ಪ್ರಧಾನ ಮಂತ್ರಿಗಳು ಮಾರ್ಚ್ ೨೪ರಂದು ಕೊವಿಡ್-೧೯ ಮಹಾಮಾರಿಯ ವಿರುದ್ಧ ಘೋಷಿಸಿದ್ದ ಮೂರು ವಾರಗಳ ದಿಗ್ಬಂಧನದ ಕೊನೆಯ ದಿನ ಅವರಿಂದ ಮತ್ತೊಂದು ಪ್ರಸಾರ ಭಾಷಣದಲ್ಲಿ ಜನಗಳು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಲಾಕ್ ಡೌನನ್ನು ವಿಸ್ತರಿಸಲಾಗುವುದು ಎಂಬ ಪ್ರಕಟಣೆ ನಿರೀಕ್ಷಿತವೇ ಆಗಿತ್ತು. ಆದರೂ ಜತೆಗೆ ಈ ಮೂರು ವಾರಗಳಲ್ಲಿ ಎದ್ದು ಬಂದ ಸಮಸ್ಯೆಗಳಿಗೆ ಪರಿಹಾರ ಕ್ರಮಗಳನ್ನೂ ಅವರು ನಿರೀಕ್ಷಿಸಿದ್ದರು.
ಪ್ರಧಾನಿಗಳು ಮೇ ೩ ರವರೆಗೆ ಲಾಕ್ ಡೌನನ್ನು ವಿಸ್ತರಿಸುವ ಪ್ರಕಟಣೆ ಮಾಡಿದರು. ಆದರೆ ದುರದೃಷ್ಟವಶಾತ್, ಈ ಮೂರು ವಾರಗಳಲ್ಲಿ ಮಹಾಮಾರಿಯನ್ನು ಎದುರಿಸುವಲ್ಲಿ, ಮತ್ತು ಲಾಕ್ಡೌನ್ ನಿಂದಾಗಿ ಜನಗಳ ಜೀವನೋಪಾಯಗಳಿಗೆ ಸಂಬಂಧಪಟ್ಟಂತೆ ಉಂಟಾದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಏನೂ ಹೇಳಲೇ ಇಲ್ಲ. ಈ ಭಾಷಣದ ವೇಳೆಗೆ ಕೊವಿಡೊ-೧೯ ಮಹಾಮಾರಿಯಿಂದ ಅಧಿಕೃತವಾಗಿ ೩೩೯ ಸಾವುಗಳು ಸಂಭವಿಸಿವೆ. ಜತೆಗೇ ಈ ಲಾಕ್ಡೌನಿನ ಪರಿಣಾಮವಾಗಿ ಇನ್ನೂ ೨೦೦ ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.
ಜನಗಳು ಏಳು ಸೂತ್ರಗಳನ್ನು ಅನುಸರಿಸಬೇಕು ಎಂದು ಹೇಳಿದರು, ಆದರೆ ಈ ಸಮರವನ್ನು ಗೆಲ್ಲಲು ಸರಕಾರ ಎಷ್ಟು ಸೂತ್ರಗಳನ್ನು ಅನುಸರಿಸುತ್ತದೆ ಎಂದು ಮಾತ್ರ ಹೇಳಲಿಲ್ಲ ಎಂದು ಈ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಟಿಪ್ಪಣಿ ಮಾಡಿದರು. ಪ್ರಧಾನಿಗಳು “ನಾವು, ಭಾರತದ ಜನತೆ” ಮಹಾಮಾರಿಯನ್ನು ಎದುರಿಸುವಲ್ಲಿ ತಮ್ಮ ಇಚ್ಛಾಶಕ್ತಿಯನ್ನು ತೋರಿಸಿದ್ದಾರೆ ಎಂದು ಹೇಳಿದರು. ನಿಜ, ಜನತೆ ತಮ್ಮ ಕರ್ತವ್ಯ ನೆರವೇರಿಸಿಲ್ಲ ಎಂದು ಯಾರೂ ದೂರುವಂತಿಲ್ಲ. ಆದರೆ ಸರಕಾರ ತನ್ನ ಕರ್ತವ್ಯ ನಿಭಾಯಿಸಿಲ್ಲ ಎಂಬದೇ ನಮ್ಮ ದೂರು, ಅದನ್ನು ಎತ್ತಿದ್ದೇವೆ, ಅದನ್ನು ಸರಿಪಡಿಸಬೇಕು ಎಂದು ಈ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಯೆಚುರಿ ಹೇಳಿದರು. ಎಪ್ರಿಲ್ ೧೫ ರಂದು ನೀಡುವುದಾಗಿ ಹೇಳಿದ ಮಾರ್ಗನಿರ್ದೇಶನಗಳಲ್ಲಾದರೂ ಇವು ಇರಬಹುದು ಎಂದು ನಿರೀಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು.
