ರಷ್ಯಾ ಪರಮಾಣು ದಾಳಿ! ಉಕ್ರೇನ್-ನ್ಯಾಟೋಗೆ ಮೆಡ್ವೆಡೆವ್ ಖಡಕ್ ವಾರ್ನಿಂಗ್

Please follow and like us:

ಮಾಸ್ಕೋ: ಪರಮಾಣು ದಾಳಿ ನಡೆಸುವ ಎಚ್ಚರಿಕೆ ನೀಡುವ ಮೂಲಕ ರಷ್ಯಾ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳು ಕೆಲವು ಮಿತಿಗಳನ್ನು ದಾಟಿವೆ. ಇಂತಹ ಪರಿಸ್ಥಿತಿಯಲ್ಲಿ ಅಗತ್ಯ ಬಿದ್ದರೆ ರಷ್ಯಾ ಮುನ್ನೆಚ್ಚರಿಕೆಯ ಪರಮಾಣು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಎಚ್ಚರಿಸಿದ್ದಾರೆ. ರಷ್ಯಾ ಪರಮಾಣು ದಾಳಿ

ರಷ್ಯಾ ಭದ್ರತಾ ಮಂಡಳಿಯ ಉಪಾಧ್ಯಕ್ಷರಾಗಿರುವ ಮೆಡ್ವೆಡೆವ್, ಸೋಮವಾರ ಮಾಸ್ಕೋ ಜರ್ನಲ್ ಆಫ್ ಇಂಟರ್‌ನ್ಯಾಷನಲ್ ಲಾದಲ್ಲಿ ಪ್ರಕಟವಾದ ಲೇಖನದಲ್ಲಿ ಈ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಮತ್ತು ನ್ಯಾಟೋ ರಾಷ್ಟ್ರಗಳ ಕ್ರಮಗಳು ರಷ್ಯಾವನ್ನು ಪರಮಾಣು ಅಸ್ತ್ರಗಳ ಬಳಕೆಯನ್ನು ಪರಿಗಣಿಸುವ ಪರಿಸ್ಥಿತಿಗೆ ತಳ್ಳಿವೆ ಎಂದು ಅವರು ಆರೋಪಿಸಿದ್ದಾರೆ.

ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಟಾಸ್ (TASS) ಪ್ರಕಟಿಸಿರುವ ಲೇಖನದ ಆಯ್ದ ಭಾಗಗಳ ಪ್ರಕಾರ, ದೊಡ್ಡ ಪ್ರಮಾಣದಲ್ಲಿ ವಿನಾಶಕಾರಿ ಪರಿಣಾಮ ಉಂಟುಮಾಡುವ ಸಾಂಪ್ರದಾಯಿಕವಲ್ಲದ ಶಸ್ತ್ರಾಸ್ತ್ರಗಳ ಬಳಕೆಯು ರಷ್ಯಾ ಮುನ್ನೆಚ್ಚರಿಕೆಯ ಪರಮಾಣು ದಾಳಿ ನಡೆಸುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ ಎಂದು ಮೆಡ್ವೆಡೆವ್ ಹೇಳಿದ್ದಾರೆ.

ಉಕ್ರೇನ್‌ಗೆ ರಹಸ್ಯವಾಗಿ ಅಣ್ವಸ್ತ್ರ ಪೂರೈಕೆ ಆತಂಕ

‘ರಾಜ್ಯ ಸಾರ್ವಭೌಮತ್ವ ಮತ್ತು ಪರಮಾಣು ಶಸ್ತ್ರಾಸ್ತ್ರಗಳು: ರಾಷ್ಟ್ರೀಯ ಭದ್ರತೆ ಖಾತರಿಪಡಿಸುವ ಅಂತರರಾಷ್ಟ್ರೀಯ ಕಾನೂನು ಅಂಶಗಳು’ ಎಂಬ ಶೀರ್ಷಿಕೆಯ ಲೇಖನದಲ್ಲಿ ಮೆಡ್ವೆಡೆವ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಪಶ್ಚಿಮ ರಾಷ್ಟ್ರಗಳು ಉಕ್ರೇನ್‌ಗೆ ರಹಸ್ಯವಾಗಿ ಅಥವಾ ಗುಪ್ತವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪೂರೈಸುವ ಸಾಧ್ಯತೆಯ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಉಕ್ರೇನ್ ಮತ್ತು ಅದರ ಮಿತ್ರ ರಾಷ್ಟ್ರಗಳು ರಷ್ಯಾ ಪರಮಾಣು ಅಸ್ತ್ರಗಳನ್ನು ಬಳಸುವ ಪರಿಸ್ಥಿತಿಯನ್ನು ಸೃಷ್ಟಿಸಿವೆ ಎಂದು ಆರೋಪಿಸಿರುವ ಅವರು, ಕೆಲವು ಸಂದರ್ಭಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಹಕ್ಕು ಮಾತ್ರವಲ್ಲ, ಬಾಧ್ಯತೆಯೂ ರಷ್ಯಾಕ್ಕಿದೆ ಎಂದು ಲೇಖನದಲ್ಲಿ ಬರೆದಿದ್ದಾರೆ. ಆದರೆ, ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅದರ ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಿದ್ದಾರೆ ಎಂದೂ ಮೆಡ್ವೆಡೆವ್ ಹೇಳಿದ್ದಾರೆ.

ಅಣ್ವಸ್ತ್ರ ಹೊಂದಿರುವ ಉಪಗ್ರಹ ಉಡಾವಣೆಗೆ ರಷ್ಯಾ ಸಿದ್ಧತೆ?

ಮೆಡ್ವೆಡೆವ್ ಅವರ ಪರಮಾಣು ದಾಳಿ ಎಚ್ಚರಿಕೆಯ ಬೆನ್ನಲ್ಲೇ ರಷ್ಯಾದ ಮತ್ತೊಂದು ಯೋಜನೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ರಷ್ಯಾ ಅಣ್ವಸ್ತ್ರ ಹೊಂದಿರುವ ಉಪಗ್ರಹವೊಂದನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಜರ್ಮನಿಯ ಮಾಧ್ಯಮಗಳು ವರದಿ ಮಾಡಿವೆ. ಮುಂದಿನ 60 ದಿನಗಳಲ್ಲಿ ಈ ಉಪಗ್ರಹ ಉಡಾವಣೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಲಭ್ಯವಾದ ಗುಪ್ತಚರ ಮಾಹಿತಿಯನ್ನು ನ್ಯಾಟೋ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದೂ ವರದಿಯಾಗಿದೆ. ರಷ್ಯಾ ಪರಮಾಣು ದಾಳಿ

ಜರ್ಮನಿಯ ಸಾರ್ವಜನಿಕ ಪ್ರಸಾರ ಸಂಸ್ಥೆಗಳಾದ ಎನ್‌ಡಿಆರ್ (NDR) ಮತ್ತು ಡಬ್ಲ್ಯುಡಿಆರ್ (WDR) ವರದಿಗಳ ಪ್ರಕಾರ, ಈ ಉಪಗ್ರಹಕ್ಕೆ ‘ಸ್ಪುಟ್ನಿಕ್-ಎಸ್’ (Sputnik-S) ಎಂದು ಹೆಸರಿಡಲಾಗಿದೆ. ಅಣ್ವಸ್ತ್ರ ಹೊಂದಿರುವ ಈ ಉಪಗ್ರಹವನ್ನು ಬಾಹ್ಯಾಕಾಶದಲ್ಲಿರುವ ಇತರ ಉಪಗ್ರಹಗಳ ಕಾರ್ಯಾಚರಣೆಗೆ ಅಡ್ಡಿಪಡಿಸಲು ಅಥವಾ ಅವುಗಳನ್ನು ನಾಶಪಡಿಸಲು ಬಳಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.

ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಜರ್ಮನಿ, ನ್ಯಾಟೋ

ರಷ್ಯಾದ ಉಪಗ್ರಹ ಯೋಜನೆ ಕುರಿತ ವರದಿಗಳನ್ನು ಜರ್ಮನ್ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಕೂಡ ಬಾಹ್ಯಾಕಾಶದಲ್ಲಿನ ಯಾವುದೇ ಬೆದರಿಕೆಯನ್ನು ಎದುರಿಸಲು ಮೈತ್ರಿಕೂಟ ಸಿದ್ಧವಿದೆ ಎಂದು ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಆದರೆ, ಬರ್ಲಿನ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿ ಈ ವರದಿಗಳನ್ನು ತಳ್ಳಿಹಾಕಿದೆ. ಇವು ಆಧಾರರಹಿತ ಆರೋಪಗಳಾಗಿದ್ದು, ಪ್ರಚಾರ ಅಭಿಯಾನದ ಭಾಗವಾಗಿವೆ ಎಂದು ಪ್ರತಿಕ್ರಿಯಿಸಿದೆ.

ಇದನ್ನೂ ಓದಿ: ಅಮೆರಿಕ- ಅಮೆರಿಕ–ಇರಾನ್ ಉದ್ವಿಗ್ನತೆ ಮತ್ತೆ ಹೆಚ್ಚಳ: ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ 7 ಷರತ್ತು | US-Iran Conflict

ಒಂದೆಡೆ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪರಮಾಣು ದಾಳಿಯ ಎಚ್ಚರಿಕೆ, ಮತ್ತೊಂದೆಡೆ ಬಾಹ್ಯಾಕಾಶದಲ್ಲಿ ಅಣ್ವಸ್ತ್ರ ಹೊಂದಿರುವ ಉಪಗ್ರಹದ ಸಾಧ್ಯತೆ ಕುರಿತ ವರದಿಗಳು ಜಾಗತಿಕ ಭದ್ರತೆಯ ಬಗ್ಗೆ ಹೊಸ ಆತಂಕ ಮೂಡಿಸಿವೆ.

ಇದನ್ನೂ ನೋಡಿ: ಇಸ್ರೋ ವಿಜ್ಞಾನಿಗಳ ರಾಜೀನಾಮೆ: ಭವಿಷ್ಯದ ಬಾಹ್ಯಾಕಾಶ ಕನಸುಗಳಿಗೆ ಎಚ್ಚರಿಕೆಯ ಗಂಟೆ? Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *