ದೆಹಲಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಸಲ್ಲಿಸಲು ಬಂದಿದ್ದ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಹಲ್ಲೆ ನಡೆದಿತ್ತು. ‘ಆರ್‌ಎಸ್‌ಎಸ್ ಹಿಂದು ಧರ್ಮದ ನೈಜ ಆಶಯಗಳನ್ನು ಪ್ರತಿನಿಧಿಸುತ್ತಿಲ್ಲ’ ಎಂದು ಪ್ರತಿಪಾದಿಸುವ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವವರು ನಡೆಸಿದ ಎರಡನೇ ಹಲ್ಲೆ ಇದು. ತಮ್ಮ ಮೇಲೆ ನಡೆದ ದೈಹಿಕ ಹಲ್ಲೆಗೆ ಪ್ರತಿಕ್ರಿಯೆಯಾಗಿ ಸ್ವಾಮಿ ಅಗ್ನಿವೇಶ್ ಅವರು ದೇಶದ ಜನರನ್ನು ಉದ್ದೇಶಿಸಿ ಬರೆದ ಬಹಿರಂಗ ಪತ್ರದ ಕನ್ನಡ ಅನುವಾದ.
ಬಿಜೆಪಿ ಕಾರ್ಯಕರ್ತರು ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿ ಎದುರು ಶುಕ್ರವಾರ (ಆಗಸ್ಟ್ 17) ಸಂಜೆ ನನ್ನನ್ನು ಥಳಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಲು ಕಟ್ಟಡದತ್ತ ನಡೆದು ಹೋಗುತ್ತಿದ್ದಾಗ ಅವರು ನನ್ನನ್ನು ಸುತ್ತುವರಿದು ಶಾಲು, ಪೇಟ ಕಿತ್ತು ಹಾಕಿದರು. ನನ್ನನ್ನು ಸಂಚುಕೋರನೆಂದು ನಿಂದಿಸುತ್ತಾ ಚೆನ್ನಾಗಿ ಹೊಡೆದರು. ನನಗೆ ಹೊಡೆದವರು ವಾಜಪೇಯಿ ಅವರ ನೆನಪುಗಳು ಮತ್ತು ದೊಡ್ಡತನವನ್ನು ಅವಮಾನಿಸುತ್ತಿದ್ದರು. ಅಂದಹಾಗೆ ಜಾರ್ಖಂಡ್‌ನ ಪಕೂರ್‌ನಲ್ಲಿ ನನ್ನ ಮೇಲೆ ದಾಳಿ ಅಂದಿಗೆ ಸರಿಯಾಗಿ ಒಂದು ತಿಂಗಳಾಗಿತ್ತು ಅಷ್ಟೇ. ಪಕುರ್‌ನಲ್ಲಿ ನನ್ನ ಮೇಲೆ ದಾಳಿ ನಡೆದ ನಂತರ ಜಾರ್ಖಂಡ್‌ನಲ್ಲಿ ಅಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರದ ಸಚಿವ ಸಿ.ಪಿ. ಸಿಂಗ್ ನನ್ನನ್ನು ‘ವಿದೇಶಿ ದೇಣಿಗೆ ಪಡೆದು ಬದುಕುವ ಡೊಂಗಿ ಸ್ವಾಮಿ’ ಎಂದು ಕರೆದರು. ಈ ಮೂಲಕ ಅಪರಾಧವನ್ನು ಸಮರ್ಥಿಸಲು ಯತ್ನಿಸಿದ್ದಲ್ಲದೆ, ನಡೆದ ಕುಕೃತ್ಯದ ಹೊಣೆಯನ್ನು ಬಹಿರಂಗವಾಗಿ ಒಪ್ಪಿಕೊಂಡರು. ಅವರು ಹೀಗೆ ಒಪ್ಪಿಕೊಳ್ಳದಿದ್ದರೂ, ರಾಜಕಾರಿಣಿಗಳ ಬೆಂಬಲವಿಲ್ಲದೆ ಹೀಗೆ ಹಾಡಹಗಲೇ ಯಾರ ಮೇಲಾದರೂ ದಾಳಿ ನಡೆಯಲು ಸಾಧ್ಯವೇ? ಹಿಂಸೆಯನ್ನು ತನ್ನಿಂತಾನೆ ನಡೆಯಿತು ಎಂದು ನಾನು ನಂಬುವುದಿಲ್ಲ. ಪ್ರೀತಿ ಮಾತ್ರ ತನ್ನಿಂತಾನೆ ಮೂಡಬಲ್ಲದು. ಅದಕ್ಕೆ ನೋಡಿ ಮೊದಲ ನೋಟದ ಪ್ರೇಮ ಎಂಬ ಸೊಗಸಾದ ಪರಿಕಲ್ಪನೆ ಇದೆ. ಮೊದಲ ನೋಟದಲ್ಲಿ ಎಂದಿಗೂ ದ್ವೇಷ ಮೂಡಿಬರಲು ಸಾಧ್ಯವಿಲ್ಲ. ಹಿಂಸೆಯು ನಿಸರ್ಗಕ್ಕೆ ವಿರುದ್ಧವಾದುದು. ಸ್ವತಂತ್ರ ಚಿಂತನೆಯ ಹೋರಾಟಗಳು, ಕರುಣೆ ಮತ್ತು ಮಾನವೀಯತೆಯನ್ನು ಹತ್ತಿಕ್ಕಿದ ನಂತರವೇ ಹಿಂಸೆಯ ದಾರಿ ಹೊಳೆಯುತ್ತದೆ. ಶಸ್ತ್ರವಿಲ್ಲದ ಮನುಷ್ಯರ ಮೇಲೆ ನಡೆಯುವ ಹಿಂಸೆಯನ್ನು ಮಾನವೀಯತೆಯ ವಿರುದ್ಧದ ಹಿಂಸಾಚಾರ ಎಂದೇ ನಾವು ಭಾವಿಸಬೇಕಾಗುತ್ತದೆ.
ವಿದೇಶಿ ದೇಣಿಗೆ ಪಡೆದು ಬದುಕುವ ಡೊಂಗಿ ಸ್ವಾಮಿ’ ಎನ್ನುವ ಜಾರ್ಖಂಡ ಸಚಿವರ ಹೇಳಿಕೆಯನ್ನು ಬಿಜೆಪಿಯ ಹಲವು ಮುಖವಾಣಿಗಳು ಪುನರುಚ್ಚರಿಸಿದವು. ಈ ಮೂಲಕ ಪಕ್ಷದ ಅನುಮೋದನೆಯೊಂದಿಗೆ ನನ್ನ ಮೇಲೆ ದಾಳಿ ನಡೆದಿದೆ ಎಂಬುದನ್ನು ಸಾರಿ ಹೇಳಿದವು. ನನ್ನ ಮೇಲೆ ನಡೆದ ಮತ್ತೊಂದು ದಾಳಿಯು, ಮತ್ತೊಮ್ಮೆ ಇದೇ ಅಂಶವನ್ನು ನಿರೂಪಿಸಿದೆ. ಪಕೂರ್ ದಾಳಿ ನಡೆದು ಒಂದು ತಿಂಗಳಾದರೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಎಂಟು ಮಂದಿಯ ಪೈಕಿ ಯಾರೊಬ್ಬರನ್ನೂ ಈವರೆಗೆ ಬಂಧಿಸಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಬದುಕು ಮುಡಿಪಿಟ್ಟಿರುವ ನಾನು ಆರ್‌ಎಸ್‌ಎಸ್ ಪಾಲಿಗೆ ಬಹುಕಾಲದಿಂದ ಕಣ್ಣುಬೇನೆಯಾಗಿದ್ದೇನೆ. ನ್ಯಾಯದ ಆದರ್ಶವು ಆರ್‌ಎಸ್‌ಎಸ್‌ಗೆ ಸದಾ ಇರಿಸುಮುರಿಸು ಉಂಟುಮಾಡುತ್ತದೆ. ಕೆಳಜಾತಿಗಳು ಮತ್ತು ಬುಡಕಟ್ಟು ಜನಾಂಗಗಳನ್ನು ಕಷ್ಟದಿಂದ ಸಹಿಸಿಕೊಳ್ಳಬಲ್ಲ ಎರಡನೇ ದರ್ಜೆ ನಾಗರಿಕರು ಎಂದುಕೊಳ್ಳುವ ಆರ್‌ಎಸ್‌ಎಸ್‌ನ ತತ್ವವನ್ನು ಇದು ನಿರಾಕರಿಸುತ್ತದೆ. ನ್ಯಾಯವು ಯಾವಾಗಲೂ ಸಮಾತನತೆಯ ಪರವಾಗಿ ಇರುತ್ತದೆ. ಆದರೆ ಆರ್‌ಎಸ್‌ಎಸ್ ಪ್ರತಿಪಾದಿಸುವ ಸಿದ್ಧಾಂತವು ಅಸಮಾನತೆಯನ್ನು ಪ್ರತಿಪಾದಿಸುತ್ತದೆ.
ಜರ್ಮನಿಯ ಹಿಟ್ಲರ್‌ನಿಂದ ಎರವಲು ಪಡೆದ ಸಾಂಸ್ಕೃತಿಕ ರಾಷ್ಟ್ರೀಯತೆಯ ಸಿದ್ಧಾಂತವನ್ನು ಆಧರಿಸಿ ಆರ್‌ಎಸ್‌ಎಸ್ ಜನ್ಮತಳೆಯಿತು. ಈ ತತ್ವ ಭಾರತದ ನೆಲಕ್ಕೆ ಒಗ್ಗುವುದಿಲ್ಲ. ಭಾರತದಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಊಳಿಗಮಾನ್ಯ ಪದ್ಧತಿಗೆ ಭಾರತ ಜೋತು ಬೀಳಬೇಕು ಎಂದು ಆರ್‌ಎಸ್‌ಎಸ್ ಬಯಸುತ್ತದೆ. ಮೇಲ್ಜಾತಿಗಳಿಗೆ ಅನುಕೂಲ ಮಾಡಿಕೊಡಲು ಸಮಾಜದ ಇತರೆಲ್ಲ ಸಮುದಾಯಗಳನ್ನು ಹೀಗಳೆಯುತ್ತದೆ. ವೈದಿಕ ಪರಂಪರೆ ಮತ್ತು ಭಾರತದ ಮೂಲ ಅಧ್ಯಾತ್ಮಕ್ಕೆ ಆರ್‌ಎಸ್‌ಎಸ್ ಒಂದು ಬೆದರಿಕೆ ಎಂಬ ವಿಚಾರದಲ್ಲಿ ನನಗೆ ಎಂದಿಗೂ ಗೊಂದಲ ಇರಲಿಲ್ಲ. ಆರ್‌ಎಸ್‌ಎಸ್ ಕುರಿತಂತೆ ಇರುವ ನನ್ನ ತಕರಾರು ಅಧ್ಯಾತ್ಮಿಕವಾದುದು. ಮೂಢನಂಬಿಕೆ, ಜಾತಿಪದ್ಧತಿ, ಜೀತಪದ್ಧತಿ, ಬಡವರು ಮತ್ತು ನಿರ್ಗತಿಕರ ಶೋಷಣೆಯಿಂದ ಭಾರತೀಯ ಸಮಾಜವನ್ನು ಮುಕ್ತಗೊಳಿಸಬೇಕು ಎಂದು ನಾನು ಪ್ರತಿಪಾದಿಸುವ ಅಧ್ಯಾತ್ಮ ಕರೆ ನೀಡುತ್ತದೆ. ದಲಿತರು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಹೇಳುತ್ತದೆ. ಸಾರ್ವಜನಿಕ ಬದುಕಿನಲ್ಲಿ ವೈದಿಕ ಅಧ್ಯಾತ್ಮದ ಬೆಳಕು ಬರಬೇಕು ಎಂದು ಆಶಿಸುತ್ತದೆ. ನಮ್ಮ ಇಂಥ ಕೆಲಸಗಳಿಗಾಗಿಯೇ ನಾನು ಮತ್ತು ನನ್ನ ಸಹಚರ ಸ್ವಾಮಿ ಇಂದ್ರವೇಶ್ ಅವರು ಮಾರ್ಕ್ಸ್‌ವಾದಿಗಳು, ಮಾವೋವಾದಿಗಳು, ಅಲ್ಪಸಂಖ್ಯಾತರ ನಿಷ್ಠರು, ಡೊಂಗಿಸ್ವಾಮಿಗಳು, ವಿದೇಶಿ ಶಕ್ತಿಗಳ ಏಜೆಂಟರು ಎಂಬ ಹಣೆಪಟ್ಟಿ ಹೊತ್ತುಕೊಂಡೆವು.
ಅಧ್ಯಾತ್ಮದ ಜ್ಞಾನ ಮತ್ತು ಸಾಮಾಜಿಕ ಕ್ರಿಯೆಯ ನಡುವೆ ಸಾಕಷ್ಟು ಅಂತರವಿದೆ ಎನ್ನುವುದು ನನಗೆ ಗೊತ್ತು. ಇಂಥ ಅಂತರ ಇರುವುದರಿಂದಲೇ ಅಧ್ಮಾತ್ಮದ ಜ್ಞಾನ ಇರುವವರು ಸಾಮಾಜಿಕ ಹೊಣೆಗಾರಿಕೆಗಳಿಂದ ತಪ್ಪಿಸಿಕೊಂಡು ಪರ್ವತ ಶಿಖರಗಳು ಅಥವಾ ಕಾಡಿನಲ್ಲಿ ಏಕಾಂಗಿಯಾಗಿ ವಾಸಿಸಬೇಕು ಎಂಬ ತಪ್ಪುಕಲ್ಪನೆ ಚಾಲ್ತಿಗೆ ಬಂದಿದೆ. ಇದರ ಜೊತೆಜೊತೆಗೆ ಅವತಾರಗಳ ಪರಿಕಲ್ಪನೆಯೂ ನಮ್ಮ ಧರ್ಮದಲ್ಲಿ ಇದೆ. ಕಾಲಕಾಲಕ್ಕೆ ಅಧರ್ಮದಿಂದ ನಮ್ಮನ್ನು ಧರ್ಮದ ಮಾರ್ಗಕ್ಕೆ ನಡೆಸಲು ದೇವರು ಭೂಮಿಗೆ ಬರುತ್ತಾನೆ ಎನ್ನುವ ಅವತಾರ ಪರಿಕಲ್ಪನೆ ಮುಖ್ಯ ಅಂಶ. ಹೀಗಾಗಿಯೇ ಅಧ್ಯಾತ್ಮ ಮತ್ತು ಸಾಮಾಜಿಕ ವಾಸ್ತವಗಳು ಪರಸ್ಪರ ಬೆಸೆದುಕೊಂಡಿವೆ. ಇವೆರೆಡೂ ಒಂದಕ್ಕೊಂದು ವಿರುದ್ಧವಾದ ಪರಿಕಲ್ಪನೆಗಳಲ್ಲ. ಬದಲಿಗೆ ಒಂದಕ್ಕೊಂದು ಪೂರಕ ಸಂಗತಿಗಳು.
ಆದರೆ ಆಚರಣೆಯ ಧಾರ್ಮಿಕ ಜಗತ್ತಿನಲ್ಲಿ ಮೇಲ್ಚಾತಿಯ ಮೇಲುಗೈ ಇರುವುದರಿಂದ ಯಥಾಸ್ಥಿತಿವಾದಿಗಳು ತಮ್ಮ ಪರವಾದ ಧಾರ್ಮಿಕತೆಯನ್ನು ಉಳಿದವರ ಮೇಲೆ ಹೇರುತ್ತಿದ್ದಾರೆ. ಇದರಿಂದಾಗಿಯೇ ನಮ್ಮ ಅಧ್ಯಾತ್ಮ ದೃಷ್ಟಿಯಲ್ಲಿ ಭಿನ್ನಮತಗಳು ತಲೆದೋರಿವೆ. ಉದಾಹರಣೆಗೆ ವೈದಿಕ ಪರಿಕಲ್ಪನೆಯಾದ ‘ವಸುಧೈವ ಕುಟುಂಬಕಂ’ ತೆಗೆದುಕೊಳ್ಳಿ. ಇದು ಭಾರತದ ಅಧ್ಯಾತ್ಮ ದೃಷ್ಟಿಕೋನವನ್ನು ಸಮಗ್ರವಾಗಿ ಹಿಡಿದಿಡುತ್ತದೆ. ಬ್ರಹ್ಮ ಒಬ್ಬನೇ ಸತ್ಯ ಮತ್ತು ಜಗತ್ತಿನಲ್ಲಿರುವ ಎಲ್ಲ ಜೀವಗಳು ಆ ಸತ್ಯದ ವಿವಿಧ ಮುಖಗಳು ಎನ್ನುವುದನ್ನು ಈ ಪರಿಕಲ್ಪನೆ ಸಾರಿ ಹೇಳುತ್ತದೆ. ಹೀಗಿರುವಾಗ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳಿಗೆ ಸಂಬಂಧಿಸಿದ ತಾರತಮ್ಯ ಮತ್ತು ಶೋಷಣೆಯನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ?
ಧಾರ್ಮಿಕ ಆಚರಣೆಗಳು ಮತ್ತು ಅಧ್ಯಾತ್ಮ ಚಿಂತನೆಯ ನಡುವೆ ಒಂದು ನಿಯಂತ್ರಣ ರೇಖೆಯನ್ನು ಎಳೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ವೇದದ ಆಶಯಗಳನ್ನು ಅರಿತುಕೊಂಡವರು ಅಧ್ಯಾತ್ಮವು ಪ್ರೀತಿ, ನ್ಯಾಯ, ಸತ್ಯ ಮತ್ತು ಕರುಣೆಯನ್ನು ಸಾರಿ ಹೇಳುತ್ತದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. ಅಧ್ಮಾತ್ಮದ ಮೂಲ ಇದೇ ಆಗಿದೆ. ದುರಂತವೆಂದರೆ ಜಾತಿಪದ್ಧತಿ, ಮೂಢನಂಬಿಕೆಯಿಂದ ತುಂಬಿ ತುಳುಕುತ್ತಿರುವ ಸಮಾಜವು ಮಾನವೀಯ ಮೌಲ್ಯಗಳ ಬಗೆಗೆ ಕಿವುಡು ಮತ್ತು ಕುರುಡಾಗಿದೆ.
ಈ ನೆಲದ ಆದಿವಾಸಿಗಳು ನಡೆಸುತ್ತಿರುವ ಸಂಘರ್ಷಗಳನ್ನು ಬೆಂಬಲಿಸುವ ನನ್ನ ನಿರ್ಧಾರಕ್ಕೆ ಅಧ್ಯಾತ್ಮದ ಹಿನ್ನೆಲೆ ಇದೆ. ಅದು ರಾಜಕಾರಣ ಅಲ್ಲ. ನಾನು ಈ ಮಾತನ್ನು ರಾಜಕಾರಣವನ್ನು ಅಧ್ಯಾತ್ಮ ಅಲ್ಲ ಎನ್ನುವ ಕಾರಣಕ್ಕೆ ಹೇಳುತ್ತಿಲ್ಲ. ರಾಜಕಾರಣಕ್ಕೆ ಅಧ್ಯಾತ್ಮದ ತಳಹದಿ ಇರಬೇಕು ಎಂದು ನಾನು ಪ್ರತಿಪಾದಿಸುತ್ತೇನೆ. ಭಾರತೀಯ ಸಮಾಜದಲ್ಲಿ ಅಧ್ಯಾತ್ಮಕ್ಕೆ ಮತ್ತೆ ಮುಖ್ಯಸ್ಥಾನ ಸಿಗುವಂತೆ ಮಾಡುವುದು ನನ್ನ ಉದ್ದೇಶ.
ಧರ್ಮಗಳ ಆಧಾರದ ಮೇಲೆ ಕಿತ್ತಾಡುತ್ತಾ ನಾವು ಭಾರತದ ಅಧ್ಯಾತ್ಮ ಶ್ರೇಷ್ಠತೆಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದೇವೆ. ಅತ್ಯುನ್ನತ ಸಮಾಜ ಮತ್ತು ಪ್ರಬಲ ದೇಶ ರೂಪಿಸಲು ಧರ್ಮಗಳ ಪ್ರಭಾವ ಬಳಕೆಯಾಗಬೇಕು. ಇದು ನಾಗರಿಕರು ಅಧ್ಯಾತ್ಮದ ಅತ್ಯುನ್ನತ ಸ್ಥಿತಿಯಲ್ಲಿ ಯೋಚಿಸಲು ಸಾಧ್ಯವಾಗುವ, ಮಹಾತ್ಮಗಾಂಧಿ ಅವರು ಪ್ರತಿಪಾದಿಸಿದ ರಾಮರಾಜ್ಯ ಪರಿಕಲ್ಪನೆಯ ಸಮಾಜದಲ್ಲಿ ಮಾತ್ರ ಸಾಧ್ಯ. ಭಾರತದಲ್ಲಿ ಅನ್ಯಾಯ, ಹಿಂಸೆ, ಅಮಾನವೀಯತೆ, ಜಾತಿ ಆಧರಿತ ತಾರತಮ್ಯ ಇರುವವರೆಗೂ ನಮ್ಮ ನಿಜವಾದ ಸಾಮರ್ಥ್ಯಕ್ಕೆ ನಾವು ಅನ್ಯಾಯ ಮಾಡುತ್ತಲೇ ಇರುತ್ತೇವೆ.
ಈಗ ನಮ್ಮೆದುರು ಎರಡು ಆಯ್ಕೆಗಳಿವೆ. ಒಗ್ಗೂಡಿ ಶ್ರಮಿಸಿ ಅಭಿವೃದ್ಧಿ ಹೊಂದುವುದು ಅಥವಾ ಒಗ್ಗೂಡಿಯೇ ಕೊಳೆತು ಹೋಗುವುದು. ಯಾವ ಮಾರ್ಗ ಆರಿಸಿಕೊಂಡರೂ ನಾವು ಒಂದಾಗಿಯೇ ಇರಬೇಕು. ಆದರೂ ನನ್ನ ದೃಷ್ಟಿಕೋನ ಆರ್‌ಎಸ್‌ಎಸ್‌ಗೆ ಕೆಟ್ಟದು ಎನಿಸುತ್ತದೆ. ಹಿಟ್ಲರ್ ಕಾಲದಲ್ಲಿ ಕ್ರೂರ ಜರ್ಮನ್ ಅಧಿಕಾರಿಗಳು ಜನರ ಮೇಲೆ ಹೇರಲು ಯತ್ನಿಸಿದ ಸಿದ್ಧಾಂತವನ್ನು ಆರ್‌ಎಸ್‌ಎಸ್ ನಮ್ಮ ದೇಶದಲ್ಲಿ ಇದೀಗ ಸಾಕಾರಗೊಳಿಸಲು ಯತ್ನಿಸುತ್ತಿದೆ. ಆರ್‌ಎಸ್‌ಎಸ್‌ನ ಸಿದ್ಧಾಂತವು ಹಿಂದೂಧರ್ಮದ ಜೊತೆಗೆ ಯಾವುದಾದರೂ ರೀತಿಯಲ್ಲಿ ನಂಟು ಹೊಂದಿದೆ ಎನ್ನುವ ಬಗ್ಗೆಯೇ ನನಗೆ ಅನುಮಾನವಿದೆ. ನನ್ನ ಮೇಲೆ ನಡೆದ ಹಲ್ಲೆಗೆ ನಾನು ಪ್ರತಿಪಾದಿಸುತ್ತಿರುವ ವಿಚಾರಗಳೇ ಕಾರಣ ಎನ್ನುವುದನ್ನು ಆರ್‌ಎಸ್‌ಎಸ್ ನಂಬುತ್ತದೆ ಎನ್ನುವ ಬಗ್ಗೆಯೂ ನನಗೆ ಅನುಮಾನವಿದೆ.
ನನ್ನ ಮೇಲೆ ಎರಡನೇ ಬಾರಿ ಹಲ್ಲೆಯಾಗಿದೆ. ಪ್ರತಿ ಹಲ್ಲೆಯ ನಂತರವೂ ನಾನು ನೋವಿನಲ್ಲಿರುತ್ತೇನೆ. ನಾನು ಅನುಭವಿಸಿದ ನೋವು ಮತ್ತು ಹಿಂಸೆಯು ನಮ್ಮ ಸಮಾಜವು ಅನುಭವಿಸುತ್ತಿರುವ ದುರಂತದ ಬಗ್ಗೆ ಸಹ ಭಾರತೀಯರು ಎಚ್ಚೆತ್ತುಕೊಳ್ಳಲು ಕಾರಣವಾಗಬೇಕು. ಆಗ ಮಾತ್ರ ನನ್ನ ನೋವು ಕಡಿಮೆಯಾಗುತ್ತದೆ.
– ಸ್ವಾಮಿ ಅಗ್ನಿವೇಶ್