ಇರಾನ್ ಮೇಲೆ ದಿಗ್ಬಂಧನಕ್ಕೆ ಯತ್ನ : ಅಮೆರಿಕಕ್ಕೆ ಮುಖಭಂಗ

ನಾಗರಾಜ ನಂಜುಂಡಯ್ಯ

ಇರಾನ್ 2015ರ ಅಣು ಒಪ್ಪಂದವನ್ನು ಉಲ್ಲಂಘಿಸಿದೆ. ಹಾಗಾಗಿ ಮತ್ತೆ ಇರಾನ್ ಮೇಲೆ ದಿಗ್ಬಂದನ ಹೇರಬೇಕು ಎಂದು ಯು.ಎಸ್. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇನ್ನಿಲ್ಲದ ಪ್ರಯತ್ನ ನಡೆಸಿತು. ಆದರೆ ಭದ್ರತಾ ಮಂಡಳಿಯಲ್ಲಿ ಈ ಕುರಿತ ಪ್ರಸ್ತಾವದ ಮೇಲೆ ಮತದಾನ ನಡೆದು ಅದು ಹೀನಾಯವಾಗಿ ಸೋತಿತು. ಈ ಸೋಲಿನಿಂದ ಟ್ರಂಪ್ ಗೆ ಮುಖಭಂಗ ಉಂಟಾಗಿದೆ.  ಭದ್ರತಾ ಮಂಡಳಿಯ ಆ ಸಭೆಯಲ್ಲಿ ಭಾಗವಹಿಸಿದ್ದ 14 ದೇಶಗಳ ಸದಸ್ಯರಲ್ಲಿ, ಫ್ರಾನ್ಸ್ ಜರ್ಮನಿ ಮತ್ತು ಯುಕೆ ಯಂತಹ, ಯುಎಸ್ ನ ಆಪ್ತ ಮಿತ್ರ ರಾಷ್ಟ್ರಗಳು ಸೇರಿದಂತೆ 11 ಸದಸ್ಯರು  ಮತದಾನದಲ್ಲಿ ಭಾಗವಹಿಸಲಿಲ್ಲ.  ರಷ್ಯಾ ಮತ್ತು ಚೀನಾಗಳು  ಯು.ಎಸ್ ನ ಪ್ರಸ್ತಾವವನ್ನು ವಿರೋಧಿಸಿದವು. ಯು.ಎಸ್ ಗೆ ತನ್ನದೇ ಬಿಟ್ಟು ಒಂದು ಮತವೂ ಸಿಗಲಿಲ್ಲ. ಇರಾನ್ ಮೇಲಿನ ದಿಗ್ಬಂದನವನ್ನು ಮತ್ತೆ ಹೇರುವ ಯುಎಸ್ ನ ಯತ್ನಕ್ಕೆ ಸೋಲನ್ನು, ಇರಾನ್ ಇದನ್ನು ರಾಜತಾಂತ್ರಿಕ ಗೆಲುವು ಮತ್ತು ಅಂತರಾಷ್ಟ್ರೀಯ ರಾಜಕೀಯ ದಲ್ಲಿ ಯು.ಎಸ್ ಒಂಟಿತನದ ಸಂಕೇತ ಎಂದು ಹೇಳಿದೆ. ಆದರೆ, ಟ್ರಂಪ್ ಈ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಇರಾನ್ ವಿರುದ್ದ ಗರಿಷ್ಟ ಮಟ್ಟದ ಒತ್ತಡ ಅಭಿಯಾನವನ್ನು ಮುಂದುವರಿಸುವುದಾಗಿ ಟ್ರಂಪ್ ಹೇಳಿದ್ದಾರೆ.

ಇರಾನ್ ವಿರುದ್ದ “ಸ್ನ್ಯಾಪ್-ಬ್ಯಾಕ್” ವಿಧಾನ ವಿಧಿಸಬೇಕೆಂಬುದು ಭದ್ರತಾ ಮಂಡಳಿಗೆ ಅಮೆರಿಕದ ಒತ್ತಾಯವಾಗಿತ್ತು. ಇರಾನ್ ‘ಅಣು ಒಪ್ಪಂದ ಎಂದು ಕರೆಯಲಾಗುವ ‘ಜಂಟಿ ಸಮಗ್ರ ಯೋಜನ ಒಪ್ಪಂದ (ಜೆಸಿಪಿಒಎ)ವನ್ನು ‘ವಿಶ್ವ ಸಂಸ್ಥೆ ಭದ್ರತಾ ಮಂಡಳಿ   ಜುಲೈ 2015 ರಲ್ಲಿ  ಅಂಗೀಕರಿಸಿದ  ನಿರ್ಣಯ ಸಂಖ್ಯೆ 2231 ಮೂಲಕ ಅನುಮೋದಿಸಿತ್ತು. ಈ ನಿರ್ಣಯದ ಪ್ರಕಾರ, ಇರಾನ್ ಗೆ  ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸುತ್ತದೆ. ಇದಕ್ಕೆ ಬದಲಾಗಿ ಶಸ್ತ್ರಾಸ್ತ್ರ ನಿರ್ಭಂಧಗಳು ಸೇರಿದಂತೆ 2006 ರಿಂದ ಇರಾನ್ ಗೆ ವಿಧಿಸಲಾಗಿದ್ದ ಎಲ್ಲಾ ಅಂತರಾಷ್ಟ್ರೀಯ ನಿರ್ಭಂಧಗಳನ್ನು ತೆಗೆದು ಹಾಕಬೇಕಿತ್ತು. ಇದಕ್ಕೆ ಆಕ್ಟೋಬರ್ 18,2020 ರವರೆಗೆ ಗಡುವು ನೀಡಲಾಗಿತ್ತು.

ಇರಾನ್ ವಿರುದ್ಧ ಶಸ್ತ್ರಾಸ್ತ್ರ ನಿರ್ಭಂಧವನ್ನು ಮೊದಲು ಭದ್ರತಾ ಮಂಡಳಿ ನಿರ್ಣಯ 1737 ರ ಮೂಲಕ ವಿಧಿಸಲಾಗಿತ್ತು. ಇದನ್ನು ಡಿಸೆಂಬರ್ 2006 ರಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.  ಮಾರ್ಚ್ 2007 ರಲ್ಲಿ ಭದ್ರತಾ ಮಂಡಳಿ ಪುನಃ ಇರಾನ್ ವಿರುದ್ಧ 1747 ರ ನಿರ್ಣಯವನ್ನು ಹೇರಿತು. ಇದನ್ನು ಜೂನ್ 2010 ರಲ್ಲಿ ಕೈಗೊಂಡ ನಿರ್ಣಯ 1929 ರ ಮೂಲಕ ಮತ್ತಷ್ಟು ಗಟ್ಟಿಗೊಳಿಸಲಾಯಿತು. ಈ ನಿರ್ಭಂಧಗಳು ಶಸ್ತ್ರಾಸ್ತ್ರ ಆಮದು ಮತ್ತು ಎಲ್ಲಾ ರೀತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿ ಸೇರಿದಂತೆ ಶಸ್ತ್ರಾಸ್ತ್ರ ಗಳ ರಪ್ತಿಗೂ ಅನ್ವಯಿಸುತ್ತಿದ್ದವು.  ಜೆಸಿಪಿಒಎ ಒಪ್ಪಂದದ ಪ್ರಕಾರ, 5 ರಿಂದ 8 ವರ್ಷಗಳಲ್ಲಿ ಈ ನಿರ್ಭಂಧಗಳನ್ನು ಕ್ರಮೇಣ ತೆಗೆದು ಹಾಕಬೇಕಾಗಿತ್ತು.

ಇರಾನ್ ಒಪ್ಪಂದವನ್ನು ಉಲ್ಲಂಘಿಸುತ್ತಿದೆ. ಹಾಗಾಗಿ ಇರಾನ್ ಮೇಲೆ ಈ ಹಿಂದೆ ಸ್ಥಗಿತಗೊಂಡಿದ್ದ ವಿಶ್ವಸಂಸ್ಥೆಯ ಎಲ್ಲಾ ನಿರ್ಭಂಧಗಳನ್ನು ಪುನಃ ಸ್ಥಾಪಿಸಬೇಕೆಂದು ಟ್ರಂಪ್ ಒತ್ತಾಯಿಸಿದರು. ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪ್ಯಾಂಪಿಯೊ ನಿರ್ಣಯದಲ್ಲಿ ಇರುವ “ಸ್ನ್ಯಾಪ್ ಬ್ಯಾಕ್” ವಿಧಾನವನ್ನು ವಿಧಿಸಬೇಕೆಂದು ಆಗಸ್ಟ್ 20 ರಂದು ಪ್ರಕಟಿಸಿದರು. ಒಪ್ಪಂದಕ್ಕೆ ಸಹಿ ಹಾಕಿದ ಯಾವುದೇ ದೇಶಕ್ಕೆ ಒಪ್ಪಂದವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅನಿಸಿದರೆ “ಸ್ನ್ಯಾಪ್ ಬ್ಯಾಕ್” ವಿಧಾನವನ್ನು ವಿಧಿಸಲು ಒತ್ತಾಯಿಸಬಹುದು. ಇಂತಹ ಒತ್ತಾಯ ಬಂದ 30 ದಿನಗಳೊಳಗಾಗಿ ಮಂಡಳಿ ಅದನ್ನು ನಿರಾಕರಿಸುವ ನಿರ್ಣಯ ತೆಗೆದುಕೊಳ್ಳದಿದ್ದರೆ ಹಿಂದಿನ ದಿಗ್ಬಂಧನ ಪುನಃ ಲಾಗೂ ಆಗುತ್ತದೆ.

ಮಂಡಳಿಯ ಅಧ್ಯಕ್ಷ ಡಯಾನ್ ಟ್ರಿಸ್ಯಾಯಜ ಜಿಜಿಸ್ ರವರು “ಇರಾನ್ ವಿರುದ್ದ ನಿರ್ಭಂಧಗಳ ಮೇಲೆ “ಸ್ನ್ಯಾಪ್ ಬ್ಯಾಕ್”  ಕಾರ್ಯ ವಿಧಾನದ ಅಧಿಸೂಚನೆಯ ಬಗ್ಗೆ ಸದಸ್ಯರಲ್ಲಿ ಒಮ್ಮತವಿಲ್ಲ ಹೇಳಿದ್ದಾರೆ. ಮಂಡಳಿಯ ಬಹುತೇಕ ಸದಸ್ಯರ ಪ್ರಕಾರ, ಜೆಸಿಪಿಒಎ ಪರಮಾಣು ಒಪ್ಪಂದವನ್ನು ಅನುಮೋದಿಸಿದ ಭದ್ರತಾ ಮಂಡಳಿಯ ನಿರ್ಣಯ 2231 ರಲ್ಲಿ ಪ್ರಕಟಿಸಿದಂತೆ, ಇರಾನ್ ಮೇಲೆ  ಯುಎಸ್ ಗೆ “ಸ್ನ್ಯಾಪ್ ಬ್ಯಾಕ್”  ಹೇರಲು ಯಾವುದೇ ಹಕ್ಕು ಹೊಂದಿಲ್ಲ. ಏಕೆಂದರೆ ಯು.ಎಸ್ ಏಕಪಕ್ಷೀಯವಾಗಿ ಒಪ್ಪಂದದಿಂದ ಹೊರ ಬಂದಿದೆ. ಹಾಗಾಗಿ, ವಿಶ್ವ ಸಂಸ್ಥೆ ಯ ಭದ್ರತಾ ಮಂಡಳಿಯು, ಯು.ಎಸ್ ಅಧಿಸೂಚನೆಯ ಬಗ್ಗೆ ಯಾವುದೇ ಕ್ರಮ ವಹಿಸಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ಡಯಾನ ನಿರ್ಧರಿಸಿದರು.

ಒಟ್ಟಾರೆಯಾಗಿ ಇರಾನ್ ಮೇಲೆ ಮತ್ತೆ ದಿಗ್ಬಂಧನ ಹೊರಿಸುವ, ಇಲ್ಲದಿದ್ದರೆ ಅದರ ಮೇಲೆ ಯುದ್ಧ ಹೂಡುವ ಅಮೆರಿಕದ  ಹಠವನ್ನು ತಿರಸ್ಕರಿಸುವ ಅಂತರಾಷ್ಟ್ರೀಯ ಸಮುದಾಯದ ಕರೆಯನ್ನು ಭದ್ರತಾ ಮಂಡಳಿಯ ಎತ್ತಿ ಹಿಡಿದಿದೆ. ಇದರಿಂದ ಅಂತರಾಷ್ಟ್ರೀಯವಾಗಿ ಯು.ಎಸ್ ಮತ್ತೊಮ್ಮೆ ಒಂಟಿಯಾಗಿ ಅವಮಾನ ಪಡುವಂತಾಗಿದೆ. ಟ್ರಂಪ್ ಗೆ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭದ್ರತಾ ಮಂಡಳಿಯ ಈ ನಿರ್ಧಾರ ಎಷ್ಟರ ಮಟ್ಡಿಗೆ ಮುಳುವಾಗಬಲ್ಲದು ಕಾದು ನೋಡಬೇಕು ?

Donate Janashakthi Media

One thought on “ಇರಾನ್ ಮೇಲೆ ದಿಗ್ಬಂಧನಕ್ಕೆ ಯತ್ನ : ಅಮೆರಿಕಕ್ಕೆ ಮುಖಭಂಗ

  1. ಇರಾನ್ ಮೇಲಿನ ದಿಗ್ಬಂಧನದ ಹಿಂದಿರುವ ಅಮೇರಿಕಾದ ಹುನ್ನಾರ ಏನೂ. ಈ ಸಮಸ್ಯೆ ಮಧ್ಯಪ್ರಾಚ್ಯದ ಬಿಕ್ಕಟ್ಟಿನೊಂದಿಗೆ ಹೇಗೆ ಹೆಣೆದು ಕೊಂಡಿದೆ ಎಂಬ ವಿವರಣೆ ಇದ್ದರೆ ಎಲ್ಲರಿಗೂ ತಿಳಿಯುತ್ತದೆ. ಅಲ್ಲದೆ ಈ ಸುದ್ದಿ ಲೇಖನಕ್ಕೆ
    ಎಣ್ಣೆ ರಾಜಕಾರಣದ ವಿವರಣೆ ಅಗತ್ಯ ಎನಿಸುವುದು.

Leave a Reply

Your email address will not be published. Required fields are marked *