- ಕೊರೊನಾ ಕಾಲದಲ್ಲಿ ಮೂಡಿದ ಕಥೆ
ಕೈ ಕಾಲುಗಳಲ್ಲಿ ಥರ್ಕೀ ಹುಟ್ಟಿದಂಗಾಗಿ ನಡುಗ ತೊಡಗಿದವು. ಮೈಯೆಲ್ಲ ಜಲ ಜಲ ಬೆವೆತು ಹೋಯ್ತು. ಎದೆಗುಂಡಿಗೆ ಹಿಂಡಿದಂಗಾಯ್ತು. ಎದ್ದುಹೋಗಿ ನೀರಿನ ತಂಬಿಗೆ ತುಂಬಿಕೊಳ್ಳಬೇಕೆಂದು ರಗಡ ಪ್ರಯತ್ನ ಮಾಡಿದರೂ ಎದ್ದೇಳಲು ಸಾಧ್ಯವಾಗಲಿಲ್ಲ. ಯಾರಿಗಾದರೂ ಫೋನ್ ಮಾಡಬೇಕೆಂದ್ರೆ ಅವಳ ಡಬ್ಬಾ ಫೋನಲ್ಲಿ ದುಡ್ಡಿಲ್ಲ. ಎರಡು ತಿಂಗಳಿಂದ ಅದು ಬರೀ ಇನ್ಕಮಿಂಗ್ ಸೆಟ್ ಆಗಿತ್ತು. ” ದೈವಹೀನರಿಗೆ ದೇವರೇಗತಿ ” ಎಂಬ ಸಾಳುಂಕೆ ಕವಿಗಳ ನಾಟಕವೊಂದರ ಡೈಲಾಗ್ ನೆನಪಾಗಿ, ದೇವರನ್ನೇ ನೆನೆಯುತ್ತ ಹೋಳುಮೈಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಅಲ್ಲಾಡದಂತೆ ಮಲಗಿದಳು ಚಾಂದಬೇಗಂ. ಮನುಷ್ಯರ ಬದುಕಿನ ಏನೆಲ್ಲವನ್ನೂ ಕಸಗೊಂಡು ಮೂರಾಬಟ್ಟೆ ಮಾಡುವ ಕರಾಳ ಕೊರೊನಾ ಉಪಟಳ ಕೇಳಿ, ಕೇಳಿ ಎದೆಝಲ್ ಎನಿಸಿಕೊಂಡಿದ್ದಳು.
ಜೀವ ಕಾಠರಸಿ ಹೋಗಿತ್ತು. ನಿತ್ಯವೂ ಉಪವಾಸ, ವನವಾಸದಿಂದ ನೆಳ್ಳಿ ನೆಳ್ಳಿ ಸಾಯುವ ಬದಲು ಕೊರೊನಾ ಬಂದು ಪಟಕ್ಕಂತ ತನ್ನ ಪ್ರಾಣ ಕಸಗೊಂಡು ಹೋದರೆ ಸಾಕೆಂಬ ಕಠಿಣ ನಿರ್ಧಾರಕ್ಕೆ ಬಂದಿದ್ದಳು.
ಹೀಂಗೆ ಎರಡು ತಿಂಗಳಕಾಲ ಆಕೆ ಒಂಟಿಯಾಗಿ ಮನೆಯಲ್ಲೇ ಇರುವಾಗ ಕೊರೊನಾ ಬರುವುದಾದರೂ ಹೇಗೆ.? ಇದೀಗ ತನಗೆ ಆಗುತ್ತಿರುವ ಹೃದಯ ಸಂಬಂಧಿ ದೈಹಿಕ ವೈಪರೀತ್ಯ ಕುರಿತು ಎಳ್ಳರ್ಧ ಕಾಳಿನಷ್ಟೂ ತಿಳಿವಳಿಕೆ ಅವಳದಲ್ಲ. ಜನಸಂಪರ್ಕವಿಲ್ಲದೇ ಹೀಗೆ ವಾರಗಟ್ಟಲೇ ಮನೆಯಲ್ಲಿ ಏಕಾಂಗಿಯಾಗಿ ನರಳುತ್ತಿರುವ ಆಕೆಗೆ ಹೊಟ್ಟೆತುಂಬಾ ಉಂಡ ನೆನಪಿಲ್ಲ. ಮಾರಿಕಾಂಬೆ ಜಾತ್ರೆ ಕ್ಯಾಂಪಿನ ನಾಟಕ ಶುರುವಾಗಿ ನಾಲ್ಕನೇ ದಿನಕ್ಕೆ ” ಕಂಪನಿ ಬಂದ್ “ಮಾಡಬೇಕೆಂಬ ಕೊರೊನಾ ಮಾರಿಯ ಲಾಕ್ ಡೌನ್ ಆರ್ಡರ್ ಬಂತು.
” ನೀವೆಲ್ಲ ನಿಮ್ನಿಮ್ಮ ಊರಿಗೆ ಹೋಗ್ರೀ ನಾಟ್ಕ ಚಾಲೂ ಆಗೋಮುಂದ ಹೇಳಿ ಕಳಿಸ್ತೀವಂತ ” ಜಂಭಯ್ಯ ಮಾಲೀಕರು ಮುಖದ ಮಾಸ್ಕ್ ಸರಿಸಿ, ಒಂದೇ ಉಸುರಲ್ಲಿ ಆದೇಶ ಹೊರಡಿಸಿ ಕಾರುಗಾಡಿ ಹತ್ತಿ ಹೊಂಟುಹೋದರು.
ಲೈಟಿಂಗ್ ಹುಡುಗ ಸಾಜಿದ್ ಹತ್ತಿರ ಬಸ್ ಚಾರ್ಜ್ ಇಸ್ಗೊಂಡು ಊರಿಗೆ ಬಂದಳು ಬೇಗಮ್. ಹೌದು ನಾಟಕ ಕಂಪನಿ ಮಾಲೀಕರ ಬಳಿ ಮನವಿಮಾಡಿ ಹಣ ಪಡೆಯಲು ತಾನೇನು ಹೀರೊಯಿನ್, ಇಲ್ಲವೇ ಹಾಸ್ಯ ಕಲಾವಿದೆ ಅಲ್ಲವಲ್ಲ, ಎಂದು ತನ್ನೊಳಗೆ ತಾನೇ ಮಾತಾಡಿ ಕೊಂಡಳು. ಅಷ್ಟಕ್ಕೂ ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವರಾದ ಕಂಪನಿ ಮಾಲೀಕ ಜಂಭಯ್ಯ, ಕಲಾವಿದರಿಂದ ಯಾವತ್ತೂ ಅಂತರ ಕಾಪಾಡಿಕೊಳ್ಳುತ್ತಿದ್ದರು. ಮಾಲೀಕರ ಹತ್ತಿರ ಸಲುಗೆಯಿಂದ ಮಾತಾಡುವ ಧೈರ್ಯ, ಕಂಪನಿ ಮ್ಯಾನೇಜರ್ ಯಡ್ರಾಮಿ ಮಲ್ಕಾಜಣ್ಣರಿಗೆ ಮಾತ್ರ.
ಅರವತ್ತರ ಆಸುಪಾಸಿನಲ್ಲಿರುವ ಚಾಂದಬೇಗಂ, ತಾಯಿ ಪಾತ್ರಕ್ಕೆ ಹೇಳಿ ಮಾಡಿಸಿದ ಕಲಾವಿದೆ. ಅದರಲ್ಲೂ ಕೌಟುಂಬಿಕ ನಾಟಕಗಳ ದುಃಖದ ಪಾತ್ರಗಳೆಂದರೆ ಆಕೆಗೆ ಖಂಡುಗ ಖುಷಿ. ಭಲೇ, ಭಲೇ ಕಟುಕರ ಕರುಳು ಚುರುಕೆನಿಸಿ ಕಣ್ಣೀರು ತರಿಸುವ ಅಭಿಜಾತ ಅಭಿನೇತ್ರಿ. ಹರೆಯದಲ್ಲಿ ಆಕೆ ಮಾಡಿದ ಹಿರೋಯಿನ್ ಪಾತ್ರ ನೋಡಿದವರಲ್ಲಿ ಇವತ್ತಿಗೂ ನೆನಪಿನ ಮಹಾಪುಳಕ.
ಅಭಿಮಾನಿಗಳು ಆಕೆಯನ್ನು “ಚಾಂದನಿ” ಅಂತಲೇ ಕರೀತಿದ್ರು. ಹತ್ತಾರು ಟೀವಿ ಧಾರಾವಾಹಿಗಳಲ್ಲಿ, ಶತ ದಿನೋತ್ಸವ ಕಂಡ ನಾಕೈದು ಸಿನೆಮಾಗಳಲ್ಲೂ ಆಕೆಗೆ ಉತ್ತಮ ಅವಕಾಶಗಳೇ ಸಿಕ್ಕಿದ್ದವು. ದೂರದ ಬೆಂಗಳೂರಿನ ಟೀವಿ, ಸಿನೆಮಾ ಲೋಕದಿಂದ ಕೈತುಂಬಾ ರೊಕ್ಕ ಸಿಗಲಿಲ್ಲ. ಆದರೆ ಸಾರ್ವಜನಿಕವಾಗಿ ಆಕೆಗೆ ದೊಡ್ಡ ಹೆಸರು ಮಾತ್ರ ಸಿಕ್ಕಿತ್ತು. ಆ ಹೆಸರಿನಿಂದಾಗಿಯೇ ನಾಟಕ ಕಂಪನಿಗಳಲ್ಲಿ ಈಗಲೂ ಆಕೆಗೆ ಹೆಚ್ಚು ಅವಕಾಶ. ಟೀವಿ, ಸಿನೆಮಾ ತಾರೆಯೆಂಬ ಹೆಗ್ಗಳಿಕೆ ಕಂಪನಿ ಮಾಲೀಕರಿಗೆ ಮತ್ತು ಪ್ರೇಕ್ಷಕರಿಗೆ. ಅವಳಿಗೆ ಅದಾವುದರ ಅರಿವಿಲ್ಲ.
ಅವಳ ಪತಿ ಕುಮಾರಣ್ಣ ಸಹಿತ ಹೆಸರಾಂತ ರಂಗನಟ. ಆತ ಕುಡಿದು, ಕುಡಿದು, ಕುಡಿದೇ ಪ್ರಾಣ ಬಿಟ್ಟಿದ್ದ. ಸಾಯುವ ದಿನವೂ ಕುಮಾರಣ್ಣ ಸೊಗಸಾಗಿ ವಿಲನ್ ರೋಲ್ ಮಾಡಿದ್ದ. ಇನ್ನೇನು ಊಟಕ್ಕೆ ಕುಳಿತು ಕೊಳ್ಳಬೇಕೆನ್ನುವಾಗ ಎದೆಗುಂಡಿಗೆ ಹಿಂಡಿ, ಜಲಜಲ ಬೆವೆತು ಹೃದಯಾಘಾತದಿಂದ ಒಂದೇ ಏಟಿಗೆ ತೀರಿಹೋಗಿದ್ದ.
ಸಾಯುವ ಮುನ್ನ ಅವನು ಮಾಲೀಕರಲ್ಲಿ…
” ನನ್ನ ಬೇಗಮ್ ಬದುಕಿರೋವರೆಗೂ ಪಾತ್ರ ಮಾಡ್ತಾಳೆ. ಕಂಪ್ನಿ ಬಿಡಿಸಬೇಡಿರೆಂದು ” ಅಂಗಲಾಚಿ ಬೇಡಿಕೊಂಡಿದ್ದ. ಹೆಂಡತಿಯ ತೊಡೆಯ ಮೇಲೆ ಪ್ರಾಣ ಬಿಟ್ಟಾಗ ಬೇಗಮ್ ಬಿಕ್ಕಿ ಬಿಕ್ಕಿ ಅಳುತ್ತಿದ್ದುದು ಕಂಡವರಿಗೆಲ್ಲ ಕರುಳು ಚುರುಕ್ಕೆಂದು ” ಪಾಪ ಇಬ್ಬರದು ಜಾತಿ ಬ್ಯಾರೇ ಬ್ಯಾರೇ ಆಗಿದ್ರು ಕುಮಾರಣ್ಣ ಪುಣ್ಯಮಾಡಿದ್ದ ಹಂಗ ನೋಡಕೊಂಡಳು ” ಅಂತ ಕಂಪನಿ ಕಲಾವಿದರೆಲ್ಲರೂ ಕಣ್ಣೀರು ಸುರಿಸಿದ್ರು.
ಶಹರ ಮಾತ್ರವಲ್ಲ ದೇಶದ ತುಂಬೆಲ್ಲ ಲಾಕ್‌ಡೌನ್ ಘೋಷಣೆ ಆದಮೇಲಂತೂ ಬೇಗಮ್ಮಳದು ತುಂಬಾನೇ ಸಂಕಟದ ಬದುಕು. ವಾರವೊಪ್ಪತ್ತು ಅಕ್ಕಪಕ್ಕದವರು ನೆರವಾದರು. ಆಮೇಲೆ ಎದುರಾದುದು ಅವಳ ಕಣ್ಣೀರೂ ಬತ್ತಿ ಹೋಗುವಂಥ ಸಂಕಷ್ಟಗಳು. ಯಾವ ನಾಟಕದಲ್ಲೂ ಕಂಡೂ ಕೇಳರಿಯದ, ಯಾವ ಕವಿ ಕಲ್ಪನೆಗೂ ನಿಲುಕದ, ಊಹಿಸಲೂ ಸಾಧ್ಯವಾಗದ ನರಕಯಾತನೆ. ದೇವರುಕೊಟ್ಟ ಗಾಳಿ, ನಗರಸಭೆಯವರು ಬಿಡುತ್ತಿದ್ದ ಕೊಳಾಯಿ ನೀರೇ ಅವಳ ಪಾಲಿಗೆ ಅನ್ನ ಆಹಾರ ಏನೆಲ್ಲ ಆಗಿತ್ತು. ಮನೆ ಹೊರಗಡೆ ಹೋಗುವಂತಿಲ್ಲ. ಎಷ್ಟು ದಿನಾಂತ ನೀರು ಕುಡಿದು ಬದುಕಲು ಸಾಧ್ಯ.? ಬೀಪಿ, ಸಕ್ಕರೆ ಕಾಯಿಲೆಗೆ ಅವಳು ಸೇವಿಸುತ್ತಿದ್ದ ಗುಳಿಗೆಗಳು ಮುಗಿದು ತಿಂಗಳು ಮೇಲಾಯ್ತು. ಗುಳಿಗೆಗಳಿದ್ದರೂ ಉಪವಾಸದ ಖಾಲಿ ಹೊಟ್ಟೆಯಲ್ಲಿ ಗುಳಿಗೆ ನುಂಗುವುದು ದುಃಸಾಧ್ಯ. ಹೀಗೇ ಉಪವಾಸದಿಂದ ತಾನು ಸತ್ತು ಹೋಗುವುದು ಖಚಿತವೆಂದು, ಗಂಡನನ್ನು ಮನದಲ್ಲೇ ಮತ್ತೆ, ಮತ್ತೆ ನೆನೆದು ಕೊಂಡಳು.
ಇದ್ದಕ್ಕಿದ್ದಂತೆ ರಾತ್ರಿ ಅವಳ ಫೋನ್ ರಿಂಗಾಯ್ತು. ಸಾವಿನ ಅಂಚಿನಲ್ಲಿರುವ ತನಗ್ಯಾರು ಫೋನ್ ಮಾಡ್ತಾರೆ ಅದು ಮೊಬೈಲ್ ಕಂಪನಿ ಕಾಲ್ ಇರಬಹುದೆಂದು ನಿರಾಸೆಯಿಂದ ಬೇಗ ಎತ್ತಿಕೊಳ್ಳಲಿಲ್ಲ. ಮತ್ತೆ, ಮತ್ತೆ ಫೋನ್…
” ಹಲೋ ನಾವು ಸಂಘದವರು ಮಾತಾಡ್ತಿದ್ದೀವಿ ನೀವು ಕಲಾವಿದೆ ಚಾಂದ್ ಬೇಗಮ್ ಹೌದಲ್ರೀ ? ” ಅದೆಷ್ಟೋ ದಿನಗಳ ನಂತರ ಆ ಕಡೆಯಿಂದ ಮೊದಲ ಬಾರಿಗೆ ಮನುಷ್ಯನ ಧ್ವನಿ ಕೇಳಿ, ಕಳೆದುಹೋದ ಪ್ರಾಣಪಕ್ಷಿ ಮರಳಿ ಬಂದಂಗಾಯ್ತು. ಹಾಸಿಗೆಯಿಂದ ಎದ್ದು ಕುಂತು ” ಹೌದ್ರೀ ನಾನೇ, ನಾನೇ ಬೇಗಮ್… ಇದ್ದೀನಿ., ತಾವ್ಯಾರು ? ” ಕಣ್ತುಂಬಿ ಕೇಳಿದಳು.
” ನಾವು ನಿಮ್ಮ ಅಭಿಮಾನಿಗಳು. ನಾಳೆ ನಿಮಗೆ ರೇಷನ್ ಕಿಟ್, ಚಪಾತಿ ಊಟ ತಗೊಂಡ ಬರ್ತಿದಿವಿ ನಿಮ್ಮನಿ ಅಡ್ರೆಸ್ ಹೇಳ್ರಿ”. ಕೇಳುತ್ತಿದ್ದಂತೆ ಪುನರ್ಜನ್ಮ ತಾಳಿದ ಉಮೇದು, ಅಪರಿಮಿತ ಸಂತಸದ ಧ್ವನಿಯಲ್ಲಿ ವಿಳಾಸ ತಿಳಿಸಿದಳು.” ಅಬ್ಬಾ!! ದೇವರು ಇದ್ದಾನೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ” ತನಗೆ ತಾನೇ ಸಾಂತ್ವನ ಹೇಳಿಕೊಂಡಳು.
ಬೆಳಕು ಹರಿಯುವುದನ್ನೇ ತದೇಕ ಚಿತ್ತದಿಂದ ಕಾಯತೊಡಗಿದಳು. ಊಟ, ನಿದ್ರೆ ಎಂಬೋದು ಕನಸಿನಲ್ಲೂ ಕಂಡಿರಲಿಲ್ಲ. ಯಾವ ಯಾವುದೋ ನಾಟಕಗಳ ಹತ್ತಾರು ದೃಶ್ಯಗಳು, ರಂಗಕಥನಗಳು, ಸಂಭಾಷಣೆಗಳು ಅವಳೆದುರು ಫ್ಲ್ಯಾಶ್‌ಬ್ಯಾಕ್ ತರಹ ಸುರುಳಿ ಸುರುಳಿಯಾಗಿ ಸುಳಿಯತೊಡಗಿದವು. ಹಸಿವಿನ ಪಾತ್ರಗಳನ್ನು ಅಭಿನಯಿಸಿ ತೋರಿಸಿದ ತನಗೇ ಹಸಿವನ್ನು ಸಾಕ್ಷಾತ್ ಬದುಕುತ್ತಿರುವ ಅಗ್ನಿಪರೀಕ್ಷೆಯ, ಕಟುಸತ್ಯದ ಅನುಭವ. ಅದ್ಯಾಕೋ ಜೋಂಪು ಹತ್ತಿದಂಗಾಯ್ತು. ಆ ಜೋಂಪಿನಲ್ಲೇ ಚಪಾತಿ ಊಟ, ರೇಷನ್ ಕಿಟ್ ಕಣ್ಮುಂದೆ ಬಂದು ನಿಂತವು. ಸಾವಿನ ಹಸಿವು ನೀಗಿದ ಸಂತಸ. ಕೋಲ್ಮಿಂಚು ಹೊಡೆದಂಗಾಗಿ ಗಾಬರಿಯಿಂದ ಸವಂಡು ಕೇಳಿಸಿಕೊಂಡಳು.
