ಕ್ಯೂಬಾ ಮೇಲೆ ಅಮೆರಿಕದ ಇಂಧನ ದಿಗ್ಬಂಧನಕ್ಕೆ WHO ಗರಂ! ತಕ್ಷಣ ತೆರವುಗೊಳಿಸಲು ಆಗ್ರಹ

Please follow and like us:

ಹವಾನಾ: ಆರ್ಥಿಕ ಮತ್ತು ಇಂಧನ ಬಿಕ್ಕಟ್ಟಿನಿಂದ ತತ್ತರಿಸಿರುವ ಕ್ಯೂಬಾದ ಆರೋಗ್ಯ ವ್ಯವಸ್ಥೆಗೆ ಬಲ ತುಂಬಲು ವಿಶ್ವ ಆರೋಗ್ಯ ಸಂಸ್ಥೆ (WHO) 2 ಮಿಲಿಯನ್ ಡಾಲರ್ ನೆರವು ಘೋಷಿಸಿದೆ. ಲಸಿಕೆ ಕಾರ್ಯಕ್ರಮ ಬಲಪಡಿಸುವುದು ಮತ್ತು ಅಗತ್ಯ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದು ಈ ನೆರವಿನ ಮುಖ್ಯ ಉದ್ದೇಶವಾಗಿದೆ.

ನವೆಂಬರ್ 24ರಂದು ಕ್ಯೂಬಾದ ಮೂರು ದಿನಗಳ ಪ್ರವಾಸ ಮುಗಿಸಿದ ಬಳಿಕ WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಘೋಷಣೆ ಮಾಡಿದ್ದಾರೆ. ಈ ನೆರವಿನಿಂದ ಸುಮಾರು 62 ಸಾವಿರ ನವಜಾತ ಶಿಶುಗಳು, 7.8 ಲಕ್ಷಕ್ಕೂ ಹೆಚ್ಚು ಶಿಶುಗಳು ಹಾಗೂ 1.10 ಲಕ್ಷಕ್ಕೂ ಅಧಿಕ ಅಪಾಯದ ಗುಂಪಿನ ಜನರಿಗೆ ಲಸಿಕೆ ಸೌಲಭ್ಯ ಕಲ್ಪಿಸಲು ನೆರವಾಗಲಿದೆ. ರೇಬಿಸ್ ರೋಗದ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೂ ಅನುದಾನ ಬಳಸಲಾಗುತ್ತದೆ.

ಕ್ಯೂಬಾ ಹಲವು ದಶಕಗಳ ಹೂಡಿಕೆ ಮತ್ತು ಪರಿಶ್ರಮದಿಂದ ಸಾಧಿಸಿರುವ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪ್ರಗತಿಯನ್ನು ರಕ್ಷಿಸಬೇಕು ಎಂದು ಟೆಡ್ರೊಸ್ ಹೇಳಿದ್ದಾರೆ. WHO ಮತ್ತು ಪ್ಯಾನ್ ಅಮೆರಿಕನ್ ಹೆಲ್ತ್ ಆರ್ಗನೈಸೇಶನ್ (PAHO) ಮೂಲಕ ಅಗತ್ಯ ಲಸಿಕೆಗಳನ್ನು ಒದಗಿಸುವುದು ಕ್ಯೂಬಾಗೆ ನೀಡುತ್ತಿರುವ ಬೆಂಬಲದ ಭಾಗವಾಗಿದೆ ಎಂದು ತಿಳಿಸಿದ್ದಾರೆ.

ಕ್ಯೂಬಾದ ಲಸಿಕೆ ಪ್ರಮಾಣದಲ್ಲಿ ಇಳಿಕೆ

ಅಮೆರಿಕ ಖಂಡದಲ್ಲಿ ಅತ್ಯುತ್ತಮ ಲಸಿಕೆ ವ್ಯಾಪ್ತಿ ಹೊಂದಿದ್ದ ದೇಶಗಳಲ್ಲಿ ಕ್ಯೂಬಾ ಒಂದಾಗಿದೆ. ಹಲವು ವರ್ಷಗಳ ಕಾಲ ಶೇ.98ಕ್ಕಿಂತ ಹೆಚ್ಚಿದ್ದ ಲಸಿಕೆ ಪ್ರಮಾಣ 2025ರಲ್ಲಿ ಶೇ.95ಕ್ಕೆ ಇಳಿಕೆಯಾಗಿದೆ ಎಂದು WHO ತಿಳಿಸಿದೆ. ಇದು ಇತರೆ ಹಲವು ದೇಶಗಳಿಗಿಂತ ಉತ್ತಮವಾಗಿದ್ದರೂ, ನಿಯಮಿತ ಲಸಿಕೆ ಕಾರ್ಯಕ್ರಮದ ನಿರಂತರತೆ ಕುರಿತು ಆರೋಗ್ಯ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.

ಮೂರು ದಿನಗಳ ಭೇಟಿಯ ವೇಳೆ ಟೆಡ್ರೊಸ್ ಕ್ಯೂಬಾದ ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳಿಗೆ ಭೇಟಿ ನೀಡಿದ್ದು, ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕಾನೆಲ್ ಬರ್ಮುಡೆಜ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ವಿಲಿಯಂ ಸೋಲರ್ ವಿಶ್ವವಿದ್ಯಾಲಯದ ಮಕ್ಕಳ ಆಸ್ಪತ್ರೆಗೂ ಭೇಟಿ ನೀಡಿ, ವೈದ್ಯಕೀಯ ಸಿಬ್ಬಂದಿ ಮತ್ತು ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಆಸ್ಪತ್ರೆಯ ಸಾಮರ್ಥ್ಯ ಹೆಚ್ಚಿಸಲು ವೈದ್ಯಕೀಯ ಸಾಮಗ್ರಿ ಮತ್ತು ಉಪಕರಣಗಳನ್ನು ನಿಯೋಗ ಒದಗಿಸಿದೆ.

ಅಮೆರಿಕದ ಇಂಧನ ನಿರ್ಬಂಧ ತೆರವುಗೊಳಿಸಲು WHO ಆಗ್ರಹ

ಕ್ಯೂಬಾಗೆ ನೆರವು ಘೋಷಿಸುವುದರ ಜೊತೆಗೆ ಅಮೆರಿಕದ ಇಂಧನ ನಿರ್ಬಂಧಗಳ ವಿರುದ್ಧವೂ WHO ಮುಖ್ಯಸ್ಥ ಧ್ವನಿ ಎತ್ತಿದ್ದಾರೆ. ಕ್ಯೂಬಾ ಮೇಲಿನ ಇಂಧನ ನಿರ್ಬಂಧ ಮತ್ತು ಆರ್ಥಿಕ ದಿಗ್ಬಂಧನಗಳನ್ನು ತಕ್ಷಣ ತೆರವುಗೊಳಿಸುವಂತೆ ಅಮೆರಿಕಕ್ಕೆ ಟೆಡ್ರೊಸ್ ಮನವಿ ಮಾಡಿದ್ದಾರೆ. ಇಂಧನ ನಿರ್ಬಂಧಗಳು ಕ್ಯೂಬಾದ ಜನರ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಮಕ್ಕಳು ಸೇರಿದಂತೆ ದುರ್ಬಲ ವರ್ಗದವರ ಜೀವಕ್ಕೆ ಅಪಾಯ ತಂದೊಡ್ಡುತ್ತಿವೆ ಎಂದು ಅವರು ಎಚ್ಚರಿಸಿದ್ದಾರೆ.

ಕ್ಯೂಬಾದಲ್ಲಿ ದಿನಕ್ಕೆ 20 ಗಂಟೆಗಳವರೆಗೆ ವಿದ್ಯುತ್ ಕಡಿತ, ಔಷಧಗಳ ಕೊರತೆ ಹಾಗೂ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಸಾಮಗ್ರಿಗಳ ಅಭಾವ ಎದುರಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಸೇವೆಗಳ ಮೇಲೂ ಈ ಬಿಕ್ಕಟ್ಟು ಗಂಭೀರ ಪರಿಣಾಮ ಬೀರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿಯಲ್ಲಿ ಕ್ಯೂಬಾದ ವಿರುದ್ಧ ಇಂಧನ ನಿರ್ಬಂಧಗಳನ್ನು ತೀವ್ರಗೊಳಿಸುವುದರ ಜೊತೆಗೆ ಹೆಚ್ಚುವರಿ ಆರ್ಥಿಕ ನಿರ್ಬಂಧಗಳನ್ನೂ ವಿಧಿಸಿದ್ದರು.

ದಿಗ್ಬಂಧನ ವಿರೋಧಿಸಿ ವಿಶ್ವಸಂಸ್ಥೆಯ ನಿರ್ಣಯ

ಕ್ಯೂಬಾದಲ್ಲಿ ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆಯ ವಿವಿಧ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. 1992ರಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಕ್ಯೂಬಾ ಮೇಲಿನ ಅಮೆರಿಕದ ಆರ್ಥಿಕ, ವಾಣಿಜ್ಯ ಮತ್ತು ಹಣಕಾಸು ದಿಗ್ಬಂಧನವನ್ನು ಅಂತ್ಯಗೊಳಿಸುವಂತೆ ಪ್ರತಿವರ್ಷ ನಿರ್ಣಯ ಅಂಗೀಕರಿಸುತ್ತಿದೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲೇ ರಾತ್ರಿ ಕಳೆದ ಪ್ರಯಾಣಿಕರು! ಅಮೆರಿಕದಲ್ಲಿ FAA ಸಂವಹನ ವ್ಯವಸ್ಥೆ ಫೇಲ್ | USA Flight Ground Stop

ಆರ್ಥಿಕ ಸಂಕಷ್ಟದ ನಡುವೆಯೂ ಕ್ಯೂಬಾ ತನ್ನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಈ ಹಿನ್ನೆಲೆಯಲ್ಲಿ WHO ಘೋಷಿಸಿರುವ 2 ಮಿಲಿಯನ್ ಡಾಲರ್ ನೆರವು ದೇಶದ ಲಸಿಕೆ ಕಾರ್ಯಕ್ರಮ ಮತ್ತು ವೈದ್ಯಕೀಯ ಸೇವೆಗಳಿಗೆ ಮಹತ್ವದ ಬೆಂಬಲವಾಗಲಿದೆ.

ಇದನ್ನೂ ನೋಡಿ: ಋತ್ವಿಕ್ ಘಟಕ್ ಉಪನ್ಯಾಸ -5 | ಮೇಘೆ ಡಾಕಾ ತಾರಾ – ಮುರಳಿ ಕೃಷ್ಣ ಎಂ.ಎಸ್

Please follow and like us:
Donate Janashakthi Media

Leave a Reply

Your email address will not be published. Required fields are marked *