ಅಖಿಲ ಭಾರತ ಅಧ್ಯಕ್ಷರಾದ ಡಾ.ಕೆ.ಹೇಮಲತಾ ಹೇಳಿದ್ದಾರೆ.

ಸೆಪ್ಟಂಬರ್‍ 23ರಂದು ದೇಶದ ರಾಜಧಾನಿ ದಿಲ್ಲಿಯ ಜಂತರ್‍ ಮಂತರ್ ನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಮುಖಂಡರು ಬಿಜೆಪಿ ಸರಕಾರ ಹರಡಿಸಿರುವ ಅಸತ್ಯಭರಿತ ದಾವೆಗಳನ್ನು ಬಯಲಿಗೆಳೆದರು. ಈ ಸಂಹಿತೆಗಳು ಕಾರ್ಮಿಕ ವರ್ಗಕ್ಕೆ ಪ್ರಯೋಜನಕಾರಿ ಮತ್ತು ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತಗೊಂಡು ಇವುಗಳನ್ನು ತರಲಾಗಿದೆ ಎಂಬುದು ಬರೀ ಸುಳ್ಳು ಎಂದು ಅವರು ಹೇಳಿದ್ದಾರೆ. ಆಕ್ರೋಶಭರಿತ ಪ್ರತಿಭಟನಾಕಾರರು ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿದರು. ಕೇಂದ್ರೀಯ ಕಾರ್ಮಿಕ ಮುಖಂಡರು ರೈತರ ಸಪ್ಟಂಬರ್‍ 25ರ ಅಖಿಲ ಭಾರತ  ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಪುನರುಚ್ಛರಿಸಿದರು. ಕಾರ್ಮಿಕ ಸಂಹಿತೆಗಳ ಮಸೂದೆಗಳನ್ನೂ ಪಾಸು ಮಾಢಿಸಿಕೊಂಡ ನಂತರ ಈಗ ಶ್ರಮಜೀವಿ ಜನಗಳು ಇದರ ವಿರುದ್ಧ ಹೋರಾಡಲು ಬುಡಮಟ್ಟದಿಂದ ತಮ್ಮ ಸಕಲ ಶಕ್ತಿಗಳನ್ನೂ ಒಂದು ಗೂಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಸೆಪ್ಟಂಬರ್‍ 25ರಂದು ಸಮಸ್ತ ಕಾರ್ಮಿಕ ವರ್ಗ ರೈತಾಪಿ ಜನಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಸೌಹಾರ್ದ ವ್ಯಕ್ತಪಡಿಸಬೇಕು ಎಂದು ಈ ಮುಖಂಡರು ತಮ್ಮ ಘಟಕಗಳಿಗೆ ಕರೆ ನೀಡಿದರು.

