ಕೊವಿಡೊ ಮಹಾಮಾರಿ ಜನಗಳ ಆರೋಗ್ಯ ಮತ್ತು ಕಲ್ಯಾಣದ ಮೇಲೆ ಬಂಡವಾಳಶಾಹಿ ವ್ಯವಸ್ಥೆಯ ಹಾನಿಕಾರಕ ಪರಿಣಾಮಗಳನ್ನು ಸ್ಫೂಟವಾಗಿ ಪ್ರಕಟಗೊಳಿಸಿದೆ. ಪರ್ಯಾಯವಾಗಿ, ಸಮಾಜವಾದೀ ನಿಲುವು ಬಲ ಪಡೆದಿದೆ. ಅತ್ಯಂತ ಬಲಿಷ್ಟ ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ದೇಶ ಅಮೇರಿಕದ ಆರೋಗ್ಯ ವ್ಯವಸ್ಥೆ ವ್ಯವಸ್ಥೆ ಒಂದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲಾರದ ದರಿದ್ರ ವ್ಯವಸ್ಥೆ ಎಂದು ತೋರಿಸಿಕೊಂಡಿದೆ. ತದ್ವಿರುದ್ಧವಾಗಿ, ಪುಟ್ಟ ಕ್ಯೂಬ ಕೊವಿಡ್-19 ಮಹಾಮಾರಿಯ ಸಂದರ್ಭದಲ್ಲಿ, ಇಟೆಲಿ, ವೆನಝುವೆಲ ಮತ್ತು ನಾಲ್ಕು ಕೆರಿಬಿಯನ್ ದೇಶಗಳಿಗೆ ತನ್ನ ಡಾಕ್ಟರುಗಳನ್ನು ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಯನ್ನು ಕಳಿಸಿದೆ. ಕೊವಿಡ್-19 ವೈರಸ್‌ನಿಂದ ಮೊದಲು ಪೀಡಿತವಾದ ಚೀನಾಕ್ಕೆ ಅದನ್ನು ತಡೆಯಲು ವೈದ್ಯಕೀಯ ವಲಯದಲ್ಲಿನ ತನ್ನೆಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಸಾಧ್ಯವಾಯಿತು.
ಬಂಡವಾಳಶಾಹಿ ಮತ್ತು ಸಮಾಜವಾದೀ – ಈ ಎರಡು ಸಾಮಾಜಿಕ ವ್ಯವಸ್ಥೆಗಳ ನಡುವೆ ವ್ಯತ್ಯಾಸವನ್ನು, ಮತ್ತೊಮ್ಮೆ, 21ನೇ ಶತಮಾನದಲ್ಲಿ ತೋರಿಸಿಕೊಡಲು ಒಂದು ಪುಟ್ಟ, ಆದರೆ ಮಾರಣಾಂತಿಕ ವೈರಸ್ ಬರಬೇಕಾಯಿತು. ಜಾಗತಿಕ ಕೊರೊನ ವೈರಸ್ ಮಹಾಮಾರಿಯನ್ನು ಕೆಲವು ದೇಶಗಳು ನಿಭಾಯಿಸುತ್ತಿರುವ ರೀತಿ ಈ ವ್ಯತ್ಯಾಸವನ್ನು ಇನ್ನಷ್ಟು ಎತ್ತಿ ತೊರಿಸುತ್ತಿದೆ.
ಒಂದು ತುದಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಇದೆ. ಇದು ಜಗತ್ತಿನ ಅತ್ಯಂತ ಬಲಿಷ್ಟ ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ದೇಶ. ಅದು ಒಂದು ಅತ್ಯಂತ ಖಾಸಗೀಕೃತ ಆರೋಗ್ಯಪಾಲನೆ ವ್ಯವಸ್ಥೆಯನ್ನು ಹೊಂದಿರುವ ದೇಶವೂ ಆಗಿದೆ. ಇದು ಕಾರ್ಪೊರೇಟ್‌ಗಳು ನಡೆಸುವ, ಲಾಭದ ಧಾವಂತದಲ್ಲಿರುವ ಆರೋಗ್ಯ ವಲಯ. ಇಂತಹ ಒಂದು ವ್ಯವಸ್ಥೆ ಒಂದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲಾರದ ದರಿದ್ರ ವ್ಯವಸ್ಥೆ ಎಂದು ತೋರಿಸಿಕೊಂಡಿದೆ. ಈ ವ್ಯವಸ್ಥೆ ಹೊಂದಿರುವ ಆಸ್ಪತ್ರೆ ಹಾಸಿಗೆಗಳು, ತೀವ್ರ ನಿಗಾ ಘಟಕಗಳು, ಕೃತಕ ಉಸಿರಾಟಕ್ಕೆ ಬೇಕಾಗುವ ವೆಂಟಿಲೇಟರುಗಳು ಮತ್ತು ಆರೋಗ್ಯ ಕಾರ್ಯಕರ್ತರ ವೈಯಕ್ತಿಕ ಸುರಕ್ಷಾ ಪರಿಕರಗಳು ಅತಿ ಕನಿಷ್ಟ. ಸಾಮಾನ್ಯ ಪರಿಸ್ಥಿತಿಗಳಲ್ಲೂ ಇಲ್ಲಿ ಆರೋಗ್ಯಪಾಲನೆ ಅತ್ಯಂತ ದುಬಾರಿ, ಮತ್ತು ಖಾಸಗಿ ಆರೋಗ್ಯ ವಿಮಾವ್ಯವಸ್ಥೆ ಕೋಟ್ಯಂತರ ಜನಗಳ ಎಟುಕಿಗೆ ನಿಲುಕದಂತದ್ದು. ಇದು ಅಮೆರಿಕ ಎಷ್ಟೊಂದು ಅಸಮಾನತೆಯ ಸಮಾಜ ಎಂಬುದನ್ನು ಬಿಂಬಿಸುತ್ತದಷ್ಟೇ. ಇಲ್ಲಿ ಕೊರೊನ ಬಿಕ್ಕಟ್ಟಿನ ಸಮಯದಲ್ಲೂ ಕೂಡ ಶ್ರೀಮಂತರು ವೈದ್ಯಕೀಯ ಸಲಹಾ ಏಜೆನ್ಸಿಗಳಿಗೆ ಭಾರೀ ಹಣ ತೆತ್ತು ಉತ್ತಮ ಶುಶ್ರೂಷೆಯನ್ನು ಮತ್ತು ತ್ವರಿತ ಸೌಲಭ್ಯಗಳನ್ನು ಪಡೆಯಬಲ್ಲರು.
ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾದ ಸನ್ನಿವೇಶವನ್ನು ಪುಟ್ಟ ಕ್ಯೂಬಾದಲ್ಲಿ ಕಾಣಬಹುದು. ಅದು ಒಂದು ಸಮಾಜವಾದಿ ಸಮಾಜವನ್ನು ಅಭಿವೃದ್ಧಿ ಪಡಿಸುವ ತನ್ನ ಪ್ರಯತ್ನದಲ್ಲಿ ಎಂತವರೂ ಅಸೂಯೆ ಪಡಬಹುದಾದ ಒಂದು ಸಾಮಾಜೀಕೃತ ಆರೋಗ್ಯ ವ್ಯವಸ್ಥೆಯನ್ನು ಕಟ್ಟಿ ಬೆಳೆಸಿದೆ. ಅಮೆರಿಕಾದ ನಿರ್ಬಂಧಗಳು ಮತ್ತು ಆರ್ಥಿಕ ನಿಷೇಧಗಳ ಎದುರು ಕ್ಯೂಬಾ ತನ್ನದೇ ಸಂಪನ್ಮೂಲಗಳನ್ನು ಅವಲಂಬಿಸಿಕೊಂಡು ಜನಗಳ ಸೇವೆಯಲ್ಲಿ ತೊಡಗಿರುವ ಒಂದು ಮಾದರಿ ಆರೋಗ್ಯಪಾಲನೆ ವ್ಯವಸ್ಥೆಯನ್ನು ಕಟ್ಟಲು ಪ್ರಯತ್ನಗಳನ್ನು ನಡೆಸಿತು. ಕ್ಯೂಬಾದಲ್ಲಿ ವೈದ್ಯಕೀಯ ಶುಶ್ರೂಷೆ ಉಚಿತವಾಗಿದೆ. ದಾಖಲಾತಿಗೆಂದು ಒಂದು ನಾಮಮಾತ್ರದ ಶುಲ್ಕವನ್ನು ಕಟ್ಟಬೇಕಷ್ಟೇ. ಕ್ಯೂಬಾ ಜೈವಿಕ ತಂತ್ರಜ್ಞಾನವನ್ನು ಆಧರಿಸಿ ಒಂದು ಮುಂದುವರೆದ ಔಷಧಿ ಉದ್ದಿಮೆಯನ್ನು ಕೂಡ ಅಭಿವೃದ್ಧಿ ಪಡಿಸಿದೆ. ಅದು ಲ್ಯಾಟಿನ್ ಅಮೆರಿಕ, ಕೆರಿಬಿಯನ್ ಮತ್ತು ಆಪ್ರಿಕಾದ ವಿವಿಧ ದೇಶಗಳ ಬಡ ಜನವಿಭಾಗಗಳ ಸೇವೆಯಲ್ಲಿ ತನ್ನ ವೈದ್ಯಕೀಯ ಮಿಶನ್‌ಗಳನ್ನು, ಡಾಕ್ಟರುಗಳನ್ನು ಕಳಿಸುತ್ತಿದೆ.
ಕೊವಿಡ್-19 ಮಹಾಮಾರಿಯ ಸಂದರ್ಭದಲ್ಲಿ, ಕ್ಯೂಬಾ ಇಟೆಲಿ, ವೆನಝುವೆಲ ಮತ್ತು ನಾಲ್ಕು ಕೆರಿಬಿಯನ್ ದೇಶಗಳಿಗೆ ತನ್ನ ಡಾಕ್ಟರುಗಳನ್ನು ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಯನ್ನು ಕಳಿಸಿದೆ. ಇಂತಹ ಒಂದು ವೈದ್ಯಕೀಯ ವ್ಯವಸ್ಥೆ ಮತ್ತು ಉತ್ತಮ ಆರೋಗ್ಯ ಸೂಚ್ಯಂಕಗಳು ಸಾಧ್ಯವಾಗಿರುವುದು, ಶುಲ್ಕರಹಿತ ಸಾರ್ವಜನಿಕ ಶಿಕ್ಷಣ, ಆಹಾರ ಮತ್ತು ವಸತಿಯ ಸಾರ್ವಜನಿಕ ಲಭ್ಯತೆಯನ್ನು ಮತ್ತು ಮಹಿಳೆಯರ ಸ್ಥಾನಮಾನದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿರುವ ಒಂದು ಸಮಾಜವಾದಿ ವ್ಯವಸ್ಥೆ ಅಲ್ಲಿ ಇರುವುದರಿಂದಾಗಿಯೇ.
ಇತರ ಮುಂದುವರೆದ ಬಂಡವಾಳಶಾಹೀ ದೇಶಗಳಲ್ಲಿ, ಅಮೆರಿಕದಲ್ಲಿರುವಂತಹ ವ್ಯವಸ್ಥೆಯಿರಲಿಲ್ಲ. ಅದಕ್ಕೆ ಹೋಲಿಸಿದರೆ ಉತ್ತಮವೆನ್ನಬಹುದಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಇದ್ದವು. ಇವನ್ನು ನವ-ಉದಾರವಾದಿ ಧೋರಣೆಗಳು ಮತ್ತು ವರ್ಷಾನುಗಟ್ಟಲೆ ಅನುಸರಿಸಿದ ‘ಮಿತವ್ಯಯ’ ದುರ್ಬಲಗೊಳಿಸಿವೆ, ಸಾರ್ವತ್ರಿಕ ಆರೋಗ್ಯ ಸೌಲಭ್ಯಗಳನ್ನು ಕೊರೆದು ಹಾಕಿವೆ. ಬ್ರಿಟನನ್ನಿನ ‘ನ್ಯಾಶನಲ್ ಹೆಲ್ತ್ ಸರ್ವಿಸಸ್’(ಎನ್.ಹೆಚ್.ಎಸ್.- ರಾಷ್ಟ್ರೀಯ ಆರೋಗ್ಯ ಸೇವೆಗಳು) ಅಗತ್ಯ ಹಣ ನೀಡದೇ ಇದ್ದುದರಿಂದ ಮತ್ತು ಆರೋಗ್ಯ ವಲಯದ ಖಾಸಗೀಕರಣದಿಂದ ತೊಂದರೆಗೊಳಗಾಗಿದೆ; ಇಟೆಲಿಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೂ ಬಾಧೆಯುಂಟಾಗಿದೆ. ಪ್ರಸಕ್ತ ಬಿಕ್ಕಟ್ಟಿನಲ್ಲಿ , ಈ ದೇಶಗಳಲ್ಲಿ ಜನಗಳಿಗೆ ಸಾರ್ವಜನಿಕ ಆರೋಗ್ಯ ಪಾಲನೆಯನ್ನು ಶಿಥಿಲಗೊಳಿಸಿದ ಪ್ರಮಾದ ಕಣ್ಣೆಗೆ ಕಟ್ಟುವ ರೀತಿಯಲ್ಲಿ ಅರಿವಿಗೆ ಬಂದಿದೆ. ಸ್ಪೇನ್‌ನಲ್ಲಂತೂ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕರಿಸಲಾಗಿದೆ.
ಕೊವಿಡ್-19 ವೈರಸ್‌ನಿಂದ ಮೊದಲು ಪೀಡಿತವಾದ ಚೀನಾ ಅದು ವುಹಾನ್ ಮತ್ತು ಹುಬೈ ಪ್ರಾಂತದಿಂದ ಬೇರೆಡೆಗೆ ಹರಡದಂತೆ ತಡೆಯಲು ಅಪಾರ ಪ್ರಯತ್ನ ನಡೆಸಿತು, ವೈದ್ಯಕೀಯ ವಲಯದಲ್ಲಿನ ತನ್ನೆಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಿತು. ಡಬ್ಲೂಹೆಚ್‌ಒ-ಚೀನಾ ಜಂಟಿ ಮಿಶನ್ ನ್ ವರದಿ ಇದು ‘ಚರಿತ್ರೆಯಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ, ಕುಶಾಗ್ರ ಮತ್ತು ಕೆಚ್ಚಿನ ರೋಗ ನಿರೋಧಕ ಪ್ರಯತ್ನ’ ಎಂದಿದೆ. ಚೀನಾಕ್ಕೆ ಇದನ್ನು ಮಾಡಲು ಸಾಧ್ಯವಾಗಿರುವುದು ಅದು ಒಂದು ಗಟ್ಟಿಮುಟ್ಟಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವುದರಿಂದಾಗಿ.
2009ರಲ್ಲಿ ಚೀನೀ ಸರಕಾರ “ಆರೋಗ್ಯ ವ್ಯವಸ್ಥೆ ಸುಧಾರಣೆಯನ್ನು ಆಳಗೊಳಿಸುವ ಕುರಿತು ಅಭಿಪ್ರಾಯ” ಎಂಬ ಒಂದು ಅಧಿಕೃತ ದಸ್ತಾವೇಜನ್ನು ಪ್ರಕಟಿಸಿತು. ಇದು 2020ರೊಳಗೆ ಎಲ್ಲ ಜನಗಳನ್ನು ಒಳಗೊಳ್ಳುವ ಒಂದು ಸುಲಭ-ಲಭ್ಯ, ಸಮತ್ವಪೂರ್ಣ, ಕೈಗೆಟಕುವ ಮತ್ತು ದಕ್ಷ ಆರೋಗ್ಯ ವ್ಯವಸ್ಥೆಯನ್ನು ಸ್ಥಾಪಿಸುವ ಒಂದು ರಾಜಕೀಯ ಬದ್ಧತೆಯ ದಸ್ತಾವೇಜು ಆಗಿತ್ತು. ಈ ದಿಕ್ಕಿನಲ್ಲಿ ಆಗಿರುವ ಪ್ರಗತಿ ಕಣ್ಣಿಗೆ ಕಾಣಿಸುತ್ತಿದೆ. ಒಟ್ಟು ಆರೋಗ್ಯ ವೆಚ್ಚ ಜಿಡಿಪಿಯ 5ಶೇ.ದಿಂದ 2017ರಲ್ಲಿ 6.4ಕ್ಕೇರಿತು. ಸ್ವಂತವಾಗಿ ಮಾಡಬೇಕಾದ ಖರ್ಚಿನ ಪ್ರಮಾಣ 27ಶೇ.ಕ್ಕೆ ಇಳಿಯಿತು. 2017ರಲ್ಲಿ ಒಳರೋಗಿ ಚಿಕಿತ್ಸೆಗಳಲ್ಲಿ 82ಶೇ.ದಷ್ಟನ್ನು ಸಾರ್ವಜನಿಕ ಆಸ್ಪತ್ರೆಗಳೇ ಒದಗಿಸಿದವು. ಚೀನಾದಲ್ಲಿ ಒಂದು ಬೃಹತ್ ಗಾತ್ರದ ಔಷಧಿ ಉದ್ದಿಮೆ ಇದೆ. ಅದು ಜಗತ್ತಿನಾದ್ಯಂತ ಔಷಧಿ ಕಂಪನಿಗಳಿಗೂ ರಾಸಾಯನಿಕ ರಿಯೇಜಂಟ್‌ಗಳನ್ನು ಒದಗಿಸುತ್ತಿದೆ. ಇವೆಲ್ಲವೂ ಯೋಜನಾಬದ್ಧವಾಗಿ ಮತ್ತು ಲಾಭದ ಗುರಿಯಿಂದ ಮುಕ್ತವಾದ ಒಂದು ಸಾಮಾಜಿಕ ವಲಯವನ್ನು ಬೆಳೆಸಿದ್ದರಿಂದಾಗಿ ಸಾಧ್ಯವಾಯಿತು.
ಇದಕ್ಕೆ ಹೋಲಿಸಿದರೆ ಭಾರತದಲ್ಲಿನ ಪರಿಸ್ಥಿತಿ ಕೆಟ್ಟದಾಗಿದೆ. ಇದೀಗ ಭಾರತ ಜಗತ್ತಿನಲ್ಲೆ ಅತಿ ಹೆಚ್ಚು ಖಾಸಗೀಕೃತ ಆರೋಗ್ಯ ವ್ಯವಸ್ಥೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಮೋದಿ ಸರಕಾರ ಅಂಗೀಕರಿಸಿರುವ ರಾಷ್ಟ್ರೀಯ ಆರೋಗ್ಯ ಧೋರಣೆ ಖಾಸಗೀಕರಣಕ್ಕೇ ಉತ್ತೇಜನೆ ನೀಡುತ್ತದೆ. ಆರೋಗ್ಯದ ಮೇಲೆ ಸಾರ್ವಜನಿಕ ವೆಚ್ಚದ ಪ್ರಮಾಣ ಜಿಡಿಪಿಯ 1ಶೇ.ಕ್ಕಿಂತಲೂ ಕಡಿಮೆ. ಆರೋಗ್ಯಕ್ಕೆ ಒಂದು ಕುಟುಂಬ ಮಾಡುವ ವೆಚ್ಚದಲ್ಲಿ 70 ಶೇ.ದಷ್ಟು ಸ್ವಂತ ಜೇಬಿನಿಂದಲೇ ಬರಬೇಕು. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಳರೋಗಿ ಶುಶ್ರೂಷೆಯ ಪ್ರಮಾಣ ಕೇವಲ 44ಶೇ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಒತ್ತಟ್ಟಿಗಿರಲಿ, ಜನಗಳ ಸಾಮಾನ್ಯ ಆರೋಗ್ಯದ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಕೂಡ ಇಲ್ಲಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಇಲ್ಲ.
ನಿಜ, ಈ ರಾಷ್ಟ್ರೀಯ ಚಿತ್ರಕ್ಕೆ ಕೇರಳ ಒಂದು ಅಪವಾದ. ಈಗಾಗಲೇ ಅದು ಕೊರೊನ ವೈರಸ್ ಸಾಂಕ್ರಾಮಿಕವನ್ನು ಎದುರಿಸಿರುವ ತ್ವರಿತ ಮತ್ತು ದಕ್ಷ ರೀತಿ ಮೆಚ್ಚುಗೆ ಗಳಿಸಿದೆ. ಇದಕ್ಕೆ ಕಾರಣ ದಶಕಗಳಿಂದ ಕಟ್ಟಿ ಬೆಳೆಸಿದ ಒಂದು ಸಾರ್ವಜನಿಕ ಆರೋಗ್ಯ ಪಾಲನೆ ವ್ಯವಸ್ಥೆ. ಇದು ಪ್ರಸಕ್ತ ಎಲ್‌ಡಿಎಫ್ ಸರಕಾರದ ಅಡಿಯಲ್ಲಿ ಮೇಲ್ದರ್ಜೆಗೇರಿದೆ, ಸುಧಾರಣೆಗೊಂಡಿದೆ. ಈ ಸರಕಾರ 2017ರಲ್ಲಿ ‘ಆರ್ದ್ರಂ’ ಎಂಬ ಒಂದು ಆರೋಗ್ಯ ಮಿಶನ್ ಆರಂಭಿಸಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಹೆಚ್ಚಿಸಿ ಅವನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಪರಿವರ್ತಿಸಲಾಯಿತು. ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಮತ್ತು ಆರೋಗ್ಯ ಕಾರ್ಯಕರ್ತರ ತರಬೇತಿಯನ್ನು ಹೆಚ್ಚಿಸಲಾಗಿದೆ. ಕೇರಳದಲ್ಲಿನ ಉತ್ತಮ ಆರೋಗ್ಯ ಸೂಚ್ಯಂಕಗಳು ಆಹಾರ ಭದ್ರತೆ, ಶಿಕ್ಷಣ, ವಸತಿ, ಶುಚಿತ್ವ ಮತ್ತು ಲಿಂಗ ಸಂಬಂಧಗಳು ಮುಂತಾದ ಸಾಮಾಜಿಕ ನಿರ್ಧಾರಕಗಳ ಫಲಿತಾಂಶ ಕೂಡ ಆಗಿದೆ. ಈ ‘ಕೇರಳ ಮಾದರಿ’ಯು ಧೋರಣೆ ರೂಪೀಕರಿಸುವಲ್ಲಿ ಮತ್ತು ಸಾರ್ವಜನಿಕ ಕ್ರಿಯೆಯಲ್ಲಿ ಸಮಾಜವಾದೀ ಮಾದರಿಯ ಗುರಿಗಳಿಂದ ಪ್ರೇರಿತವಾದ ಎಡಶಕ್ತಿಗಳ ಪಾತ್ರದಿಂದ ಪ್ರಭಾವಿತಗೊಂಡಿರುವಂತದ್ದು. ಕೊವಿಡೊ ಮಹಾಮಾರಿ ಜನಗಳ ಆರೋಗ್ಯ ಮತ್ತು ಕಲ್ಯಾಣದ ಮೇಲೆ ಬಂಡವಾಳಶಾಹಿ ವ್ಯವಸ್ಥೆಯ ಹಾನಿಕಾರಕ ಪರಿಣಾಮಗಳನ್ನು ಸ್ಫೂಟವಾಗಿ ಪ್ರಕಟಗೊಳಿಸಿದೆ. ಪರ್ಯಾಯವಾಗಿ, ಸಮಾಜವಾದೀ ನಿಲುವು ಬಲ ಪಡೆದಿದೆ. ಕೊವಿಡೊ ನಂತರದ ಘಟ್ಟದಲ್ಲಿ ಸಾಮಾಜಿಕ ಪರಿವರ್ತನೆಯ ಹೋರಾಟದಲ್ಲಿ ನಮ್ಮ ಬತ್ತಳಿಕೆಗೆ ಬಂದಿರುವ ಈ ಅನುಭವವನ್ನು ಬಳಸಿಕೊಳ್ಳಬೇಕಾಗಿದೆ.