ಆಡಳಿತ ಅಂದರೆ ಸ್ವಜನ ಪಕ್ಷಪಾತ, ಕಮೀಷನ್, ಪರ್ಸಂಟೇಜ್ ಹೊಡೆಯುವುದು ಅಲ್ಲಾ, ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತಂದು ವೈಫಲ್ಯಗಳನ್ನು ಮುಚ್ಚಿ ಹಾಕುವುದಲ್ಲ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳನ್ನು ಜನತೆಗೆ ತಲುಪಿಸುವುದು. ಪಾರದರ್ಶಕವಾಗಿ ನಡೆದುಕೊಳ್ಳುವುದು. ಕೊರೊನಾ ಸಂಕಷ್ಟದಲ್ಲಿ ನೆಪಗಳನ್ನು ಹೇಳದೆ, ಜನರ ಪರವಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿರುವ ರಾಜ್ಯವೇ ಕೇರಳ. ಈ ರಾಜ್ಯ ಕೊರೊನಾ ಕಾಲದಲ್ಲೂ ಅಭಿವೃದ್ಧಿಗೆ ಆಧ್ಯತೆ ನೀಡುತ್ತಾ ಬಂದಿದೆ.
ಉತ್ತಮ ಆರೋಗ್ಯ ಮತ್ತೊಂದು ಕಡೆ ಅತ್ಯುತ್ತಮ ಶಿಕ್ಷಣದ ಮೂಲಕ ಸಿಪಿಐಎಂ ನೇತೃತ್ವದ ಎಡರಂಗ ಸರಕಾರ ಕೊರೊನಾ ಸಂಕಷ್ಟದ ನಡುವೆ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದೆ. 34 ಅತ್ಯುತ್ತಮ ಸರಕಾರಿ ಶಾಲಾ ಕಟ್ಟಡಗಳನ್ನು ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟನೆಗೊಳಿಸಿದ್ದಾರೆ. ಕಾರ್ಪೊರೇಟ್ಗಳು ನಡೆಸುವ ಖಾಸಗಿ ಶಾಲಾ ಕಟ್ಟಡಗಳಿಗಿಂತಲೂ ಇವು ಉತ್ತಮ ದರ್ಜೆಯ ಕಟ್ಟಡಗಳಾಗಿ ನಾಡಿನ ಗಮನವನ್ನು ಸೆಳೆಯುತ್ತಿವೆ. ಕೇರಳ ಶಿಕ್ಷಣಕ್ಕೆ ಹಾಗೂ ಆರೊಗ್ಯಕ್ಕೆ ಗಮನ ಕೊಟ್ಟಿರುವುದು ಇವತ್ತು, ನಿನ್ನೆಯ ಕಥೆಯಲ್ಲ. ಅದಕ್ಕೆ ಹಲವು ದಶಕಗಳ ಇತಿಹಾಸವಿದೆ. ಘೋಷಿಸಿದ ಯೋಜನೆಗಳನ್ನು ಬದ್ಧತೆಯಿಂದ ಕಾರ್ಯಗತಗೊಳಿಸುವ ಸಚಿವ ಸಂಪುಟ ಅಲ್ಲಿದೆ. ಅದಕ್ಕಾಗಿಯೇ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಕೇರಳದ ಅಭಿವೃದ್ಧಿ ಭಾರತಕ್ಕೆ ಸ್ಪೂರ್ತಿ ಮತ್ತು ಭರವಸೆಯಾಗಿ ಕಾಣುತ್ತದೆ. ಅನೇಕ ರಾಜ್ಯಗಳು ಶಾಲಾ- ಕಾಲೇಜು ತೆರೆಯಲು ಹಾಗೂ ಅಭಿವೃದ್ಧಿ ಕೆಲಸ ಮಾಡಲು ಕೊರೊನಾ ಕಾರಣವನ್ನು ಹೇಳಿ ಮುಂದುಡುತ್ತಿರುವುದನ್ನು ನೋಡುತ್ತಿದ್ದೇವೆ. ಹಿಂದೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರ ಮುಚ್ಚಿದ್ದ ಸರಕಾರಿ ಶಾಲೆಗಳನ್ನು ಪುನ: ತೆರೆಯುವ ಮೂಲಕ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಅತ್ಯಾಧುನಿಕ ಸೌಲಭ್ಯಗಳ ಮೂಲಕ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುತ್ತಿದೆ.
ಕೋವಿಡ್ ವಿರುದ್ಧ ಸಮರದಲ್ಲಿ
ಲಾಕ್ ಡೌನ್ ತೆರವುಗೊಳಿದಾಗಿನಿಂದ ಕೇರಳದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಈಗಲೂ ಈ ಸೋಂಕಿನ ವಿರುದ್ದ ಸಮರದ ಎಲ್ಲ ಸೂಚ್ಯಂಕಗಳಲ್ಲೂ ಕೇರಳದ ಸಾಧನೆ ಬೇರೆಲ್ಲಾ ರಾಜ್ಯಗಳಿಗಿಂತ ಉತ್ತಮವಾಗಿಯೇ ಇದೆ.
ಕೇರಳ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ಮತ್ತು ವಯಸ್ಸಾದವರ ಪ್ರಮಾಣ, ಕ್ಯಾನ್ಸರ್, ಮಧುಮೇಹ ಮುಂತಾದ ಕಾಯಿಲೆಗಳ ಪ್ರಮಾಣ ಹೆಚ್ಚಿರುವ ರಾಜ್ಯವಾದರೂ ಸೋಂಕಿತರ ಪ್ರಮಾಣ ಒಂದು ದಶಲಕ್ಷದಲ್ಲಿ 2168. ರಾಷ್ಟ್ರೀಯ ಸರಾಸರಿ 2731ಕ್ಕಿಂತ ಕಡಿಮೆ.
ದಕ್ಷಿಣದ ರಾಜ್ಯಗಳಲ್ಲಿ ಆಂಧ್ರಪ್ರದೇಶದಲ್ಲಿ ಇದು ಅತಿ ಹೆಚ್ಚು 8479, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸುಮಾರು 5000.
ಕೇರಳದಲ್ಲಿ ಈಗಲೂ ಸೋಂಕಿತರ ಆಂಟಿಜೆನ್ ಪರೀಕ್ಷೆ ನಕಾರಾತ್ಮಕವಾದ ಮೇಲೆಯೆ ಅವರನ್ನುಆಸ್ಪತ್ರೆಯಿಂದ ಕಳಿಸುತ್ತಿರುವುದು, ಆದರೆ ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳಲ್ಲಿ ರೋಗಲಕ್ಷಣಗಳು ಇಲ್ಲದಿದ್ದರೆ 10 ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತಿದೆ.
ಮರಣದರವೂ ಕೇರಳದಲ್ಲಿಯೇ ಅತಿ ಕಡಿಮೆ, ಪ್ರತಿದಶಲಕ್ಷ ಜನಸಂಖ್ಯೆಗೆ 8.4 ಸಾವುಗಳು. ದೇಶದ ಸರಾಸರಿ 48, ತಮಿಳುನಾಡಿನಲ್ಲಿ ಇದು ಕೇರಳದ 11 ಪಟ್ಟಾದರೆ, ಕರ್ನಾಟಕದಲ್ಲಿ 12 ಪಟ್ಟು.
ಸೋಂಕಿತರಲ್ಲಿ ಸಾವುಗಳ ಪ್ರಮಾಣವೂ ಕೇರಳದಲ್ಲಿ ಪ್ರತಿ 100 ಸೋಂಕಿತರಲ್ಲಿ 4, ತಮಿಳುನಾಡಿನಲ್ಲಿ 17, ಮತ್ತು ಕರ್ನಾಟಕದಲ್ಲಿ 16, ಆಂಧ್ರಪ್ರದೇಶದಲ್ಲಿ 9. ರಾಷ್ಟ್ರೀಯ ಸರಾಸರಿಯೂ 17.
100 ದಿನಗಳು 100 ಪ್ರಾಜೆಕ್ಟ್ ಗಳು
ಕೊವಿಡ್ ವಿರುದ್ಧ ಸಮರದಲ್ಲಿ ರಾಜ್ಯದ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ತೊಂದರೆಯಾಗದಂತೆ ಓಣಂ ದಿನದಂದು ಮುಂದಿನ 100 ದಿನಗಳಿಗೆ 100 ಪ್ರಾಜೆಕ್ಟ್ಗಳನ್ನು ಕೇರಳದ ಮುಖ್ಯಂತ್ರಿಗಳು ಘೋಷಿಸಿದ್ದಾರೆ.
ಮುಖ್ಯವಾಗಿ ಕೇರಳದ ಯಶಸ್ಸಿಗೆ ಕಾರಣವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಇದುವರೆಗೆ 9768 ಆರೋಗ್ಯ ಕಾರ್ಯಕರ್ತರನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು, ಅಗತ್ಯವಿದ್ದರೆ ಈ 100 ದಿನಗಳಲ್ಲಿ ಇನ್ನಷ್ಟು ನೇಮಕಾತಿಗಳನ್ನು ಮಾಡಲಾಗುವುದು. ಮೊದಲ ಹಂತದ ಕೊವಿಡ್ ಶುಶ್ರೂಷಾ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲಾಗುವುದು,ಸೋಂಕು ತಪಾಸಣೆಯ ಸಂಖ್ಯೆಯನ್ನು ದಿನಕ್ಕೆ 50,000ಕ್ಕೆ ಹೆಚ್ಚಿಸಲಾಗುವುದು.
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತ ಕುಟುಂಬ ಆರೋಗ್ಯ ಕೇಂದ್ರಗಳ ದರ್ಜೆಗೆ ಏರಿಸುವ ಕಾರ್ಯಕ್ರಮದಲ್ಲಿ ಇದುವರೆಗೆ 386 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಇದಕ್ಕೆ ಇನ್ನೂ 153 ಹೊಸ ಕುಟುಂಬ ಆರೋಗ್ಯ ಕೇಂದ್ರಗಳ ಉದ್ಘಾಟನೆ ಮಾಡಲಾಗುವುದು.
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಸಂಬಂಧಪಟ್ಟಂತೆ– ಎಲ್ಲ ಕೆಳ ಪ್ರಾಥಮಿಕ ಶಾಲೆಗಳನ್ನು ಹೈಟೆಕ್ ಶಾಲೆಗಳಾಗಿ ಪರಿವರ್ತಿಸುವ ಕಾರ್ಯಕ್ರಮ ಪ್ರಗತಿಯಲ್ಲಿದ್ದು, 11,400 ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ಗಳನ್ನು ರಚಿಸಲಾಗುವುದು ಮುಂದಿನ 100ದಿನಗಳಲ್ಲಿ 5ಲಕ್ಷ ಶಾಲಾ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆಯ ವಿದ್ಯಾಶ್ರೀ ಪ್ರಾಜೆಕ್ಟನ್ನು ಕೆಎಸ್ಎಫ್ಇ ಮತ್ತು ಕುಡುಂಬಶ್ರೀ ಆಶ್ರಯದಲ್ಲಿ ಆರಂಭಿಸಲಾಗುವುದು. 18 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಿರುವ 10 ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಗಳನ್ನು ಉದ್ಘಾಟಿಸಲಾಗುವುದು.
ಸರಕಾರೀ ಮತ್ತು ಅನುದಾನಿತ ಕಾಲೇಜುಗಳಲ್ಲಿ 150 ಹೊಸ ಕೋರ್ಸ್ಗಳನ್ನು ಆರಂಭಿಸುವ ಯೋಜನೆ ಹಾಕಿಕೊಂಡಿದ್ದು ಸಪ್ಟಂಬರ್ 15ರೊಳಗ ಇವುಗಳಲ್ಲಿ 100 ಕೋರ್ಸ್ ಗಳ ಪ್ರಕಟಣೆ ಮಾಡಲಾಗುವುದು. 126 ಕೋಟಿ ರೂ.ಗಳ ಹೂಡಿಕೆ ಮಾಡಿ 32 ಇನ್ನತ ಶಿಕ್ಷಣ ಸಮಸ್ಥೆಗಳಿಗೆ ಕಟ್ಟಡಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು.
ಮುಂದಿನ 100 ದಿನಗಳಲ್ಲಿ ಕಾಲೇಜುಗಳು ಮತ್ತು ಹೈಯರ್ ಸೆಕೆಂಡರಿ ವಲಯಗಳಲ್ಲಿ 1000 ಹುದ್ದೆಗಳನ್ನು ನಿರ್ಮಿಸಲಾಗುವುದು ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.