ರೈತರ ವಿರೋಧದ ಹಿನ್ನೆಲೆಯಲ್ಲಿ ಒಂದು ದಿನದ ಬದಲು ಮೂರು ದಿನ ಮೇಳ ಆಯೋಜನೆ; ಬರ ಸಹಿಷ್ಣು ರಾಗಿ, ಬೀಜದ ದಂಟು ಮತ್ತು ಮುಸುಕಿನ ಜೋಳದ ಹೊಸ ತಳಿಗಳ ಪರಿಚಯ
ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಬಾರಿ ಒಂದು ದಿನಕ್ಕೆ ಸೀಮಿತಗೊಳಿಸಲು ಉದ್ದೇಶಿಸಿದ್ದ ಬೆಂಗಳೂರಿನ ಕೃಷಿ ಮೇಳವನ್ನು ನವೆಂಬರ್ 16ರಿಂದ 18ರವರೆಗೆ ಮೂರು ದಿನಗಳ ಕಾಲ ಆಯೋಜಿಸಲು ನಿರ್ಧರಿಸಲಾಗಿದೆ. ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಈ ಮೇಳವನ್ನು ಆಯೋಜಿಸುತ್ತಿದೆ.
ಸಾಮಾನ್ಯವಾಗಿ ನಾಲ್ಕು ದಿನಗಳ ಕಾಲ ನಡೆಯುತ್ತಿದ್ದ ಕೃಷಿ ಮೇಳವನ್ನು ಈ ಬಾರಿ ಬರದ ಕಾರಣದಿಂದ ನವೆಂಬರ್ 13ರಂದು ಒಂದೇ ದಿನ ನಡೆಸಲು ವಿಶ್ವವಿದ್ಯಾಲಯ ನಿರ್ಧರಿಸಿತ್ತು. ಇದಕ್ಕೆ ರೈತರು ಮತ್ತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕೃಷಿ ಮೇಳವು ರೈತರಿಗೆ ಹೊಸ ತಂತ್ರಜ್ಞಾನ, ಕೃಷಿ ಸಂಶೋಧನೆ ಮತ್ತು ಬೆಳೆ ತಳಿಗಳ ಪರಿಚಯ ಮಾಡಿಕೊಡುವ ಪ್ರಮುಖ ವೇದಿಕೆಯಾಗಿರುವುದರಿಂದ ಅವಧಿಯನ್ನು ಕಡಿತಗೊಳಿಸಬಾರದು ಎಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೃಷಿ ಸಚಿವರ ಸೂಚನೆಯಂತೆ ಮೂರು ದಿನಗಳ ಕಾಲ ಮೇಳ ನಡೆಸಲು ತೀರ್ಮಾನಿಸಲಾಗಿದೆ.
ವಿಶ್ವವಿದ್ಯಾಲಯದ ಅಧಿಕೃತ ಪ್ರಕಟಣೆಯಲ್ಲಿಯೂ ನವೆಂಬರ್ 16, 17 ಮತ್ತು 18ರಂದು ಕೃಷಿ ಮೇಳ ನಡೆಯಲಿದೆ ಎಂದು ಖಚಿತಪಡಿಸಲಾಗಿದೆ. ಈ ಬಾರಿಯ ಮೇಳದ ವಿಷಯವಸ್ತು ‘ವೈವಿಧ್ಯಮಯ ಕೃಷಿ: ಮುಂದಿನ ಪೀಳಿಗೆ’ ಎಂಬುದಾಗಿದೆ.
ಇದನ್ನೂ ಓದಿ : ಸುರತ್ಕಲ್ HPCL ಘಟಕದ ಮುಂದೆ ಧರಣಿ ನಿರತ ಮಹಿಳಾ ಕಾರ್ಮಿಕರೊಂದಿಗೆ ದೀಪಾವಳಿ ಆಚರಣೆ; ದಿನಸಿ ಕಿಟ್ ವಿತರಣೆ
ಬರ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂರು ಹೊಸ ತಳಿಗಳು
ಈ ಬಾರಿಯ ಕೃಷಿ ಮೇಳದಲ್ಲಿ ರೈತರಿಗೆ ಅನುಕೂಲವಾಗುವಂತೆ ಮೂರು ಹೊಸ ಬೆಳೆ ತಳಿಗಳನ್ನು ಪರಿಚಯಿಸಲಾಗುತ್ತಿದೆ. ಕಡಿಮೆ ನೀರಿನಲ್ಲಿಯೂ ಉತ್ತಮ ಇಳುವರಿ ನೀಡುವ ಬರ ಸಹಿಷ್ಣು ರಾಗಿ ತಳಿ ಜಿಪಿಯು 101, ಹೆಚ್ಚಿನ ಪ್ರೋಟೀನ್ ಅಂಶ ಹೊಂದಿರುವ ಬೀಜದ ದಂಟಿನ ಕೆಬಿಜಿಎ 18 ಮತ್ತು ಬಹುಪಯೋಗಿ ಮುಸುಕಿನ ಜೋಳದ ಎಂಎಎಚ್ 20-45 ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಜಿಪಿಯು 101 ರಾಗಿ: ಈ ತಳಿಯು ಕಡಿಮೆ ನೀರಿನಲ್ಲಿಯೂ ಉತ್ತಮವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಸುಮಾರು 110ರಿಂದ 115 ದಿನಗಳಲ್ಲಿ ಕಟಾವಿಗೆ ಸಿದ್ಧವಾಗಲಿದ್ದು, ಹೆಕ್ಟೇರ್ಗೆ 37ರಿಂದ 40 ಕ್ವಿಂಟಾಲ್ ಇಳುವರಿ ನೀಡುವ ನಿರೀಕ್ಷೆಯಿದೆ. ಬೆಂಕಿರೋಗಕ್ಕೆ ನಿರೋಧಕ ಶಕ್ತಿ ಮತ್ತು ಬಾಗುವಿಕೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಕಬ್ಬಿಣದ ಅಂಶವೂ ಅಧಿಕವಾಗಿದೆ.
ಕೆಬಿಜಿಎ 18 ಬೀಜದ ದಂಟು: ಹೆಚ್ಚಿನ ಪ್ರೋಟೀನ್ ಅಂಶ ಹೊಂದಿರುವ ಈ ತಳಿಯು ಹೆಕ್ಟೇರ್ಗೆ 22ರಿಂದ 24 ಕ್ವಿಂಟಾಲ್ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ಸದೃಢ ಕಾಂಡ ಹೊಂದಿದ್ದು, ಎಲೆ ಚುಕ್ಕೆ ರೋಗ ಸೇರಿದಂತೆ ಕೆಲವು ಪ್ರಮುಖ ರೋಗಗಳು ಮತ್ತು ಕೀಟಗಳ ಬಾಧೆಯನ್ನು ತಡೆದುಕೊಳ್ಳುವ ಗುಣ ಹೊಂದಿದೆ. ರಾಗಿ ಹಿಟ್ಟಿನೊಂದಿಗೆ ಬೀಜದ ದಂಟಿನ ಹಿಟ್ಟನ್ನು ಬೆರೆಸಿ ಬಳಸಬಹುದಾಗಿದೆ.
ಎಂಎಎಚ್ 20-45 ಮುಸುಕಿನ ಜೋಳ: ಈ ಸಂಕರಣ ತಳಿಯು 125ರಿಂದ 130 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಹೆಕ್ಟೇರ್ಗೆ 110ರಿಂದ 115 ಕ್ವಿಂಟಾಲ್ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ಗಟ್ಟಿಯಾದ ಕಾಂಡ ಮತ್ತು ಅಗಲವಾದ ಎಲೆಗಳನ್ನು ಹೊಂದಿರುವುದರಿಂದ ಧಾನ್ಯ ಉತ್ಪಾದನೆಯ ಜೊತೆಗೆ ಹಸಿರು ಮೇವಿಗೂ ಬಳಕೆಯಾಗುತ್ತದೆ. ಎಥನಾಲ್ ಉತ್ಪಾದನೆಗೂ ಈ ತಳಿಯನ್ನು ಬಳಸಬಹುದಾಗಿದೆ.
100 ಮಳಿಗೆಗಳು, ಬರ ನಿರ್ವಹಣೆಗೆ ಮಾಹಿತಿ
ಈ ಬಾರಿ ಸುಮಾರು 100 ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಬರ ನಿರ್ವಹಣಾ ಕ್ರಮಗಳು, ಕಡಿಮೆ ನೀರಿನಲ್ಲಿ ಕೃಷಿ ಮಾಡುವ ವಿಧಾನಗಳು, ಸೂಕ್ತ ಬೆಳೆಗಳ ಆಯ್ಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆ ಸೇರಿದಂತೆ ರೈತರಿಗೆ ಅಗತ್ಯವಾದ ತಾಂತ್ರಿಕ ಮಾಹಿತಿಯನ್ನು ನೀಡಲಾಗುತ್ತದೆ. ಕೃಷಿ ವಿಜ್ಞಾನಿಗಳು ಮತ್ತು ರೈತರ ನಡುವೆ ಸಂವಾದ ಹಾಗೂ ಚರ್ಚಾಗೋಷ್ಠಿಗಳನ್ನೂ ಆಯೋಜಿಸಲಾಗುತ್ತದೆ.
ಆದರೆ, ಈ ಬಾರಿ ಜಾನುವಾರು ಮತ್ತು ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಇರುವುದಿಲ್ಲ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ವೆಂಕಟರವಣ ತಿಳಿಸಿದ್ದಾರೆ. ಸಾಧಕ ರೈತರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಕಾರ್ಯಕ್ರಮವೂ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಕೃಷಿ ಸಂಶೋಧನೆಗಳನ್ನು ನೇರವಾಗಿ ವೀಕ್ಷಿಸಲು, ಹೊಸ ತಳಿಗಳ ಗುಣಲಕ್ಷಣಗಳನ್ನು ತಿಳಿದುಕೊಳ್ಳಲು ಮತ್ತು ಬರದ ಸಂದರ್ಭದಲ್ಲಿ ಅನುಸರಿಸಬಹುದಾದ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಪಡೆಯಲು ಈ ಮೇಳ ರೈತರಿಗೆ ಅವಕಾಶ ಕಲ್ಪಿಸಲಿದೆ. ರೈತರು, ಮಹಿಳಾ ಕೃಷಿಕರು, ಕೃಷಿ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ವಿಶ್ವವಿದ್ಯಾಲಯ ಮನವಿ ಮಾಡಿದೆ.
ಸ್ಥಳ: ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಹೆಬ್ಬಾಳ, ಬೆಂಗಳೂರು.
ದಿನಾಂಕ: ನವೆಂಬರ್ 16, 17 ಮತ್ತು 18, 2026.
ಇದನ್ನೂ ನೋಡಿ : ಋತ್ವಿಕ್ ಘಟಕ್ -100| ಮೇಘೆ ಡಾಕಾ ತಾರಾ ಸಿನಿಮಾ ಕುರಿತು ಮುರಳಿ ಕೃಷ್ಣ ಮಾತುಕತೆ Janashakthi Media
