ಮಹಾಮಾರಿಯಿಂದ ರಕ್ಷಣೆಗಾಗಿ ಆಹಾರ ಪಡಿತರವನ್ನು ಹೆಚ್ಚಿಸೋಣ

  • ಕಾರ್ಮಿಕರಿಗೆ ಆಹಾರ ಖರೀದಿಸುವ ಸಾಮರ್ಥ್ಯ ಕಡಿಮೆಯಾಗುತ್ತಿದ್ದಂತೆ ಅವರ ಮತ್ತು ಅವರ ಮನೆಯವರು ಹಸಿವು ಹಾಗೂ ಅಪೌಷ್ಟಿಕತೆಯ ಕೆಳ ಹಂತವನ್ನು ತಲುಪಿಬಿಡುತ್ತಾರೆ. ಹೀಗೆ ಪೆಡಂಭೂತದಂತೆ ನಮ್ಮ ಮುಂದೆ ನಿಂತಿರುವ ಆಹಾರದ ಅಭದ್ರತೆಯ ಸಮಸ್ಯೆಯ ನಿವಾರಿಸುವುದಕ್ಕೆ ಆಹಾರ ಪಡಿತರ ಪದ್ಧತಿಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಬೇಕು. ಅದು ನಮ್ಮ ಹಣಕಾಸು ಮಂತ್ರಿಗಳು ನೀಡುತ್ತಿರುವ ಭರವಸೆಗಿಂತ ಉತ್ತಮ ಪರಿಹಾರವಾಗಬಲ್ಲದು. ಈ ಎಲ್ಲಾ ಕ್ರಮಗಳು ಕನಿಷ್ಠ ಮೂರು ತಿಂಗಳು ಮುಂದುವರಿಯಬೇಕು. ಅನಂತರ ಇದನ್ನು ಪುನರ್ ಪರಿಶೀಲಿಸಬೇಕು. ವಿಸ್ತೃತ ರೇಷನ್ ವ್ಯವಸ್ಥೆಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳುವ ಸೃಜನಶೀಲ ಯೋಜನೆ ಸದ್ಯದ ಮಹಾಮಾರಿಯಿಂದ ರಕ್ಷಣೆಯಾಗುವುದರ ಜೊತೆಗೆ ಜನತೆಯನ್ನು ಸುಪುಷ್ಟರು ಹಾಗೂ ಆರೋಗ್ಯವಂತರನ್ನಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬದಲಾವಣೆಯನ್ನು ತರುವುದಕ್ಕೂ ಅನುಕೂಲವಾಗುತ್ತದೆ.

ಪ್ರೊ. ಮಧುರಾ ಸ್ವಾಮಿನಾಥನ್ 

ಅನು: ಟಿ.ಎಸ್. ವೇಣುಗೋಪಾಲ್

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸಾಮಾಜಿಕ ರಕ್ಷಣಾ ಕ್ರಮಕ್ಕಾಗಿ ೧.೭ ಲಕ್ಷಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ೨೧ ದಿನಗಳ ಲಾಕ್‌ಡೌನ್ ಸಮಯದಲ್ಲಿ ಕೋವಿಡ್-೧೯ ಅನ್ನು ಎದುರಿಸಲು ಈ ಹಣವನ್ನು ಬಿಡುಗಡೆ ಮಾಡಲಾಗಿದೆ. ಆಹಾರ ಭದ್ರತಾ ದೃಷ್ಟಿಯಿಂದ ಈ ಪ್ಯಾಕೇಜ್ ಸಾಲುವುದಿಲ್ಲ. ಸೂಚಿಸಿರುವ ಪಟ್ಟಿಗೆ ಇನ್ನು ಹಲವು ಪದಾರ್ಥಗಳನ್ನು ಸೇರಿಸಿ ಸಾರ್ವತ್ರಿಕ ಪಡಿತರ ಪದ್ಧತಿಯನ್ನು ತಕ್ಷಣ ಮತ್ತಷ್ಟು ವಿಸ್ತರಿಸಬೇಕು. ಜೊತೆಗೆ ನಗರ ಪ್ರದೇಶಗಳಲ್ಲಿ ತೊಂದರೆಯಲ್ಲಿರುವ ಜನರಿಗೆ ತಕ್ಷಣ ಊಟ ಒದಗಿಸುವುದಕ್ಕಾಗಿ ವಿಶೇಷ ಕ್ರಮವನ್ನು ಕೈಗೊಳ್ಳಬೇಕು. ಈ ಲಾಕ್‌ಡೌನಿನಿಂದ ಲಕ್ಷಾಂತರ ದಿನಗೂಲಿ ನೌಕರರು ಹಾಗೂ ಹೆಚ್ಚಾಗಿ ಸ್ವಯಂ ಉದ್ಯೋಗಿಗಳೇ ಇರುವ ಅಸಂಘಟಿತ ಕಾರ್ಮಿಕ ವರ್ಗ ತೀವ್ರ ತೊಂದರೆಗೆ ಸಿಕ್ಕಿದೆ. ವಿಶ್ವದಲ್ಲೇ ಅತಿ ಹೆಚ್ಚು ಅಪೌಷ್ಟಿಕತೆಯಿಂದ ನರಳುತ್ತಿರುವ ಜನರ ದೇಶ ಎಂಬ ದಾಖಲೆ ಬೇರೆ ನಮ್ಮ ದೇಶಕ್ಕಿದೆ. ಜೊತೆಗೆ ಇವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾರ್ಮಿಕರಿಗೆ ಆಹಾರ ಖರೀದಿಸುವ ಸಾಮರ್ಥ್ಯ ಕಡಿಮೆಯಾಗುತ್ತಿದ್ದಂತೆ ಅವರ ಮತ್ತು ಅವರ ಮನೆಯವರು ಹಸಿವು ಹಾಗೂ ಅಪೌಷ್ಟಿಕತೆಯ ಕೆಳ ಹಂತವನ್ನು ತಲುಪಿಬಿಡುತ್ತಾರೆ. ಹೀಗೆ ಪೆಡಂಭೂತದಂತೆ ನಮ್ಮ ಮುಂದೆ ನಿಂತಿರುವ ಆಹಾರದ ಅಭದ್ರತೆಯ ಸಮಸ್ಯೆಯ ನಿವಾರಿಸುವುದಕ್ಕೆ ಆಹಾರ ಪಡಿತರ ಪದ್ಧತಿಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಬೇಕು. ಅದು ನಮ್ಮ ಹಣಕಾಸು ಮಂತ್ರಿಗಳು ನೀಡುತ್ತಿರುವ ಭರವಸೆಗಿಂತ ಉತ್ತಮ ಪರಿಹಾರವಾಗಬಲ್ಲದು. 

ಇತಿಹಾಸದ ಪಾಠಗಳು

ಈಗ ನಮ್ಮನ್ನು ಅನಿರೀಕ್ಷಿತವಾಗಿ ಎರಗಿರುವ ಆರೋಗ್ಯ ಹಾಗೂ ಆರ್ಥಿಕ ಬಿಕ್ಕಟ್ಟು ದೊಡ್ಡ ಪ್ರಮಾಣದಲ್ಲಿ ಜನರನ್ನು ಬಲಿತೆಗೆದುಕೊಳ್ಳುವ ಸಾಧ್ಯತೆಗಳಿವೆ. ಈ ಹೊತ್ತಿನಲ್ಲಿ ಎಲ್ಲರಿಗೂ ಸಾಕಷ್ಟು ಆಹಾರ ಸಿಗುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ತಕ್ಷಣವೇ ನಾವು ಆಹಾರ ಭದ್ರತಾ ವ್ಯವಸ್ಥೆಯನ್ನು ವಿಸ್ತರಿಸಬೇಕು. ಹೀಗೆ ವಿಸ್ತರಿಸುವಾಗ ಹಲವು ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅದನ್ನು ಪರಿಶೀಲಿಸುವ ಮೊದಲು ಕೊರತೆಯುಂಟಾದಾಗ ಬೇರೆ ದೇಶಗಳು ಪಡಿತರ ಪದ್ಧತಿಯನ್ನು ಹೇಗೆ ಬಳಸಿಕೊಂಡಿವೆ ಎಂಬುದನ್ನು ಗಮನಿಸುವುದು ಒಳ್ಳೆಯದು. ಅವರ ಅನುಭವದಿಂದ ನಾವು ಎಷ್ಟೋ ವಿಷಯವನ್ನು ಕಲಿಯಬಹುದು.

೧೯೪೦ರಲ್ಲಿ ಯುದ್ಧ ಹಾಗೂ ಆ ಸಮಯದಲ್ಲಿ ಇಂಗ್ಲೆಂಡಿನಲ್ಲಿ ತೀವ್ರವಾದ ಕೊರತೆ ಆಗಿತ್ತು. ಅದನ್ನು ನಿರ್ವಹಿಸಲು ಇಂಗ್ಲೆಂಡ್ ಫೇರ್ ಶೇರ್‍ಸ್ ಎಂಬ ಪಡಿತರ ಪದ್ಧತಿಯನ್ನು ಜಾರಿಗೆ ತಂದಿತು. ಇಂಗ್ಲೆಂಡ್ ೧೯೩೯ರಿಂದಲೇ ಪ್ರತಿಯೊಬ್ಬ ವ್ಯಕ್ತಿಗೂ ಪಡಿತರ ಪುಸ್ತಕವೊಂದನ್ನು ನೀಡುವುದಕ್ಕೆ ಪ್ರಾರಂಭಿಸಿತ್ತು. ಜನ ಪುಸ್ತಕವನ್ನು ತೋರಿಸಿ ವಾರಕ್ಕಾಗುವಷ್ಟು ಪಡಿತರವನ್ನು ಸ್ಥಳೀಯ ಪಡಿತರ ಅಂಗಡಿಯಿಂದ ಪಡೆದುಕೊಳ್ಳಬಹುದಿತ್ತು. ಪ್ರಾರಂಭದಲ್ಲಿ ಬೆಣ್ಣೆ, ಬೇಕನ್, ಸಕ್ಕರೆ, ಮುಂತಾದ ಪದಾರ್ಥಗಳು ಪಡಿತರದಲ್ಲಿ ಸಿಗುತ್ತಿದ್ದವು. ಅನಂತರದಲ್ಲಿ ಅದಕ್ಕೆ ಮೊಟ್ಟೆ, ಬಿಸ್ಕತ್ತುಗಳು, ಸಂರಕ್ಷಿಸಿದ ಆಹಾರ, ಮಾಂಸ ಮತ್ತು ದವಸ ಧಾನ್ಯಗಳೂ ಸೇರಿಕೊಂಡವು. ಯುದ್ಧ ಕಾಲದಲ್ಲಿ ಕೈಗೊಂಡ ಈ ಪ್ರಯೋಗದ ಪರಿಣಾಮ ಮಾತ್ರ ಅದ್ಭುತವಾಗಿತ್ತು. ಅಮರ್ತ್ಯ ಸೆನ್ ಹೇಳುವಂತೆ ಇದರಿಂದ ಜನರ ಪ್ರಮುಖ ಸೂಚಿಗಳಲ್ಲಿ ಬಹುದೊಡ್ಡ ಸುಧಾರಣೆ ಆಯಿತು. ಜನರ ಆಯಸ್ಸು ಗಣನೀಯವಾಗಿ ಹೆಚ್ಚಿತು. ಮರಣ ಪ್ರಮಾಣವೂ ಕಡಿಮೆಯಾಯಿತು. ಯುದ್ಧದಿಂದಾಗಿ ಸಾವುನೋವು ಭೀಕರವಾಗಿತ್ತು. ಜನರು ಹಣ ಖರ್ಚು ಮಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ಅವರ ಜೀವಿತಾವಧಿ ಹೆಚ್ಚಾಗಿತ್ತು. ಇಪ್ಪತ್ತನೆಯ ಶತಮಾನದ ಮೊದಲ ಆರು ದಶಕಗಳಲ್ಲಿ ಅದರಲ್ಲೂ ೧೯೪೧ರಿಂದ ೧೯೫೦ರ ಆವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಜೀವಿತಾವಧಿಯ ಪ್ರಮಾಣ ಗಣನೀಯವಾಗಿ ಏರಿತು.

೧೯೪೨ರಲ್ಲಿ ಬ್ರಿಟಿಷರು ಕೈಗಾರಿಕಾ ಕಾರ್ಮಿಕರಿಗೆ ಸಾಕಷ್ಟು ಆಹಾರವನ್ನು ಒದಗಿಸುವ ಉದ್ದೇಶದಿಂದ ಭಾರತದ ಆರು ನಗರಗಳಲ್ಲಿ ಪಡಿತರ ಪದ್ಧತಿಯನ್ನು ಪ್ರಾರಂಭಿಸಿದರು. ೧೯೪೩ರಲ್ಲಿ ಪ್ರಬಲವಾಗಿದ್ದ ರಾಜಕೀಯ ಚಳುವಳಿಯ ಒತ್ತಾಯದಿಂದ ಮಲಬಾರಿನಲ್ಲಿ ಪಡಿತರ ಪದ್ಧತಿ ಜಾರಿಗೆ ಬಂತು. ಮಲಬಾರ್ ಪಡಿತರ ಪದ್ಧತಿ ಪ್ರಾರಂಭವಾದ ಮೊಟ್ಟಮೊದಲ ಗ್ರಾಮೀಣ ಪ್ರದೇಶ. ೧೯೬೦ರ ಮಧ್ಯಭಾಗದ ವೇಳೆಗೆ ಸಾರ್ವಜನಿಕ ಪಡಿತರ ಪದ್ಧತಿ, ರಾಷ್ಟ್ರೀಯ ಸಾರ್ವತ್ರಿಕ ಯೋಜನೆಯ ಭಾಗವಾಯಿತು. ೧೯೯೧ರವರೆಗೂ ಇದು ವಿಸ್ತಾರಗೊಳ್ಳುತ್ತಾ ಹೋಯಿತು. ೧೯೯೦ರಲ್ಲಿ ಉದಾರೀಕರಣದ ಫಲವಾಗಿ ಸಾರ್ವತ್ರಿಕ ಪಡಿತರ ವ್ಯವಸ್ಥೆ ಸ್ಥಗಿತಗೊಂಡಿತು. ಒಂದು ಸಣ್ಣ ನಿರ್ದಿಷ್ಟ ಜನರ ಗುಂಪಿಗೆ ಮಾತ್ರ ಪಡಿತರವನ್ನು ವಿತರಿಸುವ ಕ್ರಮ ಪ್ರಾರಂಭವಾಯಿತು. ಬಿಪಿಎಲ್ (ಬಡನತನದ ರೇಖೆಯ ಕೆಳಗಿರುವವರು) ಮತ್ತು ಎಪಿಲ್ (ಬಡತನದ ರೇಖೆಯ ಮೇಲಿರುವವರು) ಕುಟುಂಬಗಳು ಎಂಬ ವಿಂಗಡಣೆಯಾಯಿತು. ಅದಕ್ಕೆ ತಕ್ಕಂತೆ ಅವರಿಗೆ ಕೊಡುವ ಪಡಿತರದ ಪ್ರಮಾಣದಲ್ಲೂ ವ್ಯತ್ಯಾಸ ಶುರುವಾಯಿತು.

೨೦೧೩ರಲ್ಲಿ ಪ್ರಮುಖ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್‌ಎ) ಜಾರಿಗೆ ಬಂತು. ಇದೊಂದು ಪ್ರಮುಖ ಹೆಜ್ಚೆ. ರೇಷನ್ ಮತ್ತು ಇತರ ಆಹಾರ ಆಧಾರಿತ ಯೋಜನೆಗಳನ್ನು (ಉದಾಹರಣೆಗೆ ಶಾಲೆಗಳಲ್ಲಿ ಮಧ್ಯಾಹ್ನದ ಊಟದಂತಹ ಯೋಜನೆಗಳು) ಒದಗಿಸುವುದು ಕಾನೂನಿನ ಪ್ರಕಾರ ಅವಶ್ಯಕ ಅಂತಾಯಿತು. ಶೇಕಡ ೭೫ರಷ್ಟು ಗ್ರಾಮೀಣ ಕುಟುಂಬಗಳು, ಶೇಕಡ ೫೦ರಷ್ಟು ನಗರದ ಕುಟುಂಬಗಳು ಅಂದರೆ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಕುಟುಂಬಗಳು ಈ ಯೋಜನೆಯ ಲಾಭ ಪಡೆದವು. ಈ ಕುಟುಂಬಗಳನ್ನು ಆದ್ಯತೆಯ ಕುಟುಂಬಗಳು ಎಂದು ಕರೆಯಲಾಯಿತು. ಎನ್‌ಎಫ್‌ಎಸ್‌ಎ ಅದರಲ್ಲೂ ವಿಶೇಷವಾಗಿ ಪಡಿತರ ವ್ಯವಸ್ಥೆ, ಮಧ್ಯಾಹ್ನದ ಊಟದ ಯೋಜನೆ ಇವು ದೇಶದ ಎಲ್ಲಾ ಕಡೆಯಲ್ಲೂ ಇದೆ. ಪ್ರತಿ ರಾಜ್ಯಗಳಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ಅದು ಕೆಲಸ ಮಾಡುತ್ತಿದೆ. ಆದರೆ ದೇಶದ ಎಲ್ಲೆಡೆ ಆಹಾರದ ವಿತರಣೆಗೆ ಬೇಕಾದ ಮೂಲಭೂತ ಸೌಕರ್ಯವಿದೆ.

ಚೀನಾದ ಕಾರ್ಯಯೋಜನೆ

ಚೀನಾದಲ್ಲಿ ರಾಷ್ಟ್ರೀಯ ಅಭಿವೃದ್ಧಿ ಹಾಗೂ ಸುಧಾರಣಾ ಕಮಿಷನ್ ಎನ್ನುವುದು ಒಂದು ಯೋಜನಾ ಸಮಿತಿ. ಈ ಸಂಸ್ಥೆ ಹಾಗೂ ವಾಣಿಜ್ಯ ಮಂತ್ರಾಲಯ ಬಡವರಿಗೆ ಮೂಲ ಆಹಾರ ದೊರೆಯುವಂತೆ ಮಾಡುವ ಹಾಗೂ ಬೆಲೆಯ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಪ್ರಮುಖವಾಗಿ ವಹಿಸಿಕೊಂಡಿದೆ. ಈಗಿನ ಕೊರೊನ ಮಹಾಮಾರಿಯ ಕೇಂದ್ರವಾದ ವುಹಾನ್ ಪ್ರಾಂತ್ಯದಲ್ಲಿ ಜನವರಿ ೨೩ರಿಂದ ಲಾಕ್‌ಡೌನ್ ಪ್ರಾರಂಭವಾದ ಮೇಲೆ ಅಲ್ಲಿನ ವ್ಯವಸ್ಥೆಯನ್ನು ಇವುಗಳೇ ನೋಡಿಕೊಳ್ಳುತ್ತಿವೆ. ಚೀನಾ ಹಲವು ಸ್ತರಗಳಲ್ಲಿ ಕೆಲಸ ಮಾಡುತ್ತಿದೆ. ಅದರಲ್ಲಿ ಸರ್ಕಾರಿ ಕಾರ್ಪೋರೇಷನ್ನುಗಳು, ಮಂತ್ರಿಗಳು, ೩೦೦ ದೊಡ್ಡ ಖಾಸಗೀ ಕಂಪೆನಿಗಳು, ೨,೦೦,೦೦೦ ಖಾಸಗೀ ಅಂಗಡಿಗಳು ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳು ಜೊತೆಗೂಡಿವೆ. ಉದಾಹರಣೆಗೆ, ಸರ್ಕಾರಿ ಸಾಮ್ಯದ ಕಂಪೆನಿಗಳಾದ ಚೀನಾ ರಾಷ್ಟೀಯ ಧಾನ್ಯಗಳು, ಎಣ್ಣೆ ಹಾಗೂ ಆಹಾರ ಪದಾರ್ಥಗಳ ಕಾರ್ಪೋರೇಷನ್, ಚೀನಾ ಧಾನ್ಯಗಳ ರಿಸರ್ವ್ ಕಾರ್ಪೋರೇಷನ್ ಇವುಗಳು ಮುಖ್ಯವಾಗಿ ಬೇಕಾದ ಆಹಾರ ಪದಾರ್ಥಗಳನ್ನು ವುಹಾನ್‌ಗೆ ಸರಬರಾಜು ಮಾಡಿದವು. ಅವು ಮಹಾಮಾರಿ ತುಂಬ ತೀವ್ರವಾಗಿದ್ದ ಫೆಬ್ರುವರಿ ತಿಂಗಳಿನಲ್ಲಿ ಪ್ರತಿ ದಿನ ೨೦೦ ಟನ್ ಅಕ್ಕಿ, ೫೦ಟನ್ ಹಿಟ್ಟು ಮತ್ತು ನೂಡಲ್ಸ್, ೩೦೦ ಟನ್ ಎಣ್ಣೆ ರವಾನಿಸಿದವು. ರಾಷ್ಟ್ರೀಯ ಕಾಳು ವ್ಯಾಪಾರ ಕೇಂದ್ರ ಇಲ್ಲಿಯವರೆಗೆ ೧,೫೫,೦೦೦ ಟನ್ ಕಾರ್ನ್ ಮತ್ತು ೧,೫೪,೦೦೦ ಸೊಯಾಬೀನನ್ನು ವುಹಾನ್‌ಗೆ ಸರಬರಾಜು ಮಾಡಿದೆ. ತರಕಾರಿಗಳನ್ನು ಸಾಗಿಸಲು ವಿಶೇಷ ಟ್ರಕ್ಕುಗಳ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಆಡಳಿತ ಬಯಲು ಮಾರುಕಟ್ಟೆಗಳನ್ನು ಸಂಘಟಿಸಿತ್ತು.

ಭಾರತದಲ್ಲಿ ಆದಾಯ ಬೆಂಬಲಿತ ಯೋಜನೆಗಳನ್ನು ಘೋಷಿಸಿದ ಮೊದಲ ರಾಜ್ಯ ಕೇರಳ. ೧೫ ಕೆಜಿ ಧಾನ್ಯ ಮತ್ತು ರಿಯಾಯಿತಿ ದರದಲ್ಲಿ ಊಟವನ್ನು ಒದಗಿಸಿತು. ತಮಿಳುನಾಡು ಸರ್ಕಾರ ಅಕ್ಕಿ, ಸಕ್ಕರೆ, ಎಣ್ಣೆ ಹಾಗೂ ಬೇಳೆಯನ್ನು ಪಡಿತರ ಚೀಟಿ ಇರುವ ಎಲ್ಲರಿಗೂ ಪುಕ್ಕಟೆಯಾಗಿ ವಿತರಿಸುವುದಾಗಿ ತಿಳಿಸಿದೆ. ಅಸಂಘಟಿತ ಕೆಲಸಗಾರರಿಗೆ ಪಡಿತರವನ್ನು ಅಮ್ಮಾ ಕ್ಯಾಂಟೀನ್ ಮುಖಾಂತರ ಹಂಚಲಾಗುತ್ತಿದೆ. ದೆಹಲಿ ಸರ್ಕಾರ ರೇಷನ್ನಿನ ಪ್ರಮಾಣವನ್ನು ೧.೫ರಷ್ಟು ಹೆಚ್ಚಿಸಿದೆ. ಇದನ್ನು ರೇಷನ್ ಕಾರ್ಡ್ ಹೊಂದಿರುವವರಿಗೆ ವಿತರಿಸಲಾಗುತ್ತಿದೆ.

ಯೋಜನೆಯ ಪ್ರಮುಖ ಅಂಶಗಳು:

ಭಾರತದಲ್ಲಿ ಪಡಿತರ ವ್ಯವಸ್ಥೆಯನ್ನು ವಿಸ್ತರಿಸುವಾಗ ಕೆಳಕಂಡ ಅಂಶಗಳನ್ನು ಅದರಲ್ಲಿ ಸೇರಿಸಿಕೊಳ್ಳಬೇಕು. ಮೊದಲನೆಯದಾಗಿ ಎಲ್ಲಾ ಗ್ರಾಮೀಣ ಕುಟುಂಬಗಳಿಗೂ ಈಗ ಕೊಡುತ್ತಿರುವ ಎರಡರಷ್ಟು ಅಕ್ಕಿ ಹಾಗೂ ಗೋಧಿಯನ್ನು ನೀಡಬೇಕು. ಈಗ ಸಧ್ಯಕ್ಕೆ ಭಾರತೀಯ ಆರೋಗ್ಯ ಸಂಶೋಧನಾ ಕೌನ್ಸಿಲ್ ಶಿಫಾರಸ್ಸು ಮಾಡಿರುವ ಕನಿಷ್ಠ ಪ್ರಮಾಣದ ದವಸಧಾನ್ಯಗಳ ಅರ್ಧದಷ್ಟನ್ನು ಮಾತ್ರ ನೀಡಲಾಗುತ್ತಿದೆ. ಇನ್ನು ಮುಂದೆ ಪ್ರತಿಯೊಬ್ಬನಿಗೂ ವಾಸ್ತವವಾಗಿ ಬೇಕಾಗಿರುವಷ್ಟನ್ನು ಒದಗಿಸಬೇಕು. ಈಗ ಭಾರತ ಸರ್ಕಾರ ಆದ್ಯತೆಯ ಕುಟುಂಬಗಳಿಗೆಲ್ಲಾ ನೀಡುತ್ತಿರುವ ಪಡಿತರವನ್ನು ಎರಡು ಪಟ್ಟು (ಅಕ್ಕಿ ಅಥವಾ ಗೋಧಿ) ಹೆಚ್ಚಿಸಿದೆ. ಅಂದರೆ ಅದರ ಪ್ರಮಾಣವನ್ನು ಪ್ರತಿ ವ್ಯಕ್ತಿಗೆ ೫ರಿಂದ ೧೦ಕೆಜಿಗೆ ಏರಿಸಿದೆ. ಆದರೆ ಇದು ಸಾಲುವುದಿಲ್ಲ. ಯಾಕೆಂದರೆ ಇದರಲ್ಲಿ ಎಲ್ಲಾ ಕುಟುಂಬಗಳೂ ಸೇರುವುದಿಲ್ಲ. ಕೇವಲ ಆದ್ಯತೆಯ ಕುಟುಂಬಗಳು ಮಾತ್ರ ಸೇರುತ್ತವೆ. ಜೊತೆಗೆ ಪಡಿತರವನ್ನು ಸಂಪೂರ್ಣವಾಗಿ ಪುಕ್ಕಟೆಯಾಗಿ ನೀಡುತ್ತಿಲ್ಲ. ಹಚ್ಚುವರಿಯಾಗಿ ನೀಡುತ್ತಿರುವ ೫ ಕೆಜಿ ಮಾತ್ರ ಪುಕ್ಕಟ್ಟೆ. ಉಳಿದದ್ದಕ್ಕೆ ಹಣ ಕೊಡಬೇಕು.

ಪಡಿತರ ವ್ಯವಸ್ಥೆ ಸಾರ್ವತ್ರಿಕವಾಗಬೇಕು. ಇದು ಪಡಿತರ ಚೀಟಿಯ ಆಧಾರಿಸಿ ಕುಟುಂಬಗಳನ್ನು ಪ್ರತ್ಯೇಕಿಸಬೇಕಾದ ಸಮಯವಲ್ಲ. ಅಥವಾ ಅವರಲ್ಲಿ ಪಡಿತರ ಚೀಟಿ ಇದೆಯೇ ಇಲ್ಲವೇ ಎಂದು ನೋಡುವುದಾಗಲಿ, ಅಥವ ಬಯೋಮೆಟ್ರಿಕ್ ಬಳಸುವುದಾಗಲಿ ಸರಿಯಲ್ಲ. ಆದ್ಯತೆಯ ಕುಟುಂಬಗಳ ಪಟ್ಟಿಯೂ ಸಂಪೂರ್ಣವಾಗಿ ಸರಿಯಾಗಿಲ್ಲ. ಅದರಲ್ಲೂ ಸಾಕಷ್ಟು ನ್ಯೂನತೆಗಳಿವೆ. ಯಾವುದೇ ಕುಟುಂಬವೂ ಇಂದು ಪಡಿತರ ವ್ಯವಸ್ಥೆಯಿಂದ ತಪ್ಪಾಗಿ ಆಚೆ ಉಳಿಯಬಾರದು.

ಕೊರೊನ ವೈರಸ್ ವಿರುದ್ಧ ಸಮರದ ಭಾಗವಾಗಿ ಕೇರಳದಲ್ಲಿ ಲಾಕ್‌ಡೌನ್ ನಿಯಮಗಳನ್ನು ಪಾಲಿಸುತ್ತಲೇ ಉಚಿತ ರೇಷನ್ ಕಾರ್ಯಕ್ರಮ ಕಾರ್ಯಾರಂಭ ಮಾಡಿದೆ. ಕಡಿಮೆ ಆದಾಯದ ಕುಟುಂಬಗಳಿಗೆ ೩೫ ಕೆ.ಜಿ ಮತ್ತು ಹೆಚ್ಚಿನ ಆದಾಯದ ಕುಟುಂಬಗಳಿಗೆ ೧೫ ಕೆ.ಜಿ. ಆಹಾರಧಾನ್ಯಗಳನ್ನು ಕೊಡಲಾಗುತ್ತಿದೆ.
೧೭ ಐಟಂಗಳಿರುವ ೮೭ ಲಕ್ಷ ಕಿರಾಣಿ ಕಿಟ್‌ಗಳನ್ನು ರೇಶನ್ ಅಂಗಡಿಗಳ ಮೂಲಕ ಹಂಚಲಾಗುತ್ತಿದೆ.

ಈಗ ೫.೮ ಕೋಟಿ ಟನ್ ಅಕ್ಕಿ ಮತ್ತು ಗೋಧಿಯ ದಾಸ್ತಾನು ಇರುವುದರಿಂದ ಹೆಚ್ಚುವರಿ ರೇಷನ್ ಕೊಡುವುದಕ್ಕೆ ಸಾಧ್ಯವಿದೆ. ಎರಡನೆಯದಾಗಿ, ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಅಧಿಕ ಎಣ್ಣೆ, ಸಕ್ಕರೆ, ಉಪ್ಪು ಹಾಗೂ ಬೇಳೆಕಾಳುಗಳ ಪಡಿತರವನ್ನು ನಿಯಮಿತವಾಗಿ ಒದಗಿಸಬೇಕು. ಆ ಪಟ್ಟಿಯಲ್ಲಿ ಸಾಬೂನನ್ನೂ ಸೇರಿಸಬೇಕು. ಅವು ಸರಿಯಾಗಿ ಪೂರೈಕೆಯಾಗುವುದಕ್ಕೆ ಒಂದು ವ್ಯವಸ್ಥೆ ಬೇಕಾಗುತ್ತದೆ. ನಿರಂತರವಾಗಿ ವಿತರಿಸುವುದಕ್ಕೆ ಅನುಕೂಲವಾಗುವಂತೆ ವಾರಕ್ಕೋ ಅಥವಾ ಹದಿನೈದು ದಿನಕ್ಕೋ ಒಮ್ಮೆ ವಿತರಿಸಬಹುದು. ಭಾರತ ಸರ್ಕಾರ ಪ್ರತಿ ಕುಟುಂಬಕ್ಕೆ ಒಂದು ಕೆ.ಜಿ ಬೇಳೆಯನ್ನು ಘೋಷಿಸಿರುವುದು ಒಳ್ಳೆಯದು. ಆದರೆ ಹೆಚ್ಚಿನ ಪದಾರ್ಥಗಳನ್ನು ತಕ್ಷಣದಲ್ಲಿ ವಿತರಿಸುವುದಕ್ಕೆ ವ್ಯವಸ್ಥೆ ಮಾಡಬೇಕು. ಮೂರನೆಯದಾಗಿ, ಹಾಲು, ಮೊಟ್ಟೆ ಹಾಗೂ ತರಕಾರಿ (ಅಥವಾ ಅವುಗಳಲ್ಲಿ ಕನಿಷ್ಠ ಒಂದನ್ನಾದರೂ) ಪೂರೈಸುವುದಕ್ಕೆ ಸಾಧ್ಯವಾದರೆ ಆಹಾರದ ಒಂದು ದೊಡ್ಡ ಬಿಕ್ಕಟ್ಟಿನ ಸಮಯದಲ್ಲಿ ಕೇವಲ ಮೂಲಭೂತ ಆಹಾರಕ್ಕೆ ರಕ್ಷಣೆ ನೀಡುವುದಷ್ಟೇ ಅಲ್ಲದೆ ಅಪೌಷ್ಟಿಕತೆಯ ಸವಾಲನ್ನು ಎದುರಿಸಿದಂತೆ  ಆಗುತ್ತದೆ.

ನಗರ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳ ಜೊತೆಗೆ ಊಟಕ್ಕೂ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಪ್ರದೇಶಗಳಿಗೆ ಸೂಚಿಸಿದ ಆಹಾರ ಪದಾರ್ಥಗಳನ್ನೇ ಪಡಿತg ಚೀಟಿಗಳನ್ನು ಹೊಂದಿರುವ ನಗರವಾಸಿಗಳಿಗೂ ನೀಡಬಹುದು. ನಗರಗಳು ಹಾಗೂ ಪಟ್ಟಣಗಳಲ್ಲಿರುವ ಬಹುಸಂಖ್ಯಾತ ಕಾರ್ಮಿಕರು ಹಾಗೂ ವಲಸೆಗಾರರಿಗೆ ಊಟದ ವ್ಯವಸ್ಥೆ ಮಾಡಬೇಕು. ಮುಚ್ಚಿರುವ ಅನೇಕ ಸಾಮುದಾಯಿಕ ಅಡಿಗೆ ಮನೆಗಳನ್ನು (ಉದಾಹರಣೆಗೆ ಶಾಲೆ ಮತ್ತು ಕಾಲೇಜುಗಳು, ಕಂಪೆನಿ ಹಾಗೂ ಕಛೇರಿಗಳ ಕ್ಯಾಂಟೀನ್) ಮತ್ತು ಕೆಲಸವಿಲ್ಲದೆ ಕುಳಿತಿರುವ ಹೋಟೆಲ್ ಕಾರ್ಮಿಕರನ್ನು ಒಟ್ಟಿಗೆ ಸೇರಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಸಿದ್ಧ ಆಹಾರವನ್ನು ರಿಯಾಯ್ತಿ ದರದಲ್ಲಿ ಸರಬರಾಜು ಮಾಡುವ ವ್ಯವಸ್ಥೆ ಮಾಡಬಹುದು. ಕೇರಳ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಆಹಾರವನ್ನು ವಿತರಿಸಲು ಎಚ್ಚರಿಕೆಯಿಂದ ರೂಪಿಸಿರುವ ಯೋಜನೆ ಹಾಗೂ ತಂತ್ರಜ್ಞಾನ ಬೇಕು. ಭೌತಿಕ ಅಂತರವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಇದು ಅವಶ್ಯಕ. ಕರ್ನಾಟಕ ಮಾಡಿದಂತೆ ಇಂದಿರಾ ಕ್ಯಾಂಟಿನ್ ಮುಚ್ಚುವುದು ಪರಿಹಾರವಲ್ಲ.

ಈ ಎಲ್ಲಾ ಕ್ರಮಗಳು ಕನಿಷ್ಠ ಮೂರು ತಿಂಗಳು ಮುಂದುವರಿಯಬೇಕು. ಅನಂತರ ಇದನ್ನು ಪುನರ್ ಪರಿಶೀಲಿಸಬೇಕು. ವಿಸ್ತೃತ ರೇಷನ್ ವ್ಯವಸ್ಥೆಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳುವ ಸೃಜನಶೀಲ ಯೋಜನೆ ಸದ್ಯದ ಮಹಾಮಾರಿಯಿಂದ ರಕ್ಷಣೆಯಾಗುವುದರ ಜೊತೆಗೆ ಜನತೆಯನ್ನು ಸುಪುಷ್ಟರು ಹಾಗೂ ಆರೋಗ್ಯವಂತರನ್ನಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬದಲಾವಣೆಯನ್ನು ತರುವುದಕ್ಕೂ ಅನುಕೂಲವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *