ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕು

  • ಡಿಜಿಟಲ್‍ ಪ್ರಚಾರ ಮತ್ತು ನಿಧಿ ಸಂಗ್ರಹ ಕುರಿತು ಚುನಾವಣಾ ಆಯೋಗಕ್ಕೆ ಯೆಚುರಿ ಪತ್ರ

ದೆಹಲಿ:  ಚುನಾವಣೆಗಳು ಮುಕ್ತವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯುವಂತೆ ಖಾತ್ರಿಪಡಿಸಬೇಕಾದ ಸಾಂವಿಧಾನಿಕ ಹೊಣೆಯಿರುವ ಭಾರತದ ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕಾದ್ದು ಅಗತ್ಯವಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಆಗ್ರಹಿಸಿದ್ದಾರೆ.

 

ಬಿಹಾರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಡಿಜಿಟಲ್‌ ಪ್ರಚಾರ ಮತ್ತು ಚುನಾವಣಾ ಬಾಂಡ್‌ಗಳ  ಸಂಬಂಧ ಚುನಾವಣಾ ಆಯೋಗ ತಳೆದಿದ್ದ ನಿಲುವುಗಳ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಸುನಿಲ್‍ ಅರೋರಾ ಅವರಿಗೆ ಪತ್ರ ಬರೆದಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ,  ಅಪಾರದರ್ಶಕವಾದ ಚುನಾವಣಾ ಬಾಂಡುಗಳ ನಂತರ, ಕೊವಿಡ್‍ ನೆಪ ಮಾಡಿಕೊಂಡು ಡಿಜಿಟಲ್‍ ಚುನಾವಣಾ ಪ್ರಚಾರದ ಬಗ್ಗೆ ಬಹಳವಾಗಿ ಮಾತಾಡಲಾಗುತ್ತಿದೆ. ಬಿಹಾರ ವಿಧಾನಸಭಾ ಚುನಾವಣೆಗಳನ್ನು ಡಿಜಿಟಲ್‍ ಚುನಾವಣೆಯಾಗಿ ನಡೆಸಬೇಕು ಎಂಬ ಚುನಾವಣಾ ಅಯೋಗದ ನಿರ್ಧಾರಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಸದ್ಯಕ್ಕೆ ಬದಿಗಿಟ್ಟಿದೆ. ಇದನ್ನು ಶಾಶ್ವತವಾಗಿ ಕೈಬಿಡಬೇಕು, ಚುನಾವಣೆಯನ್ನು ಒಂದು ಡಿಜಿಟಲ್ ವೇದಿಕೆಯಲ್ಲಿ ನಡೆಸಬೇಕು ಎಂಬ ಪ್ರಸ್ತಾವ ಇಟ್ಟುದನ್ನು ಹೆಚ್ಚಿನ ರಾಜಕೀಯ ಪಕ್ಷಗಳು ವಿರೋಧಿಸಿದ್ದು, ಲಭ್ಯತೆಯ ಅಪಾರ ಕೊರತೆಯ ಕಾರಣಕ್ಕಾಗಿಯಷ್ಟೇ ಅಲ್ಲ. ಬದಲಿಗೆ, ಮತದಾರರನ್ನು ಸಂಪರ್ಕಿಸಲು ಬೇಕಾಗಬಹುದಾದ ಅಪಾರ ಹಣಕಾಸು ಸಂಪನ್ಮೂಲಗಳ ಪ್ರಶ್ನೆಯಿಂದಾಗಿ ಎಂಬುದನ್ನು ಮನಗಾಣಬೇಕು ಎಂದು ಅವರು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಡಿಜಿಟಲ್ ಪ್ರಚಾರ ಮತ್ತು ಚುನಾವಣಾ ಬಾಂಡ್
2019ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಆಗ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್‍ ಷಾ, ತಮ್ಮ ಪಕ್ಷ ತನ್ನ 32  ಲಕ್ಷ  ವಾಟ್ಸ್ ಆಪ್‍ ಗುಂಪುಗಳ ಜಾಲದೊಂದಿಗೆ, ಯಾವುದೇ ಸಂದೇಶವನ್ನು ಅದು ನಿಜವಿರಲಿ, ಸುಳ್ಳಿರಲಿ, ಕೆಲವೇ ಗಂಟೆಗಳೊಳಗೆ ಹರಡಿಸಿ ಬಿಡಬಲ್ಲದು ಎಂದು ಬಹಿರಂಗವಾಗಿಯೇ ಹೇಳಿದ್ದರು. ಹುಸಿ ಸುದ್ದಿಗಳಲ್ಲಿ ಬಹುಪಾಲು ಭಾರತದಿಂದಲೇ ಉತ್ಪಾದನೆಗೊಂಡದ್ದು ಎಂದು ಅಂತಾರಾಷ್ಟ್ರೀಯ ನಿಜಾಂಶ ಪತ್ತೆ ಹಚ್ಚುವ ವೆಬ್‍ ತಾಣಗಳ ಗಮನಕ್ಕೆ ಬಂದಿದೆ ಎಂಬುದನ್ನು ಡಿಜಿಟಲ್ ಪ್ರಚಾರ ಪ್ರಸ್ತಾಪಕ್ಕೆ  ಸೇರಿಸಿಕೊಂಡು ನೋಡಬೇಕು ಎಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ.

