- ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಶೋಧನಾ ಸಂಸ್ಥೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಭಾಷಾ ಅಧ್ಯಯನ ಕೇಂದ್ರ
ನವದೆಹಲಿ: ಬಹುದಿನಗಳ ಬೇಡಿಕೆಯಾದ ಕನ್ನಡ ಭಾಷಾ ಶಾಸ್ತ್ರೀಯ ಅಧ್ಯಯನ ಕೇಂದ್ರ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಅನುಮತಿ ನೀಡಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ.ರಮೇಶ್ ಪೋಖ್ರಿಯಾಲ್ ಆಶ್ವಾಸನೆ ನೀಡಿದ್ದಾರೆ.
ನವದೆಹಲಿಯಲ್ಲಿ ಕನ್ನಡ, ಸಂಸ್ಕೃತಿ, ಯುವಜನ ಕ್ರೀಡೆ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಡಾ.ರಮೇಶ್ ಪೋಖ್ರಿಯಾಲ್ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಶಾಶ್ವತ ಕನ್ನಡ ಅಧ್ಯಯನ ಪೀಠದ ಕಟ್ಟಡ ಪ್ರಾರಂಭಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪೋಖ್ರಿಯಾಲ್ ಅವರು, ಕನ್ನಡಿಗರ ಬಹುದಿನಗಳ ಬೇಡಿಕೆಯಂತೆ ಆದಷ್ಟು ಶೀಘ್ರದಲ್ಲಿ ಕಟ್ಟಡ ಪ್ರಾರಂಭಿಸಲು ಕೇಂದ್ರದಿಂದ ಅನುಮತಿ ನೀಡಲಾಗುವುದು. ಇನ್ನು ಯಾವುದೇ ಕಾರಣಕ್ಕೂ ವಿಳಂಬವಾಗುವುದಿಲ್ಲ ಎಂಬ ಭರವಸೆ ನೀಡಿದರು.
ರಾಜ್ಯ ಸರ್ಕಾರ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿ ಇಲಾಖೆ ಕೈ ಸೇರಿದೆ. ಸದ್ಯದಲ್ಲೇ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆಯಲಾಗುವುದು. ಬಳಿಕ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ರೀತಿಯ ನೆರವು ಕೇಂದ್ರದಿಂದ ಸಿಗಲಿದೆ ಎಂದು ಅಭಯ ನೀಡಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಾಶ್ವತ ಕನ್ನಡ ಶಾಸ್ತ್ರೀಯ ಅಧ್ಯಯನ ಪೀಠ ಪ್ರಾರಂಭಿಸಲು ಸರ್ಕಾರ ಉತ್ಸುಕತೆ ತೋರಿರುವುದು ನನ್ನ ಗಮನಕ್ಕೆ ಬಂದಿದೆ. ವಿವಿಯು ಜಾಗವನ್ನು ಹಸ್ತಾಂತರ ಮಾಡಲು ತೀರ್ಮಾನಿಸಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರದಿಂದ ವಿಳಂಬವಾಗದಂತೆ ಎಷ್ಟು ಸಾಧ್ಯವೋ ಅಷ್ಟು ಶೀಘ್ರವಾಗಿ ಅನುಮತಿ ನೀಡುವುದಾಗಿ ಹೇಳಿದ್ದಾರೆ.
ಪ್ರಸ್ತುತ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರವು ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಶೋಧನಾ ಸಂಸ್ಥೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕಾರ್ಯ ಚಟುವಟಿಕೆಗಳು ನಡೆಯುವಂತೆ ಶಾಶ್ವತ ಕಟ್ಟಡ ನಿರ್ಮಾಣ ಮಾಡಬೇಕೆಂಬುದು ಕನ್ನಡಿಗರ ಬಹುದಿನಗಳ ಬೇಡಿಕೆಯಾಗಿದೆ. ಈ ಕನಸನ್ನು ನನಸು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಬಹು ಉದ್ದೇಶಿತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ.ಇದರಿಂದಾಗಿ ದೇಶದ ಪ್ರತಿಯೊಂದು ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.ನಾಡು, ನುಡಿ, ಇತಿಹಾಸ, ಪರಂಪರೆಗಳು, ಸಂಪ್ರಾದಾಯ ಸೇರಿದಂತೆ ಸ್ಥಳೀಯ ಸೊಗಡಿಗೆ ಎಲ್ಲಿಯೂ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಹೊಸ ಶಿಕ್ಷಣ ನೀತಿಯಿಂದ ಸರ್ವರಿಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕೆನ್ನುವುದು ಕೇಂದ್ರ ಸರ್ಕಾರ ಆಕಾಂಕ್ಷೆಯಾಗಿದೆ.ಭಾರತವನ್ನು ಜಾಗತಿಕ ಜ್ಞಾನ ಶಕ್ತಿಯನ್ನಾಗಿಸುವುದು ಹೊಸ ಶಿಕ್ಷಣ ನೀತಿಯ ಪ್ರಮುಖ ಆಶಯವಾಗಿದೆ. ಐದು ವರ್ಷದ ಒಳಗಿನ ಮಕ್ಕಳಿಗೆ ‘ಬಾಲವಾಟಿಕಾ’ ಆರಂಭಿಸುವುದು, ಹಂತ-ಹಂತವಾಗಿ ಕಲಿಕೆ ಆಗಲೆಂಬ ಕಾರಣಕ್ಕೆ 10+2 ಪದ್ಧತಿಯ ಬದಲಿಗೆ 5+3+3+4 ಪದ್ಧತಿ ಪರಿಚಯ ಮಾಡಿಕೊಡಲಾಗುತ್ತಿದೆ. ಆರನೇ ತರಗತಿ ನಂತರ ವೃತ್ತಿಪರ ಶಿಕ್ಷಣ ಕಲಿಕೆ ಪ್ರಾರಂಭಗೊಳಿಸುವ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಹೊಸ ಶಿಕ್ಷಣ ನೀತಿಯಲ್ಲಿ ಪರೀಕ್ಷಾ ವಿಧಾನದಲ್ಲಿ ಸುಧಾರಣೆಗೆ ಮಹತ್ವ ಕೊಡಲಾಗಿದೆ. ಬಹುವಿಧದ ಪರೀಕ್ಷೆಗೆ ತೀರ್ಮಾನ ಮಾಡಲಾಗಿದೆ. ವಾರ್ಷಿಕ, ಅರ್ಧವಾರ್ಷಿಕ, ಮಾಡ್ಯುಲ್ ಮಾದರಿ ಪರೀಕ್ಷೆಗಳು ನಡೆಯಲಿವೆ. ಮುಖ್ಯ ಪರೀಕ್ಷೆಯ ಪ್ರಾಮುಖ್ಯತೆ ಕಡಿಮೆ ಮಾಡುವ ಚಿಂತನೆಯಿದೆ. ವರ್ಷದಲ್ಲಿ ಎರಡು ಬಾರಿ ಮುಖ್ಯ ಪರೀಕ್ಷೆ ಮಾಡಲಾಗುವುದು. ಸಮಗ್ರ ಫಲಿತಾಂಶ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಹೀಗಾಗಿ ಮೂರು ಹಂತದಲ್ಲಿ ವಿದ್ಯಾರ್ಥಿಯ ಸಾಮಥ್ರ್ಯ ಅಳೆಯುವ ರಿಪೋರ್ಟ್ ಕಾರ್ಡ್ ಕೊಡಲಾಗುವುದು. ಜೊತೆಗೆ ಉನ್ನತ ಶಿಕ್ಷಣ ಪೂರ್ತಿಯಾಗುವವರೆಗೆ ಒಂದೇ ಮಾದರಿಯ ರಿಪೋರ್ಟ್ ನೀಡುವ ಬಗ್ಗೆ ಹೊಸ ಶಿಕ್ಷಣ ನೀತಿಯಲ್ಲಿದೆ.ಕನ್ನಡ ಭಾಷಾ ಬೆಳವಣಿಗೆಗೆ ಇದರಂದ ಸಾಕಷ್ಟು ಅನುಕೂಲವಾಗಲಿದ್ದು,ಕರ್ನಾಟ ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಸಚಿವರು ಆಶಿಸಿದರು.
ಇದೇ ವೇಳೆ ಸಚಿವ ಸಿ.ಟಿ.ರವಿ ಅವರು ಈವರೆಗೂ ಇಲಾಖೆವತಿಯಿಂದ ಕೈಗೊಂಡಿರುವ ಕಾರ್ಯ ಚಟುವಟಿಕೆಯ ವಿಸ್ತೃತ ವರದಿಯನ್ನು ಕೇಂದ್ರ ಸಚಿವರಿಗೆ ಹಸ್ತಾಂತರಿಸಿದರು.
ತಮಿಳುನಾಡಿನಲ್ಲಿ ಪೂರ್ಣ ಪ್ರಮಾಣದ ಅಧ್ಯಯನ ಪೀಠ ಆರಂಭವಾಗಿ ಕಾರ್ಯ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅನೇಕ ಅವಕಾಶಗಳು ಲಭಿಸಿವೆ. ಇದೇ ರೀತಿ ಕರ್ನಾಟಕಕ್ಕೂ ಇದರ ಪ್ರಯೋಜನ ಸಿಗಬೇಕೆಂದು ಅಭಿಪ್ರಾಯಪಟ್ಟರು.
ಕನ್ನಡ ಭಾಷೆಗೆ ಕೇಂದ್ರೀಯ ಸ್ಥಾನಮಾನ ಸಿಗಬೇಕೆಂದು ಕರ್ನಾಟಕ ಜನತೆಯ ಒತ್ತಾಸೆಯಾಗಿದೆ. ಪ್ರಾಚೀನ ಭಾರತೀಯ ಪರಂಪರೆಯನ್ನು ಕಾಪಾಡಿ ಪೋಷಿಸುವುದರಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಯಾವುದಕ್ಕೂ ಕಡಿಮೆ ಇಲ್ಲ. ಆದಷ್ಟು ಶೀಘ್ರ ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡಿದರೆ ಬಹುದಿನಗಳ ಕನಸು ಈಡೇರುತ್ತದೆ ಎಂದು ಮನವರಿಕೆ ಮಾಡಿದ್ದಾರೆ.
ಇದೇ ವೇಳೆ ಮೂರು ಸಮಿತಿಗೆ ಮುಖ್ಯಸ್ಥರು ಹಾಗೂ ಸದಸ್ಯರನ್ನು ನೇಮಕ ಮಾಡುವಂತೆ ಸಚಿವ ಸಿ.ಟಿ.ರವಿ ಅವರು ಮನವಿ ಮಾಡಿದರು.ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.