ಫೇಸ್ಬುಕ್ “ರಾಜಕೀಯ ತಾರತಮ್ಯದ” ಸುತ್ತಮುತ್ತ

  • ಫೇಸ್ಬುಕ್ ಭಾರತದಲ್ಲಿ ರಾಜಕೀಯ ನೀತಿಗಳಲ್ಲಿ ತಾರತಮ್ಯ ಅನುಸರಿಸುತ್ತಿದೆ: ಆರೋಪ

ನವದೆಹಲಿ: ಸಾಮಾಜಿಕ  ಜಾಲ ತಾಣಗಳಲ್ಲಿ ದ್ವೇಷ ಭಾಷಣಗಳ ಬಗ್ಗೆ ಅಮೆರಿಕದ ‘ವಾಲ್‍ ಸ್ಟ್ರೀಟ್ ಜರ್ನಲ್’ ಪತ್ರಿಕೆ  ವರದಿಯನ್ನು ಮಾಡಿತ್ತು. ನಂತರ  ದೇಶದ ರಾಜಕೀಯದಲ್ಲಿ ಫೇಸ್‌ಬುಕ್‌ನ ನೀತಿ ವಿವಾದ ಎಬ್ಬಿಸಿತ್ತು. ಆಡಳಿತ ಪಕ್ಷ ಬಿಜೆಪಿ ಮತ್ತು ವಿರೋಧ ಪಕ್ಷಗಳು ವಾಕ್ಸಮರವನ್ನು ನಡೆಸಿದ್ದವು.  ಫೇಸ್‌ಬುಕ್‌ ಮೇಲೆ ಸಂಸದೀಯ ಸ್ಥಾಯಿ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.

ಇನ್ನು, ದ್ವೇಷ ಭಾಷಣಗಳ ಕುರಿತ ವಿವಾದಕ್ಕೆ ಫೆಸ್ಬುಕ್ ಸ್ಪಷ್ಟನೆ ನೀಡಿದ್ದು, ಯಾವುದೇ ರಾಜಕೀಯ ಸ್ಥಾನಮಾನ  ಇರಲಿ, ಯಾವುದೇ ಪಕ್ಷ ಇರಲಿ ದ್ವೇಷ ಭಾಷಣವನ್ನು ನಿರ್ಬಂಧಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ. ಯಾವುದೇ ಪಕ್ಷದ  ಜೊತೆ ಸಂಬಂಧ ಹೊಂದಿಲ್ಲ ಎಂದು ಯುಎಸ್‌ ಮಾಧ್ಯಮ ವರದಿಯನ್ನು ಫೆಸ್ಬುಕ್  ಅಲ್ಲಗಳೆದಿದೆ.

ಸಮರ್ಪಕ ಅಂತರ್ಜಾಲ ನೀತಿಯ ಕೊರತೆಯ ಕಾರಣಕ್ಕೆ ಭಾರತೀಯರ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಅಂಶ ನಾಲ್ಕು ವರ್ಷಗಳ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆಯಾಗುವ ಪರಿಸ್ಥಿತಿ ನಿರ್ಮಾಣ ಅನಿವಾರ್ಯ ಆದ ನಂತರ ಖಾಸಗಿತನ ರಕ್ಷಣೆ ಅತ್ಯಂತ ಜರೂರತ್ತಾಗಿ ಆಗಬೇಕಿತ್ತು. ಕೇಂದ್ರ ಸರ್ಕಾರ ಇಂತಹ ನೀತಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಅಂತಹ ನೀತಿ ಬರಲಿಲ್ಲ. ಈಗ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾದ ಫೇಸ್ಬುಕ್ ಭಾರತದಲ್ಲಿ ರಾಜಕೀಯ ನೀತಿಗಳಲ್ಲಿ ತಾರತಮ್ಯ ಅನುಸರಿಸುತ್ತಿದೆ ಎಂಬ ಆರೋಪ ಎದುರಿಸುತ್ತಿದೆ. ಈ ಸಂಬಂಧ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್  ವರದಿ ಮಾಡಿದೆ.

ಇದು ದೇಶದ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ.  “ಭಾರತೀಯ ರಾಜಕೀಯದಲ್ಲಿ ಫೇಸ್‌ಬುಕ್ ದ್ವೇಷ ಭಾಷಣ ಹಾಗೂ ನಿಯಮಗಳು” ಎಂಬ ಶೀರ್ಷಿಕೆಯೊಂದಿಗೆ ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿಯನ್ನು ಪ್ರಕಟಿಸಿತ್ತು. ಭಾರತದಲ್ಲಿ ವಿವಾದಾತ್ಮಕ ರಾಜಕಾರಣಿಯೊಬ್ಬರನ್ನು ನಿಷೇಧಿಸುವ ಕ್ರಮಕ್ಕೆ, ಫೇಸ್‌ಬುಕ್‌ ಕಂಪನಿಯ ಕಾರ್ಯನಿರ್ವಾಹಕರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿತ್ತು. ಬಿಜೆಪಿ ನಾಯಕರು ಮತ್ತು ಅದರ ಕಾರ್ಯಕರ್ತರು ಆಡುವ ದ್ವೇಷದ ಮಾತು ಮತ್ತು ಆಕ್ಷೇಪಾರ್ಹ ವಿಷಯಗಳ ಸಂದರ್ಭದಲ್ಲಿ ಫೇಸ್‌ಬುಕ್ ಬೇರೆ ರೀತಿಯಲ್ಲಿ ವರ್ತಿಸುತ್ತದೆ ಎಂದು  ಅಮೇರಿಕಾದ ವಾಲ್ಟ್ರೀಟ್ ಜರ್ನಲ್ ವರದಿ ಯನ್ನು ಮಾಡಿತ್ತು. ಬಿಜೆಪಿ ವಿರೋಧಿ  ನಿಲುವುಗಳಿರುವ ಫೇಸ್ಬುಕ್ ಖಾತೆಗಳನ್ನು ಬ್ಲಾಕ್ ಮಾಡುತ್ತಿದ್ದ ಹಿನ್ನೆಲೆ ಕೂಡ ಇದರಿಂದ ಬಯಲಾಗಿದೆ.

ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿಯನ್ನು ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ,  ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಭಾರತದಲ್ಲಿ ವಾಟ್ಸ್‌ಆಪ್‌ ಮತ್ತು ಫೇಸ್‌ಬುಕ್‌ನ್ನು ನಿಯಂತ್ರಿಸುತ್ತಿವೆ. ಇದರಿಂದ ಅವರು ಸುಳ್ಳು ಸುದ್ದಿಗಳನ್ನು ಹಾಗೂ ದ್ವೇಷವನ್ನು ಹಂಚುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದ್ದರು. ಕೊನೆಗೂ ಅಮೆರಿಕ ಮಾಧ್ಯಮ ಫೇಸ್‌ಬುಕ್‌ ಬಗ್ಗೆ ಸತ್ಯವನ್ನು ಬಿಚ್ಚಿಟ್ಟಿದೆ ಎಂದು ರಾಹುಲ್ ಗಾಂಧಿ  ಟ್ವೀಟ್ ಮಾಡಿದ್ದರು. ರಾಹುಲ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ ನಾಯಕ ಶಶಿ ತರೂರ್‌, ಭಾರತದಲ್ಲಿನ ದ್ವೇಷ ಭಾಷಣಗಳ ಬಗ್ಗೆ ಫೇಸ್‌ಬುಕ್‌ ಏನು ಕ್ರಮ ಕೈಗೊಂಡಿದೆ, ಅಮೆರಿಕ ಮಾಧ್ಯಮಗಳ ವರದಿ ಬಗ್ಗೆ ಫೇಸ್‌ಬುಕ್‌ನ ವಿವರಣೆ ಏನು ಎಂಬುದನ್ನು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಬಯಸುತ್ತದೆ ಎಂದು ಹೇಳಿದ್ದರು.

ಹಿರಿಯ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಫೇಸ್‌ಬುಕ್‌ನ್ನು ಸುಳ್ಳಿನ ಶ್ರೇಷ್ಠ ವಾಹಕ ಎಂದು ಆರೋಪಿಸಿದ್ದಾರೆ.  ಚುನಾವಣಾ ಸಮಯದಲ್ಲಿ ಫೆಸ್ಬುಕ್ ಹೇಗೆ ವರ್ತಿಸಿದೆ ಎಂಬುದನ್ನು ನಾನು ನೋಡಿದ್ದೇನೆ.  ಫೇಸ್‌ಬುಕ್‌ನ ಕಾರ್ಯತಂತ್ರಗಳ  ಬಗ್ಗೆ ಸಂಸತ್ತು ವಿಚಾರಣೆ ನಡೆಸಬೇಕು ಎಂದು  ಟ್ವೀಟ್ ಮಾಡಿದ್ದಾರೆ.  ಇನ್ನೂ ರಾಹುಲ್ ಗಾಂಧಿಯವರ ಟ್ವೀಟ್ ಗೆ  ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರೀಯೆ ನೀಡಿದ್ದಾರೆ,   ಕಾಂಗ್ರೆಸ್ ತಮ್ಮದೇ ಪಕ್ಷದಲ್ಲಿನ ಜನರ ಮೇಲೆ  ಪ್ರಭಾವ ಬೀರಲು ಸಾಧ್ಯವಾಗದೇ ಸೋತವರು ಇಡೀ ಜಗತ್ತನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಯಂತ್ರಿಸುತ್ತವೆ ಎಂದು ಹೇಳುತ್ತಲೇ ಇರುತ್ತಾರೆ ಎಂದು ಕಿಡಿಕಾರಿದ್ದರು. ಚುನಾವಣೆಗೂ ಮುಂಚೆ  ಜನರನ್ನು ಸೆಳೆಯಲು ಸಾಮಾಜಿಕ ಜಾಲತಾಣದ ದತ್ತಾಂಶ ಪಡೆಯಲು ಕೆಂಬ್ರಿಡ್ಜ್‌ ಅನಾಲಿಟಿಕಾ ಹಾಗೂ ಫೇಸ್‌ಬುಕ್‌ನೊಂದಿಗೆ ಮೈತ್ರಿ ಹೊಂದಿರುವುದು ಇಡೀ ಜಗತ್ತಿಗೆ ಗೊತ್ತಿರುವ ವಿಷಯ. ಈಗ ನಮ್ಮನ್ನು ಪ್ರಶ್ನಿಸುವ ನೈತಿಕತೆ ನಿಮಗಿದೆಯೇ ಎಂದು ರಾಹುಲ್‌ ಗಾಂಧಿಗಯವರನ್ನು ರವಿಶಂಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ.

ಸಿಪಿಐಎಂ ಕೂಡಾ ಇದಕ್ಕೆ ಪ್ರತಿಕ್ರೀಯೆಯನ್ನು ನೀಡಿದ್ದು, ಅಮೆರಿಕಾದ ‘ವಾಲ್‍ ಸ್ಟ್ರೀಟ್ ಜರ್ನಲ್’ ಪತ್ರಿಕೆ , ಜಗತ್ತಿನ  ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿನ ದೈತ್ಯ ಕಂಪನಿ ‘ಫೇಸ್‍ಬುಕ್‍’ನ ಪಾತ್ರವನ್ನು, ನಿರ್ದಿಷ್ಟವಾಗಿ ಅದರಲ್ಲೂ ಭಾರತದಲ್ಲಿನ ಧೋರಣೆ ಕುರಿತ ವಿಭಾಗದ ಪಾತ್ರವನ್ನು ಬಯಲಿಗೆಳೆದಿದೆ. ಭಾರತದಲ್ಲಿ ಅದು ಕೋಮುವಾದಿ ಹಗೆತನದಿಂದ ಕೂಡಿದ ವಿಷಯಗಳ ಬಗ್ಗೆ ತಾನೇ ಹಾಕಿಕೊಂಡ ನೀತಿಯನ್ನು ಕೂಡ ಅನುಸರಿಸುತ್ತಿಲ್ಲ ಎಂಬುದು ಈ ಮೂಲಕ ಬಯಲಾಗಿದೆ ಎಂದು ಫೇಸ್‍ಬುಕ್’ನ  ವರ್ತನೆಯನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸಿದೆ.

ಇದು ಫೇಸ್‍ಬುಕ್ ಮತ್ತು ಅದರ  ಇತರ ವೇದಿಕೆಗಳಾದ ವಾಟ್ಸ್ ಆಪ್ ಮತ್ತು ಇನ್ಸ್ಟಗ್ರಾಮ್ ನ ಚಟುವಟಿಕೆಗಳ ಬಗ್ಗೆ ಇರುವ ಒಟ್ಟಾರೆ ಸಂದೇಹಗಳನ್ನು ದೃಢ ಪಡಿಸುತ್ತದೆ. 2018ರಲ್ಲಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ  ಪ್ರಕಟವಾದ ಒಂದು ಲೇಖನ ಅದರ ಪ್ರಶ್ನಾರ್ಹ ಆಚರಣೆಗಳನ್ನು ಕಟುವಾಗಿ ಬಯಲಿಗೆ ತಂದಿತ್ತು. ಈಗ ಬಯಲಾಗಿರುವ ಸಂಗತಿ ಬಿಜೆಪಿಯ ಅಗಾಧ ಸಾಮಾಜಿಕ ಮಾಧ್ಯಮ  ಹೂಡಿಕೆ ಮತ್ತು ಕಾರ್ಯಾಚರಣೆಗಳು ಹಾಗೂ ಸಮುದಾಯಗಳ ನಡುವೆ ಹಗೆತನವನವನ್ನು ಉತ್ತೇಜಿಸುವಲ್ಲಿ ಅದರ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಇತ್ತೀಚೆಗೆ  ರಿಲಯನ್ಸ್ ನಲ್ಲಿ ಫೇಸ್‍ಬುಕ್‍ ಹಣಹೂಡಿಕೆ ಮಾಡಿರುವುದು ಗುತ್ತೇದಾರಿ ಹತೋಟಿಯ ಸಂದೇಹಗಳನ್ನು ಬಲಪಡಿಸುತ್ತದೆ. ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಕುರಿತಂತೆ ಒಂದು ಪರಿಣಾಮಕಾರೀ ನಿಯಂತ್ರಣದ ಮೇಲುಸ್ತುವಾರಿ ಇರದಿರುವಾಗ ಇದು ಇನ್ನಷ್ಟು ಗಂಭೀರ ಸಂಗತಿಯಾಗಿದೆ.

ಬಿಜೆಪಿಯ ಕೈಗಳಲ್ಲಿರುವ ಅಗಾಧ ಹಣಕಾಸು ಸಂಪನ್ಮೂಲಗಳು, ಜತೆಗೆ ಅಪಾರದರ್ಶಕವಾದ ಚುನಾವಣಾ ಬಾಂಡ್‍ ಸ್ಕೀಮ್ , ಸಾಮಾಜಿಕ ಮಾಧ್ಯಮಗಳ ಮೇಲೆ ಅದರ ಹತೋಟಿಯನ್ನು ಖಾತ್ರಿಗೊಳಿಸಿವೆ ಎಂದು ಹೇಳಿರುವ  ಸಿಪಿಐ(ಎಂ) ಈ ಫೇಸ್‍ಬುಕ್-ವಾಟ್ಸ್ ಆಪ್-ಇನ್ಸ್ಟಗ್ರಾಮ್ ಹಾಗೂ ಬಿಜೆಪಿ ನಡುವಿನ ನಂಟಿನ ಕುರಿತು ಒಂದು ತುರ್ತು ಮತ್ತು ಆಮೂಲಾಗ್ರ ತನಿಖೆ ನಡೆಸಬೇಕು, ಹೊಣೆಗಾರಿಕೆಯನ್ನು ನಿಗದಿಗೊಳಿಸಬೇಕು ಹಾಗೂ ಈ ವೇದಿಕೆಗಳು ಕೋಮು ದ್ವೇಷವನ್ನು ಉತ್ತೇಜಿಸದಂತೆ ನಿಷೇಧಿಸಲು ಪರಿಣಾಮಕಾರಿ ಕ್ರಮಗಳನ್ನು ಶಿಫಾರಸು ಮಾಡಬೇಕು ಎಂದು ಕರೆ ನೀಡಿದೆ.

ಈ ನಂಟಿನ ಬಗ್ಗೆ ತನಿಖೆ ನಡೆಸಲು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ತಕ್ಷಣವೇ ರಚಿಸಬೇಕು. ಜೆಪಿಸಿ ಯ ವರದಿ ಬರುವ ವರೆಗೆ ಫೇಸ್‍ಬುಕ್ ಭಾರತದ ಚುನಾವಣಾ ಆಯೋಗ ಮುಂತಾದ ಸಂವಿಧಾನಿಕ ಸಂಸ್ಥೆಗಳು ಮತ್ತು ಯಾವುದೇ ಸರಕಾರೀ ಇಲಾಖೆಯಿಂದ ಕಾರ್ಯಾಚರಣೆ ನಡೆಸದಂತೆ ನಿಷೇಧಿಸಬೇಕು ಎಂದೂ ಸಿಪಿಐ(ಎಂ) ಆಗ್ರಹಿಸಿದೆ.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಮುಖಂಡರ ದ್ವೇಷ ಭಾಷಣಗಳ ವಿಚಾರದಲ್ಲಿ ಫೇಸ್‌ಬುಕ್‌ ಮೌನ ವಹಿಸಿದೆ ಎಂಬ ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯ ವರದಿಯ ಹಿನ್ನೆಲೆಯಲ್ಲಿ ತಮಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಫೇಸ್‌ಬುಕ್‌ ಇಂಡಿಯಾದ ಉನ್ನತ ಸಾರ್ವಜನಿಕ ನೀತಿ ಕಾರ್ಯನಿರ್ವಾಹಕ ಅಧಿಕಾರಿ  ಅಂಕಿ ದಾಸ್ ನವದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆನ್ಲೈನ್ನಲ್ಲಿ ಕೆಲವರು ತಮ್ಮ ರಾಜಕೀಯ ಸಂಬಂಧಗಳ ಹಿನ್ನೆಲೆಯಲ್ಲಿಉದ್ದೇಶಪೂರ್ವಕವಾಗಿ ನಿಂದಿಸುತ್ತಿದ್ದಾರೆ,’ ಎಂದು ಆರೋಪಿಸಿದ್ದಾರೆ.  ಕಾಕತಾಳೀಯ ಎಂಬಂತೆ ರಾಯಪುರ ಮೂಲದ ಪತ್ರಕರ್ತ ಅವೇಶ್ ತಿವಾರಿ ಅಂಕಿ ದಾಸ್ ವಿರುದ್ದ ರಾಯ್ಪುರ್ ದಲ್ಲಿ ದೂರು ದಾಖಲಿಸಿದ್ದಾರೆ.  ಅವರ ದೂರಿನ ಅನ್ವಯ  ಸೆಕ್ಷನ್ 295, ಸೆಕ್ಷನ್ 505(1)(ಸಿ), ಸೆಕ್ಷನ್  506, ಸೆಕ್ಷನ್500 ರ ಅನ್ವಯ ಪ್ರಖರಣವನ್ನು ದಾಖಲಿಸಲಾಗಿದೆ.

ನವದೆಹಲಿ ಮೂಲದ  ಡಿಜಿಟಲ್ ಹಕ್ಕುಗಳ ತಂಡವೊಂದು ಮಾಹಿತಿ ತಂತ್ರಜ್ಞಾನ  ಇಲಾಖೆಗೆ ಪತ್ರವನ್ನು ಬರೆದಿದೆ “ ಫೆಸ್ಬುಕ್ ನ ಜಾಗತಿಕ ಉನ್ನತ ಅಧಿಕಾರಿಗಳನ್ನು ಕರೆಯಿಸಿಕೊಂಡು ವಿಚಾರಣೆಗಳಿಗೆ ಒಳಪಡಿಸಬೇಕು ಎಂದು ಪತ್ರವನ್ನು ಬರೆದಿದೆ.  ಇದನ್ನೆಲ್ಲಾ ಗಮನಿಸುತ್ತಾ ಇದ್ದರೆ ಫೆಸ್ಬುಕ್ ನಿಜಕ್ಕೂ ಈ ರೀತಿಯ ಪಕ್ಷಪಾತವನ್ನು ಮಾಡಿದರೆ 300 ಮಿಲಿಯನ್ ಬಳಕೆದಾರರಿಗೆ ಮತ್ತು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟು ಮಾಡುವ ಮುನ್ಸೂಚನೆಯನ್ನು ಇದು ತೋರಿಸುತ್ತಿದೆ.  ಫೆಸ್ಬುಕ್ ಈ ರೀತಿಯ ತಾರತಮ್ಯವನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Donate Janashakthi Media

One thought on “ಫೇಸ್ಬುಕ್ “ರಾಜಕೀಯ ತಾರತಮ್ಯದ” ಸುತ್ತಮುತ್ತ

Leave a Reply

Your email address will not be published. Required fields are marked *