ಈಗ, ಬಿಹಾರ ವಿಧಾನಸಭಾ ಚುನಾವಣೆಗಳ ಮೊದಲು, ಈ ಪಕ್ಷ ಒಂದು ವರ್ಚುವಲ್ ಚುನಾವಣಾ ಪ್ರಚಾರವನ್ನು ಆರಂಭಿಸಿಯೇ ಬಿಟ್ಟಿದೆ. ಷಾ ರವರ ಭಾಷಣಗಳಿಗೆ 72,000 ಎಲ್‍.ಇ.ಡಿ. ಟಿವಿ ಪರದೆಗಳನ್ನು ಹಾಕಲಾಗಿದೆ. 60 ವರ್ಚುವಲ್‍ ರ್ಯಾಲಿಗಳನ್ನು ನಡೆಸಿದ ನಂತರ, ಬಿಜೆಪಿ ತನ್ನ ಚುನಾವಣಾ ಪ್ರಚಾರದ ಪ್ರಯತ್ನಗಳಲ್ಲಿ 9500 ಐಟಿ ಸೆಲ್‍ ಮುಖ್ಯಸ್ಥರು, ಪ್ರತಿಯೊಂದು ಮತಗಟ್ಟೆಗೆ ಒಂದರಂತೆ 72,000 ವಾಟ್ಸ್ ಆಪ್‍ ಗುಂಪುಗಳನ್ನು ಸಂಯೋಜಿಸುವುದಾಗಿ ಹೇಳಿಕೊಂಡಿದೆ. ಇದರಲ್ಲಿ 50,000 ಕಳೆದೆರಡು ತಿಂಗಳಲ್ಲೇ ರಚನೆಗೊಂಡವುಗಳು.

