ಸುಪ್ರಿಂ ಕೋರ್ಟ್ ವಿಫಲತೆಗಳು…..

ಪ್ರಕಾಶ ಕಾರಟ್

ದುರದೃಷ್ಟವಶಾತ್, ಕೆಲವು ಸಮಯದಿಂದ ಸುಪ್ರಿಂ ಕೋರ್ಟ್ ತನ್ನ ಹೊಣೆಗಾರಿಕೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವಲ್ಲಿ ಮತ್ತು ಸಂವಿಧಾನದ ರಕ್ಷಕನಾಗಿ ಕೆಲಸ ಮಾಡುವಲ್ಲಿ ವಿಫಲವಾಗುತ್ತಿದೆ ಎಂಬ ಆತಂಕಕಾರಿ ಸೂಚನೆಗಳು ಕಾಣುತ್ತಿವೆ. ಒಂದು ಸರ್ವಾಧಿಕಾರಶಾಹಿ ಹಿಂದುತ್ವ ಆಳ್ವಿಕೆ ಸಂವಿಧಾನದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಚೌಕಟ್ಟನ್ನು ಬುಡಮೇಲು ಮಾಡಲು ಕೆಲಸ ಮಾಡುತ್ತಿರುವ ಸಮಯದಲ್ಲಿ ಹೀಗಾಗುತ್ತಿದೆ ಎಂಬುದು ಒಂದು ಗಂಭೀರ ಆತಂಕದ ಸಂಗತಿಯಾಗಿದೆ. ಒಂದು ವಿಸ್ತೃತ ಮಟ್ಟದಲ್ಲಿ, ಪ್ರಭುತ್ವದ ಎಲ್ಲ ಸಂಸ್ಥೆಗಳಲ್ಲಿ ಹಿಂದುತ್ವದ ನುಸುಳಿಕೆ ನಡೆಯುತ್ತಿದೆ. ಬೇಸರದ ಸಂಗತಿಯೆಂದರೆ, ನ್ಯಾಯಾಂಗವೂ ಇದರಿಂದ ಹೊರತಾಗಿಲ್ಲ.

ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶರು, ರಂಜನ್ ಗೊಗೊಯ್ ನವಂಬರ್ ೧೭ರಂದು ನಿವೃತ್ತರಾಗಿದ್ದಾರೆ. ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಭಾರತದ ಹೊಸ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ನಾಡಿನ ಅತ್ಯುನ್ನತ ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂದು ನೋಡಲು ಸೂಕ್ತ ಸಮಯ. ಸುಪ್ರಿಂ ಕೋರ್ಟಿಗೆ ಸಂಸತ್ತು ಅಂಗೀಕರಿಸುವ ಕಾನೂನುಗಳು ಸಂವಿಧಾನಕ್ಕೆ ಅನುಗುಣವಾಗಿ ಇವೆ ಎಂದು ಖಾತ್ರಿಗೊಳಿಸುವ ಮತ್ತು ನಾಗರಿಕರ ಸಂವಿಧಾನಿಕ ಹಕ್ಕುಗಳನ್ನು ಕಾಪಾಡುವ ಕರ್ತವ್ಯವನ್ನು ವಿಧಿಸಲಾಗಿದೆ.

ದುರದೃಷ್ಟವಶಾತ್, ಕೆಲವು ಸಮಯದಿಂದ ಸುಪ್ರಿಂ ಕೋರ್ಟ್ ತನ್ನ ಹೊಣೆಗಾರಿಕೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವಲ್ಲಿ ಮತ್ತು ಸಂವಿಧಾನದ ರಕ್ಷಕನಾಗಿ ಕೆಲಸ ಮಾಡುವಲ್ಲಿ ವಿಫಲವಾಗುತ್ತಿದೆ ಎಂಬ ಆತಂಕಕಾರಿ ಸೂಚನೆಗಳು ಕಾಣುತ್ತಿವೆ. ಒಂದು ಸರ್ವಾಧಿಕಾರಶಾಹಿ ಹಿಂದುತ್ವ ಆಳ್ವಿಕೆ ಸಂವಿಧಾನದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಚೌಕಟ್ಟನ್ನು ಬುಡಮೇಲು ಮಾಡಲು ಕೆಲಸ ಮಾಡುತ್ತಿರುವ ಸಮಯದಲ್ಲಿ ಹೀಗಾಗುತ್ತಿದೆ ಎಂಬುದು ಒಂದು ಗಂಭೀರ ಆತಂಕದ ಸಂಗತಿಯಾಗಿದೆ.

