- ಸ್ವತಂತ್ರ ಭಾರತ ಒಕ್ಕೂಟಕ್ಕೆ ಸೇರಲು ಜಯಚಾಮರಾಜೇಂದ್ರ ಒಡೆಯರು ಒಪ್ಪಿದ್ದರು ಎನ್ನುವುದು ತಪ್ಪು
1947ರ ಆಗಸ್ಟ್ 15ರ ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ÷್ಯ ಬಂದರೂ ಸಹ ಕೆಲವು ದೇಶೀಯ ಸಂಸ್ಥಾನಗಳು ಸ್ವತಂತ್ರ ಭಾರತ ಒಕ್ಕೂಟಕ್ಕೆ ಸೇರಲು ಒಪ್ಪಲಿಲ್ಲ. ಅದಕ್ಕಾಗಿ ಜನ ಉಗ್ರ ಹೋರಾಟವನ್ನೇ ನಡೆಸಿದ್ದರಿಂದ ಹಲವಾರು ಹೋರಾಟಗಾರರ ಬಲಿದಾನವೂ ಆಯಿತು.
ಪ್ರಜೆಗಳ ಕೈಗೆ ಅಧಿಕಾರ ಕೊಡಲು ಹಾಗೂ ಭಾರತ ಒಕ್ಕೂಟಕ್ಕೆ ಸೇರಲು ಒಪ್ಪದ ಪ್ರಮುಖರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜೇಂದ್ರ ಒಡೆಯರೂ ಒಬ್ಬರು. ಮಹಾರಾಜರ ನಿಲುವಿಗೆ ತೀವ್ರ ಬೆಂಬಲಕ್ಕೆ ನಿಂತವರು ದಿವಾನರಾಗಿದ್ದ ಸರ್ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರು. ಮೈಸೂರು ಆಜಾದ್ ಕಾಂಗ್ರೆಸ್ ಅನ್ನು ರಚಿಸಿಕೊಂಡ ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಎಚ್. ಸಿ. ದಾಸಪ್ಪ, ಟಿ.ಮರಿಯಪ್ಪ, ತಾಳೆಕೆರೆ ಸುಬ್ರಹ್ಮಣ್ಯ ಮುಂತಾದ ನಾಯಕರು 1947 ಆಗಸ್ಟ್ 21 ರಂದು ಮೈಸೂರು ಚಳವಳಿಗೆ ಕರೆ ನೀಡಿದರು.
ನಾಯಕರ ಕರೆ ಹೊರಬಿದ್ದ ಕೂಡಲೇ ಇಡೀ ಸಂಸ್ಥಾನದಲ್ಲಿ ಮೈಸೂರು ಚಲೋ ಚಳವಳಿ ದಿನದಿನಕ್ಕೆ ಉಗ್ರರೂಪ ತಾಳುತ್ತ ಹೋಯಿತು. ಈ ಮಧ್ಯೆ ಕೆಲವು ದೇಸಿ ಸಂಸ್ಥಾನಗಳ ರಾಜರು, ತಿರುವನಂತಪುರದ ದಿವಾನರಾಗಿದ್ದ ಸರ್ ಸಿ.ಪಿ.ರಾಮಸ್ವಾಮಿ ಅಯ್ಯರ್ ಅವರ ನೆರವಿನಿಂದ ಸ್ವತಂತ್ರವಾಗಿಯೇ ಉಳಿಯಲು ಹೋರಾಟಕ್ಕೆ ಅಣಿಯಾದರು.
ಮೈಸೂರು ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರು ಸಹ ಅವರೊಂದಿಗೆ ಇದ್ದು ಚಳವಳಿಯನ್ನು ಹತ್ತಿಕ್ಕಲು ಉಗ್ರಕ್ರಮವನ್ನು ತೆಗೆದುಕೊಂಡರು. ಮುಖಂಡರ ಬಂಧನ ದಿನನಿತ್ಯ ಎಲ್ಲಕಡೆ ಲಾಠಿಚಾರ್ಜ್ ಅಶ್ರುವಾಯು ಪ್ರಯೋಗ ಸಾಮಾನ್ಯವಾಯಿತು. ಕೆಲವು ಕಡೆ ಗೋಲಿಬಾರ್ ಸಹ ನಡೆಯಿತು. ಮೈಸೂರಿನಲ್ಲಿ ವಿದ್ಯಾರ್ಥಿ ರಾಮಸ್ವಾಮಿ ಪೊಲೀಸರ ಗುಂಡೇಟಿಗೆ ಬಲಿಯಾದರೆ, ತುಮಕೂರಿನಲ್ಲಿ ಸ್ವಾತಂತ್ರ÷್ಯ ಯೋಧ, ಹೆಸರಾಂತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪುತ್ರ ಗುಂಡಿಗೆ ತುತ್ತಾದರು.
ಮೈಸೂರಿನ ಒಂದು ವೃತ್ತಕ್ಕೆ ರಾಮಸ್ವಾಮಿ ಹೆಸರನ್ನು ಇಡಲಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮೈಸೂರು ಚಳವಳಿಗೆ ಧುಮುಕಿದರು. ಹಲವರ ಬಂಧನವೂ ಆಯಿತು. ಸರಕಾರಿ ಕಚೇರಿಗಳ ಮೇಲೆ ರಾಷ್ಟçಧ್ವಜ ಹಾರಿಸಲು ವಿದ್ಯಾರ್ಥಿಗಳು ಮುನ್ನುಗ್ಗಿ ಬಂಧನಕ್ಕೆ ಒಳಗಾಗುತ್ತಿದ್ದರು. ಇದೇ ಸಂದರ್ಭದಲ್ಲಿ ನನ್ನ ಬಂಧನವೂ ಆಯಿತು. ಒಂದು ತಿಂಗಳು ಶಿಕ್ಷೆ ಅನುಭವಿಸಿದೆ.
ಮೈಸೂರು ಸಂಸ್ಥಾನದ ಎಲ್ಲ ಜೈಲುಗಳೂ ತುಂಬಿ, ಜೈಲಿನಲ್ಲಿ ಜಾಗವಿಲ್ಲದ ಕಾರಣ ಬಂಧಿತರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಂಡು, ಮಧ್ಯರಾತ್ರಿ ಬಿಡುಗಡೆ ಮಾಡುತ್ತಿದ್ದರು.
ವಿದ್ಯಾರ್ಥಿ ಮುಖಂಡರಾಗಿದ್ದ ಬಾಸು ಕೃಷ್ಣಮೂರ್ತಿ ಅವರು ಭೂಗತ ಪತ್ರಿಕೆಯನ್ನು ಹೊರಡಿಸಿ, ನಗರದ ಮನೆ ಮನೆ ಬಾಗಿಲಿಗೆ ಹಾಕುತ್ತಿದ್ದರು. ಹಿರಿಯ ಸ್ವಾತಂತ್ರ÷್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಪತ್ರಿಕೆ ಪೌರವಾಣಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಆಂಧ್ರದ ಹಿಂದೂಪುರಕ್ಕೆ ಹೋಗಿ ಅಲ್ಲಿ ಮುದ್ರಿಸಿ ಬೆಂಗಳೂರು, ಮೈಸೂರಿಗೆ ಅವರು ಪತ್ರಿಕೆಯನ್ನು ಕಳುಹಿಸುತ್ತಿದ್ದರು. ಈ ಮಧ್ಯೆ ಯುವಕರಾದ ಚಂದ್ರಶೇಖರ್ ಅವರು ಅರಮನೆಗೆ ನೀರು ಸರಬರಾಜು ಆಗುವ ದೊಡ್ಡ ಕೊಳವೆ ಮೂಲಕ ಅರಮನೆ ಮೇಲೆ ಹೋಗಿ ಮೈಸೂರು ಧ್ವಜವನ್ನು ಕಿತ್ತೆಸೆದು ರಾಷ್ಟçಧ್ವಜವನ್ನು ಹಾರಿಸಿ ಇಡೀ ಜನರೇ ಬೆಕ್ಕಸ ಬೆರಗಾಗುವಂತೆ ಮಾಡಿದರು. ಚಂದ್ರಶೇಖರನನ್ನು ಕೆಳಗಿಳಿಸಿ ಪೊಲೀಸರು ಮನಬಂದAತೆ ಬಡಿದರು. ಚಂದ್ರಶೇಖರ್ ಅವರ ಪ್ರಾಣ ಹೋಗಲಿಲ್ಲ. ಅತಿ ಉಗ್ರರೂಪಕ್ಕೆ ತಿರುಗಿದ ಚಳವಳಿಯನ್ನು ಹತ್ತಿಕ್ಕಲು ಮಹಾರಾಜರ ಸರಕಾರದಿಂದ ಸಾಧ್ಯವಾಗಲೇ ಇಲ್ಲ. ಅನಿವಾರ್ಯವಾಗಿ ಮಹಾರಾಜ ಜಯಚಾಮರೇಜೇಂದ್ರ ಒಡೆಯರ್ ಅವರು ಪ್ರಜೆಗಳಿಗೆ ಅಧಿಕಾರ ಕೊಡಲು ಒಪ್ಪಿದರು.