ಸ್ವಚ್ಛಗೊಳಿಸುವ ಸೇವೆ-ವ್ಯಂಗ್ಯಚಿತ್ರ: ಸಜಿತ್‍ ಕುಮಾರ, ಡೆಕ್ಕನ್‍ ಹೆರಾಲ್ಡ್

ತಂತ್ರಜ್ಞಾನ-ಆಧಾರಿತವಾದ ಇಂತಹ ಒಂದು ವ್ಯವಸ್ಥೆಯನ್ನು ಏರ್ಪಡಿಸಲು ಬೇಕಾದ ಮಾನವಶಕ್ತಿಯನ್ನು ನಿಯೋಜಿಸಲು ತಗಲುವ ವೆಚ್ಚ ತಲೆ ತಿರುಗುವಂತೆ ಮಾಡುವಷ್ಟು ಅಗಾಧ. ಚುನಾವಣಾ ಬಾಂಡುಗಳ ಮೂಲಕ ಅನಾಮಧೇಯ ನಿಧಿ ನೀಡಿಕೆ ಬರುವ ಮೊದಲೂ ಕೂಡ ಕಾರ್ಪೊರೇಟ್‍ ದೇಣಿಗೆಗಳ ಅಂಕಿ-ಅಂಶಗಳಿಂದ ಬಿಜೆಪಿ ಮತ್ತು ಇತರ ಎಲ್ಲ ಪಕ್ಷಗಳ ನಡುವಿನ ಅಂತರ ಅಪಾರ ಎಂಬುದು ಸಾರ್ವಜನಿಕವಾಗಿ ಲಭ್ಯವಿರುವ ಅಂಕಿ-ಅಂಶಗಳಿಂದ ಸ್ಪಷ್ಟವಾಗಿತ್ತು. ಇದು ಗರಿಷ್ಟ ಮಿತಿಯೇ ಇಲ್ಲದ ಅನಾಮಧೇಯ ಕಾರ್ಪೊರೇಟ್‍ ನಿಧಿ ಸಂಗ್ರಹದೊಂದಿಗೆ ಚುನಾವಣಾ ಪ್ರಜಾಪ್ರಭುತ್ವದ ಮರಣನಾದವಾಗುತ್ತದೆ ಎಂದು ಯೆಚುರಿ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಈ ಹಿಂದೆ ಚುನಾವಣಾ ಆಯೋಗ ಚುನಾವಣಾ ಬಾಂಡುಗಳು “ರಾಜಕೀಯ ಪಕ್ಷಗಳಿಗೆ ರಾಜಕೀಯ ನಿಧಿಸಂಗ್ರಹದ ಪಾರದರ್ಶಕತೆಯ ಮೇಲೆ ಗಂಭೀರ ದುಷ್ಪರಿಣಾಮಗಳ” ಸೂಚನೆಯಾಗಲಿದೆ ಎಂದು ಸುಪ್ರೀಂ ಕೋರ್ಟಿಗೆ ಹೇಳಿದ್ದನ್ನು, ಮತ್ತು ಅ ಕುರಿತ ಅಫಿಡವಿಟ್‍ನಲ್ಲಿ ಇತರ ಹಲವು ಅಂಶಗಳನ್ನು ನೆನಪಿಸುತ್ತ ಯೆಚುರಿಯವರು ಇವು ಪ್ರಮುಖ ಪ್ರಶ್ನೆಗಳನ್ನೆತ್ತಿವೆ ಎಂದಿದ್ದಾರೆ.

ನಮೋ ಟಿವಿ- ಕ್ರಮ ಏಕಿಲ್ಲ?
ಮೊದಲನೆಯದಾಗಿ, ರಹಸ್ಯಮಯ ‘ನಮೋ ಟಿವಿ ಈಗಿರುವ ಕಾನೂನಿಗೆ ವಿರುದ್ಧವಾಗಿ 2019ರ ಲೋಕಸಭಾ ಚುನಾವಣೆಗಳ ವೇಳೆಯಲ್ಲಿ ಆರಂಭವಾಯಿತು, ಮತ್ತು ಚುನಾವಣೆಗಳ ನಂತರ ರಹಸ್ಯ ರೀತಿಯಲ್ಲಿ ಕಣ್ಮರೆಯಾಯಿತು. ಇದು ಡಿಟಿಹೆಚ್ ವೇದಿಕೆಗಳು ನಡೆಸುತ್ತಿರುವ ವಾಹಿನಿ, ಇದಕ್ಕೆ ಬಿಜೆಪಿ ಹಣ ತೆರುತ್ತದಷ್ಟೇ ಎಂದು ಏಪ್ರಿಲ್‍ 2019ರಲ್ಲಿ ಚುನಾವಣಾ ಆಯೋಗದ ವಕ್ತಾರರು ಹೇಳಿದರು. ಆದರೆ ಆಯೋಗಕ್ಕೆ ಬಿಜೆಪಿ ಸಲ್ಲಿಸಿರುವ ಖರ್ಚು-ವೆಚ್ಚದ ವಿವರಗಳಲ್ಲಿ ಇದನ್ನು ತೋರಿಸಿಲ್ಲ ಎಂದು ಈಗ ಪ್ರಕಟಗೊಂಡಿದೆ, ಇದಂತೂ ಚುನಾವಣಾ ಅಪರಾಧವೇ.

