ಕೇಂದ್ರ ಸರಕಾರ ತಾನೇ ಸಾಲ ಮಾಡಿ ಏಕೆ ಕೊಡಬಾರದು?

– ಜಿಎಸ್‌ಟಿ ಪರಿಹಾರ ನೀಡಿಕೆ ಬಗ್ಗೆ ಕೇಂದ್ರದ ವಿಲಕ್ಷಣ ನಿಲುವು

 

ಪ್ರೊ. ಪ್ರಭಾತ್ ಪಟ್ನಾಯಕ್

ಪರೋಕ್ಷ ತೆರಿಗೆಗಳನ್ನು ಸಂವಿಧಾನ ದತ್ತವಾಗಿ ವಿಧಿಸುವ ಅಧಿಕಾರವನ್ನು ಹೊಂದಿದ್ದ ರಾಜ್ಯಗಳು, ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ ತಮ್ಮ ತೆರಿಗೆ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ವಹಿಸಿಕೊಟ್ಟ ಸನ್ನಿವೇಶದಲ್ಲಿ, ಜಿಎಸ್‌ಟಿ ಜಾರಿಯಿಂದಾಗಿ ರಾಜ್ಯಗಳಿಗೆ ತಮ್ಮ ಆದಾಯದಲ್ಲಿ ಕೊರತೆ ಉಂಟಾದಲ್ಲಿ, ಅಂತಹ ಕೊರತೆಯನ್ನು ಐದು ವರ್ಷಗಳ ಕಾಲ ಪರಿಹಾರವಾಗಿ ತುಂಬಿಕೊಡುವ ಭರವಸೆಯನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಿತ್ತು. ಈ ಕೊರತೆಯ ಪ್ರಮಾಣವನ್ನು, ರಾಜ್ಯಗಳ ಆದಾಯವು ಸರಾಸರಿ ಶೇ.೧೪ ಬೆಳವಣಿಗೆ ದರ ಎಂದಿಟ್ಟುಕೊಂಡರೆ ಎಷ್ಟಾಗಬಹುದು ಎಂದು ಅಂದಾಜಿಸಿ ಅದಕ್ಕನುಗುಣವಾಗಿ ಪರಿಹಾರವಾಗಿ ರಾಜ್ಯಗಳಿಗೆ ತುಂಬಿಕೊಡುವ ಏರ್ಪಾಟನ್ನು ೨೦೧೭ರಲ್ಲಿ ಒಂದು ಕಾಯ್ದೆಯ ಮೂಲಕ ಮಾಡಲಾಗಿತ್ತು. ವಾಸ್ತವವಾಗಿ, ಹಲವು ರಾಜ್ಯಗಳು ಜಿಎಸ್‌ಟಿಯತ್ತ ಹೊರಳಲು ಈ ಭರವಸೆಯೇ ಒಂದು ದೊಡ್ಡ ಪ್ರೇರಣೆಯಾಗಿ ಕೆಲಸ ಮಾಡಿತ್ತು.

ಆದರೆ ಆದಾಯ ಸಂಗ್ರಹಣೆಯಲ್ಲಿ ಜಿಎಸ್‌ಟಿ ಪದ್ಧತಿಯು ಹೀನಾಯವಾಗಿ ಸೋತಿದೆ. ಈ ಸೋಲಿಗೆ ಭಾಗಶಃವಾಗಿ ಜಿಎಸ್‌ಟಿಯಲ್ಲಿಯೇ ಅಂತರ್ಗತವಾಗಿರುವ ಕೆಲವು ದೌರ್ಬಲ್ಯಗಳು ಕಾರಣವಾಗಿವೆ ಮತ್ತು ಜಿಡಿಪಿಯ ಬೆಳವಣಿಗೆಯು ಕುಂಠಿತವಾಗಿರುವುದೂ ಸಹ ಭಾಗಶಃವಾಗಿ ಕಾರಣವಾಗಿದೆ. ಅದೇ ರೀತಿಯಲ್ಲಿ, ರಾಜ್ಯಗಳಿಗೆ ಪರಿಹಾರ ಒದಗಿಸಬೇಕಿರುವ ಜಿಎಸ್‌ಟಿ ಸೆಸ್ ಸಂಗ್ರಹಣೆಯೂ ವಿಪರೀತ ಎನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿದೆ. ರಾಜ್ಯಗಳ ಆದಾಯದ ಬೆಳವಣಿಗೆ ಜಡಗೊಂಡಿರುವ ಕಾರಣದಿಂದ ಕೇಂದ್ರವು ಒದಗಿಸಬೇಕಿರುವ ಪರಿಹಾರದ ಮೊತ್ತವು ಅಗಾಧವಾಗಿದೆ ಮತ್ತು ಅದರ ಅವಶ್ಯಕತೆಯೂ ಬಹಳ ತುರ್ತಾಗಿರುವ ಸಂದರ್ಭದಲ್ಲಿ, ಆ ನಿಮಿತ್ತ ಸಂಗ್ರಹಿಸುತ್ತಿದ್ದ ಜಿಎಸ್‌ಟಿ ಸೆಸ್ ಆದಾಯದ ಬೆಳವಣಿಗೆಯೂ ರಾಜ್ಯಗಳ ಆದಾಯದ ರೀತಿಯಲ್ಲಿಯೇ ಜಡಗಟ್ಟಿ ನಿಂತಿದೆ. ಆದ್ದರಿಂದ, ಪರಿಹಾರ ಕೊಡಲು ಕೊರತೆ ಬೀಳುವ ಹಣವನ್ನು ಹೊಂದಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಇರುವ ತಾರ್ಕಿಕ ಮಾರ್ಗವೆಂದರೆ ಒಂದೋ ಸಾಲ ಎತ್ತುವುದು ಇಲ್ಲವೇ ಇತರ ಮೂಲಗಳಿಂದ ತೆರಿಗೆಯನ್ನು ಸಂಗ್ರಹಿಸುವುದು. ನಂತರ, ಈ ರೀತಿಯಲ್ಲಿ ಒದಗಿಸಿಕೊಂಡ ಹಣದಿಂದ ರಾಜ್ಯ ಸರ್ಕಾರಗಳಿಗೆ ಕೊಡಬೇಕಿರುವ ಪರಿಹಾರದ ಬಾಕಿಯನ್ನು ಚುಕ್ತಾ ಮಾಡುವುದು.

ಜಿ ಎಸ್ ಟಿ: ಸಂಭ್ರಮದ ಉದ್ಘಾಟನೆ                                  ಒಂದು ವರ್ಷದ ನಂತರ –   ಚಿತ್ರ ಕೃಪೆ: ನ್ಯೂಸ್ ಲಾಂಡ್ರಿ

ಆದರೆ, ಕೇಂದ್ರ ಸರ್ಕಾರವು ಪರಿಹಾರ ಒದಗಿಸುವುದಾಗಿ ರಾಜ್ಯ ಸರ್ಕಾರಗಳಿಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಬದಲು, ಮಾತು ಕದಿಯುತ್ತಿದೆ. ಕೊರತೆಯ ಈ ಸಮಸ್ಯೆಯು ೨೦೧೯ರ ಆಗಸ್ಟ್‌ನಲ್ಲೇ ಆರಂಭವಾಗಿತ್ತು. ಕೊರೊನಾ ಸಾಂಕ್ರಾಮಿಕ ಅಪ್ಪಳಿಸಿದ್ದರಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಸಮಸ್ಯೆ ಉಲ್ಬಣಗೊಂಡಿದೆ. ಈ ಸಾಂಕ್ರಾಮಿಕವು ಜಿಎಸ್‌ಟಿ ಆದಾಯವು ತೀವ್ರವಾಗಿ ಇಳಿಯುವಂತೆ ಮಾಡಿದೆ. ಅದೇ ಸಮಯದಲ್ಲಿ ರಾಜ್ಯ ಸರ್ಕಾರಗಳ ಅಗತ್ಯ ವೆಚ್ಚಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ೨೦೨೦-೨೧ರ ಸಾಲಿನಲ್ಲಿ ರಾಜ್ಯ ಸರ್ಕಾರಗಳಿಗೆ ಪರಿಹಾರವಾಗಿ ಕೇಂದ್ರವು ಕೊಡಬೇಕಾಗುವ ಮೊತ್ತವನ್ನು ೩ ಲಕ್ಷ ಕೋಟಿ ರೂಪಾಯಿಗಳು ಎಂದು ಅಂದಾಜು ಮಾಡಲಾಗಿದೆ. ಈ ಉದ್ದೇಶಕ್ಕಾಗಿ ಸಂಗ್ರಹಿಸಿರುವ ಕೇವಲ ೬೫ ಸಾವಿರ ಕೋಟಿ ರೂ.ಗಳನ್ನು ಕೇಂದ್ರವು ರಾಜ್ಯಗಳಿಗೆ ಹಂಚಬಹುದಷ್ಟೇ. ಉಳಿದ ೨.೩೫ ಲಕ್ಷ ಕೋಟಿ ರೂ.ಗಳ ಪರಿಹಾರವನ್ನು ಕೊಡಲು ಕೇಂದ್ರವು ನಿರಾಕರಿಸುತ್ತಿದೆ. ಈ ಸಂಬಂಧವಾಗಿ ಆಗಸ್ಟ್ ೨೭ರಂದು ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಉಳಿದ ೨.೩೫ ಲಕ್ಷ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಗಳೇ ಸಾಲ ಎತ್ತುವ ಮೂಲಕ ಒದಗಿಸಿಕೊಳ್ಳಬೇಕೆಂದು ಕೇಂದ್ರವು ಸೂಚಿಸಿದೆ. ಈ ಸಂಬಂಧವಾಗಿ ಎತ್ತುವ ಸಾಲಗಳ ರೀತಿಯ ಬಗ್ಗೆ ರಾಜ್ಯ ಸರ್ಕಾರಗಳಿಗೆ ಎರಡು ಆಯ್ಕೆಗಳನ್ನು ನೀಡಿದೆ.

