– ಆರ್ಯ ಸಮಾಜದ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅಗ್ನಿವೇಶ್
ನವದೆಹಲಿ: ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಶುಕ್ರವಾರ ಸಂಜೆ 6.55ಕ್ಕೆ ನಿಧನರಾದರು.
ಪಿತ್ತ ಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಅಗ್ನಿವೇಶ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. 80 ವರ್ಷದ ಅಗ್ನಿವೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ನಲ್ಲಿ ದಾಖಲಿಸಲಾಗಿತ್ತು. ಕಳೆದ ಮಂಗಳವಾರದಿಂದ ವೆಂಟಿಲೇಟರ್ ಸಹಾಯದಿಂದ ಕೃತಕ ಉಸಿರಾಟ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಇಂದು ಸಂಜೆ ವೇಳೆಗೆ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ನೀಡಿದ್ದಾರೆ.
21ನೇ ಸೆಪ್ಟೆಂಬರ್ 1939ರಂದು ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ಜನಿಸಿದ್ದ ಅವರು ಹರಿಯಾಣದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಆರ್ಯ ಸಮಾಜದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು
ಜೀತದಾಳುಗಳ ವಿಮುಕ್ತಿಗಾಗಿ ಹೋರಾಡಲೆಂದು 1981ರಲ್ಲಿ ಬಾಂಡೆಡ್ ಲೇಬರ್ ಲಿಬರೇಶನ್ ಫ್ರಂಟ್ ಸ್ಥಾಪಿಸಿದ್ದರು. 2004ರಿಂದ 2014ರವರೆಗೆ ಆರ್ಯ ಸಮಾಜದ ವಿಶ್ವ ಮಂಡಳಿಯ ಅಧ್ಯಕ್ಷರಾಗಿದ್ದರು. 1994ರಿಂದ 2004ರವರೆಗೆ ವಿಶ್ವಸಂಸ್ಥೆಯ ಜೀತ ವಿಮುಕ್ತಿಗಾಗಿನ ನಿಧಿಯ ಅಧ್ಯಕ್ಷರಾಗಿದ್ದರು. ಸ್ತ್ರೀ ಭ್ರೂಣ ಹತ್ಯೆ ಮತ್ತು ಮಹಿಳೆಯರ ವಿಮೋಚನೆಗೆ ಸಂಬಂಧಿಸಿದ ಅಭಿಯಾನಗಳು ಸೇರಿದಂತೆ ಸಾಮಾಜಿಕ ಹೋರಾಟಗಳಲ್ಲಿ ಕ್ರಿಯಾಶೀಲತೆಯಿಂದ ಭಾಗಿಯಾಗುತ್ತಿದ್ದರು. ಇದರಿಂದಾಗಿಯೇ ಹಲವಾರು ಬೆಂಬಲಿಗರು ಹಾಗೂ ಸಮಾನ ಸಂಖ್ಯೆಯ ವಿರೋಧಿಗಳನ್ನೂ ಇವರು ಸಂಪಾದಿಸಿದ್ದರು. ಇದೇ ಕಾರಣಕ್ಕೆ ಇವರ ಮೇಲೆ ಕೆಲವು ಬಾರಿ ಹಲ್ಲೆಗಳಾದದ್ದೂ ಇದೆ.
70ರ ದಶಕದಲ್ಲೇ ಅಗ್ನಿವೇಶ್ ಅವರು ಆರ್ಯ ಸಭಾ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು. ಇದು ಆರ್ಯ ಸಮಾಜದ ತತ್ವಗಳನ್ನು ಆಧರಿಸಿದ್ದಾಗಿತ್ತು. 1977 ರಲ್ಲಿ ಅಗ್ನಿವೇಶ್ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು 1979 ರಲ್ಲಿ ಶಿಕ್ಷಣಕ್ಕಾಗಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1981 ರಲ್ಲಿ, ಮಂತ್ರಿಯಾಗಿದ್ದಾಗ ಅವರು ಲೇಬರ್ ಲಿಬರೇಷನ್ ಫ್ರಂಟ್ ಅನ್ನು ಸ್ಥಾಪಿಸಿದ್ದರು.
ಅಲ್ಲದೆ, ಧರ್ಮಗಳ ನಡುವಿನ ವ್ಯಾಜ್ಯಗಳಿಗೆ ವಕೀಲರಾಗಿಯೂ ಇವರು ಹಾಜರಾಗುತ್ತಿದ್ದರು. ಕಟು ಹಿಂದುತ್ವ ಪ್ರತಿಪಾದನೆಯನ್ನು ಅಗ್ನಿವೇಶ್ ವಿರೋಧಿಸುತ್ತಿದ್ದರು. ‘ಹಿಂದೂ ಧರ್ಮದ ನೈಜ ಆಶಯಗಳನ್ನು ಆರ್ಎಸ್ಎಸ್ ಪ್ರತಿನಿಧಿಸುತ್ತಿಲ್ಲ’ ಎಂದು ಸಾರಿ ಹೇಳುತ್ತಿದ್ದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಅಗ್ನಿವೇಶ್ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಯ ನಂತರ ಅವರು ಬರೆದಿದ್ದ ಬಹಿರಂಗ ಪತ್ರವು ಅಗ್ನಿವೇಶ್ ಅವರ ವಿಚಾರಧಾರೆಯನ್ನು ಸ್ಪಷ್ಟಪಡಿಸಿತ್ತು.
ಸ್ವಾಮಿ ಅಗ್ನಿವೇಶ್ ಅವರ ಸಾವಿಗೆ ಸಂತಾಪ ಸೂಚಿಸಿರುವ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, “ಸ್ವಾಮಿ ಅಗ್ನಿವೇಶ್ ಅವರ ನಿಧನವು ಒಂದು ದೊಡ್ಡ ದುರಂತ. ಮಾನವೀಯತೆ ಮತ್ತು ಸಹಿಷ್ಣುತೆಯ ಪರವಾದ ನಿಜವಾದ ಯೋಧರಂತೆ ಅವರು ಕೆಲಸ ನಿರ್ವಹಿಸುತ್ತಿದ್ದರು. ನನಗೆ ತಿಳಿದಿರುವ ಧೈರ್ಯಶಾಲಿ ವ್ಯಕ್ತಿಗಳ ಪೈಕಿ ಅಗ್ನಿವೇಶ್ ಸಹ ಒಬ್ಬರು.ಸಾರ್ವಜನಿಕ ಒಳಿತಿಗಾಗಿ ಭಾರಿ ಅಪಾಯಗಳನ್ನು ತೆಗೆದುಕೊಳ್ಳಲು ಅವರು ಸಿದ್ದರಿದ್ದರು. ಜಾರ್ಖಂಡ್ನಲ್ಲಿ 2 ವರ್ಷಗಳ ಹಿಂದೆ ಬಿಜೆಪಿ, ಆರ್ಎಸ್ಎಸ್ ಜನರ ದಾಳಿಯಿಂದಾಗಿ ಅವರ ಯಕೃತ್ ಹಾನಿಗೊಳಗಾಗಿತ್ತು” ಎಂದು ವಿಷಾದಿಸಿದ್ದಾರೆ.