ಸರಕಾರ ನಿಜವಾಗಿಯೂ ಚುರುಕಾಗಿತ್ತೇ?
ತಮ್ಮ ಸರಕಾರ ಕೊವಿಡ್ ಮಹಾಮಾರಿಯ ಪ್ರಶ್ನೆ ಉಲ್ಬಣಗೊಳ್ಳುವ ವರೆಗೆ ಕಾಯಲಿಲ್ಲ, ತ್ವರಿತ ಕ್ರಮಗಳನ್ನು ಕೈಗೊಂಡು ಈ ಸಮಸ್ಯೆಯನ್ನು ಮೊಳಕೆಯಲ್ಲೇ ನಿಭಾಯಿಸಿತು ಎಂಬುದಾಗಿ ಪ್ರಧಾನಿಗಳು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಪತ್ರಿಕ್ರಿಯೆಯೇನು ಎಂದು ಒಬ್ಬ ಪತ್ರಕರ್ತರು ಕೇಳಿದರು. ಬಹುಶಃ ಇದು ಪ್ರಧಾನಿಗಳ ಪ್ರಸಾರ ಭಾಷಣವನ್ನು ಕೇಳಿದ ಹಲವರಲ್ಲಿ ಎದ್ದ ಪ್ರಶ್ನೆ.
ಈ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇದೆ ಎಂದು ಯೆಚುರಿ ಹೇಳಿದರು. ವಾಸ್ತವವಾಗಿ ಜನವರಿ ೩೦ರಂದು ಮೊದಲ ಸೋಂಕು ಪತ್ತೆಯಾದರೂ ಕೇಂದ್ರ ಸರಕಾರ ಪೂರ್ಣ ಏಳು ವಾರಗಳ ವರೆಗೂ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ವಿದೇಶೀಯರು ಮತ್ತು ವಿದೇಶಗಳಿಂದ ಮರಳುವ ಭಾರತೀಯರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಬೇಕು ಎಂದು ನಾವು ಹೇಳುತ್ತ ಬಂದಿದ್ದೆವು. ಆದರೆ ಅದನ್ನು ಮಾರ್ಚ್ ಮಧ್ಯದ ವರೆಗೂ ಮಾಡಲಿಲ್ಲ. ಅದರಿಂದಾಗಿ ೧೫ ಇಟಾಲಿಯನ್ ಪ್ರವಾಸಿಗಳಿದ್ದ ಒಂದು ತಂಡ ದೇಶವನ್ನು ಪ್ರವೇಶಿಸಿತು. ಅವರಲ್ಲಿ ಕೆಲವರಲ್ಲಿ ಸೋಂಕು ಪತೆಯಾಯಿತು ಕೂಡ. ಅದೃಷ್ಟವಶಾತ್ ಅವರೀಗ ಗುಣಮುಖವಾಗಿದ್ದಾರೆ. ದೊಡ್ಡ ಗೋಷ್ಠಿಗಳಲ್ಲಿ ಭಾಗವಹಿಸಲು ಯಾವುದೇ ಪರೀಕ್ಷಣೆ ಇಲ್ಲದೆ ವೀಸಾಗಳನ್ನು ಕೊಟ್ಟದ್ದರಿಂದಾಗಿ ಆಗಿರುವ ದುಷ್ಪರಿಣಾಮಗಳನ್ನು ನೊಡಿದ್ದೇವೆ. ಆದ್ದರಿಂದ ಸರಕಾರ ಚುರುಕಾಗಿತ್ತು ಎಂದು ಹೇಳುವುದು ಹಲವು ಪ್ರಶ್ನೆಗಳನ್ನು ಎತ್ತುತ್ತದೆ.
ಅಷ್ಟೇ ಅಲ್ಲ, ಜಗತ್ತಿನಲ್ಲಿ ಈ ಮಹಾಮಾರಿ ಕಾಣಿಸಿಕೊಂಡ ಮೇಲೆ ಪೂರ್ಣ ಮೂರು ತಿಂಗಳು, ಭಾರತದಲ್ಲಿ ಮೊದಲ ಸೋಂಕು ಪತ್ತೆಯಾದ ಮೇಲೆ ಪೂರ್ಣ ಎರಡು ತಿಂಗಳು ಸರಕಾರಕ್ಕೆ ಇತ್ತು, ಆದರೆ ಇದನ್ನು ಎದುರಿಸಲು ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ, ಔಷಧಿಗಳ ದಾಸ್ತಾನನ್ನು ವೈದ್ಯಕೀಯ ಕಾರ್ಯಕರ್ತರಿಗೆ ಬೇಕಾದ ವೈಯಕ್ತಿಕ ಸುರಕ್ಷಾ ಪರಿಕರ(ಪಿ.ಪಿ.ಇ.) ಗಳನ್ನು, ತಪಾಸಣೆಯ ಸಾಧನಗಳನ್ನು ಹೆಚ್ಚಸಲು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ, ಬದಲಾಗಿ ಫೆಬ್ರುವರಿ ಕೊನೆಯ ವರೆಗೂ ಅಗತ್ಯ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ರಫ್ತು ಮುಂದುವರೆಯಿತು. ಅದರ ಪರಿಣಾಮಗಳನ್ನು ಈಗ ಎದುರಿಸಬೇಕಾಗಿ ಬಂದಿದೆ. ಆದರೆ ಈಗಿರುವ ಮುಖ್ಯ ಪ್ರಶ್ನೆ ಸರಕಾರ ಮುಂದೇನು ಮಾಡಬೇಕೆಂದಿದೆ ಎಂಬುದು ಎಂದು ಯೆಚುರಿ ಮಾರ್ಮಿಕವಾಗಿ ಹೇಳಿದರು.
ರಾಜ್ಯಗಳಿಗೆ ಅಗತ್ಯ ನೆರವು
ಈಗ ರಾಜ್ಯ ಸರಕಾರಗಳ ಮೆಲೆ ಹೆಚ್ಚಿನ ಹೊರೆ ಬೀಳುತ್ತಿರುವುದರಿಂದ, ಮತ್ತು ಕೇಂದ್ರ ಸರಕಾರದಿಂದ ಹಣಕಾಸಿನ ಮತ್ತು ಇತರ ಸಹಾಯ ಬರುತ್ತಿಲ್ಲವಾದ್ದರಿಂದ, ಸಿ.ಎಸ್.ಆರ್. ನಿಧಿ ಮುಂತಾದ ವಿಷಯಗಳಲ್ಲಿ ಪ್ರತಿಪಕ್ಷಗಳ ಮುಖ್ಯಮಂತ್ರಿಗಳನ್ನು ಅಣಿನೆರೆಸುವ ಮುತುವರ್ಜಿಯನ್ನು ತೆಗೆದುಕೊಳ್ಳುತ್ತೀರಾ ಎಂದು ಒಬ್ಬ ಪತ್ರಕರ್ತರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸುತ್ತ ಯೆಚುರಿ ಈಗಾಗಲೇ ನಾವು ಸಿ.ಎಸ್.ಆರ್.(ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಗಳು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗಳಿಗೂ ತೆಗೆದುಕೊಳ್ಳಲು ಸಾಧ್ಯವಾಗುವಂತೆ ಕಂಪನಿ ಕಾಯ್ದೆಯ ಶೆಡ್ಯೂಲ್ ೭ನ್ನು ತಿದ್ದುಪಡಿ ಮಾಡಬೇಕು ಎಂದೂ, ಪ್ರಧಾನ ಮಂತ್ರಿಗಳ ಹೊಸ ನಿಧಿಗೆ ಬರುತ್ತಿರುವ ನಿಧಿಗಳಿಂದ ರಾಜ್ಯಗಳಿಗೆ ವರ್ಗಾಯಿಸಬೇಕು ಎಂದೂ ಆಗ್ರಹಿಸುತ್ತಿದ್ದೇವೆ ಎಂದರು. ಅಲ್ಲದೆ, ಕೇರಳ ಎಡರಂಗ ಸರಕಾರದ ಹಣಕಾಸು ಮಂತ್ರಿಗಳು ಈ ತಿಂಗಳಲ್ಲಿ ಈ ಕುರಿತಂತೆ ಒಂದು ವೆಬಿನಾರ್ (ಅಂತರ್ಜಾಲ ವಿಚಾರಸಂಕಿರಣ) ಏರ್ಪಡಿಸುತ್ತಿದ್ದಾರೆ, ಇದರಲ್ಲಿ ಬಿಜೆಪಿಯೇತರ ಸರಕಾರಗಳ ಹಣಕಾಸು ಮಂತ್ರಿಗಳು ಭಾಗವಹಿಸುತ್ತಾರೆ, ಬಿಜೆಪಿ ಮುಖ್ಯಮಂತ್ರಿಗಳಿಗೂ ಇದಕ್ಕೆ ಸ್ವಾಗತವಿದೆ ಎಂದು ಹೇಳಿದರು.
ಸರಕಾರ ಒಂದು ನವಪದಿಯನ್ನು ಅಂಗೀಕರಿಸಿ ಅದನ್ನು ಸಮರೋಪಾದಿಯಲ್ಲಿ ಜಾರಿಗೊಳಿಸಬೇಕು
ಪ್ರಧಾನ ಮಂತ್ರಿಗಳು ನಾವು ಒಂದು ಏಳಂಶಗಳ ಕಾರ್ಯಕ್ರಮವನ್ನು ಜಾರಿ ಮಾಡಬೇಕಂದು ವಿಶದಪಡಿಸಿದ್ದಾರೆ. ಅದನ್ನು ಅವರು ಸಪ್ತಪದಿ ಎಂದಿದ್ದಾರೆ. ಇದೀಗ ಸರಕಾರ ತಾನು ಜಾರಿ ಮಾಡಬೇಕಾದ ಒಂದು ಕಾರ್ಯಕ್ರಮವನ್ನು, ನಾವು ಎತ್ತಿರುವ ಪ್ರಶ್ನೆಗಳ ಆಧಾರದಲ್ಲಿ ಅಂಗೀಕರಿಸಬೇಕಾದ ಸಮಯ ಬಂದಿದೆ. ನಿಜ ಹೇಳಬೇಕೆಂದರೆ ಕೇಂದ್ರ ಸರಕಾರ, ಕನಿಷ್ಟ ಒಂದು ನವಪದಿಯನ್ನಾದರೂ ಅಂಗೀಕರಿಸಿ ಅದನ್ನು ಸಮರೋಪಾದಿಯಲ್ಲಿ ಜಾರಿ ಮಾಡಬೇಕು ಎಂದು ಸೀತಾರಾಂ ಯೆಚುರಿ ಹೇಳಿದ್ದಾರೆ. ಅವರು ಮುಂದಿಟ್ಟಿರುವ ಒಂಭತ್ತು ಕನಿಷ್ಟ ಕ್ರಮಗಳು ಹೀಗಿವೆ:
- ಅಗತ್ಯ ಪಿ.ಪಿ.ಇ.ಗಳನ್ನು ಖರೀದಿಸಿ, ಒದಗಿಸುವುದು.
- ತಪಾಸಣೆಗಳ ತ್ವರಿತ ವಿಸ್ತರಣೆ.
- ತಕ್ಷಣವೇ ಎಲ್ಲ ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರದ ಜನಗಳಿಗೆ ರೂ.೭೫೦೦ ನಗದು ವರ್ಗಾವಣೆ.
- ಆಹಾರದ ಅಗತ್ಯವಿರುವ ಎಲ್ಲರಿಗೂ ಆಹಾರ ಧಾನ್ಯಗಳ ಉಚಿತ ವಿತರಣೆ.
- ಹಣಕಾಸು ಉತ್ತೇಜನೆ ಪ್ಯಾಕೇಜನ್ನು ಈಗಿರುವ ೦.೮% ಜಿ.ಡಿ.ಪಿ.ಯಿಂದ ಕನಿಷ್ಟ ೫% ಜಿ.ಡಿ.ಪಿ.ಗೆ ಏರಿಸುವುದು.
- ರಾಜ್ಯ ಸರಕಾರಗಳಿಗೆ ಉದಾರ ನಿಧಿ ಒದಗಿಸಿ ಬೆಂಬಲ.
- ಘೋಷಿತ ಸಿ೨+೫೦% ಬೆಂಬಲ ಬೆಲೆಗಳಲ್ಲಿ ಕಟಾವು ಆಗಿರುವ ಬೆಳೆಗಳ ಖರೀದಿ, ಮತ್ತು ಮನರೇಗ ಸ್ಕೀಮಿನ ಅಡಿಯಲ್ಲಿ ದಾಖಲಾಗಿರುವ ಎಲ್ಲರಿಗೂ ಕೆಲಸವಿದ್ದರೂ, ಇಲ್ಲದಿದ್ದರೂ ಕೂಲಿ ಪಾವತಿ
- ಕಾರ್ಮಿಕರನ್ನು ಉದ್ಯೋಗ ನಷ್ಟ, ಸಂಬಳ ಕಡಿತದಿಂದ ರಕ್ಷಿಸಲು ಉದ್ಯೋಗದಾತರಿಗೆ ಹಣಕಾಸು ನೆರವು. ೯. ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಮರಳಲು ವ್ಯವಸ್ಥೆ.