ಬದುಕು ಬೀದಿಯ ಪಯಣವಾಗುತ್ತಿದೆ, ಹೌದು ಇಂದಿನ ಕೊರೊನಾ ಸಂಕಷ್ಟದಲ್ಲಿ ಜನರ ಬದುಕು ಉಹಿಸಲು ಅಸಾಧ್ಯವಾದ ಸ್ಥಿತಿಗೆ ಬಂದು ತಲುಪುತ್ತಿದೆ. ಮನುಷ್ಯನ ಬದುಕಿಗೆ ಅನ್ನ, ನೀರು, ಜೀವನ ಚೈತನ್ಯ ಮೂಡಿಸುತ್ತಾದರೂ ಆ ಅನ್ನ ದಕ್ಕಿಸಿಕೊಳ್ಳಲು ಮುಳ್ಳು ಹಾದಿಯಿಂದ ಪಾರಾಗಲೇ ಬೇಕು. ಈ ಹಸಿವು ತುಂಬಿಸ್ಕೊಳ್ಳುವುದು ಇಂದಿನ ಪ್ರಸ್ತುತ ಪರಿಸ್ಥಿತಿಯಲ್ಲಿ ತುಂಬಾನೇ ಕಷ್ಟ. ಹಾಗಂತ ಕೈ ಕಟ್ಟಿ ಕುಳಿತರೆ ಹೊಟ್ಟೆ ತುಂಬುವುದೇ ಎಂಬ ಪ್ರಶ್ನೆ..? ಅದು ಈ ಬೆಂಗಳೂರಿ ನಂತಹ ಮಾಯಾ ಲೋಕದಲ್ಲಿ ಹೊಟ್ಟೆ ತುಂಬುವುದು ಇನ್ನೂ ಕಷ್ಟವೇ.. ಅದಕ್ಕಾಗಿ ಮಹಿಳೆಯರು ಯಾವುದಾದರೂ ಒಂದು ಕೆಲಸ ಸಿಕ್ಕರೆ ಸಾಕಪ್ಪ, ಕಷ್ಟ ಆದರೂ ನೆಮ್ಮದಿಯಿಂದ ಬದುಕಿನ ಬಂಡಿ ಎಳೆದು ಕೊಂಡು ಹೋಗಬಹುದೆಂಬ ಕಾರಣಕ್ಕೆ ಸಿಕ್ಕ ಸಿಕ್ಕ ಅವಕಾಶಗಳನೆಲ್ಲ ಬಿಡದೆ ಬದುಕು ಕಟ್ಟಿಕೊಳ್ಳುತ್ತಾರೆ.
ಹೀಗೆ ಬದುಕು ಕಟ್ಟಿಕೊಂಡು ಕಳೆದ 20 ರಿಂದ 25 ವರ್ಷಗಳಿಂದಲೂ ಬೆಂಗಳೂರಿನ ಬಿಬಿಎಂಪಿಯ ಅಡಿಯಲ್ಲಿ ಒಂದೊಂದು ವಾರ್ಡಿಗೆ ಇಬ್ಬರಂತೆ ಒಟ್ಟು 400ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಲಿಂಕ್ ವರ್ಕ್ಸ್ ( ಸಂಪರ್ಕ ಕಾರ್ಯಕರ್ತೆ)ಯರಾಗಿ ಕಾರ್ಯ ನಿವಹಿಸುತ್ತಿದ್ದಾರೆ. ಆ ವಾರ್ಡಿನ ಕುರಿತು ಪ್ರತಿಯೊಂದು ಮಾಹಿತಿಯು ಇವರಲ್ಲಿರುತ್ತೆ. ಜನನ, ಮರಣ, ಅಂಗವಿಕಲತೆ, ಅಪೌಷ್ಠಿಕತೆ, ಅನಾರೋಗ್ಯದ ಜೊತೆಗೆ ಬೆಂಗಳೂರಿನ ಪ್ರತಿಯೊಂದು ವಾರ್ಡಗಳಿಗೂ ಭೇಟಿಕೊಟ್ಟು ಒಣ ಕಸ, ಹಸಿ ಕಸಗಳನ್ನು ಬೇರ್ಪಡಿಸಿ ವಿಲೇವಾರಿ ಮಾಡಿ. ಮನೆಯಲ್ಲಿ ಕಸ ಇಟ್ಟಕೊಳ್ಳಬೇಡಿ ಆದಷ್ಟು ನಾವಿರುವ ಊರು ಕೇರಿ ಸ್ವಚ್ಛವಾಗಿಟ್ಟುಕೊಳ್ಳೊಣವೆಂದು ಪ್ರತಿಯೊಂದು ಮನೆ ಮನೆಗೂ ತೆರಳಿ ಜಾಗೃತಿ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಈ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಸರ್ಕಾರ ನೀಡುವ ಸಂಬಳ ಮಾತ್ರ 6400 ರೂಪಾಯಿ. ಅದು ಕೂಡ ಕಳೆದ 6 ತಿಂಗಳಿಂದ ನಿಲ್ಲಿಸಿದ್ದಾರೆ.