ಕಣ್ಣೊರೆಸಿಕೊಂಡು ಹೊಳಮೈಯಲ್ಲಿ ಹೊಳ್ಳಿ ಸಾವಕಾಶ ಎದ್ದು ಕುಂತಳು. ಹಾಳಾದದ್ದು ಹಾಳಪ್ಪುಗೆ, ಕನಸಿರಬೇಕು. ಇನ್ನೂ ಹೊತ್ತು ಹೊಂಟಿಲ್ಲ. ಆದರೂ ನಿದ್ದೆ ಮಾಡೋದೇ ಬ್ಯಾಡಂತ ನಾಟಕದ ಚೋಪಡಿಯೊಂದನ್ನು ಹಿಡಕೊಂಡು ಓದುತ್ತಾ ಕುಂತಳು. ಸಣ್ಣದೊಂದು ಸಪ್ಪಳಾದರೂ ಸಾಕು, ಸಂಘದವರು ಬಂದರೇನೋ ಎಂದು ಶಾಂತಳಾಗಿ ಕುಂತು ಬಾಗಿಲು ಬಡಿತದ ಸವುಂಡಿಗಾಗಿ ಕಾಯತೊಡಗಿದಳು. ಸಂಘದವರಿಗೆ, ಯಾವಾಗ ಬರ್ತೀರಂತ ಮತ್ತೊಮ್ಮೆ ಕೇಳಿ ಖಚಿತ ಪಡಿಸಿಕೊಳ್ಳಲು ಅವಳ ಡಬ್ಬಾ ಫೋನಲ್ಲಿ ರೊಕ್ಕಾ ಇಲ್ಲ. ಹೇಗಿದ್ದರೂ ನಾಳೆ ಸಂಘದವರು ಬರ್ತಾರೆ ಅವರ ಕಡೆಯಿಂದ ಮಿಸ್ ಕಾಲ್ ಕೊಡುವಷ್ಟಾದರೂ ಫೋನಿಗೆ ರೊಕ್ಕ ಹಾಕಿಸಿಕೊಂಡರಾಯಿತೆಂದು ಲೆಕ್ಕ ಹಾಕಿಕೊಂಡಳು.
ಮುಂಜಾನೆ ಹತ್ತುಗಂಟೆಯಾದರೂ ಸಂಘದವರ ಸುಳಿವಿಲ್ಲ. ನನ್ನ ಹಣೆಬರಹ ಇಷ್ಟೇ. ನನಗೆ ಸಾವೇಗತಿ ಎಂದುಕೊಂಡು ಹಾಸಿಗೆ ಮೇಲೆ ಉರುಳಿ ಮಲಗಿ ಕೊಳ್ಳಬೇಕೆನ್ನುವಷ್ಟರಲ್ಲಿ ಜೀಪು, ಕಾರುಗಳ ಸವಂಡು, ಆಮೇಲೆ ಬಾಗಿಲು ಬಡಿದ ಸಪ್ಪಳಾಯಿತು.
” ಬೇಗಮ್ಮರೇ..ಚಾಂದಬೇಗಮ್ಮರೇ..” ದನಿ ಕೇಳಿದಾಗ ” ನನಗಿನ್ನು ನೂರು ವರ್ಷ ಆಯಸ್ಸು. ನಾನು ಸಾಯಲಾರೆ ” ಸಂತಸದ ನಿಟ್ಟುಸಿರು ಬಿಟ್ಟಳು. ಹೇರ್ ಡೈ ಇಲ್ಲದೇ ಪೂರ್ತಿ ಬೆಳ್ಳಗಾಗಿದ್ದ ತಲೆಗೂದಲು, ಅಸ್ತವ್ಯಸ್ತವಾಗಿದ್ದ ಸೀರೆ ಸರಿಪಡಿಸಿಕೊಂಡಳು. ಕನ್ನಡಕ ಧರಿಸಿ ಎದ್ದೇಳಬೇಕೆನ್ನುವಷ್ಟರಲ್ಲಿ ಕಣ್ಣಿಗೆ ಬವಳಿ ಬಂದಂಗಾಗಿ, ಒಂದರಗಳಿಗೆ ತಡೆದು ಬಾಗಿಲು ತೆರೆದು ಸಾವಕಾಶವಾಗಿ ಹೊರಬಂದಳು.
ಮುರ್ನಾಲ್ಕು ಮಂದಿ ಮಹಿಳೆಯರು ಸೇರಿದಂತೆ ಏಳೆಂಟು ಮಂದಿ ಸಂಘದ ಕಾರ್ಯಕರ್ತರು, ಹತ್ತೊಂಬತ್ತನೇ ವಾರ್ಡಿನ ಮಾಜಿ ಕಾರ್ಪೋರೇಟರ್ ಕಟ್ಟೀಮನಿ, ಅವರ ಅನುಯಾಯಿಗಳು . ಅವರನ್ನೆಲ್ಲ ನೋಡಿದ ಅವಳಿಗೆ ಸಂಜೀವಿನಿ ಪರ್ವತವನ್ನೇ ನೋಡಿದಷ್ಟು ಸಂತಸ, ಸಂಭ್ರಮ ಪಟ್ಟಳು. ಅವರೆಲ್ಲ ಮುಖಕ್ಕೆ ಕಟ್ಟಿಕೊಂಡಿದ್ದ ಮಾಸ್ಕ್ ತೆಗೆದು ಎಲ್ಲರೂ ಸಾಲಾಗಿ ನಿಂತರು. ನಡುವೆ ನಿಲ್ಲಿಸಿದ್ದ ಕಲಾವಿದೆ ಚಾಂದಬೇಗಮ್ಮಳ ಕೈಗೆ ಚಪಾತಿ ಊಟದ ಬಾಕ್ಸ್, ಮುಂದೆ ರೇಷನ್ ಕಿಟ್ ಇಟ್ಟರು. ಫೋಟೋಗ್ರಾಫರ್ ಗಣೇಶನಿಗೆ ಫೋನ್ ಮೇಲೆ ಫೋನ್ ಮಾಡುತ್ತಲೇ ಇದ್ದರು.
ಅರ್ಧಗಂಟೆ ಕಾಯ್ದು ಕಾಯ್ದು ಸುಸ್ತಾಗಿ ಮೊಬೈಲ್ ಫೋಟೋಗಳೇ ಗತಿಯಾದವು ಅನ್ನೋವಾಗ ಫೋಟೋಗ್ರಾಫರ್ ಬಂದ. ಬಗೆ ಬಗೆಯ ಏಳೆಂಟು ಫೋಟೊ ತೆಗೆಸಿಕೊಂಡರು. ಮಾಜಿ ಕಾರ್ಪೊರೇಟರ್ ಕಟ್ಟೀಮನಿ, ಬೇಗಮ್ ಅಭಿನಯಿಸಿದ ಸಿನೆಮಾ, ನಾಟಕಗಳ ಪಾತ್ರಗಳನ್ನು ಕೊಂಡಾಡಿದ. ಕಲಾವಿದೆಗೆ ಸಂತಸದ ಸಮುದ್ರದಲ್ಲಿ ತೇಲಿಹೋದ ಪರಮಾನಂದ. ಕೊರೊನಾ ಸಂತ್ರಸ್ತರಿಗೆ ಪ್ಯಾಕೇಜ್ ತಲುಪಿಸಲು ಕೊಟ್ಟ ಕಾರ್ಪೊರೇಟ್ ಕಂಪನಿಗೆ ನೆರವಿನ ವಿಡಿಯೋ ಮತ್ತು ಫೋಟೋ ತಲುಪಿಸಿದರೆ ಸಾಕಿತ್ತು. ತಿಂಗಳಿಂದ ಕಟ್ಟೀಮನಿ ಟೀಮ್ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿತ್ತು.
ಸಂಘದವರೆಲ್ಲರೂ ತಮ್ಮ ಕಾರು, ಜೀಪುಗಳತ್ತ ಚಲಿಸುತ್ತಿದ್ದರು. ಇನ್ನೇನು ಬೇಗಮ್ ಮನೆಯೊಳಕ್ಕೆ ಕಾಲಿಡಬೇಕು. ಅಷ್ಟರಲ್ಲಿ ಅವರಲ್ಲೊಬ್ಬ ಓಡೋಡಿ ಬಂದು ಕಾರ್ಪೊರೇಟರಣ್ಣ ಹೇಳಿ ಕಳಿಸಿದ್ದು ” ಅಮ್ಮಾ ತಪ್ಪು ತಿಳ್ಕೊಬೇಡ್ರಿ, ಮುಂದಿನ ಓಣಿಯಲ್ಲಿ ಇನ್ನೊಬ್ಬ ಕಲಾವಿದೆ ಇದ್ದಾರೆ. ಅವರಿಗೂ ಚಪಾತಿ ಊಟದ ಬಾಕ್ಸ್ , ರೇಷನ್ ಕಿಟ್, ಕೊಟ್ಟಂಗ ಮಾಡಿ ಫೋಟೋ ತೆಗೆಸಿಕೊಂಡು ವಾಪಸ್ ನಿಮಗೇ ತಂದು ಕೊಡುವುದಾಗಿ” ಹೇಳಿ ಇಸ್ಗೊಂಡು ಹೋದ.
ಹಾಗೆ ಹೋದವರು ಸಂಜೆ, ರಾತ್ರಿಯಾದರೂ ಮರಳಿ ಬರಲೇ ಇಲ್ಲ. ಊಟದ ಬಾಕ್ಸ್, ರೇಷನ್ ಕಿಟ್ ತರಲಿಲ್ಲ. ಕಲಾವಿದೆಯ ಉಪವಾಸಕ್ಕೆ ಅಂತ್ಯವಿಲ್ಲದಂತಾಯಿತು. ಹಿರಿಯ ರಂಗಚೇತನ ಚಾಂದಬೇಗಮ್ ತನ್ನೊಳಗಿನ ಎಲ್ಲ ಚೈತನ್ಯಗಳನ್ನು ಅಕ್ಷರಶಃ ಕಳಕೊಂಡಳು. ಸಂತ್ರಸ್ತ ಕಲಾವಿದೆಗೆ ನಕಲಿ ನೆರವಿನ ಪ್ರಕ್ರಿಯೆಯ ಮೊಬೈಲ್ ವಿಡಿಯೋ ಮಾಡಿಕೊಂಡಿದ್ದ ಸಂಘದ ಸದಸ್ಯನೊಬ್ಬನಿಂದ ವಿಡಿಯೋ ವೈರಲ್ಲಾಗಿ ಮರುದಿನ ಪತ್ರಿಕೆ, ಟೀವಿಗಳಲ್ಲಿ ಸಂತ್ರಸ್ತ ಹಿರಿಯ ಕಲಾವಿದೆಗೆ ಆಗಿರುವ ಅವಮಾನದ ಸಚಿತ್ರ ಕಥೆ, ಮೋಸದ ಜಾಲ ಬಯಲಾಯಿತು.
ರಾಜ್ಯಾದ್ಯಂತ ದೊಡ್ಡ ಸುದ್ದಿಯಾಯಿತು. ಹಿರಿಯ ಕಲಾವಿದೆಗೆ ಆಗಿರುವ ಅನ್ಯಾಯ, ಅವಮಾನ ಖಂಡಿಸಿ ಹೇಳಿಕೆಗಳ ಮೇಲೆ ಹೇಳಿಕೆಗಳು ಕೇಳಿಬಂದವು. ಅದೆಲ್ಲವನ್ನು ಮೂಕವಿಸ್ಮಿತಳಾಗಿ ಗಮನಿಸಿದ ಕಿರುತೆರೆಯ ಹೆಸರಾಂತ ತಾರೆ ಮಹಾನಂದಾ ಒಂದುಲಕ್ಷ ಹಣದೊಂದಿಗೆ ಬಗೆ, ಬಗೆಯ ಊಟ, ತಿಂಡಿ, ತಿನಿಸು ಸಿದ್ದಪಡಿಸಿಕೊಂಡು, ಬೀಪಿ, ಶುಗರ್ ಕಾಯಿಲೆಗೆ ಸಂಬಂಧಿಸಿದ ಹತ್ತಾರು ಬಗೆಯ ಗುಳಿಗೆ ಪೊಟ್ಟಣಗಳ ಕಟ್ಟುಗಳು, ಒಂದು ಬಾಕ್ಸ್ ಕೊರೊನಾ ರಕ್ಷಾಕವಚದ ಮಾಸ್ಕ್ ಸಮೇತ ಕಾರಲ್ಲಿ ತನ್ನ ಗೆಳತಿಯರೊಂದಿಗೆ ಸಂತ್ರಸ್ತ ಕಲಾವಿದೆ ಚಾಂದಬೇಗಮ್ಮಳನ್ನು ಹುಡುಕಿಕೊಂಡು ಗಣೇಶ ಪೇಟೆಯ ಅವರ ಮನೆ ಬಾಗಿಲಿಗೆ ಬಂದರು. ತನ್ನ ಜೀವಮಾನದಲ್ಲಿ ರಂಗಭೂಮಿಯ ಹಿರಿಯ ಕಲಾವಿದೆಗೆ ನೆರವಾಗುವ ಅವಕಾಶ, ಸಂತಸ, ಸಂಭ್ರಮ ಮಹಾನಂದಾಗೆ.
ಮಹಾನಂದಾ ಮತ್ತು ಆಕೆಯ ಗೆಳತಿಯರು ನಾಕೈದು ಬಾರಿ ಜೋರಾಗೇ ಬಾಗಿಲು ಬಡಿದರೂ ಬಾಗಿಲು ತೆಗೆಯಲಿಲ್ಲ. ಅನುಮಾನಪಟ್ಟು ಅಕ್ಕಪಕ್ಕದ ಜನರನ್ನು ಕೇಳಿದರೂ ಅವರು ಸರಿಯಾದ ಮಾಹಿತಿ ಹೇಳಲಿಲ್ಲ. ಅಷ್ಟೊತ್ತಿಗೆ ಟೀವಿ ಮಾಧ್ಯಮದವರು ಬಂದರು. ಆಗ ನೋಡಿ ಜನ ಒಬ್ಬೊಬ್ಬರೇ ಕ್ಯಾಮರಾ ಮುಂದೆ ಬರಲು ನಾಮುಂದು ತಾಮುಂದು ಎಂದು ಸೀರೆಯ ಸೆರಗು, ಅಂಗಿಯ ಕಾಲರು, ತಲೆಯ ಕ್ರಾಪು ಸರಿಪಡಿಸಿಕೊಳ್ಳತೊಡಗಿದರು.
ಹಿರಿಯ ಕಲಾವಿದೆಗಾದ ಅವಮಾನ, ಸಂಕಟ ಕುರಿತು ಸ್ಟೋರಿ ಮಾಡಲು ಕಲಾವಿದೆ ಚಾಂದಬೇಗಮ್ಮಳ ಸಂದರ್ಶನಕ್ಕಾಗಿ ಪತ್ರಕರ್ತರು ತಮ್ಮ ನೋಟ್ ಪ್ಯಾಡುಗಳ ಮೇಲೆ ಕಣ್ಣಾಡಿಸುತ್ತಲೇ ಬೇಗಮ್ಮಳ ಮನೆಯ ಬಾಗಿಲು ಬಡಿಯ ತೊಡಗಿದರು. ಬಾಗಿಲು ತೆಗೆಯಲಿಲ್ಲ. ಮತ್ತೆ ಮತ್ತೆ ಬಡಿದು, ಬಡಿದು ಅನುಮಾನಗೊಂಡು ಪೋಲಿಸರಿಗೆ ತಿಳಿಸಿದರು. ಎರಡು ಜೀಪುಗಳಲ್ಲಿ ಪೋಲಿಸರು ಧಾವಿಸಿ ಬಂದರು. ಪೋಲಿಸರು ಜೋರಾಗಿ ಬೂಟುಗಾಲುಗಳಿಂದ ಒದ್ದೂ ಒದ್ದು ಬಾಗಿಲು ಮುರಿದರು. ಬಾಗಿಲು ತೆರೆದಾಗ ಆಘಾತ ಕಾದಿತ್ತು.
ಕಲಾವಿದೆ ಚಾಂದಬೇಗಮ್ ಹೆಣವಾಗಿ ಮಲಗಿದ್ದಳು. ಚಾಂದಬೇಗಂ… ಚಾಂದಬೇಗಂ… ತೀರಿಹೋದವರ ಹೆಸರು ಕೇಳಿಯೇ ಪೋಲಿಸರು ಬೆಚ್ಚಿಬಿದ್ದರು. ಅದೇನೋ ತಬ್ಲಿಘೀ ಭೂತ ಕೊಲ್ಮಿಂಚಿನಂತೆ ಕೆಂಪು ದೀವಟಿಗೆ ಬೀಸಿ ಹೋದಂಗಾಯ್ತು. ಹೆಣ ಮುಟ್ಟಲು ಅಲ್ಲ, ನೋಡಲೂ ಹೆದರಿದರು. ಪತ್ರಕರ್ತರಿಗೆ ಬಡಿದುಕೊಂಡಿದ್ದ ಕೊರೊನಾ ಭೂತ ಪೋಲಿಸರಿಗೂ ಬಡಿದುಕೊಂಡಿತ್ತು. ಬಾಜೂ ಮನೆಯವರು, ಓಣಿ ಮಂದಿಯೆಲ್ಲ ” ಚಾಂದಬೇಗಮ್ಮಳ ಹೆಸರಿನಲ್ಲೇ ಕಾಯಿಲೆಯ ಮೂಲವಿದೆ “ಎಂಬಂತಹ ಕಿಡಿಗೇಡಿ ಹೇಳಿಕೆಗಳು ಕೊಳಕು ಕಿಲುಬಾಟಕ್ಕೆ ಹಾದಿ ಮಾಡಿಕೊಟ್ಟವು. ಟೀವಿಗಳಿಗೆ ಇದಕ್ಕಿಂತ ಸೆನ್ಷೇಶನಲ್ ಸುದ್ದಿ ಬೇಕೇ? ತಾಬಡ ತೋಬಡ ಎಂಬಂತೆ ಘಟನಾ ಸ್ಥಳದಿಂದಲೇ ನೇರಸುದ್ದಿಯ ಪ್ರಸಾರ ಸುರುವಿಟ್ಟುಕೊಂಡವು.
ಹಿಡಿಗಾತ್ರದ ದಪ್ಪ ದಪ್ಪಕ್ಷರಗಳಲ್ಲಿ ” ಹಿರಿಯ ಕಲಾವಿದೆ ಕೊರೊನಾಕ್ಕೆ ಬಲಿ ” ಎಂಬ ಬರಸಿಡಿಲಿನ ಶಂಕಿತ ಸುದ್ದಿ ನಿರೂಪಕರ ಗಂಟಲಲ್ಲಿ ಅರಚಾಟ ಕಿರುಚಾಟಗಳಾಗಿ ಕೇಳಿ ಬರತೊಡಗಿದವು. ಟ್ರಾವಲ್ ಹಿಸ್ಟರಿ, ಪ್ರೈಮರಿ ಕಾಂಟ್ಯಾಕ್ಟ್ ಹಿಸ್ಟರಿ ಮೊದಲಾದ ಪದಪುಂಜಗಳು ಮಣಭಾರದ ಪ್ರಶ್ನೆಗಳನ್ನು ಹೊತ್ತು ಟೀವಿ ಪರದೆ ತುಂಬಾ ” ಬಿಗ್ ಬ್ರೇಕಿಂಗ್ ನ್ಯೂಸ್ ” ಎಂದು ಬಿತ್ತರಗೊಳ್ಳುವುದು ಮಾತ್ರವಲ್ಲ ಚಂಡಮಾರುತವಾಗಿ ಬೀಸುತ್ತಿತ್ತು. ಬೇಗಮ್ಮಳ ಹಳೆಯ ಬೀಪಿ, ಶುಗರ್, ಹಸಿವಿನ ಸಾವೆಲ್ಲ ಕರಾಳ ಕೊರೊನಾ ವೈರಸ್ಸಾಗಿ ದಿಢೀರಂತ ರೂಪಾಂತರಗೊಂಡಿತು. ಗಣೇಶ್ ಪೇಟೆಯ ಗಲ್ಲಿ ಗಲ್ಲಿಗಳಲ್ಲಿ ಗುಸು ಗುಸು ಸುದ್ದಿಯ ಬಿಸಿ, ಟಿಆರ್ಪಿ ಏರಿದಂತೆ ಒಂದೇಸಮನೆ ಏರತೊಡಗಿತು.
ಮಲ್ಲಿಕಾರ್ಜುನ ಕಡಕೋಳ
ಮೊ: 9341010712
1784/20, ಮಹಡಿ – 1, ಮೇನ್ – 7
ಕ್ರಾಸ್ – 14, ಸಿದ್ಧವೀರಪ್ಪ ಬಡಾವಣೆ
ದಾವಣಗೆರೆ – 577004