ಕೃಷಿ ಮಸೂದೆಗಳು ಮತ್ತು ಕಾರ್ಮಿಕ ಮಸೂದೆಗಳು ಕಾರ್ಮಿಕ ವರ್ಗವನ್ನು 19ನೇ ಶತಮಾನದ ಗುಲಾಮಗಿರಿಯ ಪರಿಸ್ಥಿತಿಗಳತ್ತ  ತಳ್ಳುವ, ನಮ್ಮ ಸಣ್ಣ ಹಾಗೂ ಮಧ್ಯಮ ರೈತರನ್ನು ಕಾರ್ಪೊರೇಟ್‍ ಕೃಷಿವ್ಯವಹಾರಸ್ಥರುಗಳ ಮಾರಣಾಂತಿಕ ಮುಷ್ಠಿಯೊಳಕ್ಕೆ ತಳ್ಳುವ ಹಾಗೂ ನಮ್ಮ ಸಣ್ಣ ರೈತ ಆಧಾರಿತ ಕೃಷಿಯನ್ನು ಕಾರ್ಪೊರೇಟ್‍ ಕೃಷಿಯಾಗಿ ಪರಿವರ್ತಿಸುವ ಭಂಡ ಕೃತ್ಯಗಳಲ್ಲದೆ ಬೇರೇನೂ ಅಲ್ಲ. ಇವುಗಳೊಂದಿಗೆ ಸಾರ್ವಜನಿಕ ವಲಯದ ಸಾರಾಸಗಟು ಖಾಸಗೀಕರಣ ನಮ್ಮ ಸ್ವಾವಲಂಭಿ ಅರ್ಥವ್ಯವಸ್ಥೆ ಮತ್ತು ನಮ್ಮ ಶ್ರಮಜೀವಿ ಜನಗಳಿಗೆ ಮರಣಶಾಸನವಾಗುತ್ತವೆ. ಇವೆಲ್ಲವೂ ಈ ಬಿಜೆಪಿ ಸರಕಾರದ ದೇಶಿ-ವಿದೇಶಿ ಕಾರ್ಪೊರೇಟ್‍ ಬಂಟರುಗಳ ಹಿತ ಸಾಧಿಸುವುದಕ್ಕಾಗಿ ಎಂದು ಕಾರ್ಮಿಕ ಮುಖಂಡರುಗಳು ಹೇಳಿದ್ದಾರೆ.

ಕೊವಿಡ್‍ನ ಭರ ಹೆಚ್ಚುತ್ತಿರುವ  ನಡುವೆಯೂ ಕಾರ್ಮಿಕ ವರ್ಗ ಬೃಹತ್‍ ಪ್ರಮಾಣದಲ್ಲಿ ಅಣಿನೆರೆದು ಈ ವಿನಾಶಕಾರಿ ಧೋರಣೆಗಳು ಮುಂದುವರೆಯಲು ಬಿಡೆವು ಎಂದು ಸಾರಿದ್ದಾರೆ. ಏನೇ ಬರಲಿ, ಬುಡಮಟ್ಟದಲ್ಲಿ, ಈ ಜನವಿರೋಧಿ, ರಾಷ್ಟ್ರವಿರೋಧಿ ಕ್ರಮಗಳನ್ನು ಶ್ರಮಜೀವಿಗಳು ವಿರೋಧಿಸುತ್ತಾರೆ, ಪ್ರತಿರೋಧಿಸುತ್ತಾರೆ ಮತ್ತು ನಿಲ್ಲಿಸುತ್ತಾರೆ ಎಂಬುದನ್ನು ಅಳುವ ಮಂದಿಯ ಗಮನಕ್ಕೆ ತಂದಿದ್ದಾರೆ, ಬಿಜೆಪಿ ಸರಕಾರ ಇನ್ನು ಮುಂದೆ ಬಲಿಷ್ಟ ಹೋರಾಟಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ದುಡಿಯುವ ಜನರು ನೀಡಿದ್ದಾರೆ ಎಂದಿರುವ ಸಿಐಟಿಯು ಅಧ್ಯಕ್ಷರಾದ ಡಾ.ಕೆ.ಹೇಮಲತಾ ಇದಕ್ಕಾಗಿ ಕಾರ್ಮಿಕ ವರ್ಗವನ್ನು ಅಭಿನಂದಿಸಿದ್ದಾರೆ, ಬಿಜೆಪಿ ಸರಕಾರ ತನ್ನ ದುಡಿಯುವ ಜನ-ವಿರೋಧಿ ಅಜೆಂಡಾವನ್ನು ಹಿಂದಕ್ಕೆ ತಗೊಳ್ಳುವಂತೆ ಮಾಡಲು ನಿರಾಕರಣೆ ಮತ್ತು ಪ್ರತಿರೋಧವೇ ಮುನ್ನಡೆಯ ಏಕೈಕ ದಾರಿ ಎಂದಿದ್ದಾರೆ.

ಜಿಡಿಪಿ ಸೃಷ್ಟಿಕರ್ತರ ಮೇಲೆ ಗುಲಾಮಗಿರಿ ಹೇರುವ ಸಂಹಿತೆಗಳು-ಸಿಐಟಿಯು

ಮೋದಿ ಸರಕಾರ ಮೂರು ಕಾರ್ಮಿಕ ಸಂಹಿತೆಗಳನ್ನು ಅತ್ಯಂತ ತರಾತುರಿಯಿಂದ ಪಾಸು ಮಾಡಿಸಿಕೊಂಡಿರುವುದು ತನ್ನ ಕಾರ್ಪೊರೇಟ್‍ ಬಂಡವಾಳಶಾಹಿ ಮಾಲಕರನ್ನು ಸಂತುಷ್ಟಗೊಳಿಸಲಿಕ್ಕಾಗಿ.

ಈ ಮೂರು ಸಂಹಿತೆಗಳು 74ಶೇ. ಕೈಗಾರಿಕಾ ಕಾರ್ಮಿಕರನ್ನು ಮತ್ತು 70ಶೇ. ಕೈಗಾರಿಕೆಗಳನ್ನು ಮನಬಂದಂತೆ ದುಡಿಸಿಕೊಳ್ಳುವ “ಹೈರ್ ‍ಅಂಡ್‍ ಫೈರ್’ ವ್ಯವಸ್ಥೆಯೊಳಕ್ಕೆ ತಳ್ಳುತ್ತವೆ. ಕಾರ್ಮಿಕ ಸಂಘಟನೆಗಳನ್ನು ರಚಿಸಿಕೊಳ್ಳುವುದನ್ನು ಅತ್ಯಂತ ಕಷ್ಟಸಾಧ್ಯಗೊಳಿಸುತ್ತವೆ ಮತ್ತು ಮುಷ್ಕರದ ಹಕ್ಕಿನ ಮೇಲೆ ನಿಷೇಧವನ್ನೇ ಹಾಕಿದಂತಾಗುತ್ತದೆ , ತಮ್ಮ ಕುಂದುಕೊರತೆಗಳು ಮತ್ತು ಬೇಡಿಕೆಗಳ ಮೇಲೆ ಸಾಮೂಹಿಕವಾಗಿ ಚಳುವಳಿ ನಡೆಸುವುದಕ್ಕೂ ಅಡ್ಡಿಯುಂಟು ಮಾಡುತ್ತವೆ.

ದೇಶಕ್ಕಾಗಿ ಜಿಡಿಪಿ ಸೃಷ್ಟಿಸುವ ಕಾರ್ಮಿಕರನ್ನು ಗುಲಾಮಗಿರಿಗೆ ಒಳಪಡಿಸುವ ಪರಿಸ್ಥಿತಿಗಳನ್ನು ಉಂಟು ಮಾಡುವ ಸಂಹಿತೆಗಳಿವು. ಈ ಮೂರರಲ್ಲಿಯೂ ಹಲವು ಹಕ್ಕುಗಳು ಮತ್ತು ದುಡಿಮೆಯ ಪರಿಸ್ಥಿತಿಗಳಿಗೆ ಸಂಬಂಧಪಟ್ಟಂತೆ ಕಾರ್ಯಾಂಗಕ್ಕೆ, ಅಂದರೆ ಆಳುವ ಸರಕಾರಗಳಿಗೆ ಕೇವಲ ಸರಕಾರೀ ಆದೇಶದ ಮೂಲಕ ಏಕಪಕ್ಷೀಯವಾಗಿ ಬದಲಾವಣೆ ತರಲು ಅವಕಾಶ ಕಲ್ಪಿಸಿವೆ. ಈ ಬದಲಾವಣೆಗಳು ಸರಕಾರದ ಕಾರ್ಪೊರೇಟ್‍ ಯಜಮಾನರುಗಳು ನಿರ್ದೇಶಿಸುವ ಬದಲಾವಣೆಗಳು ಎಂದು ಬೇರೆ ಹೇಳಬೇಕಾಗಿಲ್ಲ.