ಇಷ್ಟೇ ಇಲ್ಲದೆ ಕೋವಿಡ್ -19 ನ ಸೋಂಕಿನ ಪರೀಕ್ಷೆಗೆ ಒಳಗಾಗಿ ಕ್ವಾರಂಟೈನ್ ಆದ ಶಂಕಿತರು ಮತ್ತು ಸೋಂಕಿತರಿಗೆ ಬೇಕಾಗುವ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಈ ಸಂಪರ್ಕ ಕಾರ್ಯಕರ್ತೆಯರಿಗೆ ವಹಿಸಿದ್ದಾರೆ. ಇವರು ಸಹ ಭಾರತಕ್ಕೆ ಅಂಟ್ಟಿರುವ ರೋಗದ ವಿರುದ್ಧ ಹೋರಾಡುವ ಯೋಧರೇ. ವೈದ್ಯರು, ಪೋಲಿಸರು, ಪತ್ರಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಂತೆ ಈ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರು ಈ ಸಂಪರ್ಕ ಕಾರ್ಯಕರ್ತೆಯರು ಕೊರೊನಾ ವಾರಿಯರ್ಸ್ ಗಳಾಗಿ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ.
ಆದರೆ ಸರ್ಕಾರ ಮಾತ್ರ ಇವರ ಕಷ್ಟಗಳಿಗೆ ಸ್ಪಂದಿಸುವಂತೆ ಕಾಣುತ್ತಿಲ್ಲ. ಬಿಬಿಎಂಪಿ ಅಡಿಯಲ್ಲಿ ಹೀಗೆ ಕಾರ್ಯನಿರ್ವಹಿಸುತ್ತಿರುವವರು ಸುಮಾರು 400 ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಗೆಲ್ಲ ಬಿಬಿಎಂಪಿಯಿಂದಾಗಲಿ ಅಥವಾ ರಾಜ್ಯ ಸರ್ಕಾರದಿಂದಾಗಲಿ ಇಲ್ಲಿಯವರೆಗೂ ಯಾವದೇ ರೀತಿಯ ಗೌರವ ಧನವಾಗಲಿ, ಅಥವಾ ಆಹಾರದ ಕಿಟ್ ಗಳಾಗಲಿ ಒದಗಿಸಿಲ್ಲ. ಅವರ ದುಡಿಮೆಗೆ ಸಿಗಬೇಕಾದ ಸಂಬಳಕ್ಕೂ ಇಂದು ಕತ್ತರಿ ಬಿದ್ದಿದೆ. ಸರ್ಕಾರದ ಈ ನಿರ್ಲಕ್ಷೆ ಗಮನಿಸಿದರೆ ಲಿಂಕ್ ಕಾರ್ಯಕರ್ತೆಯರ ಬದುಕು ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ. ಹೀಗೆ ಹಗಲಿರುಳು ದುಡಿಯುತ್ತಿರುವ ಈ ಕಾರ್ಯಕರ್ತೆಯರ ಬದುಕು ನಿಜಕ್ಕೂ ಮುಳ್ಳಿನ ಹಾದಿಯೇ ಆಗಿದೆ.
ಈ ಕಾರ್ಮಿಕರಲ್ಲಿ ಅನೇಕ ಜನರ ಕುಟುಂಬಗಳು ಇವರ ಮೇಲೆ ನಿರ್ಧಾರವಾಗಿದ್ದು ಇವರ ದುಡಿಮೆಯೇ ಕುಟುಂಬಕ್ಕೆ ಆಧಾರಸ್ತಂಭವೆಂದು ಹೇಳಬಹುದು. ಈ ಸಂಪರ್ಕ ಕಾರ್ಯಕರ್ತೆಯರಲ್ಲಿ ಅನೇಕರು ವಿಧವೆಯರಿದ್ದಾರೆ ಇವರ ದುಡಿಮೆಯಿಂದಲೆ ಮಕ್ಕಳಿಗೆ ಎರಡು ಹೊತ್ತಿನ ಊಟ ದಕ್ಕುತ್ತಿತ್ತು ಆದರೆ ಇಂದು ಆ ಅನ್ನಕ್ಕೂ ಬರ. ಮನೆ ಬಾಡಿಗೆ ವಿದ್ಯತ್ ಬಿಲ್ಲು, ನೀರಿನ ಬಿಲ್ಲು, ಮನೆಗೆ ರೇಶನ್ ಜೊತೆಗೆ ಮಕ್ಕಳ ವಿಧ್ಯಾಭ್ಯಾಸಕ್ಕೆ ಆನ್ಲೈನ್ ಕ್ಲಾಸ್ ಎಂಬ ಭೂತಕ್ಕೆ ನಿಜಕ್ಕೂ ಇವರೆಲ್ಲ ತತ್ತರಿಸಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಮೊಬೈಲ್ ಒದಗಿಸಿಕೊಡುವ ಸಾಮರ್ಥ್ಯವು ಇಲ್ಲದ ತಾಯಂದಿರು, ಹಸಿವಿಗೆ ಅನ್ನ ಹುಡುಕುತ್ತಿರುವ ತಾಯಂದಿರು, ಒಂದಾ ಎರೆಡಾ ಬರುವ 6440 ರೂಪಾಯಲ್ಲಿ ಸಂಪರ್ಕ ಕಾರ್ಯಕರ್ತೆಯರು ಜೀವನ ನಡೆಸುವುದಾದರೂ ಹೇಗೆ.? ಸರ್ಕಾರಕ್ಕೆ ಇವರ ಕಷ್ಟಗಳು ಕಾಣತ್ತಿಲ್ವಾ..?
ಕನಿಷ್ಟ ಈ ಕಾರ್ಯಕರ್ತೆಯರಿಗೆ 18,000 ಸಾವಿರ ಸಂಬಳ ಕೊಟ್ಟರೆ ಇವರು ಬದುಕುವುದಕ್ಕೆ ಸಹಾಯವಾಗುತ್ತೆ. ಹಾಗೂ ಇವರಿಗೆ ಕೊಡಬೇಕಾದ 6 ತಿಂಗಳ ಬಾಕಿ ವೇತನ ಸರ್ಕಾರ ಕೊಟ್ಟಿದ್ದರೆ ಅವರಿಂದು ಬಿಬಿಎಂಪಿ ಕಛೇರಿಯ ಮುಂದೆ ಧರಣಿ ನಡೆಸುತ್ತಿರಲ್ಲಿ. ನಿದ್ದೆ ಮಾಡುತ್ತಿರು ಸರ್ಕಾರ ಬೇಗ ಎಚ್ಚೇತುಕೊಂಡು ಇವರ ಕಣ್ಣೀರು ಒರೆಸುವ ಕೆಲಸಕ್ಕೆ ಮುಂದಾಗಬೇಕು. ಈಗಾಗಲೇ ಸರ್ಕಾರದ ನಿರ್ಲಕ್ಷೆಯಿಂದಾಗಿ ಅನೇಕ ಜನ ಹಸಿವಿನಿಂದ ಪ್ರಾಣ ಕಳೆದುಕೊಂದಿದ್ದಾರೆ.. ಹಸಿವು ಮುಕ್ತ ಭಾರತದ ಕನಸು ಬರೀ ವೇದವಾಕ್ಯವಾಗದೇ ಬಡವರಿಗೆ, ಕಾರ್ಮಿಕರಿಗೆ ಹಸಿವು ನಿಗಿಸುವ ಕೈ ತುತ್ತಾಗಲಿ. ಸರ್ಕಾರ ಹೇಳಿದ ಹಾಗೆ ಆಟೋ ಚಾಲಕರು, ಕಟ್ಟಡ ಕಾರ್ಮಿಕರಿಗೆ 5000 ಸಹಾಯಧನ, ಆಶಾ ಕಾರ್ಯಕರ್ತೆಯರಿಗೆ 3000 ರೂ, ಹಾಗೂ ಮೊನ್ನೆ ಘೋಷಣೆ ಮಾಡಿದ ನೇಕಾರರಿಗೆ 2000 ರೂ ಸಹಾಯ ಧನ ನಿಜಕ್ಕೂ ಅವರಿಗೆಲ್ಲ ತಲುಪಿದೆಯೋ ಇಲ್ವೊ ಗೊತ್ತಿಲ್ಲ. ಇನ್ನು ತಲುಪದೇ ಇರುವವರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಲಿ ಜೊತೆಗೆ ರಾಜ್ಯ ಸರ್ಕಾರ ಈ ಬಿಬಿಎಂಪಿ ಸಂಪರ್ಕ ಕಾರ್ಯಕರ್ತೆಯರಿಗೆ 5000 ರೂ ಸಹಾಯಧನ ನೀಡಬೇಕು. ಅವರಿಗೆ ಬರುವ ಕೇವಲ 6400 ರೂ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟ.
ಪ್ರಿಯಾಂಕ ಮಾವಿನಕರ್.