ಕಾರ್ಯಾಂಗದೊಡನೆ ನ್ಯಾಯಾಲಯದ ಹೆಚ್ಚೆಚ್ಚು ಮೌನಸಮ್ಮತಿ, ನಾಗರಿಕರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಉಪೇಕ್ಷೆ ಮತ್ತು ನಂಬಿಕೆಯ ವಿಷಯಗಳಲ್ಲಿ ಬಹುಸಂಖ್ಯಾತವಾದದೊಂದಿಗೆ ರಾಜಿ ಗೊಗೊಯ್ ಅವರ ಅಧಿಕಾರಾವಧಿಯ ಲಕ್ಷಣಗಳಾಗಿದ್ದವು. ಕಳದ ಒಂದು ವರ್ಷದಲ್ಲಿ ಈ ಪ್ರವೃತ್ತಿಯನ್ನು ದೃಢಪಡಿಸುವ ಹಲವಾರು ತೀರ್ಪುಗಳು ಬಂದಿವೆ. ಇವು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಸಲ್ಲದ ತೀರ್ಪುಗಳು. ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲತೆ ಮೊದಲ ವಿಫಲತೆಯಾಗಿತ್ತು. ಸುಪ್ರಿಂ ಕೋರ್ಟ್ ನಾಗರಿಕರ ಮೂಲ ಹಕ್ಕುಗಳನ್ನು ರಕ್ಷಿಸುವ ಒಬ್ಬ ಪಹರೇದಾರ ಎಂದು ಪರಿಗಣಿಸಲಾಗಿದೆ. ಆದರೆ, ಇತ್ತೀಚಿನ ಅವಧಿಯಲ್ಲಿ ನ್ಯಾಯಾಲಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಮಧ್ಯಪ್ರವೇಶಿಸುವಲ್ಲಿ ವಿಫಲವಾಗಿದೆ. ಕಲಮು ೩೭೦ನ್ನು ಲೋಪಗೊಳಿಸಿದ ಮೇಲೆ ಮತ್ತು ಆಗಸ್ಟ್ ೫ ರಿಂದ ನಿರ್ಬಂಧಗಳನ್ನು ಹೇರಿದ ಮೇಲೆ ನಾಗರಿಕರ ಮೇಲೆ ಮಿತಿಗಳನ್ನು ಹೇರಿರುವುದು, ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ನಿರ್ಬಂಧಿಸಿರುವುದರ ವಿರುದ್ಧ ಸುಪ್ರಿಂ ಕೋರ್ಟಿನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಈ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ನಿಭಾಯಿಸಿದ ರೀತಿ ನಿಜಕ್ಕೂ ವಿವರಣೆಗೆ ನಿಲುಕದ್ದು. ಮಹಮ್ಮದ್ ಯುಸುಫ್ ತಾರಿಗಾಮಿಯವರನ್ನು ನಿರ್ಬಂಧಿಸಿದ್ದಕ್ಕೆ ಸಂಬಂಧಪಟ್ಟಂತೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರ ಹೆಬಿಯಸ್ ಕಾರ್ಪಸ್ ಅರ್ಜಿ ಇರಬಹುದು, ಅಥವ ಪತ್ರಿಕಾ ಸ್ವಾತಂತ್ರ್ಯ, ನಾಗರಿಕರ ಚಲನವಲನದ ಹಕ್ಕಿನ  ಮೇಲೆ ನಿರ್ಬಂಧಗಳನ್ನು ಕುರಿತಾಗಿರಬಹದು, ವಯಸ್ಕರಲ್ಲದವರ ಬಂಧನಗಳದ್ದಿರಬಹುದು- ಯಾವ ಅರ್ಜಿಯಲ್ಲೂ ಸುಪ್ರಿಂ ಕೋರ್ಟ್ ತಕ್ಷಣ ಕ್ರಮ ಕೈಗೊಳ್ಳಲು ಮತ್ತು ಸಂವಿಧಾನ ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯಲು ನಿರಾಕರಿಸಿದೆ. ಇಂತಹ ಎಲ್ಲ ಅರ್ಜಿಗಳ ವಿಚಾರಣೆಗೆ ಮೂವರು ಸದಸ್ಯರ ಪೀಠವನ್ನು ರಚಿಸಿದರೆ, ಸಂವಿಧಾನದ ಕಲಮು ೩೭೦ ಮತ್ತು ೩೫ಎ ನ್ನು ರದ್ದಗೊಳಿಸಿರುವುದರ ಬಗ್ಗೆ ಅರ್ಜಿಗಳ ವಿಚಾರಣೆಗೆ ಐವರು ಸದಸ್ಯರ ಸಂವಿಧಾನ ಪೀಠವನ್ನು ರಚಿಸಲಾಗಿದೆ.

ಮೂವರು ಸದಸ್ಯರ ಪೀಠ, ಇನ್ನೂ, ಎರಡು ತಿಂಗಳ ನಂತರವೂ ಯಾವುದೇ ಅರ್ಜಿಯ ಮೇಲೆ ತೀರ್ಪು ನೀಡಿಲ್ಲ. ಚಿಕ್ಕ ಹುಡುಗರ ಬಂಧನ ಕುರಿತ ಗಂಭೀರ ವಿಷಯ ಕುರಿತ ಅರ್ಜಿಗಳಲ್ಲೂ ಪ್ರತಿ ವಿಚಾರಣೆಯ ನಂತರವೂ ವಿಳಂಬವಾಗುತ್ತಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ ೩ಕ್ಕೆ ಹಾಕಲಾಗಿದೆ. ಈ ಮೂವರು ಸದಸ್ಯರ ಸುಪ್ರಿಂ ಕೋರ್ಟಿನ ಪೀಠ ಸಪ್ಟಂಬರ್ ೧೬ ರಂದು ನೀಡಿದ ಆದೇಶದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಆಯ್ದ ಆಧಾರದಲ್ಲಿ, ರಾಷ್ಟ್ರೀಯ ಭದ್ರತೆಗೆ ಕುಂದು ಬರದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ಪರಿಸ್ಥಿತಿ ಮತ್ತೆ ನೆಲೆಗೊಳ್ಳುವಂತೆ ಖಾತ್ರಿಪಡಿಸಬೇಕು ಎಂದು ಕೇಂದ್ರ ಸರಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಸರಕಾರಕ್ಕೆ ನಿರ್ದೇಶನ ನೀಡಿದೆಯಷ್ಟೇ. ಈ ಮೂಲಕ ನ್ಯಾಯಾಲಯ ಕಾರ್ಯಾಂಗಕ್ಕೆ ಆಯ್ದ ರೀತಿಯಲ್ಲಿ ನಿರ್ಬಂಧಗಳನ್ನು ಸಡಿಲಿಸಲು ಅವಕಾಶ ಮಾಡಿಕೊಟ್ಟಿತು ಮತ್ತು ಇದನ್ನು ಕೂಡ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಕುಂದು ಬಾರದಂತೆ ಎಂದು ಶರತ್ತುಬದ್ಧಗೊಳಿಸಿತು.

ಒಂದು ನ್ಯಾಯಾಂಗ ತೀರ್ಪನ್ನು ನೀಡುವಲ್ಲಿ ವಿಳಂಬ ನ್ಯಾಯಾಂಗ ನುಣುಚಿಕೆಯ ಒಂದು ಸ್ವರೂಪವಾಗಿದೆ. ಇದು ಸರಕಾರಕ್ಕೆ/ಕಾರ್ಯಾಂಗಕ್ಕೆ ಒಂದು ತಪ್ಪು ಕ್ರಮ ಅಥವ ಧೋರಣೆ ವಹಿಸಿಯೂ ಪಾರಾಗಲು ಬಿಡುತ್ತದೆ. ಚುನಾವಣಾ ಬಾಂಡ್‌ಗಳ ವಿರುದ್ಧ ಪ್ರಕರಣ ಈ ನ್ಯಾಯಾಂಗ ನುಣಿಚಿಕೆಗೆ ಒಂದು ಉದಾಹರಣೆ. ಇಲ್ಲಿಯೂ, ಮುಖ್ಯ ನ್ಯಾಯಮೂರ್ತಿ ಗೊಗೊಯ್ ನೇತೃತ್ವದ ಪೀಠ ಚುನಾವಣೆಗಳ ಮೊದಲು ವಿಚಾರಣೆ ನಡೆಸಿತು. ಆಳುವ ಪಕ್ಷ ಅನಾಮಧೇಯವಾಗಿ ನಿಧಿ ಸಂಗ್ರಹಕ್ಕೆ ಈ ಚುನಾವಣಾ ಬಾಂಡುಗಳನ್ನು ಬಳಸಿಕೊಳ್ಳುತ್ತಿದ್ದುದು ಮತ್ತು ಸಲ್ಲದ ಪ್ರಯೋಜನ ಪಡೆಯುತ್ತಿದ್ದದ್ದು ಒಂದು ತುರ್ತು ವಿಷಯವೇ ಆಗಿತ್ತು. ಆದರೆ ವಾದ-ಪ್ರತಿವಾದಗಳನ್ನು ಕೇಳಿದ ಮೇಲೆ ಅದು ರಾಜಕೀಯ ಪಕ್ಷಗಳು ಮೇ ೩೦ರ ಒಳಗೆ, ಅಂದರೆ ಚುನಾವಣೆಗಳು ಮುಗಿದ ಮೇಲೆ, ಸೀಲಾದ ಕವರಿನಲ್ಲಿ ನಿಧಿ ಸಂಗ್ರಹದ ವಿವರಗಳನ್ನು ಸಲ್ಲಿಸಬೇಕು ಎಂದು ಹೇಳಿತು. ಆನಂತರ ಈ ಕೇಸಿನಲ್ಲಿ ಏನೂ ಆಗಿಲ್ಲ. ಇದುವರೆಗೆ ೬೦೦೦ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಮೌಲ್ಯದ ಚುನಾವಣಾ ಬಾಂಡುಗಳನ್ನು ನೀಡಲಾಗಿದೆ.

ಕಾರ್ಯಾಂಗಕ್ಕೆ ತಲೆಬಾಗುವುದು ಮತ್ತು ಅದಕ್ಕೆ ಎದುರಾಗಿ ನಿಲ್ಲಲು ನಿರಾಕರಿಸುವುದು ಮುಂಬರುವ ದಿನಗಳಲ್ಲಿ ನ್ಯಾಯಾಂಗಕ್ಕೆ ಅನಿಷ್ಟಕಾರಿಯಾಗಿದೆ.

ಸುಪ್ರಿಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠದ ಅಯೋಧ್ಯಾ ತೀರ್ಪು ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯತೀತ ನೀತಿಯ ಪರವಾಗಿ ನಿಲ್ಲುವಲ್ಲಿನ ವಿಫಲತೆಯನ್ನು ಪ್ರಕಟಗೊಳಿಸಿದೆ. ಒಂದು ಆಸ್ತಿ ವಿವಾದದ ನ್ಯಾಯನಿರ್ಣಯ ಮಾಡುವಲ್ಲಿ ಸಂವಿಧಾನಿಕ ಮೌಲ್ಯಗಳನ್ನು  ಹಾಗೂ ಜಾತ್ಯತೀತ ಆಧಾರವನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ಸಾರುತ್ತಲೇ, ಈ ತೀರ್ಪಿನ ಒಟ್ಟು ಫಲಿತಾಂಶವೆಂದರೆ, ಒಂದು ಪಕ್ಷದ ನಂಬಿಕೆ ಮತ್ತು ವಿಶ್ವಾಸಕ್ಕೆ ಅಗ್ರಸ್ಥಾನವನ್ನು ಕೊಟ್ಟಿರುವುದು. ಬಹುಸಂಖ್ಯಾತವಾದದೊಂದಿಗೆ ಈ ರಾಜಿ ಗಂಭೀರ ಪರಿಣಾಮಗಳನ್ನು ಬೀರಲಿದೆ, ಪ್ರಭುತ್ವದ ಜಾತ್ಯತೀತ ಆಧಾರಕ್ಕೆ ಇನ್ನಷ್ಟು ಸವಾಲೊಡ್ಡಲು ಹಿಂದುತ್ವ ಶಕ್ತಿಗಳಿಗೆ ಇದು ಧೈರ್ಯ ತುಂಬುತ್ತದೆ.

ಐವರು ಸದಸ್ಯರ ಸಂವಿಧಾನ ಪೀಠದ ಶಬರಿಮಲೆ ತೀರ್ಪಿನ ಮರು ಪರಾಮರ್ಶೆಯ ವಿಷಯದಲ್ಲೂ ಇಂತಹುದೇ ಹಿಂಜರಿಕೆ ಕಾಣಬಂದಿದೆ. ಪರಾಮರ್ಶೆ ಅರ್ಜಿಗಳ ವಿಚಾರಣೆಯಲ್ಲಿ ಸಾಮಾನ್ಯವಾಗಿ ಅನುಸರಿಸುವ ವಿಧಿವಿಧಾನಗಳಿಂದ ಹೊರತಾಗಿ, ಬಹುಮತದ ತೀರ್ಪು ಇತರ ಪೀಠಗಳು ವಿಚಾರಣೆ ನಡೆಸುತ್ತಿರುವ ವಿಷಯಗಳಿಗೆ ಸಂಬಂಧಪಟ್ಟ ಸಾಮಾನ್ಯ ಪ್ರಶ್ನೆಗಳನ್ನೆಲ್ಲ ಸೇರಿಸಿ ಅವನ್ನು ಒಂದು ವಿಸ್ತರಿತ ಏಳು ಸದಸ್ಯರ ಪೀಠಕ್ಕೆ ಒಪ್ಪಿಸಿದೆ ಮತ್ತು ಮರು ಪರಾಮರ್ಶೆ ಅರ್ಜಿಗಳನ್ನು ಇತ್ಯರ್ಥಮಾಡದೆ ಇಟ್ಟಿದೆ. ಈ ಪೀಠ ಈ ತೀರ್ಪಿಗೆ ಸಂಬಂಧಪಟ್ಟಂತೆ ಹೊಸದೇನಾದರೂ ಮತ್ತು ಮಹತ್ವದ ಸಾಕ್ಷ್ಯವನ್ನು ಕಂಡು ಹಿಡಿಯಲಾಗಿದೆಯೇ, ಅಥವ ತೀರ್ಪಿನಲ್ಲಿ ಯಾವುದಾದರೂ ತಪ್ಪಿನ ದಾಖಲೆ ಇದೆಯೇ ಎಂದಷ್ಟೇ ಪರಿಶೀಲಿಸಬೇಕಾಗಿತ್ತು. ಹಾಗೆ ಮಾಡುವ ಬದಲು, ಮೂವರು ನ್ಯಾಯಾಧೀಶರ ಬಹುಮತ ಸುತ್ತುಬಳಸಿನ ದಾರಿಯಲ್ಲಿ ಐವರು ಸದಸ್ಯರ ಸಂವಿಧಾನ ಪೀಠ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶವನ್ನು ಕುರಿತಂತೆ ನೀಡಿದ ಚಾರಿತ್ರಿಕ ತೀರ್ಪನ್ನು ಮತ್ತೆ ತೆರೆಯಲು ಪ್ರಯತ್ನಿಸಿದೆ. ಇಲ್ಲಿಊ ಕೂಡ, ಈ ಅಸಾಮಾನ್ಯ ವಿಧಾನದ ಉದ್ದೇಶ ಮಹಿಳೆಯರ ಹಕ್ಕುಗಳಿಗಿಂತ ನಂಬಿಕೆಗೆ ಆದ್ಯತೆ ನೀಡುವುದೇ ಆಗಿದೆ.

ಸುಪ್ರಿಂ ಕೋರ್ಟಿನ ಈ ಪ್ರಸಕ್ತ ವಿಫಲತೆಗಳು ಒಬ್ಬ ಮುಖ್ಯ ನ್ಯಾಯಾಧೀಶರ, ಅಥವ ಒಂದಿಷ್ಟು ನ್ಯಾಯಾಧೀಶರುಗಳ ದಾರಿಗೆಟ್ಟ ವರ್ತನೆಯ ಫಲಿತಾಂಶಗಳಲ್ಲ. ಇದು ಸರಕಾರದ ಸತತ ಪ್ರಯತ್ನಗಳ ಒಂದು ಫಲ. ಕಳೆದ ಆರು ವರ್ಷಗಳಲ್ಲಿ ಮೋದಿ ಸರಕಾರ ನ್ಯಾಯಾಧೀಶರುಗಳ ನೇಮಕಗಳು ಮತ್ತು ವಿವಿಧ ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರುಗಳ ಹುದ್ದೆಗೆ ಬಡ್ತಿಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಲೇ ಬಂದಿದೆ. ಇದರಲ್ಲಿ ಇತ್ತೀಚಿನದೆಂದರೆ ನ್ಯಾಯಮೂರ್ತಿ ಅಕಿಲ್ ಖುರೇಶಿಯವರು ಮಧ್ಯಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಳ್ಳದಂತೆ ತಡೆದು, ಬದಲಾಗಿ ಅವರನ್ನು ತ್ರಿಪುರಾ ಹೈಕೋರ್ಟಿಗೆ ಕಳಿಸಿರುವುದು.

ಒಂದು ವಿಸ್ತೃತ ಮಟ್ಟದಲ್ಲಿ, ಪ್ರಭುತ್ವದ ಎಲ್ಲ ಸಂಸ್ಥೆಗಳಲ್ಲಿ ಹಿಂದುತ್ವದ ನುಸುಳಿಕೆ ನಡೆಯುತ್ತಿದೆ. ಬೇಸರದ ಸಂಗತಿಯೆಂದರೆ, ನ್ಯಾಯಾಂಗವೂ ಇದರಿಂದ ಹೊರತಾಗಿಲ್ಲ.

Donate Janashakthi Media

Leave a Reply

Your email address will not be published. Required fields are marked *