ಈ ಗುಲಾಮಗಿರಿಯನ್ನು ನಾವು ಸ್ವೀಕರಿಸುವುದಿಲ್ಲ ಎಂದು ಸೆಟೆದು ನಿಲ್ಲುವುದೇ ಕಾರ್ಮಿಕ ಆಂದೋಲನದ ಮುಂದಿರುವ ದಾರಿ ಎಂದು ಈ ಮೂರು ಸಂಹಿತೆಗಳ ಅಂಗೀಕಾರವನ್ನು ವಿರೋಧಿಸುತ್ತ ಸಿಐಟಯು ಹೇಳಿದೆ.

ಬಿಎಂಎಸ್‍ ಗೂ ಮುಜುಗರ

ಯುಪಿಎ ಸರಕಾರಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಐಕ್ಯ ಕಾರ್ಯಾಚರಣೆಗಳಲ್ಲಿ ಜತೆಗಿದ್ದ ಸಂಘ ಪರಿವಾರಕ್ಕೆ ಬಿಎಂಎಸ್‍ ಮೋದಿ ಸರಕಾರ ಬಂದ ಮೇಲೆ ದೂರ ಸರಿದು ಸರಕಾರದ ಧೋರಣೆಗಳನ್ನು ವಿರೋಧಿಸುವುದನ್ನು ನಿಲ್ಲಿಸಿತ್ತು. ಆದರೆ ಈಗ ಅದು ಕೂಡ ತನ್ನ ಸಮಾಧಾನವನ್ನು ವ್ಯಕ್ತಪಡಿಸಬೇಕಾಗಿ ಬಂದಿದೆ. ಇವು ಕಾರ್ಮಿಕ-ವಿರೋಧಿ ಕ್ರಮಗಳು ಎಂದು ಅದೂ ಖಂಡಿಸಿದೆ. ಕೈಗಾರಿಕಾ ಸಂಬಂಧಗಳ ಸಂಹಿತೆ ಕೈಗಾರಿಕಾ ಶಾಂತಿಯನ್ನು ಕದಡುತ್ತದೆ ಎಂದೂ ಅದು ಎಚ್ಚರಿಸಿದೆ.

ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತಗೊಂಡಿದ್ದೇವೆ ಎಂದು ಬಿಜೆಪಿಯ ಸರಕಾರ ಹೇಳಿದರೆ, ಅದೇ ಪರಿವಾರಕ್ಕೆ ಸೇರಿದ ಬಿಎಂಎಸ್‍ನ ಪ್ರಧಾನ ಕಾರ್ಯದರ್ಶಿ ವೃಜೇಶ್‍ ಉಪಾಧ್ಯಾಯ ತಮ್ಮ ಸಂಘಟನೆ ಎತ್ತಿದ ಯಾವ ಆಕ್ಷೇಪಣೆಗಳನ್ನು ಕೂಡ ಗಮನಕ್ಕೆ ತಗೊಂಡಿಲ್ಲ, ಅಲ್ಲದೆ ಸಂಸದೀಯ ಸ್ಥಾಯೀ ಸಮಿತಿಯ ಕಾರ್ಮಿಕ-ಪರ ಶಿಫಾರಸುಗಳನ್ನೂ ಗಮನಕ್ಕೆ ತಗೊಂಡಿಲ್ಲ, ಬದಲಿಗೆ ಮಾಲಕರು ಮತ್ತು ಉದ್ಯೋಗದಾತರ ಹಾಗೂ ಅಧಿಕಾರಶಾಹಿಗಳ ಪರವಾಗಿ ಇನ್ನಷ್ಟು ತಿರುಗಿಸಲಾಗಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. “ಕೊನೆಗಳಿಗೆಯ ವಿರೂಪಗಳು ಕೈಗಾರಿಕಾ ಶಾಂತಿಯನ್ನು ಕದಡುತ್ತವೆ” ಎಂದು ಅವರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *