ಬಿಸಿಯೂಟ ನೌಕಕರ ಬಂಧನ, ವ್ಯಾಪಕ ಆಕ್ರೋಶ
ಬೆಂಗಳೂರು: ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಮನೆಮುಂದೆ ಪ್ರತಿಭಟನೆ ನಡೆಸಲು ಪ್ರಯತ್ನಿಸಿದ ಅಕ್ಷರದಾಸೋಹ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಷರ ದಾಸೋಹ ನೌಕರರು ಕಳೆದ ಐದು ತಿಂಗಳಿಂದ ತಮ್ಮ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯದ ಆಯಾ ಜಿಲ್ಲೆ ಮತ್ತು ತಾಲೂಕಿನಲ್ಲಿ ಸ್ವಾತಂತ್ಯ ಉತ್ಸವದ ದಿನದ ತನಕ ಐದು ದಿನ ಉಪವಾಸ ಸತ್ಯಾಗ್ರಹ, ಧರಣಿ ಇತ್ಯಾದಿ ಹೋರಾಟ ಮಾಡಿದ್ದಾರೆ. ಅನೇಕ ಮನವಿ ಪತ್ರಗಳನ್ನು ನೀಡಿದ್ದಾರೆ. ಆದರೆ ಇದೂವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಇಲ್ಲದ ಪ್ರಯುಕ್ತ, ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಮಾನ್ಯ ಶಿಕ್ಷಣ ಸಚಿವರನ್ನು ಭೇಟಿಯಾಗಲು ದೈಹಿಕ ಅಂತರ ಕಾಯ್ದುಕೊಂಡು ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಪೋಲಿಸರು ಅಲ್ಲಿದ್ದ ಹೋರಾಟಗಾರರನ್ನು ಬಂಧನ ಮಾಡಿದ್ದಾರೆ.
ಇದು ಅತ್ಯಂತ ಖಂಡನೀಯ ಮತ್ತು ಅಸಾಂವಿಧಾನಿಕ ಹಾಗೂ ಅಪ್ರಜಾಸತ್ತಾತ್ಮಕ ಕ್ರಿಯೆಯಾಗಿದೆ. ಬೇಡಿಕೆ ಕೇಳಿದರೆ ಬಂಧಿಸುವ ಸರ್ಕಾರದ ನೀತಿಯನ್ನು ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ. ಬಂಧಿತರನ್ನು ಈ ಕೂಡಲೇ ಬೇಷರತ್ ಬಿಡುಗಡೆಗೆ ಮಾಡಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕಕರರ ರಾಜ್ಯ ಮುಖಂಡರಾದ ಯಮುನಾ ಗಾಂವ್ಕರ್ ಒತ್ತಾಯಿಸಿದ್ದಾರೆ.
ಕೊರೋನಾ ಹಾಗೂ ಲಾಕ್ ಡೌನ್ ನಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿರುವ ಬಿಸಿಯೂಟ ನೌಕರರಿಗೆ ವೇತನ ಇಲ್ಲದೆ ಕುಟುಂಬ ನಿರ್ವಹಿಸಲು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಅಲ್ಲಲ್ಲಿ ಬಡ್ಡಿಗೆ ಸಾಲ ಪಡೆದು ಜೀವನ ನಿರ್ವಹಿಸುತ್ತಿರುವ ಇವರ ಬಗ್ಗೆ ಸರ್ಕಾರ ಯಾವುದೇ ಗಮನ ಹರಿಸಿಲ್ಲ, ಪೋಲಿಸರು ಅಮಾನುಶವಾಗಿ ಹೋರಾಟಗಾರರನ್ನು ಎಳೆದಾಡಿದಲ್ಲದೆ, ದೌರ್ಜನ್ಯ ನಡೆಸಿದ್ದಕ್ಕೆ ರಾಜ್ಯದಂತ್ಯ ಆಕ್ರೋಶ ವ್ಯಕ್ತವಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲವೆಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ತಿಳಿಸಿದ್ದಾರೆ.