ಮಂಗಳೂರು: ಉದ್ಯೋಗದಿಂದ ವಜಾಗೊಂಡು ಎಚ್ಪಿಸಿಎಲ್ (HPCL) ಬಾಟ್ಲಿಂಗ್ ಘಟಕದ ಮುಂಭಾಗ ಕಳೆದ 70 ದಿನಗಳಿಂದ ಧರಣಿ ನಡೆಸುತ್ತಿರುವ ಮಹಿಳಾ ಗುತ್ತಿಗೆ ಕಾರ್ಮಿಕರೊಂದಿಗೆ ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ವತಿಯಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.
ಸುರತ್ಕಲ್ ಬಾಳದಲ್ಲಿರುವ ಎಚ್ಪಿಸಿಎಲ್ (HPCL) ಬಾಟ್ಲಿಂಗ್ ಘಟಕದ ಮುಂಭಾಗ ಧರಣಿ ನಡೆಸುತ್ತಿರುವ ಮಹಿಳಾ ಕಾರ್ಮಿಕರೊಂದಿಗೆ ಹೋರಾಟ ಸಮಿತಿಯ ಮುಖಂಡರು ದೀಪ ಬೆಳಗಿಸಿ ದೀಪಾವಳಿ ಆಚರಿಸಿದರು. ಈ ಮೂಲಕ ಉದ್ಯೋಗ ಕಳೆದುಕೊಂಡು ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾರ್ಮಿಕರಿಗೆ ಹಬ್ಬದ ಶುಭಾಶಯ ಕೋರುವುದರ ಜೊತೆಗೆ, ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.
ಹಬ್ಬವನ್ನು ಆಚರಿಸಲು ಅನುಕೂಲವಾಗುವಂತೆ ಮಹಿಳಾ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಜೊತೆಗೆ ಸಣ್ಣ ಪ್ರಮಾಣದ ಆರ್ಥಿಕ ನೆರವನ್ನೂ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರನ್ನು ಉದ್ಯೋಗದಿಂದ ವಜಾಗೊಳಿಸಿರುವ ಕಂಪನಿಯ ನಿರ್ದಯ ನಡವಳಿಕೆಯನ್ನು ಹಾಗೂ ಈ ವಿಚಾರದಲ್ಲಿ ಜಿಲ್ಲಾಡಳಿತ ಮೌನ ವಹಿಸಿರುವುದನ್ನು ಹೋರಾಟ ಸಮಿತಿಯ ಮುಖಂಡರು ಖಂಡಿಸಿದರು.
ಇದನ್ನೂ ಓದಿ: ದೀಪಾವಳಿ ಪಟಾಕಿ ಅವಘಡ: ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ
ಕಾರ್ಯಕ್ರಮದಲ್ಲಿ ನಾಗರಿಕ ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಜ್, ಶ್ರೀನಾಥ್ ಕುಲಾಲ್, ಸಾಮರಸ್ಯ ಮಂಗಳೂರು ಸಂಘಟನೆಯ ಮಂಜುಳಾ ನಾಯಕ್, ಸಮರ್ಥ್ ಭಟ್, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕೆ., ಅಸುಂತಾ ಡಿ ಸೋಜ, ಆಶಾ ಬೋಳೂರು, ಸಿಲ್ವಿಯಾ ಜೋಕಟ್ಟೆ, ಯೋಗಿತಾ, ಸಿಐಟಿಯುನ ಬಶೀರ್ ಕಾನ, ಮೊಹಮ್ಮದ್ ಜನತಾ ಕಾಲನಿ, ಡಿವೈಎಫ್ಐನ ಹನೀಫ್ ಬೆಂಗ್ರೆ, ಜಮ್ಶೀರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಟಿಪ್ಪು ಇತಿಹಾಸ ಅಳಿಸಲು ಸಾಧ್ಯವಿಲ್ಲ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು Janashakthi Media
