ಮೂಗು, ಮೊಲೆ ಕತ್ತರಿಸಿಕೊಂಡ ಭಗ್ನಮೂರ್ತಿಯ ಕಥನ

ಲೇಖಕರು: ಮಾಧವಿ ಭಂಡಾರಿ ಕೆರೆಕೋಣ

 ಪುಟಗಳು: 90  ಬೆಲೆ: ರೂ. 70

ಪ್ರ: ಬಂಡಾಯ ಪ್ರಕಾಶನ, ʼಸಹಯಾನʼ ಕೆರೆಕೋಣ ಅರೇ ಅಂಗಡಿ, ಹೊನ್ನಾವರ, ಉತ್ತರ ಕನ್ನಡ-581 334   ಫೋನ್‌: 9448729359

ಕಾವ್ಯ ಮತ್ತು ಸಂಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಾಧವಿ ಭಂಡಾರಿ ಕೆರೆಕೋಣ ಅವರ ‘ಮೌನ ಗರ್ಭದ ಒಡಲು’ ಹಲವು ಕಾರಣದಿಂದಾಗಿ ಭಿನ್ನವಾದ ಕವನ ಸಂಕಲನ. ದಂತ ಗೋಪುರದಲ್ಲಿ ಕುಳಿತ ಕಾವ್ಯ ಬರೆಯುವ ಘಟ್ಟವನ್ನು ದಾಟಿ ಎಷ್ಟೋ ಕಾಲವಾಗಿದೆ. ವ್ಯಕ್ತಿಯೊಬ್ಬನ ಅಕರಾಳ-ವಿಕರಾಳ ಅಸಂಗತ ಜಗತ್ತಿನ ಚಿತ್ರಣಗಳನ್ನು ಕಾವ್ಯವೆಂದು ತೋರಿಸುತ್ತಿದ್ದ ಕಾಲಘಟ್ಟವನ್ನು ದಾಟಿ, ಮುಂದೆ ಬಂದದ್ದಾಗಿದೆ. ಸಂವೇದನೆಯ ಬಗ್ಗೆ ಮಾತನಾಡುವಾಗ ‘ಕವಿಯೊಬ್ಬನ, ವ್ಯಕ್ತಿಯೊಬ್ಬನ’ ಎಂಬ ಸರ್ವೆ ಸಾಧಾರಣವಾದ ಪುರುಷನೊಬ್ಬನ ರಚನೆಯೆಂದು ಹೇಳುವ ಪ್ರವೃತ್ತಿಯೂ ಬಳಕೆಯಲ್ಲಿ ಬದಲಾಗಿದೆ. ಅಭಿವ್ಯಕ್ತಿಯಲ್ಲಿ ‘ಆಕೆಯದು, ಆತನದು’ ಎಂದೇ ನಿರ್ದಿಷ್ಟವಾಗಿ ಗುರುತಿಸಲಾಗುತ್ತಿದೆ.
ಕಾವ್ಯದಿಂದ ನಿರೀಕ್ಷಿಸಲಾಗುವ ಸಂಗತಿಗಳೆಂದು ಗುರುತಿಸಲ್ಪಟ್ಟಿರುವ ‘ಹಣ, ಹೆಸರು, ಯಶಸ್ಸು’ಗಳ ಪಟ್ಟಿಯು ಚರಿತ್ರೆಗೆ ತಕ್ಕಂತೆ ಬದಲಾಗಿದ್ದು ಈ ಪಟ್ಟಿಯಲ್ಲಿ ‘ಜಾತಿ-ವರ್ಗಗಳ, ಲಿಂಗಾಧಾರಿತ ಅಸಮಾನತೆಗಳು’ ಅಭಿವ್ಯಕ್ತಿಯ ಅನಿವಾರ್ಯ ಸಾಧ್ಯತೆಗಳಾಗಿ ಸೇರಿಕೊಂಡಿವೆ. ಒಂದೊಂದು ಬಾರಿ ನಿರ್ದಿಷ್ಟ ಕೇಂದ್ರದ ಸುತ್ತ ರಚನೆಯಾಗುವ ಕೃತಿಗಳು ‘ಮಿತಿಯೊಳಗೆ’ ಸಿಕ್ಕಿ ಹಾಕಿಕೊಳ್ಳುವುದು ಉಂಟು. ವಚನಕಾರ್ತಿ ಅಕ್ಕಮ್ಮ ವಿಶೇಷವಾಗಿ ತನ್ನ ವಚನಗಳಲ್ಲಿ ‘ಗೊತ್ತು’ಗಳೆಂಬ ಪದಗಳನ್ನು ಬಳಸುತ್ತಾಳೆ. ಈ ಪದ ಗಡಿ ಅಥವಾ ಬೇಲಿ ಎಂಬ ಅರ್ಥ ಪಡೆಯುತ್ತದೆ. ನಿರ್ದಿಷ್ಟವಾದ ಅರ್ಥ ಅಥವಾ ವಸ್ತುವನ್ನು ಈ ‘ಗೊತ್ತು’ಗಳು ಹಿಡಿದಿಡುತ್ತವೆ. ‘ಸ್ತ್ರೀ, ಸ್ತ್ರೀವಾದ, ಸ್ತ್ರೀ ಸಂಕಥನ, ಸ್ತ್ರೀ ಸಂವೇದನೆಗಳು’ ಎಂಬ ಪದಗಳು ಸಲೀಸಾಗಿ ನಿರ್ದಿಷ್ಟ ಚೌಕಟ್ಟಿನೊಳಗೆ ತಮ್ಮ ಅರ್ಥಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಸಂದರ್ಭಕ್ಕೆ ಕಾರಣ ಇದುವರೆಗೆ ಆ ಲೋಕದ ಬಗ್ಗೆ ಇದ್ದ ಅವಜ್ಞೆಯಾಗಿದೆ. ಸಮಾಜ, ಕುಟುಂಬದಲ್ಲಿ ಎರಡನೆಯ ಪ್ರಜೆಯಾದ, ಗಂಡಿನ ಸ್ವತ್ತಿನ ಒಂದು ಭಾಗವೇ ಆದ ‘ಆಕೆ’ ಪ್ರತಿನಿಧಿಸುತ್ತಿದ್ದುದು ಗಂಡಿನ ಸಾಮಾಜಿಕ-ಆರ್ಥಿಕ ಸ್ಥಾನಮಾನಗಳನ್ನು ಮಾತ್ರ. ಗಂಡು ನಿರ್ಮಿತವಾದ ಸಮಾಜದ ಚೌಕಟ್ಟಿನೊಳಗೆ ಜೀವಿಸುವುದೇ ಅಭ್ಯಾಸವಾಗಿದ್ದ ಅವಳಿಗೆ ಅವನ ಮೂಲಕ ದೊರೆಯುವ ‘ಸ್ಥಾನ-ಮಾನಗಳು’ ಮೈಮರೆಯಿಸಿದ್ದವಲ್ಲದೆ ‘ತನ್ನ’ ಪ್ರತ್ಯೇಕತೆಯ ಬಗ್ಗೆ ಆಲೋಚಿಸಬೇಕಾದ ಸಂದರ್ಭಗಳು ಬಂದಿರಲಿಲ್ಲ.
ಹೀಗೆ ಪೂರ್ಣವಾಗಿ ಮುಳುಗಿ ಹೋಗಿದ್ದ ಗಂಡುಲೋಕದಲ್ಲಿ ಆಗೊಮ್ಮೆ, ಈಗೊಮ್ಮೆ ಹೊರ ಬರಲು ಯತ್ನಿಸಿದವರು ಗಂಡುಬೀರಿಯರಾಗಿ, ವಿಧೇಯ ಹೆಂಗಸರನ್ನು ದಿಕ್ಕು ತಪ್ಪಿಸುವವರಾಗಿ ಕಂಡು ಬಂದರು.

