- ಲಾಕ್ಡೌ ನ್ ವೇಳೆ ಮೃತಪಟ್ಟ ವಲಸೆ ಕಾರ್ಮಿಕರ ಲೆಕ್ಕವಿಲ್ಲ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದ ಕೇಂದ್ರಸರ್ಕಾರ
ನವ ದೆಹಲಿ: COVID-19 ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಸಾಗಿಸಲು ರೈಲ್ವೆ ಇಲಾಖೆ ಆರಂಭಿಸಿದ್ದ ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸುವಾಗ 97 ಜನ ಮೃತಪಟ್ಟಿದ್ದಾರೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಇಂದು ಮೇಲ್ಮನೆ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಲಾಕ್ಡೌನ್ ಸಂದರ್ಭದಲ್ಲಿ ಶ್ರಮಿಕ್ ರೈಲಿನಲ್ಲಿ ಮೃತಪಟ್ಟ ಬಡ ವಲಸೆ ಕಾರ್ಮಿಕರಿಗೂ ಪರಿಹಾರ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ, ಇದಕ್ಕೆ ಉತ್ತರಿಸಿದ್ದ ಕೇಂದ್ರ ಕಾರ್ಮಿಕ ಸಚಿವಾಲಯ “ಕೊರೋನಾ ಸಂದರ್ಭದಲ್ಲಿ ಎಷ್ಟು ಜನ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸರ್ಕಾರದ ಬಳಿ ಅಂಕಿಅಂಶಗಳಿಲ್ಲ” ಎಂದು ಉತ್ತರಿಸಿತ್ತು. ಸರ್ಕಾರದ ಈ ಹೇಳಿಕೆ ಸಾಕಷ್ಟು ವಿಮರ್ಶೆ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಿಗೆ ಟಿಎಂಸಿ ಡೆರೆಕ್ ಒ’ಬ್ರಿಯನ್ ಅವರು ಶುಕ್ರವಾರ ಕೇಳಿದ ಪ್ರಶ್ನೆಗೆ ಇಂದು ಲಿಖಿತ ಉತ್ತರ ನೀಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ಶ್ರಮಿಕ್ ರೈಲಿನಲ್ಲಿ ಈವರೆಗೆ ಒಟ್ಟು 97 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
“ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸುವಾದ ಮೃತಪಟ್ಟ ಕಾರ್ಮಿಕರ ಕುರಿತು ಆಯಾ ರಾಜ್ಯಗಳು ಒದಗಿಸಿರುವ ಮಾಹಿತಿಯನ್ನು ಆಧರಿಸಿ, ಕೋವಿಡ್-19 ಪರಿಸ್ಥಿತಿಯಲ್ಲಿ ಎಷ್ಟು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಸಚಿವಾಲಯ ಪಟ್ಟಿಮಾಡಿದೆ. ಶ್ರಮಿಕ್ ವಿಶೇಷ ರೈಲುಗಳ ಸೇವೆ ಆರಂಭಿಸಿದ ದಿನದಿಂದ 09.09.2020 ರವರೆಗೆ ಒಟ್ಟು 97 ಜನರು ಸಾವನ್ನಪ್ಪಿದ್ದಾರೆ” ಸಚಿವ ಪಿಯೂಶ್ ಗೋಯಲ್ ಸಂಸತ್ಗೆ ಲಿಖಿತ ಉತ್ತರ ನೀಡಿದ್ದಾರೆ.
“ರಾಜ್ಯ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣಗಳಲ್ಲಿ ಸಿ.ಆರ್.ಪಿ.ಸಿ ಯ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುತ್ತಾರೆ ಮತ್ತು ಮುಂದಿನ ಕಾನೂನು ಪ್ರಕ್ರಿಯೆಯನ್ನು ಅನುಸರಿಸುತ್ತಾರೆ. ಅಲ್ಲದೆ, 97 ಸಾವು ಪ್ರಕರಣಗಳ ಪೈಕಿ 87 ಪ್ರಕರಣಗಳಲ್ಲಿ ರಾಜ್ಯ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ” ಎಂದು ಸಚಿವರು ತಿಳಿಸಿದ್ದಾರೆ.
ಕಾರ್ಮಿಕರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆಯೂ ಉಲ್ಲೇಖಿಸಿರುವ ಪಿಯೂಶ್ ಗೋಯಲ್, “ಈವರೆಗೆ ಒಟ್ಟು 51 ಪೋಸ್ಟ್ಮಾರ್ಟಂ ವರದಿಗಳನ್ನು ಆಯಾ ರಾಜ್ಯ ಪೊಲೀಸ್ ಪಡೆಗಳಿಂದ ಪಡೆಯಲಾಗಿದ್ದು, ಇದರಲ್ಲಿ ಸಾವಿಗೆ ಕಾರಣಗಳನ್ನು ಹೃದಯ ಸ್ತಂಭನ, ಹೃದಯ ಕಾಯಿಲೆ, ಮೆದುಳಿನ ರಕ್ತಸ್ರಾವ, ಮೊದಲೇ ಅಸ್ತಿತ್ವದಲ್ಲಿರುವ ದೀರ್ಘಕಾಲದ ಕಾಯಿಲೆ, ಶ್ವಾಸಕೋಶದ ಕಾಯಿಲೆ, ದೀರ್ಘಕಾಲದ ಯಕೃತ್ತಿನ ಕಾಯಿಲೆ ಸೇರಿದಂತೆ ಬೇರೆ ಬೇರೆ ಖಾಯಿಲೆಗಳಿಂದ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಮರಳಿಸುವ ಸಲುವಾಗಿ ಶ್ರಮಿಕ್ ವಿಶೇಷ ರೈಲುಗಳು ಮೇ 1 ರಂದು ಕಾರ್ಯಾಚರಣೆ ಆರಂಭಿಸಿದವು. ಒಟ್ಟಾರೆಯಾಗಿ, 4,621 ಶ್ರಮಿಕ್ ವಿಶೇಷ ರೈಲುಗಳನ್ನು ಮೇ 1 ಮತ್ತು ಆಗಸ್ಟ್ 31 ರ ನಡುವೆ ಓಡಿಸಲಾಗಿದ್ದು, 6,319,000 ಪ್ರಯಾಣಿಕರನ್ನು ತಮ್ಮ ರಾಜ್ಯಗಳಿಗೆ ಕರೆದೊಯ್ಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.