1947ಸೆಪ್ಟೆಂಬರ್ 24 ರಂದು ಮಹಾರಾಜರು ಕಾಂಗ್ರೆಸ್ ಮುಖಂಡರಿಗೆ ತಮ್ಮ ನಿರ್ಧಾರವನ್ನು ತಿಳಿಸಿದರು. ನಂತರ ಚಳವಳಿಯನ್ನು ಹಿಂದಕ್ಕೆ ಪಡೆಯಲಾಯಿತು. ಇದೇ ವೇಳೆ ಬಂಧಿತರ ಬಿಡುಗಡೆಯೂ ಆಯಿತು.
ಮೈಸೂರು ಪ್ರದೇಶ ಕಾಂಗ್ರೆಸ್ಸಿನ ಅಧಿವೇಶನ ಚಿತ್ರದುರ್ಗದಲ್ಲಿ ಸಮಾವೇಶಗೊಂಡು ಕೆ.ಸಿ.ರೆಡ್ಡಿ ಅವರನ್ನು ನಾಯಕರೆಂದು
ತೀರ್ಮಾನಿಸಲಾಯಿತು. 1947 ಅಕ್ಟೋಬರ್‌ನಲ್ಲಿ ಮಹಾರಾಜ ಸರಕಾರ ವಿಸರ್ಜನೆಗೊಂಡ ಅದೇ ತಿಂಗಳು 6ನೇ ದಿನಾಂಕದಂದು ಕೆ.ಸಿ. ರೆಡ್ಡಿ ಅವರು ಮೈಸೂರು ರಾಜ್ಯದ ಮುಖ್ಯಮಂತ್ರಿಯಾದರು. ಆರ್ಕಾಟ್ ರಾಮಸ್ವಾಮಿ ಅವರು ಮದರಾಸಿಗೆ ತೆರಳಿದರು. ಚಳವಳಿ ಕಾಲದಲ್ಲಿ ಆರ್ಕಾಟ್ ಬಾಯ್ಕಾಟ್ ಚಂಬೂ ಚೆಟ್ಟಿ, ಚಟ್ಟ ಕಟ್ಟಿ ಘೋಷಣೆಗಳು ಮೊಳಗಿದವು.
ಮೈಸೂರು ಚಳವಳಿಯ ಇತಿಹಾಸ ಅರಿಯದ ಈಚಿನವರು ಸ್ವತಂತ್ರ ಭಾರತ ಒಕ್ಕೂಟಕ್ಕೆ ಸೇರಲು ಒಪ್ಪಿದ ಮಹರಾಜರುಗಳಲ್ಲಿ ಜಯಚಾಮರಾಜೇಂದ್ರ ಒಡೆಯರೂ ಒಬ್ಬರು ಎಂದು ಬಣ್ಣಿಸಿದ್ದಾರೆ.
ಮಾಧ್ಯಮದ ವಿಚಾರ ಹೋಗಲಿ. ಇನ್ನೂ ಕೆಲವರು ಸಹಾ ಅದೇ ರೀತಿ ತಿಳಿದಿದ್ದಾರೆ. ಕರ್ನಾಟಕ ಸರಕಾರವು ಪ್ರಜಾ ಸರಕಾರ ಅಸ್ತಿತ್ವಕ್ಕೆ ಬಂದ ಅಕ್ಟೋಬರ್ ಆರರಂದು ಮೈಸೂರು ಚಲೋ ಉತ್ಸವವನ್ನು ಆಚರಿಸಬೇಕು.
ಮೈಸೂರು ಚಲೋ ಚಳವಳಿಯಲ್ಲಿ ಭಾಗವಹಿಸಿದವರನ್ನೂ ಪತ್ತೆ ಮಾಡಿ ಸನ್ಮಾನಿಸಬೇಕು. ಹೈದರಾಬಾದ್ ಕರ್ನಾಟಕದಲ್ಲಿ ಹೈದರಾಬಾದ್ ವಿಮೋಚನಾ ದಿನವನ್ನು ಪ್ರತಿ ವರ್ಷ ಆಚರಿಸಿ, ವಿಮೋಚನೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ, ಸನ್ಮಾನಿಸುತ್ತಾರೆ. ಅದೇ ಪದ್ಧತಿ ಇಲ್ಲೂ ಬರಬೇಕು.