ಲೆಸ್ ಬಾಸ್‌  ದ್ವೀಪದ ‘ಸ್ಯಾಫೋ’ ಗಂಡು ಕಟ್ಟಿಕೊಂಡ ರಾಜಕೀಯ-ಕಲೆ-ಸಾಹಿತ್ಯ ಲೋಕದಂತೆಯೇ ತನ್ನ ಹಾಗೆ ಚಿಂತಿಸಲೆತ್ನಿಸುವ ಯುವತಿಯರ ಪಡೆ ಕಟ್ಟಿಕೊಂಡವಳು. ತನ್ನ ಸಮಕಾಲೀನ ಲೇಖಕರಿಗಿಂತಲೂ ಪ್ರತಿಭಾವಂತೆಯಾದ ಆಕೆ ತನ್ನ ಪ್ರತಿಭೆ ಹಾಗೂ ದಿಟ್ಟತನದಿಂದಾಗಿಯೇ ಪ್ರಭುತ್ವಕ್ಕೆ ಅಂಜಿಕೆ ಹುಟ್ಟಿಸಿದವಳು. ಹತ್ತೊಂಬತ್ತನೇ ವಯಸ್ಸಿನ ಆಕೆ ರಾಜಕಾರಣ, ಕಾವ್ಯ ಕ್ಷೇತ್ರದಲ್ಲಿ ಕ್ರಿಯಾಶೀಲಳಾಗಿದ್ದವಳು. ಪ್ಲೇಟೋನಿಂದ “ಕೇವಲ ಒಂಬತ್ತು ಮಂದಿಯನ್ನು ಕಾವ್ಯದೇವಿಯೆನ್ನುತ್ತಾರೆ. ಅವರೆಷ್ಟು ಅಜ್ಞಾನಿಗಳು. ನೋಡಿ ಸ್ಯಾಪೋ ಹತ್ತನೆಯವಳು” ಎಂದು ಕರೆಯಿಸಿಕೊಂಡವಳು. ಆಗ ಕವಿ ಎಂದರೆ “ಹೋಮರ್”, ಕವಯಿತ್ರಿ ಎಂದರೆ ‘ಸ್ಯಾಫೋ’ಕರೆಯಲಾಗುತ್ತಿತ್ತು. ಯುವತಿಯರಿಗಾಗಿಯೇ ಕಾವ್ಯ, ಸಂಗೀತ, ನೃತ್ಯ ಕಲಿಸುವ ಶಾಲೆಯನ್ನು ತೆರೆದ ಆಕೆ ತನ್ನ ಶಿಷ್ಯೆಯರನ್ನು ಸಂಗಾತಿಗಳೆಂದು ಕರೆದಳು. ಈಕೆಯ ಕವಿತೆಗಳನ್ನು ‘ಲೆಸ್ಬಿಯನ್ ಪ್ರೇಮದ’ ಅಭಿವ್ಯಕ್ತಿ ಎಂದು ಕರೆದದ್ದಲ್ಲದೇ ಕ್ರೈಸ್ತ ಧಾರ್ಮಿಕ ಮುಖಂಡರು ರೋಮ್ ಮತ್ತು ಕಾನ್‍ಸ್ಟಾಂಟಿನೋಪಲ್‍ನಲ್ಲಿ ಅವುಗಳನ್ನು ಬಹಿರಂಗವಾಗಿ ಸುಟ್ಟರು. ಆಗಿನ ಗಂಡು ಸಮಾಜ ಸ್ಯಾಫೋಳ ಪ್ರತಿಭೆ ಹಾಗೂ ದಿಟ್ಟತನವನ್ನು ಸಹಿಸಲಾರದೆ ಅವಳ ಪ್ರೇಮವನ್ನು ಗಂಡಸಿನ ಪ್ರೀತಿಗಾಗಿ ಹಂಬಲಿಸಿ ಭಗ್ನಗೊಂಡ ಕತೆಯನ್ನಾಗಿ ಚಿತ್ರಿಸಿ ಸೇಡು ತೀರಿಸಿಕೊಂಡಿತು.

ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಅಕ್ಕಮಹಾದೇವಿ, ಮೀರ, ಅಂಡಾಳ್ ಮುಂತಾದ ಕವಯತ್ರಿಯರು ಅಧ್ಯಾತ್ಮಲೋಕದ ಚೌಕಟ್ಟಿನೊಳಗೆ ಲೋಕದ ಹಂಗಿನಿಂದ ದೂರಾದ “ನಲ್ಲ-ನಲ್ಲೆಯರ” ಸಂಬಂಧವನ್ನು ಕಟ್ಟಿಕೊಂಡಿದ್ದರಿಂದ ಟೀಕೆ-ಟಿಪ್ಪಣೆಗಳಿಂದ ಪಾರಾದರು. ತಮ್ಮ ಆರಾಧ್ಯ ದೈವಗಳನ್ನೇ ಪತಿಯನ್ನಾಗಿಸಿಕೊಂಡ ಈ ಪ್ರತಿಭೆಗಳು ತಮ್ಮೆಲ್ಲಾ ಮಾನವೀಯ ಸಂಬಂಧದ ತಲ್ಲಣಗಳನ್ನು ‘ಅನುಭಾವ ಲೋಕದ’ ಚೌಕಟ್ಟಿನೊಳಗೇ ವಿಸ್ತರಿಸಿಕೊಂಡರು. ಈಗಲೂ ಆದರ್ಶದ ‘ಭಕ್ತೆ’ ಯರಾಗಿಯೇ ಚರ್ಚಿಸಲ್ಪಡುವ ಇವರು ಸಾಮಾನ್ಯರ ಹಾಗೆ ‘ಐಂದ್ರಿಯ ಲೋಕದ’ ವಿವರಣೆಗಳಿಗೆ ಒಳಗಾಗಲು ಸಾಧ್ಯವಾಗಿಲ್ಲ. ಅಕ್ಕಮಹಾದೇವಿಯ ಕೆಲವು ವಚನಗಳು ದೇಹ ಸಂಬಂಧವೇ ಮೂಲವಾದ ಅನುಭವಗಳನ್ನು ಹೇಳಹೊರಟರೂ ಅದು ಕೊನೆಗೆ ಬಂಧಿಯಾಗುವುದು ಅನುಭಾವ ಲೋಕದ ಸತಿ-ಪತಿ ಸಂಬಂಧದಲ್ಲಿಯೇ.

ಆಧುನಿಕ ಕನ್ನಡ ಕಾವ್ಯ ಸಂದರ್ಭದಲ್ಲಿ ಮಹಿಳಾ ಕಾವ್ಯ ಹಲವು ಮಾದರಿಗಳನ್ನು ಈಗಾಗಲೇ ಮುಂದಿನ ಪೀಳಿಗೆಗೆ ನಿರ್ಮಿಸಿದೆ. ತನ್ನ ಹಿಂದಿನ ಮಹಿಳಾ ಕಾವ್ಯದ ಅಭಿವ್ಯಕ್ತಿ ಸಾಧ್ಯತೆಗಳಿಗಿಂತ ಭಿನ್ನ, ಭಿನ್ನ ನೆಲೆಗಳನ್ನು ಇಂದಿನ ತಲೆಮಾರು ಹುಡುಕುತ್ತಲಿದೆ. ಸ್ವಮೋಹದಿಂದ ದೂರಾದ ಈ ಹುಡುಕಾಟ ಸ್ವಕೇಂದ್ರಿತ ನೆಲೆಯ ಹುಡುಕಾಟದಲ್ಲಿ ತೊಡಗಿದೆ. ಈ ‘ಸ್ವ’ ಕೇಂದ್ರದಲ್ಲಿ ಹೆಣ್ಣಾಗಿ ತನ್ನ ಅನುಭವ ಹಾಗೂ ಅಭಿವ್ಯಕ್ತಿ ಹೇಗಿರಬೇಕು ಮತ್ತು ಹೇಗಿರಬಾರದು ಎಂಬ ಹುಡುಕಾಟಕ್ಕೆ ತೊಡಗಿದೆ.

ಇಂದಿನ ಮಹಿಳಾ ಕಾವ್ಯದ ಮುಂದೆ ಹಲವು ಬಿಕ್ಕಟ್ಟುಗಳಿವೆ. ಹಿಂದೆಂದಿಗಿಂತಲೂ ಹೆಣ್ಣ ನಡೆ-ನುಡಿ-ದೇಹ-ಉಡುಪುಗಳನ್ನು ತೀವ್ರವಾಗಿ ಗಮನಿಸಲಾಗುತ್ತಿದೆ. ಮತ್ತೆ ಮತ್ತೆ ಚರ್ಚೆಗೆ ಎಳೆಯಲಾಗುತ್ತಿದೆ. ಸಮಾಜದಲ್ಲಿ ಒಪ್ಪಿತವಾಗುವ ಹಾಗೆಯೇ ಈ ನಡೆನುಡಿಗಳನ್ನು ಕುಟುಂಬ ವ್ಯವಸ್ಥೆಯಲ್ಲಿ ಕಲಿಸಲಾಗುತ್ತಿತ್ತು ಹಾಗೂ ವೈವಾಹಿಕ ವ್ಯವಸ್ಥೆಯಲ್ಲಿ ಸಲ್ಲುವುದು ಹೇಗೆ ಎಂಬುದರ ಹಿನ್ನೆಲೆಯಲ್ಲಿ ತಯಾರು ಮಾಡಲಾಗುತ್ತಿತ್ತು. ಇದನ್ನು ಮೀರುವ ಅಥವಾ ಪ್ರಶ್ನಿಸುವ ತಿಳುವಳಿಕೆಗಳು ಮೂಡದ ಹಾಗೆ ಎರಕ ಹೊಯ್ದು ಈ ಪುತ್ಥಳಿಗಳನ್ನು ರೂಪಿಸಲಾಗುತ್ತಿತ್ತು. ಮಾದರಿ ವ್ಯಕ್ತಿತ್ವಗಳ ಅಚ್ಚಿನಲ್ಲಿ ಇವರನ್ನು ಬಿಂಬಿಸಲಾಗುತ್ತಿತ್ತು.
ಮಹಿಳಾಕಾವ್ಯ ಆಧುನಿಕ ಕಾವ್ಯದ ಸಂದರ್ಭದಲ್ಲಿ ತನ್ನನ್ನೂ ಸೇರಿಸಿಕೊಂಡಂತೆ ಸಮಾಜದ ವ್ಯವಸ್ಥೆಗಳನ್ನು ಪ್ರಶ್ನಿಸುವುದರ ಮೂಲಕ ಹೊಸ ಚಹರೆ ಪಡೆಯಿತು. ಹೆಣ್ಣನ್ನು ಪುತ್ಥಳಿಗಳಾಗಿ ‘ಇತಿಮಿತಿ’ಗಳ ನಡುವೆ ರೂಪಿಸುವ ಕ್ರಮವನ್ನು ಪ್ರಶ್ನಿಸಿತು.

ನೇರವಾಗಿ ಮಾತನಾಡಲಾರದ ಕಡೆಯಲ್ಲೆಲ್ಲಾ ಪೌರಾಣಿಕ ಪ್ರತಿಮೆಗಳನ್ನು ಧರಿಸಿ ಮಾತನಾಡಿತು. ‘ಅವಳಂತಿದ್ದರೂ ಅವಳಂತಿಲ್ಲ, ತಾನೇ ಬೇರೆ’ – ಎಂಬುದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿತು. ಸಾಧ್ಯವಾದ ಕಡೆಯಲೆಲ್ಲಾ ಮುಖವಾಡ ಧರಿಸುವ, ಮುಖವಾಡದಿಂದ ಹೊರಬರುವ ಪ್ರಯತ್ನವನ್ನು ಮಾಡಿತು. ‘ಆರೋಪಿಸಿಕೊಳ್ಳುವ ಹಾಗೂ ವಿಸರ್ಜಿಸಿಕೊಳ್ಳುವ’ – ಈ ಪ್ರಯತ್ನಗಳು ಕಾವ್ಯ, ಚರಿತ್ರೆಯಲ್ಲಿ ಕ್ರಮಿಸಿದ ಬಹುಮುಖ್ಯ ದಾರಿಗಳಾಗಿವೆ. ಈ ಸಂದರ್ಭದಲ್ಲಿ ಸೀತೆ, ಸಾವಿತ್ರಿ, ಅಹಲ್ಯೆಯರಂತಹ ಪತಿವ್ರತೆಗಳ ಪಾತ್ರಗಳು ಭಂಗಿಸಬೇಕಾದ ಪ್ರತಿಮೆಗಳಾದರೆ ಅಹಲ್ಯೆ, ಶಕುಂತಲೆ, ದ್ರೌಪದಿ, ಯಶೋಧರೆ – ತಮ್ಮ ಮೈ-ಮನಗಳ ಸಂಘರ್ಷಕ್ಕೆ ತೆರೆದುಕೊಂಡ ಜೀವಂತ ಪ್ರತಿಮೆಗಳಾಗಿ ಜೀವ ತಳೆದರು.
ಹೀಗೆ ಯಾವ ಪುರಾಣ, ಮಹಾಕಾವ್ಯಗಳು ತಮ್ಮನ್ನು ರೂಪಿಸಿದ್ದವೋ ಅದರೊಳಗಿಂದಲೂ ಹಾಯ್ದು ಹೊರ ಬಂದು ತಮ್ಮ ಹೊಸ ಚಹರೆಗಳನ್ನು ಕಂಡುಕೊಳ್ಳುವ ಕ್ರಮವಿದಾಗಿತ್ತು. ಹೀಗೆ ಬಂಧನದಿಂದ ಬಿಡುಗಡೆಯ ಕಡೆಗೆ ನಡೆದ ಕಾವ್ಯದ ದಾರಿ ಒಂದು ಚರಿತ್ರೆಯೂ ಹೌದು. ಅವನ ಚರಿತ್ರೆಯನ್ನೇ ಬರೆಯುವ ಕಾಲದಲ್ಲಿ ಅವಳ ಚರಿತ್ರೆಯೂ ಕಾಲಿಡಲಾರಂಭಿಸಿದ್ದು ಎಚ್ಚೆತ್ತ ಮಹಿಳೆಯ ಸಾಧನೆಯಾಗಿತ್ತು. ಈ ನಿರ್ಮಾಣದ ಕಾಲಘಟ್ಟದಲ್ಲಿ ಔದ್ಯೋಗಿಕವಾಗಿ, ಸಂಘಟನಾತ್ಮಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತನ್ನನ್ನು ಸ್ಥಾಪಿಸಿಕೊಳ್ಳುತ್ತಲೇ ತನ್ನ ಹೆಜ್ಜೆಗಳನ್ನು ಊರುವ ಕಾಲದ ಅಗತ್ಯವಾಗಿತ್ತು.

ಮಹಿಳಾ ಕಾವ್ಯದ ನಡೆಯಲ್ಲಿ ಈ ಎಲ್ಲಾ ಸಂಗತಿಗಳು ಬಹುಮುಖ್ಯವೆನಿಸುತ್ತದೆ. ತನ್ನ ಚರಿತ್ರೆಯನ್ನು ರೂಪಿಸಿಕೊಳ್ಳುವ, ತನ್ನನ್ನು ಕಂಡುಕೊಳ್ಳುವ, ಮುಕ್ತ ಮಹಿಳೆಯಾಗಿ ರೂಪುಗೊಳ್ಳುವ ಈ ಸ್ವಾಭಿಮಾನದ ನಡೆ ‘ತಾನು ಜೀವಿಸುವ ಕೆಲವು ಪದರಗಳಲ್ಲಿ’ ಮಾತ್ರ ಸಾಧ್ಯವಾಯಿತು. ಈ ನಡೆಯನ್ನು ಆತಂಕದಿಂದಲೇ ಗಮನಿಸುತ್ತಿರುವ ಸನಾತನಿ ಪುರುಷ ಸಮಾಜ ತಕರಾರುಗಳನ್ನು ಎಬ್ಬಿಸುತ್ತಲೇ ಹಲವು ಹುನ್ನಾರಗಳನ್ನು ರೂಪಿಸಿತು.
ಕೇವಲ ಮತಗಳಿಕೆಯ ರಾಜಕಾರಣದಿಂದಾಗಿ ಎಂಬಂತೆಯೇ ಕಾಣುವ “ಹಳೆಯ ಪಳೆಯುಳಿಕೆಗಳನ್ನು ಸಮಾಧಿಯಿಂದ ಹೊರತೆಗೆದು ಪುನರ್ ಪ್ರತಿಷ್ಠಾಪಿಸುವ” ಯೋಜನೆಗಳಲ್ಲಿ ಹೆಣ್ಣು ಸಹ ಒಂದು ಭಾಗವಾದಳು. ಅವಳ ಮುಟ್ಟು-ಮೈಲಿಗೆಗಳು, ನಡೆ-ನುಡಿ-ಉಡುಪುಗಳು ಹಿಂದೆಂದಿಗಿಂತಲೂ ಚರ್ಚಿತವಾದವು. ದೇವಸ್ಥಾನ ಪ್ರವೇಶ ನಿಷೇದಿಸುವ, ವೈಯಕ್ತಿಕ ಜೀವನದ ಆಗುಹೋಗುಗಳಿಗೆ ಕೈ ಹಾಕುವ ಅನಧಿಕೃತ ವಕ್ತಾರರು ಸಮಾದಿಯಿಂದ ಮೇಲೇಳತೊಡಗಿದರು. ಒಂದು ಕಡೆ ಕುಟುಂಬದ ಚೌಕಟ್ಟುಗಳು ಇನ್ನೊಂದು ಕಡೆ ಈ ವಕ್ತಾರರು ಒಡ್ಡುವ ಚೌಕಟ್ಟುಗಳು ಹೆಣ್ಣು ಮೀರಲೇಬೇಕಾದ ಗಡಿಗಳಾಗಿವೆ.

ಈ ಎಲ್ಲಾ ಮೇಲಿನ ವಿಷಯಗಳನ್ನು ಪ್ರಸ್ತಾಪಿಸುವುದರ ಅಗತ್ಯ ಮಾಧವಿ ಭಂಡಾರಿಯವರ ಕಾವ್ಯದ ಹಿನ್ನೆಲೆಯಲ್ಲಿ ಖಂಡಿತವಾಗಿಯೂ ಇದೆ. ಮಾಧವಿ ತಮ್ಮ ಕಾವ್ಯದಲ್ಲಿ ಈ ಎಲ್ಲಾ ವಿಚಾರಗಳನ್ನು ಅಪರೋಕ್ಷವಾಗಿ ಚರ್ಚೆಗೆ ಒಡ್ಡುವುದರಿಂದ ಈ ಪ್ರಸ್ತಾಪ ಅಗತ್ಯವಾಗಿತ್ತು. ಕಾವ್ಯ ಕೇವಲ ಇರುವಿಕೆಯನ್ನು ಪ್ರಸ್ತಾಪಿಸದೆ ಆಗುವಿಕೆಯ ಭಾರವನ್ನು ಹೊರಬೇಕಾಗುತ್ತದೆ. ಬಂಡಾಯ ಸಂಘಟನೆಯ ಪ್ರಗತಿಪರ ಚಿಂತಕರೂ, ಹೋರಾಟಗಾರರೂ, ಬರಹಗಾರರೂ ಆಗಿದ್ದ ಆರ್.ವಿ. ಭಂಡಾರಿಯವರ ಮಗಳಾದ ಮಾಧವಿಗೆ ಮಹಿಳಾ ಕಾವ್ಯದ ಹಿನ್ನೋಟ ಮತ್ತು ಮುನ್ನೋಟಗಳ ಸ್ಪಷ್ಟತೆಯಿದೆ. ಈಗಾಗಲೇ ಎರಡು ಕಾವ್ಯ ಸಂಕಲನಗಳನ್ನು ಪ್ರಕಟಿಸಿರುವ ಮಾಧವಿಯವರ ಹಿಂದಿನ ಕವಿತೆಗಳು ಹಲವು ಕಾರಣದಿಂದಾಗಿ ಗಮನ ಸೆಳೆದಂತವಾಗಿವೆ. ಪ್ರಸ್ತುತ ಅರಾಜಕೀಯ ಅಸಮಾನತೆಗಳು ಬೇರೆ ಬೇರೆ ರೂಪದಲ್ಲಿ ತಲೆಯೆತ್ತುತ್ತಿರುವ ಅಸಹಿಷ್ಣುತೆಯ ಸಂದರ್ಭದಲ್ಲಿ ‘ಮೌನಗರ್ಭದ ಒಡಲು’ ಹಲವು ಕಾರಣದಿಂದಾಗಿ ಬಹುಮುಖ್ಯ ಸಂಕಲನವಾಗಿದೆ.

‘ಮೌನ ಗರ್ಭದ ಒಡಲು’ – ಪ್ರಸ್ತುತ ಪ್ರಕ್ಷುಬ್ಧ ಭಾರತಕ್ಕೆ ಹಿಡಿದ ಕನ್ನಡಿಯಾಗಿದೆ. ಮಹಿಳೆಯನ್ನು ಮಾತೆ ಎಂದೇ ಕರೆಯಲಾಗುವ ನಮ್ಮ ದೇಶದಲ್ಲಿ ಮಹಿಳೆ ಹಲವು ಆಘಾತಗಳ ನಡುವೆಯೂ ಬದುಕುವುದಕ್ಕಾಗಿ ಹಠತೊಟ್ಟು ಕುಳಿತ ‘ಭಗ್ನದೇವಿಯ’ ಮೂರ್ತಿಯಾಗಿದ್ದಾಳೆ. ಅವಳ ಮುಖ, ಮೊಲೆಗಳನ್ನು ವಿಕಾರವಾಗಿ ಕೆತ್ತಿ ವಿಚ್ಛಿನ್ನ ವಿಗ್ರಹವಾಗಿಸಿದರೂ ತನ್ನ ನಿಲುವನ್ನು ಬದಲಿಸದ ಹಠಯೋಗಿಯಂತೆ ಅವಳ ಅಸ್ತಿತ್ವವಿದೆ. ಈ ಎಲ್ಲಾ ಭಗ್ನತೆಗಳನ್ನು ಮಾಧವಿ ತಮ್ಮ ಕವಿತೆಯಲ್ಲಿ ಹಿಡಿದಿಡುತ್ತಾರೆ.

‘ನಿರ್ಭಯಾ’ ಪ್ರಕರಣವನ್ನು ಒಳಗೊಂಡಂತೆ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಹೆಣ್ಣು ದೇಹದ ಬಗ್ಗೆ, ದೇಹದ ಅಂಗಾಂಗಗಳ ಬಗ್ಗೆ ಇರುವ ಕುತೂಹಲದ ಬಗ್ಗೆ ಕೈ ತೋರುತ್ತವೆ. ಮಾಧ್ಯಮಗಳು ಮುಚ್ಚಿಟ್ಟ ರಕ್ಷಿತ ಲೈಂಗಿಕ ಜಗತ್ತನ್ನು ತೆರೆದು ರೋಚಕವಾಗಿ ತೋರುತ್ತಿರುವ ಜತೆಗೆ ವಿವೇಚನೆಯ ನಡೆಯ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಸುಲಭದಲ್ಲಿ ಕೈಗೆ ಸಿಗುವ ಲೈಂಗಿಕ ತುಣುಕುಗಳು ಹದಿಹರೆಯದವರ ಕುತೂಹಲ ಕೆರಳಿಸಿ ತಪ್ಪು ಹೆಜ್ಜೆ ಇಡುವಂತೆ ಮಾಡುತ್ತವೆ. ಹದಿಹರೆಯದ ಕುತೂಹಲದ ಕಣ್ಣುಗಳಿಗೆ ಸೆಕ್ಸ್ ಬಗ್ಗೆ ಸರಿಯಾಗಿ ಸಿಗದ ತಿಳುವಳಿಕೆಗಳು ಇದಕ್ಕೆ ಕಾರಣವಾಗಿವೆ. ಗಂಡು ಹುಡುಗರ ಮಾತಂತಿರಲಿ ಹೆಣ್ಣು ಮಕ್ಕಳಿಗೇ ತಮ್ಮ ದೇಹದ ಬಗ್ಗೆ, ಅಂಗಾಂಗಗಳ ಬಗ್ಗೆ, ಗಂಡು-ಹೆಣ್ಣಿನ ಸಂಬಂಧದ ಬಗ್ಗೆ ಸರಿಯಾದ ತಿಳುವಳಿಕೆಗಳಿರುವುದಿಲ್ಲ.

ಮಾಧವಿ ಭಂಡಾರಿ ಅವರ ಹಲವು ಕವಿತೆಗಳು ಇಂತಹ ಸಂದರ್ಭದಲ್ಲಿ ದೇಹವೇ ಮಾನದಂಡವಾದ, ಸ್ಪರ್ಶವೇ ಮೂಲವಾದ ಅಸ್ಪೃಶ್ಯರೆಂದೇ ಪರಿಗಣಿಸಲ್ಪಟ್ಟಿದ್ದ ಸಂಗತಿಗಳನ್ನು ಈ ಜನಾಂಗಕ್ಕೆ ಪರಿಚಯಿಸುವ ರೀತಿಯಲ್ಲಿ ಆಪ್ತವಾಗಿ ಮಾತನಾಡುತ್ತಾರೆ. ಸೃಷ್ಟಿಯ ಮೂಲ ಹೆಣ್ಣು. ಅವಳ ತೋಳು-ತೊಡೆಗಳೇ ತೂಗುವ ತೊಟ್ಟಿಲು. ಯಾವ ಗರ್ಭ, ಯೋನಿಯಿಂದ ಹೊರ ಬಂದಳೋ ಅದರ ಬಗ್ಗೆ ಪ್ರಾಥಮಿಕ ಅರಿವೂ ಆ ಹುಡುಗಿಗೆ ಇರುವುದಿಲ್ಲ. ಸೃಷ್ಟಿಗೆ ಮೂಲವಾದ ತನ್ನಲ್ಲಿರುವ ಗರ್ಭ, ಯೋನಿಗಳ ಬಗ್ಗೆ ತಿಳುವಳಿಕೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಸಂಕಲನದ ‘ಪರದೆಯ ಪಂಜರ’ –ವೈಜ್ಞಾನಿಕವಾಗಿ, ನೈತಿಕವಾಗಿ ಜವಾಬ್ದಾರಿ ಹೊತ್ತ, ತಿಳುವಳಿಕೆ ಹೇಳುವ ಸುಂದರ ಕವಿತೆ. ರಕ್ತ ಮಜ್ಜೆ ಮಾಂಸಗಳ ಗರ್ಭದಿಂದಲೇ ಅವತರಿಸಿ ಬಂದಿದ್ದರೂ, ತನ್ನಲ್ಲೇ ಇರುವ ಯೋನಿ, ಗರ್ಭದ ತಿಳುವಳಿಕೆ ಇಲ್ಲದೆ ಇರುವುದು ಮುಗ್ಧತೆಯ ಸಂಕೇತ. ಈ ಮುಗ್ಧತೆಯೇ ಅವಳ ಮೇಲಿನ ದೌರ್ಜನ್ಯಕ್ಕೆ ಹಾಸಿಗೆ ಹಾಸಿ ಕೊಡುತ್ತದೆ.

ಕಂದ
ರಕ್ತ ಮಜ್ಜೆಗಳ ಗರ್ಭದಲ್ಲೇ
ಅಂಕುರಿಸಿದ್ದರೂ
ರಕ್ತದ ಬಣ್ಣ ಕಂಡಿರಲಿಲ್ಲ
ರಕ್ತ ಸೋರುವ ಜಾಗವೊಂದು
ತನ್ನಲ್ಲೂ ಇದೆ ಎಂದು
ಸುತಾರಾಂ ತಿಳಿದಿರಲಿಲ್ಲ…

ಈ ಮುಗ್ಧತೆಗೆ ಲೈಂಗಿಕ ತಿಳುವಳಿಕೆ ಇಲ್ಲದಿರುವ ಅಮಾಯಕತೆಯಿದ್ದು, ತನ್ನಲ್ಲಿಯೇ ವಾಸನೆಯಿಲ್ಲದೆ ಅಡಗಿರುವ ಕಾಮವೆಂಬ ಸರ್ಪದ ಅರಿವು ಇಲ್ಲದಿರುವುದು ಕಾರಣವಾಗಿದೆ. ಇದು ಹುಡುಗಿಯರ ಪಾಡಾದರೆ ಹದಿಹರೆಯದ ಹುಡುಗರಿಗೆ ಹೆಣ್ಣಿನ ದೇಹದ ಬಗ್ಗೆ ಇರುವ ಅಪರಿಮಿತವಾದ ಕುತೂಹಲ ಇಂದಿನ ದುರಂತಗಳ ಮತ್ತೊಂದು ಕಾರಣವಾಗಿದೆ. ಈ ಕುತೂಹಲವೇ ಹದಿವಯಸ್ಸಿನಲ್ಲೇ ‘ಅತ್ಯಾಚಾರಿಗಳೆಂಬ’ ಹಣೆಪಟ್ಟಿ ಕಟ್ಟಿಕೊಳ್ಳುವಂತೆ ಮಾಡಿವೆ. ಇತ್ತೀಚೆಗಂತೂ ಹುಡುಗರೇ ಭಾಗಿಗಳಾಗಿರುವ ಅತ್ಯಾಚಾರದ ಪ್ರಕರಣಗಳನ್ನು ಹೆಚ್ಚು ಹೆಚ್ಚು ಕೇಳುತ್ತಿದ್ದು, ಇದಕ್ಕೆಲ್ಲಾ ಕಾರಣ ಲೈಂಗಿಕತೆಯ ಬಗೆಗಿನ ಅವಜ್ಞತೆ ಹಾಗೂ ಕುತೂಹಲ. ಅವರನ್ನು ಕಾಡುವ ಕುತೂಹಲ ತಣಿಯದ ರೀತಿಯ ಲೈಂಗಿಕ ವಿಜ್ಞಾನದ ಮಾಹಿತಿಗಳು ಅವರಿಂದ ದೂರವೇ ಉಳಿದಿರುವುದು ಈ ಎಲ್ಲಾ ದುರಂತಗಳಿಗೆ ಕಾರಣವಾಗಿವೆ.

ಇದರ ಜೊತೆಜೊತೆಯಲ್ಲೇ ಪಾಠ ಹೇಳುವ ಶಿಕ್ಷಕರು, ಸಂಬಂಧಿಗಳು, ಮನೆಗೆ ಬರುವ ಹಿತೈಷಿಗಳು ತಿಳಿಯದ ಹೆಣ್ಣುಮಕ್ಕಳ ಜೊತೆಯಲ್ಲಿ ನಡೆದುಕೊಳ್ಳುವ ರೀತಿ, ಲೋಕದ ಸಂಬಂಧಗಳ ಬಗ್ಗೆಯೇ ಅಪನಂಬಿಕೆ ಹುಟ್ಟಿಸುತ್ತದೆ. ಇದರ ಜೊತೆಯಲ್ಲಿ ಹಲವು ಸಂದರ್ಭಗಳಲ್ಲಿ ಕಾಯಬೇಕಾದ ತಂದೆಯೇ ಭಕ್ಷಕನಾಗುವ ವಿಪರ್ಯಾಸಗಳು ಉಂಟು. ಹೀಗಾಗಿಯೇ ಭೂಮಿಯಿಂದ ಆಕಾಶಕ್ಕೆ ನೆಗೆದ ಕಲ್ಪನಾಚಾವ್ಲಾಳನ್ನು ಪರಿಚಯಿಸುವ ಹಾಗೆಯೇ ಅಂಟಿಕೊಂಡ ಸಂಬಂಧಗಳು ಮಾಡುವ ಲೈಂಗಿಕ ಶೋಷಣೆಗಳನ್ನೂ ತಿಳಿಸಿ ಕೊಡಬೇಕಾಗುತ್ತದೆ.

ನಾನು ಪಾಠ ಮಾಡುತ್ತೇನೆ
ನಿನ್ನ ದೇಹದ
ಯಾವ ಯಾವ ಭಾಗಗಳನ್ನು
ಮುಟ್ಟಬಹುದು
ಯಾವ ಯಾವ ಭಾಗಗಳನ್ನು
ಮುಟ್ಟಬಾರದು ಎಂದು…

ಹೆಣ್ಣೆಂದರೆ ಒಂದು “ಜೊತೆ ಮೆತ್ತನೆ ಮೊಲೆ, ಒಂದು ಯೋನಿ, ಒಂದು ಗರ್ಭಾಶಯ” – ವಿಕೃತ ಮನಸ್ಸು ಅರ್ಥ ಮಾಡಿಕೊಳ್ಳುವುದು ಹೀಗೆಯೇ. ಹೀಗಾಗಿ ಯಾವುದನ್ನು ಮುಖ್ಯವೆಂದು ಭಾವಿಸಲಾಗುತ್ತದೋ ಆ ಚಿತ್ರವನ್ನು ಹೊಡೆದು ಹಾಕಲು ಅವುಗಳನ್ನೇ ಕುರಿತು ಭಿಡೆಯಿಲ್ಲದೆ ಮಾತನಾಡಬೇಕಾಗುತ್ತದೆ. “ಮೊಲೆಯೆರಡೆ ಸಾಕು” – ಎಂಬ ಕವಿತೆ ಹೆಣ್ಣಿಗೆ ನಿಜವಾದ ಆಯುಧ ಯಾವುದೆಂದರೆ ಹೊರುವ ಗರ್ಭ ಹಾಗೂ ಹಾಲು ಉಣಿಸುವ ಮೊಲೆಗಳೆಂದು ಕಟ್ಟಿಕೊಡುತ್ತದೆ.  ಶಿವನಾದರೆ ಹಣೆಗಣ್ಣು-ತ್ರಿಶೂಲ, ಕೃಷ್ಣನಾದರೆ ಮುರಳಿ-ಚಕ್ರ, ಬೇಕಾದಂತೆ ಬೆಳೆದು ದಾನವರನ್ನು ಹತ್ತಿಕ್ಕಬಲ್ಲ ವಾಮನನ ಪಾದಗಳು – ಇವು ದೇವತೆಗಳ ಅಸ್ತಿತ್ವ ಹಾಗೂ ಐಡೆಂಟಿಟಿ. ಆದರೆ ಹೆಣ್ಣಿಗೆ ಯಾವುದು ಅಸ್ತಿತ್ವನ್ನು ಕಟ್ಟಿಕೊಡುತ್ತದೆ? ಎಲ್ಲ ನುಂಗಿ ನೊಣೆಯಬಲ್ಲ ಅಸ್ತ್ರದೆದುರು ಜೀವ ಪೊರೆಯುವ ತಾಯ್ತನದ ಸಂಕೇತವಾದ ಹಾಲು ತುಂಬಿದ ಮೊಲೆಗಳೇ ಅಸ್ತ್ರಗಳು ಎಂಬ ಚಿತ್ರಣ ವಿವೇಕಯುತವಾದದ್ದು. ಕಾಮದ ಸಂಕೇತಗಳೇ ತಾಯ್ತನದ ಸಂಕೇತವಾಗಬೇಕಾದ, ಇದನ್ನು ಅನಿವಾರ್ಯವಾಗಿ ಅರಿಯಬೇಕಾದ ಗಂಡು ಜಗತ್ತಿನ ಚಿತ್ರವನ್ನು ಈ ಕವಿತೆ ಎತ್ತಿ ಹಿಡಿಯುತ್ತದೆ.

ಇದುವರೆಗೂ ಹೆಣ್ಣನ್ನು ಕುರಿತು ಒಂದು ದಿಕ್ಕಿನಲ್ಲಿಯೇ ಯೋಚಿಸುತ್ತಿದ್ದ ಗಂಡು ಕಾಣ್ಕೆ ಬದಲಾಗಬೇಕಿದ್ದು ಅದು ಪೊರೆವ ತಾಯಿಗೆ ಮಣಿವ ಅಧೀನ ಜಗತ್ತನ್ನು ಕುರಿತು ಚಿಂತಿಸಬೇಕಾಗಿದೆ. ಹೀಗಾಗಿ ಗಂಡಸರು, ಗಂಡು ದೇವತೆಗಳು ರಕ್ಷಣೆಗಾಗಿ ಹಲವು ಅಸ್ತ್ರಗಳನ್ನು ಹಿಡಿದರೂ ‘ಹೆಣ್ಣಿಗೆ ತಾಯ್ತನವೇ’ ಪೊರೆಯುವ ಅಸ್ತ್ರವಾಗಿದೆ. ಈ ಮಾತು “ಪ್ರಕೃತಿಯ ಅದ್ಭುತವಾದ ಸೃಷ್ಟಿಕ್ರಿಯೆಗೆ ಪುರುಷ ಮಣಿಯಲೇಬೇಕು” ಎಂಬ ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸಿದೆ.

ಮಾಧವಿ ಭಂಡಾರಿ ಕೆರೆಕೋಣ

ಗಂಡುಲೋಕ ಅರಿಯದ ಹೆಣ್ಣಿನ ನಿಸರ್ಗದತ್ತ ‘ನೋಯುವಿಕೆಯ’ ಜಗತ್ತೊಂದನ್ನು ಮಾಧವಿ ‘ನೋಯದವರಿಗೇನು ಗೊತ್ತು ನೊಂದವರಿಗಲ್ಲದೆ’ ಕವಿತೆಯಲ್ಲಿ ಕಟ್ಟಿಕೊಡುತ್ತಾರೆ. ಮುಟ್ಟಿನ ಬೇನೆ, ಸೀರೆ ಉಡುವ ತೊಡಕು, ಅಡುಗೆಮನೆಯಲ್ಲಿ ಕತ್ತರಿಸುತ್ತಾ- ಕತ್ತರಿಸಿಕೊಳ್ಳುವ, ಸುಡುತ್ತಾ-ಸುಟ್ಟುಕೊಳ್ಳುವ, ಹೆರುತ್ತಾ ಯಾತನೆ ಅನುಭವಿಸುವ, ಕರುಳ ಕಂದನನ್ನು ತೊಟ್ಟಿಲು ತೂಗುತ್ತಾ ನೋಯುವ, ಮೊಲೆ ಹಾಲು ಉಣಿಸುತ್ತಲೇ ರಕ್ತ ಸುರಿಸುವ – ಈ ಇಬ್ಬಗೆಯ ಯಾತನೆ ಗಂಡು ಜಗತ್ತು ಅರಿಯದ ಸಂಗತಿ. ಹೀಗಿದ್ದಾಗ ಸಂಗಾತಿಯ ನೋವನ್ನೇ ಅರಿಯದವ ಜಗತ್ತಿನ ನೋವಿನ ಬಗ್ಗೆ ಎಷ್ಟರಮಟ್ಟಿಗೆ ಮಾತನಾಡಬಲ್ಲ. ನೋಯದವರಿಗೇನು ಗೊತ್ತು ನೊಂದವರ ನೋವು ಎಂಬ ಪ್ರಶ್ನೆ ಅವನು ತಂದೆಯಾಗಿರಲಿ, ಗಂಡನಾಗಿರಲಿ, ಸ್ನೇಹಿತನಾಗಿರಲಿ ಸಲ್ಲುವಂತದ್ದೇ ಆಗಿದೆ.

ಇಂತಹ ಹಲವು ಯಾತನೆ, ಹೆಣ್ಣು ದೇಹವೆಂಬ ವಿಸ್ಮಯಗಳ ಕಡೆಗೆ ಮಾಧವಿ ಕಣ್ಣು ಹರಿಸುವುದಲ್ಲದೆ ಸಂವಾದಕ್ಕೂ ತೊಡಗುತ್ತಾರೆ. ಹೆಣ್ಣು ದೇಹ ಮತ್ತು ಹೆಣ್ಣು ಭಾಷೆ ತೀವ್ರ ಚರ್ಚೆಗೆ ಒಳಗಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮಾಧವಿಯವರ ಈ ಸಂಕಲನ ಇಂತಹ ಹಲವು ಚರ್ಚೆಗಳನ್ನು ಕವಿತೆಯ ಮೂಲಕ ಹುಟ್ಟು ಹಾಕುತ್ತವೆ. ಚರಿತ್ರೆಯೊಂದಿಗೆ ಹೆಣ್ಣಿನ ನಡಿಗೆ, ತನ್ನ ನಡೆಯನ್ನು ವಿಸ್ತರಿಸಿಕೊಳ್ಳುವ ಕ್ರಮ ‘ಇನ್ನಾದರೂ ಮುಂದಿನ ದಾರಿ ಸರಿ ಹೋದೀತೆ’ ಎಂಬ ನಿರೀಕ್ಷೆಯನ್ನು ಒಳಗೊಂಡಿದೆ. ಇದುವರೆಗೂ ಚರಿತ್ರೆ ಇಲ್ಲದಿದ್ದವರಿಗೆ, ಒಂದು ವೇಳೆ ಅದು ಇದೆ ಎನ್ನುವುದಾದರೆ ಅದು ಪುರುಷ ಕಟ್ಟಿದ ಚರಿತ್ರೆಯಾಗಿದೆ. ಅದರೊಂದಿಗೆ ನಡೆದವರಿಗೆ ತನ್ನದೇ ಹೊಸಚರಿತ್ರೆ ಕಟ್ಟಿಕೊಳ್ಳುವುದರ ಜೊತೆಗೆ ಭಾಷೆ, ಅಭಿವ್ಯಕ್ತಿ ಕ್ರಮದ ಬಗ್ಗೆಯೂ ಆಲೋಚಿಸುವ ಅನಿವಾರ್ಯತೆಯಿದೆ. ಇದುವರೆಗೂ ಮುಚ್ಚಿದ ಹೆಣ್ಣು ಲೋಕದ ಅನಾವರಣವನ್ನು ಸಮಾಜಕ್ಕೆ ಒಪ್ಪಿತವಾಗುವಂತೆಯೂ, ಅಲ್ಲಲ್ಲಿ ಪ್ರಶ್ನಿಸುವಂತೆಯೂ, ಅಲ್ಲಲ್ಲಿ ಮುಖಾಮುಖಿಯಾಗುವಂತೆಯೂ ಮಾಡಲಾಗಿದೆ.. ಇಬ್ಸನ್ನನ ಡಾಲ್ಸ್‌ ಹೌಸ್‍ನ ನೋರಾ ಕದ ತೆಗೆದು ಹೊರಬಂದು ‘ತಾನು ಕಟ್ಟಿದ ಮನೆಯಿಂದ’ ಬಿಡುಗಡೆ ಹೊಂದುವಂತೆ ಚಿತ್ರಿತವಾಗಿರುವುದು ನಿಧಾನವಾದ ಆದರೆ ದಿಟ್ಟವಾದ ನಿರ್ಧಾರವಾಗಿತ್ತು.
‘ಗಂಡಿಗೆ ಹೆಣ್ಣು ಮಾಯೆ’ ಎಂಬ ಕವಿತೆಯಲ್ಲಿ ಗಂಡಿನ ಲೈಂಗಿಕ ಕುತೂಹಲಗಳು ಎಷ್ಟು ಕೇಡಿನಿಂದ ಕೂಡಿರುತ್ತವೆಂದರೆ ಅದು ಹಸುಗೂಸಿರಲಿ, ಅದು ಮಲಭಾದೆಗೆ ಕುಳಿತ ಹಸುಳೆಯಾಗಿರಲಿ, ಹದಿನಾರರ ಹರೆಯವಾಗಿರಲೀ, ಕೊನೆಗೆ ಎಪ್ಪತ್ತರ ಮುದುಕಿಯಾಗಲೀ – ನೋಡುವ ನೋಟ ಒಂದೇ ಆಗಿರುತ್ತದೆ. ಇದನ್ನು ಮಾಧವಿ ಎಷ್ಟು ಚೆನ್ನಾಗಿ ಅಭಿವ್ಯಕ್ತಿಸುತ್ತಾರೆ ಎಂದರೆ ಅತ್ಯಾಚಾರಕ್ಕೆ ಪೂರ್ವಾಪರ ಎಂಬುದಿಲ್ಲ. ಜಾತಿ-ಮತ-ಲಿಂಗಗಳೆಂಬ ಅಸಮಾನತೆಗಳಿಲ್ಲ, ಎಲ್ಲವೂ ಭೋಗಿಸಲಿಕ್ಕಷ್ಟೇ ಇರುವುದು ಎಂಬ ಪುರುಷನ ಉದಾರತೆ ಕಂಡು ಬರುತ್ತದೆ. ಸ್ವತಃ ದೇವೇಂದ್ರನೆ ದೇವಲೋಕದಿಂದ ಭೂಲೋಕಕ್ಕೆ ಅಹಲ್ಯೆಯನ್ನು ಕೂಡಲು ಆಕೆಯ ಪತಿ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಹೆಣ್ಣು ಭೋಗಿಸುವ ಸರಕು ಎಂಬ ತೀರಾ ಸಾಮಾನ್ಯವಾದ ನಂಬಿಕೆಗಳು ಅವಳ ಆತ್ಮವನ್ನು ಘಾತಿಸುತ್ತವೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿಯೇ ಅಲಕ್ಷಿಸಲಾಯಿತು.

ನಮ್ಮಲ್ಲಿ ಹಿರಿಕಿರಿದೆನ್ನುವ ಭೇದಭಾವವಿಲ್ಲ
ಆತಿಥ್ಯಕ್ಕೂ ಅತ್ಯಾಚಾರಕ್ಕೂ
ಇಲ್ಲವೇ ಇಲ್ಲ ಜಾತಿ ಧರ್ಮ ತರತಮ ಭಾವ
ಎಲ್ಲರೂ ಸಮಾನರೆ ರಕ್ಷಕರೂ ಭಕ್ಷಕರೂ.
ಆತ್ಮೀಯರನ್ನು, ಹೆತ್ತವರನ್ನು ಬಲಿತೆಗೆದುಕೊಂಡ ಸಾವು ಅಷ್ಟು ಸುಲಭವಾಗಿ ಮರೆಯುವಂತದ್ದಲ್ಲ. ಗತಿಸಿಹೋದ ತಂದೆ-ತಾಯಿಯ ಕಾಡುವ ನೆನಪನ್ನು ಇಲ್ಲಿನ ಹಲವು ಕವಿತೆಗಳು ಕಟ್ಟಿಕೊಟ್ಟಿವೆ. ಹಿತಮಿತವಾದ ಪದಗಳ ಬಳಕೆ, ಹೇಳುವಲ್ಲಿನ ನಿರ್ದಿಷ್ಟತೆ, ಸಾವಿನೊಂದಿಗೆ ಅಂತರವಿಟ್ಟುಕೊಂಡೇ ಆಡುವ ಮಾತು – ಇವೆಲ್ಲವೂ ಸಲೀಸು, ಸ್ವಕೀಯವೆನಿಸುತ್ತವೆ.
ಹೌದು
ಅಮ್ಮನೆಂದರೆ ನಿಗಿನಿಗಿ ಕೆಂಡದ ಮೇಲೆ
ಉಬ್ಬುಬ್ಬಿ ಬರುವ ರೊಟ್ಟಿ – (ಅಮ್ಮನೆಂದರೆ)

‘ಮನೆಯ ದೀಪಗಳೆಲ್ಲ
ದೂರವಾದ ಮೇಲೆ
ದೀಪಾವಳಿ ಎಲ್ಲಿ?
ಅಂದು ಅಂದೆ ನೀನು
ಇಂದು ಕೇಳುತ್ತೇನೆ ನಾನು
‘ಹೆತ್ತ ಜೀವ ದೂರವಾದ ಮೇಲೆ
ಇನ್ನೆಲ್ಲಿಯ ದೀಪಾವಳಿ?” – (ಯಾತ್ರೆ ಮುಗಿಸಿದ ಅಪ್ಪ)

 

ಪ್ರಗತಿಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ, ಉಪನ್ಯಾಸಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಮಾಧವಿಯ ನಡೆ-ನುಡಿಗಳು ಒಂದಾಗಿಯೇ ತೋರುವುದರಿಂದ ಇಲ್ಲಿನ ಕಾವ್ಯ ನಂಬಲು, ಓದಲು ಅರ್ಹವಾದದ್ದು. ಹೀಗಾಗಿಯೇ ಘರ್‌ ವಾಪಸಿಯ ಗದ್ದಲಗಳನ್ನು, ಮತಾಂತರಿಗಳ ಅಹವಾಲನ್ನು ಕವಿತೆಯಲ್ಲಿ ಮೂಡಿಸುವುದಕ್ಕೆ ಸಾಧ್ಯವಾಗಿದೆ. ಮಹಿಳಾ ಕಾವ್ಯದ ಅಥವಾ ಮಹಿಳೆಯರ ಬದುಕಿನ ಒಂದು ಅನಿವಾರ್ಯ ಅಂಗ ಅಡುಗೆಮನೆಯಾಗಿದ್ದು, ಏಕಕಾಲದಲ್ಲಿ ಅದು ಪರಿಭಾವಿಸಿಕೊಂಡಂತೆ ಬಂಧನ, ಬಿಡುಗಡೆಯ ಸಾಧ್ಯತೆಗಳನ್ನು ಉಂಟು ಮಾಡುತ್ತದೆ. ಅಲ್ಲಿಯೇ ಪತ್ರೊಡೆ ಬೇಯುವ ಸೊಗಸು, ಹೊದ್ಲು ಅರಳುವ ಪರಿ, ದೋಸೆ ಕವಿತೆಯಂತೆ ಬೇಯುವ ರೀತಿ ಸ್ವಾದ, ಪರಿಮಳದೊಂದಿಗೆ ಬಿಚ್ಚಿಕೊಳ್ಳುತ್ತದೆ.

ಎಚ್. ಎಲ್. ಪುಷ್ಪ

ಮಾಧವಿ ಭಂಡಾರಿಯವರ ‘ಮೌನ ಗರ್ಭದ ಒಡಲು’ ಆರಂಭದಲ್ಲಿಯೇ ಹೇಳಿದಂತೆ ಇಂದಿನ ಪ್ರಕ್ಷುಬ್ಧ ಭಾರತದ ಚಿತ್ರಣವನ್ನು ಒಡಲಲ್ಲಿ ಇಟ್ಟುಕೊಂಡ ಸಂಕಲನ. ಯಾವುದೇ ವಾದಗಳಿಗೆ ಅಂಟಿಕೊಳ್ಳದೆ ಮಹಿಳೆಯ ಬಿಡುಗಡೆಯನ್ನು ಕವಿತೆಯ ಮೂಲಕ ಯೋಚಿಸುವ ಕ್ರಮ ಕನ್ನಡ ಕಾವ್ಯಕ್ಕೆ ಹೊಸದಾಗಿದೆ. ಭಗ್ನಗೊಂಡ ದೇವತೆ ಅಡಗಿದ ಸಾಮಾನ್ಯ ಮನೆಯೊಂದರ ಚಿತ್ರಣ ಇಲ್ಲಿದೆ. ಆ ದೇವತೆಯ ಅವಯವಗಳು ಮಾಂಸ-ಮೂಳೆ-ಮಜ್ಜೆಗಳಿಂದ ಕೂಡಿರುವುದರಿಂದಲೇ ಅವಳ ಮೇಲೆ ನಡೆಯುವ ದಾಳಿಯನ್ನು ಇದೊಂದು ದೇಹಕ್ಕೆ ಅಂಟಿಕೊಂಡ ಅಪಮಾನವೆನ್ನುವಂತೆ ಕಟ್ಟಿಕೊಡಲಾಗಿದೆ. ಇಲ್ಲಿನ ಕವಿತೆಗಳು ಮಾಧವಿಯು ಕಂಡ ಸಮಕಾಲೀನ ಜಗತ್ತನ್ನು ಅನಾವರಣಗೊಳಿಸುವುದಲ್ಲದೆ ಮನೆಯೊಳಗಿನ, ಗರ್ಭಗುಡಿಯೊಳಗಿನ ದೇವತೆಗಳಿಗೆ ಸಿಗಬೇಕಾದ ಬಿಡುಗಡೆ ಹಾಗೂ ರಕ್ಷಣೆಯ ಬಗ್ಗೆ ಮತ್ತೆ ಮತ್ತೆ ಆಲೋಚಿಸುವಂತೆ ಮಾಡುತ್ತವೆ. ಬಹಳ ವರ್ಷಗಳ ನಂತರ ಸಂಕಲನ ಹೊರತರುತ್ತಿರುವ ಮಾಧವಿ ಹೆಣ್ಣ ದೇಹ, ಹೆಣ್ಣ ಭಾಷೆಯ ಬಗ್ಗೆ ಹೊಸ ತಿಳುವಳಿಕೆ ಮೂಡಿಸುವಂತೆ ಕಾವ್ಯದ ಮುಖೇನ ಮಾತನಾಡುತ್ತಿದ್ದು ಈ ಪ್ರಯತ್ನಕ್ಕೆ ಅಭಿನಂದನೆಯನ್ನು ಹೇಳಬಯಸುತ್ತೇನೆ.

ಎಚ್. ಎಲ್. ಪುಷ್ಪ
ಬೆಂಗಳೂರು

 

 

Donate Janashakthi Media

Leave a Reply

Your email address will not be published. Required fields are marked *