ಕೇಂದ್ರವು ಪರಿಹಾರವಾಗಿ ಕೊಡಬೇಕಿದ್ದ ಹಣದ ಬದಲು, ತಾವೇ ಸಾಲ ಮಾಡಿಕೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಿರುವ ಕೇಂದ್ರದ ಈ ನಿಲುವು, ಎರಡು ಸ್ಪಷ್ಟವಾದ ಕಾರಣಗಳಿಂದಾಗಿ, ಸಂಪೂರ್ಣವಾಗಿ ವಿಲಕ್ಷಣವಾಗಿದೆ: ಮೊದಲನೆಯದಾಗಿ, ಈ ನಿಲುವು, ಕೇಂದ್ರ ಸರ್ಕಾರವೇ ಕೊಟ್ಟಿದ್ದ ವಾಗ್ದಾನದ ಉಲ್ಲಂಘನೆಯಾಗುತ್ತದೆ ಮಾತ್ರವಲ್ಲ, ಪಾರ್ಲಿಮೆಂಟ್ ಅಂಗೀಕರಿಸಿದ ಕಾಯ್ದೆಯೊಂದರ ಉಲ್ಲಂಘನೆಯೂ ಆಗುತ್ತದೆ. ಸರ್ಕಾರ ಕೊಟ್ಟಿದ್ದ ಈ ವಾಗ್ದಾನವನ್ನು ಆಧರಿಸಿಯೇ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಬಿಟ್ಟು ಕೊಟ್ಟು, ಜಿಎಸ್‌ಟಿ ಜಾರಿಗೆ ತರಲು ಅತ್ಯವಶ್ಯವಾಗಿದ್ದ ಸಾಂವಿಧಾನಿಕ ತಿದ್ದುಪಡಿಗೆ ರಾಜ್ಯಗಳು ಒಪ್ಪಿಕೊಂಡಿದ್ದವು. ಆದರೆ, ಕೇಂದ್ರ ಸರಕಾರದ ಈ ಕ್ರಮವು ಈ ಸಾಂವಿಧಾನಿಕ ಏರ್ಪಾಟನ್ನೇ ಹಾಳುಗೆಡವುತ್ತದೆ. ಎರಡನೆಯದಾಗಿ, ಕೇಂದ್ರದ ಈ ನಿಲುವಿನಲ್ಲಿ ಯಾವುದೇ ಆರ್ಥಿಕ ತರ್ಕವೂ ಇಲ್ಲ.

ಕೇಂದ್ರವು ಪರಿಹಾರವಾಗಿ ಕೊಡಬೇಕಿದ್ದ ಹಣದ ಬದಲು, ತಾವೇ ಸಾಲ ಮಾಡಿಕೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಿರುವ ಕೇಂದ್ರದ ನಿಲುವು ವಿಲಕ್ಷಣವಾಗಿದೆ. ೨.೩೫ ಲಕ್ಷ ಕೋಟಿ ರೂ.ಗಳನ್ನು ಸುರಕ್ಷಿತವಾಗಿ ಸಾಲ ಮಾಡಬಹುದು ಮತ್ತು ಅದನ್ನು ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಬಳಸಬಹುದು ಎಂಬ ಅಂಶವನ್ನು ಸೂಚನೆಯ ಮೂಲಕ ಕೇಂದ್ರವೇ ಒಪ್ಪಿಕೊಂಡಂತೆ ಆಗಿರುವಾಗ, ತಾನೇ ಸಾಲ ಮಾಡಿ ಹಣವನ್ನು ಜಿಎಸ್‌ಟಿ ಪರಿಹಾರವಾಗಿ ರಾಜ್ಯಗಳಿಗೆ ಏಕೆ ಹಸ್ತಾಂತರಿಸುವುದಿಲ್ಲ? ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕೊಡಬೇಕಿರುವ ಜಿಎಸ್‌ಟಿ ಪರಿಹಾರದ ಬಾಧ್ಯತೆಯನ್ನು ಪೂರೈಸಲು ಆರ್‌ಬಿಐನಿಂದ ಸಾಲ ಪಡೆಯುವ ಕ್ರಮವು ಒಂದೇ ಕಲ್ಲಿನಿಂದ ಅನೇಕ ಹಕ್ಕಿಗಳನ್ನು ಕೊಲ್ಲುತ್ತದೆ. ಆದರೆ, ಅರ್ಥಶಾಸ್ತ್ರದ ಬಗ್ಗೆ ಸೀಮಿತ ತಿಳಿವಳಿಕೆ ಹೊಂದಿರುವ ಮತ್ತು ರಾಜ್ಯಗಳ ಬಗ್ಗೆ ಸಹಾನುಭೂತಿ ಇನ್ನೂ ಹೆಚ್ಚು ಸೀಮಿತವಾಗಿರುವ ಮೋದಿ ಸರಕಾರವು ಅಂಶಗಳನ್ನು ಸ್ಪಷ್ಟವಾಗಿ ನೋಡಲಾರದು.

ಕೇಂದ್ರ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದರೆ ಅರ್ಥವ್ಯವಸ್ಥೆಗೆ ಯಾವ ರೀತಿಯ ಹಾನಿಯಾಗುತ್ತದೆ ಎಂದು ಭಾವಿಸುತ್ತದೆಯೋ ಅದೇ ರೀತಿಯ ಹಾನಿಯು ರಾಜ್ಯಗಳು ಸಾಲ ಮಾಡಿದಾಗ ಅವುಗಳನ್ನು ಅಷ್ಟೇ ಸಮಾನಾಗಿ ತಟ್ಟುತ್ತದೆ. ವಾಸ್ತವವಾಗಿ, ಸಾಲ ಎತ್ತುವಂತೆ ರಾಜ್ಯಗಳಿಗೆ ಹೇಳುವ ಮೂಲಕ ಕೇಂದ್ರವು ೨.೩೫ ಲಕ್ಷ ಕೋಟಿ ರೂ.ಗಳನ್ನು ಸುರಕ್ಷಿತವಾಗಿ ಸಾಲ ಮಾಡಬಹುದು ಮತ್ತು ಅದನ್ನು ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಬಳಸಬಹುದು ಎಂಬ ಅಂಶವನ್ನು ಒಪ್ಪಿಕೊಂಡಿದೆ. ಆದರೂ, ಕೇಂದ್ರವೇ ಸಾಲ ಮಾಡಿ ಆ ಹಣವನ್ನು ಜಿಎಸ್‌ಟಿ ಪರಿಹಾರವಾಗಿ ರಾಜ್ಯಗಳಿಗೆ ಏಕೆ ಹಸ್ತಾಂತರಿಸುವುದಿಲ್ಲ?

ಕೇಂದ್ರವೇ ಸಾಲ ಮಾಡಿದ ಪಕ್ಷದಲ್ಲಿ, ಎರಡು ಸ್ಪಷ್ಟ ಪ್ರಯೋಜನಗಳಿವೆ: ಮೊದಲನೆಯದಾಗಿ ಮತ್ತು ಬಹಳ ಮುಖ್ಯವಾಗಿ, ಸಾಂವಿಧಾನಿಕ ಶಿಷ್ಟಾಚಾರಗಳನ್ನು ಪಾಲಿಸಿದಂತಾಗುತ್ತದೆ. ಹಾಗಾಗಿ, ವಚನ ಭ್ರಷ್ಟತೆಯ ಪ್ರಶ್ನೆಯೇ ಉದ್ಭವುಸುವುದಿಲ್ಲ. ಎರಡನೆಯದಾಗಿ, ಕೇಂದ್ರ ಸರ್ಕಾರವು ಹೊಂದಿರುವ ವ್ಯಾಪಕ ತೆರಿಗೆ ಅಧಿಕಾರದ ಜೊತೆಗೆ, ಅದು ಮಾಡುವ ಸಾಲವು, ಸಾಲದಾತರಿಗೆ ಭರವಸೆಯ ಶ್ರೀರಕ್ಷೆಯನ್ನು ಒದಗಿಸುತ್ತದೆ. ಸಾಲ ಮರುಪಾವತಿಸಲು ತಪ್ಪಬಹುದು ಎಂಬ ಭಯ ಉದ್ಭವಿಸುವುದಿಲ್ಲ. ಹಾಗಾಗಿ, ಕೇಂದ್ರವು ನಿರ್ಭೀತಿಯಿಂದ ಸಾಲ ಮಾಡಬಹುದು, ರಾಜ್ಯಗಳಂತಲ್ಲದೆ.

ಆದರೂ, ಕೇಂದ್ರವು ಎರಡು ಸಲಹೆಗಳನ್ನು ರಾಜ್ಯಗಳ ಮುಂದಿಟ್ಟಿದೆ. ಇವೆರಡೂ ಆಧಾರ ರಹಿತವಾದ ಸಲಹೆಗಳೇ. ಮೊದಲನೆಯ ಸಲಹೆಯ ಪ್ರಕಾರವಾಗಿ, ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಸಾಂಕ್ರಾಮಿಕದಿಂದಾಗಿ ಜಿಎಸ್‌ಟಿ ಆದಾಯವು ಬೃಹತ್ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ದೇವರ ಆಟ. ಆದ್ದರಿಂದ, ಈ ಪರಿಸ್ಥಿತಿಗೆ ಕೇಂದ್ರವನ್ನು ಹೊಣೆ ಮಾಡಲಾಗದು. ಎರಡು ಪಾರ್ಟಿಗಳು ಸೇರಿ ಒಂದು ಖಾಸಗಿ ಒಪ್ಪಂದವನ್ನು ಮಾಡಿಕೊಂಡಿದ್ದರೂ ಸಹ, ಈ ರೀತಿಯ ಕೈಮೀರಿದ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ, ಇಬ್ಬರೂ (ಎರಡೂ ಪಾರ್ಟಿಗಳು) ಒಪ್ಪಂದದ ನಿಬಂಧಗಳಿಂದ ಮುಕ್ತರಾಗುತ್ತಾರೆ. ಪಾರ್ಟಿಗಳು/ವ್ಯಕ್ತಿಗಳು ತಮ್ಮ ತಮ್ಮ ಲಾಭವನ್ನು ಕಾಪಾಡಿಕೊಳ್ಳುವ ಇಂತಹ ಒಂದು ಕ್ರಮವು ಬಂಡವಾಳಶಾಹಿ ಪದ್ಧತಿಯ ಒಂದು ವಿಶೇಷ. ಆದರೆ, ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತಗೊಂಡ ಸರ್ಕಾರದ ಎರಡು ಸ್ತರಗಳ (ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು) ನಡುವಿನ ಒಪ್ಪಂದಗಳಿಗೆ ಕೈಮೀರಿದ ಘಟನೆಗಳ ಸಂದರ್ಭದಲ್ಲಿ ಬಾಧ್ಯತೆಯಿಂದ ಮುಕ್ತವಾಗುವ ನಿಬಂಧನೆಗಳನ್ನು ಅನ್ವಯಿಸಲಾಗದು. ಹಾಗಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇವರ ಆಟದ ಬಗ್ಗೆ ಮೊರೆಯಿಡುವ ಕ್ರಮವು ಒಂದು ಒಕ್ಕೂಟ ವ್ಯವಸ್ಥೆಯಲ್ಲಿ, ಎರಡು ಸ್ತರಗಳ ಚುನಾಯಿತ ಸರ್ಕಾರಗಳ ನಡುವಿನ ಸಂಬಂಧವನ್ನು ಎರಡು ಪಾರ್ಟಿಗಳ/ವ್ಯಕ್ತಿಗಳ ನಡುವಿನ ಒಂದು ಖಾಸಗಿ ಒಪ್ಪಂದದ ಮಟ್ಟಕ್ಕೆ ಇಳಿಸುತ್ತದೆ. ಇದು ಕೇವಲ ವಿಲಕ್ಷಣವಷ್ಟೇ ಅಲ್ಲ, “ಸಹಕಾರಿ ಒಕ್ಕೂಟ ವ್ಯವಸ್ಥೆ”ಯ ಬಗ್ಗೆ ತುತ್ತೂರಿ ಊದುವ ಸರ್ಕಾರದ ಒಂದು ಪರಮೋಚ್ಚ ವ್ಯಂಗ್ಯದ ಕೃತ್ಯವೂ ಆಗುತ್ತದೆ.

ಕೇಂದ್ರ ಸರ್ಕಾರದ ಎರಡನೆಯ ಸಲಹೆಯ ಪ್ರಕಾರ, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡುವ ಸಲುವಾಗಿ ಕೇಂದ್ರವು ಸಾಲ ಮಾಡಿದರೆ, ಸಾಲ ತೀರಿಸುವ ವೆಚ್ಚವು (ಬಡ್ಡಿ) ಗಣನೀಯವಾಗಿ ಏರಿಕೆಯಾಗುತ್ತದೆ. ಅದರಿಂದ ಇಡೀ ಅರ್ಥವ್ಯವಸ್ಥೆಗೆ ಹಾನಿ ತಟ್ಟುತ್ತದೆ. ಮತ್ತೊಂದೆಡೆ, ರಾಜ್ಯ ಸರ್ಕಾರಗಳು ಸಾಲ ಮಾಡಿದರೆ, ಅವುಗಳ ಸಾಲ ತೀರಿಸುವ ವೆಚ್ಚವು (ಬಡ್ಡಿ) ಹೆಚ್ಚುವುದಿಲ್ಲ ಎಂಬ ಈ ವಾದಕ್ಕೆ ಯಾವುದೇ ಆಧಾರವಿಲ್ಲ.

ಅಲ್ಲದೆ, ಕೇಂದ್ರ ಸರ್ಕಾರವು ಏಕೆ ಸಾಲ ಎತ್ತಬಾರದು ಎಂಬುದಕ್ಕೆ ಯಾವುದೇ ಕಾರಣವಿಲ್ಲ. ಕೇಂದ್ರ ಸರ್ಕಾರದ ಎಣಿಕೆಯ ಪ್ರಕಾರವೇ ಈ ಪರಿಸ್ಥಿತಿಯು “ದೇವರ ಆಟ” ಎಂದಾಗಿರುವಾಗ, ಅದೇ ಕಾರಣವು ಸಾಲ ಎತ್ತುವ ಅಗತ್ಯವನ್ನೂ ಪ್ರತಿಪಾದಿಸುತ್ತದೆ. ಹಾಗಾಗಿ, ಆರ್‌ಬಿಐ ಬ್ಯಾಂಕಿಂಗ್ ವ್ಯವಸ್ಥೆಗೆ ಸಾಲ ನೀಡುವ ದರದಲ್ಲಿ (ರೆಪೋ ದರದಲ್ಲಿ), ತನ್ನ ಅವಶ್ಯಕತೆಗೆ ಸಾಕಾಗುವಷ್ಟು ಸಾಲವನ್ನು ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ನ್ನು ಸಲೀಸಾಗಿ ಕೇಳಬಹುದು.

೨೦೨೦-೨೧ರ ಸಾಲಿನಲ್ಲಿ ರಾಜ್ಯ ಸರ್ಕಾರಗಳಿಗೆ ಪರಿಹಾರವಾಗಿ ಕೊಡಲು ಕೊರತೆ ಬಿದ್ದಿರುವ ೨.೩೫ ಲಕ್ಷ ಕೋಟಿ ರೂ.ಗಳನ್ನು ಆರ್‌ಬಿಐನಿಂದ ರೆಪೋ ದರದಲ್ಲಿ ಸಾಲ ಮಾಡಿದರೆ, ಅದರಿಂದ ಮೀಸಲು ಹಣದ ಮೊತ್ತವೂ, ಅಂದರೆ ಅರ್ಥವ್ಯವಸ್ಥೆಯಲ್ಲಿನ ಕರೆನ್ಸಿಯೇನೂ ಅಷ್ಟರ ಮಟ್ಟಿಗೆ ಹೆಚ್ಚುವುದಿಲ್ಲ.

ಒಂದು ಸರಳ ಉದಾಹರಣೆಯ ಮೂಲಕ ಈ ಅಂಶವನ್ನು ಸ್ಪಷ್ಟಪಡಿಸಬಹುದು. ಜನರ ಬಳಿ ನಗದು ರೂಪದ ಹಣವಿಲ್ಲ. ಅವರು ತಮ್ಮ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ ಎಂದು ಭಾವಿಸೋಣ. ಈಗ, ಕೇಂದ್ರವು ರಾಜ್ಯ ಸರ್ಕಾರಗಳಿಗೆ ೧೦೦ ರೂ.ಗಳನ್ನು ಜಿಎಸ್‌ಟಿ ಪರಿಹಾರವಾಗಿ ನೀಡಿದರೆ, ಆ ಎಲ್ಲ ಹಣವೂ ಠೇವಣಿಯಾಗಿ ಬ್ಯಾಂಕುಗಳಿಗೆ ಬರುತ್ತದೆ. ಆಗ, ಬ್ಯಾಂಕುಗಳಿಗೆ ಒದಗಿದ ಈ ಹೆಚ್ಚುವರಿ ಸಂಪನ್ಮೂಲವನ್ನು ಬ್ಯಾಂಕ್‌ಗಳು ಸಾಲ ಕೊಡುತ್ತವೆ. ಕರೆನ್ಸಿ ವ್ಯವಸ್ಥೆಯ ನಿಯಮಗಳ ಪ್ರಕಾರ, ನಗದು ಮೀಸಲು ಅನುಪಾತವು ಶೇ.೧೦ ರಷ್ಟಿದೆ ಎಂದುಕೊಳ್ಳೋಣ. ಆಗ ಬ್ಯಾಂಕ್‌ಗಳು ಪಡೆದ ಠೇವಣಿಗಳ ಮೊತ್ತದ ಶೇ.೧೦ ರಷ್ಟು ನಗದು ಹಣವನ್ನು ರಿಸರ್ವ್ ಬ್ಯಾಂಕ್‌ನಲ್ಲಿ ಇಡಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ೩೦೦ ರೂ ಗಳ “ಯೋಗ್ಯ” ಬೇಡಿಕೆ ಇದೆ ಎಂದು ಭಾವಿಸೋಣ. ೩೦೦ ರೂಪಾಯಿಗಳನ್ನು ಬ್ಯಾಂಕುಗಳು ಸಾಲವಾಗಿ ನೀಡುತ್ತವೆ. ಈ ಕ್ರಮದ ಒಂದು ಅಗತ್ಯವಾಗಿ ಬ್ಯಾಂಕ್‌ಗಳು ೪೦ರೂ.ಗಳನ್ನು ನಗದು ರೂಪದಲ್ಲಿ ಹೊಂದಿರಬೇಕು. ಹಾಗಾಗಿ, ಹೊಸ ಠೇವಣಿಯಾಗಿ ಪಡೆದ ೧೦೦ ರೂ.ಗಳಲ್ಲಿ ಉಳಿದ ೬೦ ರುಪಾಯಿಗಳನ್ನು ಬ್ಯಾಂಕ್‌ಗಳು ಆರ್‌ಬಿಐನಿಂದ ಸರ್ಕಾರಿ ಬಾಂಡ್‌ಗಳನ್ನು (ಭದ್ರತಾ ಪತ್ರಗಳನ್ನು) ಖರೀದಿಸಲು ಬಳಸುತ್ತವೆ. ಹೀಗಾಗಿ, ಆರ್‌ಬಿಐ ನಿಂದ ಕೇಂದ್ರ ಸರ್ಕಾರವು ೧೦೦ ರೂ.ಗಳ ಸಾಲ ಪಡೆದರೂ, ಕರೆನ್ಸಿ ವ್ಯವಸ್ಥೆಯಲ್ಲಿ ಮೀಸಲು ಹಣದ ಪ್ರಮಾಣವು ಕೇವಲ ೪೦ ರೂಪಾಯಿಗಳಷ್ಟು ಮಾತ್ರ ಏರಿಕೆಯಾಗುತ್ತದೆ.

ಕೇಂದ್ರ ಸರ್ಕಾರವು ಆರ್‌ಬಿಐನಿಂದ ರೆಪೋ ದರದಲ್ಲಿ ಸಾಲ ಪಡೆಯುವುದರಲ್ಲಿ ಇನ್ನೂ ಎರಡು ಅನುಕೂಲಗಳಿವೆ. ಮೊದಲನೆಯದಾಗಿ, ಹೆಚ್ಚುವರಿ ಸಂಪನ್ಮೂಲಗಳನ್ನು ಬ್ಯಾಂಕುಗಳ ಕೈಯಲ್ಲಿ ಇಡುವುದರಿಂದ, ಬ್ಯಾಂಕ್‌ಗಳು ತಮ್ಮ ಗಿರಾಕಿಗಳಿಗೆ ಸಾಲ ಕೊಡುವ ಉದ್ದೇಶಕ್ಕಾಗಿ ಆರ್‌ಬಿಐನಿಂದ ಸಾಲ ಪಡೆಯುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಬ್ಯಾಂಕ್ ಸಾಲಗಳು ವಿಸ್ತರಿಸುತ್ತವೆ. ಎರಡನೆಯದಾಗಿ, ಅರ್ಥವ್ಯವಸ್ಥೆಯಲ್ಲಿ ಹಣದ ಲಭ್ಯತೆ ಹೆಚ್ಚುವುದರಿಂದ ಬ್ಯಾಂಕ್‌ಗಳು ವಿಧಿಸುವ ಬಡ್ಡಿಯ ದರ ಇಳಿಯುತ್ತದೆ. ಭಾರತದ ಅರ್ಥವ್ಯವಸ್ಥೆಯು ಸದ್ಯದಲ್ಲಿ ಒಂದು ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಗಿರುವ ಸನ್ನಿವೇಶದಲ್ಲಿ ಈ ಎರಡೂ ಕ್ರಮಗಳು ಅಪೇಕ್ಷಣೀಯ ಬೆಳವಣಿಗೆಳು ಎಂದೇ ಪರಿಗಣಿಸಬೇಕು.

ಅಂದರೆ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕೊಡಬೇಕಿರುವ ಜಿಎಸ್‌ಟಿ ಪರಿಹಾರದ ಬಾಧ್ಯತೆಯನ್ನು ಪೂರೈಸಲು ಆರ್‌ಬಿಐನಿಂದ ಸಾಲ ಪಡೆಯುವ ಕ್ರಮವು ಒಂದೇ ಕಲ್ಲಿನಿಂದ ಅನೇಕ ಹಕ್ಕಿಗಳನ್ನು ಕೊಲ್ಲುತ್ತದೆ. ಮೊದಲನೆಯದಾಗಿ, ಜಿಎಸ್‌ಟಿ ಆದಾಯದ ಕೊರತೆಯನ್ನು ಪರಿಹಾರವಾಗಿ ರಾಜ್ಯಗಳಿಗೆ ತುಂಬಿಕೊಡುವ ಏರ್ಪಾಟನ್ನು ೨೦೧೭ರಲ್ಲಿ ಕಾಯ್ದೆಬದ್ಧಗೊಳಿಸಿದ ಸಾಂವಿಧಾನಿಕ ಬಾಧ್ಯತೆಯನ್ನು ಕೇಂದ್ರ ಸರ್ಕಾರವು ಈಡೇರಿಸಲು ಈ ಕ್ರಮವು ನೆರವಾಗುತ್ತದೆ. ಎರಡನೆಯದಾಗಿ, ಈ ಕ್ರಮವು ರಾಜ್ಯ ಸರ್ಕಾರಗಳನ್ನು ಯಾವುದೇ ಆರ್ಥಿಕ ತೊಂದರೆಗೆ ಈಡು ಮಾಡುವುದಿಲ್ಲ. ಹಾಗಾಗಿ, ಒಕ್ಕೂಟ ವ್ಯವಸ್ಥೆಯು ಬಲಗೊಳ್ಳುತ್ತದೆ. ಮೂರನೆಯದಾಗಿ, ಕಡಿಮೆ ಬಡ್ಡಿ ದರ ಮತ್ತು ಹಣದ ಲಭ್ಯತೆ ಸುಗಮಗೊಳ್ಳಲು ಪ್ರೋತ್ಸಾಹ ಸಿಗುವುದರಿಂದ ಆರ್ಥಿಕ ಹಿಂಜರಿತವನ್ನು ಪರಿಣಾಮಕಾರಿಯಾಗಿ ನಿವಾರಿಸಲು ಸಾಧ್ಯವಾಗುತ್ತದೆ. ಆದರೆ, ಅರ್ಥಶಾಸ್ತ್ರದ ಬಗ್ಗೆ ಸೀಮಿತ ತಿಳಿವಳಿಕೆ ಹೊಂದಿರುವ ಮತ್ತು ರಾಜ್ಯಗಳ ಬಗ್ಗೆ ಸಹಾನುಭೂತಿ ಇನ್ನೂ ಹೆಚ್ಚು ಸೀಮಿತವಾಗಿರುವ ಮೋದಿ ಸರಕಾರವು ಈ ಅಂಶಗಳನ್ನು ಸ್ಪಷ್ಟವಾಗಿ ನೋಡಲಾರದು.

ಜಿಎಸ್‌ಟಿ ಪರಿಹಾರದ ಕೊರತೆಯನ್ನು ಪರಿಹರಿಸಿಕೊಳ್ಳಲು ಸಾಲ ಪಡೆಯಬೇಕೆಂಬ ಕೇಂದ್ರದ ಪ್ರಸ್ತಾವನೆಯನ್ನು, ಬಿಜೆಪಿ ಆಡಳಿತವಿರುವ ಎರಡು ರಾಜ್ಯಗಳನ್ನು ಹೊರತುಪಡಿಸಿ, ಎಲ್ಲ ಪ್ರಮುಖ ರಾಜ್ಯಗಳೂ ತಿರಸ್ಕರಿಸಿವೆ. ಕೇರಳ ಸರ್ಕಾರವಂತೂ ಈ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದೆ. ನಮ್ಮ ರಾಜಕೀಯ ರಚನೆಯ ಒಕ್ಕೂಟ ವ್ಯವಸ್ಥೆಯನ್ನು ಸಂರಕ್ಷಿಸಬೇಕು ಎಂದಾದರೆ, ರಾಜ್ಯಗಳಿಗೆ ಸಲ್ಲಬೇಕಾದ ಹಣವನ್ನು ತೆರುವುದು ಅತ್ಯಗತ್ಯ ಮತ್ತು ಅನಿವಾರ್ಯ ಕ್ರಮವಾಗುತ್ತದೆ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *