ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಖಂಡನೀಯ: ಸಿದ್ದಲಿಂಗ ಸ್ವಾಮೀಜಿ

Please follow and like us:
‘ಬಸವ ಮಂಟಪ’ ಕೃತಿಯ ವಿರುದ್ಧ ಸಿದ್ದಗಂಗಾ ಮಠದ ಶ್ರೀಗಳ ಆಕ್ರೋಶ; ಲೇಖಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ತುಮಕೂರು: ಜಗಜ್ಯೋತಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ರೀತಿಯಲ್ಲಿ ಬರೆಯಲಾಗಿದೆ ಎನ್ನಲಾದ ಲೇಖಕ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಯನ್ನು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ಸಮಾಜದಲ್ಲಿ ವಿಷಬೀಜ ಬಿತ್ತುವ ಇಂತಹ ವಿಕೃತ ಮನಸ್ಸುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬಸವಣ್ಣ

ಸಿದ್ದಗಂಗಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಯಾಣದ ಬಸವಣ್ಣನವರು ಕನ್ನಡ ನಾಡು ಕಂಡ ಅತ್ಯಂತ ಶ್ರೇಷ್ಠ ಹಾಗೂ ಚಿರಸ್ಮರಣೀಯ ವ್ಯಕ್ತಿ. ಕನ್ನಡ ಸಾಹಿತ್ಯಕ್ಕೆ ವಿಶ್ವಮನ್ನಣೆ ತಂದುಕೊಟ್ಟ ಕೀರ್ತಿ ಬಸವಣ್ಣನವರು ಮತ್ತು ಶರಣರಿಗೆ ಸಲ್ಲುತ್ತದೆ. 12ನೇ ಶತಮಾನವು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಬೆಳಕಿನ ಯುಗವಾಗಿತ್ತು ಎಂದು ಹೇಳಿದರು.

ಬಸವಣ್ಣನವರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ವಿಶ್ವವನ್ನೇ ಪ್ರೀತಿಸುವ ಹೃದಯ ವೈಶಾಲ್ಯತೆ ಹೊಂದಿದ್ದ ಅವರು ವಿಶ್ವಮಾನವ ವ್ಯಕ್ತಿತ್ವದವರು. ಅವರ ತತ್ವಗಳು ಅಂದಿಗೂ, ಇಂದಿಗೂ ಮತ್ತು ಎಂದೆಂದಿಗೂ ಎಲ್ಲರಿಗೂ ಅಗತ್ಯವಾಗಿವೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜಜೀವಿಯಾಗಿ ಸಾರ್ಥಕ ಬದುಕು ನಡೆಸಲು ಬೇಕಾದ ಮೌಲ್ಯಗಳು ಅವರ ವಚನಗಳಲ್ಲಿವೆ ಎಂದು ತಿಳಿಸಿದರು.

ಇದನ್ನೂ ಓದಿ : 15 ಸಾವಿರ ರೂ. ಗೌರವಧನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಆರನೇ ದಿನಕ್ಕೆ

ಇಂದು ಮಠಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿವೆ ಎಂದರೆ ಅದಕ್ಕೆ 12ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದ ಕಾಯಕ, ಸೇವೆ, ದಾಸೋಹ, ಸಮಾನತೆ ಮತ್ತು ಸ್ವಾತಂತ್ರ್ಯದ ತತ್ವಗಳೇ ಮೂಲ ಕಾರಣ. ಸಂಪತ್ತಿನ ನ್ಯಾಯಯುತ ಹಂಚಿಕೆಗೆ ದಾಸೋಹ, ಪುರುಷ ಮತ್ತು ಮಹಿಳೆಯರ ಸಮಾನತೆಗೆ ಬಸವಣ್ಣನವರ ಚಿಂತನೆ ಹಾಗೂ ಸಾಮಾಜಿಕ ಸೌಹಾರ್ದತೆಗೆ ಶರಣರ ಮಾನವೀಯ ಸಂದೇಶಗಳು ಅಗತ್ಯವಾಗಿವೆ ಎಂದು ಹೇಳಿದರು.

ರವಿ ಹಂಜ್ ಅವರು ‘ಬಸವ ಮಂಟಪ’ ಕೃತಿಯಲ್ಲಿ ಬಸವಣ್ಣನವರ ಬಗ್ಗೆ ಹೀನಾಯವಾಗಿ ಮತ್ತು ನಿಂದನೀಯವಾಗಿ ಬರೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನಾವು ಆ ಪುಸ್ತಕವನ್ನು ನೋಡಿಲ್ಲ, ಓದಿಯೂ ಇಲ್ಲ. ಆದರೆ ಎಲ್ಲೆಡೆ ಅದರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಚಾರಗಳು ಬಂದಾಗ ಸಹಜವಾಗಿಯೇ ಜನರ ಮನಸ್ಸಿಗೆ ನೋವುಂಟಾಗುತ್ತದೆ. ಇಂತಹ ವಿಕೃತ ವಿಚಾರಗಳನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ತಿರಸ್ಕರಿಸುತ್ತೇವೆ. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವಿವಾದಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಕೃತಿಯ ಪ್ರಕಾಶನಕ್ಕೆ ಅವಕಾಶ ನೀಡದಿರುವುದು ಹಾಗೂ ಲೇಖಕ ಮತ್ತು ಪ್ರಕಾಶಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವುದು ಸೂಕ್ತವಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನಗಳನ್ನು ಎಲ್ಲರೂ ಒಗ್ಗಟ್ಟಿನಿಂದ ಖಂಡಿಸಬೇಕು ಎಂದು ಕರೆ ನೀಡಿದರು.

ಇದನ್ನೂ ನೋಡಿ : ನವೆಂಬರ್ ಕನ್ನಡ ಬೇಡ… ಅನುದಿನವೂ ಕನ್ನಡ ಕನ್ನಡ ಎಂದು ಉಸಿರಾಡಬೇಕು – ಶ್ರೀನಾಥ್ ವಸಿಷ್ಠ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *