- ನಿರುದ್ಯೋಗ ದರ 8% ದಿಂದ 23% ಕ್ಕೆ ಜಿಗಿದಿದೆ!
- ಎರಡು ವಾರಗಳಲ್ಲಿ 5 ಕೋಟಿ ಉದ್ಯೋಗ ನಷ್ಟ !
- 40 ಕೋಟಿ ಕಾರ್ಮಿಕರು ಮತ್ತೆ ದಾರಿದ್ರ್ಯದ ದವಡೆಗೆ!
- ಲಾಕ್ಡೌನ್ನಿಂದಾಗಿಯೂ 159 ಸಾವುಗಳು!
ಭಾರತದಲ್ಲಿ ನಿರುದ್ಯೋಗ ದರ ಮಾರ್ಚ್ ತಿಂಗಳಲ್ಲಿ 8.7 %ಕ್ಕೆ ಏರಿತ್ತು. ಅದು ಕಳೆದ 43 ತಿಂಗಳಲ್ಲೇ ಅತಿ ಹೆಚ್ಚಿನ ಮಟ್ಟ. ಆದರೆ ಮಾರ್ಚ್ ಅಂತ್ಯದ ವೇಳೆಗೆ ಅದು 23.8%ಕ್ಕೆ ನೆಗೆದಿದೆ ಎಂದು ಸಿಎಂಐಇ(ಭಾರತೀಯ ಅರ್ಥವ್ಯವಸ್ಥೆಯ ನಿರೀಕ್ಷಣೆಯ ಕೇಂದ್ರ) ಮುಖ್ಯ ನಿರ್ವಹಣಾಧಿಕಾರಿ ಮಹೇಶ ವ್ಯಾಸ್ ಹೇಳಿದ್ದಾರೆ (ದಿ ವೈರ್, ಎಪ್ರಿಲ್ 7).
ಇದು ಲಾಕ್ಡೌನ್ನಿಂದ ಅರ್ಥವ್ಯವಸ್ಥೆ ಸ್ಥಬ್ಧಗೊಂಡುದರ ಪರಿಣಾಮ ಎಂದು ಬೇರೆ ಹೇಳಬೇಕಾಗಿಲ್ಲ. ಸಿಎಂಐಇ ಪ್ರತಿವಾರ ಮತ್ತು ಪ್ರತಿ ತಿಂಗಳು ಉದ್ಯೋಗ-ನಿರುದ್ಯೋಗ ಕುರಿತಂತೆ ಸರ್ವೆಯ ಆಧಾರದಲ್ಲಿ ಈ ಅಂಕಿ-ಅಂಶಗಳನ್ನು ಪ್ರಕಟಿಸುತ್ತದೆ.
ನಿಜ, ಕಳೆದ ಎರಡು ವಾರಗಳಲ್ಲಿ ಲಾಕ್ ಡೌನ್ನಿಂದಾಗಿ ಎಂದಿನ ಪ್ರಮಾಣದಲ್ಲಿ ಸರ್ವೆ ನಡೆಸಲಾಗಲಿಲ್ಲ. ಆದರೂ ಇದು ನಿರುದ್ಯೋಗ ದರವನ್ನು ಉತ್ಪ್ರೇಕಿಸಿರುವ ಸಂಭವ ಕಡಿಮೆ. ವಾಸ್ತವವಾಗಿ ನಿರುದ್ಯೋಗ ದರ ಇನ್ನೂ ಹೆಚ್ಚಿರುವ ಸಂಭವವೇ ಜಾಸ್ತಿ. ಏಕೆಂದರೆ ಕೆಲಸ ಕಳಕೊಂಡು ಕಾಲ್ನಡಿಗೆಯಲ್ಲಿ ತಮ್ಮೂರುಗಳಿಗೆ ಸಾಗಿರುವ ವಲಸೆ ಕಾರ್ಮಿಕರ ಸಂಖ್ಯೆ ಇದರಲ್ಲಿ ಬಿಂಬಿತವಾಗಿರಲಿಕ್ಕಿಲ್ಲ ಎನ್ನುತ್ತಾರೆ ಮಹೇಶ ವ್ಯಾಸ್.
ಗ್ರಾಮೀಣ ನಿರುದ್ಯೋಗವೂ 8.29%ದಿಂದ ಎಪ್ರಿಲ್ 5ರ ವೇಳೆಗೆ 20.21%ಕ್ಕೇರಿದೆ ಎಂದು ಸಿಎಂಐಇ ಹೇಳಿದೆ.
ಅಂತರ್ರಾಷ್ಟ್ರೀಯ ಶ್ರಮ ಸಂಘಟನೆ(ಐಎಲ್ಒ)ಯ ವರದಿ 40 ಕೋಟಿ ಅಸಂಘಟಿತ ಕಾರ್ಮಿಕರು ದಾರಿದ್ರ್ಯಕ್ಕೆ ತಳ್ಳಲ್ಪಡುತ್ತಾರೆ ಎಂದು ಎಚ್ಚರಿಸಿದೆ.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಲ್ಲಿ ಸುಮಾರು 71% ಕಂಪನಿಗಳಿಗೆ ತನ್ನ ಉದ್ಯೋಗಿಗಳಿಗೆ ಮಾರ್ಚ್ ತಿಂಗಳ ಸಂಬಳವನ್ನು ಪೂರ್ಣವಾಗಿ ಅಥವ ಭಾಗಶಃ ಕೊಡಲು ಆಗಿಲ್ಲ ಎಂದು ಅಖಿಲ ಭಾರತ ತಯಾರಕರ ಸಂಘಟನೆ(ಎಐಎಂಒ) ಹೇಳಿದೆ(ದಿ ಹಿಂದು, ಎಪ್ರಿಲ್ 6)
ಇದು ಈ ವಲಯದ 5000ಕ್ಕೂ ಹೆಚ್ಚು ಕಂಪನಿಗಳ ಸರ್ವೆಯ ಆಧಾರದಲ್ಲಿ ಅದು ಮಾಡಿರುವ ಅಂದಾಜು. ಇವರಲ್ಲಿ 63% ಕಂಪನಿಗಳಿಗೆ ನಗದು ಹರಿವಿನ ಕೊರತೆಯ ಸಮಸ್ಯೆಗಳು ಎದುರಾಗಿವೆ. ಏಕೆಂದರೆ ತಮ್ಮ ಗ್ರಾಹಕರಿಂದ ಹಣ ಬರಲಿಲ್ಲ, ಹೊಸ ಆರ್ಡರುಗಳ ಮುಂಗಡ ಹಣವೂ ಬರಲಿಲ್ಲ.
ಮನೆಯಿಂದ ಕೆಲಸ ಮಾಡಲು ಅವಕಾಶ ಇರುವ, ಅದರಿಂದಾಗಿ ಕೆಲಸವಿರಲಿಲ್ಲ ಎಂಬ ಸಮಸ್ಯೆ ಇಲ್ಲದ ಐಟಿ ಕಂಪನಿಗಳೂ ಹಲವು ಸಂಬಳ ಕಡಿತ ಮಾಡಿವೆ ಮತ್ತು ಉದ್ಯೋಗಿಗಳು ರಾಜೀನಾಮೆ ಕೊಡುವಂತೆ ಪರೋಕ್ಷವಾಗಿ ಬಲವಂತ ಮಾಡುತ್ತಿವೆ ಎಂದೂ ವರದಿಯಾಗಿವೆ. ಸಂಬಳ ಕೊಡದಿರಬಾರದು ಎಂಬ ಕಾರ್ಮಿಕ ಇಲಾಖೆಯ ಸಲಹಾ ಆದೇಶ(ಅಡ್ವೈಸರಿ) ಮಾರ್ಚ್ ೩೧ ರವರೆಗೆ ಮಾತ್ರ ಅನ್ವಯವಾಗುತ್ತದೆ ಎಂದು ಕೆಲವು ಕಂಪನಿಗಳು ಸಬೂಬು ಕೊಡುತ್ತಿವೆಯಂತೆ.
ಈ ನಡುವೆ ಲಾಕ್ ಡೌನ್ನಿಂದಾಗಿ ಇದ್ದಕ್ಕಿದ್ದಂತೆ ತಮ್ಮ ಜೀವನಾಧಾರವನ್ನೇ ಕಳಕೊಂಡ, ತಂತಮ್ಮ ಊರಿಗೆ ಹಿಂದಿರುಗುವುದಲ್ಲದೆ ಅನ್ಯ ಮಾರ್ಗವಿಲ್ಲದ ವಲಸೆ ಕೂಲಿಕಾರ ಕುಟುಂಬಗಳ ಪೈಕಿ 42% ಕುಟುಂಬಗಳ ಬಳಿ ಒಂದು ದಿನಕ್ಕೆ ಸಾಲುವಷ್ಟೂ ರೇಷನ್ ಇಲ್ಲ ಎಂದು ಇನ್ನೊಂದು ಸರ್ವೆ ಹೇಳುತ್ತದೆ(ದಿ ಸಿಟಿಜನ್, ಎಪ್ರಿಲ್ 6).
ಒಂದು ವೇಳೆ ಲಾಕ್ಡೌನ್ 21 ದಿನಗಳ ನಂತರವೂ ಮುಂದುವರೆದರೆ ಒಂದು ವಾರಕ್ಕಿಂತ ಹೆಚ್ಚು ಕಾಲ ತಾಳಿಕೊಳ್ಳುವುದು ತಮಗೆ ಸಾಧ್ಯವಿಲ್ಲ ಎಂದು ೬೬% ಕೂಲಿಕಾರರು ಹೇಳಿದ್ದಾರೆ. ಈಗಾಗಲೇ 92.5% ಕೂಲಿಕಾರರು ಒಂದು ವಾರದಿಂದ ಮೂರು ವಾರದ ವರೆಗೆ ಉದ್ಯೋಗವಿಲ್ಲದೆ ಕೂತಿದ್ದೇವೆ ಎಂದು ಹೇಳಿದರೆ, ಸುಮಾರು 83% ಮಂದಿಗೆ ಲಾಕ್ಡೌನ್ ಮುಗಿದ ಮೇಲೆ ಕೆಲಸ ಮತ್ತೆ ಸಿಗುವ ಭರವಸೆ ಇಲ್ಲ.
ಭಾರತದ ಮುಖ್ಯ ಸಂಖ್ಯಾಶಾಸ್ತ್ರಜ್ಞರ ಹುದ್ದೆಯಿಂದ ಇತ್ತೀಚೆಗೆ ನಿವೃತ್ತರಾದ ಪ್ರೊಣಬ್ ಸೆನ್ ಈ ಎರಡು ವಾರಗಳಲ್ಲಿ 5 ಕೋಟಿ ಕಾರ್ಮಿಕರು, ನೌಕರರು ಉದ್ಯೋಗ ಕಳಕೊಂಡಿರಬಹುದು ಎಂದು ಹೇಳಿದ್ದಾರೆ.
ಕೊವಿಡೊ ಸಾವುಗಳು ಮತ್ತು ಲಾಕ್ ಡೌನ್ ಸಾವುಗಳು
ಈ ನಡುವೆ ಕೊವಿಡ್ ಸಾವುಗಳ ಸಂಖ್ಯೆಯೊಂದಿಗೆ ಲಾಕ್ಡೌನ್ನಿಂದಾಗಿ ಆಗಿರುವ ಸಾವುಗಳ ಸಂಖ್ಯೆಯ ಸ್ಪರ್ಧೆ ಈಗಲೂ ಮುಂದುವರೆದಿದೆ.
ಎಪ್ರಿಲ್ 11ರ ವೇಳೆಗೆ ಕೊವಿಡ್ 252 ಜೀವಗಳನ್ನು ಬಲಿ ತೆಗೆದುಕೊಂಡಿದ್ದರೆ, ಲಾಕ್ಡೌನಿನ ವಿವಿಧ ಪರಿಣಾಮಗಳಿಂದಾಗಿ( ಉಪವಾಸ. ಸುಸ್ತು, ಆತ್ಮಹತ್ಯೆ, ಅಪಘಾತ, ಪೊಲಿಸ್ ಅತ್ಯಾಚಾರಇತ್ಯಾದಿ) ಕನಿಷ್ಟ 159 ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ.(coronapolicyimpact.org)
ಬಿಕ್ಕಟ್ಟು ದುರುಗುಟ್ಟಿ ನೋಡುತ್ತಿದೆ. ಇದಕ್ಕೆ ಕೇಂದ್ರ ಸರಕಾರದ ಸ್ಪಂದನವೇನು? ಇನ್ನಷ್ಟು ಸಾಂಕೇತಿಕಆಚರಣೆಗಳ ಮೂಲಕ ಗಮನವನ್ನು ಬೇರೆಡೆಗೆ ತಿರುಗಿಸುವುದು ಮತ್ತು ನಿಜಪ್ರಶ್ನೆಗಳ ಬಗ್ಗೆ ದಿವ್ಯ ಮೌನವೇ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
40 ಕೋಟಿ ಕಾರ್ಮಿಕರು ದಾರಿದ್ರ್ಯದತ್ತ ತಳ್ಳಲ್ಪಡುತ್ತಿದ್ದಾರೆ ಎಂದು ಎಚ್ಚರಿಸಿರುವ ಐ.ಎಲ್.ಒ. ವರದಿ 4 ಸ್ಥಂಭಗಳ ಪರಿಹಾರವನ್ನೂ ಸೂಚಿಸಿದೆ.
ಎಲ್ಲರಿಗೂ ಸಾಮಾಜಿಕ ರಕ್ಷಣೆ ಒದಗಿಸಿ, ಉದ್ಯೋಗ ಉಳಿಸಿಕೊಳ್ಳುವ ಕ್ರಮಗಳನ್ನು ಜಾರಿಗೊಳಿಸಿ, ಸಂಬಳ ಸಹಿತ ರಜಾಗಳನ್ನು ವಿಸ್ತರಿಸಿ, ಉದ್ದಿಮೆಗಳಿಗೆ ( ವಿಶೇಷವಾಗಿ ಸಣ್ಣ-ಮಧ್ಯಮ) ತೆರಿಗೆ ರಜಾ ಸೌಲಭ್ಯ ಕೊಡಿ ಮುಂತಾದ ಕ್ರಮಗಳನ್ನು ಸೂಚಿಸಿದೆ.
ಈ ಮೊದಲೇ ಸೂಪರ್ ಶ್ರೀಮಂತ ಕಾರ್ಪೊರೇಟ್ಗಳಿಗೆ 8 ಲಕ್ಷ ಕೋಟಿ ರೂ.ಗಳಷ್ಟು ಉತ್ತೇಜನೆಯ ಹೆಸರಲ್ಲಿ ರಿಯಾಯ್ತಿಗಳನ್ನು ಕೊಟ್ಟಿರುವ ನಮ್ಮ ಕೇಂದ್ರ ಸರಕಾರ, ಅವರಿಗೆ ನೀಡಿದ ಉತ್ತೇಜನೆಯಿಂದ ದೇಶಕ್ಕೇನು ಪ್ರಯೋಜನವಾಯಿತು ಎಂದು ಕೇಳಿಲ್ಲ. ಬದಲಿಗೆ ಅವರು ಇನ್ನಷ್ಟು ಸುಸ್ತಿಸಾಲಗಳನ್ನು ಹೆಚ್ಚಿಸಿಕೊಂಡಿದ್ದಾರೆ, ಸರಕಾರ ಮತ್ತಷ್ಟು ಸುಸ್ತಿ ಸಾಲಗಳನ್ನು ರೈಟ್ ಆಫ್ ಮಾಡಿದೆ. ಆದರೆ ಕೋಟ್ಯಂತರ ದುಡಿಯುವ ಜನರ ಈ ಪರಿಸ್ಥಿತಿಗಳ ಬಗ್ಗೆ ಏನೂ ಮಾಡಿಲ್ಲ, ಏನೂ ಹೇಳಿಲ್ಲ.