ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿಧೇಯಕ ಮಂಡನೆ

ಬೆಂಗಳೂರು: ವಿವಾದಾತ್ಮಕ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡನೆ ಮಾಡಲಾಯಿತು.

‌ಕಾಯ್ದೆ ತಿದ್ದುಪಡಿಗೆ ರೈತರಿಂದ ವಿರೋಧ ವ್ಯಕ್ತವಾಗುತ್ತಿದ್ದರೂ ಲೆಕ್ಕಿಸದೆ ಸಹಕಾರಿ ಸಚಿವ ಎಸ್.ಟಿ‌ ಸೋಮಶೇಖರ್ ವಿಧೇಯಕ ಮಂಡನೆ ಮಾಡಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯನ್ನು ಸರಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿದೆ. ಕಾಂಗ್ರೆಸ್ ಜೆಡಿಎಸ್ ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ತೀವ್ರ ಹೋರಾಟ ನಡೆಸುತ್ತಿವೆ.

ವಿವಾದಾತ್ಮಕ ಸುಗ್ರೀವಾಜ್ಞೆ ವಿರೋಧಿಸಿ ಸೋಮವಾರ ರಾಜ್ಯ ಬಂದ್ ಗೂ ರೈತ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಇಷ್ಟೆಲ್ಲಾ ವಿರೋಧಗಳ ನಡುವೆಯೂ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.‌

ಗುರುವಾರ ಸದನದಲ್ಲಿ ಬಿಸಿಬಿಸಿ ಚರ್ಚೆ ಸಾಧ್ಯತೆ

ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಭೂಸುಧಾರಣಾ ಕಾಯ್ದೆ ತಿದ್ದುಪಡಿಯ ಕುರಿತಾಗಿ ಸದನದಲ್ಲಿ ಗುರುವಾರ ಚರ್ಚೆ ನಡೆಯಲಿದೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪರ್ಯಾಲೋಚನೆ ಪ್ರಸ್ತಾಪವನ್ನು ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿ ಮಂಡಿಸಲು ಮುಂದಾದರು.‌

ಈ‌ ವೇಳೆ ಮಧ್ಯಪ್ರವೇಶ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಪಿಎಂಸಿ ಹಾಗೂ ಭೂಸುಧಾರಣಾ ಪರಸ್ಪರ ಸಂಬಂಧ ಇದೆ.ಈ ವಿಚಾರವಾಗಿ ಗುರುವಾರ ಚರ್ಚೆ ಮಾಡೋಣ ಎಂದರು.‌

ಇವೆರಡು ರೈತರಿಗೆ ಮಾರಕವಾದ ತಿದ್ದುಪಡಿ, ಸಾರ್ವಜನಿಕ ಹಿತಾಸಕ್ತಿಯಿಂದ ಇವೆರಡನ್ನು ಒಟ್ಟಿಗೆ ಚರ್ಚೆ ಮಾಡೋಣ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಮನವಿಗೆ ಸರಕಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಇವೆರಡು ವಿವಾದಾತ್ಮಕ ವಿಧೇಯಕಗಳ ಕುರಿತಾಗಿ ಗಂಭೀರ ಚರ್ಚೆ ನಡೆಯುವ ಸಾಧ್ಯತೆಯಿದೆ.

Donate Janashakthi Media

Leave a Reply

Your email address will not be published. Required fields are marked *