ತಕ್ಷಣ ಏಳುವ ಪ್ರಶ್ನೆಯೆಂದರೆ ಈ ವಿಷಯದಲ್ಲಿ ಚುನಾವಣಾ ಆಯೋಗ ಬಿಜೆಪಿಯ ವಿರುದ್ದ ಯಾವುದಾದರೂ ಶಿಕ್ಷಾಕ್ರಮವನ್ನು ಕೈಗೊಂಡಿದೆಯೇ? ಇಲ್ಲವಾದರೆ, ಏಕಿಲ್ಲ? ಒಂದು ಸಂಪೂರ್ಣ ಅಸಂದಿಗ್ಧ ದೃಢ ಕ್ರಮ ಇಲ್ಲದಿರುವುದು, ಚುನಾವಣಾ ದುರಾಚರಣೆಗಳನ್ನು ಮುಲಾಜಿಲ್ಲದೆ ಕಿತ್ತುಹಾಕುವುದಂತೂ ಒತ್ತಟ್ಟಿಗಿರಲಿ, ಸಮಾನ ನೆಲೆಯ ಸ್ಪರ್ಧೆಯನ್ನು ಖಾತ್ರಿಗೊಳಿಸುವ ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ಗಂಭೀರವಾಗಿ ಪ್ರಶ್ನಿಸಬೇಕಾಗುತ್ತದೆ ಎಂದು ನಾನು ಧೈರ್ಯವಾಗಿ ಹೇಳಬಲ್ಲೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು ಪತ್ರದಲ್ಲಿ ಹೇಳಿದ್ದಾರೆ.

ಎರಡನೇ ಪ್ರಶ್ನೆ ಚುನಾವಣಾ ಆಯೋಗದ ಸಾಮಾಜಿಕ ಮಾಧ್ಯಮ ಪ್ರಚಾರಕ್ಕೆ ಸಂಬಂಧಪಟ್ಟಿರುವಂತದ್ದು. ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ 2019ರ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಆಯೋಗದ ಚುನಾವಣಾ-ಸಂಬಂಧಿ ಜಾಹೀರಾತುಗಳನ್ನು ಆನ್‍ಲೈನಿನಲ್ಲಿ ಪ್ರಕಟಿಸುವುದನ್ನು ಬಿಜೆಪಿ ಪದಾಧಿಕಾರಿಯೊಬ್ಬರ ಒಡೆತನದ ಒಂದು ಜಾಹೀರಾತು ಮತ್ತು ಸಾಮಾಜಿಕ ಮಾಧ್ಯಮ ಕಂಪನಿಗೆ ವಹಿಸಿದ್ದರು ಎಂದು ಈಗ ಬೆಳಕಿಗೆ ಬಂದಿದೆ. ನಂತರ ಸ್ವತಃ ಭಾರತದ ಚುನಾವಣಾ ಆಯೋಗವೇ 2019ರ ಲೋಕಸಭಾ ಚುನಾವಣೆಗಳಿಗೆ ಇದೇ ಸಾಮಾಜಿಕ ಮಾಧ್ಯಮ ಏಜೆನ್ಸಿಯನ್ನು ನೇಮಿಸಿಕೊಳ್ಳಲು ಅಧಿಕಾರ ನೀಡಿದೆ ಎಂಬುದೂ ಪ್ರಕಟಗೊಂಡಿದೆ.

ಈ ವಿಷಯದಲ್ಲಿ ಈಗ ಸಾಕಷ್ಟು ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯ ಇವೆ. ಚುನಾವಣಾ ಆಯೋಗಕ್ಕೆ ಸ್ವತಂತ್ರ ಸಂವಿಧಾನಿಕ ಸ್ಥಾನಮಾನವಿದೆ, ಸಂವಿಧಾನದ ಕಲಮು 324 ನ್ಯಾಯಯುತವಾಗಿ ಚುನಾವಣೆಗಳನ್ನು ನಡೆಸುವ ಹೊಣೆಗಾರಿಕೆಯನ್ನು ಚುನಾವಣಾ ಆಯೋಗಕ್ಕೆ ಕೊಟ್ಟಿದೆ. ಆದ್ದರಿಂದ ಭಾರತದ ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಹಾಗೆಂದು ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕಾದ್ದು ಅಗತ್ಯವಾಗಿದೆ ಎಂಬುದನ್ನು ಸೀತಾರಾಮ್‍ ಯೆಚುರಿಯವರು ಮುಖ್ಯ ಚುನಾವಣಾ ಅಯುಕ್ತರ ಗಮನಕ್ಕೆ ತಂದಿದ್ದಾರೆ.

Donate Janashakthi Media

One thought on “ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕು

Leave a Reply

Your email address will not be published. Required fields are marked *